ಆರ್ಥಿಕ ಉದಾರೀಕರಣದ ಬಹುಮುಖ್ಯ ಚಹರೆಯೆಂದರೆ ಜಾಗತಿಕ ಬಂಡವಾಳದ ಹರಿವಿನ ಸುಳಿಯಲ್ಲಿ ಆರ್ಥಿಕತೆಯನ್ನು ಈಜಲು ಬಿಡುವುದು ಎಂದು ಪ್ರಭಾತ್ ಪಟ್ನಾಯಕ್ ಬರೆಯುತ್ತಾರೆ[1]. ಭಾರತದ ಆರ್ಥಿಕತೆಯು ಉದಾರೀಕರಣಕ್ಕೆ ಅಧಿಕೃತವಾಗಿ ಹೊರಳಿಕೊಂಡು ಮೂವತ್ತು ವರ್ಷಗಳು ಕಳೆದಿವೆ. ಇದೇ ಸಂದರ್ಭದಲ್ಲಿ ಜುಲೈ 23ರಂದು ಈ ದೇಶದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲೊಬ್ಬರಾದ, ಭಾರತದ ಆರ್ಥಿಕತೆಯನ್ನು ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ನೀತಿಗಳಿಗೆ ಹೊಂದಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಅಂದಿನ ಹಣಕಾಸು ಸಚಿವರಾಗಿದ್ದ, ತದನಂತರ ಒಂದು ದಶಕಕ್ಕೂ ಹೆಚ್ಚು ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ ಸಿಂಗ್ ಅವರು ಮಾತನಾಡುತ್ತ “30 ವರ್ಷಗಳ ಹಿಂದೆ ಇದೇ ದಿನ, 1991ರಲ್ಲಿ, ಕಾಂಗ್ರೆಸ್ ಪಕ್ಷವು ಭಾರತದ ಆರ್ಥಿಕತೆಯ ಮಹತ್ವದ ಸುಧಾರಣೆಗಳನ್ನು ಆರಂಭಿಸಿತು ಮತ್ತು ನಮ್ಮ ರಾಷ್ಟ್ರದ ಆರ್ಥಿಕ ನೀತಿಗೆ ಹೊಸ ಮಾರ್ಗವನ್ನು ತೋರಿಸಿಕೊಟ್ಟಿತು.

ಕಳೆದ ಮೂರು ದಶಕಗಳಲ್ಲಿ, ಸತತ ಸರ್ಕಾರಗಳು ನಮ್ಮ ರಾಷ್ಟ್ರವನ್ನು 3 ಟ್ರಿಲಿಯನ್ ಮೌಲ್ಯದ ಆರ್ಥಿಕತೆಯತ್ತ ಮತ್ತು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸುವ ಸಲುವಾಗಿ ಇದೇ ಮಾರ್ಗವನ್ನು ಅನುಸರಿಸಿವೆ. ಇದಕ್ಕಿಂತಲೂ ಮುಖ್ಯವಾಗಿ, ಸುಮಾರು 300 ಮಿಲಿಯನ್ ಭಾರತೀಯರನ್ನು ಈ ಅವಧಿಯಲ್ಲಿ ಬಡತನದಿಂದ ಮುಕ್ತಗೊಳಿಸಲಾಗಿದೆ ಹಾಗೂ ನಮ್ಮ ಯುವಕರಿಗಾಗಿ ಮಿಲಿಯನ್‌ಗಟ್ಟಲೆ ಹೊಸ ಉದ್ಯೋಗಗಳನ್ನು ಒದಗಿಸಲಾಗಿದೆ” ಎಂದು ಹೇಳುತ್ತಾ ಇದರ ನಡುವೆಯೂ ದೇಶದ ಆರ್ಥಿಕತೆಯು ಸಾಗಬೇಕಾದ್ದ ಹಾದಿ ಬಹಳಷ್ಟಿದ್ದು, ಅದರಲ್ಲೂ ಕೋವಿಡ್‌ನಿಂದ ದೇಶದ ಆರ್ಥಿಕತೆಗೆ ಬಿದ್ದ ಪೆಟ್ಟು ಗಣನೀಯವಾದದ್ದು ಎಂಬುದನ್ನು ಗುರುತಿಸಿದರು. ಆದರೆ, ಅವರ ಈ ಮಾತುಗಳ ಹಿಂದಿನ ತಾತ್ಪರ್ಯವು ಬಡತನ ನಿರ್ಮೂಲನೆ, ಉದ್ಯೋಗ ಮತ್ತು 90ರ ದಶಕದಿಂದ ಇಲ್ಲಿಯವರೆಗಿನ ಎಲ್ಲ ಸರ್ಕಾರಗಳು ತಮ್ಮದೇ (ಕಾಂಗ್ರೆಸ್ಸಿನದ್ದೇ) ಆರ್ಥಿಕ ನೀತಿಯನ್ನು ಮುಂದುವರೆಸಿವೆ ಎಂಬ ಮೂರು ಪ್ರಮುಖ ವಿಷಯಗಳನ್ನು ಮುಂದಿಡುತ್ತಾ ದೇಶದ ಪ್ರಗತಿಗೆ ಉದಾರೀಕರಣವು ಸಹಕಾರಿಯಾಗಿದೆ ಎಂಬುದುದನ್ನು ಸಾಧಿಸುವುದಾಗಿತ್ತು.

ಇಂದಿನ ಪ್ರಧಾನಿ ಮೋದಿಯಂತೆ ಮನಮೋಹನ ಸಿಂಗರಿಗೆ ಅತೀ ಸುಲಭವಾಗಿ ಸುಳ್ಳನ್ನಾಡುವ ಪ್ರವೃತ್ತಿ ಇಲ್ಲದಿರುವ ಕಾರಣ, ಆರ್ಥಿಕತೆಯ ಬಗೆಗೆ ಅವರಿಗಿರುವ ಆಳವಾದ ಅಧ್ಯನಯಶೀಲತೆ ಹಾಗು ಭಾರತದ ಆರ್ಥಿಕತೆಯು ತನ್ನ ದಿಕ್ಕನ್ನೇ ಬದಲಿಸಿಕೊಳ್ಳುವುದರ ಹಿಂದೆ ಅವರು ನಿರ್ವಹಿಸಿದ ನಿರ್ಣಾಯಕ ಪಾತ್ರದ ಕಾರಣ, ಅವರ ಮೂರೂ ವಾದಗಳನ್ನು ಒರೆಗೆ ಹಚ್ಚುವುದು ಇಂದಿನ ಕಾಲಘಟ್ಟದಲ್ಲಿ ಮುಖ್ಯವಾಗುತ್ತದೆ.

ಮೊದಲನೆಯದಾಗಿ – ಯುವಕರಿಗಾಗಿ ದಶಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಯಾಗಿದೆ ಎನ್ನುವುದು. ಭಾರತದ ಆರ್ಥಿಕತೆಯ ಉದಾರೀಕರಣದ ನಂತರ ಉದ್ಯೋಗದ ವಿಚಾರವನ್ನು ಅರ್ಥೈಸಲು ನಾವು ಒಂದು ಪ್ರಮುಖ ಸಂಗತಿಯನ್ನು ಗಮನಿಸಬೇಕಾಗುತ್ತದೆ. ಅದು ಭಾರತದ ಆರ್ಥಿಕತೆಯು jobless growthನಿಂದ jobloss growthನತ್ತ ಸಾಗಿಬಂದ ಹಾದಿ[2]. ಉದಾರೀಕರಣಾನಂತರದಲ್ಲಿ ಭಾರತದ ಆರ್ಥಿಕತೆಯು ಅತಿಹೆಚ್ಚು ಬೆಳೆಯಿತು ಎಂಬುದನ್ನು ಶಾಸ್ತ್ರೀಯ ಅರ್ಥಶಾಸ್ತ್ರಜ್ಞರು ಮುಂದಿಡುವುದು ಸಾಮಾನ್ಯ. ಈ ವಾದವನ್ನು ಅವರು ಸಮರ್ಥಿಸುವುದು ಭಾರತದ ಒಟ್ಟು ದೇಶಿಯ ಉತ್ಪನ್ನವು (ಜಿಡಿಪಿ) ಹತ್ತಿರತ್ತಿರ ಶೇ.7ಕ್ಕೆ ಏರಿತ್ತು ಎಂಬುದು. ಈ ಅಂದಾಜಿಗೆ ಬರಲು ಉಪಯೋಗಿಸಿರುವ ವಿಧಾನದ ಬಗ್ಗೆ ಬಹಳಷ್ಟು ಪ್ರಶ್ನೆಗಳಿವೆಯಾದರೂ (2014ರಿಂದ 2018ರವರೆಗೆ ಭಾರತ ಸರ್ಕಾರಕ್ಕೆ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಹ್ಮಣಿಯನ್ ನಡೆಸಿರುವ ಅಧ್ಯಯನವು 2011-12 ರಿಂದ 2016-17ರವರೆಗಿನ ಅಂಕಿ-ಅಂಶಗಳನ್ನು ಆಧರಿಸಿದ ಅಂದಾಜಿನ ಮೇಲೆ ಭಾರತದ ಜಿಡಿಪಿಯು ಸರ್ಕಾರದಿಂದ ಘೋಷಿಸಲ್ಪಟ್ಟ ಸಂಖ್ಯೆಗಿಂತ 1.5% – 2.5% ಕಡಿಮೆಯಿತ್ತೆಂದು ಅಂದಾಜಿಸಿತ್ತು)[2]. ಸರ್ಕಾರದ್ದೇ ಅಂಕಿಗಳನ್ನು ಒಪ್ಪಿಕೊಂಡರೂ, ನಾವು ಕೇಳಬೇಕಿರುವ ಪ್ರಶ್ನೆ ’ಇದರಿಂದ ಜನರಿಗೆ ಉದ್ಯೋಗ ದೊರಕಿತೆ?’ ಎಂಬುದು.

PC : BBC

ಹಾಗೆ ನೋಡಿದರೆ, ಭಾರತದ ಆರ್ಥಿಕತೆಯು 1993-2004ರಲ್ಲಿ ಪುನರ್‌ರೂಪಿತಗೊಂಡನಂತರ jobless growthಗೆ ಸಾಕ್ಷಿಯಾಯಿತು. ಅರ್ಥಾತ್, ದೇಶದ ಆರ್ಥಿಕತೆ ಪ್ರಗತಿ ಕಾಣುತ್ತಿದ್ದರೂ ಜನರಿಗೆ ಉದ್ಯೋಗ ಸೃಷ್ಟಿಸಲಿಲ್ಲ[3]. ಒಟ್ಟಾರೆ ಬೆಳವಣಿಗೆಯಿಂದ ಬಂದ ಲಾಭಾಂಶವನ್ನು ಉದ್ಯೋಗ ಸೃಷ್ಟಿಸಲಿಕ್ಕೆ ಉಪಯೋಗಿಸದೆ ಬಂಡವಾಳವನ್ನು ಕ್ರೂಢೀಕರಿಸಿಕೊಳ್ಳಲಾಯಿತು. ಅಂತೆಯೇ, ಕಾರ್ಮಿಕ ಉತ್ಪಾದಕತೆ ಹೆಚ್ಚಾದ್ದರಿಂದ ಬಂದ ಲಾಭಾಂಶವನ್ನು ಕಾರ್ಮಿಕರಿಗೆ ವಿತರಿಸದೆ ಧಣಿಗಳೇ ಉಳಿಸಿಕೊಂಡದ್ದರಿಂದ
ಕಾರಣ ಕಾರ್ಮಿಕರ ವರ್ಗಕ್ಕೆ ಹೆಚ್ಚಿನ ಉದ್ಯೋಗವೂ ಸಿಗಲಿಲ್ಲ, ಆದಾಯವೂ ಹೆಚ್ಚಲಿಲ್ಲ[4]. ಅದರಲ್ಲೂ ಸಂಘಟಿತ ವಲಯದಲ್ಲಿ 1983-93ರ ದಶಕಕ್ಕೆ ಹೋಲಿಸಿದಲ್ಲಿ 1993-2003ರ ದಶಕದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣವು ಇಳಿದಿತ್ತೆಂದು, ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಈ ರೀತಿಯ ಬೆಳವಣಿಗೆಗಳು ಕಳವಳಕಾರಿಯಾಗಿತ್ತೆಂದೂ, ಆ ದಶಕದಲ್ಲಿ ಸ್ವಯಂ-ಉದ್ಯೋಗಸ್ಥರಲ್ಲಿ ಏರಿಕೆಯಾಗಿದ್ದರೂ ಅವರ ಆದಾಯವು ಬಹಳ ಕಡಿಮೆಯಾಗಿತ್ತೆಂದೂ ಅದೇ ಅಧ್ಯಯನ ತಿಳಿಸುತ್ತದೆ[4]. ಅಂತೆಯೇ, ದಿನಗೂಲಿ ಕಾರ್ಮಿಕರ ಮತ್ತು ಸಾಧಾರಣ ನೌಕರರ ಆದಾಯವು ನಿಜಾಂಶದಲ್ಲಿ ಇಳಿಕೆ ಕಂಡಿತ್ತು.

ತದನಂತರದಲ್ಲಿ, 2014ರಲ್ಲಿ ಬಿಡುಗಡೆಯಾಗಿದ್ದ ರಾಷ್ಟ್ರೀಯ ಮಾದರಿ ಸರ್ವೇಕ್ಷಣ ಸಂಸ್ಥೆಯ (NSSO) ಅಂಕಿಅಂಶಗಳ ಪ್ರಕಾರ 1991 ಮತ್ತು 2011ರ ಎರಡು ದಶಕಗಳ ನಡುವಿನಲ್ಲಿ 61 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿರುವ[5] ಸಂಗತಿಯು ಸಿಂಗ್‌ರ ಮಾತು ಸಂಪೂರ್ಣವಾಗಿ ಪೊಳ್ಳಲ್ಲ ಎಂಬುದನ್ನು ತಿಳಿಸುತ್ತದೆ. ಆದರೆ, ಉದಾರೀಕರಣದ ನಂತರ ಸೃಷ್ಟಿಯಾಗಿರುವ ಉದ್ಯೋಗಗಳಲ್ಲಿ ಶೇ.90 ಉದ್ಯೋಗಗಳು ಅಸಂಘಟಿತ ವಲಯಕ್ಕೆ ಸೇರಿದ್ದು[5] ಎಂಬುದನ್ನೂ ಅದೇ ವರದಿ ತಿಳಿಸುತ್ತದೆ. ಇಲ್ಲಿ ನಾವು ನೆನಪಿನಲ್ಲಿಡಬೇಕಾದದ್ದು, ಯಾವುದೇ ದೇಶದ ಪ್ರಗತಿಗೆ ಪೂರಕವಾಗಿರುವುದು ಮತ್ತು ಆ ದೇಶದ ಜನರ ಜೀವನ ಸುಧಾರಿಸುವುದು ಸಂಘಟಿತ
ವಲಯಗಲ್ಲಿ ಉದ್ಯೋಗಗಳು ಸೃಷ್ಟಿಯಾದಲ್ಲಿ ಮಾತ್ರ.

ಇದು ಒಂದೆಡೆಯಾದರೆ, 2014ರ ನಂತರದಲ್ಲಿ, ಕೋವಿಡ್ ಭಾರತಕ್ಕೆ ಅಪ್ಪಳಿಸುವುದಕ್ಕೂ ಮುನ್ನ 2019-2020ರ ವೇಳೆಗೆ ಭಾರತದ ಆರ್ಥಿಕತೆ-ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ಎರಡು ಆತಂಕಕಾರಿ ವಿಷಯಗಳು ಹೊರಬರಲಾರಂಭಿಸಿದವು (2016ರಿಂದಲೇ ಇದರ ಬಗ್ಗೆ ಮುನ್ಸೂಚನೆಗಳಿದ್ದರೂ). ಒಂದು, ದೇಶದಲ್ಲಿ ನಿರುದ್ಯೋಗತೆಯು ಹೆಚ್ಚಾಗುತ್ತಿದೆ ಎಂಬುದು. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ಈಗಾಗಲೇ ನಡೆದಿರುವ ಕಾರಣ ಅದನ್ನು ಇಲ್ಲಿ ವಿವರಿಸುವುದಿಲ್ಲ. ಮತ್ತೊಂದು, jobloss growth (ಅರ್ಥಾತ್ ಒಟ್ಟಾರೆಯಾಗಿ ದೇಶ ಪ್ರಗತಿ ಕಾಣುತ್ತಿದ್ದರೂ ಜನರು ಉದ್ಯೋಗವನ್ನು ಕಳೆದುಕೊಳ್ಳುವುದು)ಗೆ ಭಾರತದ ಆರ್ಥಿಕತೆಯು ಸಾಕ್ಷಿಯಾಗುತ್ತಿರುವ ಬಗ್ಗೆ ಕೆಪಿ ಕಣ್ಣನ್ ಮತ್ತು ಜಿ ರವೀಂದ್ರನ್‌ರವರು ಸಮಾಜ ವಿಜ್ಞಾನದ ವಿಚಾರದಲ್ಲಿ ದೇಶದ ಅತ್ಯುನ್ನತ ನಿಯತಕಾಲಿಕೆ ಎನಿಸಿರುವ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಗಾಗಿ ಬರೆದ ಸುದೀರ್ಘ ಲೇಖನದಲ್ಲಿ ಎರಡು ಪ್ರಮುಖ ಅಂಶಗಳನ್ನು ಅಂಕಿ-ಅಂಶಗಳೊಂದಿಗೆ ಮುಂದಿಡುತ್ತಾರೆ. 2011-12 ಮತ್ತು 2017-18ರ ನಡುವಿನ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಹಿಂದೆಂದೂ ಕಾಣದಂತೆ ಭಾರತದ ಆರ್ಥಿಕತೆಯಲ್ಲಿ ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ ಎಂಬುದು. ಈ ರೀತಿ ಉದ್ಯೋಗ ಕಳೆದುಕೊಂಡವರೆಲ್ಲರೂ ಪ್ರೌಢ ಶಿಕ್ಷಣಕ್ಕಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವವರು. ಇದು ಗ್ರಾಮೀಣ ಭಾರತವು ಸಿಲುಕಿರುವ ಸಂಕಷ್ಟದ ಸೂಚನೆಯಾಗಿದ್ದರೂ, ಗ್ರಾಮೀಣ ಭಾಗದ ಮಹಿಳೆಯರು, ಮುಸ್ಲಿಮರು ಹಾಗು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಸಮುದಾಯವೇ ಹೆಚ್ಚು ಪೆಟ್ಟು ತಿಂದಿವೆ[2] ಎಂಬುದು ಮತ್ತೊಂದು ಮುಖ್ಯ ಸಂಗತಿ.

ಎರಡೆನೆಯದಾಗಿ – 300 ಮಿಲಿಯನ್ ಜನರು ಬಡತನದಿಂದ ಮುಕ್ತರಾಗಿರುವ ಬಗ್ಗೆ. ಬಡತನದಿಂದ ಮುಕ್ತರಾಗಿರುವ ಅಂದಾಜು ಜನಸಂಖ್ಯೆಯ ಬಗ್ಗೆ ವ್ಯತ್ಯಾಸಗಳನ್ನು ಪ್ರತಿಪಾದಿಸಿದರೂ ಉದಾರವಾದದ ಕಾಲಘಟ್ಟದಲ್ಲಿ ಬಡತನ ನಿವಾರಣೆಯಾಗುತ್ತಿದೆ ಎಂಬುದನ್ನು ಸರ್ಕಾರದ ದಾಖಲೆಗಳು, ಖಾಸಗಿ ಅಧ್ಯಯನಗಳೂ ದೃಢಪಡಿಸುತ್ತವೆ. ಬಡತನವನ್ನು ನಾವು ಅಳೆಯುವುದು ಜನರ ಕ್ಷೇಮವನ್ನು ಅಳೆಯುವುದರ ಮೂಲಕ. ವ್ಯಕ್ತಿ ಅಥವಾ ಕುಟುಂಬವೊಂದರ ಆದಾಯವನ್ನು ಆಧರಿಸಿ ಜನರ ಕ್ಷೇಮವನ್ನಳೆಯುವುದು ಒಂದು ಕ್ರಮವಾದರೆ, ಎಲ್ಲರೂ ಮಾಡುವುದು ಹೊಟ್ಟೆಗಾಗಿಯೇ ಆಗಿರುವಾಗ ಜನರು ಸಾಕಷ್ಟು ಪೌಷ್ಟಿಕಾಂಶಗಳನ್ನೊಳಗೊಂಡ ಆಹಾರ ಸೇವಿಸುತ್ತಿದ್ದಾರೆಯೇ ಎಂಬುದನ್ನು ಆಧರಿಸಿ ಕೂಡ ಜನರ ಕ್ಷೇಮವನ್ನು ಅಳೆಯಬಹುದು. ಇವೆರಡು ಮಾದರಿಗೂ ತನ್ನದೇ ಆದ ಮಿತಿಗಳಿದ್ದರೂ, ಎರಡನೆಯ ವಿಧಾನವು ಹೆಚ್ಚು ನಿಖರವಾದ ಚಿತ್ರಣವನ್ನು ನೀಡುತ್ತದೆ ಎಂದು ಪ್ರತಿಪಾದಿಸಲಾಗುತ್ತದೆ.

ಇತ್ತೀಚಿನ ವರದಿಗಳನ್ನು ಗಮನಿಸಿದರೆ ನಾವು ಗಂಭೀರವಾಗಿ ಯೋಚಿಸಲೇಬೇಕಾದ ಸಮಸ್ಯೆಯೊಂದು ನಮ್ಮ ಕಣ್ಣಿಗೆ ರಾಚುತ್ತದೆ. ಜಾಗತಿಕ ಹಸಿವಿನ ಸೂಚ್ಯಂಕದ ಅಂದಾಜಿನ ಮೇರೆಗೆ 2015 ರಿಂದ 2019ರ ಅವಧಿಯಲ್ಲಿ ಭಾರತದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆ 785 ಮಿಲಿಯನ್ ಇಂದ 822 ಮಿಲಿಯನ್‌ಗೆ ಏರಿಕೆಯಾಗಿದೆ[6]. ಅದರೊಟ್ಟಿಗೆಯೇ ವ್ಯಕ್ತಿಯೊಬ್ಬರಿಗೆ ಲಭ್ಯವಿರುವ ಆಹಾರಧಾನ್ಯವು, 1991 ರಿಂದ 2011ರ ವೇಳೆಗೆ 177 ಕೆಜಿಗಳಿಂದ 163 ಕೆಜಿಗಳಿಗೆ ಇಳಿಕೆ ಕಂಡಿತ್ತು. ವ್ಯಕ್ತಿಯೊಬ್ಬರಿಗೆ ಲಭ್ಯವಿರುವ ಆಹಾರಧಾನ್ಯಗಳ ವಿಚಾರದಲ್ಲಿ ಭಾರತವು ಅತ್ಯಲ್ಪ ಅಭಿವೃದ್ಧಿ ಹೊಂದಿದ ದೇಶಗಳ ಮತ್ತು ಸಬ್-ಸಹಾರದ ಆಫ್ರಿಕಾ ದೇಶಗಳಿಗಿಂತಲೂ ಹಿಂದುಳಿದಿತ್ತು. ಉದಾರೀಕರಣದ ನಂತರದ 1993-94 ಮತ್ತು 2011-12ರ ನಡುವೆ, ಬಡತನ ರೇಖೆಯನ್ನು ಗುರುತಿಸುವ ಸಲುವಾಗಿ ನಿಗದಿಪಡಿಸಿರುವ ಕನಿಷ್ಠ ಕ್ಯಾಲೊರಿ ಸೇವನೆಗಿಂತಲೂ ಕಡಿಮೆ ಕ್ಯಾಲೊರಿ ಸೇವಿಸುವ ನಗರದಲ್ಲಿರುವ ಜನಸಂಖ್ಯೆಯು 57% ಇಂದ 65%ಕ್ಕೆ ಮತ್ತು ಗ್ರಾಮೀಣ ಭಾಗದಲ್ಲಿ ವಾಸಿಸುವ ಜನಸಂಖ್ಯೆಯು 58.5% ಇಂದ 68%ವರೆಗೆ ಏರಿಕೆ ಕಂಡಿತು[1]. ಅಂದರೆ, ಉದಾರೀಕರಣದ ನಂತರದಲ್ಲಿ ಜನರ ಹಸಿವು, ಅದರಲ್ಲೂ ಗ್ರಾಮೀಣ ಭಾಗದ ಜನರ ಹಸಿವು ಹೆಚ್ಚಾಗಿ, ಕನಿಷ್ಠ ಆಹಾರಕ್ಕೂ ಒದ್ದಾಡುತ್ತಿರುವ ಪರಿಸ್ಥಿತಿ ಏರ್ಪಟ್ಟಿದೆ. ಹಾಗಾದರೆ, ಬಡತನದಿಂದ ಹೊರಬಂದರೂ ಜನರು ಹಸಿವುಮುಕ್ತರಾಗಲು ಏಕೆ ಸಾಧ್ಯವಾಗಿಲ್ಲ?

ಈ ಒಗಟನ್ನು ’ಕ್ಯಾಲೊರಿ ಕನ್ಸಮ್ಪ್‌ಷನ್ ಪಜಲ್ (calorie consumption puzzle)’[7]ಚಎಂದೂ ಕರೆಯುವುದುಂಟು.

ಹಾಗಾದರೆ, ಕೊಳ್ಳುವ ’ಸಾಮರ್ಥ್ಯ’ವಿದ್ದರೂ ಜನರು ಕಡಿಮೆ ಆಹಾರ ಸೇವಿಸುತ್ತಿದ್ದಾರೆಯೇ? ಅಥವಾ /=ಕಡಿಮೆ ಪೌಷ್ಟಿಕಾಂಶದ ಆಹಾರವನ್ನು ಸೇವಿಸಲು ಆಯ್ದುಕೊಳ್ಳುತ್ತಾರೆಯೇ?

ದಿಪಂಕರ್ ಬಸು ಮತ್ತು ದೇಬಾರ್ಶಿ ದಾಸ್ ರವರು ಇದನ್ನು ಉತ್ತರಿಸುತ್ತಾ ಇದಕ್ಕೆ ಕಾರಣ ಇವೆರಡೂ ಅಲ್ಲದೆ, ಜನರು ಅಹಾರೇತರ ಅಗತ್ಯ ವಸ್ತುಗಳ/ಸೇವೆಗಳ (ಶಿಕ್ಷಣ, ಆರೋಗ್ಯ, ವಿದ್ಯುತ್, ಅನಿಲ ಮುಂತಾದವುಗಳ) ಮೇಲೆ ಹೆಚ್ಚು ವ್ಯಯಿಸಬೇಕಾಗಿರುವುದರಿಂದ ಮತ್ತು ಅವುಗಳ ಬೆಲೆಗಳು ಜನರ ಆದಾಯದಲ್ಲಿನ ಹೆಚ್ಚಳಕ್ಕಿಂತಲೂ ವೇಗವಾಗಿ ಏರುತ್ತಿರುವಾಗ ಅವರು ’ಆಹಾರಕ್ಕಾಗಿ ಎತ್ತಿಡುವ ಮೊತ್ತವು’ ಕಡಿಮೆಯಾಗಿ, ಹಸಿವಿನಿಂದ ಹೆಚ್ಚು ಬಳಲುತ್ತಿದ್ದಾರೆ ಎಂದು ಗುರುತಿಸಿದ್ದಾರೆ.

ಜನರಿಗೆ ಆಹಾರ ಭದ್ರತೆಯನ್ನೇ ನೀಡಲಾಗದಿದ್ದರೆ ಬಡತನ ನಿರ್ಮೂಲನೆಗೇನು ಬೆಲೆ? ನಿಮ್ಮ ಅಂಕಿ ಅಂಶಗಳೇನೇ ಹೇಳಿದರು, ಜನರ ಹಸಿವು ನೀಗೀತೆ?

ಇನ್ನು ಮೂರನೆಯದು – ಸತತ ಸರ್ಕಾರಗಳು ನಮ್ಮ ರಾಷ್ಟ್ರವನ್ನು 3 ಟ್ರಿಲಿಯನ್ ಮೌಲ್ಯದ ಆರ್ಥಿಕತೆಯತ್ತ ಮತ್ತು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸುವ ಸಲುವಾಗಿ ಉದಾರೀಕರಣದ ಮಾರ್ಗವನ್ನೇ ಅನುಸರಿಸಿವೆ ಎಂಬುದು. ಇದು ನಿಜವೂ ಕೂಡ ಹೌದು.

ಆರ್ಥಿಕ ನೀತಿಗಳ ವಿಚಾರದಲ್ಲಿ ನರಸಿಂಹ ರಾವ್ ಸರ್ಕಾರ, ವಾಜಪೇಯಿ ಸರ್ಕಾರ, ಮನಮೋಹನ ಸಿಂಗ್‌ರ ಸರ್ಕಾರ, ಈಗಿನ ಮೋದಿಯಾಡಳಿತ ಎಲ್ಲವೂ ಅನುಸರಿಸುತ್ತಿರುವುದು ಒಂದೇ ನೀತಿಯನ್ನು. ಯಾವುದೇ ಸಮಯದಲ್ಲೂ ಜಾಗತಿಕ ಮಾರುಕಟ್ಟೆಯಿಂದ ಬಂಡವಾಳದ ಒಳಹರಿವು ನಿಂತುಬಿಡುವ ಕಾರಣಕ್ಕೆ
ಹೆದರಿ ಸರ್ಕಾರಗಳು ಅಂತರರಾಷ್ಟ್ರೀಯ ಹೂಡಿಕೆದಾರರ ಮನವೊಲಿಸುತ್ತಲೇ ಇರಬೇಕಾದ ಸಂದರ್ಭಗಳಲ್ಲಿ ಅದರ ಸೇವಕನಾಗಿ- ತನ್ನನ್ನು ಸಾಕುತ್ತಿರುವ ’ಹಣದ ದೊರೆ’ಯ ಕಾಲಬಳಿ ಕುಳಿತು ಬಾಲವಾಡಿಸುತ್ತದೆ.

ಅಂದರೆ, ಒಟ್ಟಾರೆಯಾಗಿ ದೇಶದ ಆರ್ಥಿಕತೆ ಮುಂದುವರೆಯುತ್ತಿದ್ದರೂ ಅದು ಜನರಿಗೆ ಉದ್ಯೋಗ ಸೃಷ್ಟಿಸಲಿಲ್ಲ. ಸೃಷ್ಟಿಯಾದ ಉದ್ಯೋಗಗಳಾವುವೂ ಜನರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆಯನ್ನು ಒದಗಿಸಲಿಲ್ಲ. ಅದರಲ್ಲೂ, ಈ ಸಂದರ್ಭದಲ್ಲಿ ಉದ್ಯೋಗಾವಕಾಶದಿಂದ ವಂಚಿತರಾಗಿದ್ದು ಮತ್ತು ಉದ್ಯೋಗವನ್ನು ಕಳೆದುಕೊಂಡಿದ್ದು ಹಿಂದುಳಿದ ಸಮುದಾಯಗಳೇ. ಅಂದರೆ, ಯಾವ ಸಮುದಾಯಕ್ಕೆ ಉದ್ಯೋಗದ ಮೂಲಕ ಸಾಮಾಜಿಕ ಭದ್ರತೆಯ ಅಗತ್ಯತೆ ಹೆಚ್ಚಿತ್ತೋ ಅದೇ ಸಮುದಾಯಕ್ಕೆ ಉದಾರೀಕರಣದಿಂದ ಹೆಚ್ಚು ತೊಂದರೆಯಾದದ್ದು. ಬಡತನದ ವಿಚಾರದಲ್ಲಿಯೂ ಅಂತೆಯೇ. ಬಡತನರೇಖೆಯ ಮೇಲೆಕ್ಕೇರಿದರೂ ಅದು ಜನರ ಹಸಿವು ನೀಗಿಸಲಿಲ್ಲ. ಅವರನ್ನು ಸದಾ ಹಸಿವಿನಿಂದ ಬಳಲುವಂತೆ ನೋಡಿಕೊಳ್ಳುತ್ತಿರುವುದು ಮತ್ತದೇ ಉದಾರೀಕರಣ. ಜಗತ್ತಿನಾದ್ಯಂತ ಅಸಮಾನತೆಯನ್ನು ಬೆಳೆಸುತ್ತಿರುವುದೂ ಇದೇ ಉದಾರೀಕರಣ. ಹಿಂದುಳಿದ ಸಮುದಾಯಗಳು ಬೆಳೆಯದಂತೆ ತಡೆಯೊಡ್ಡುತ್ತಿರುವುದೂ ಇದೇ ಉದಾರೀಕರಣ. ತನ್ಮೂಲಕ, ಸಾಮಾಜಿಕ ಅನ್ಯಾಯವೆಸಗುತ್ತಿರುವುದೂ ಇದೇ ಉದಾರೀಕರಣ.

ಉದಾರೀಕರಣವು ಹಸಿವಿನ ವಿಷಯದಲ್ಲಿ ಜನರು ಏನು ಬೇಕೋ ಅದನ್ನು ’ಆಯ್ದು’ ಕೊಂಡುತಿನ್ನಲು ಸಾಧ್ಯವಿದೆ ಎಂದು ಹೇಳಿ ಹೇಗೆ ವಂಚಿಸುತ್ತದೆಯೋ, ಅಂತೆಯೇ, ರಾಜಕೀಯವಾಗಿಯೂ ಸಹ ನಮಗೆ ಪಕ್ಷಗಳನ್ನು ಆರಿಸುವ ’ಆಯ್ಕೆ’ಯಿದೆ ಎಂಬ ಭ್ರಮೆಯನ್ನು ಮುಂದಿಡುತ್ತಾ, ಸದಾ ಆದರ ಸುಳಿಯಲ್ಲೇ ಸಿಲುಕಿರುವಂತೆ ನೋಡಿಕೊಳ್ಳುತ್ತದೆ.

PC : GoGetFunding

ವಿಪರ್ಯಾಸವೆಂದರೆ, ಮೂವತ್ತು ವರ್ಷದ ನಂತರವೂ, ಈ ದೇಶದ ’ಮೇರು’ ಅರ್ಥಶಾಸ್ತ್ರಜ್ಞರೊಬ್ಬರಿಗೆ ತಮ್ಮ ಮತ್ತು ತಮ್ಮ ಸರ್ಕಾರ ತೆಗೆದುಕೊಂಡ ನಿಲುವಿನಿಂದ ದೇಶದ ಜನತೆಯೊಟ್ಟಿಗೆ ತಮ್ಮದೇ ಪಕ್ಷದ ಅಸ್ತಿತ್ವವೂ ಕೂಡ ಅಳಿವಿನಂಚಿಗೆ ಬಂದುನಿಂತಿದೆ. ಈಗಲಾದರೂ, ನಾವು ಹಾಕಿದ ತಪ್ಪು ಹೆಜ್ಜೆಯನ್ನೊಮ್ಮೆ ಅವಲೋಕಿಸಿ ಪರ್ಯಾಯ ಆರ್ಥಿಕ ವ್ಯವ್ಯಸ್ಥೆಯನ್ನು ಕಂಡುಕೊಳ್ಳುವ ಅಗತ್ಯವಿದೆ ಎನ್ನುವುದನ್ನೂ ಸಾರಾಸಗಟಾಗಿ ಬದಿಗೆಸೆದು, ಈಗಲೂ, ಈ ಬರ್ಬರ ವ್ಯವಸ್ಥೆಯನ್ನೇ ಸಮರ್ಥಿಸುತ್ತಾರಲ್ಲ!

ಇನ್ನು, ಕೋವಿಡ್. ಮತ್ತದನ್ನೂ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಆಳುವ ವರ್ಗ! ಇವೆಲ್ಲದರ ನಡುವೆಯೂ, ಕೋವಿಡ್ ಕಾಲದ ವಿಪತ್ತಿನ್ನಲ್ಲೂ, ನಾವು ಜೀವಿಸಲೇಬೇಕು! ಅದೇ ನಾವು ಈ ಕ್ರೂರವ್ಯವಸ್ಥೆಗೆ ಕೂಗುವ ಧಿಕ್ಕಾರ! ಎಂದು ನಂಬಿ ದಿನನಿತ್ಯವೂ ಹೋರಾಡುತ್ತಿರುವ ಜನರು ಮತ್ತು ಅಂತವರೆಲ್ಲರಿಗೂ ಒಡನಾಡಿಯಾಗಿರುವ ಜನಪರ ಚಳುವಳಿಗಳೇ ಭರವಸೆ!

[1]ಪ್ರಭಾತ್ ಪಾಟ್ನಾಯಕ್, ಎಕನಾಮಿಕ್ ಲಿಬರಲೈಜೇಷನ್ ಅಂಡ್ ದಿ ವಕಿಂಗ್ ಪೂರ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, 2016.

[2]ಕೆ ಪಿ ಕಣ್ಣನ್ ಮತ್ತು ಜಿ ರವೀಂದ್ರನ್, ಫ್ರಮ್ ಜಾಬ್ ಲೆಸ್ ಟು ಜಾಬ್ ಲಾಸ್ ಗ್ರೋಥ್: ಗೈನರ್ಸ್ ಅಂಡ್ ಲೂಸರ್ಸ್ ಡ್ಯೂರಿಂಗ್ 2012-2018, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, 2019.

[3]ಜೀಮೋಲ್ ಉನ್ನಿ ಮತ್ತು ಜಿ ರವೀಂದ್ರನ್, ಗ್ರೋಥ್ ಆಫ್ ಎಂಪ್ಲಾಯ್ಮೆಂಟ್ (1993-1994 ಟು 2004-2005): ಇಲ್ಯೂಷನ್ ಆಫ್ ಇನ್ಕ್ಲ್ಯೂಸಿವ್ ನೆಸ್?, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, 2007

[4]ಕೆಪಿ ಕಣ್ಣನ್ ಮತ್ತು ಜಿ ರವೀಂದ್ರನ್, ಗ್ರೋಥ್ ಸಾನ್ಸ್ ಎಂಪ್ಲಾಯ್ಮೆಂಟ್: ಅ ಕ್ವಾರ್ಟರ್ ಸೆಂಚುರಿ ಆಫ್ ಜಾಬ್ ಲೆಸ್ ಗ್ರೋಥ್ ಇನ್ ಇಂಡಿಯಾ’ಸ್ ಆರ್ಗನೈಜ್ಡ್ ಮ್ಯಾನುಫ್ಯಾಕ್ಚರಿಂಗ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, 2009

[5] ಪ್ರಾಚಿ ಸಾಲ್ವೆ, 90% ಆಫ್ ಜಾಬ್ಸ್ ಕ್ರಿಯೇಟೆಡ್ ಓವರ್ ಟೂ ಡಿಕೇಡ್ ಪೋಸ್ಟ್ ಲಿಬರಲೈಜೆಷನ್ ವರ್ ಇಂಫಾರ್ಮಲ್, ಇಂಡಿಯಾ ಸ್ಪೆಂಡ್, 2019

[6]ಗೌರಿ ಲಂಕೇಶ್ ನ್ಯೂಸ್, 2021

[7]ದೀಪಂಕರ್ ಬಸು ಮತ್ತು ದೇಬಾರ್ಶಿ ದಾಸ್, ಪಾವರ್ಟಿ- ಹಂಗರ್ ದಿವೇರ್ಗೆನ್ಸ್ ಇನ್ ಇಂಡಿಯಾ, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, 2014

ಶಶಾಂಕ್
ಎನ್‌ಐಎಎಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಪ್ರಗತಿಪರ-ಜನಪರ ಚಳವಳಿಗಳ ಬಗ್ಗೆ ಆಸಕ್ತಿ.


ಇದನ್ನೂ ಓದಿ: ವಿಶ್ಲೇಷಣೆ; ಡಿಎನ್‌ಎ ಮಸೂದೆ – ಆತಂಕ ಏಕೆ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಶಶಾಂಕ್
+ posts

LEAVE A REPLY

Please enter your comment!
Please enter your name here