Homeಮುಖಪುಟಭೈರಪ್ಪ ಹೇಳಿದ್ದು ಸತ್ಯ ಮಾರ್ರೆ, ಇಲ್ಲಿವೆ ನೋಡಿ, ಕಟ್ಟುಕಥೆಯ ಮತ್ತಷ್ಟು ಪುರಾವೆಗಳು

ಭೈರಪ್ಪ ಹೇಳಿದ್ದು ಸತ್ಯ ಮಾರ್ರೆ, ಇಲ್ಲಿವೆ ನೋಡಿ, ಕಟ್ಟುಕಥೆಯ ಮತ್ತಷ್ಟು ಪುರಾವೆಗಳು

- Advertisement -
- Advertisement -

| ಪ್ರವೀಣ್ ಎಸ್. ಶೆಟ್ಟಿ |

ರಾಮಾಯಣ ಮಹಾಭಾರತ ಮಹಾಕಾವ್ಯಗಳು ಹಲವು ಕಟ್ಟು ಕಥೆಗಳಿಂದ ಕೂಡಿವೆ ಎಂದು ಕಳೆದ ವಾರ ಸಾಹಿತಿ ಎಸ್ ಎಲ್ ಭೈರಪ್ಪನವರು ಬೆಂಗಳೂರಿನಲ್ಲಿ ಭಾರತೀಯ ವಿದ್ಯಾಭವನದವರು ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಹೇಳಿ ಅಲ್ಲಿದ್ದ ಸಭಿಕರನ್ನು ಚಕಿತಗೊಳಿಸಿದರು. ಸಮಯ ಹಾಗೂ ಸ್ಥಳಗಳನ್ನು ಆಧಾರವಾಗಿಟ್ಟು ವಿಶ್ಲೇಷಿಸಿದರೆ ಈ ಎರಡೂ ಮಹಾ ಕಾವ್ಯಗಳು ಹಲವು ಕಟ್ಟು ಕತೆಗಳನ್ನು ಹೊಂದಿರುವುದು ನಿಜ ಎಂದು ಭೈರಪ್ಪ ಹೇಳಿದರು. 85 ವರ್ಷ ದಾಟಿದ ವೇದವ್ಯಾಸರು ಬದರಿನಾಥದ ಕೊರೆಯುವ ಚಳಿಯಲ್ಲಿ ಕುಳಿತು ಮಹಾಭಾರತ ಬರೆದರೇ? 31 ವರ್ಷದ ಭೀಮನ ಜತೆ 80 ವರ್ಷದ ಜರಾಸಂಧ ಅನೇಕ ದಿನ ಮಲ್ಲ ಯುದ್ಧ ಮಾಡಲು ಸಾಧ್ಯವೇ? ಎಂಬ ಪ್ರಶ್ನೆಗಳು ಈ ಪುರಾಣಗಳು ಕಟ್ಟುಕತೆಗಳಿಂದ ಕೂಡಿರುವುದಕ್ಕೆ ಸಾಕ್ಷಿ ಎಂದು ಭೈರಪ್ಪ ಹೇಳಿದರು. ಸಂಘಪರಿವಾರ ಅತಿಯಾಗಿ ಪ್ರೀತಿಸುವ ಏಕೈಕ ಕನ್ನಡ ಸಾಹಿತಿ ಎಂದರೆ ಭೈರಪ್ಪ. ಅಪ್ಪಟ ಬಲಪಂಥಿಯ ವಿಚಾರಧಾರೆಯ ಭೈರಪ್ಪನವರು ರಾಮಾಯಣ ಮಹಾಭಾರತಗಳಲ್ಲಿ ಹಲವು ಕಟ್ಟುಕತೆಗಳಿವೆ ಎಂದು ಹೇಳಿದ್ದರಿಂದ ಹಿಂದುತ್ವವಾದಿಗಳು ಪ್ರತಿದಾಳಿ ಮಾಡಿ ಅವರನ್ನು ಹೀಯಾಳಿಸಿ ಅವಮಾನಿಸಲಿಲ್ಲ. ಆದರೆ ಇದೇ ಮಾತನ್ನು ಒಂದುವೇಳೆ ಪ್ರಗತಿಪರ ಸಾಹಿತಿಗಳು ಹೇಳಿದ್ದರೆ ಇಷ್ಟೊತ್ತಿಗೆ ಹಿಂದುತ್ವವಾದಿ ಟ್ರೋಲ್ ಗಳು ಅವರ ಮೇಲೆ ಮುಗಿಬಿದ್ದು ಅತ್ಯಂತ ಕೆಟ್ಟ ಮಾತುಗಳಿಂದ ಅವರನ್ನು ಅವಮಾನಿಸುತ್ತಿರು. ಯಾಕೆಂದರೆ ನಮ್ಮ ಪುರಾಣಗಳನ್ನು ತರ್ಕ ಹಾಗೂ ವಿವೇಚನೆಯ ಒರೆಗೆ ಹಚ್ಚಿ ಅದರೊಳಗಿನ ಪೆÇಳ್ಳುತನ ಮತ್ತು ಅಸಂಬದ್ಧತೆಗಳನ್ನು ಎತ್ತಿ ತೋರಿಸುವ ವಿಶ್ಲೇಷಕರನ್ನು ಕಂಡರೆ ಬಲಪಂಥಿಯರಿಗೆ ಭಾರಿ ಅಲರ್ಜಿ.

ಭೈರಪ್ಪನವರು ಭೀಮ ಜರಾಸಂಧ ಮತ್ತು ವೇದವ್ಯಾಸರ ವಯಸ್ಸಿನ ಬಗ್ಗೆ ಮಾತಾಡಿದ್ದರಿಂದ ಅದೇ ಎಳೆಯನ್ನು ಹಿಡಿದು ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀಕೃಷ್ಣ, ಕೌರವ, ಪಾಂಡವರ ಪ್ರಾಯವನ್ನು ವಿಶ್ಲೇಷಿಸಿದರೆ ಅಂತಹಾ ಒಂದು ಭಯಂಕರ ಯುದ್ಧ ನಡೆದಿರಲೇ ಇಲ್ಲ ಎಂಬುದು ಖಚಿತವಾಗುತ್ತದೆ. ಭಾಗವತ ಪುರಾಣದ ಪ್ರಕಾರ ಶ್ರೀಕೃಷ್ಣ ಜೀವಿಸಿದ್ದು 125 ವರ್ಷ. ಕೃಷ್ಣನ ಅವತಾರ ಸಮಾಪ್ತಿಗೆ (ಸಾಯುವುದಕ್ಕೆ) 35 ವರ್ಷ ಮುಂಚೆ ಕುರುಕ್ಷೇತ್ರ ಯುದ್ಧ ನಡೆದಿತ್ತು ಎಂದು ಮತ್ಸ್ಯ ಪುರಾಣ ಮತ್ತು ಭಾಗವತದಲ್ಲಿ ಹೇಳಲಾಗಿದೆ. ಅಂದರೆ ಕೃಷ್ಣ ತೊಂಬತ್ತು ವರ್ಷದ ಮುದುಕನಾಗಿದ್ದಾಗ ಕುರುಕ್ಷೇತ್ರ ಯುದ್ಧ ನಡೆದಿದ್ದು. ಇದನ್ನೇ ಆಧಾರವಾಗಿಟ್ಟುಕೊಂಡು ಕೌರವ-ಪಾಂಡವರ ವಯಸ್ಸು ಆಗ ಎಷ್ಟಾಗಿತ್ತು ಎಂದು ಅಂದಾಜಿಸಬಹುದು. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೌರವ ಪಾಂಡವರಿಗೆ 87 ರಿಂದ 92 ವರ್ಷ ವಯಸ್ಸಾಗಿತ್ತು. ಇಷ್ಟೊಂದು ಮುದುಕರು ಟನ್‍ಗಟ್ಟಲೆ ಭಾರವಿದ್ದ ಗಧೆಯಂತಹ ಆಯುಧ ಎತ್ತಿಕೊಂಡು 18 ದಿನ ಯುದ್ಧ ಮಾಡಿದ್ದರೆ? 92 ವರ್ಷದ ಮುದುಕ ಭೀಮ ಕೈಯಿಂದ ಗುದ್ದಿ ಆನೆಗಳನ್ನು ಕೊಲ್ಲುತ್ತಿದ್ದನೇ? ಪಾಂಡವರು ಅಜ್ನಾತ ವಾಸದಲ್ಲಿದಾಗ ದ್ರೌಪದಿಗೆ 80 ವರ್ಷ ವಯಸ್ಸು ದಾಟಿತ್ತು. ಆಗ 30 ವರ್ಷದ ಯುವಕ ಕೀಚಕನು 80 ವರ್ಷದ ಮುದುಕಿ ದ್ರೌಪದಿಯನ್ನು ಮೋಹಿಸಲು ಹೋಗಿ 92 ವರ್ಷದ ಮುದುಕ ಭೀಮನಿಂದ ಒದೆ ತಿಂದು ಸತ್ತನೇ? ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಭೀಷ್ಮನಿಗೆ 160 ವರ್ಷ, ದ್ರೋಣನಿಗೆ ಹಾಗೂ ಧೃತರಾಷ್ಟ್ರನಿಗೆ 120 ವರ್ಷ ವಯಸ್ಸಾಗಿತ್ತಂತೆ. (ನನಗೂ ಈಗ 68 ವರ್ಷ ಪ್ರಾಯವಾಗಿದ್ದು ವಯಸ್ಸಿನೊಂದಿಗೆ ದೈಹಿಕ ಶಕ್ತಿ ಹೇಗೆ ಕುಂದುತ್ತದೆ ಎಂಬ ಬಗ್ಗೆ ನನಗೆ ಸ್ವಂತ ಅನುಭವವಿದೆ).

ಭೈರಪ್ಪನವರೆ, ನೀವು ಹೇಳಿದಂತೆ ವೇದವ್ಯಾಸ ಋಷಿ ಮಹಾಭಾರತ ಕಾವ್ಯ ಬರೆದಾಗ ಅವನಿಗೆ 80 ವರ್ಷ ಪ್ರಾಯ ಆಗಿದ್ದಲ್ಲ. ಪುರಾಣದ ಪ್ರಕಾರ ಅವನಿಗೆ 250 ವರ್ಷ ಪ್ರಾಯ ಆಗಿತ್ತಂತೆ! ಯಾಕೆಂದರೆ ಅವನು ಮಹಾಭಾರತದಲ್ಲಿ ಶಂತನು ರಾಜನಿಂದ ಹಿಡಿದು ಜನಮೇಜಯನ ವರೆಗೆ ಏಳು ತಲೆಮಾರಿನ ವೀಕ್ಷಕ ವಿವರಣೆ ಬರೆದಿದ್ದಾನೆ. 75 ವರ್ಷದ ಹಿರಿಯ ಪರಾಶರ ಮುನಿಯು ಸತ್ಯವತಿ ಎಂಬ 14 ವರ್ಷದ ಮೀನುಗಾರ ಹೆಣ್ಣನ್ನು ಬಲಾತ್ಕಾರ ಮಾಡಿದ್ದರಿಂದ ವ್ಯಾಸ ಅನೈತಿಕವಾಗಿ ಹುಟ್ಟಿದ್ದು. ವ್ಯಾಸನ ಮೂಲ ಹೆಸರು “ದ್ವೈಪಾಯನ ಕೃಷ್ಣ”. ನಂತರ ಅದೇ ಬೆಸ್ತರ ಹೆಣ್ಣು ಸತ್ಯವತಿಯನ್ನು ಶಂತನು ಚಕ್ರವರ್ತಿ ಮದುವೆಯಾದಾಗ ವ್ಯಾಸ ಆರು ವರ್ಷದ ಹುಡುಗ. ಶಂತನು ಮೊದಲನೆಯ ಪೀಳಿಗೆಯಾದರೆ ಆತನಿಗೆ ಸತ್ಯವತಿಯಿಂದ ಹುಟ್ಟಿದ ವಿಚಿತ್ರವೀರ್ಯ ಎರಡನೇ ಪೀಳಿಗೆ. ಈ ವಿಚಿತ್ರವೀರ್ಯ ಸತ್ತ ಮೇಲೆ ಅವನ ಇಬ್ಬರೂ ಹೆಂಡತಿಯರಿಗೆ ವೇದವ್ಯಾಸನೇ ಮಕ್ಕಳನ್ನು ಹುಟ್ಟಿಸಿದ. ಅವರೇ ಕುರುಡ ಧೃತರಾಷ್ಟ್ರ ಮತ್ತು ರೋಗಿಷ್ಠ ಪಾಂಡು. ಇವರು ಮೂರನೇ ಪೀಳಿಗೆ. ಇವರಿಗೆ ಹುಟ್ಟಿದ ಕೌರವ ಪಾಂಡವರು ನಾಲ್ಕನೇ ಪೀಳಿಗೆ (ಹೀಗಾಗಿ ಕೌರವ ಪಾಂಡವರು ಕ್ಷತ್ರಿಯರಾಗಿರದೇ ನಿಜವಾಗಿ ಬೆಸ್ತ ಜಾತಿಯವರಾಗಿದ್ದರು). ಪಾಂಡವರಿಗೆ ಹುಟ್ಟಿದ ಘಟೋತ್ಕಚ ಮತ್ತು ಅಭಿಮನ್ಯು ಐದನೇ ಪೀಳಿಗೆ. ಅಭಿಮನ್ಯುವಿನ ಮಗ ಪರೀಕ್ಷಿತ ಆರನೆಯ ಪೀಳಿಗೆ. ಪರೀಕ್ಷಿತನ ಮಗ ಜನಮೇಜಯ ಏಳನೆಯ ಪೀಳಿಗೆ. ಇದೇ ಜನಮೇಜಯ ನಮ್ಮ ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಸರ್ಪದಾಹ ಯಜ್ನ ಮಾಡಿದಾಗ ವೇದವ್ಯಾಸ ಮತ್ತು ವೈಶಂಪಾಯನ ಮುನಿ ಕುಕ್ಕೆಗೆ ಬಂದು ಪ್ರಕೃತಿಗೆ ವಿನಾಶಕಾರಿ ಸರ್ಪನಾಶ ಯಜ್ಞ ನಿಲ್ಲಿಸಿದರೆಂದು ಕುಕ್ಕೆಯ ಪುರೋಹಿತರು ಈಗಲೂ ಹೇಳುತ್ತಾರೆ. ವ್ಯಾಸ ಸ್ವತಃ ಕಂಡಿರುವ ಈ ಏಳು ಪೀಳಿಗೆಯ ವಯಸ್ಸಿನ ಅಂತರ ಲೆಕ್ಕ ಹಾಕಿದಾಗ ವ್ಯಾಸ 250 ವರ್ಷ ಜೀವಿಸಿರಬೇಕು. ಇದು ಸಾಧ್ಯವೇ? ಮಹಾಭಾರತ ಶುದ್ಧ ಕಾಲ್ಪನಿಕ ಕಥೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ.

ಕೆಲವು ಸಂಶೋಧಕರ ಪ್ರಕಾರ ಮಹಾಭಾರತ ಕಾವ್ಯವನ್ನು ಸುಮಾರು 25 ರಿಂದ 30 ಜನ ವ್ಯಾಸರು ಬರೆದಿದ್ದಾರೆ. ಅಂದರೆ ವ್ಯಾಸ ಎಂಬುದು ಒಬ್ಬನ ವೈಯಕ್ತಿಕ ಹೆಸರಾಗಿರದೇ ಅದೊಂದು ಪದವಿ ಆಗಿತ್ತು. ಈಗ ನಾವು ಉಪಕುಲಪತಿ, ಡೀನ್, ಚಾನ್ಸಿಲರ್ ಎಂದು ಶಿಕ್ಷಣ ಕೇಂದ್ರದ ಮುಖ್ಯಸ್ಥರಿಗೆ ಹೇಗೆ ಕರೆಯುತ್ತೇವೆಯೋ ಹಾಗೆಯೇ ಪುರಾಣಕಾಲದಲ್ಲಿ ಶಿಕ್ಷಣ ಕೇಂದ್ರದ ಮುಖ್ಯಸ್ಥನಿಗೆ `ವ್ಯಾಸ’ ಎಂದು ಕರೆದು ಅವನ ಪದವಿಗೆ `ವ್ಯಾಸಪೀಠ’ ಎಂದು ಕರೆಯುತ್ತಿದ್ದರು. ಮಹಾಭಾರತವನ್ನು ಹೀಗೆ 25-30 ವ್ಯಾಸರು ಪರಿಷ್ಕರಿಸುತ್ತಾ ಹೋದರು. ಈ ಮಹಾಕಾವ್ಯದ ಮೂಲ ಹೆಸರು `ಜಯ’ ಆಗಿತ್ತು, ಅದನ್ನು ಪರಿಷ್ಕರಿಸಿದ ಮೇಲೆ ಅದರ ಹೆಸರು `ವಿಜಯ’ ಆಯಿತು. ಇದನ್ನೂ ಪರಿಷ್ಕರಿಸಿ ಮಹಾಭಾರತ ಎಂದು ಕೊನೆಗೆ ಹೆಸರಿಸಲಾಯಿತು. ಪ್ರತಿಯೊಬ್ಬ ಹೊಸ ವ್ಯಾಸನೂ ಹಳೆಯ ವ್ಯಾಸನ ಅವತರಣಿಕೆಯನ್ನು ಪರಿಷ್ಕರಿಸುವಾಗ ಏನಾದರೂ ತನ್ನ ಸ್ವಂತದ ಕಟ್ಟುಕಥೆಯನ್ನು ಸೇರಿಸಿ ಕಾವ್ಯವನ್ನು ವಿಸ್ತರಿಸುತ್ತಾ ಹೋಗಿ ಬೃಹತ್ ಕಾವ್ಯ ಮಾಡಿದರು. ಈ ರೀತಿ ಸಂಪೂರ್ಣ ಮಹಾಭಾರತವೇ ಒಂದು ಬೃಹತ್ ಕಟ್ಟುಕಥೆ ಆಯಿತು.

ಹಿಂದೊಮ್ಮೆ ಭೈರಪ್ಪನವರು ಸಂಸ್ಕೃತ ಎಲ್ಲಾ ಭಾರತೀಯ ಭಾಷೆಯ ತಾಯಿ ಎಂದು ಹೇಳಿದ್ದರು. ಮಹಾಭಾರತ ಹಾಗೂ ರಾಮಾಯಣ ಎರಡೂ ಇರುವುದು ಸಂಸ್ಕೃತ ಭಾಷೆಯಲ್ಲಿ ಹಾಗೂ ನಾಗರಿಲಿಪಿಯಲ್ಲಿ. ಮೂಲತಃ ಸಂಸ್ಕೃತ ಭಾಷೆಗೆ ಸ್ವಂತ ಲಿಪಿಯೇ ಇಲ್ಲ. ಅದು ಕೇವಲ ಯುರೇಷಿಯಾದಿಂದ ವಲಸೆ ಬಂದ ವೈದಿಕರ ಆಡುಭಾಷೆ ಮಾತ್ರ ಆಗಿತ್ತು. ಗೌತಮ ಬುದ್ಧ ಮಹಾವೀರರ ಕಾಲದಲ್ಲಿ ಕೇವಲ ಪಾಲಿ ಭಾಷೆ ಮತ್ತು ಪ್ರಾಕೃತ ಭಾಷೆಗಳು ಬ್ರಹ್ಮಿ ಲಿಪಿಯಲ್ಲಿ ಬರೆಯಲ್ಪಡುತ್ತಿದ್ದವು. ಬೌದ್ಧ ಗ್ರಂಥಗಳೆಲ್ಲಾ ಪಾಲಿ ಭಾಷೆಯಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಇದ್ದರೆ ಜೈನ ಗ್ರಂಥಗಳು ಪ್ರಾಕೃತ ಭಾಷೆಯಲ್ಲಿ ಬ್ರಹ್ಮಿ ಲಿಪಿಯಲ್ಲಿ ಇದ್ದವು. ಪುಷ್ಯಮಿತ್ರ ಶುಂಗ ಕಾಲಕ್ಕಿಂತ ಮೊದಲು ಯಾವುದೇ ಲಿಖಿತ ಸಂಸ್ಕೃತ-ದೇವನಾಗರಿ ಕೃತಿ ದೊರೆತಿಲ್ಲ. ಇದರ ಅರ್ಥ ಸಂಸ್ಕೃತ ಭಾಷೆಗೆ ಹಾಗೂ ವೈದಿಕ ಗ್ರಂಥಗಳಿಗೆ ಕೇವಲ ಎರಡು ಸಾವಿರ ವರ್ಷದ ಇತಿಹಾಸ ಮಾತ್ರ ಇರುವುದು. ಹೀಗಾಗಿ ಸಂಸ್ಕೃತ ಭಾಷೆಯಲ್ಲಿ ಇರುವ ರಾಮಾಯಣ ಮಹಾಭಾರತ ಕಾವ್ಯಗಳು ಹೆಚ್ಚೆಂದರೆ ಎರಡು ಸಾವಿರ ವರ್ಷಗಳ ಹಿಂದೆ ರಚನೆಯಾದವುಗಳು. ಹಾಗಾದರೆ ಮೂರು ಸಾವಿರ ವರ್ಷಗಳ ಹಿಂದೆ ನಡೆದ ರಾಮಾಯಣ ಮಹಾಭಾರತ ಕಥೆಗಳನ್ನು ಸರಿಯಾಗಿ ನೆನಪಿಟ್ಟು ತಲೆಮಾರಿನಿಂದ ತಲೆಮಾರಿಗೆ ದಾಟಿಸಿದವರು ಯಾರು? ಹೀಗೆ ಈ ಕಥೆಗಳನ್ನು ಮೌಖಿಕವಾಗಿ ಮುಂದಿನ ತಲೆಮಾರಿಗೆ ದಾಟಿಸುವಾಗ ಅದರಲ್ಲಿ ಎಷ್ಟು ಹೊಸ ವಿಷಯಗಳು ಸೇರಿ ಎಷ್ಟು ಹಳೆಯ ವಿಷಯಗಳು ಬಿಟ್ಟು ಹೋಗಿರಬಹುದು ಊಹಿಸಿ. ಪುರಾಣಗಳು ಕಾಲ್ಪನಿಕ ಕಥೆಗಳು ಅನ್ನುವುದಕ್ಕೆ ಇದು ಮತ್ತೊಂದು ಗಟ್ಟಿ ಉದಾಹರಣೆ. ದೊಡ್ಡ ಸಂಖ್ಯೆಯಲ್ಲಿ ಪಾಲಿ ಮತ್ತು ಪ್ರಾಕೃತ ಶಬ್ಧಗಳು ಹಾಗೂ ವ್ಯಾಕರಣವು ಸಂಸ್ಕೃತದಲ್ಲಿ ಸೇರಿದ್ದರಿಂದ ಸಂಸ್ಕೃತ ಎಲ್ಲಾ ಭಾಷೆಯ ತಾಯಿ ಅನ್ನುವುದಕ್ಕಿಂತ ಅದು ಇತರ ಭಾಷೆಗಳ ಮಗಳು ಅನ್ನುವುದು ಸರಿ.

ಮಹಾಭಾರತ ಕಾವ್ಯದಲ್ಲಿ ಬಳಸಲಾದ ಅಂಕಿ-ಸಂಖ್ಯೆಗಳಲ್ಲಿ ಅನೇಕ ಶೂನ್ಯ ಮತ್ತು ದಶಮಾನ ಪದ್ಧತಿಯ ಲೆಕ್ಕಾಚಾರಗಳೂ ಸೇರಿವೆ. ಶೂನ್ಯ ಹಾಗೂ ದಶಮಾನ ಪದ್ದತಿಯ ಗಣಿತವನ್ನು ಕಂಡು ಹಿಡಿದು ಜಗತ್ತಿಗೆ ಮೊಟ್ಟ ಮೊದಲಿಗೆ ಕಲಿಸಿದವರು ಆರ್ಯಭಟ, ಬ್ರಹ್ಮಗುಪ್ತ ಮತ್ತು ಒಂದನೇ ಭಾಸ್ಕರ ಎಂಬ ಮೂವರು ಭಾರತದ ಗಣಿತಜ್ಞರು ಎಂದು ನಾವೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಆರ್ಯಭಟ, ಬ್ರಹ್ಮಗುಪ್ತ ಹಾಗೂ ಭಾಸ್ಕರ ಎಂಬ ಗಣಿತಜ್ಞರು ಜೀವಿಸಿದ್ದ ಕಾಲಮಾನ ಕ್ರಿಸ್ತಶಕ ಐದನೇ ಶತಮಾನದಿಂದ ಏಳನೆಯ ಶತಮಾನದ ನಡುವೆ, ಅಂದರೆ ಈಗಿನಿಂದ ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದೆ. ಆದರೆ ಮಹಾಭಾರತ ರಾಮಾಯಣ ಕಾವ್ಯಗಳು ಮೂರು ಸಾವಿರ ವರ್ಷ ಹಳೆಯವು ಎಂದು ಹೇಳಲಾಗುತ್ತದೆ. ಮೂರು ಸಾವಿರ ವರ್ಷ ಹಿಂದೆ ಗಣಿತಶಾಸ್ತ್ರದಲ್ಲಿ ಶೂನ್ಯ ಹಾಗೂ ದಶಮಾನ ಪದ್ಧತಿಯ ಲೆಕ್ಕಗಳು ಇಲ್ಲದೇ ಇರುವಾಗ ಈ ಶೂನ್ಯ ಮತ್ತು ದಶಮಾನ ಪದ್ದತಿಯ ಅಂಕಿ-ಸಂಖ್ಯೆಗಳು ಮಹಾಭಾರತದಲ್ಲಿ ಸೇರಿದ್ದು ಯಾವ ಕಾಲ ಘಟ್ಟದಲ್ಲಿ? ಇತಿಹಾಸಕಾರರು ಹೇಳುವ ಆರ್ಯಭಟ, ಬ್ರಹ್ಮಗುಪ್ತ, ಒಂದನೇ ಭಾಸ್ಕರ ಇವರು ಜೀವಿಸಿದ್ದ ಕಾಲಮಾನ ಸರಿಯಾಗಿದ್ದರೆ ರಾಮಾಯಣ ಮತ್ತು ಮಹಾಭಾರತ ನಿಜವಾಗಿ ಬರೆದಿದ್ದು ಕ್ರಿಸ್ತಶಕ ಐದನೇ ಶತಮಾನದ ನಂತರ. ಅಂದರೆ ಈ ಎರಡೂ ಪುರಾಣಗಳು ಕೇವಲ ಒಂದೂವರೆ ಸಾವಿರ ವರ್ಷ ಹಳೆಯವು ಮಾತ್ರ ಎಂದು ಸಾಬೀತಾಗುತ್ತದೆ. ನೂರು, ಸಾವಿರ, ಲಕ್ಷ, ಕೋಟಿ ಎಂಬ ಸಂಖ್ಯೆಗಳ ಹೆಸರುಗಳನ್ನು ಹಾಗೂ ಈ ಸಂಖ್ಯೆಗಳಲ್ಲಿ ನಿರ್ದಿಷ್ಟವಾಗಿ ಎಷ್ಟು ಶೂನ್ಯಗಳು ಇರಬೇಕೆಂಬ ನಿಯಮ ರೂಪಿಸಿದವರು ಆರ್ಯಭಟ-ಬ್ರಹ್ಮಗುಪ್ತ ಎಂಬ ಗಣಿತಜ್ಞರು. ಹಾಗಾದರೆ ಈ ಸಂಖ್ಯೆಗಳನ್ನು ಮೂರು ಸಾವಿರ ವರ್ಷಗಳ ಹಿಂದೆ ನಡೆದ ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿಯ ಹದಿನೆಂಟು ಅಕ್ಷೋಹಿಣಿ ಸೈನ್ಯದ ಲೆಕ್ಕಾಚಾರಕ್ಕೆ ಬಳಸಲು ಹೇಗೆ ಸಾಧ್ಯವಾಯಿತು? ಒಂದು ಅಕ್ಷೋಹಿಣಿ ಸೈನ್ಯ ಎಂದರೆ 218700. ಇದರಲ್ಲಿ ಶೇ.10 ಆನೆದಳ, ಶೇ.10 ರಥದಳ, ಶೇ.30 ಕುದುರೆ ದಳ ಹಾಗೂ ಉಳಿದ ಶೇ.50 ಕಾಲ್ದಳ ಇರಬೇಕು ಎಂಬ ನಿಯಮ ಇತ್ತು. ಇಲ್ಲಿ ಸೈನ್ಯದ ಶೇಕಡಾವಾರು (ಪರ್ಸಂಟೇಜ್) ಲೆಕ್ಕಾಚಾರ ಮಾಡಲು 100 ಬೇಸ್ ಅಂಕೆ ಬೇಕೇಬೇಕು ತಾನೇ. ಆರ್ಯಭಟ ಬ್ರಹ್ಮಗುಪ್ತರು ಆವಿಷ್ಕರಿಸಿದ ಶೂನ್ಯ ಹಾಗೂ ದಶಮಾನ ಪದ್ದತಿ ಇಲ್ಲದೆ ಶೇಕಡಾ ಲೆಕ್ಕಾಚಾರ ಸಾಧ್ಯವೇ ಇಲ್ಲವಲ್ಲಾ! ಒಂದು ಮನ್ವಂತರ ಎಂದರೆ 72000 ವರ್ಷ, ಒಂದು ಯುಗ ಅಂದರೆ 5000 ವರ್ಷ ಎಂದು ಲೆಕ್ಕ ಹಾಕಿದವರು ಯಾರು? ಈ ಸಂಖ್ಯೆಗಳಲ್ಲಿ ಇರುವ ಶೂನ್ಯಗಳು ಎಲ್ಲಿಂದ ಬಂದವು? ಒಟ್ಟಾರೆ ಮಹಾಭಾರತ, ರಾಮಾಯಣ, ಭಗವದ್ಗೀತೆ, ಮತ್ಸ್ಯ ಪುರಾಣ, ಸ್ಕಂದಪುರಾಣ ಇವನ್ನೆಲ್ಲಾ ಸಂಸ್ಕೃತ ಭಾಷೆಯಲ್ಲಿ ಬರೆದಿದ್ದು ಆರ್ಯಭಟ-ಬ್ರಹ್ಮಗುಪ್ತರ ನಂತರದ ಕಾಲದಲ್ಲಿ ಎಂಬುದು ಶತಸಿದ್ಧ. ಹಾಗಾಗಿ ಸಂಸ್ಕೃತ ಭಾಷೆಯಲ್ಲಿರುವ ಎಲ್ಲಾ ವೇದ, ಕಾವ್ಯ, ಪುರಾಣಗಳು ಆರ್ಯಭಟನ ಕಾಲದ ನಂತರ ಬರೆದ ಕಾಲ್ಪನಿಕ ಗ್ರಂಥಗಳು ಹಾಗೂ ಅವ್ಯಾವುದೂ ನೈಜ ಇತಿಹಾಸವಲ್ಲ, ಅವೆಲ್ಲವೂ ಕಾಲ್ಪನಿಕ ಕಥೆಗಳು. ಇಂತಹಾ ಕಾಲ್ಪನಿಕ ಕಥೆಯ ನಾಯಕ ಶ್ರೀರಾಮನ ಜನ್ಮ ಸ್ಥಾನವೂ ಕಾಲ್ಪನಿಕವೇ ತಾನೇ. ಸಾಮ್ರಾಟ ಅಶೋಕನ ಕಾಲದಲ್ಲಿ ಸರೆಯೂ ನದಿ ತೀರದಲ್ಲಿ “ಸಾಕೇತ್” ಎಂಬ ಬೌದ್ಧ ಶಿಕ್ಷಣ ಕೇಂದ್ರ ಇತ್ತೇ ಹೊರತು ಅಯೋಧ್ಯೆ ಎಂಬ ಹೆಸರಿನ ಯಾವ ಸ್ಥಳವೂ ಇರಲಿಲ್ಲ ಎನ್ನುತ್ತಾರೆ ಸಂಶೋಧಕರು. ಈ ಬಗ್ಗೆ ಭೈರಪ್ಪನವರು ಪ್ರಾಮಾಣಿಕವಾಗಿ ಬೆಳಕು ಚೆಲ್ಲಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ದ್ವಾಪರ ಯುಗದ ಆಯುರ್ಮಾನ ಹಾಗೂ ದೇವಾಂಶರ ವಿಚಾರ ತಿಳಿಯದವಗೆ ಮೌನ ಲೇಸು.

    ಸುಭಾಷಿತ-
    ಮೂರ್ಖೋsಪಿ ಶೋಭತೇ ತಾವತ್
    ಸಭಾಯಾಮ್ ವಸ್ತ್ರ ವೇಷ್ಟಿತ%
    ತಾವತ್ ಚೇತ್ ಶೋಭತೇ ಮೂರ್ಖಾ
    ಯಾವತ್ ಕಿಂಚಿತ್ ನ ಭಾಷತೇ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...