Homeಮುಖಪುಟಎರಡನೇ ಹಂತದ ಚುನಾವಣಾ ಕಣ: ಸಮಬಲದ ಕಾದಾಟದಲ್ಲಿ ಯಾರಿಗೆ ಮೇಲುಗೈ?

ಎರಡನೇ ಹಂತದ ಚುನಾವಣಾ ಕಣ: ಸಮಬಲದ ಕಾದಾಟದಲ್ಲಿ ಯಾರಿಗೆ ಮೇಲುಗೈ?

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ವಾಟ್ಸಾಪ್‍ಗಳಲ್ಲಿ ಈಗಾಗಲೇ ಆರು ಅನಧಿಕೃತ ಸರ್ವೆಗಳು ಈ ಭಾಗದಲ್ಲಿ ಓಡಾಡುತ್ತಿವೆ. ಅವುಗಳ ಪ್ರಕಾರ, ಬಿಜೆಪಿಗೆ 22ರಿಂದ 25 ಸೀಟು ಪಕ್ಕಾ ಅಂತೆ! ಬಿಜೆಪಿ ಪ್ರೇಮಿಗಳು ಇದನ್ನು ಫಾರ್ವರ್ಡ್ ಮಾಡುತ್ತಿದ್ದರೆ, ಕಾರ್ಯಕರ್ತರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿಯನ್ನು ವಿರೋಧಿಸುವ ಕೆಲವರೂ ಇಂತಹ ಒಂದು ಸರ್ವೇಯನ್ನು ನಂಬಿದ್ದಾರೆ! ಅದು ‘ಬಿಬಿಸಿ ನ್ಯೂಸ್’ ಮಾಡಿದ ಸರ್ವೆ! ಅದರ ಪ್ರಕಾರ ಬಿಜೆಪಿಗೆ 24 ಪಕ್ಕಾ ಅಂತೆ! ‘ಅಲ್ಟ್ ನ್ಯೂಸ್’ ನಡೆಸಿದ ಫ್ಯಾಕ್ಟ್ ಚೆಕ್ ಪ್ರಕಾರ, ಆರರಲ್ಲಿ ಐದನ್ನು ಬಿಜೆಪಿ ಗುಂಪುಗಳೇ ಸೃಷ್ಟಿಸಿವೆ! ‘ಬಿಬಿಸಿ ನ್ಯೂಸ್’ ಇದೆಯಲ್ಲ, ಅದು 2012ರಿಂದ ಇಲ್ಲಿಯವರೆಗೆ (ಹಲವು ವಿಧಾನಸಭಾ ಚುನಾವಣೆಗಳೂ ಸೇರಿ) ಹನ್ನೆರಡು ಬಾರಿ ಆಯಾಯ ಚುನಾವಣಗೆ ಸಂಬಂಧಿಸಿದ ಸರ್ವೆಗಳನ್ನು ಪ್ರಕಟಿಸಿದೆ! ಮತ್ತು ಹನ್ನೆರಡರಲ್ಲೂ ಅದು ಬಿಜೆಪಿಗೆ ಭಾರಿ ಲೀಡ್ ಕೊಟ್ಟಿದೆ! ಫಲಿತಾಂಶಗಳು ಮಾತ್ರ ಉಲ್ಟಾ ಹೊಡೆಯುತ್ತಲೇ ಇವೆ!

ಅಸಲಿಯತ್ತು ಏನೆಂದರೆ ಬಿಬಿಸಿಗೆ ಇರುವ ವಿಶ್ವಾಸಾರ್ಹತೆಯನ್ನು ದುರುಪಯೋಗ ಮಾಡಿಕೊಂಡ ಬಿಜೆಪಿಯ ಐಟಿ ಸೆಲ್ ಮತ್ತು ಅಂಥದ್ದೇ ಲಜ್ಜೆಗೆಟ್ಟ ಫೇಸ್‍ಬುಕ್ ಗ್ರೂಪ್‍ಗಳು ಬಿಬಿಸಿ ನ್ಯೂಸ್ ಲೊಗೊವನ್ನು ಬಳಸಿಕೊಂಡು ಸುಳ್ ಸರ್ವೆ ಹರಡುತ್ತ ಬಂದಿವೆ. ಪ್ರತಿ ಸಲವೂ, ಆಲ್ಟ್ ನ್ಯೂಸ್, ಕ್ವಿಂಟ್ ವೆಬ್‍ಖೂಫ್ ತರಹದ ಫ್ಯಾಕ್ಟ್ ಚೆಕಿಂಗ್ ಪೋರ್ಟಲ್‍ಗಳು ಇದನ್ನು ಬಯಲು ಮಾಡಿವೆ. ಪ್ರತಿ ಸಾರಿಯೂ ಬಿಬಿಸಿಯ ಉನ್ನತ ಅಧಿಕಾರಿಗಳು ಇಂತಹ ಸರ್ವೆ ನಾವು ಮಾಡೇ ಇಲ್ಲ ಎಂದಿದ್ದಾರೆ. ಈಗಲೂ ಅವರು ಅದನ್ನೇ ಹೇಳಿದ್ದಾರೆ. ಈ ವಾಟ್ಸಾಪ್ ಸಂದೇಶದ ಲಿಂಕನ್ನು ಕ್ಲಿಕ್ ಮಾಡಿದರೆ ಬಿಬಿಸಿ ನ್ಯೂಸ್‍ನ ಹೋಂಪೇಜ್ ತೆರೆದುಕೊಳ್ಳುತ್ತದೆ. ಆದರೆ, ಈ ಸರ್ವೇ ಮಾತ್ರ ಇರುವುದಿಲ್ಲ. ಆದರೆ, ಲಿಂಕ್ ತೆರೆಯುವ ಗೋಜಿಗೆ ಹೋಗದೇ ಅದರೊಂದಿಗಿನ ವಾಟ್ಸಾಪ್ ಸಂದೇಶದಲ್ಲೇ ಸಂಪೂರ್ಣ ವಿವರಗಳಿರುತ್ತವೆ.


ಹಾಗಾದರೆ ವಾಸ್ತವವೇನು?
ನಮ್ಮ ಸೀಮಿತ ಓಡಾಟ ಮತ್ತು ಅಸೀಮಿತ ಸಂಪರ್ಕಗಳ ಪ್ರಕಾರ, ಎರಡನೇ ಹಂತದ 14 ಕ್ಷೇತ್ರಗಳ ಚುನಾವಣೆಯಲ್ಲಿ ಮೋದಿ ಹವಾ ಇಲ್ಲ. ಪುಲ್ವಾಮ, ಬಾಲಾಕೋಟ್ ಮರೆತು ಹೋಗಿವೆ. ದಾವಣಗೆರೆ, ಧಾರವಾಡ ಮತ್ತು ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಮಾತ್ರ ಇದನ್ನೆಲ್ಲ ಜೀವಂತ ಇಡುವ ಪ್ರಯತ್ನಗಳಲ್ಲಿ ಚೆಡ್ಡಿ ಪಡೆ ಯಶಸ್ವಿಯಾಗಿದೆ. ಉಳಿದೆಡೆ ಆ ಚರ್ಚೆ ಅಷ್ಟಾಗಿ ಇಲ್ಲ. ಈ 14 ಕ್ಷೇತ್ರಗಳಲ್ಲಿ 5 ಹೈದರಾಬಾದ್ ಕರ್ನಾಟಕದಲ್ಲಿ, 2 ಮಧ್ಯ ಕರ್ನಾಟಕದಲ್ಲಿ, ಒಂದು ಕರಾವಳಿ ಕರ್ನಾಟಕದಲ್ಲಿ ಮತ್ತು 6 ಮುಂಬೈ ಕರ್ನಾಟಕದ ವ್ಯಾಪ್ತಿಯಲ್ಲಿ ಇವೆ. ಈಗ ಒಂಭತ್ತು ಕಡೆ ಬಿಜೆಪಿ ಸಂಸದರಿದ್ದರೆ, ಐದು ಕಡೆ ಕಾಂಗ್ರೆಸ್ ಸಂಸದರಿದ್ದಾರೆ.

ಮುಂಬೈ ಕರ್ನಾಟಕ: ಪ್ರತಿ ಕ್ಷೇತ್ರದಲ್ಲೂ ಫೈಟ್
ಮುಂಬೈ ಕರ್ನಾಟಕದಲ್ಲಿ ಈ ಸಲ ಯಾರು ಎಷ್ಟು ಗೆಲ್ಲುತ್ತಾರೆ ಎಂದು ಹೇಳಲಾಗದಿದ್ದರೂ, ಎಲ್ಲಾ ಸಂಸದರೂ ವಿರೋಧ ಎದುರಿಸುತ್ತಿದ್ದಾರೆ ಮತ್ತು ಗೆಲ್ಲಲು ತಿಣುಕಾಡುತ್ತಿದ್ದಾರೆ. ಮೈತ್ರಿ ಅಭ್ಯರ್ಥಿಗಳಲ್ಲಿ ಇಬ್ಬರು ಪೂರಾ ಹೊಸಬರಾದರೂ, ದಿನೇ ದಿನೇ ಅವರ ಬಲ ಹೆಚ್ಚಾಗುತ್ತಿದೆ. ಬಿಜೆಪಿಯು ಕಳೆದ ಎರಡು ಚುನಾವಣೆಗಳಲ್ಲಿ ಅದು ‘ಲಿಂಗಾಯತ’ ಕಾರ್ಡ್ ಬಳಸಿ ಆಟ ಆಡಿದೆ. ಹಿಂದಿನ ಸಲ ಮಾಧ್ಯಮ ಸೃಷ್ಟಿತ ಮೋದಿ ಹವಾನೂ ಅದರ ನೆರವಿಗೆ ಬಂದಿತ್ತು.


ಲಿಂಗಾಯತ ಇಶ್ಯೂಗೆ ಬರುವ ಮೊದಲು, ಇಲ್ಲಿನ ಸಂಸದರ ಕಾರ್ಯಕ್ಷಮತೆ ನೋಡಿದರೆ, ಪುಟ್ಟಾಪೂರಾ ಫೇಲ್. ಇಲ್ಲಿ ಈಗ ಆರರಲ್ಲಿ ಐವರು ಲಿಂಗಾಯತ ಸಂಸದರಿದ್ದಾರೆ. ಐವರ ಪೈಕಿ, ಬೆಳಗಾವಿಯ ಸುರೇಶ ಅಂಗಡಿ ಬಣಜಿಗ, ಬಾಗಲಕೋಟೆಯ ಗದ್ದಿಗೌಡರ್ ಗಾಣಿಗ, ಹಾವೇರಿಯ ಶಿವಕುಮಾರ್ ಉದಾಸಿ ಬಣಜಿಗ. ಬಣಜಿಗ, ಗಾಣಿಗರೆಲ್ಲ ಲಿಂಗಾಯತ ಸಮುದಾಯದಲ್ಲಿ ಅಲ್ಪಸಂಖ್ಯಾತರು. ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಲಿಂಗಾಯತರಲ್ಲಿ ಬಹು ಸಂಖ್ಯಾತರಾಗಿರುವ ಪಂಚಮಸಾಲಿಗಳನ್ನು ಕ್ಯಾಂಡಿಡೇಟ್ ಮಾಡುವ ಮೂಲಕ ಕಾಂಗ್ರೆಸ್ ಹೊಸ ಜಾತಿ ಸಮೀಕರಣಕ್ಕೆ ಕೈ ಹಾಕಿದೆ. ಮೂರು ಸಲ ಗೆದ್ದಿರುವ ಸುರೇಶ ಅಂಗಡಿ ಮತ್ತು ಎರಡು ಸಲ ಗೆದ್ದಿರುವ ಗದ್ದಿಗೌಡರ್ ವಿರುದ್ಧ ಅಸಮಾಧಾನವಿದೆ. ಇವರು ಏನು ಕೆಲಸ ಮಾಡಿದ್ದಾರೋ ಯಾರಿಗೂ ಗೊತ್ತಿಲ್ಲ. ಮತ್ತೆ ಮೋದಿಯ ಹೆಸರಲ್ಲಿ ವೋಟ್ ಕೇಳುತ್ತಿರುವುದೇ ಇದಕ್ಕೆ ಸಾಕ್ಷಿ. ಇದೇ ಮಾತು ಚಿಕ್ಕೋಡಿಯ ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿಗೂ ಅನ್ವಯಿಸುತ್ತದೆ. ಆದರೆ, ಅವರಿಗೆ ಪೂರಕ ವಾತಾವರಣವನ್ನು ‘ಕತ್ತಿ’ಗಳು ಸೃಷ್ಟಿಸಿವೆ.

ಇನ್ನು ಹಾವೇರಿಯ ಸಂಸದ ಶಿವಕುಮಾರ್ ಉದಾಸಿ ಎದುರು ಸಲೀಂ ಅಹ್ಮದ್ ಎರಡು ಸಲ ಸ್ಪರ್ಧಿಸಿ ಸೋತಿದ್ದರು. ಆಗೆಲ್ಲ ಕೋಮು ಧ್ರುವೀಕರಣ ಮಾಡಿದ್ದ ಬಿಜೆಪಿಗೆ ಈಗ ಕೈ ಕಟ್ಟಿ ಹಾಕಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್‍ನ ಡಿ.ಆರ್.ಪಾಟೀಲ್ ಸಂಚಲನ ಮೂಡಿಸಿದ್ದಾರೆ. ಎರಡು ಸಲ ಸಂಸದರಾದರೂ ಕ್ಷೇತ್ರಕ್ಕೆ ಹೇಳಿಕೊಳ್ಳುವ ಕೆಲಸವನ್ನು ಉದಾಸಿ ಮಾಡಿಲ್ಲ. ಆ ಅಸಮಾಧಾನ ಸೋಲಾಗುತ್ತದಾ ಎಂದು ಈಗಲೇ ಹೇಳಬರುವುದಿಲ್ಲ.

ಮೀಸಲು ಕ್ಷೇತ್ರ ವಿಜಯಪುರದಲ್ಲಿ ಮೇಲ್ನೋಟಕ್ಕೆ ಬಿಜೆಪಿಯ ಹಾಲಿ ಸಂಸದ ರಮೇಶ ಜಿಗಜಿಣಗಿಗೆ ಎದುರಾಳಿಯಾಗಿರುವ ಸುನೀತಾ ಚವ್ಜಾಣ್ ಜೆಡಿಎಸ್ ಶಾಸಕ ದೇವಾನಂದ ಪತ್ನಿ. ಕಾಂಗ್ರೆಸ್ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಮತ್ತು ಜೆಡಿಎಸ್ ಸಚಿವ ಮನಗೂಳಿ ಈ ಸಲ ಮನಸ್ಸುಗೊಟ್ಟು ಕೆಲಸ ಮಾಡುತ್ತಿದ್ದಾರೆ. ಲಂಬಾಣಿಗಳ ಜೊತೆಗೆ ಇತರ ದಲಿತರು, ಲಿಂಗಾಯತರು, ಮುಸ್ಲಿಮರು ಸಾಲಿಡ್ಡಾಗಿ ವೋಟ್ ಮಾಡಿದರೆ, ಮೂರು ಸಲ ಗೆದ್ದು ಅಸಮಾಧಾನ ಎದುರಿಸುತ್ತಿರುವ ಜಿಗಜಿಣಗಿ ಏದುಸಿರು ಬಿಡುತ್ತಿದ್ದಾರೆ.

ಧಾರವಾಡದಲ್ಲಿ ಈ ಸಲದ ಫೈಟ್ ಜೋರಾಗಿದೆ. ಗೋಮುಖ ವ್ಯಾಘ್ರನಿಗೆ ಠಕ್ಕರ್ ಕೊಡಲು ಗೂಳಿಯೊಂದನ್ನು ಬಿಡಲಾಗಿದೆ. ಮೂರು ಸಲ ಗೆದ್ದಿರುವ ಪ್ರಹ್ಲಾದ್ ಜೋಶಿ ಎಂಬ ಆರೆಸ್ಸೆಸ್ ಶಿಶುವಿಗೆ ಕಾಂಗ್ರೆಸ್‍ನಿಂದ ಸ್ಪರ್ಧಿಸಿರುವ ಮಾಜಿ ಸಚಿವ ವಿನಯ ಕುಲಕರ್ಣಿ ನಡುಕ ಉಂಟು ಮಾಡಿದ್ದಾರೆ. 2014ರಲ್ಲಿ ಬೇಕಾಬಿಟ್ಟಿ ಸ್ಪರ್ಧಿಸಿ ಸೋತಿದ್ದ ವಿನಯ್ ಈ ಸಲ ಹೈಕಮಾಂಡ್ ಮೇಲೆ ಒತ್ತಡ ಹೇರಿ ಟಿಕೆಟ್ ಪಡೆದಿದ್ದಾರೆ. ಲಿಂಗಾಯತ ಹೋರಾಟದ ಸಂದರ್ಭದಲ್ಲಿ ಗುಡುಗಾಡಿದ್ದ ವಿನಯ್, ಕಳೆದ ವಾರ ಪಂಚ ಪೀಠಾಧೀಶರೊಬ್ಬರ ಕಾಲಿಗೆ ಬಿದ್ದಿದ್ದಾರೆ! ಲಿಂಗಾಯತರನ್ನು ಯಾಮಾರಿಸುತ್ತಲೇ ಬಂದ ಜೋಶಿಗೆ ಸರಿಯಾದ ಫೈಟ್ ಇಲ್ಲಿದೆ.

ಇವೆಲ್ಲಾ ಕಾರಣಗಳಿಂದ ಈ ಸಾರಿಯ ಮುಂಬೈ ಕರ್ನಾಟಕವು ಅಚ್ಚರಿಯ ಫಲಿತಾಂಶ ಕಾಣಲಿದೆ. ಒಂದು ವೇಳೆ ಹಾಗೆ ಆಗದಿದ್ದರೆ, ವೀರಶೈವ ಲಿಂಗಾಯಿತ ಫ್ಯಾಕ್ಟರ್ ಬಿಜೆಪಿಯ ಪರವಾಗಿ ಈಗಲೂ ಗಟ್ಟಿಯಾಗಿರಬೇಕು, ಇಲ್ಲದಿದ್ದರೆ ಮೋದಿ ಹವಾ ಇದ್ದುದು ಮೇಲ್ನೋಟಕ್ಕೆ ಕಾಣಲಿಲ್ಲ ಎಂದೇ ಭಾವಿಸಬೇಕಾಗುತ್ತದೆ.

ಹೈ-ಕ: ಕಾಂಗ್ರೆಸ್ ಸ್ವೀಪ್?
ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಐದು ಕ್ಷೇತ್ರ ಇದ್ದು, ಸದ್ಯ ಮೂರರಲ್ಲಿ ಕಾಂಗ್ರೆಸ್, ಎರಡರಲ್ಲಿ ಬಿಜೆಪಿ ಸಂಸದರು ಇದ್ದಾರೆ. ಬಳ್ಳಾರಿಯಲ್ಲಿ ಅಭ್ಯರ್ಥಿಗಳಿಗಾಗಿ ಪರದಾಡಿದ ಬಿಜೆಪಿ, ಕಾಂಗ್ರೆಸ್‍ನ ದೇವೇಂದ್ರಪ್ಪರನ್ನು ಎಳೆದು ತಂದು ಸೋಲನ್ನು ಒಪ್ಪಿಕೊಂಡಿದೆ. ಇತ್ತೀಚೆಗಷ್ಟೇ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನ ಉಗ್ರಪ್ಪ ಎರಡೂವರೆ ಲಕ್ಷಗಳ ಲೀಡ್‍ನಿಂದ ಗೆದ್ದಿದ್ದರು.


ಕಲಬುರ್ಗಿಯಲ್ಲಿ ಮೇಲ್ನೋಟಕ್ಕೆ ಸ್ಪರ್ಧೆ ಟಫ್ ಎನಿಸಿದರೂ ಖರ್ಗೆ ಸಣ್ಣ ಅಂತರದಲ್ಲಾದರೂ ಗೆಲ್ಲುತ್ತಾರೆಂಬ ಆಶಾವಾದ ಅವರ ಅಭಿಮಾನಿಗಳದ್ದು. ರಾಯಚೂರಿನಲ್ಲಿ ಕಾಂಗ್ರೆಸ್‍ನ ಹಾಲಿ ಸಂಸದ ಬಿ.ವಿ.ನಾಯ್ಕರಿಗೆ ಬಿಜೆಪಿಯ ಅಮರೇಶ ನಾಯ್ಕರಿಂದ ತೀವ್ರ ಸ್ಪರ್ಧೆ ಇದೆ. ಬೀದರ್‍ನಲ್ಲಿ ಬಿಜೆಪಿಯ ಭಗವಂತ ಖೂಬಾ ಸೋಲು ಪಕ್ಕಾ ಆದಂತಿದೆ. ಇಲ್ಲಿ ಜೆಡಿಎಸ್‍ಗೂ ನೆಲೆ ಇರುವುದರಿಂದ ಕಾಂಗ್ರೆಸ್‍ನ ಈಶ್ವರ್ ಖಂಡ್ರೆಗೆ ಗೆಲುವು ಸುಲಭ ಎನ್ನುವಂತಹ ವಾತಾವರಣವಿದೆ. ಕೊಪ್ಪಳದ ಕುರಿತು ಎರಡೂ ಬಗೆಯ ಅಭಿಪ್ರಾಯಗಳಿವೆ. ಒಂದೆಡೆ, ಕರಡಿ ಸಂಗಣ್ಣ ವಿರೋಧಿ ಭಾವನೆಯ ಎದುರು ಹಿಟ್ನಾಳರನ್ನು ಗೆಲ್ಲಿಸಿಕೊಳ್ಳಲು ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ, ಕಾಂಗ್ರೆಸ್ ಹೆಚ್ಚೂ ಕಡಿಮೆ ಗೆದ್ದಾಗಿದೆ ಎಂಬುದು ಒಂದು ಅಭಿಪ್ರಾಯ. ಇನ್ನೊಂದು ಹಿಟ್ನಾಳರ ಪರವಾದ ಪ್ರಚಾರ, ಸಂಗಣ್ಣನವರನ್ನು ಸೋಲಿಸುವಷ್ಟಿಲ್ಲ ಎಂದು. ಯಾವುದಕ್ಕೂ ಮುಂದಿನ ಮೂರ್ನಾಲ್ಕು ದಿನಗಳ ಬೆಳವಣಿಗೆಗಳನ್ನು ಕಾದು ನೋಡಬೇಕು. ಐದರಲ್ಲಿ ಐದನ್ನೂ ಹೊಡೆಯುವ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ. ಅದು 5-0 ಆಗಬಹುದು ಅಥವಾ 4-1 ಆಗಬಹುದು.

ಮಧ್ಯ ಕರ್ನಾಟಕ, ಉತ್ತರ ಕನ್ನಡ
ಮಧ್ಯ ಕರ್ನಾಟಕದಲ್ಲಿ ದಾವಣಗೆರೆಯನ್ನು ಕಾಂಗ್ರೆಸ್ ಕಡೆಯ ಘಳಿಗೆಯವರೆಗೂ ಕೈ ಚೆಲ್ಲಿ ಕುಳಿತಿತ್ತು. ಶಾಮನೂರು ಶಿವಶಂಕರಪ್ಪ ಟಿಕೆಟು ಕೊಟ್ಟರೂ ಒಲ್ಲೆ ಎಂದರು. ಅವರ ಮಗ ತಮ್ಮ ಹಿಂಬಾಲಕರೊಬ್ಬರನ್ನು ನಿಲ್ಲಿಸಿದ್ದಾರೆ. ಸಿದ್ದೇಶ್ವರ್ ಅವರಿಗೆ ಊರೂರಿನಲ್ಲಿ ಜನರು ಪ್ರಶ್ನೆ ಮಾಡುತ್ತಿದ್ದು, ಎಸ್ಸೆಸ್ ಮಲ್ಲಿಕಾರ್ಜುನ್ ಮಂಜಪ್ಪನವರ ಪರವಾಗಿ ಸುತ್ತುತ್ತಿದ್ದಾರೆ. ಅದರ ಪರಿಣಾಮ ಏನಿರಲಿದೆ ಎಂಬುದರ ಅಸೆಸ್‍ಮೆಂಟ್ ಯಾರಿಗೂ ಇಲ್ಲ. ಶಿವಮೊಗ್ಗದಲ್ಲಿ ಯಡ್ಡಿ ಪುತ್ರ ವರ್ಸಸ್ ಬಂಗಾರಪ್ಪ ಪುತ್ರ. ಉಪಚುನಾವಣೆಯ ಹೊಡೆತದಿಂದ ಯಡ್ಡಿ & ಸನ್ಸ್ ವಿನಯವಂತರಾಗಿದ್ದರೆ, ಬಂಗಾರಪ್ಪನವರಿಗಿಂತಲೂ ಒಂದು ತೂಕ ಹೆಚ್ಚೇ ಅಹಂಕಾರದಿಂದ ಮಧು ನಡೆದುಕೊಳ್ಳುತ್ತಿದ್ದಾರೆಂಬ ಆರೋಪವಿದೆ. ಮೇಲಾಗಿ ಕಾಂಗ್ರೆಸ್‍ನಲ್ಲಿ ಎಲ್ಲರೂ ಮಧು ಪರವಾಗಿ ತೊಡೆ ತಟ್ಟಿ ನಿಂತಿಲ್ಲ. ಡಿ.ಕೆ.ಶಿ ಒಂದೆರಡು ಬಾರಿ ಹೋಗಿ ಬಂದಿದ್ದು, ಏ.18ರ ನಂತರ ನಡೆಯುವ ಬೆಳವಣಿಗೆಗಳ ಮೇಲೆ ಫಲಿತಾಂಶ ನಿಂತಿದೆ.

ಉತ್ತರ ಕನ್ನಡದಿಂದ ಐದು ಸಲ ಗೆದ್ದು, ಒಮ್ಮೆ ಸೋತಿರುವ ಅನಂತಕುಮಾರ್ ಹೆಗಡೆಗೆ ಎದುರಾಗಿ ಮೈತ್ರಿ ಬಣದ ಪರವಾಗಿ ಜೆಡಿಎಸ್‍ನ ಆನಂದ ಅಸ್ನೋಟಿಕರ್ ನಿಂತಿದ್ದಾರೆ. ಅನಂತ ಬಗ್ಗೆ ಇರುವ ಅಸಮಾಧಾನ ಈಗ ಗುಪ್ತಗಾಮಿನಿಯಂತೆ ಹರಿಯುತ್ತಿದ್ದು ಅದು ಆಸ್ನೋಟಿಕರ್‍ಗೆ ಲಾಭ ತಂದರೂ ತರಬಹುದು! ಆದರೆ, ಅವರ ಜೊತೆಗೆ ಮೈತ್ರಿ ಕೆಲಸ ಮಾಡುತ್ತಿಲ್ಲ.

ಒಟ್ಟಿನಲ್ಲಿ ಸಮಬಲದ ಪೈಪೋಟಿಯಲ್ಲಿ 4-5% ಮತ ಓಲಾಡಿದರೂ ದೊಡ್ಡ ವ್ಯತ್ಯಾಸ ಉಂಟಾಗಲಿದೆ. ಅಂತಿಮವಾಗಿ ಗೆಲುವು ಯಾರಿಗೆ ಎನ್ನುವುದನ್ನು ನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...