Homeಮುಖಪುಟಸುಪ್ರೀಂಕೋರ್ಟ್ ತನ್ನ ತಪ್ಪು ಸರಿಪಡಿಸಿಕೊಳ್ಳುವ ಅಗತ್ಯವಿದೆ

ಸುಪ್ರೀಂಕೋರ್ಟ್ ತನ್ನ ತಪ್ಪು ಸರಿಪಡಿಸಿಕೊಳ್ಳುವ ಅಗತ್ಯವಿದೆ

- Advertisement -
- Advertisement -

|  ಎ. ನಾರಾಯಣ |

“ನಾವೆಲ್ಲಾ ಸೇರಿ ಸಂವಿಧಾನವನ್ನು ರಕ್ಷಿಸಬೇಕಿದೆ”. ಕರ್ನಾಟಕದ ಹದಿನೈದು ಮಂದಿ ಅತೃಪ್ತ ಶಾಸಕರು ತಮ್ಮ ರಾಜಿನಾಮೆ ಅಂಗೀಕಾರವಾಗಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥ ಪಡಿಸುವ ವೇಳೆ ಸುಪ್ರೀಂ ಕೋರ್ಟ್‍ನ ತ್ರಿಸದಸ್ಯ ಪೀಠ ಹೇಳಿದ ಮಾತಿದು. ಹೌದು ಸಂವಿಧಾನವನ್ನು ರಕ್ಷಿಸಬೇಕು. ಯಾರದಾರೂ ಇದಕ್ಕೆ ಪ್ರತಿಯಾಡಲು ಸಾಧ್ಯವೇ? ಆದರೆ ಸಂವಿಧಾನವನ್ನು ರಕ್ಷಿಸುವುದು ಎಂದರೆ ಚುನಾಯಿತ ಶಾಸಕರನ್ನು ಹಿಂಬಾಗಿಲಿನಿಂದ ಖರೀದಿಸುವ ಆಪರೇಷನ್ ಕಮಲ ಎಂಬ ಹೆಸರಿನ ಬಿಜೆಪಿಯ ದಂಧೆಯನ್ನು ರಕ್ಷಿಸುವುದೇ? ಈ ಒಂದು ಪ್ರಶ್ನೆ ಸಂವಿಧಾನವನ್ನು ರಕ್ಷಿಸಬೇಕು ಎಂದು ಹೇಳಿದ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ತೀರ್ಪನ್ನು ನೋಡಿದಾಗ ಯಾರ ಮನಸ್ಸಲ್ಲಾದರೂ ಸುಳಿದರೆ ಆಶ್ಚರ್ಯವಿಲ್ಲ.

ನಾವು ಎಲ್ಲರ ಹಿತಾಸಕ್ತಿಯನ್ನೂ ಸಮತೋಲನದ ದೃಷ್ಟಿಯಿಂದ ನೋಡಿ ಸರಿದೂಗಿಸಬೇಕು ಎಂದೂ ಇದೇ ಸಂದರ್ಭದಲ್ಲಿ ಹೇಳಿದ ಸುಪ್ರೀಂಕೋರ್ಟ್ ಅತ್ತ ಸ್ಪೀಕರ್ ಅವರ ಪರಮಾಧಿಕಾರವನ್ನೂ, ಇತ್ತ ರಾಜೀನಾಮೆ ನೀಡಿದ ಶಾಸಕರ ಹಿತಾಸಕ್ತಿಯನ್ನೂ ಸಮತೋಲನಗೊಳಿಸಿ ಎತ್ತಿಹಿಡಿದಿದೆ. ಆದರೆ ಹೀಗೆ ಮಾಡುವಾಗ ಅದು ಸಂವಿಧಾನವನ್ನು ಮತ್ತು ಪ್ರಜಾತಂತ್ರದ ಹಿತಾಸಕ್ತಿಯನ್ನು ಎತ್ತಿಹಿಡಿದಿದೆಯೇ? ಕಾನೂನಿನ ಮತ್ತು ನ್ಯಾಯಶಾಸ್ತ್ರದ ಆಳದಲ್ಲೇನಿದೆಯೋ ಗೊತ್ತಿಲ್ಲ. ಸುಪ್ರೀಂಕೋರ್ಟ್‍ನ ತೀರ್ಪನ್ನು ಅರ್ಥಮಾಡಿಕೊಳ್ಳಲು ಹೊರಟ ಸಾಮಾನ್ಯ ಪ್ರಜೆಗಳಿಗಂತೂ ಇಂತಹದ್ದೊಂದು ಪ್ರಶ್ನೆ ಕಾಡಿಯೇ ಕಾಡುತ್ತದೆ.

ಅತೃಪ್ತ ಶಾಸಕರ ರಾಜೀನಾಮೆ ಅರ್ಜಿಯನ್ನು ಸ್ಪೀಕರ್ ತನ್ನ ವಿವೇಚನೆಯನ್ನು ಬಳಸಿ ನಿರ್ದಿಷ್ಟ ಸಮಯದಲ್ಲಿ ಇತ್ಯರ್ಥ ಪಡಿಸಲಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಅದೇ ವೇಳೆ ರಾಜೀನಾಮೆಯ ಇತ್ಯರ್ಥಕ್ಕಾಗಿ ಕಾಯುತ್ತಿರುವ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯ ಮಾಡುವ ಹಾಗಿಲ್ಲ, ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದಿದೆ. ಅಂದರೆ ಒಂದು ರೀತಿಯಲ್ಲಿ ಸುಪ್ರೀಂ ಕೋರ್ಟ್ ಈ ಶಾಸಕರುಗಳು ನೀಡಿದ ರಾಜೀನಾಮೆ ಸಂಪೂರ್ಣ ಸ್ವಯಂಪ್ರೇರಿತ ಎಂದೂ, ಅದರಲ್ಲಿ ಯಾವುದೇ ಆಮಿಷ, ರಾಜಕೀಯ ದುರುದ್ದೇಶ ಇರಲಿಲ್ಲ ಎಂದೂ ಪರ್ಯಾಯವಾಗಿ ಒಪ್ಪಿಕೊಂಡ ಹಾಗೆ ಆಯಿತು. ರಾಜೀನಾಮೆಯ ವಿಚಾರದಲ್ಲಿ ಸ್ಪೀಕರ್ ಅವರದ್ದೇ ಅಂತಿಮ ನಿರ್ಧಾರ ಎನ್ನುವಲ್ಲಿ ಸುಪ್ರೀಂ ಕೋರ್ಟ್ ಈಗ ಇರುವ ಸಾಂವಿಧಾನಿಕ ಸ್ಥಿತಿಯನ್ನೇ ಪುನರುಚ್ಚರಿಸಿದ ಹಾಗೆ ಆಯಿತು. ಸುಪ್ರೀಂ ಕೋರ್ಟ್ ನ್ಯಾಯಾನ್ಯಾಯಗಳ, ತಪ್ಪು-ಸರಿಗಳ ನಿಷ್ಕರ್ಷೆ ನಡೆಸಬೇಕಾಗಿದ್ದದ್ದು ಎರಡನೆಯ ವಿಚಾರದಲ್ಲಿ. ಅದು ರಾಜೀನಾಮೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಶಾಸಕರು ಅವರವರ ಪಕ್ಷಗಳ ನಿಯಂತ್ರಣಕ್ಕೆ ಒಳಪಡುತ್ತಾರೆಯೇ ಇಲ್ಲವೇ ಎನ್ನುವ ಪ್ರಶ್ನೆ ಅದು. ಈ ವಿಚಾರದಲ್ಲಿ ಸ್ಪಷ್ಟವಾಗಿ ಏನೂ ಹೇಳದೆ ಶಾಸಕರಿಗೆ ಸದನದ ಕಲಾಪದಲ್ಲಿ ಪಾಲ್ಗೊಳ್ಳುವ ಅಥವಾ ಪಾಲ್ಗೊಳ್ಳದಿರುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವ ಮೂಲಕ ಒಂದರ್ಥದಲ್ಲಿ ಸುಪ್ರೀಂ ಕೋರ್ಟ್ ಈ ಶಾಸಕರುಗಳ ಕುತಂತ್ರ ರಾಜಕೀಯಕ್ಕೆ ಆಸರೆ ನೀಡಿದೆ. ಇನ್ನು ಪಕ್ಷಾಂತರವನ್ನು ನಿಷೇಧಿಸುವ ಸಂವಿಧಾನದ ಪರಿಚ್ಛೇದವನ್ನು ವಿಧವಿಧ ಕುತಂತ್ರಗಳ ಮೂಲಕ ಧಿಕ್ಕರಿಸಿ ತಮಗೆ ಲಾಭವಿರುವ ಪಕ್ಷಗಳಿಗೆ ಜಿಗಿಯುವುದಕ್ಕೆ ಶಾಸಕರಿಗೆ ಸುಲಭವಾಗಲಿದೆ. ಹೇಳಿಕೇಳಿ ಸುಪ್ರೀಂ ಕೋರ್ಟ್ ಕೂಡ ಇಂತವರ ವಿಚಾರದಲ್ಲಿ ಮೃದುಧೋರಣೆ ಅನುಸರಿಸಿದೆ ಎಂದರೆ ಇನ್ನು ಕೇಳಬೇಕೆ?

ಸಂವಿಧಾನದ ಹತ್ತನೇ ಪರಿಚ್ಛೇದವನ್ನು ಸುಪ್ರೀಂಕೋರ್ಟ್‍ನ ಈ ನಿರ್ಧಾರ ಅಕ್ಷರಶ ಅಣಕಿಸುವಂತಿದೆ. ಆದುದರಿಂದ ಇಂತಹದ್ದೊಂದು ಮಧ್ಯಂತರ ತೀರ್ಪನ್ನು ಪ್ರಕಟಿಸುವಕ್ಕೆ ಮುನ್ನ ಸುಪ್ರೀಂಕೋರ್ಟ್‍ನ ಪೀಠ ನಾವೆಲ್ಲರೂ ಸಂವಿಧಾನವನ್ನು ರಕ್ಷಿಸಬೇಕಿದೆ ಎಂದು ಹೇಳಿದ್ದು ತಮಾಷೆಯಾಗಿದೆ.

ಕೋರ್ಟು ಶಾಸಕರಿಗೆ ಸದನದಲ್ಲಿ ಭಾಗವಹಿಸದೇ ಇರಲು ಅವಕಾಶ ನೀಡದೆ ಹೋಗಿದ್ದರೆ ಅವರಿಗೆ ಅವರವರ ಪಕ್ಷದವರು ಸದನದಲ್ಲಿ ಭಾಗವಹಿಸಿ ಸರಕಾರದ ಪರವಾಗಿ ಮತಹಾಕುವಂತೆ ಯಾವುದೇ ರೀತಿಯ ನಿಬರ್ಂಧ ಇಲ್ಲದೆ ವಿಪ್ ನೀಡುತ್ತಿದ್ದವು. ಹೇಗೂ ಅವರು ಸರಕಾರದ ವಿರುದ್ದವೇ ಮತ ಹಾಕುವ ಸಾಧ್ಯತೆ ಇದ್ದುದರಿಂದ ವಿಪ್ ನೀಡುವ ಮೂಲಕ ಸರಕಾರವನ್ನು ರಕ್ಷಿಸಿದ ಹಾಗೆ ಆಗುತ್ತಿರಲಿಲ್ಲ. ವಿಪ್ ಉಲ್ಲಂಘಿಸಿದಕ್ಕಾಗಿ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಸ್ಪೀಕರ್‍ಗೆ ಪಕ್ಷಗಳು ಕೇಳಿಕೊಳ್ಳುತಿದ್ದವು. ಹಾಗೊಂದು ವೇಳೆ ಸದಸ್ಯತ್ವ ರದ್ದಾಗಿದ್ದರೆ ಮುಂದೆ ಬಿಜೆಪಿ ಸರಕಾರ ರಚಿಸಿದ ಸಂದರ್ಭದಲ್ಲಿ ಕೆಲವೊಂದು ರೀತಿಯ ಲಾಭವನ್ನು ಪಡೆಯಲು ಶಾಸಕರುಗಳಿಗೆ ಕಷ್ಟವಾಗುತ್ತಿತ್ತು. ಅಂದರೆ ಬಿಜೆಪಿ ಸರಕಾರದಲ್ಲಿ ಅವರಿಗೆ ಏಕಾಏಕಿ ಸಚಿವರಾಗುವುದಕ್ಕೆ ತೊಡಕಾಗುತಿತ್ತು. ಅದೂ ತಾತ್ಕಾಲಿಕ. ಕಡೆ ಪಕ್ಷ ಅವರು ಈ ರೀತಿಯಲ್ಲಾದರೂ ಅಲ್ಪ ಹಿನ್ನಡೆ ಅನುಭವಿಸುವಂತೆ ಆಗುತ್ತಿದ್ದರೆ ಸುಪ್ರೀಂಕೋರ್ಟ್ ಇಂತಹ ರಾಜಕೀಯ ಕುತಂತ್ರದಾಟಗಳ ವಿರುದ್ಧವಾಗಿದೆ ಎನ್ನುವ ಸಂದೇಶ ರವಾನೆಯಾಗುತಿತ್ತು. ಇಷ್ಟಾದರೂ ಮಾಡದ ಸುಪ್ರೀಂಕೋರ್ಟ್ ಸಂವಿಧಾನವನ್ನು ರಕ್ಷಿಸಬೇಕಿದೆ ಅಂತ ಯಾರಿಗೆ ಹೇಳಿದ್ದು, ಯಾರಿಗೆ ಹೇಳುತ್ತಿರುವುದು?

ವಿಪ್ ನೀಡಬಾರದು ಅಂತ ಸುಪ್ರೀಂ ಕೋರ್ಟ್ ನೇರವಾಗಿ ಹೇಳದೆ ಇರುವುದರಿಂದ ವಿಪ್ ನೀಡುವುದು ನಮ್ಮ ಹಕ್ಕು ಅಂತ ವಾದಿಸಿ ಕಾಂಗ್ರೆಸ್ ಮತ್ತು ಜನತಾ ದಳ ತಮ್ಮ ತಮ್ಮ ಶಾಸಕರಿಗೆ ವಿಪ್ ನೀಡಿದರೂ ಅದರ ಮಾನ್ಯತೆ ಈಗ ಪ್ರಶ್ನಾರ್ಹ. ಯಾಕೆಂದರೆ ಸದನಕ್ಕೆ ಬರುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಅಂತ ಸುಪ್ರೀಂಕೋರ್ಟ್ ಹೇಳಿದನ್ನು ಎಲ್ಲರೂ ಅವರವರಿಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳುವ ಅವಕಾಶ ಮುಕ್ತವಾಗಿದೆ. ಅದೇನೇ ಇರಲಿ. ಪಕ್ಷಾಂತರ ಮಾಡಲು ಹೊರಟಿರುವ ಶಾಸಕರಿಗೆ ಸಂದ ನೈತಿಕ ಜಯ ಎನ್ನುವಂತಹ ಅಭಿಪ್ರಾಯ ಸೃಷ್ಟಿಯಾಗುವಂತಹ ತೀರ್ಪು ನೀಡುವ ಅಗತ್ಯ ಸುಪ್ರೀಂ ಕೋರ್ಟಿಗೆ ಅದ್ಯಾಕೆ ಬಂತು ಎನ್ನುವುದು ಇನ್ನೂ ಸ್ಪಷ್ಟವಾಗುತ್ತಿಲ್ಲ. ಈ ರೀತಿಯ ನಿರ್ಣಯವೊಂದಕ್ಕೆ ಬರುವುದರ ಮೂಲಕ ಈ ದೇಶದ ಪ್ರಜಾತಂತ್ರದಲ್ಲಿ ಸರ್ವೋಚ್ಚ ನ್ಯಾಯಾಲಯ ಅದ್ಯಾವ ‘ಸಮತೋಲನವನ್ನು’ ಕಾಯ್ದುಕೊಂಡಿತೋ? ಮಾನ್ಯ ನ್ಯಾಯಮೂರ್ತಿಗಳೇ ಹೇಳಬೇಕು.

ಇಲ್ಲಿ ನ್ಯಾಯಾಂಗದ ಗೊಂದಲವನ್ನು ಅರ್ಥ ಮಾಡಿಕೊಳ್ಳಬಹುದು. ಪ್ರಾಯಃ ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ ಅಂತ ಕೋರ್ಟಿಗೆ ಜನಪ್ರತಿನಿಧಿಗಳು ದುಂಬಾಲು ಬಿದ್ದ ಪ್ರಕರಣ ಇದುವೇ ಮೊದಲಾಗಿದ್ದಿರಬೇಕು. ಇಲ್ಲಿ ಶಾಸಕರು ಮತ್ತು ಅವರನ್ನು ಎತ್ತಿಕಟ್ಟಿರುವ ಚಾಲಾಕಿ ರಾಜಕೀಯ ಪಕ್ಷ ಹೆಣೆದ ಕಪಟ ನಾಟಕದ ಹಂದರಗಳನ್ನು ಅರ್ಥಮಾಡಿಕೊಂಡು ಇದಮಿತ್ತಂ ಎನ್ನುವ ತೀರ್ಪು ನೀಡುವುದು ನ್ಯಾಯಾಲಯಕ್ಕೆ ಕಷ್ಟವಾಗಬಹುದು. ಅದೇ ರೀತಿ ಸಾಕ್ಷ್ಯಾಧಾರಗಳಿಲ್ಲದೆ ಯಾರ ಪರ ಅಥವಾ ಯಾರ ವಿರುದ್ಧ ನಿರ್ಣಯ ನೀಡುವಂತಿಲ್ಲ ಎನ್ನುವುದನ್ನೂ ಒಪ್ಪಿಕೊಳ್ಳೋಣ. ಇಲ್ಲಿ ಕಾಂಗ್ರೆಸ್ ಮತ್ತು ಜನತಾ ದಳ ಪಕ್ಷಗಳ ಶಾಸಕರು ಕಾನೂನಿನ ಕಣ್ಣಿಗೆ ಮಣ್ಣೆಸೆಯುತ್ತಿರುವುದಕ್ಕೆ ಮತ್ತು ಬಿಜೆಪಿಗೆ ಶರಣಾಗಿ ಹೀಗೆಲ್ಲಾ ಮಾಡುತ್ತಿರುವುದಕ್ಕೆ ಬೇಕಾದಷ್ಟು ಪುರಾವೆಗಳು ಇವೆಯಾದರೂ ಅವುಗಳನ್ನು ಕೋರ್ಟು ಕಾನೂನು ನೆಲೆಯಲ್ಲಿ ಒಪ್ಪಿಕೊಳ್ಳಲಾಗದ ಪರಿಸ್ಥಿತಿ ಕೂಡಾ ಇದೆ ಎಂದೇ ಭಾವಿಸೋಣ.

ಆದರೆ ಇಂತಹ ಪರಿಸ್ಥಿತಿಯಲ್ಲಿ ಕೋರ್ಟು ಎಲ್ಲವನ್ನೂ ಸ್ಪೀಕರ್ ಅವರ ವಿವೇಚನೆಗೆ ಬಿಟ್ಟು, ಸ್ಪೀಕರ್ ಅವರ ನಿರ್ಣಯದ ಬಳಿಕ ಮಧ್ಯ ಪ್ರವೇಶಿಸುತ್ತೇನೆ ಅಂತ ಹೇಳಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಇಡೀ ರಾಜೀನಾಮೆಯ ಪ್ರಹಸನವೇ ಸಂವಿಧಾನವನ್ನು ಮತ್ತು ಪ್ರಜಾತಂತ್ರವನ್ನು ವಂಚಿಸುವ ಹುನ್ನಾರ ಅಂತ ತಿಳಿದೂ ತಿಳಿದೂ ಇದರ ಬಗ್ಗೆ ಒಂದು ಆಕ್ಷೇಪದ ಅಥವಾ ವಿಷಾದದ ಮಾತನ್ನಾದರೂ ಆಡದೆ ತಾಂತ್ರಿಕವಾದ ಒಂದು ಮಧ್ಯಂತರ ತೀರ್ಪು ನೀಡುವುದರ ಮೂಲಕ ಪಕ್ಷಾಂತರ ನಿಷೇಧವನ್ನು ಧಿಕ್ಕರಿಸುವಂತಹ ಕಳ್ಳಾಟಗಳ ಬಗ್ಗೆ ನ್ಯಾಯಾಂಗಕ್ಕೂ ಏನೂ ಮಾಡಲಾಗುವುದಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ನ್ಯಾಯಪೀಠ ರವಾನಿಸಿದೆ. ಇದು ದುರಂತ.
ಒಂದೇ ಒಂದು ಸಮಾಧಾನದ ವಿಚಾರ ಎಂದರೆ ಇದಿನ್ನೂ ಮಧ್ಯಂತರ ತೀರ್ಪು. ಈ ಪ್ರಕರಣದ ಪೂರ್ಣ ತೀರ್ಪು ಬರುವ ವೇಳೆ ಅತೃಪ್ತ ಶಾಸಕರು ಸಂಪೂರ್ಣ ತೃಪ್ತಿಯನ್ನು ಅನುಭವಿಸುತ್ತಿರಬಹುದು. ಅತೃಪ್ತಿಗೆ ತುಪ್ಪ ಸುರಿದ ರಾಜಕೀಯ ಪಕ್ಷ ಸಕಲೈಶ್ವರ್ಯ ಮತ್ತು ಅಧಿಕಾರದಿಂದ ವಿಜೃಂಭಿಸುತ್ತಿರಬಹುದು. ಅವೆಲ್ಲಾ ಹಾಗಿರಲಿ. ಇನ್ನು ಮುಂದಾದರೂ ಹೀಗಾಗದ ರೀತಿಯಲ್ಲಿ ಸುಪ್ರೀಂ ಕೋರ್ಟ್ ಇಡೀ ಪಕ್ಷಾಂತರ ನಿಷೇಧದ ಕಾನೂನಿನ ಮಿತಿಗಳನ್ನು ಅರ್ಥ ಮಾಡಿಕೊಂಡು ಒಂದು ಪರಿಹಾರ ಸೂಚಿಸಿದರೆ ಈಗ ಆಗಿಹೋಗಿರುವ ಪ್ರಮಾದಕ್ಕೆ ಸ್ವಲ್ಪವಾದರೂ ಪ್ರಾಯಶ್ಚಿತ್ತ ಮಾಡಿಕೊಂಡ ಹಾಗಾಗುತ್ತದೆ. ಪಕ್ಷಾಂತರ ಮಾಡಿದವರಿಗೆ ಸಲೀಸಾಗಿ ಇನ್ನೊಂದು ಪಕ್ಷ ಸೇರಲಾಗದಂತೆ ಕೆಲ ನಿಬರ್ಂಧಗಳನ್ನಾದರೂ ವಿಧಿಸಿದರೆ, ಕೆಲವೊಂದು ರೀತಿಯ ರಾಜೀನಾಮೆ ಪ್ರಕರಣಗಳಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಮೊಟಕುಗೊಳಿಸಲು ಸಾಧ್ಯವಾದಲ್ಲಿ, ಇನ್ನೊಂದು ರಾಜ್ಯದಲ್ಲಿ ಇನ್ನೊಂದು ಕಾಲಘಟ್ಟದಲ್ಲಿ ಇಂತಹ ಅಸಂಗತ ನಾಟಕಗಳು ಘಟಿಸುವುದನ್ನು ತಪ್ಪಿಸಲು ಸಾಧ್ಯವೋ ಏನೋ. ಆಗಲೂ ರಂಗೋಲಿಯಡಿ ತೂರಿ ಕಾನೂನನ್ನು ನಿಷ್ಪಲಗೊಳಿಸುವ ಹೊಸ ಕಳ್ಳಾಟಗಳ ಆವಿಷ್ಕಾರ ಆಗಬಹುದು. ಅದೇನೇ ಆಗುವುದಾದರೂ ಈಗ ಇರುವ ದುರ್ಬಲ ಪಕ್ಷಾಂತರ ನಿಷೇದ ವ್ಯವಸ್ಥೆಗೆ ತೇಪೆ ಹಚ್ಚುವ ಅಗತ್ಯವಂತೂ ಇದ್ದೆ ಇದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...