ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳ ಪರಿಶೀಲನೆಗೆ ನೇಮಿಸಿದ್ದ ಸಮಿತಿಯು ಯಾವುದೇ ಅಧಿಕೃತ ಆದೇಶವಿಲ್ಲದೆ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ಪಠ್ಯಪುಸ್ತಕದಲ್ಲಿ ಕಂಡು ಬಂದಿರುವ ಸಾಲು ಸಾಲು ದೋಷಗಳ ಪೈಕಿ ಎಂಟನ್ನು ಮಾತ್ರ ತಿದ್ದಲು ಮುಂದಾಗಿದೆ.
ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯವರು ಆದೇಶ ನೀಡಿದ್ದು, ಪಠ್ಯದಲ್ಲಿನ ಎಂಟು ತಪ್ಪುಗಳನ್ನು ಉಲ್ಲೇಖಿಸಿ ತಿದ್ದುಪಡಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ತಿದ್ದುಪಡಿಯಲ್ಲಿ ಏನೇನು ಸೇರಿಸಲಾಗುತ್ತಿದೆ?
1) 9ನೇ ತರಗತಿ ಸಮಾಜ ವಿಜ್ಞಾನ ಭಾಗ-01ರ ‘ನಮ್ಮ ಸಂವಿಧಾನ’ ಎಂಬ ಪಾಠದಲ್ಲಿ ಸಂವಿಧಾನದ ಕರಡು ರಚನೆ ಸಮಿತಿ ಬಗ್ಗೆ ಉಲ್ಲೇಖವಿರುತ್ತದೆ. ಪರಿಷ್ಕೃತ ಪಠ್ಯದಲ್ಲಿ, “ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ” ಎಂಬ ವಾಕ್ಯವು ಇಲ್ಲವಾಗಿದ್ದು, “ಸಂವಿಧಾನದ ಶಿಲ್ಪಿ” ಎಂಬುದರ ಪುನರ್ ಸೇರ್ಪಡೆ.
2) 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಪಾಠವನ್ನು ಪೂರ್ಣವಾಗಿ ಕೈಬಿಡಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಭಾಗ-2 ರಲ್ಲಿ ಭಕ್ತಿಪಂಥ ಎಂಬ ಅಧ್ಯಾಯದಲ್ಲಿ ಪುರಂದರದಾಸರು, ಕನಕದಾಸರ ಕುರಿತು ವಿಷಯಗಳು ಸಂಕ್ಷಿಪ್ತಗೊಳಿಸಲಾಗಿದೆ. ಆದ್ದರಿಂದ, 2021-22ನೇ ಸಾಲಿನ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-01ರ ‘ಭಕ್ತಿ ಪಂಥ ಹಾಗೂ ಸೂಫಿಸಂತರು’ ಸಂಪೂರ್ಣ ಪಾಠ ಸೇರ್ಪಡೆ.
3) 7ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದ ಪುಟ ಸಂಖ್ಯೆ 147ರಲ್ಲಿ ‘ಗೊಂಬೆ ಕಲಿಸುವ ನೀತಿ’ ಪದ್ಯದ ಕೃತಿಕಾರರ ಹೆಸರು ಡಾ.ಆರ್.ಎನ್.ಜಯಗೋಪಾಲ್ ಎಂದು ತಪ್ಪಾಗಿ ಮುದ್ರಣಗೊಂಡಿದ್ದು, ಮೂಲ ಕೃತಿಕಾರರಾದ ಚಿ.ಉದಯಶಂಕರ್ ರವರ ಕವಿ ಪರಿಚಯ ಸೇರ್ಪಡೆ.
4) 6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿನ ‘ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಪಾಠದಲ್ಲಿ ಸಿದ್ದಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಕುರಿತಾದ ಸೇವೆಯ ಸಾಲುಗಳು ಸೇರ್ಪಡೆ.
5) 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರ ಮೈಸೂರು ಮತ್ತು ಇತರ ಸಂಸ್ಥಾನಗಳು ಎಂಬ ಪಾಠದಲ್ಲಿದ್ದ ಸುರಪುರ ನಾಯಕರ ಕುರಿತಾದ ವಿವರಗಳು ಸೇರ್ಪಡೆ.
6) 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರ ಪಠ್ಯಪುಸ್ತಕದಲ್ಲಿ ಭಾರತದ ಮತ ಪರಿವರ್ತಕರು ಎಂಬ ಅಧ್ಯಾಯದಲ್ಲಿ ಬಸವಣ್ಣನವರ ಕುರಿತಾದ ವಿಷಯಾಂಶ ಸೇರ್ಪಡೆ.
7) 7ನೇ ತರಗತಿ ಸಮಾಜ ವಿಜ್ಞಾನ ಭಾಗ-2 ರ ಪಠ್ಯಪುಸ್ತಕದ ‘ಕರ್ನಾಟಕ ರಾಜ್ಯ ಏಕೀಕರಣ ಹಾಗೂ ಗಡಿವಿವಾದಗಳು’ ಎಂಬ ಪಾಠದಲ್ಲಿ ರಾಷ್ಟ್ರಕವಿ ಕುವೆಂಪು ರವರ ಹಾಗೂ ಹುಯಿಲಗೋಳ ನಾರಾಯಣರಾವ್ ರವರ ಭಾವಚಿತ್ರಗಳನ್ನು ಅಳವಡಿಸುವುದು.
8) 4ನೇ ತರಗತಿಯ ಪರಿಸರ ಅಧ್ಯಯನ ‘ಪ್ರತಿಯೊಬ್ಬರು ವಿಶಿಷ್ಟ’ ಎಂಬ ಪಾಠದಲ್ಲಿ “ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುವೆಂಪು ರವರಿಗೆ ಚಿಕ್ಕಂದಿನಿಂದಲೂ ಕಥೆ, ಕವನ, ಪುಸ್ತಕ ಓದುವ, ಬರೆಯುವ ಅಭ್ಯಾಸ ಇತ್ತು” ಎಂಬ ವಾಕ್ಯದ ನಂತರ “ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು” ಎಂಬ ಸಾಲನ್ನು ಕೈಬಿಡುವುದು.
(ಮುಂದಿನ ಅಂಶಗಳು ಪಠ್ಯ ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರದ ನಡಾವಳಿಗಳನ್ನು ಸೂಚಿಸುತ್ತವೆ.)
9) ಸಾಮಾನ್ಯವಾಗಿ ಪಠ್ಯಪುಸ್ತಕಗಳ ರಚನೆ, ಪರಿಷ್ಕರಣೆಗಳಾದಾಗ ಅಗತ್ಯವಾದ ತಿದ್ದುಪಡಿಗಳನ್ನು ತಿದ್ದೋಲೆ ರೂಪದಲ್ಲಿ ನೀಡುವುದು ಶಿಕ್ಷಣ ಇಲಾಖೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿದೆ.
10) ಅಗತ್ಯವಿರುವ ತಿದ್ದೋಲೆ ಪ್ರತಿಗಳನ್ನು ಮುದ್ರಿಸಲು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಈಗಾಗಲೇ ಪಠ್ಯಪುಸ್ತಕಗಳ ಮುದ್ರಣಕ್ಕೆ ಕಾರ್ಯಾದೇಶ ಪಡೆದಿರುವ ಎಲ್-೧ ದರ ನಮೂದಿಸಿರುವ ಮುದ್ರಕರಿಂದ ಮುದ್ರಿಸಿ, ಕರ್ನಾಟಕ ಪಠ್ಯಪುಸ್ತಕ ಸಂಘದಲ್ಲಿ ಲಭ್ಯವಿರುವ ಅನುದಾನದಿಂದ ಭರಿಸಿ, ಎಲ್ಲಾ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಹಾಗೂ ಅನುದಾನರಹಿತ ಶಾಲೆಗಳಿಗೆ ಉಚಿತವಾಗಿ ತಲಾ ಒಂದು ಪ್ರತಿಯಂತೆ ವಿತರಿಸುವುದು.
11)ತಿದ್ದೋಲೆಯ ವಿಷಯಾಂಶಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ಜಾಲತಾಣದಲ್ಲಿ ಪ್ರಕಟಿಸುವುದು ಮತ್ತು ಮೂಲ ಪಠ್ಯಪುಸ್ತಕಗಳ ಸಾಫ್ಟ್ ಪ್ರತಿಯಲ್ಲಿ ಅಳವಡಿಸುವುದು.
‘ಪಠ್ಯಪುಸ್ತಕ ವಾಪಸ್ ಪಡೆಯುವುದೇ ಸರಿಯಾದ ಕ್ರಮ’
ಪಠ್ಯಪುಸ್ತಕದಲ್ಲಿ ಆಗಿರುವ ತಪ್ಪುಗಳ ಸಂಬಂಧ 62 ಪುಟಗಳ ಸಂಶೋಧನಾ ವರದಿ ಸಿದ್ಧಪಡಿಸಿರುವ ಸಂಶೋಧಕ, ಸಾಮಾಜಿಕ ಕಾರ್ಯರ್ತ ಹರ್ಷಕುಮಾರ್ ಕುಗ್ವೆಯವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಸಂಪೂರ್ಣ ಪಠ್ಯಪುಸ್ತಕವನ್ನು ವಾಪಸ್ ಪಡೆದು ಹಳೆಯ ಪಠ್ಯಪುಸ್ತಕಗಳನ್ನೇ ಮಕ್ಕಳಿಗೆ ನೀಡುವುದು ಸರಿಯಾದ ಕ್ರಮ” ಎಂದು ಪ್ರತಿಪಾದಿಸಿದರು.
“ಇಷ್ಟು ದಿನ ಶಿಕ್ಷಣ ಸಚಿವರು ತಾವು ಮಾಡಿದ್ದೆಲ್ಲ ಸರಿ ಇದೆ ಎಂದು ಮಾತನಾಡುತ್ತಿದ್ದರು. ಆದರೆ ತಪ್ಪುಗಳಿರುವುದನ್ನು ಸರ್ಕಾರ ತನ್ನ ಆದೇಶದಲ್ಲಿ ಅಧಿಕೃತವಾಗಿ ಒಪ್ಪಿಕೊಂಡಿದೆ. ದುರಾದೃಷ್ಟವಶಾತ್ ಸರ್ಕಾರ ಕೇವಲ ಎಂಟು ಅಂಶಗಳನ್ನು ಮಾತ್ರ ಪ್ರಸ್ತಾಪಿಸಿ ನಿಜವಾದ ಸಮಸ್ಯೆಯನ್ನು ಮರೆಮಾಚಿದೆ. ಕರ್ನಾಟಕದ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರವಿದು. ನೂರಾರು ಗಂಭೀರ ಲೋಪಗಳನ್ನು ಗುರುತಿಸಿ ವರದಿ ಸಿದ್ಧಪಡಿಸಿದ್ದೇವೆ. ಪ್ರತಿ ಪಠ್ಯಪುಸ್ತಕದಲ್ಲೂ ಈ ತಪ್ಪುಗಳನ್ನು ಕಾಣಬಹುದು. ಅದ್ಯಾವುದರ ಬಗ್ಗೆಯೂ ಮಾತನಾಡದೆ ಕೇವಲ ಒಂದೆರಡು ತಪ್ಪುಗಳನ್ನು ಪ್ರಸ್ತಾಪಿಸಿ ಜನರನ್ನು ಯಾಮಾರಿಸಲಾಗುತ್ತಿದೆ. ತಮ್ಮ ಅಜೆಂಡಾವನ್ನೇ ಮುಂದುವರಿಸಲು ಹೊರಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪರಿಷ್ಕರಣೆಗೆ ಸರ್ಕಾರ ಆದೇಶ ಮಾಡಿರಲಿಲ್ಲ ಎಂಬುದು ಇಂದಿನ ಆದೇಶದಲ್ಲಿ ಸ್ಪಷ್ಟವಾಗಿದೆ. ಇದು ಪರಿಶೀಲನೆಗೆ ನೇಮಿಸಿದ್ದ ಸಮಿತಿಯಾಗಿತ್ತೇ ಹೊರತು ಪರಿಷ್ಕರಣೆಗಲ್ಲ ಎಂಬುದನ್ನು ಸರ್ಕಾರ ಪರೋಕ್ಷವಾಗಿ ಒಪ್ಪಿಕೊಂಡಿದೆ. ಸರ್ಕಾರದ ಆದೇಶವಿಲ್ಲದೆ ಪರಿಷ್ಕರಣೆ ಮಾಡಿರುವುದು ಅಸಿಂಧುವಾಗುತ್ತದೆ. ಸಂಪೂರ್ಣವಾಗಿ ಪರಿಷ್ಕರಣೆಯನ್ನು ಕೈಬಿಟ್ಟು, ಈ ನಷ್ಟಕ್ಕೆ ಕಾರಣವಾದವರಿಂದಲೇ ಹಣ ವಸೂಲಿ ಮಾಡಬೇಕು” ಎಂದು ಆಗ್ರಹಿಸಿದರು.
ಶಿಕ್ಷಣ ತಜ್ಞರಾದ ಡಾ.ವಿ.ಪಿ.ನಿರಂಜನಾರಾಧ್ಯ ಅವರು ಪ್ರತಿಕ್ರಿಯೆ ನೀಡಿ, “ಸರ್ಕಾರದ ನಿರ್ಧಾರವನ್ನು ಒಪ್ಪಲು ಸಾಧ್ಯವೇ ಇಲ್ಲ. ಅಲ್ಲಿ ಇಲ್ಲಿ ಒಂಚೂರು ಬದಲಾಯಿಸುವ ಕೆಲಸ ಇದಲ್ಲ. ಇಡೀ ಪ್ರಕ್ರಿಯೆಯೇ ಅಸಾಂವಿಧಾನಿಕ, ಅಪ್ರಜಾಸತ್ತಾತ್ಮಕ ಆಗಿರುವುದರಿಂದ ಇಲ್ಲೊಂದು ಇಲ್ಲೊಂದು ವಾಕ್ಯ ಬದಲಿಸುತ್ತೇವೆ ಎನ್ನುವುದರಲ್ಲಿ ಅರ್ಥವೇ ಇಲ್ಲ. ಇಡೀ ಪ್ರಕ್ರಿಯೆಯನ್ನೇ ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
ಪಠ್ಯಪುಸ್ತಕ ಎಡವಟ್ಟಿಗೆ ಸಂಬಂಧಿಸಿದ ಕೆಲವು ವರದಿಗಳು (ಲಿಂಕ್ ಕ್ಲಿಕ್ ಮಾಡಿ)
- ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ ಡಾ. ಅನಂತಕೃಷ್ಣ…
- ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ
- ಪಠ್ಯಪುಸ್ತಕ ಹಗರಣ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೂ ಟಾರ್ಗೆಟ್?
- ನೂತನ ಪಠ್ಯ: ಘಟನೋತ್ತರ ಆದೇಶ ಸಂವಿಧಾನಬದ್ಧ ಅವಕಾಶ- ವಿನಯ್ ಬಿದರೆ ಸಮರ್ಥನೆ
- ನೂತನ ಪಠ್ಯ: ರಾಜ್ಯದ ಜಿಲ್ಲೆಗಳ ಮಾಹಿತಿಗೆ ಕತ್ತರಿ, ದೇವೇಗೌಡರ ಭಾವಚಿತ್ರ ಸೇರಿದಂತೆ ಹಲವು ವಿವರಗಳಿಗೆ ಕೋಕ್!
- ಹಳೆಯ ಪಠ್ಯಪುಸ್ತಕ ರದ್ದಿಗೆ ಹಾಕಿದರೆ ಜನರ ಕೈ ಸೇರುವ ಭಯ; ಪುಸ್ತಕಗಳನ್ನೇ ನಾಶಪಡಿಸಲು ಮುಂದಾದ ಸರ್ಕಾರ?
- ಆದೇಶ ಇಲ್ಲದೆ ಪಠ್ಯಪರಿಷ್ಕರಣೆ; ಜನಾಕ್ರೋಶದ ನಡುವೆ ‘ಪ್ರಜಾವಾಣಿ’ ವರದಿಗಳಿಗೆ ಸಚಿವ ಬಿ.ಸಿ.ನಾಗೇಶ್ ಗರಂ!
- ನೂತನ ಪಠ್ಯ ಪುಸ್ತಕ: ಐವರು ಬಿಜೆಪಿ ನಾಯಕರಿಂದ ವಿರೋಧ
- ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!
- ಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿದ ಕೃತಿ ‘ಮನುಸ್ಮೃತಿ’: ಹೊಸ ಪಠ್ಯದಲ್ಲಿ ಉಲ್ಲೇಖ!
- ಬಲಪಂಥೀಯ ಟ್ರೋಲರ್ ಒಬ್ಬನ ಕೈಗೆ ಪಠ್ಯ ಪರಿಷ್ಕರಣೆ ಜವಾಬ್ದಾರಿ..: ರೋಹಿತ್ ಚಕ್ರತೀರ್ಥ ಮಾಡಿದ ಅಸಹ್ಯದ ಪೋಸ್ಟ್ಗಳಿವು
- ಚೀನಾವೂ ಭಾರತಕ್ಕೆ ಸೇರಿತ್ತು; ಪಠ್ಯಕ್ಕೆ ನುಸುಳಿದೆ ‘ಆರ್ಎಸ್ಎಸ್ ಅಖಂಡ ಭಾರತ!’
- ’ತಾತ್ವಿಕತೆಗೆ ವಿರುದ್ಧ’: ಪಠ್ಯ ಪುಸ್ತಕದಿಂದ ಡಾ.ಆರ್.ವಿ. ಭಂಡಾರಿ ಕವನ ವಾಪಾಸು ಪಡೆದ ಕುಟುಂಬ
- ಕನ್ನಡ ದ್ರೋಹಿಯ ಮರು ಪರಿಷ್ಕರಣೆಯಲ್ಲಿ ‘ಡಾ. ರಾಜ್’ ಪಠ್ಯ ಇದ್ದರೆ, ಅವರಿಗೆ ಅವಮಾನ ಮಾಡಿದಂತೆ: ವರನಟನ ಪಾಠ ವಾಪಾಸ್
- ಪಠ್ಯ ವಿವಾದ: ದಬ್ಬಾಳಿಕೆ ಬಿಡಿ, ಇದು ಮುಂದುವರಿಯಬಾರದು- ದೇವನೂರ ಮಹಾದೇವರ ಮತ್ತೊಂದು ಪತ್ರ
- ನೂತನ ಪಠ್ಯ ಮರು ಪರಿಷ್ಕರಣೆಯಿಂದ ಸಂವಿಧಾನಕ್ಕೆ ಅಪಮಾನ: ಸಂಶೋಧನಾರ್ಥಿಗಳ ಆಕ್ಷೇಪ
- ಪಠ್ಯ ತಿರುಚೀಕರಣ ವಿವಾದ: ‘ಅಂದು’ ಮತ್ತು ‘ಇಂದು’ ಏನಾಗಿದೆ ಎಂದು ನೋಡೋಣ ಬನ್ನಿ!
- ಚಕ್ರತೀರ್ಥ ಸಮಿತಿ ಎಡವಟ್ಟು: ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಸೇರಿದಂತೆ ಮಹಿಳಾ ಸಮಾಜ ಸುಧಾರಕಿಯರ ಪಠ್ಯ ತೆರವು
- ಚಕ್ರತೀರ್ಥ ಹೇಳಿದ್ದು ಸುಳ್ಳು: 10ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿಲ್ಲ ನಾರಾಯಣಗುರು, ಪೆರಿಯಾರ್ ಪಾಠ!
- ಪಠ್ಯದಲ್ಲಿ ಜಾತಿ, ಪಕ್ಷ ರಾಜಕಾರಣ ಹೆಡೆಯಾಡಬಾರದು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಆಕ್ರೋಶ
- ಸಮಾಜ ವಿಜ್ಞಾನ: ‘ಅಂಬೇಡ್ಕರ್’ ಪಠ್ಯದಲ್ಲಿ ಕತ್ತರಿ ಪ್ರಯೋಗ ಮಾಡಿದ ‘ಚಕ್ರತೀರ್ಥ’ ಸಮಿತಿ
- ಪಠ್ಯ ವಿವಾದ: ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ 4 ಸುಳ್ಳುಗಳು
- ‘ಸಚಿವ ಬಿಸಿ ನಾಗೇಶ್ ತಪ್ಪು ಮಾಹಿತಿ ನೀಡಿದ್ದಾರೆ’: ಪಠ್ಯಪುಸ್ತಕದ ಬಗ್ಗೆ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ
- ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್ಗಳು ಸ್ಪಂದಿಸಿದ್ದು ಹೀಗೆ…
- ಬ್ರಾಹ್ಮಣರ ಪಠ್ಯಗಳನ್ನು ಕನ್ನಡ ಮಕ್ಕಳು ಏಕೆ ಓದಬೇಕು?
- ಪಠ್ಯ ಪರಿಶೀಲನೆಗೆ ಚಕ್ರತೀರ್ಥ: ನಾಡಗೀತೆಗೆ ಅವಮಾನ ಮಾಡಿದ್ದ ಪೋಸ್ಟ್ ಮತ್ತೆ ವೈರಲ್
- ಪಠ್ಯ ಸೇರುತ್ತಿರುವ ಹೆಡಗೇವಾರ್ ಯಾರು? ಅವರ ಸಿದ್ದಾಂತವೇನು?
- ರಹಸ್ಯ ಕಾರ್ಯಸೂಚಿಗಳನ್ನು ಒಳಗೊಂಡ ನೂತನ ಪಠ್ಯಪುಸ್ತಕಗಳು ಬೇಕೆ?
- ‘ಸಂಸ್ಕೃತಿ ಇಲ್ಲದವರು ಕಾಡುಜನರಂತೆ ಇರುವರು’: ಪರಿಷ್ಕೃತ ಪಠ್ಯದಲ್ಲಿ ಸ್ವಾಮಿ ವಿವೇಕಾನಂದರ ಪಾಠ ಸಂಪೂರ್ಣ ಬದಲು
- ‘ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು’: ನೂತನ ಪಠ್ಯದಲ್ಲಿ ಹೆಣ್ಣನ್ನು ಕೀಳಾಗಿ ಬಿಂಬಿಸಿರುವ ಬನ್ನಂಜೆ ಗೋವಿಂದಾಚಾರ್ಯ
- ತ್ರಿವರ್ಣ ಧ್ವಜ v/s ಭಗವಾಧ್ವಜ: ಹೆಡಗೇವಾರ್ ಮೂಲಪಠ್ಯವನ್ನೇ ತಿರುಚಿದ ಚಕ್ರತೀರ್ಥ ಸಮಿತಿ; ಇಲ್ಲಿದೆ ನೋಡಿ ಸಾಕ್ಷಿ!
- ಭಾಷಾಪಠ್ಯದಲ್ಲಿ ಸಾಮಾಜಿಕ ನ್ಯಾಯ, ಲಿಂಗಸಮಾನತೆ ತುರುಕಬಾರದು: ರೋಹಿತ್ ಚಕ್ರತೀರ್ಥ ಸಮಿತಿ
- ಚಕ್ರತೀರ್ಥ ಪೂರ್ವಗ್ರಹ ಪೀಡಿತರಾಗಿದ್ದಾರೆ: ಪಠ್ಯ ಪರಿಶೀಲನೆಯಲ್ಲಿನ ಎಡವಟ್ಟುಗಳಿಗೆ ಇತಿಹಾಸ ತಜ್ಞರ ಆಕ್ಷೇಪ
- ವಿಶೇಷ ವರದಿ; ಬಲಪಂಥೀಯ ರಾಜಕಾರಣದಲ್ಲಿ ಪಠ್ಯ ಪರಿಷ್ಕರಣೆ


