Homeಸಾಮಾಜಿಕಮಹಾಮಾನವ ಅಂಬೇಡ್ಕರ್ ಮತ್ತು ವಿಶ್ವಮಾನವ ಕುವೆಂಪು

ಮಹಾಮಾನವ ಅಂಬೇಡ್ಕರ್ ಮತ್ತು ವಿಶ್ವಮಾನವ ಕುವೆಂಪು

- Advertisement -
  • ಪ್ರೊ. ಪ್ರಶಾಂತ ನಾಯಕ್, ಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ |
- Advertisement -

ಭವ್ಯ ಭಾರತ ಎಂಬ ಹೆಮ್ಮೆಯ ನುಡಿಗಳನ್ನು ನಾವು ಅನಾದಿಯಿಂದಲೂ ಕೇಳುತ್ತಿದ್ದೇವೆ. ಹಾಗೆಯೇ ಅಸ್ಪೃಶ್ಯತೆ, ಜಾತಿಪದ್ಧತಿಗಳಂತಹ ಅನಾಗರಿಕ, ಅಮಾನವೀಯ ಆಚರಣೆಗಳು ನಮ್ಮ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವುದು ಹಾಗೂ ಈ ಪಿಡುಗುಗಳಿಂದ ಮುಕ್ತಗೊಳ್ಳಲು ಇಂದಿಗೂ ಭಾರತ ಸಮಾಜಕ್ಕೆ ಸಾಧ್ಯವಾಗಿಲ್ಲ ಎಂಬ ಕಟು ವಾಸ್ತವವೂ ನಮ್ಮ ಕಣ್ಣೆದುರಿಗಿದೆ. ವರ್ಣಾಶ್ರಮ ಹಾಗೂ ಜಾತಿಪದ್ಧತಿಗಳು ನಮ್ಮ ಸಮಾಜ ರಚನೆಯ ಬುನಾದಿಯೊಂದಿಗೆ ಹೆಣೆದುಕೊಂಡಿವೆ. ಪಟ್ಟಭದ್ರ ಶಕ್ತಿಗಳು ಮತ್ತು ಅವರ ಆಸ್ಥಾನ ಪಂಡಿತರು ಯಥಾಸ್ಥಿತಿಯನ್ನು ಬಯಸುವುದು, ಜನಪರ ಶಕ್ತಿಗಳು ಪುರೋಗಾಮಿ ಚಿಂತಕರು ಸಮಾಜದ ಪರಿವರ್ತನೆಯ ಪ್ರತಿಪಾದಕರಾಗುವುದು ಯಾವುದೇ ಸಮಾಜದಲ್ಲಿ ಘಟಿಸುವ ಅತ್ಯಂತ ಸಹಜ ಚಾರಿತ್ರಿಕ ವಿದ್ಯಮಾನ.

ಕುವೆಂಪು ಹಾಗೂ ಅಂಬೇಡ್ಕರ್ – ಇಬ್ಬರೂ ಮಹನೀಯರು ನಮ್ಮ ಸಮಾಜವನ್ನು ಜಾತಿಯ ಕೂಪದಿಂದ ಮೇಲೆತ್ತಿ, ಸಮಾನತೆಯತ್ತ ಮುನ್ನಡೆಸುವ ಸಮಾನ ಆಶಯಗಳನ್ನು ಹೊಂದಿದ್ದವರು. ಇವರ ವಿಭಿನ್ನ ಪರಿಸರ, ಪ್ರದೇಶ, ಭಾಷೆ, ಸಾಮಾಜಿಕ ನೆಲೆಗಳೇ ಮೊದಲಾದ ಸಂಗತಿಗಳಲ್ಲಿ ಭಿನ್ನತೆಗಳಿವೆ. ಆದರೆ, ಈ ನೆಲದ ಅಸಮಾನತೆಯನ್ನು ಕಂಡು ಇಬ್ಬರೂ ತಳಮಳಕ್ಕೊಳಗಾಗಿದ್ದಾರೆ. ಧರ್ಮ ಮೌಢ್ಯಗಳ ಕುರಿತು ಪ್ರಶ್ನೆಗಳೊಂದಿಗೆ ವೈಚಾರಿಕ ಪ್ರಜ್ಞೆಗಳನ್ನು ಮೂಡಿಸಲು ಯತ್ನಿಸಿದ್ದಾರೆ. ಸಮಾನತೆಯ ಆಶಯವನ್ನು ಕುರಿತಂತೆ ಗಂಭೀರವಾಗಿಯೇ ಚಿಂತಿಸಿದ್ದಾರೆ. ಮುಖ್ಯವಾಗಿ ತಮ್ಮ ಆಲೋಚನೆ, ಚಿಂತನೆಗಳನ್ನು ಅಕ್ಷರಗಳನ್ನಾಗಿಸಿ ಈ ನೆಲಕ್ಕೆ ಜ್ಞಾನದ ನಿಜದ ಬೆಳಕನ್ನು ಚೆಲ್ಲಲು ತುಂಬಾ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಈ ನೆಲದ ದಾರ್ಶನಿಕರು ಒಂದೇ ಕಾಲದಲ್ಲಿ ಇದ್ದಾಗ್ಯೂ, ಬಹುಶಃ ಒಬ್ಬರನ್ನೊಬ್ಬರು ಎದುರು-ಬದರಾಗದಿದ್ದರೂ, ಚಿಂತನೆಗಳ ವಿಷಯದಲ್ಲಿ ಪರಸ್ಪರ ಎಂಬಂತೆ ಸಂವಾದಿಸದಿದ್ದರೂ ಒಂದೇ ಆಶಯ ಮತ್ತು ಗುರಿಗಳಲ್ಲಿ ಸಮಾನ ಪ್ರಜ್ಞೆ ಎಂಬಂತೆ ಚಿಂತಿಸಿದ್ದು ಮಾತ್ರ ಚಾರಿತ್ರಿಕ ಸತ್ಯ. ಈ ವಿದ್ಯಮಾನ ನಿಸರ್ಗ ನ್ಯಾಯದ ಧ್ವನಿಯೇ ಇದ್ದೀತು.

ವರ್ಣಾಶ್ರಮವೆನ್ನುವುದೇ ಬದುಕೆಂದು ವಾದಿಸಿ ತಮ್ಮನ್ನು ಈ ನೆಲದ ದೇವರನ್ನಾಗಿಸಿಕೊಂಡಿದ್ದ ಅಲ್ಪಸಂಖ್ಯಾತ ಮೇಲುವರ್ಗ ವಿದ್ಯೆಯನ್ನು ಅಸ್ತçವನ್ನಾಗಿಸಿಕೊಂಡಿದ್ದು ದುರಂತ ಚರಿತ್ರೆ. ಬಹುಶಃ ಬ್ರಿಟಿಷರು ಭಾರತಕ್ಕೆ ಕಾಲಿಡದಿದ್ದರೆ, ಆಧುನಿಕ ವಿದ್ಯಾಭ್ಯಾಸ ಈ ನೆಲದ ಇತರ ಸಮುದಾಯಗಳಿಗೆ ದಕ್ಕದೇ ಹೋಗಿದ್ದರೆ ಏನಾಗಬಹುದಿತ್ತು? ಹಾಗಾಗಿಯೇ ಅಂಬೇಡ್ಕರ್ ಅವರಿಗೆ ಶಿಕ್ಷಣ ಎನ್ನುವುದು ಆಹಾರಕ್ಕಿಂತ, ಉಡುಗೆ-ತೊಡುಗೆಗಿಂತ, ನಿದ್ರೆಗಿಂತ ಮುಖ್ಯ ಅನಿಸಿದ್ದು. ಅಂಬೇಡ್ಕರ್ ಅವರಿಗೆ ವಿದ್ಯೆ ಒಂದು ಸವಾಲಾಗಿತ್ತು, ಗೆಲ್ಲಲೇಬೇಕಾದ ತುರ್ತಾಗಿತ್ತು. ಕುವೆಂಪು ಅವರ ಅನುಭವದ ನುಡಿಗಳಲ್ಲೂ ಈ ಅಂಶ ದಾಖಲಾಗಿದೆ. ಮಿಷನರಿಗಳ ಪ್ರಯತ್ನದಲ್ಲಿ ಶಿಕ್ಷಣ ಪಡೆದದ್ದು ಮಹತ್ವದ್ದೆಂದೇ ಅವರು ಭಾವಿಸುತ್ತಾರೆ. “ಹಿಂದೂಗಳಾಗಿ ಇದ್ದು ಬ್ರಾಹ್ಮಣರಿಂದ ಶೂದ್ರರೆಂದು ತಿರಸ್ಕೃತರಾಗಿ ಮೌಢ್ಯ ಅಜ್ಞಾನಗಳ ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸುತ್ತೇವೆ, ನಿಮ್ಮನ್ನು ಬ್ರಾಹ್ಮಣರ ದಾಸ್ಯದಿಂದ ಪಾರು ಮಾಡುತ್ತೇವೆ ಎಂದು ಮನದಟ್ಟುವಂತೆ ಬೋಧಿಸಿದರು” (ನೆನಪಿನ ದೋಣಿಯಲ್ಲಿ ಪು. ೨೩) “ಆಂಗ್ಲೇಯ ರೀತಿಯ ಸ್ಕೂಲುಗಳು ಪ್ರಾರಂಭವಾದಾಗ ಬ್ರಾಹ್ಮಣರು ಆ ಸ್ಕೂಲುಗಳು ತಮಗೆ ಮಾತ್ರ ಮೀಸಲೆಂಬ ಮನೋಭಾವದಿಂದ ವರ್ತಿಸಿದ್ದರು. ಮನುವಿನಂತೆಯೇ ಇಂಗ್ಲಿಷರೂ ಅವರ ಸನಾತನ ಧರ್ಮ ರಕ್ಷಣೆಗೆ ಬದ್ಧರಾಗಿದ್ದಾರೆ ಎಂದು ಭಾವಿಸಿದ್ದಂತೆ ತೋರುತ್ತಿತ್ತು” (ನೆನಪಿನ ದೋಣಿಯಲ್ಲಿ ಪು. ೯೪). ಭಾರತದ ಆಧುನಿಕ ಶಿಕ್ಷಣ ಮೂಲತಃ ಬ್ರಿಟಿಷರು ಒದಗಿಸಿಕೊಟ್ಟದ್ದು. ತನ್ಮೂಲಕ ಜಗತ್ತಿನ ಜ್ಞಾನವೆಲ್ಲಾ ಇಂಗ್ಲಿಷ್ ಭಾಷೆಯಲ್ಲಿದೆ ಎಂಬಂತಾಗಿ ಇಂಗ್ಲಿಷನ್ನು ಓದಿಕೊಳ್ಳಬೇಕಾದ ತುರ್ತನ್ನು ಸೃಷ್ಟಿಸಿತು. ಅದರಿಂದ ಕುವೆಂಪು ಕೂಡ ಹೊರತಾಗಿರಲಿಲ್ಲ. ಅಂಬೇಡ್ಕರ್ ಜಗತ್ತಿನ ವಿಸ್ತಾರವಾದ ಜ್ಞಾನವನ್ನು ಇಂಗ್ಲಿಷ್ ಮೂಲಕ ಪಡೆದುಕೊಂಡಂತೆ, ಕುವೆಂಪು ಕೂಡ ಪಡೆದುಕೊಂಡವರು. ವೈಚಾರಿಕತೆಯ ಮೂಲಸೆಲೆಯ ಸಾಮ್ಯತೆಯನ್ನು ಗುರುತಿಸಬಹುದು.

ಧರ್ಮದ ಹೆಸರಿನಲ್ಲಿ ತರತಮಗಳನ್ನು ಬಿತ್ತಿ ಬೆಳೆಸಿದ್ದು ನಮ್ಮ ದೇಶದ ದೊಡ್ಡ ದುರಂತ. ಅಂಬೇಡ್ಕರ್ ಅವರು ಹೇಳುವ ಮಾತಿನಲ್ಲಿ ಗಮನಾರ್ಹ “ಒಂದು ಆದರ್ಶ ದೈವಿಕ ಆಡಳಿತವನ್ನು ಮುಂದಿಡುವ ವ್ಯವಸ್ಥೆಯಾಗಿ ನಾನು ಧರ್ಮವನ್ನು ಅರ್ಥಮಾಡಿಕೊಂಡಿದ್ದೆÃನೆ. ಮನುಷ್ಯರು ಬದುಕಿರುವ ಸಾಮಾಜಿಕ ವ್ಯವಸ್ಥೆಯು ಒಂದು ನೈತಿಕ ಕಟ್ಟುಪಾಡಿನಲ್ಲಿರುವಂತೆ ನೋಡಿಕೊಳ್ಳುವ ಗುರಿ ಈ ಬಗೆಯ ಆಡಳಿತಕ್ಕಿರಬೇಕಾಗುತ್ತದೆ (ಹಿಂದೂಧರ್ಮದ ತತ್ವಜ್ಞಾನ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಬರಹ ಮತ್ತು ಭಾಷಣಗಳು- ಸಂಪುಟ ೩ ಪು.೮). ಇದೇ ಅಂಶವನ್ನು ಕುವೆಂಪು ಅವರು ಮತ್ತಷ್ಟು ಸ್ಪಷ್ಟವಾಗಿ ಗುರುತಿಸುತ್ತಾರೆ. “ಐಕ್ಯಕ್ಕೂ ಮೈತ್ರಿಗೂ ಸಾಧನವಾಗುವ ಆ ಚಿರಂತನ ಆಧ್ಯಾತ್ಮವನ್ನು ಈ ಅಜ್ಞಾನ ಜನ್ಯವಾದ ಮತಭಾವನೆ ಆಕ್ರಮಿಸಿ ವರ್ಣ, ಜಾತಿ, ಪಂಥ, ಕೋಮು ಪಂಗಡಗಳೆಂಬ ನೂರಾರು ಭೇದ ಭಾವನೆಗಳ ಬಿರುಕು ಒಡಕುಗಳಿಗೆ ಸಮಾಜವು ಸಿಕ್ಕಿ ಛಿದ್ರವಾಗುವಂತೆ ಮಾಡಿದೆ. ಈ ಭೇದಭಾವಗಳೂ ಛಿದ್ರಗಳು ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ನಿಜವಾದ ಸವiತಾಭಾವನೆಯ ಪ್ರಜಾಸತ್ತೆ ಬರಿಯ ಮರು ಮರೀಚಿಕೆಯ ಭ್ರಾಂತಿ ಜಲವಾಗುತ್ತದೆ.” (ವಿಚಾರಕ್ರಾಂತಿಗೆ ಆಹ್ವಾನ- ಸಮಗ್ರ ಗದ್ಯ. ಸಂ.೨ ಪು.೪೪೪)

ಉಳಿದ ಪ್ರಾಣಿಗಳಿಗಿಂತ ಮನುಷ್ಯ ಉತ್ತಮ ಎಂದು ಮತ್ತೆ ಮತ್ತೆ ನಾವೇ ಹೇಳಿಕೊಂಡಿದ್ದೇವೆ. ಅಭಿವೃದ್ಧಿ ಎನ್ನುವುದಕ್ಕೆ ಹಲವು ಆಯಾಮಗಳನ್ನು ನಾವೇ ಸೃಷ್ಟಿಮಾಡಿದ್ದೇವೆ. ವಿಜ್ಞಾನದ ಉತ್ಕರ್ಷದಲ್ಲಿ ಎಲ್ಲವನ್ನು ಸಾಧಿಸಿದ ಭ್ರಮೆಯಲ್ಲಿದ್ದೇವೆ ಆದರೂ ಯಾವುದರಲ್ಲಿ ಉತ್ತಮರಾಗಬೇಕಿತ್ತೊ ಅದರಲ್ಲಿ ಮಾತ್ರ ತರತಮವೇ ಶ್ರೇಷ್ಠವೆಂದು ಭಾವಿಸಿಕೊಂಡು ಅಸಮಾನತೆಯನ್ನೆ ಬದುಕಾಗಿಸಿಕೊಂಡು ಹಾಸಿ, ಹೊದ್ದು ಮಲಗಿದ್ದೇವೆ. ಅಂಬೇಡ್ಕರ್ ಎದುರಿಸಿದ ಸಾಮಾಜಿಕ ಸವಾಲುಗಳು ಕುವೆಂಪು ಅವರ ಶೈಕ್ಷಣಿಕ ಸವಾಲುಗಳೆಲ್ಲವೂ ಅಸಮಾನತೆಯ ರೂಪಗಳೇ ಆಗಿವೆ.

ಅನಾದಿಯಿಂದಲೂ ನಮ್ಮ ಸಮಾಜದಲ್ಲಿ ಧಾರ್ಮಿಕ ಆಚರಣೆಯ ವಿಚಾರಗಳಲ್ಲಿ ಕೊಡು-ಕೊಳುವಿಕೆಯ ಸಂಬಂಧವಿದೆ. ಆದರೆ ಧಾರ್ಮಿಕ ಸಹಿಷ್ಣುತೆಯನ್ನು ಹಾಳು ಮಾಡುವ ಪ್ರಯೋಗಗಳು ಇಂದಿನ ರಾಜಕಾರಣದ ಒಂದು ಭಾಗವೇ ಆದಂತಿರುವುದನ್ನು ನೆನೆಯಬಹುದು. ಈ ಕುರಿತು ಬಾಬಾ ಸಾಹೇಬರು ಖಚಿತವಾದ ವಿವರಗಳನ್ನೆ ಮಂಡಿಸುತ್ತಾರೆ. “ಹಿಂದೂಗಳಲ್ಲಿರುವ ಬಹುದೇವತಾವಾದಿಗಳು ತಮ್ಮ ಕಾಣಿಕೆಯನ್ನು ಕೇವಲ ಹಿಂದೂ ದೈವಗಳಿಗೆ ಸಲ್ಲಿಸುವುದಿಲ್ಲ. ಒಬ್ಬ ಮುಸ್ಲಿಂ ಪೀರನನ್ನಾಗಲಿ, ಕ್ರೈಸ್ತ ದೇವತೆಯನ್ನಾಗಲೀ ಪೂಜಿಸಲು ಯಾವ ಹಿಂದುವೂ ಸಂಕೋಚ ಪಡುವುದಿಲ್ಲ. ಮುಸ್ಲಿಂ ಪೀರನ ಬಳಿಗೆ ಸಾವಿರಾರು ಹಿಂದೂಗಳು ಹೋಗಿ ಅರ್ಪಣೆ ಮಾಡುತ್ತಾರೆ. ವಾಸ್ತವವಾಗಿ, ಕೆಲವು ಸ್ಥಳಗಳಲ್ಲಿ ಮುಸ್ಲಿಂ ಪೀರರಂತೆ ಅರ್ಚಕರಾಗಿರಲು ವಂಶ ಪಾರಂರ‍್ಯವಾಗಿ ಬಂದ ಅಧಿಕಾರವನ್ನು ಪಡೆದಿದ್ದಾರೆ. ಅಲ್ಲದೇ, ಅವರು ಮುಸ್ಲಿಂ ಪೀರರ ಉಡುಪುಗಳನ್ನೆ ಧರಿಸುತ್ತಾರೆ. ಮುಂಬೈ ಹತ್ತಿರವಿರುವ ಕ್ರೈಸ್ತದೇವಿ ಮೌಂಟ್ ಮೌಲಿಗೆ ಅರ್ಪಣೆ ಮಾಡಲು ಸಾವಿರಾರು ಹಿಂದುಗಳು ಹೋಗುತ್ತಾರೆ”. (ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರಹ ಮತ್ತು ಭಾಷಣಗಳು -ಸಂಪುಟ ೪, ಪುಟ.೨)

ಈ ಬಗೆಯ ಉದಾಹರಣೆಗಳು ಈ ದೇಶದ ಉದ್ದಗಲಕ್ಕೂ ಸಾಕಷ್ಟು ದೊರೆಯುತ್ತವೆ. ಸಾಮಾನ್ಯರಿಗೆ ಬದುಕು ಬೇಕು, ಧರ್ಮ ಸಂಕೀರ್ಣತೆಗೊಳ್ಳುವುದಲ್ಲ ಅವರು ಎಲ್ಲಾ ಕಾಲಕ್ಕೂ ಸರಳ ಮತ್ತು ಸಹಜ ಬದುಕನ್ನು ಮಾತ್ರವೇ ಆಪೇಕ್ಷಿಸುತ್ತಾರೆ. ಭಾರತ ದೇಶದಲ್ಲಿ ಹಿಂದು, ಜೈನ, ಬೌದ್ಧ, ಶೈವ ಈಚೆಗೆ ಲಿಂಗಾಯತ ಎಂಬೆಲ್ಲಾ ವಿಭಿನ್ನವಾದ ನಿಲುವುಗಳು ನಂಬಿಕೆಗಳು ಕಾಲಕಾಲಕ್ಕೆ ಭಿನ್ನವೇ ಆಗಿರುವುದರಿಂದ ಮತ್ತು ಮತ ಪ್ರಭಾವಗಳು ಬದಲಾಗುವುದರಿಂದಲೂ ಜನರು ತಮ್ಮ ಕಾಲಿಕ ಪ್ರಭಾವಗಳ ನಡುವೆ ಅಗತ್ಯಕ್ಕನುಸಾರಿಯಾಗಿ ಬದಲಾಗುತ್ತಲೋ ರೂಪಾಂತರಗೊಳ್ಳುತ್ತಲೋ ಬಂದಿರುವುದುಂಟು, ತನ್ಮೂಲಕ ಸರ್ವಧರ್ಮ ಸಮಾನತೆ ಇಲ್ಲಿ ಉಳಿದು ಬೆಳೆದು ಬಂದಿದೆ. ಇದನ್ನು ಗಮನಿಸಿ ಕುವೆಂಪು ಇಲ್ಲಿನ ನೆಲೆಯನ್ನು “ಸರ್ವ ಜನಾಂಗದ ಶಾಂತಿಯ ತೋಟ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ” ಎಂದು ವಿವರಿಸುತ್ತಾರೆ.

“ಜಾತಿಯಿಂದ ಯಾವ ಕಾರ್ಯಸಾಮಾರ್ಥ್ಯವೂ ಉತ್ತಮವಾಗುವುದಿಲ್ಲ. ಜಾತಿ ಜನಾಂಗವನ್ನು ಉತ್ತಮಗೊಳಿಸಿಲ್ಲ. ಉತ್ತಮಗೊಳಸಲು ಅದಕ್ಕೆ ಸಾಧ್ಯವೂ ಇಲ್ಲ” ಎನ್ನುವ ಅಂಬೇಡ್ಕರ್ ಅವರ ಮಾತುಗಳನಿಲ್ಲಿ ಗಮನಿಸಬೇಕು. ಕುವೆಂಪು ಅವರು ಹೇಳುವ “ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು” ಎಂಬ ಮಾತುಗಳು ಇದಕ್ಕೆ ಪೂರಕವಾಗಿವೆ. ಧರ್ಮದೊಳಗೆ ಜಾತಿಯನ್ನು ಸಂಲಗ್ನಗೊಳಿಸಿದ ಭಾರತೀಯ ಧರ್ಮಸೂಕ್ಷö್ಮತೆಯನ್ನು ಅವರು ವಿವರಿಸಿದ್ದಾರೆ.

ಸಮಾನತೆ ಎನ್ನುವುದು ಎಲ್ಲರ ಕನವರಿಕೆ. ಯಾವಾಗ ಅದು ಈ ನೆಲದಲ್ಲಿ ಸುಲಭಕ್ಕೆ ಸಾಧ್ಯವಾಗಬಹುದೇ? ಎನ್ನುವುದು ಮುಖ್ಯವಾದ ಪ್ರಶ್ನೆ ಅದನ್ನೆ ಅಂಬೇಡ್ಕರ್ ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ. “ಹೊಸ ಸಮಾಜವು ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವಗಳ ಆಧಾರದ ಮೇಲೆ ನಿರ್ಮಾಣವಾಗಬೇಕು” ಎನ್ನುವ ಮೂಲಕ ಪ್ರಜಾಪ್ರಭುತ್ವದ ದಿಕ್ಕು ದೆಸೆಯನ್ನು ನಿರ್ದೇಶಿಸುತ್ತಾರೆ. ಆದ್ದರಿಂದಲೇ ಆಧುನಿಕ ಭಾರತದಲ್ಲಿ ಇದು ಸಾಧ್ಯವಾಗಬೇಕು ಎಂಬ ಸದಾಶಯ ಅವರದ್ದು, “ಪ್ರಜಾಪ್ರಭುತ್ವ ಆಡಳಿತ ವಿಧಾನ ಮಾತ್ರವಲ್ಲ ಅದೊಂದು ಸಾಮಾಜಿಕ ಜೀವನ ಪದ್ಧತಿ. ಸಂಯುಕ್ತ ಸಂಪರ್ಕವುಳ್ಳ ಅನುಭವ” ಎನ್ನುವ ಮಾತುಗಳಲ್ಲಿ ಇದು ಸ್ಪಷ್ಟ. “ಯಾವ ಕಾಲದ ಶಾಸ್ತçವೇನು ಹೇಳಿದರೇನು! ಎದೆಯ ದನಿಗೂ ಮಿಗಿಲು ಶಾಸ್ತ್ರವಿವುದೇನು?” ಎನ್ನುವ ಕುವೆಂಪು ‘ಸರ್ವೋದಯ’ ‘ಸಮನ್ವಯ’ ‘ಪೂರ್ಣದೃಷ್ಠಿ’ಯನ್ನು ಕುರಿತು ಹೇಳುವ ಹಿನ್ನೆಲೆಯಾದರೂ ಸಮಾನತೆಯ ಆಶಯದ ಪ್ರತಿಪಾದನೆಯೇ ಆಗಿದೆ. ‘ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಮತ್ತು ‘ವಿಚಾರಕ್ರಾಂತಿಗೆ ಆಹ್ವಾನ’ಗಳಲ್ಲಿ ಕುವೆಂಪು ತರುಣರನ್ನು ಕೇಂದ್ರವಾಗಿಸಿಕೊಂಡು ಮಹತ್ವದ ಚಿಂತನೆಗಳನ್ನು ಪ್ರತಿಪಾದಿಸುವುದನ್ನು ನಾವಿಲ್ಲಿ ನೆನೆಯಬಹುದು.

ಮೊದಲಿಗೆ ಗಮನಿಸಿದ ಹಾಗೆ ಭಿನ್ನ ಪ್ರದೇಶ, ಭಾಷೆ ನೆಲೆಗಳಿಂದ ಹೊರಟ ಅಂಬೇಡ್ಕರ್ ಮತ್ತು ಕುವೆಂಪು ತಮ್ಮ ತಮ್ಮ ನಿಜದ ನೆಲೆಗಳಿಗೆ ಮುಖಾಮುಖಿಯಾಗುತ್ತಲೇ ಸಾರ್ವತ್ರಿಕ ಸತ್ಯವೊಂದನ್ನು ಪ್ರತಿಪಾದಿಸುತ್ತಾರೆ. ಅಸಮಾನತೆ ಎನ್ನುವುದೊಂದು ಅಮಾನವೀಯ ವಿಚಾರ ಎನ್ನುವ ಬಗೆಗೆ ಇಬ್ಬರಲ್ಲೂ ಒಮ್ಮತವಿದೆ. ‘ಸಮಾನತೆ’ ಸಾಧ್ಯವಾಗದೇ ಹೋದರೆ, ಮತ್ತಾವುದೇ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಅವರ ವಾದವಾಗಿದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾ-ನಂತರದ ದೇಶವನ್ನು ಇಬ್ಬರು ಮುಖಾಮುಖಿಯಾದ ಬಗೆ ಮಹತ್ವದ್ದು ಹಾಗಾಗಿ ತೌಲನಿಕವಾದ ಚಿಂತನೆಯೂ ಅವರಿಗೆ ಸಾಧ್ಯವಾಗಿದೆ. ತನ್ಮೂಲಕ ಗುಣಾತ್ಮಕ ಮತ್ತು ನೇತ್ಯಾತ್ಮಕ ಭಾವನೆಗಳೆಲ್ಲವನ್ನು ಅವರು ಸ್ಪಷ್ಟವಾಗಿ ಗ್ರಹಿಸಿದ್ದಾರೆ. ‘ಹಿಂದೂ’ ಎನ್ನುವುದು ಅಸಮಾನತೆಯನ್ನು ತನ್ನ ನಿರಂತರ ಗುಣ-ಲಕ್ಷಣವಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ‘ಬುದ್ಧ’ ದಾರಿಯನ್ನು ಆದರ್ಶವಾಗಿ ಆರಿಸಿಕೊಳ್ಳುತ್ತಾರೆ. ಕುವೆಂಪು ‘ಮನುಜಮತ’ದ ಪರಿಕಲ್ಪನೆಗೆ ಹೊರಳುತ್ತಾರೆ. ವಿಶ್ವ ಮಾನವತೆಯ ಬಹುದೊಡ್ಡ ಆದರ್ಶವನ್ನು ಕನವರಿಸುತ್ತಾರೆ.

ಅಂಬೇಡ್ಕರ್ ಮತ್ತು ಕುವೆಂಪು ಬದುಕನ್ನೆ ಪ್ರಯೋಗಶಾಲೆಯಂತೆ ಕಂಡು ಅಲ್ಲಿಂದ ಪಡೆದ ಫಲಿತಗಳನ್ನು ಚಿಂತನೆಗಳನ್ನಾಗಿಸಿದವರು. ಅವರ ‘ಧರ್ಮದ’ ಬಗೆಗಿನ ವ್ಯಾಖ್ಯಾನಗಳು, ‘ಜಾತಿ’ ವ್ಯವಸ್ಥೆಯ ಅಪಚಾರಗಳ ಬಗೆಗಿನ ಗ್ರಹಿಕೆಗಳು ವೈಜ್ಞಾನಿಕ ವೈಚಾರಿಕ ವಿಶ್ಲೇಷಣೆಯಿಂದ ಮೂಡಿದವುಗಳು ಎನ್ನುವುದು ಸರ್ವವಿಧಿತ. ಇವರ ವಿಚಾರಗಳನ್ನು ಸಮಗ್ರವಾಗಿ ಅರ್ಥೈಸಿಕೊಂಡು ಅವರನ್ನು ಗೌರವಿಸುವ ತುರ್ತಿದೆ ನಮಗೆ….

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...