Homeರಾಜಕೀಯಶಿವಮೊಗ್ಗದಲ್ಲೊಂದು ಶಂಕರಪ್ಪನ ಸಾಹಿತ್ಯ ಸಮಾರಂಭ

ಶಿವಮೊಗ್ಗದಲ್ಲೊಂದು ಶಂಕರಪ್ಪನ ಸಾಹಿತ್ಯ ಸಮಾರಂಭ

- Advertisement -
- Advertisement -

 ವರದಿಗಾರ

ಶಿವಮೊಗ್ಗದಲ್ಲಿ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿನ ಕವಿಗೋಷ್ಠೀಯಲ್ಲಿ ಉದಯೋನ್ಮುಖ ಕವಿಯೊಬ್ಬ ಓದಿದ ಕವನ ಹೀಗಿತ್ತು.
‘ಪತ್ರಿಕೆಗಳಲ್ಲಿ ಸಾಹಿತ್ಯ’
ಪ್ರಜಾವಾಣಿ, ಉದಯವಾಣಿ ವಿಜಯ ಕರ್ನಾಟಕ
ವಿಜಯವಾಣಿ ಸಂಯುಕ್ತ ಕರ್ನಾಟಕ
ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಸುದ್ದಿ
ಎರಡನೇ ಪುಟದಲ್ಲಿ ಸ್ಥಳೀಯ ಸುದ್ದಿ
ಮೂರನೇ ಪುಟದಲ್ಲಿ ಜಿಲ್ಲೆಯ ಸುದ್ದಿ
ನಾಲ್ಕನೇ ಪುಟದಲ್ಲಿ ರಾಜ್ಯದ ಸುದ್ದಿ
ಐದನೇ ಪುಟದಲ್ಲಿ ವಾಚಕರವಾಣಿ
ಆರನೇ ಪುಟದಲ್ಲಿ ದೇಶದ ಸುದ್ದಿ
ಏಳನೇ ಪುಟದಲ್ಲಿ ಕ್ರೀಡೆ ಮತ್ತು
ಕಡೇ ಪುಟದಲ್ಲಿ ಅದೇ ಸುದ್ದಿ
ಜೊತೆಗೆ ಮಹಿಳಾ ಪುಟ ವಾಣಿಜ್ಯ ಪುಟ….
ಹೀಗೆ ಪತ್ರಿಕೆಗಳ ಪುಟ ತಿರುವಿ ಕವನ ಬರೆದುಕೊಂಡು ಬಂದ ಆ ಕವಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಬಿ. ಶಂಕರಪ್ಪನ ಕೃಪೆಯಿಂದ ಮಾತ್ರ ಕವಿಗೋಷ್ಠಿಗಳಲ್ಲಿ ಓದುವಂತಹ ಕವನ. ನಗು ಕಳೆದುಕೊಂಡ ಸಾಹಿತ್ಯ ಲೋಕದ ಜನ ನಗಬೇಕಾದರೆ ಈ ಶಂಕರಪ್ಪ ಏರ್ಪಡಿಸುವ ಸಾಹಿತ್ಯ ಸಭೆಗೆ ಬಂದು ಕೂತರಾಯ್ತು. ಹೊಟ್ಟೆ ತುಂಬ ನಕ್ಕು ಹೋಗಬಹುದು. ಈ ನಗು ಅವರ ಆಹ್ವಾನ ಪತ್ರಿಕೆ ನೋಡಿದಾಗಲೇ ಶುರುವಾಗುತ್ತದೆ. ಶಿವಮೊಗ್ಗದ ಓಟರ್ ಲಿಸ್ಟಿನಂತೆ ಕಾಣುವ ಆಹ್ವಾನ ಪತ್ರಿಕೆಯಲ್ಲಿ ಶಂಕರಪ್ಪನಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಸಮ್ಮೇಳನದಲ್ಲಿ ಉಪಸ್ಥಿತರು ಎಂದು ಅವರು ಪ್ರಿಂಟಾಕಿಸಿದ ಜನ, ಇತ್ತ ಸುಳಿದು ನೋಡುವುದಿಲ್ಲ. ಒಂದು ಇಸಮೂ ತಪ್ಪದಂತೆ ಬರುವವರಾರೆಂದರೆ ಈ ಸಮ್ಮೇಳನದಲ್ಲಿ ಕವನ ಓದುವ ಜನ ಮತ್ತು ಸನ್ಮಾನಿತರು. ಈ ಸನ್ಮಾನಿತರ ಸಂಖ್ಯೆ ಹೇಗಿರುತ್ತದೆಂದರೆ ಅವರೆಲ್ಲಾ ಎದ್ದು ವೇದಿಕೆಗೆ ಹೋದರೆ ಅರ್ಧ ರಂಗಮಂದಿರವೇ ಖಾಲಿ ಬೀಳುತ್ತದೆ. ಇನ್ನುಳಿದ ಜನ ಯಾರೆಂದರೆ ಸನ್ಮಾನಿತರ ಸಂಬಂಧಿಗಳು. ಇಂತಹ ಆಧ್ವಾನದ ಜಾತ್ರೆಗೆ ಸದ್ಯ ಒಳ್ಳೆಯ ವಿದ್ವಾಂಸ ಜಯಪ್ರಕಾಶ ಮಾವಿನಕುಳಿ ಅಧ್ಯಕ್ಷರಾಗಿದ್ದರು. ಇವರ ಸಾಧನೆ ದೊಡ್ಡದಿದೆ. ಆದ್ದರಿಂದ ಅವರ ಭಾಷಣ ಕೂಡ ಸಾಹಿತ್ಯಾಸಕ್ತರನ್ನು ತಟ್ಟುವಂತಿತ್ತು.

ಇನ್ನು ಉದ್ಘಾಟನಾ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ. ಸಿದ್ಧರಾಮಯ್ಯನವರು ಕನ್ನಡ ಭಾಷೆಗೆ ಒದಗಿರುವ ದುರ್ಗತಿಯನ್ನು ಮನಮುಟ್ಟುವಂತೆ ಹೇಳಿದರೆ ಸಮಾರೋಪ ನುಡಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಕನ್ನಡ ಭಾಷೆ ನಶಿಸಿಹೋಗುತ್ತಿರುವ ಬಗ್ಗೆ ಯಾವುದೇ ಅನುಮಾನವನ್ನು ಇಟ್ಟುಕೊಳ್ಳಬೇಡಿ, ನಮ್ಮ ಭಾಷೆ ಹೊರಟುಹೋಗುತ್ತೆ ಎಂದು ಹೆದರಿಸಿದರು. ಯಾಕೆಂದರೆ ಅವರು ಕೊಟ್ಟ ಸಾಕ್ಷ್ಯಾಧಾರಗಳು ದಂಗುಬಡಿಸುವಂತಿದ್ದವು. ಅದೇ ಸಮಾರೋಪದಲ್ಲಿ ಮಾತನಾಡಿದ ಡಿ.ಎಚ್.ಶಂಕರಮೂರ್ತಿ ಎಂಬ ಶೆಟ್ಟರು, ಥೇಟ್ ಶೆಟ್ಟರಂತೆಯೇ ಮಾತನಾಡಿದರು. ಕನ್ನಡ ಭಾಷೆ ನಿರ್ಲಕ್ಷ್ಯದ ಬಗ್ಗೆ ಮನಮುಟ್ಟುವಂತೆ ಮಾತನಾಡುವ ಇವರ ಮಗ ಇಂಗ್ಲಿಷ್ ಕಾನ್ವೆಂಟ್ ನಡೆಸುತ್ತಾನೆ. ಬಿ.ಜೆ.ಪಿ.ಗಳು ಶಿವಮೊಗ್ಗದಲ್ಲಿ ಬಂದ್ ಕರೆಕೊಟ್ಟರೆ ಶಂಕರಮೂರ್ತಿ ವ್ಯವಹಾರಗಳು ಬಂದ್ ಆಗುವುದಿಲ್ಲ. ಇಷ್ಟರ ನಡುವೆ ಬಿ.ಜೆ.ಪಿ. ಸಿದ್ಧಾಂತಕ್ಕೆ ಬದ್ಧರಾಗಿ ಬದುಕುತ್ತಿರುವ ಇವರನ್ನು ಕಂಡರೆ ಶಂಕರಪ್ಪನ ಟೀಮಿಗೆ ಎಲ್ಲಿಲ್ಲದ ಅಕ್ಕರೆ. ಅದಕ್ಕೆ ಕ್ಲೀಷೆಯಾಗುವಷ್ಟು ಉಪಮೆ ಬಳಸುತ್ತವೆ.

ಇನ್ನು ಒಂದು ಗೋಷ್ಠಿಗೆ ಸ್ವಾಗತ ಕೋರುವ, ವಂದನಾರ್ಪಣೆ ಮಾಡುವ, ನಿರೂಪಣೆ ಮಾಡುವ ಹಾಗೂ ನಿರ್ವಹಣೆ ಮಾಡುವವರೆಂದು ನಾಲ್ಕು ಜನರಿರುತ್ತಾರೆ. ಇವರು ತಿಂದುಬಿಟ್ಟ ಸಮಯದಲ್ಲಿ ಅತಿಥಿಗಳಿಗೆ ಉಳಿಯುವುದು ಹತ್ತು ನಿಮಿಷಗಳು. ಆದರೂ ಜಗಮೊಂಡರಾದ ಭಾಷಣಕಾರರು ಮೂರನೇ ಚೀಟಿ ಬಂದರೂ ಜಗ್ಗುವುದಿಲ್ಲ. ಹೀಗಾಗಿ ಹನ್ನೆರಡು ಗಂಟೆಗೆ ಆರಂಭವಾಗುವ ಗೋಷ್ಠಿ ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗುತ್ತಿತ್ತು. ಗೋಷ್ಠಿಯ ವೇದಿಕೆಯಲ್ಲಿರಬೇಕಾದ ಅತಿಥಿಗಳು ಒಂದೇ ಉಸಿರಿಗೆ ಅನ್ನಸಾರು ಸಾಪಳಿಸಿ ಓಡುತ್ತಿದ್ದರು. ನಿರೂಪಕ, ಊಟ ಮಾಡಿದ ಕೂಡಲೇ ಒಳ ಬಂದು ಕೂರಬೇಕೆಂದು ಎಷ್ಟು ಗೋಗರೆದರೂ ಮೂವತ್ತು ಜನಕ್ಕಿಂತ ಜಾಸ್ತಿಯಿರುತ್ತಿರಲಿಲ್ಲ. ಇದನ್ನು ಗ್ರಹಿಸಿಯೊ ಏನೊ ಶಂಕರಪ್ಪ ಶಾಲೆ ಹುಡುಗರನ್ನು ತರಿಸಿದ್ದರು. ಅವು ಮರಕ್ಕೆ ತುಂಬಿದ ಹಕ್ಕಿಗಳಂತೆ ಕಲರವಿಸುತ್ತಿದ್ದವೇ ಹೊರತು ಯಾರ ಮಾತಿಗೂ ಕಿವಿಗೊಡಲಿಲ್ಲ. ಚೆನ್ನಾಗಿ ಮಾತನಾಡಿದ ಜಯಪ್ರಕಾಶ್ ಮಾವಿನಕುಳಿ ಮಾತಿಗೂ ಕಿವಿಗೊಡಲಿಲ್ಲ. ಯಾಕೆಂದರೆ ಸಾಹಿತ್ಯ ಪರಿಷತ್ ಅಧ್ಯಕ್ಷನೂ ಯಾರ ಮಾತಿಗೂ ಕಿವಿಗೊಡುವುದಿಲ್ಲ. ಜಿಲಾ,್ಲ ತಾಲ್ಲೂಕು ಮತ್ತು ಹೋಬಳಿ ಸಮ್ಮೇಳನಗಳು ಹೀಗೆ ಅಧ್ವಾನವಾಗಿರುವುದಕ್ಕೆ ಕಾರಣ ಈ ಸಂಸ್ಥೆಗಳು ಅಸಾಹಿತ್ಯಿಕ ವ್ಯಕ್ತಿಗಳ ಕೈಗೆ ಸಿಕ್ಕಿ ಹೋಗಿರುವುದೇ ಆಗಿದೆ.

ಈ ಅಸಾಹಿತ್ಯಿಕ ವ್ಯಕ್ತಿಗಳು ರಾಜಕಾರಣಿಗಳೂ ಆಗಿದ್ದಾರೆ. ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ನೋಡಿದರೆ ಎಲ್ಲಾ ರಾಜಕಾರಣಿಗಳ ಪರಿಷೆಯಂತಿದೆ. ಸುದೈವಕ್ಕೆ ಬೆಳಗಾಂ ಅಧಿವೇಶನದ ಕಾರಣಕ್ಕೆ ಕರ್ಣಕಠೋರ ಭಾಷಣದಿಂದ ಜನ ಮುಕ್ತರಾದರು. ಅದೇನೆ ಆಗಲಿ, ಲಂಗುಲಗಾಮಿಲ್ಲದೇ ಹೋಗುತ್ತಿರುವ ಈ ಸಾಹಿತ್ಯ ಸಮ್ಮೇಳನಗಳು ಹೇಗೆ ಜರುಗಬೇಕೆಂಬ ನಿಯಮಗಳು ರೂಪುಗೊಳ್ಳದಿದ್ದರೆ ಇವು ಇನ್ನೂ ಅದ್ವಾನವೆದ್ದು ಹೋಗುತ್ತವೆ. ಅದಷ್ಟೆ ಅಲ್ಲ. ಕೆಲವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಈಗಾಗಲೇ ಭ್ರಷ್ಟರಾಗಿ ಹೋಗಿದ್ದಾರೆ. ಯರ್ರಿಸ್ವಾಮಿ ಎಂಬ ಜಿಲ್ಲಾಧ್ಯಕ್ಷ ಯಾವ ಕಾರ್ಯಕ್ರಮವನ್ನೂ ಮಾಡದೇ ಬೆಂಗಳೂರಿನ ಚಾಮರಾಜಪೇಟೆ ಸಮೀಪದಲ್ಲೇ ಹದಿನಾಲ್ಕು ಲಕ್ಷದ ಬೋಗಸ್ ಬಿಲ್ ತಯಾರಿಸಿಕೊಟ್ಟು ಕೋರ್ಟು ಮೆಟ್ಟಿಲು ಹತ್ತುವಂತಾಗಿದ್ದನ್ನು ಜಿಲ್ಲಾಧಿಕಾರಿಗಳು ಹೇಳಿದರು. ಮಂಡ್ಯದವನೊಬ್ಬ ಹಣ ಸಂಗ್ರಹಿಸಿಕೊಂಡು ವಿಧಾನಸಭೆ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದ. ನಾಡಿನ ತುಂಬ ಇಂತಹ ಭ್ರಷ್ಟರು ಸಾಹಿತ್ಯ ವೇದಿಕೆ ಆಕ್ರಮಿಸಿಕೊಂಡಿದ್ದಾರೆ. ಈ ಶಂಕರಪ್ಪ ಈ ತರವಲ್ಲದಿದ್ದರೂ ಸ್ವಜಾತಿ ಪ್ರೇಮಿ. ರಾಜಕಾರಣಿಗಳನ್ನ ಕಂಡರೆ ಅತೀವ ಪ್ರೀತಿ. ವಿದ್ವಾಂಸರನ್ನ ಕಂಡರೆ ಅಷ್ಟಕ್ಕಷ್ಟೆ. ಅದೇನೆ ಆದರೂ ಇವರ ವರಸೆಗಳು ಸಾಕು ಎನ್ನಿಸುತ್ತವೆ. ಇವರ ಆಯ್ಕೆಗೆ ಶ್ರಮಿಸಿದ್ದ ಡಾ. ಶ್ರೀಕಂಠ ಕೂಡಿಗೆಯವರು ವೇದಿಕೆಯಲ್ಲೇ ಇವರ ನಡವಳಿಕೆ ಖಂಡಿಸುವಂತಹ ಮಾತನಾಡಿದ್ದನ್ನು ಎಲ್ಲಾ ಸಾಹಿತಿಗಳು ಅನುಸರಿಸಿದರೆ ಈ ಸಾಹಿತ್ಯ ಪರಿಷತ್ ಸುಧಾರಿಸಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...