Homeಸಾಮಾಜಿಕಅಪಪ್ರಚಾರಕ್ಕೆ ಬಲಿಯಾದ ವರದಿ

ಅಪಪ್ರಚಾರಕ್ಕೆ ಬಲಿಯಾದ ವರದಿ

- Advertisement -
- Advertisement -

ಸಿ. ಯತಿರಾಜು |

ಹಿಂದಿನ ಸಂಚಿಕೆಯಲ್ಲಿ ಎ.ಕೆ.ಸುಬ್ಬಯ್ಯನವರು ಪಶ್ಚಿಮಘಟ್ಟಗಳ ನಿವಾಸಿಗಳು ಮತ್ತು ಕೃಷಿ ಪರಂಪರೆಯನ್ನು ಆಧಾರವಾಗಿಟ್ಟುಕೊಂಡು ಗಾಡ್ಗೀಳ್ ವರದಿ ಮತ್ತು ಕಸ್ತೂರಿ ರಂಗನ್ ಶಿಫಾರಸ್ಸುಗಳ ಲೋಪಗಳನ್ನು ವಿಮರ್ಶೆಗೆ ಒಳಪಡಿಸಿದ್ದರು. ಈ ಸಂಚಿಕೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿರುವ ಸಹಜ ಬೇಸಾಯ ಶಾಲೆಯ ಸಿ.ಯತಿರಾಜ್‍ರವರು ಗಾಡ್ಗೀಳ್ ವರದಿಯ ವೈಜ್ಞಾನಿಕ ಅಂಶಗಳನ್ನು ಸಮರ್ಥಿಸುತ್ತಾ, ಅರಣ್ಯ ವಿಧ್ವಂಸಕರ ಲಾಬಿಯಿಂದ ವರದಿಗಳ ಸುತ್ತ ಅನಗತ್ಯ ಆತಂಕ ಸೃಷ್ಟಿಯಾಗಿ ಜನರನ್ನು ಗೊಂದಲಕ್ಕೆ ದೂಡುತ್ತಿದೆ ಎಂಬ ತಮ್ಮ ವಾದವನ್ನು ಇಲ್ಲಿ ಮಂಡಿಸಿದ್ದಾರೆ.

 

ಕೇರಳ ರಾಜ್ಯಾದ್ಯಂತ ಮತ್ತು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಸಂಭವಿಸಿದ ಮಳೆ ಮತ್ತು ಪ್ರವಾಹದ ಹಾನಿಗಳು ಡಾ. ಮಾಧವ್ ಗಾಡ್ಗೀಳ್ ಮತ್ತು ಡಾ. ಕೆ. ಕಸ್ತೂರಿ ರಂಗನ್ ವರದಿಗಳ ಮೇಲಿನ ಚರ್ಚೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ. ದೇಶದ ಎಲ್ಲ ರಾಜಕೀಯ ಪಕ್ಷಗಳು ಡಾ. ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೊಳಿಸುವುದು ಕಾರ್ಯಸಾಧ್ಯವಲ್ಲ ಎಂದು ತೀರ್ಮಾನಿಸಿ ಅದನ್ನು ಅಭ್ಯಾಸ ಮಾಡಿ ತೀವ್ರ ಚರ್ಚೆಗೊಳಪಡಿಸುವ ಯಾವ ಕೆಲಸವನ್ನು ಮಾಡದೆ ಲಾಬಿ ಪ್ರಾಯೋಜಿತ ಚಳುವಳಿಗಳ ಬೆಂಬಲಕ್ಕೆ ನಿಂತು ಅದನ್ನು ವಿರೋಧಿಸಿದವು. ಸರ್ಕಾರಗಳ ಹಂತದಲ್ಲಿ ಈ ಲಾಬಿಗಳ ಪ್ರಭಾವ ಅದೆಷ್ಟು ಪ್ರಬಲವಾಗಿತ್ತೆಂದರೆ ಅದು ಬಹಳ ಕಾಲ ಡಾ. ಮಾಧವ ಗಾಡ್ಗೀಳ್ ವರದಿಯನ್ನು ಬಹಿರಂಗಪಡಿಸಲು ನಿರಾಕರಿಸುವಂತೆ ಮಾಡಿದವು. ಈ ವರದಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು ಅನೇಕ ಸಾಮಾಜಿಕ ಕಾರ್ಯಕರ್ತರು ಕೇಂದ್ರ ಮಾಹಿತಿ ಹಕ್ಕು ಆಯೋಗ ಹಾಗೂ ಹೈಕೋರ್ಟ್ ಬಾಗಿಲು ಬಡಿದು ಆದೇಶ ತಂದು ವರದಿಯನ್ನು ಬಹಿರಂಗಪಡಿಸಬೇಕಾಯಿತು. ಅವರುಗಳ ಪ್ರಯತ್ನದ ಫಲವಾಗಿ ವರದಿ ಸಾರ್ವಜನಿಕವಾಗಿ ಲಭ್ಯವಾಯಿತು. ಇಲ್ಲದಿದ್ದರೆ ವರದಿ ಸಾರ್ವಜನಿಕವಾಗಿ ಬೆಳಕು ಕಾಣುತ್ತಿರಲಿಲ್ಲ.

ಪಶ್ಚಿಮಘಟ್ಟಗಳ ಅಮೂಲ್ಯ ನೈಸರ್ಗಿಕ ಸಂಪತ್ತಿನ ಲೂಟಿ ಮಾಡುತ್ತಿರುವ ಹಾಗೂ ಮುಂದೆ ಲೂಟಿ ಮಾಡಲೆಳೆಸುವ ಬಹುಪಾಲು ಹೂಡಿಕೆದಾರರು ಈ ವರದಿ ತಮ್ಮ ದೋಚುವಿಕೆ ಹಾಗೂ ಕಬಳಿಕೆಗೆ ಮುಂದೆ ದೊಡ್ಡ ಅಡಚಣೆಯಾಗಲಿದೆ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಮನಗಂಡು ಆ ಪ್ರದೇಶದ ಗಿರಿಜನರನ್ನು ಪರಿಶಿಷ್ಟ ಜಾತಿ/ಪಂಗಡ, ರೈತರು ಮುಂತಾದ ಜನ ವಿಭಾಗಗಳಲ್ಲಿ ಸುಳ್ಳು ಭೀತಿ ಆತಂಕಗಳನ್ನು ಭಿತ್ತಿ ಅವರನ್ನು ಈ ವರದಿಯ ವಿರುದ್ಧ ಚಳುವಳಿಗಿಳಿಸಿದರು. ಕೇರಳ ರಾಜ್ಯದಲ್ಲಂತೂ ರಾಜಕೀಯವಾಗಿ ಅತ್ಯಂತ ಪ್ರಭಾವಯುತವಾಗಿರುವ ಚರ್ಚ್ ಪಾದ್ರಿಗಳನ್ನೇ ಈ ಚಳುವಳಿಗಳ ಮುಂಚೂಣಿಗೆ ತಂದು ನಿಲ್ಲಿಸಿದರು. ವಿಷಯಾಧಾರಿತ, ಜನಪರ ನಿಷ್ಠೂರ ರಾಜಕಾರಣವನ್ನೇ ಮರೆತು ಕುಳಿತಿರುವ ರಾಜಕೀಯ ಪಕ್ಷಗಳು ಈ ಲಾಬಿ ಪ್ರಾಯೋಜಿತ ಚಳುವಳಿಗಳಿಗೆ ಬೆಂಬಲ ನೀಡುವ ಮೂಲಕ ತಮ್ಮ ರಾಜಕೀಯ ದಿವಾಳಿತನವನ್ನು ಮೆರೆದಿವೆ.

ಆದರೆ ಈ ಲಾಬಿಗಳು ತಮ್ಮ ನೇತೃತ್ವದಲ್ಲಿ ಚಳುವಳಿ ನಡೆಸುವ ಮೂರ್ಖ ಕೆಲಸ ಮಾಡದೆ ಅತ್ಯಂತ ನಾಜೂಕಾಗಿ ಛದ್ಮವೇಷದಾರಿಗಳಾಗಿ ಗಿರಿಜನರು, ಆದಿವಾಸಿಗಳು, ರೈತರು, ಪಾದ್ರಿಗಳು, ಧಾರ್ಮಿಕ ಗುರುಗಳು, ಶಿಕ್ಷಣ ಸಂಸ್ಥೆಗಳು, ಅಭಿವೃದ್ಧಿ ಆಕಾಂಕ್ಷಿಗಳು ಅಂಧಾಭಿಮಾನಿಗಳ ಮೂಲಕ ಚಳುವಳಿ ಮಾಡಿಸಿ ಈ ವರದಿಯನ್ನು ಹೂತುಹಾಕುವ ಕೆಲಸವನ್ನು ಸರ್ಕಾರಗಳ ಮೂಲಕ ಯಶಸ್ವಿಯಾಗಿ ಮಾಡಿದವು.

ಡಾ. ಮಾಧವ್ ಗಾಡ್ಗೀಳ್ ವರದಿಯನ್ನು ಸಮಾಧಿ ಮಾಡುವ ಮಹದುದ್ದೇಶದಿಂದಲೇ ಡಾ. ಕೆ. ಕಸ್ತೂರಿ ರಂಗನ್ ಎಂಬ ಬಾಹ್ಯಾಕಾಶ ವಿಜ್ಞಾನಿಯ ಅಧ್ಯಕ್ಷತೆಯಲ್ಲಿ ‘ಹೈಲೆವೆಲ್ ವರ್ಕಿಂಗ್ ಗ್ರೂಫ್ ಆನ್ ವೆಸ್ಟ್ರನ್ ಘಾಟ್ಸ್’ ಎಂಬ ಮತ್ತೊಂದು ಸಮಿತಿಯನ್ನು ನೇಮಿಸಲಾಯಿತು. ಬಹಳ ವಿಚಿತ್ರವಾದ ಸಂಗತಿಯೆಂದರೆ ಪರಿಸರ ಪರಿಣಿತರಾದ ಡಾ. ಮಾಧವ್ ಗಾಡ್ಗೀಳ್ ರ ‘ಪಶ್ಚಿಮ ಘಟ್ಟ ಜೀವ ಪರಿಸರ ಪರಿಣಿತರ’ ವರದಿಯನ್ನು ಬಾಹ್ಯಾಕಾಶ ಪರಿಣತಿಯುಳ್ಳ ವಿಜ್ಞಾನಿಯ ಪರಾಮರ್ಶೆಗೆ ಒಳಪಡಿಸಿದ್ದು. ಇಂತಹ ವಿರೋಧಾಭಾಸಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದೆ ಹೋದದ್ದರಿಂದ ಸಮಿತಿ ತನ್ನ ವರದಿ ಸಲ್ಲಿಸಿ ತೆಪ್ಪಗಾಯಿತು. ಜೀವ ಪರಿಸರ ಪರಿಣತರ ವರದಿಯನ್ನು ಬುಡಮೇಲು ಮಾಡುವಂತಹ ವರದಿಯನ್ನು ಡಾ. ಕೆ. ಕಸ್ತೂರಿ ರಂಗನ್ ಸಲ್ಲಿಸಿದರೂ ಈ ಲಾಬಿಗಳಿಗೆ ತೃಪ್ತಿಯಿಲ್ಲ.

ವಿನಾಶಗೊಂಡರೂ ಮೂಡದ ವಿವೇಕ

ಇಷ್ಟೆಲ್ಲಾ ಅನಾಹುತಗಳಾದ ನಂತರವೂ ಆತ್ಮಾವಲೋಕನ ಮಾಡಿಕೊಳ್ಳುವ, ಆಗಿರುವ ತಪ್ಪುಗಳನ್ನು ಸ್ಪಷ್ಟವಾಗಿ ಗುರ್ತಿಸಿ ಸರಿಪಡಿಸುವ ಮನೋಭಾವಗಳು ಸರ್ಕಾರಗಳ ರಾಡಾರ್‍ಗಳಿಂದಲೇ ಕಣ್ಮರೆಯಾಗಿವೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ 6 ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ತನ್ನ ಬೇಜವಾಬ್ದಾರಿಗಳನ್ನು ವಿಜೃಂಭಿಸಿ ಅಮಾಯಕ ಮುಗ್ಧ ಬಡಜನರ ಜೀವ ಮತ್ತು ಜೀವನೋಪಾಯಗಳ ಜೊತೆ ಚೆಲ್ಲಾಟವಾಡುತ್ತಿವೆ. ಅಭಿವೃದ್ಧಿಯ ಹೆಮ್ಮೆಯ ಸಂಕೇತಗಳನ್ನು ನಿಸರ್ಗ ನಿರ್ದಯವಾಗಿ ಕೊಚ್ಚಿ ಬಿಸಾಡಿ ತರಿದು ಚೆಂಡಾಡಿದೆ. ಹಲವಾರು ವರ್ಷಗಳ ಕಾಲ, ಅಪಾರ ಸಾರ್ವಜನಿಕ ಹಣ/ಖಾಸಗಿ ಹಣದಿಂದ ಸಾಧಿಸಿದ ಅಭಿವೃದ್ಧಿಯನ್ನು ಕ್ಷಣಾರ್ಧದಲ್ಲಿ ನಿಸರ್ಗ ನುಂಗಿ ನೀರು ಕುಡಿದಿದೆ. ನಿಸರ್ಗದ ಮಹಾ ಪ್ರವಾಹದಲ್ಲಿ ಅಭಿವೃದ್ಧಿಯ ಸಾಧನೆಗಳ ದ್ಯೋತಕಗಳಾಗಿದ್ದ ಬೃಹತ್ ಕಟ್ಟಡಗಳು, ರಸ್ತೆಗಳು, ರೈಲ್ವೆ ರಸ್ತೆಗಳು, ಕಟ್ಟಡಗಳು ಇತ್ಯಾದಿಗಳೆಲ್ಲಾ ವಿಳಾಸಗಳಿಲ್ಲದಂತೆ ಕಣ್ಮರೆಯಾಗಿವೆ. ನಿಸರ್ಗದ ಸಹನೆಯ ಕಟ್ಟೆಯೊಡೆಯುತ್ತಿದೆ. ಅದು ಅತ್ಯಂತ ಸ್ಪಷ್ಟವಾದ, ನಿರ್ದಾಕ್ಷಿಣ್ಯವಾದ ನಿಚ್ಚಳ ಎಚ್ಚರಿಕೆಗಳನ್ನು ನೀಡಲಾರಂಭಿಸಿದೆ. ಆದರೆ ಅಂಧಃ ಅಭಿವೃದ್ಧಿಯ ಸಾಮೂಹಿಕ ಸನ್ನಿಗೆ ಬಲಿಯಾಗಿರುವ ಸರ್ಕಾರಗಳು ಇಡೀ ಸಮಾಜವನ್ನು ಸಾಮೂಹಿಕ ವಿನಾಶದ ಕಡೆಗೆ ಮುನ್ನೆಡಸುತ್ತಿವೆ. ಇದನ್ನು ಅತ್ಯಂತ ತುರ್ತಾಗಿ ತಡೆಯದಿದ್ದರೆ ಅದು ಸರಿಪಡಿಸಲಾಗದ, ಇಲ್ಲವೆ ಧೀರ್ಘಕಾಲ ಅಪಾರ ಬೆಲೆ ತೆತ್ತು ಸರಿಪಡಿಸಬೇಕಾದ ಕಗ್ಗಂಟುಗಳನ್ನು ಸೃಷ್ಟಿಸಲಿದೆ.

ಇಂದು ನಮ್ಮ ಮುಂದಿರುವ ಪ್ರಧಾನ ಪ್ರಶ್ನೆ ಇಂತಹ ಗಂಭೀರ ಅಪಾಯಕಾರಿ ಸನ್ನಿವೇಶ ನಮ್ಮನ್ನ ದಿಟ್ಟಿಸುತ್ತಿದೆಯಾ ಅಥವಾ ಇವೆಲ್ಲವೂ ನೈಸರ್ಗಿಕ ನಿತ್ಯ ನಿರಂತರ ಘಟನೆಗಳು ಅವುಗಳು ತನ್ನಷ್ಟಕ್ಕೆ ತಾನೆ ಘಟಿಸುತ್ತವೆ. ಅವುಗಳ ಬಗ್ಗೆ ನಾವು ತಲೆಕೆಡಿಸ್ಕೊಳ್ಳಬೇಕಾಗಿಲ್ಲ. ತಲೆ ಕೆಡಿಸಿಕೊಂಡರೂ ಪ್ರಯೋಜನವಿಲ್ಲ ಯಾಕೆಂದರೆ ಅವು ನಮ್ಮ ಕೈಮೀರಿದ ಘಟನೆಗಳು. ಅವು ದೈವ ಕೃಪೆ/ಅವಕೃಪೆಯಿಂದ ನಡೆಯುತ್ತಿರುವ ನಿಸರ್ಗ ಘಟನಾವಳಿಗಳೆಂದು ನಾವು ಸುಮ್ಮನಿರಬೇಕೆ? ವೈಜ್ಞಾನಿಕ ಅಧ್ಯಯನಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಬಿಡೋಣವೇ? ವಾಯುಗುಣ ವೈಪರೀತ್ಯಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಆದ್ದರಿಂದಲೇ ನಮ್ಮ ಬಹುಪಾಲು ರಾಜಕಾರಣಿಗಳು, ಕುರುಡು ಅಭಿವೃದ್ಧಿ ಪ್ರಿಯರು ಯಾವುದೇ ಬೆಲೆ ತೆತ್ತಾದರೂ ಅಭಿವೃದ್ಧಿಯ ನಾಗಾಲೋಟವನ್ನು ಯಥಾಸ್ಥಿತಿ ಮುಂದುವರಿಸಬೇಕು. ಈ ವರದಿಗಳು ಅಭಿವೃದ್ಧಿಯ ನಾಗಾಲೋಟವನ್ನು ಅಡ್ಡಿಪಡಿಸುತ್ತವೆ. ಆದ್ದರಿಂದ ನಮಗಿಂದು ಯಾವ ವರದಿಯ ಅಗತ್ಯವೂ ಇಲ್ಲ ಎಂಬ ನಿಲುವಿಗೆ ಬಂದು ನಿಂತಿದ್ದಾರೆ. ಇಂತಹ ನಿಲುವನ್ನು ಒಪ್ಪಲಾಗದಿದ್ದರೆ ನಾವೇನು ಮಾಡಬೇಕು ? ವರದಿಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದು ಅತ್ಯಂತ ಸುಲಭ. ವರದಿಗಳನ್ನು ತೀವ್ರವಾಗಿ ವಿರೋಧಿಸುವವರು ಯಾವುದೇ ಪರ್ಯಾಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ಮಾದರಿಗಳನ್ನು ಮಂಡಿಸದೆ ಯಾವ ಜನರ ಅಭಿವೃದ್ಧಿಯನ್ನು ಬಯಸುತ್ತಿದ್ದಾರೋ ಹಿತರಕ್ಷಣೆ ಮಾಡಬಯಸುತ್ತಿದ್ದಾರೋ ಅದೇ ಜನರನ್ನು ಪರಿಸರ ದುರಂತಗಳಿಗೆ ಬಲಿಪಶುಗಳಾಗುವಂತೆ ಮಾಡುತ್ತಿದ್ದಾರೆ ಮತ್ತು ವರದಿಗಳ ಕುರುಡು ವಿರೋಧದ ಮೂಲಕ ಬಂಡವಾಳಗಾರರ ಅಭಿವೃದ್ಧಿ ಯೋಜನೆಗಳ ಪರೋಕ್ಷ ಬೆಂಬಲಿಗರಾಗಿದ್ದಾರೆ. ಹಾಗಾಗಿ ಅವರು ಯಥಾಸ್ಥಿತಿವಾದದ ಬೆಂಬಲಿಗರಾಗಿದ್ದಾರೆ. ಈ ದುರಂತ ನಮ್ಮನ್ನಿಂದು ದಿಟ್ಟಿಸುತ್ತಿದೆ.

ವಿಷಯಾಧಾರಿತವಾದ, ದತ್ತಾಂಶ ಆಧಾರಿತವಾದ ವೈಜ್ಞಾನಿಕ ಚರ್ಚೆ, ಸಂವಾದಗಳ ಮೂಲಕ ಸಮಸ್ಯೆಗಳ ಆಳ ಅಗಲ ವಿಸ್ತಾರಗಳನ್ನು ಗ್ರಹಿಸಿ ಅರ್ಥಪೂರ್ಣವಾದ ಚರ್ಚೆಗಳನ್ನು ತುರ್ತಾಗಿ ಆರಂಭಿಸಬೇಕಾಗಿದೆ. ವರದಿಗಳನ್ನು ಓದದೇ ಅಥವಾ ಆಯ್ಕೆ ಮಾಡಿಕೊಂಡು ಅರೆಬರೆಯಾಗಿ ಓದಿಕೊಂಡು ತೆರೆದ ಮನಸ್ಸಿನಿಂದ ಚರ್ಚಿಸದಿದ್ದರೆ ನಾವು ತೆಗೆದುಕೊಳ್ಳುವ ನಿಲುವುಗಳು ನಮ್ಮನ್ನು ಅತ್ಯಂತ ಅಪಾಯಕಾರಿ ನಿಲುವುಗಳಲ್ಲಿ ನಿಲ್ಲುವಂತೆ ಮಾಡುತ್ತವೆ. ಪಶ್ಚಿಮಘಟ್ಟಗಳಂತಹ ಜೀವನ್ಮರಣಗಳ ಆಯ್ಕೆಯ ಸನ್ನಿವೇಶದಲ್ಲಿ ನಾವೆಲ್ಲರೂ ಅತ್ಯಂತ ಗಂಭೀರವಾಗಿ, ಸೂಕ್ಷ್ಮವಾಗಿ, ಸಮಗ್ರವಾಗಿ, ಪರಸ್ಪರರ ಅಭಿಪ್ರಾಯಗಳನ್ನು ಗ್ರಹಿಸುವ ಪ್ರಯತ್ನ ಮಾಡಬೇಕಾಗಿದೆ. ನಮ್ಮ ಅಭಿಪ್ರಾಯಗಳನ್ನು ಮನವರಿಕೆ ಮಾಡಿಕೊಡಬಲ್ಲ ಸ್ವೀಕಾರಾರ್ಹವಾಗಬಲ್ಲ ರೀತಿಯಲ್ಲಿ ಮಂಡಿಸಬೇಕಾಗಿದೆ. ವೈಜ್ಞಾನಿಕ ಮಾಹಿತಿಗಳನ್ನು, ಅಧ್ಯಯನಗಳನ್ನು ಆಳವಾಗಿ ಅಭ್ಯಸಿಸಿ ವಿಶ್ಲೇಷಿಸಬೇಕಾಗಿದೆ. ಅವುಗಳನ್ನು ಸಮಗ್ರವಾಗಿ ಗಂಭೀರವಾಗಿ ಚರ್ಚೆಗೊಳಪಡಿಸಬೇಕಾದ ಗುರುತರ ಜವಾಬ್ದಾರಿ ನಮ್ಮಗಳೆಲ್ಲರ ಮೇಲಿದೆ. ಮಾಹಿತಿ ಪೂರ್ಣವಾದ ಸಾರ್ವಜನಿಕ ಚರ್ಚೆ/ಸಂವಾದಗಳನ್ನು ಪಶ್ಚಿಮ ಘಟ್ಟದ ಬಗ್ಗೆ ತುರ್ತಾಗಿ ಆರಂಭಿಸಬೇಕಾಗಿದೆ.

ಬೆಲೆ ಕಟ್ಟಲಾಗದ ನೈಸರ್ಗಿಕ ಸಂಪತ್ತಿನ ಮಹಾಭಂಡಾರ

ಪಶ್ಚಿಮ ಘಟ್ಟಗಳು ದಖ್ಖನ್ ಪ್ರಸ್ಥಭೂಮಿಯ ಬೆನ್ನೆಲುಬು. ಅವು ದಕ್ಷಿಣ ಭಾರತದ ಜಲಗೋಪುರ. ಈ ಪ್ರದೇಶಗಳ ಬಹುಪಾಲು ನಗರ, ಪಟ್ಟಣ, ಪೇಟೆ ಗ್ರಾಮಗಳಿಗೆ ಕುಡಿಯುವ ನೀರು ಲಭ್ಯವಾಗುತ್ತಿರುವುದು ಈ ಪಶ್ಚಿಮಘಟ್ಟಗಳಿಂದ. ಕುಡಿಯುವ ನೀರಿಗಷ್ಟೇ ಅಲ್ಲದೆ ಕೃಷಿಗೆ, ಕೈಗಾರಿಕೆಗಳಿಗೆ ದಕ್ಷಿಣ ಭಾರತದ ಬಹುಪಾಲು ಭಾಗಗಳಿಗೆ ನೀರು ಲಭ್ಯವಾಗುತ್ತಿರುವುದು ಈ ಪಶ್ಚಿಮಘಟ್ಟಗಳಿಂದ. ಅತ್ಯಂತ ಕಡಿಮೆ ಬೆಲೆಯಲ್ಲಿ ಹಲವಾರು ವರ್ಷಗಳಿಂದ ಜಲವಿದ್ಯುತ್ ಲಭ್ಯವಾಗುತ್ತಿರುವುದು ಇಲ್ಲಿನ ಯೋಜನೆಗಳಿಂದ. ಹಾಗಾಗಿ ಪಶ್ಚಿಮಘಟ್ಟಗಳು ದಖನ್ ಪ್ರಸ್ಥಭೂಮಿಯ ಅಭಿವೃದ್ಧಿಯ ಬೆನ್ನೆಲುಬೆಂಬುದು ಕೇವಲ ಉತ್ಪ್ರೇಕ್ಷೆಯ ಮಾತಲ್ಲ. ಇದು 245 ಮಿಲಿಯನ್ ಜನರಿಗೆ ಜಲಾಧಾರ ಮೂಲ. ಇದು ಭಾರತದ ಬಹುಪಾಲು ಪ್ರದೇಶದ ನದಿ ಕಣಿವೆಗಳನ್ನು ರೂಪಿಸಿ ನೀರು ಬಸಿದು ಹೋಗುವಂತೆ ಮಾಡುತ್ತದೆ. ಅನೇಕ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಗಳನ್ನ ಪಶ್ಚಿಮ ಘಟ್ಟಗಳು ಒದಗಿಸುತ್ತವೆ. ದಖನ್ ಪ್ರಸ್ಥಭೂಮಿಯ ಬಹುಪಾಲು ನದಿಗಳ ಉಗಮಸ್ಥಾನ ಪಶ್ಚಿಮ ಘಟ್ಟ. ಭಾರತದ ಹವಾಮಾನ ಮತ್ತು ವಾಯುಗುಣವನ್ನು ರೂಪಿಸುವಲ್ಲಿ ಮತ್ತು ನಿರ್ಧರಿಸುವಲ್ಲಿ ಪಶ್ಚಿಮ ಘಟ್ಟಗಳು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಕೇವಲ ಪಶ್ಚಿಮ ಘಟ್ಟಗಳ ವ್ಯಾಪ್ತಿಯ 6 ರಾಜ್ಯಗಳಿಗಷ್ಟೇ ಅಲ್ಲದೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳೂ ಪಶ್ಚಿಮ ಘಟ್ಟಗಳ ಪರಿಸರ ಸೇವೆಗಳ ಪ್ರಮುಖ ಫಲಾನುಭವಿಗಳು. ಇದು ಭಾರತದ ಅಭಿವೃದ್ಧಿಯ ನೈಸರ್ಗಿಕ ಮೂಲ ಸೌಲಭ್ಯ.

ಪಶ್ಚಿಮಘಟ್ಟಗಳು ವಿಶ್ವದ 12 ಜೀವ ವೈವಿಧ್ಯತೆಯ ಮಹಾತಾಣಗಳಲ್ಲಿ ಒಂದು ಪ್ರಮುಖ ತಾಣವೆಂದು ಪರಿಗಣಿಸಲ್ಪಟ್ಟಿದೆ. ಇದು ಬೆಲೆಕಟ್ಟಲಾಗದ ಜೀವ ವೈವಿಧ್ಯತೆಯ ನಿಧಿ ನಿಕ್ಷೇಪಗಳುಳ್ಳ ನಿಸರ್ಗದ ಮಹಾಭಂಡಾರ. ಅತ್ಯಂತ ಮೌಲ್ಯಯುತವಾದ ಔಷಧಿ ಸಸ್ಯಗಳು ಮತ್ತು ಕೃಷಿ ತಳಿಗಳ ಮೂಲ ನೆಲೆ ಈ ಪಶ್ಚಿಮಘಟ್ಟ. ಸೀಮಾ ವಿಜ್ಞಾನ ಕ್ಷೇತ್ರಗಳಲ್ಲೊಂದಾದ ಜೈವಿಕ ತಂತ್ರಜ್ಞಾನಕ್ಕೆ ಅತ್ಯಗತ್ಯವಾದ ಮೂಲಸಾಮಗ್ರಿಗಳನ್ನು ಈ ಪಶ್ಚಿಮ ಘಟ್ಟಗಳು ಒದಗಿಸುತ್ತವೆ. ಜನಾಕರ್ಷಕವಾದ, ಅಪರೂಪದ ವನ್ಯಜೀವಿಗಳ ಈ ನೆಲೆಯಲ್ಲಿ 51 ಕ್ಕೂ ಹೆಚ್ಚು ಅತ್ಯಂತ ಅಪಾಯದಂಚಿನಲ್ಲಿರುವ ಪ್ರಬೇಧಗಳಿವೆ. ಅವ್ಯಾಹತ ಅಭಿವೃದ್ಧಿಯ ದಾಳಿಗಳಿಂದಾಗಿ ಅರಣ್ಯ ನಾಶ ಮತ್ತು ಅರಣ್ಯ ಛಿದ್ರೀಕರಣ ವ್ಯಾಪಕವಾಗಿ ಮತ್ತಷ್ಟು ಅಪರೂಪದ ಪ್ರಭೇದಗಳು ಅಳಿವಿನಂಚಿಗೆ ದೂಡಲ್ಪಡುತ್ತಿವೆ. ಒಂದು ಅಂದಾಜಿನಂತೆ ಪಶ್ಚಿಮ ಘಟ್ಟಗಳಲ್ಲಿ ಪ್ರಾಥಮಿಕ ಹಸಿರು ಹೊದಿಕೆಯನ್ನು ಹೊಂದಿರುವ ಪ್ರದೇಶ ಕೇವಲ ಶೇ. 7 ರಷ್ಟು ಮಾತ್ರ. ಕೆಲವು ಪರಿಸರ ಕಾರ್ಯಕರ್ತರು ಪಶ್ಚಿಮ ಘಟ್ಟಗಳಲ್ಲಿ ಜಾರಿಗಾಗಿ ಕಾದುಕುಳಿತಿರುವ 24 ಅಭಿವೃದ್ಧಿ ಯೋಜನೆಗಳಿಗೆ 16,85,000 ಮರಗಳ ಮಾರಣಹೋಮ ನಡೆಯಬೇಕಾಗಿದೆ ಎಂದು ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಿದ್ದಾರೆ.

ನಿಸರ್ಗ ಸಂಪತ್ತಿನ ಒಡೆಯರು ಯಾರು?

ಪಶ್ಚಿಮ ಘಟ್ಟಗಳ ಸಂರಕ್ಷಣೆಯ ವರದಿ ವಿವಾದಗಳಲ್ಲಿ ಅತ್ಯಂತ ಪ್ರಮುಖವಾಗಿ ಮೇಲೆದ್ದು ಬರುತ್ತಿರುವ ಪ್ರಶ್ನೆ ಪಶ್ಚಿಮ ಘಟ್ಟಗಳ ಶ್ರೀಮಂತವಾದ ಜಲ, ಖನಿಜ, ಅರಣ್ಯ ಮತ್ತು ಜೀವ ವೈವಿದ್ಯತೆಗಳ ಮೇಲಿನ ನಿಯಂತ್ರಣವನ್ನು ಯಾರು ಹೊಂದಿರಬೇಕೆಂಬುದಾಗಿದೆ. ಈ ಪ್ರಶ್ನೆಗೆ ಅತ್ಯಂತ ಸ್ಪಷ್ಟವಾದ ಉತ್ತರವನ್ನು ಡಾ. ಮಾಧವ ಗಾಡ್ಗೀಳ್ ವರದಿ ನೀಡಿದೆ. ಅದರ ಪ್ರಕಾರ ಇದು ಸ್ಥಳೀಯ ಜನರ ಕೈಯಲ್ಲಿರಬೇಕಾದ ಪರಮಾಧಿಕಾರ ಎಂದು ಹೇಳಿದೆ. ಪಶ್ಚಿಮ ಘಟ್ಟಗಳನ್ನು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಅಭಿವೃದ್ಧಿಯ ಪರಮಾಧಿಕಾರ ಸರ್ಕಾರಗಳಿಂದ ದೆಹಲಿ ಅಥವಾ ಬೆಂಗಳೂರಿನಲ್ಲಿ ನಿರ್ಧಾರಿತವಾಗಬಾರದು. ಅದು ಗ್ರಾಮಸಭೆಗಳಲ್ಲಿ ನಿರ್ಧಾರಗೊಳ್ಳಬೇಕು. ಸ್ಥಳೀಯ ಜನ ತೀರ್ಮಾನ ಮಾಡಲು ಅಗತ್ಯವಾದ ವೈಜ್ಞಾನಿಕ ಮಾಹಿತಿ ಮತ್ತು ದತ್ತಾಂಶಗಳನ್ನು ಸರ್ಕಾರ ಒದಗಿಸಿ ಸೂಕ್ತ ತೀರ್ಮಾನ ಮಾಡಲು ಸಹಾಯ ಮಾಡಬೇಕು. ರಾಜ್ಯಾಂಗದ 73 ಮತ್ತು 74ನೇ ತಿದ್ದುಪಡಿಗಳು ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯ ವಿಚಾರಗಳಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಬೇಕೆಂಬುದು ಹೇಗೆ ಜನ ವಿರೋಧಿಯಾಗುತ್ತದೆಂಬುದನ್ನು ವಿವರಿಸುವ ಹೊಣೆಯನ್ನು ವಿರೋಧಿಗಳು ಹೊರಬೇಕು. ಅಭಿವೃದ್ಧಿಯ ಪರಮಾಧಿಕಾರ ಸರ್ಕಾರಗಳ ಕೈಯಲ್ಲಿ ಅಧಿಕಾರಿಗಳ ಕೈಯಲ್ಲಿ ಉಳಿಯಬೇಕೆಂಬುವವರ ಬೊಬ್ಬೆಗೆ ನಮ್ಮ ಧ್ವನಿ ಸೇರಿಸಬೇಕೆ? ಎಂಬುದು ನಿರ್ಧಾರವಾಗಬೇಕು. ಮನಸೋ ಇಚ್ಛೇ ಅಭಿವೃದ್ಧಿ ಮತ್ತು ವಿವೇಕ ಹೀನ ಸಂರಕ್ಷಣೆಗಳೆರಡನ್ನೂ ಅತ್ಯಂತ ಉಗ್ರವಾಗಿ ವಿರೋಧಿಸುವ ಮೂಲಕ ಗಾಡ್ಗೀಳ್ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಮಾದಗಳ ಕಡೆ ಜನತೆಯ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಸಂರಕ್ಷಣೆ ಮೇಲಿನಿಂದ ಹೇರಲ್ಪಟ್ಟ ಸಂರಕ್ಷಣೆಯಾಗಬಾರದು, ಗನ್ನು ಗಾರ್ಡ್‍ಗಳ ಕಾವಲಿನಲ್ಲಿ ಅರಣ್ಯ ಸಂರಕ್ಷಣೆ ಸಾಧ್ಯವಿಲ್ಲ. ಮೂಲ ನಿವಾಸಿಗಳನ್ನು ಹೊರದಬ್ಬಿ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಅವರ ಪಾರಂಪರಿಕ ಜ್ಞಾನವನ್ನು ಬಳಸಿಕೊಂಡು ಜನ ಸಹಭಾಗಿತ್ವದ ಒಳಗೊಳ್ಳುವ ದೇಸಿಯ ಸಂರಕ್ಷಣಾ ಮಾದರಿಯನ್ನು ಅವರು ಪ್ರತಿಪಾದಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ಭ್ರಷ್ಟಾಚಾರಗಳನ್ನು, ಅವರ ನಿರಂಕುಶಾಧಿಕಾರವನ್ನು ಹಲವಾರು ಉದಾಹರಣೆ ನೀಡಿ ಖಂಡಿಸಿದ್ದಾರೆ. ಜೀವಪರಿಸರಾತ್ಮಕ ಸೂಕ್ಷ್ಮ ಪ್ರದೇಶಗಳಲ್ಲಿ ಯಾವ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಯಾವ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂಬ ಬಗ್ಗೆ ಸಲಹಾತ್ಮಕ ನಿಷೇಧ ಮತ್ತು ಪ್ರೋತ್ಸಾಹ ಕ್ರಮಗಳನ್ನು ಸೂಚಿಸಿ ಅವುಗಳ ಬಗ್ಗೆ ಅಂತಿಮ ನಿರ್ಧಾರವನ್ನು ಸ್ಥಳೀಯ ಜನರೇ ನಿರ್ಧಾರ ಮಾಡಬೇಕೆಂದು ಹೇಳಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯನ್ನು ಅತ್ಯಂತ ತ್ವರಿತವಾಗಿ ಮೂಲ ಆಶಯಗಳಿಗನುಸಾರವಾಗಿ ಜಾರಿಯಾಗಬೇಕೆಂದು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಅವರು ಕುರುಡು ಅಭಿವೃದ್ಧಿ ವಾದಿಗಳು ಹಾಗೂ ವೈಜ್ಞಾನಿಕ ಸಂರಕ್ಷಣೆಯ ಹೆಸರಿನಲ್ಲಿ ಮೂಲ ನಿವಾಸಿಗಳನ್ನು ಹೊರದಬ್ಬುವ, ಕಬ್ಬಿಣದ ಬೇಲಿ, ಟ್ರೇಂಚ್‍ಗಳ ಮೂಲಕ ವನ್ಯನೆಲೆಗಳ ಸಂರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖಾ/ವಿದೇಶಿ ಆಮದು ಸಂರಕ್ಷಣಾ ನೀತಿಗಳನ್ನು ಪ್ರತಿಪಾದಿಸುವ ಅಭಿವೃದ್ಧಿ ಪ್ರವರ್ತಕರು ಮತ್ತು ವನ್ಯಜೀವಿ ಸಂರಕ್ಷಕರ, ಅರಣ್ಯ ಅಧಿಕಾರಶಾಹಿಗಳ ಸಮಾನ ಆಕ್ರೋಶಕ್ಕೀಗಾಗಲೇ ಗುರಿಯಾಗಿದ್ದಾರೆ. ಗಾಡ್ಗೀಳ್ ವರದಿಯ ಬಗ್ಗೆ ಅರಣ್ಯಾಧಿಕಾರಶಾಹಿ ಕೂಡ ವಿರೋಧಿಯಾಗಿ ಕೆಲಸ ಮಾಡುತ್ತಿದೆ.

ಮೇಲಿನ ಎಲ್ಲ ಜನ ಅಂದರೆ ಪಶ್ಚಿಮ ಘಟ್ಟಗಳ ನಿಸರ್ಗ ಸಂಪತ್ತಿನ ಮೇಲೆ ಬಂಡವಾಳ ಹೂಡಿಕೆಯ ಹೆಸರಿನಲ್ಲಿ ಅವುಗಳನ್ನು ಕಬಳಿಸಲು ಹೊಂಚು ಹಾಕಿ ಕುಳಿತಿರುವ ಜನ; ಅವರ ಬೆಂಬಲಿಗರಾಗಿ ಅವರಿಗೆ ಎಲ್ಲ ರೀತಿಯ ಬೆಂಬಲ ಪ್ರೋತ್ಸಾಹ ಸಹಕಾರವನ್ನು ನೀಡುತ್ತಾ ಬರುತ್ತಿರುವ ರಾಜಕಾರಣಿಗಳು; ಸದಾ ಇವರುಗಳ ಸೇವೆ ಮಾಡಿ ಧನ್ಯತೆ ಪಡೆಯುವ ಅಧಿಕಾರಶಾಹಿಗಳು, ಖನಿಜ, ಕಲ್ಲು, ಮರಳು ಗಣಿಗಾರಿಕೆಯ ಲಾಬಿಗಳು; ಮರಮುಟ್ಟುಗಳ ಲಾಬಿಗಳು; ಗುತ್ತಿಗೆದಾರರು; ನಿರ್ಮಾಣಕಾರರು ಮತ್ತು ರಿಯಲ್ ಎಸ್ಟೇಟ್ ದಂಧೆಕೋರರು; ಪ್ರವಾಸೋದ್ಯಮಿಗಳು ಇತ್ಯಾದಿ ಇತ್ಯಾದಿ ಜನ ಗಾಡ್ಗೀಳ್ ವರದಿಯ ಜಾರಿಯ ವಿರುದ್ಧ ವ್ಯಾಪಕವಾದ ನಿರಂತರವಾದ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಅತ್ಯಂತ ವ್ಯಾಪಕವಾದ ಅಪಪ್ರಚಾರಕ್ಕೀಡಾಗಿರುವ ಯಾವುದಾದರೂ ಒಂದು ವರದಿಯಿದ್ದರೆ ಅದು ಪ್ರೊ.ಮಾಧವ್ ಗಾಡ್ಗೀಳ್ ವರದಿ.

ಅತ್ಯಂತ ವ್ಯವಸ್ಥಿತವಾಗಿ ನಿರಂತರವಾಗಿ ಅಪಪ್ರಚಾರಕ್ಕೀಡಾಗಿರುವ ಈ ವರದಿಯ ಮಹಾಪರಾಧ ಪರಿಸರಾತ್ಮಕ ಆಡಳಿತದಲ್ಲಿ ನಿರಂಕುಶಾಧಿಕಾರವನ್ನು ವಿರೋಧಿಸಿದ್ದು, ಮೇಲಿನಿಂದ ಹೇರಲಾಗುವ ಅಭಿವೃದ್ಧಿ ಮತ್ತು ಸಂರಕ್ಷಣಾ ನೀತಿಗಳನ್ನು ವಿರೋಧಿಸಿದ್ದು, ಅಧಿಕಾರಶಾಹಿ ದುರಾಕ್ರಮಣವನ್ನು ವಿರೋಧಿಸಿದ್ದು, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಅಭಿವೃದ್ಧಿಯನ್ನು ಅದರ ನಿಜವಾದ ವಾರಸುದಾರರಿಗೆ ವರ್ಗಾಯಿಸುವ ವಿಕೇಂದ್ರಿಕೃತವಾದ ರಾಜ್ಯಾಂಗದತ್ತವಾದ ಅಧಿಕಾರ ನೀಡಬೇಕೆಂದು ಹೇಳಿದ್ದು.

ಅಂತಿಮವಾಗಿ ವರದಿಯನ್ನು ಟೀಕಿಸಲು ಸ್ವಾಗತವಿದೆ. ಆದರೆ ಅದನ್ನು ಬಿಡುವು ಮಾಡಿಕೊಂಡು ಅಭ್ಯಸಿಸಿ ಸಕಾರಣವಾಗಿ ಖಂಡಿತ ವಿರೋಧಿಸಿ. ಗಾಡ್ಗೀಳ್ ಕೂಡಾ ಟೀಕಾತೀತರಲ್ಲ. ಆದರೆ ಅದು ಅಭ್ಯಾಸರಹಿತವಾದ, ಅಥವಾ ಆಯ್ಧ ಭಾಗಗಳ ಅರೆಬರೆ ಓದಿನಿಂದ ಬಂದ ಅರಳಿಕಟ್ಟೆಯ ಕಾಡು ಹರಟೆಯಾಗದಿರಲಿ. ಅಪಪ್ರಚಾರಕರ ಉದ್ದೇಶಪೂರ್ವಕ ದಾಳಿಗಳ ಪುನರುಚ್ಚಾರವಾಗದಿರಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...