Homeಅಂಕಣಗಳುದಕ್ಷಿಣ ಭಾರತದ ಕರ್ನಾಟಕದಲ್ಲಿ ನೆಲೆಕಂಡಿರುವ ಬಿಜೆಪಿ ಈ ಬಾರಿಯೂ ತನ್ನ ನೆಲೆ ಉಳಿಸಿಕೊಳ್ಳುವುದೇ?

ದಕ್ಷಿಣ ಭಾರತದ ಕರ್ನಾಟಕದಲ್ಲಿ ನೆಲೆಕಂಡಿರುವ ಬಿಜೆಪಿ ಈ ಬಾರಿಯೂ ತನ್ನ ನೆಲೆ ಉಳಿಸಿಕೊಳ್ಳುವುದೇ?

- Advertisement -
- Advertisement -

ಎ.ನಾರಾಯಣ್ |

ಒಂದು ರೀತಿಯಲ್ಲಿ ಯೋಚಿಸಿದರೆ ಕರ್ನಾಟಕದಲ್ಲಿ 2019ರ ಲೋಕಸಭಾ ಚುನಾವಣೆಯ ಸೋಲು ಗೆಲುವುಗಳನ್ನು ಸುಲಭವಾಗಿ ಊಹಿಸಿಬಿಡಬಹುದು. ಹೋದಬಾರಿ,  ಅಂದರೆ 2014 ರಲ್ಲಿ ದೇಶಾದ್ಯಂತ ನರೇಂದ್ರ ಮೋದಿ ಪರ ಅಲೆ ಇತ್ತು. ಅದು ಕರ್ನಾಟಕದಲ್ಲೂ ಕಾಣಿಸಿಕೊಂಡಿತ್ತು. ಆ ಕಾರಣಕ್ಕೆರಾಜ್ಯದಲ್ಲಿರುವ ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು (ಆ ನಂತರ ಉಪ ಚುನಾವಣೆಯಲ್ಲಿ ಒಂದು ಸ್ಥಾನ ಕಳೆದುಕೊಂಡಿತು). ಈ ಬಾರಿ ನರೇಂದ್ರ ಮೋದಿ ಪರ ಅಲೆಯ ಅಬ್ಬರ ಕೊಂಚ ಕುಸಿದಿದೆ. ಈ ಕುಸಿತವನ್ನು ಸರಿದೂಗಿಸಬಲ್ಲಷ್ಟರ ಮಟ್ಟಿಗೆ ಪ್ರಭಾವ ಹೊಂದಿರುವ ರಾಜ್ಯಮಟ್ಟದ ನಾಯಕತ್ವ ಬೆಳೆದಿಲ್ಲ. ಆದುದರಿಂದ ಬಿಜೆಪಿ ಹೋದ ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎನ್ನುವುದು ತರ್ಕಬಧ್ದ ಯೋಚನೆಯಾಗುತ್ತದೆ

ಇನ್ನು ಕಾಂಗ್ರೆಸ್ಸಿನ ವಿಚಾರಕ್ಕೆ ಬಂದರೆ ಹೋದ ಬಾರಿ ಲೋಕಸಭಾ ಚುನಾವಣೆನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಚುನಾವಣೆಗೆ ಒಂದುವರ್ಷಕ್ಕೆ ಮೊದಲು ಮುಖ್ಯಮಂತ್ರಿ ಸ್ಥಾನವೇರಿದ್ದ ಸಿದ್ಧರಾಮಯ್ಯ ಅವರ ನಾಯಕತ್ವದ ವರ್ಚಸ್ಸು ಇನ್ನೂ ಊರ್ಧ್ವಮುಖಿಯಾಗಿತ್ತು. ಆದುದರಿಂದಲೇ ಮೋದಿ ಅಲೆಯ ಹೊರತಾಗಿಯೂ 2014ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ  2009ರ ಚುನಾವಣೆಗಿಂತ ಕೊಂಚ ಹೆಚ್ಚಿನ ಸಾಧನೆ ತೋರಿಸಲು ಸಾಧ್ಯವಾಗಿದ್ದು. 2009ರಲ್ಲಿ ಕೇವಲ ಆರು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 2014ರಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿತು (ಉಪಚುನಾವಣೆಯಲ್ಲಿ ಇನ್ನೊಂದು ಸ್ಥಾನ ಗೆದ್ದುಕೊಂಡು ಈಗ ೧೦ ಸ್ಥಾನಗಳನ್ನು ಹೊಂದಿದೆ).ಈ ಬಾರಿ ಕಾಂಗ್ರೆಸ್ ರಾಜ್ಯದ ಮಟ್ಟಿಗೆ 2014ರಲ್ಲಿ ಇದ್ದಷ್ಟು ಗಟ್ಟಿಯಾಗಿಲ್ಲ. ರಾಷ್ಟ್ರಮಟ್ಟದಲ್ಲಿ ಆಗಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಕಾಂಗ್ರೆಸ್ ಚಿಗುತುಕೊಂಡಿದೆಯಾದರೂ ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಎಷ್ಟು ಅನುಕೂಲವಾಗಲಿದ್ದೇ ಅಂತ ಲೆಕ್ಕಹಾಕುವುದು ಕಷ್ಟ.ಆದರೆ ಕಾಂಗ್ರೆಸ್ಸಿನ ಅದೃಷ್ಟವೋ, ದುರಾದೃಷ್ಟವೋ ಅದು ಈ ಬಾರಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿಲ್ಲ. ಹೋದ ಬಾರಿ ಎರಡು ಸೀಟುಗಳನ್ನು ಗೆದ್ದುಕೊಂಡಿದ್ದ ಜಾತ್ಯಾತೀತ ಜನತಾದಳ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಎದುರಿಸಲಿದೆ. ಕುಸಿದು ಹೋಗಿರುವ ರಾಜ್ಯ ಕಾಂಗ್ರೆಸ್ಸಿನ ಬಲವನ್ನು ಜಾತ್ಯಾತೀತ ಜನತಾದಳದ ಜತೆಗಿನ ಮೈತ್ರಿ ಎಷ್ಟರ ಮಟ್ಟಿಗೆ ಮೇಲೆತ್ತಲಿದೆ ಎನ್ನುವುದು ಮೋದಿಯವರನ್ನು ಇನ್ನೊಮ್ಮೆ ಪ್ರಧಾನಮಂತ್ರಿ ಪಟ್ಟಕ್ಕೇರಿಸಲು ಕಂಕಣಬದ್ಧ್ದವಾಗಿರುವ  ಬಿಜೆಪಿಗೆ ಕರ್ನಾಟಕ ಎಷ್ಟು ಸೀಟುಗಳನ್ನು ನೀಡಲಿದೆ ಎನ್ನುವುದನ್ನು ನಿರ್ಧರಿಸಲಿದೆ.ಹಾಗೆಯೇ, ಇದು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಮೈಕೊಡವಿ ಬಿಜೆಪಿಯೊಂದಿಗೆ ಸೆಣಸಲು ಬಯಸಿರುವ ಕಾಂಗ್ರೆಸ್ಸಿಗೂ ಕರ್ನಾಟಕ ಎಷ್ಟು ಸೀಟುಗಳನ್ನು ನೀಡಲಿದೆ ಎನ್ನುವುದನ್ನೂ ನಿರ್ಧರಿಸಲಿದೆ.

ಕರ್ನಾಟಕದ ಮಟ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳೆರಡು ಮೈತ್ರಿಕೂಟ ರಚಿಸಿಕೊಂಡು ಚುನಾವಣಾ ಕಣಕ್ಕಳಿಯುತ್ತಿರುವುದು ಇದೇ ಮೊದಲು. ಹಾಗೆಂದು ಈ ಮೈತ್ರಿಯಲ್ಲಿ ಹಲವಾರು ಸೂಕ್ಷ್ಮಗಳಿವೆ. ಜನತಾದಳ ಪ್ರಬಲವಾಗಿರುವುದು ದಕ್ಷಿಣ ಕರ್ನಾಟಕದ ಕೆಲ ಭಾಗಗಲ್ಲಿ ಮಾತ್ರ. ಉತ್ತರ ಕರ್ನಾಟಕ ಮಟ್ಟಿಗೆ ಜನತಾದಳದ ಮೈತ್ರಿ ಬಹುತೇಕ ಹೆಸರಿಗಷ್ಟೇ. ಅಷ್ಟರಮಟ್ಟಿಗೆ ಇದೊಂದು ಭಾಗಶ ಮೈತ್ರಿ. ದಕ್ಷಿಣ ಕರ್ನಾಟಕದಲ್ಲಿ ಎರಡೂ ಪಕ್ಷಗಳು ಸೀಟು ಹಂಚಿಕೆಯಲ್ಲಿ ತೋರುವ ಉದಾರತೆ ಮತ್ತು ವ್ಯೂಹಾತ್ಮಕತೆ ಮೈತ್ರಿಯ ಲಾಭನಷ್ಟಗಳನ್ನು ನಿರ್ಧರಿಸಲಿದೆ. ಬಲಾಬಲಗಳಾಚೆಗೆ  ನೋಡಿದರೆ ಈ ಮೈತ್ರಿಯ ಪರಿಣಾಮದಿಂದ  ಬಿಜೆಪಿ ಮತ್ತು ಜಾತ್ಯತೀತ ಮತಗಳು ಮೊಟ್ಟಮೊದಲಿಗೆ ನೇರವಾಗಿ ಮುಖಾಮುಖಿಯಾಗಲಿವೆ. ಕರ್ನಾಟಕದಲ್ಲಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸೆಣಸಿದಾಗಲೆಲ್ಲಾ ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್ ಮತ್ತು ಜನತಾ ದಳಗಳ ಮಧ್ಯೆ ಹಂಚಿಹೋಗುತಿದ್ದವು ಎಂದು ನಂಬಲಾಗುತಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಜನತಾದಳಗಳು ಒಂದಾಗಿ ಜಾತ್ಯಾತೀತ ಮತಗಳಿಗೊಂದು ವೇದಿಕೆ ಕಲ್ಪಿಸಿರುವುದರಿಂದ, ರಾಜ್ಯದಲ್ಲಿ ಜಾತ್ಯಾತೀತ ಮತಪೆಟ್ಟಿಗೆ ನಿಜಕ್ಕೂ ಎಷ್ಟು ದೊಡ್ಡದಾಗದೆ ಎನ್ನುವುದನ್ನು ಈ ಚುನಾವಣೆ ತೋರಿಸಲಿದೆ.

ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಕನಿಷ್ಠ ನೆಲೆಯೂ ಇಲ್ಲ. ಆದುದರಿಂದ ಕರ್ನಾಟಕದಲ್ಲಿ ಸಾಧ್ಯವಾದಷ್ಟು ಹೆಚ್ಚು ಸೀಟುಗಳನ್ನು ಗೆಲ್ಲುವುದು ಆ ಪಕ್ಷಕ್ಕೆ ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ಪ್ರತಿಷ್ಠೆಯ ದೃಷ್ಟಿಯಿಂದಲೂ ಅತ್ಯಗತ್ಯ. ಕರ್ನಾಟಕದಲ್ಲಿ ಪಕ್ಷದ ಸಾಧನೆ ಸೊರಗಿದರೆ ನರೇಂದ್ರ ಮೋದಿಯ ಕಾಲದ ಬಿಜೆಪಿ ಕೇವಲ ಉತ್ತರದ ಮಾಯೆಯಾಗಿ ಉಳಿದುಬಿಡುತ್ತದೆ.ಎಂಬ ಅಭಿಪ್ರಾಯ ಇನ್ನಷ್ಟೂ ಬಲಗೊಳ್ಳಲಿದೆ. ಹೀಗಾಗದಂತೆ ತಡೆಯಲು ಬಿಜೆಪಿ ಸಾಧ್ಯವಾದ ಎಲ್ಲಾ ಅಸ್ತ್ರಗಳನ್ನೂ ಇಲ್ಲಿ ಪ್ರಯೋಗಿಸಲಿದೆ.  ಹಾಗೆ ನೋಡಿದರೆಈ ತನಕ  ಮೋದಿಯ ಮಾಯಾಜಾಲ ಕರ್ನಾಟಕದ ಮಟ್ಟಿಗೆ ಮತದಾರನ್ನು ದೊಡ್ಡ ಮಟ್ಟಿಗೆ ಮರುಳು ಮಾಡಿಲ್ಲ ಅಂತಲೇ ಹೇಳಬೇಕಾಗುತ್ತದೆ. ಕರ್ನಾಟಕದಲ್ಲಿ ಬಿಜೆಪಿಯ ಅತ್ಯುತ್ತಮ ಸಾಧನೆ 2009 ರಲ್ಲಿ. ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ19 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮತ್ತೊಮ್ಮೆ ಅಧಿಕಾರ ಪಡೆಯುವಕನಸುಕಾಣುತಿದ್ದ  ಅಟಲ್ ಬಿಹಾರಿ ವಾಜಪೇಯೀ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಸೋತು ಅಧಿಕಾರ ಕಳೆದುಕೊಂಡ ಆ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಮಾತ್ರ ಬಿಜೆಪಿಯನ್ನು ದೊಡ್ಡ ಮಟ್ಟಿಗೆ ಕೈಹಿಡಿದಿದ್ದರು. ಎಲ್ಲಿಯೂ ಇಲ್ಲದ ವಾಜಪೇಯೀ ಅಲೆಯೊಂದು  ಆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಣಿಸಿಕೊಂಡಿತ್ತು. 2014 ರಲ್ಲಿ ದೇಶಾದ್ಯಂತ ಮೋದಿ ಅಲೆ ದೊಡ್ಡದಾಗಿ ಕೆಲಸ ಮಾಡಿತು. ಕೆಲವು ರಾಜ್ಯಗಳಲ್ಲಿ ಎಲ್ಲಾ ಸೀಟುಗಳನ್ನು ಬಿಜೆಪಿ ಬಾಚಿಕೊಂಡಿತು. ಆದರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿಗೆ ವಾಜಪೇಯೀ ಕಾಲದ ಸಾಧನೆಯನ್ನು ಮೀರುವುದು ಬಿಡಿ, ಸರಿದೂಗಿಸಲೂ ಸಾಧ್ಯವಾಗಲಿಲ್ಲ. ಅದು 2009 ರಲ್ಲಿ ಗಳಿದ್ದಕ್ಕಿಂತ ಮೂರು ಸ್ಥಾನಗಳನ್ನು ಕಡಿಮೆ ಪಡೆಯಿತು.  ಕಾಂಗ್ರೆಸ್ಸಿಗಿಂತ ಹೆಚ್ಚು ಸ್ಥಾನ ಪಡೆದುಕೊಂಡದ್ದೇ ಅದರ ಸಾಧನೆಯಾಯಿತು.ಅಂದರೆ ಮೋದಿ ಅಲೆ ಇಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಕೆಲಸ ಮಾಡಲಿಲ್ಲ ಎಂದಾಯಿತು. 2019 ರಲ್ಲಿ ವಿಧಾನ ಸಭಾ ಚುನಾವಣಾ ನಡೆದಾಗ ಮತ್ತೊಮ್ಮೆ ಮೋದಿಯವರ ವರ್ಚಸ್ಸು ಕರ್ನಾಟಕದಲ್ಲಿ ಪರೀಕ್ಷೆ ಎದುರಿಸಿತು. ಫಲಿತಾಂಶ ಬಂದಾಗ ಕಂಡು ಬಂಡ ಸತ್ಯ ಮಾತ್ರ ಮೋದಿ ಅಭಿಮಾನಿಗಳ ಪಾಲಿಗೆ ಆಶಾದಾಯಕವಾಗಿರಲಿಲ್ಲ. ಯಾಕೆಂದರೆ  ಮೋದಿ ಬಿಜೆಪಿಯ ಬಾನಂಗಳದಲ್ಲಿಪ್ರಖರವಾಗಿ  ಉದಯಿಸವ ಮೊದಲೇ ನಡೆದ್ದಿದ್ದ 2008ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನಗಳನ್ನೂ ಕೂಡಾ  ಮೋದಿ ತನ್ನ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಸೆಣಸಿದ 2018ರಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲಾಗಲಿಲ್ಲ. 2008ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆದು ಬಿಜೆಪಿಗೆ 110ಸ್ಥಾನಗಳು ಲಭಿಸಿದ್ದರೆ, 2018ರಲ್ಲಿ ಮೋದಿಯ ವರ್ಚಸ್ಸು ದೇಶಾದ್ಯಂತ ಪ್ರಬಲ ಸ್ಥಿತಿಯಲ್ಲಿದ್ದ ಕಾಲಕ್ಕೆ ಬಿಜೆಪಿ ಕರ್ನಾಟಕದಲ್ಲಿ ಗೆದ್ದದ್ದು 104 ಸ್ಥಾನಗಳನ್ನು. 2008 ರಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ 2018ರ ಚುನಾವಣೆಯ ನಂತರ ಅಧಿಕಾರಹಿಡಿದ ಮೈತ್ರಿ ಸರಕಾರದ ವಿರುದ್ಧ ಏನೇ ತಿಪ್ಪರಲಾಗ ಹಾಕಿದರೂ ಅಧಿಕಾರ ಪಡೆದುಕೊಳ್ಳುವಲ್ಲಿ ಅದು ಇನ್ನೂ ಯಶಸ್ವಿಯಾಗಿಲ್ಲ. ಇದರ ಒಟ್ಟು ತಾತ್ಪರ್ಯ ಏನೆಂದರೆ ಕರ್ನಾಟಕಲ್ಲಿ ಮೋದಿಯವರ ಹೆಸರು ಉತ್ತರದ ರಾಜ್ಯಗಳಲ್ಲಿ ಮಾಡಿದ ಮೋಡಿ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ಹೇಗೂ ಮೋದಿತನ್ನ  ಹಿಂದಿನ ವರ್ಚಸ್ಸನ್ನು ಕರ್ನಾಟಕದಲ್ಲಿ ಬಿಡಿ, ಇತರೆಡೆ ಕೂಡಾ ಉಳಿಸಿಕೊಂಡಿಲ್ಲ. ಆದುದರಿಂದ ಬಿಜೆಪಿ ಈಗ ಮುನ್ನೆಲೆಗೆ ತರುತ್ತಿರುವ ದೇಶ ಪ್ರೇಮ, ಪಾಕಿಸ್ತಾನ ದ್ವೇಷ, ಮಿಲಿಟರಿ ಉನ್ಮೇಷಗಳೆಲ್ಲಾ ಕರ್ನಾಟಕದ ಮತದಾರರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎನ್ನುವುದರ ಮೇಲೆ ಅದು ಮೈತ್ರಿಕೂಟವನ್ನು ಹೇಗೆ ಮಣಿಸಲಿದೆ ಎನ್ನುವುದು ನಿರ್ಣಯವಾಗುತ್ತದೆ.

ಬಿಜೆಪಿಯ ಸಾಧನೆ ಹೋದ ಚುನಾವಣೆಗಿಂತ ಹೆಚ್ಚಾಗಲಾರದು ಎಂಬ ಸಾಧ್ಯತೆ ಕಾಂಗ್ರೆಸ್ಸಿಗೆ ಸಮಾಧಾನ ತರುವ ವಿಚಾರವಲ್ಲ. ಯಾಕೆಂದರೆ, ಹೋದ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ಸಿಗಿಂತ ಹೆಚ್ಚು ಕಡಿಮೆ ಎರಡು ಪಟ್ಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ಸಿಗೂ ಕೇರಳ ಬಿಟ್ಟರೆ ದಕ್ಷಿಣ ರಾಜ್ಯಗಳ ಪೈಕಿ ಇನ್ನೆಲ್ಲೂ ದೊಡ್ಡ ಮಟ್ಟಿನ ನೆಲೆ ಉಳಿದಿಲ್ಲ. ಆದುದರಿಂದ ಕರ್ನಾಟಕದಿಂದ ಹೋದ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ದೊಡ್ಡ ಅನಿವಾರ್ಯತೆ ಆ ಪಕ್ಷಕ್ಕೂ ಇದೆ. ಆ ಕಾರಣಕ್ಕಾಗಿಯೇ ಅದು ತನ್ನ ಸ್ವಪ್ರತಿಷ್ಠೆಯನ್ನು ತ್ಯಾಗಮಾಡಿ ಜನತಾದಳದೊಂದಿಗೆ ಮೈತ್ರಿ ಮಾಡಿಕೊಂಡಿರುವುದು. ಮೈತ್ರಿಯಿಂದ ದೊಡ್ಡ ಲಾಭ ಪಡೆಯಲು ಹೊರಟ ಕಾಂಗ್ರೆಸ್ ಸೀಟು ಹಂಚಿಕೆ ವಿಚಾರದಲ್ಲಿ  ಎಡವಟ್ಟು ಮಾಡಿಕೊಂಡರೆ ಗಳಿಸುವುದಕ್ಕಿಂತ ಹೆಚ್ಚು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಬಂದೀತು.ಈ ತನಕ ಎಲ್ಲ ಪಕ್ಷಗಳಲ್ಲೂ ಅಭ್ಯರ್ಥಿ ಆಯ್ಕೆಯ ಬಗ್ಗೆ ಗೊಂದಲ ಇದ್ದಂತಿದೆ. ಯಾವುದೇ ಕ್ಷೇತ್ರಕ್ಕೆ ಇಂತವರೇ ಅಭ್ಯರ್ಥಿ ಅಂತ ಯಾವ ಪಕ್ಷಕ್ಕೂ ಸ್ಪಷ್ಟತೆ ಇದ್ದಂತಿಲ್ಲ. ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆಯ ಬಗ್ಗೆ ದಿನಕ್ಕೊಂದು ಕತೆ ಹುಟ್ಟುತ್ತಲೇ ಇದೆ.  ಸೀಟು ಹಂಚಿಕೆ ಗೊಂದಲ ಮುಂದುವರಿದು ಕೊನೆತನಕವೂ ಅಭ್ಯರ್ಥಿಗಳ ಘೋಷಣೆ ಆಗದೆ ಹೋದರೆ ಉಳಿದೆರಡೂ ಪಕ್ಷಗಳಿಗಿಂತ ಹೆಚ್ಚಿನ ಏಟು ಬೀಳುವುದು ಕಾಂಗ್ರೆಸ್ಸಿಗೆ. ಯಾಕೆಂದರೆ, ಬಿಜೆಪಿಯಲ್ಲಿ ಅಭ್ಯರ್ಥಿಯ ಆಯ್ಕೆ ಆಗಲಿ,ಆಗದಿರಲಿ, ಅದು ತಳಮಟ್ಟದಲ್ಲಿ ತನ್ನ ಚುನಾವಣಾ ತಯಾರಿಯನ್ನು ವ್ಯವಸ್ಥಿತವಾಗಿ ನಡೆಸುತ್ತದೆ. ಈ ಕೆಲಸಕ್ಕೆ ಅಗತ್ಯ ಇರುವ ಕೇಡರ್ ಅನ್ನು ಅದು ಹೊಂದಿದೆ. ಜಾತ್ಯಾತೀತ ಜನತಾ ದಳ ಸಂಪೂರ್ಣವಾಗಿ ಜಾತಿಯ ಮೇಲೆಯೇ ಅವಲಂಬಿಸಿರುವುದರಿಂದ ಅಕಸ್ಮಾತ್  ಅಭ್ಯರ್ಥಿಗಳ ಘೋಷಣೆ ತಡವಾದರೂ ಅದಕ್ಕೆ ಹೆಚ್ಚಿನ ನಷ್ಟ ಏನೂ ಆಗಲಾರದು. ಆದರೆ ಕಾಂಗ್ರೆಸ್ಸಿಗೆ ಅತ್ತ ಕೇಡರ್  ಬಲವೂ ಇಲ್ಲ ಇತ್ತ ಯಾವುದೇ ನಿರ್ಧಿಷ್ಟ ಜಾತಿಯ ಬಲವೂ ಇಲ್ಲ (ಅಲ್ಪಸಂಖ್ಯಾತರನ್ನು ಹೊರತುಪಡಿಸಿದರೆ). ಅಭ್ಯರ್ಥಿಗಳ ಆಯ್ಕೆ ತಡವಾದಷ್ಟು ಕಾಂಗ್ರೆಸ್ಸಿಗೆ ಕ್ಷೇತ್ರ ಮಟ್ಟದಲ್ಲಿ ಚುನಾವಣಾ ತಂತ್ರಗಳನ್ನು ರೂಪಿಸಲು ಕಷ್ಟವಾಗಬಹುದು.  ಆದುದರಿಂದಸೀಟು ಹಂಚಿಕೆ  ಪರಿಸ್ಥಿತಿ ಎಲ್ಲಾತಿಳಿಯಾಗಿ ಅಭ್ಯರ್ಥಿಗಳ ಆಯ್ಕೆ ಆಗುವ ವರೆಗೆ  ವರೆಗೆ ಚುನಾವಣೆಯಲ್ಲಿ ಏನಾಗಬಹುದು ಅಂತ ಕೇವಲ ತರ್ಕ ಮಾತ್ರದಿಂದ ಊಹಿಸುವುದು ಕಷ್ಟ.ತರ್ಕಬದ್ಧ ಲೆಕ್ಕಾಚಾರಗೆಲ್ಲ ಚುನಾವಣೆಯಲ್ಲಿ ಕೆಲವೊಮ್ಮೆ ಕೆಲಸಕ್ಕೆ ಬರುವುದಿಲ್ಲ. ಭಾರತದ ಚುನಾವಣೆಗಳಲ್ಲಿ  ಯಾವ್ಯಾವುದೋ ಊಹಿಸಲಸದಳವಾದ ಅಗೋಚರ ವಿಚಾರಗಳೆಲ್ಲಾ ಸಕ್ರಿಯವಾಗಿರುತ್ತವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...