Homeರಾಜಕೀಯಮೈತ್ರಿ ಸರಕಾರದ ಗೋಜಲು ಸಂದೇಶಗಳು

ಮೈತ್ರಿ ಸರಕಾರದ ಗೋಜಲು ಸಂದೇಶಗಳು

- Advertisement -
  • ಎ. ನಾರಾಯಣ |
- Advertisement -

ಎಲ್ಲಾ ಮೈತ್ರಿ ಸರಕಾರಗಳೂ ಅವಕಾಶವಾದದ ಶಿಶುಗಳೇ ಆಗಿರುತ್ತವೆ. ಹಾಗಿರುವಾಗ ಕರ್ನಾಟಕದಲ್ಲಿ 2018ರ ಚುನಾವಣೆಯ ನಂತರ ರೂಪುಗೊಂಡ ಜನತಾದಳ (ಜಾತ್ಯತೀತ) ಮತ್ತು ಕಾಂಗ್ರೆsಸ್ ಪಕ್ಷಗಳ ಮೈತ್ರಿ ಸರಕಾರವನ್ನು ಕೆಲವರು ಅಪವಿತ್ರ ಅಂತಲೂ ಅನೈತಿಕ ಅಂತಲೂ ಟೀಕಿಸುತ್ತಿರುವುದು ವಿಚಿತ್ರವಾಗಿದೆ. ಭಾರತದ ಪ್ರಜಾತಾಂತ್ರಿಕ ರಾಜಕೀಯವೇ ಒಂದು ರೀತಿಯ ಅಪವಿತ್ರ ಮತ್ತು ಅನೈತಿಕ ಆಯ್ಕೆಗಳ ಸರಮಾಲೆ. ಇರುವುದರಲ್ಲಿ ಕಡಿಮೆ ಅಪವಿತ್ರ ಮತ್ತು ಅನೈತಿಕವಾದ ಆಯ್ಕೆಗಳನ್ನು ಮಾಡುವುದೇ ಇಲ್ಲಿ ಪರಮಪವಿತ್ರ ಪೌರ ಕೈಂಕರ್ಯ. ಅದು ಚುನಾವಣೆಯಾದರೂ ಅಷ್ಟೇ. ಆಡಳಿತವಾದರೂ ಅಷ್ಟೇ, ಸಂಸದೀಯ ವ್ಯವಹಾರಗಳಾದರೂ ಅಷ್ಟೇ .

ಆದುದರಿಂದ ಕರ್ನಾಟಕದಲ್ಲಿ ನಡೆದ ಚುನಾವಣೋತ್ತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಳಬಹುದಾಗಿದ್ದ ಪ್ರಶ್ನೆ ಬಹಳ ಸರಳವಾಗಿತ್ತು. ಯಾವುದು ಕಡಿಮೆ ಅಪವಿತ್ರ ಮತ್ತು ಅನೈತಿಕ? ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯು ಸರಳ ಬಹುಮತಕ್ಕೆ ಬೇಕಾಗಿದ್ದ ಸಂಖ್ಯೆಗಳನ್ನು ಹೊಂದಿಸಲು ಇತರ ಪಕ್ಷಗಳ ಶಾಸಕರನ್ನು ಅಪ್ಪಟ ಹರಾಜಿನಲ್ಲಿ ವಿಕ್ರಯಿಸಿ ಸರಕಾರ ರಚಿಸುವುದೇ? ಅಥವಾ ಚುನಾವಣೆಯಲ್ಲಿ ಎಲ್ಲರೂ ಸೋತ ಹಿನ್ನೆಲೆಯಲ್ಲಿ ಸೋತ ಎರಡು ಪಕ್ಷಗಳು ಸೇರಿ ಕಾನೂನುಬದ್ಧವಾಗಿ ಸರಕಾರ ನಡೆಸುವುದೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಕೋರ್ಟು-ಕಚೇರಿ ಅಲೆಯಬೇಕಾಗಿಲ್ಲ, ರಾಜ್ಯಪಾಲರ ಬಳಿ ಬಿನ್ನವತ್ತಲೆ ಸಮರ್ಪಿಸಿ ಕಾಯಬೇಕಾಗಿಲ್ಲ, ಮಾಧ್ಯಮಗಳ ಚರ್ಚಾ ರಂಪಾಟದ ಅಗತ್ಯವಿಲ್ಲ. ನಿಷ್ಪಕ್ಷಪಾತವಾಗಿ ಯೋಚಿಸಬಲ್ಲ ಮೂರ್ಖನಿಗೂ ಇವೆರಡರ ನಡುವೆ ಕಡಿಮೆ ಅಪವಿತ್ರ ಮತ್ತು ಅನೈತಿಕವಾದ ಆಯ್ಕೆ ಯಾವುದು ಎಂದು ತಿಳಿದಿರುತ್ತದೆ. ಹಾಗಂತ ಕರ್ನಾಟಕದಲ್ಲಿ ಆಗಿ ಹೋದದ್ದೆಲ್ಲ ಬಹಳ ಅಪೇಕ್ಷಣೀಯ ಮತ್ತು ಆದರ್ಶಪ್ರಾಯ ಬೆಳವಣಿಗೆಗಳು ಎನ್ನುವ ಹಾಗಿಲ್ಲ. ಕಾನೂನುಬದ್ಧವಾದ ಎಲ್ಲವೂ ಆದರ್ಶಪ್ರಾಯವಾಗಿರುವುದಿಲ್ಲ. ಹಾಗಂತ ಅವು ಕಾನೂನು ವಿರೋಧಿ ಕೃತ್ಯಗಳಿಗಿಂತ ಅಪೇಕ್ಷಣೀಯ. ಮುಂದೊಂದು ದಿನ ಅತೀ ಹೆಚ್ಚು ಸ್ಥಾನಗಳು ಬಂದ ಪಕ್ಷದ ಜತೆ ಸಣ್ಣಪಕ್ಷಗಳು ಸೇರಿಕೊಳ್ಳಬೇಕು ಎಂಬ ಕಾನೂನೇ ಬಂದರೆ ಅದು ಬೇರೆ ಪ್ರಶ್ನೆ. ಹಾಗೊಂದು ಕಾನೂನು ತಂದು ರಾಜಕೀಯ ಪಕ್ಷಗಳ ಸ್ವಾತಂತ್ರ್ಯಹರಣ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.

ಬಿಜೆಪಿಗೆ ಸಹಜವಾಗಿಯೇ ಬಹಳ ಕೋಪ ಬಂದಿದೆ. ಅದರ ಕೋಪ ಕೂಡಾ ಅರ್ಥವಾಗುವಂತಾದ್ದೆ. ಅದರ ಬಳಿ ಸಾಕಷ್ಟು ಸಂಖ್ಯೆಗಳಿಲ್ಲದೆ ಇರಬಹುದು. ಆದರೆ ಇರುವ ಮೂರು ಪಕ್ಷಗಳ ಪೈಕಿ ಅದು ಅತೀಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಆದುದರಿಂದ ಅತೀ ಕಡಿಮೆ ಸಂಖ್ಯೆ ಹೊಂದಿದ ಜೆಡಿ(ಎಸ್) ತನ್ನೊಂದಿಗೆ ಬಾರದೆ ಕಾಂಗ್ರೆಸ್ ಜೊತೆಗೆ ಸೇರಿದ್ದಕ್ಕೆ ಅದು ಕುದಿಯುತ್ತಿದೆ. ಆದರೆ ಯಾರ ಜತೆ ಸೇರಿಕೊಳ್ಳಬೇಕೆನ್ನುವುದು ಜೆಡಿ(ಎಸ್)ನ ಆಯ್ಕೆ. ತನಗೆ ಬೇಕಾದ ಪಕ್ಷದೊಂದಿಗೆ ಕಾನೂನಿನ ಪರಿಧಿಯೊಳಗೆ ಅದು ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್, ಬಿಜೆಪಿಗಿಂತ ಮೊದಲು ಅದರ ಬಳಿ ಬಂದು ಪ್ರಸ್ತಾಪ ಮಂಡಿಸಿತು ಎನ್ನುವುದು ಕೇವಲ ಸಾಂದರ್ಭಿಕ. ಜೆಡಿ(ಎಸ್)ಗೆ ಕಾಂಗ್ರೆಸ್ಸಿನ ಜತೆ ಹೋಗುವುದು ಇಷ್ಟವಿರಲಿಲ್ಲ ಎಂದಾದರೆ ಬಿಜೆಪಿಯ ಜತೆ ಹೋಗುವ ರಾಜಮಾರ್ಗ ತೆರೆದೇ ಇತ್ತು. ಬಹುಶಃ ಬಿಜೆಪಿಯ ಜತೆ ಸೇರಿಕೊಂಡಿದ್ದರೆ ಅದಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರಲಿಲ್ಲವೋ ಏನೋ. ಜೆಡಿ(ಎಸ್) ಮುಖ್ಯಮಂತ್ರಿ ಪಟ್ಟ ತನಗೆ ಅನಾಯಾಸವಾಗಿ ದೊರಕಿತು ಎಂದು ಕಾಂಗ್ರೆಸ್ಸಿನೊಂದಿಗೆ ಸೇರಿಕೊಂಡಿತೇ? ಅಥವಾ ಅದರ ಬಳಿ ಉಳಿದಿರಬಹುದಾದ ಅಲ್ಪಸ್ವಲ್ಪ ಜಾತ್ಯತೀತತೆಯ ಬದ್ಧತೆಯಿಂದ ಬಿಜೆಪಿಯನ್ನು ದೂರವಿಸಿ ಕಾಂಗ್ರೆಸ್ಸನ್ನು ಅಪ್ಪಿಕೊಂಡಿತೇ? ಅಥವಾ ಜಾತ್ಯತೀತತೆಗೆ ಬದ್ಧರಾಗಿರುವ ಮತ್ತು ಬದ್ಧರಾಗಿರದ ತಮ್ಮ ಶಾಸಕರು ಬೇರೆಬೇರೆ ದಾರಿ ಹಿಡಿಯುವ ಮೂಲಕ ಪಕ್ಷ ಇಬ್ಭಾಗವಾಗಿ ಬಿಜೆಪಿಗೆ ಸರಕಾರ ರಚಿಸಲು ಸಾಧ್ಯವಾಗುವ ಸನ್ನಿವೇಶ ತಪ್ಪಿಸಲು ಕಾಂಗ್ರೆಸ್ಸಿನ ಪ್ರಸ್ತಾಪ ಒಪ್ಪಿಕೊಂಡಿತೇ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸ್ಪಷ್ಟವಾಗಿ ದೊರಕಲಾರದು.

ಕುಮಾರಸ್ವಾಮಿಯವರ ಪದಗ್ರಹಣ ಸಮಾರಂಭಕ್ಕೆ ಬಂದ ವಿರೋಧ ಪಕ್ಷಗಳ ರಾಷ್ಟ್ರ ನಾಯಕರುಗಳಿಗೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ತಮ್ಮ ಸ್ವಹಿತಾಸಕ್ತಿ ಇತ್ತು. ಆದರೆ ಕರ್ನಾಟಕದಾಚೆಗೆ ದೊಡ್ಡಮಟ್ಟದ ಅಸ್ತಿತ್ವ ಇಲ್ಲದ ಜೆಡಿ(ಎಸ್)ಗೆ ಇಂತಹದ್ದೊಂದು ಸ್ವಹಿತಾಸಕ್ತಿಯ ಪ್ರಶ್ನೆ ಪ್ರೇರಣೆಯಾಗಿರುವ ಸಾಧ್ಯತೆ ಕಡಿಮೆ. ದಕ್ಷಿಣ ಕರ್ನಾಟಕದಲ್ಲಿ ಒಂದು ಜಾತಿಯ ಬೆಂಬಲದಲ್ಲಿ ಅಸ್ತಿತ್ವ ಕಂಡುಕೊಂಡಿರುವ ಜೆಡಿ(ಎಸ್) ಪಕ್ಷವನ್ನು ಬಿಜೆಪಿ ಇಡಿಯಾಗಿ ನುಂಗಿಬಿಡುವ ಸಾಧ್ಯತೆ ಇಲ್ಲ. ಜೆಡಿ(ಎಸ್)ಗೆ ಕಂಟಕ ಇರುವುದು ಮತ್ತು ಬರುವುದು ಕಾಂಗ್ರೆಸ್ಸಿನಿಂದ. ಸದ್ಯದಲ್ಲೇ ಬರಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿನೊಂದಿಗೆ ಹೊಂದಾಣಿಕೆ ಮಾಡಿಕೊಂಡರೂ ಮಾಡದೆ ಉಳಿದರೂ ಜೆಡಿ(ಎಸ್) ಸಂಕಟವನ್ನು ಅನುಭವಿಸಬೇಕು. ಈ ಸಂಕಟಕ್ಕೆ ಅದು ಸಿದ್ಧವಾಗಿದ್ದರೆ ರಾಜ್ಯಮಟ್ಟದಲ್ಲಿ ಮಾಡಿಕೊಂಡ ಮೈತ್ರಿ ಸರಕಾರಕ್ಕೆ ಕಂಟಕ ಇಲ್ಲ. ಆದರೆ ಆರಂಭದಲ್ಲಿ ಬೇಷರತ್ ಬೆಂಬಲ ಅಂತ ಹೇಳಿಕೊಂಡಿದ್ದ ಕಾಂಗ್ರೆಸ್ ಈಗ ಷರತ್ತುಗಳ ಮೇಲೆ ಷರತ್ತುಗಳನ್ನು ವಿಧಿಸುತ್ತಿದೆ ಎನ್ನುವ ವರ್ತಮಾನವಿದೆ. ಇದನ್ನೆಲ್ಲಾ ನೋಡುತಿದ್ದರೆ ಕಾಂಗ್ರೆಸ್ಸಿನ ಬದ್ಧತೆ ಜಾತ್ಯತೀತತೆಗೊ ಅಥವಾ ಸೋತರೂ ಅಧಿಕಾರದಲ್ಲಿ ಮುಂದುವರಿಯುವುದಕ್ಕೋ ಎನ್ನುವ ಸಂಶಯ ಬರುತ್ತಿದೆ.

ಕಾಂಗ್ರೆಸ್, ಜೆಡಿಎಸ್‍ಗೆ ಬೆಂಬಲ ನೀಡಿದ್ದು ಜಾತ್ಯತೀತತೆಗಿಂತ ಹೆಚ್ಚಾಗಿ ತನ್ನನ್ನು ನಿರ್ನಾಮ ಮಾಡಲು ಹೊರಟಿರುವ ಬಿಜೆಪಿಯನ್ನು ಕರ್ನಾಟಕದ ಮಟ್ಟಿಗೆ ಅಧಿಕಾರದಿಂದ ಹೊರಗಿಡಲು ಎನ್ನುವುದು ಹೆಚ್ಚು ಸೂಕ್ತ. ಜಾತ್ಯತೀತತೆಯ ಕುರಿತ ಬದ್ಧತೆ ಮತ್ತು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದು, ಇವೆರಡೂ ಒಂದೇ ಎಂದು ಕಾಂಗ್ರೆಸ್ ವಾದಿಸಬಹುದು. ವಾಸ್ತವದಲ್ಲಿ ಇವೆರಡು ಬೇರೆಬೇರೆ. ಅದೇನೇ ಇರಲಿ, ಈ ಮೈತ್ರಿ ಒಂದು ಸಂದೇಶವನ್ನಂತೂ ನೀಡಿದೆ. ಅದು ಈ ಕಾಲಕ್ಕೆ ತುಂಬಾ ಅಗತ್ಯವಾಗಿದ್ದ ಸಂದೇಶ. ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೋಡಿ ರಾಜ್ಯಗಳ ಚುನಾವಣೆಯಲ್ಲಿ ಗೆದ್ದರೂ, ಗೆಲ್ಲದೇ ಅತಂತ್ರಸ್ಥಿತಿ ನಿರ್ಮಾಣವಾದರೂ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ವಿರಮಿಸುವುದು ಎನ್ನುವುದು ಎಲ್ಲಾ ಕಾಲದಲ್ಲೂ ಎಲ್ಲಾ ರಾಜ್ಯಗಳಲ್ಲೂ ಸಾಧ್ಯವಾಗಬೇಕಿಲ್ಲ ಎನ್ನುವುದೇ ಆ ಸಂದೇಶ. ಈ ಸಂದೇಶದ ಪ್ರಸ್ತುತತೆ ಮೈತ್ರಿ ಸರಕಾರ ಉಳಿದಷ್ಟು ಕಾಲ ಮಾತ್ರ. ಇದರ ಜತೆಗೆ ಕಾಂಗ್ರೆಸ್, ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಬೇಕಾದರೆ ಒಂದಷ್ಟು ತ್ಯಾಗಗಳಿಗೂ ಸಿದ್ಧವಾಗಿದೆ ಎನ್ನುವ ಒಂದು ಸಂದೇಶವೂ ಆರಂಭದಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ ಮಂತ್ರಿಮಂಡಲ ರಚಿಸುವಲ್ಲಿ ಕಾಂಗ್ರೆಸ್ ನಡೆÀಸುತ್ತಿರುವ ಮೇಲಾಟ, ಜತೆಗೆ ಐದು ವರ್ಷಗಳ ಕಾಲ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೋ ಇಲ್ಲವೋ ಎನ್ನುವ ಕುರಿತ ನಿಲುವಿನಲ್ಲಿ ಅದು ತೋರುತ್ತಿರುವ ಅಸ್ಪಷ್ಟತೆ ಇತ್ಯಾದಿಗಳನ್ನು ನೋಡಿದರೆ ಆ ಸಂದೇಶ ಕೇವಲ ಕಣ್ಣುಕಟ್ಟು ಅನ್ನಿಸುತ್ತದೆ. ಮುಂದೇನೋ? ಊಹಿಸುವುದು ಕಷ್ಟ.

ವಾಸ್ತವದಲ್ಲಿ, ಕಾಂಗ್ರೆಸ್ಸಿಗೆ ಸೆಕ್ಯುಲರಿಸಂ ಕುರಿತಾದ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಮತ್ತು ಬಿಜೆಪಿಯ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಂದಾಗಿಸಲು ಒಂದು ಪ್ರೇರಕಶಕ್ತಿಯಾಗಿ ಕೆಲಸ ಮಾಡುವ ಉದ್ದೇಶಗಳೇ ಇದ್ದಿದ್ದರೆ ಅದು ಕುಮಾರಸ್ವಾಮಿ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಬೇಕಿತ್ತು. ಒಂದುವೇಳೆ ಸರಕಾರದಲ್ಲಿ ಪಾಲ್ಗೊಳ್ಳಲೇಬೇಕು ಎಂದಿದ್ದಲ್ಲಿ ಮಂತ್ರಿಮಂಡಲದಲ್ಲಿ ಕೇವಲ ಸಾಂಕೇತಿಕ ಪ್ರಾತಿನಿಧಿತ್ವ ಸಾಕು ಎನ್ನಬೇಕಿತ್ತು. ಆಗ ಅದು ನೈತಿಕವಾಗಿ ಹಲವು ಮೆಟ್ಟಿಲು ಮೇಲೇರುತ್ತಿತ್ತು. ಬಿಜೆಪಿಯ ವಿಷಯಕ್ಕೆ ಬಂದರೆ ಆ ಪಕ್ಷದಲ್ಲಿ ಇಲ್ಲದ ನೈತಿಕತೆ ಅದಕ್ಕಿದೆ ಅಂತ ಜನ ಭಾವಿಸುತ್ತಾರೆ. ಅದೇವೇಳೆ ಕಾಂಗ್ರೆಸ್ ವಾಸ್ತವದಲ್ಲಿ ಎಷ್ಟು ನೈತಿಕ ಅಧಃಪತನ ಕಂಡಿದೆಯೋ ಅದಕ್ಕಿಂತ ಹೆಚ್ಚಿನ ಪತನವನ್ನು ಜನ ಅದರ ಮೇಲೆ ಆರೋಪಿಸುತ್ತಿದ್ದಾರೆ. ಸುದೀರ್ಘ ಕಾಲ ಆಡಳಿತದಲ್ಲಿದ್ದ ಪಕ್ಷವಾದ ಕಾರಣ ಕಾಂಗ್ರೆಸ್ ಇಂತಹ ಟೀಕೆಗಳನ್ನು ಎದುರಿಸುವುದು ಸಹಜ. ಜತೆಗೆ ಜನ ಕಾಂಗ್ರೆಸ್ಸನ್ನು ಈ ರೀತಿ ಕಾಣಲು ಬೇಕಾದ ಎಲ್ಲಾ ರೀತಿಯ ಪ್ರಚಾರವನ್ನು ಬಿಜೆಪಿ ಬಹಳ ವ್ಯವಸ್ಥಿತವಾಗಿ ಮಾಡುತ್ತಿದೆ. ಇದನ್ನು ಮೆಟ್ಟಿನಿಂತು ತನ್ನ ಪರವಾಗಿ ಜನಾಭಿಪ್ರಾಯ ಮತ್ತೆ ರೂಪುಗೊಳ್ಳುವಂತೆ ಮಾಡಬೇಕಾದರೆ ಕಾಂಗ್ರೆಸ್ ಗಟ್ಟಿಯಾದ ಕೆಲ ನೈತಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೋತರೂ ಅಧಿಕಾರ ಬಿಡಲೊಪ್ಪದ ಭಂಡಪಕ್ಷ ಈ ಕಾಂಗ್ರೆಸ್ ಎನ್ನುವ ರೀತಿಯಲ್ಲಿ ಜನ ಯೋಚಿಸಲು ಅನುವಾಗುವಂತೆ ಆ ಪಕ್ಷದ ನಡವಳಿಕೆ ಸಾಗಿದರೆ ಮುಂದಿನ ದಾರಿ ಅದಕ್ಕೆ ಇನ್ನೂ ದುರ್ಗಮವಾದೀತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read