Homeಕರ್ನಾಟಕಹಳೆಯ ಪಠ್ಯಪುಸ್ತಕ ರದ್ದಿಗೆ ಹಾಕಿದರೆ ಜನರ ಕೈ ಸೇರುವ ಭಯ; ಪುಸ್ತಕಗಳನ್ನೇ ನಾಶಪಡಿಸಲು ಮುಂದಾದ ಸರ್ಕಾರ?

ಹಳೆಯ ಪಠ್ಯಪುಸ್ತಕ ರದ್ದಿಗೆ ಹಾಕಿದರೆ ಜನರ ಕೈ ಸೇರುವ ಭಯ; ಪುಸ್ತಕಗಳನ್ನೇ ನಾಶಪಡಿಸಲು ಮುಂದಾದ ಸರ್ಕಾರ?

- Advertisement -
- Advertisement -

ಯಾವುದೇ ಅಧಿಕೃತ ಆದೇಶವಿಲ್ಲದೆ ಪಠ್ಯ ಪರಿಷ್ಕರಣೆ ಮಾಡಿರುವುದು ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ, ಹಲವಾರು ತಪ್ಪುಗಳನ್ನು ಹೊಂದಿರುವ ಹೊಸ ಪಠ್ಯಪುಸ್ತಕಗಳನ್ನೇ ಮಕ್ಕಳಿಗೆ ವಿತರಿಸಲು ಸರ್ಕಾರ ನಿರ್ಧರಿಸಿದಂತಿದೆ. ಜೊತೆಗೆ ಹಳೆಯ ಪಠ್ಯಪುಸ್ತಕಗಳನ್ನು ರದ್ದಿಗೆ ಹಾಕಿದರೂ ಜನರ ಕೈ ಸೇರಬಾರದೆಂದು ಸರ್ಕಾರ ನಿರ್ಧರಿಸಿದೆ.

ಈ ಕುರಿತು ತನಿಖಾ ಸುದ್ದಿಗಳ ಜಾಲತಾಣ ‘ದಿ ಫೈಲ್‌’ ವಿಶೇಷ ವರದಿ ಮಾಡಿದ್ದು, “83 ಶೀರ್ಷಿಕೆಗಳ ಒಟ್ಟು 6,76,997 ಪಠ್ಯಪುಸ್ತಕಗಳು 2022-23ನೇ ಸಾಲಿನಿಂದ ಅನುಪಯುಕ್ತವಾಗುತ್ತವೆ. ಈ ಪಠ್ಯಪುಸ್ತಕಗಳ ಅಂದಾಜು ಮೌಲ್ಯ 2.5 ಕೋಟಿ ರೂ. ಆಗುತ್ತದೆ. ಈ ಪುಸ್ತಕಗಳನ್ನು ನಿಯಮಾನುಸಾರ ಹರಾಜು ಹಾಕಿ ಬಂದ ಹಣವನ್ನು ಕರ್ಣಾಟಕ ಪಠ್ಯಪುಸ್ತಕ ಸಂಘಕ್ಕೆ ಜಮಾ ಮಾಡಿಕೊಳ್ಳಲು ಅನುಮತಿ ನೀಡುವುದು ಎಂದು ಕೋರಿರುತ್ತಾರೆ. ಆದರೆ ಹರಾಜು ಹಾಕಿದರೆ ಈ ಪಠ್ಯಪುಸ್ತಕಗಳನ್ನು ಬೇರೆಯವರಿಗೆ ಮರು ಮಾರಾಟವಾಗದ ರೀತಿ ಅಥವಾ ಬೇರೆಯವರಿಗೆ ದೊರಕದ ಹಾಗೆ ಕ್ರಮವಹಿಸಿದ್ದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಕಾರ್ಯ ಯಶಸ್ವಿಯಾಗುತ್ತದೆ. ತಪ್ಪಿದ್ದಲ್ಲಿ ಈ ಪುಸ್ತಕಗಳು ಓದುಗರ ಕೈ ಸೇರಿದರೆ ಸದರಿ ಕಾರ್ಯ ಯಶಸ್ವಿಗೆ ತಡೆಯಾಗಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅಲ್ಲದೆ 2.5 ಕೋಟಿ ರೂ. ನಷ್ಟವಾಗುವ ಹಿನ್ನಲೆಯಲ್ಲಿ ಈ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಬೇಕು” ಎಂದು ಟಿಪ್ಪಣಿಯ ಹಾಳೆಗಳು ಹೇಳಿರುವುದಾಗಿ ತಿಳಿದುಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

PC: The File

“2022-23ನೇ ಸಾಲಿಗೆ ಇಷ್ಟು ಪ್ರಮಾಣದ ಪಠ್ಯಪುಸ್ತಕಗಳನ್ನು ಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ಹಂಚಿಕೆಯಾಗುವ ಹೊತ್ತಿಗೆ ಶೈಕ್ಷಣಿಕ ವರ್ಷ ಆರಂಭವಾಗುವುದರಿಂದ ಪಠ್ಯಪುಸ್ತಕ ವಿತರಣೆ ಕಾರ್ಯ ವಿಳಂಬವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಲಿದೆ” ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗಳನ್ನು ಮಾಡುತ್ತಿದ್ದ  ರೋಹಿತ್ ಚಕ್ರತೀರ್ಥ‌ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿದ್ದು ಚರ್ಚೆಗೆ ಗ್ರಾಸವಾಯಿತು. ಸಮಿತಿಯು ಪಠ್ಯಪುಸ್ತಕಗಳಲ್ಲಿ ತಂದಿರುವ ಬದಲಾವಣೆಗಳು, ಮಾಡಿರುವ ತಪ್ಪುಗಳು ಒಂದೊಂದಾಗಿ ಹೊರಬೀಳುತ್ತಲೇ ಇವೆ. ಜನ ದುರ್ಬೀನು ಹಾಕಿ ಓದುತ್ತಿದ್ದಾರೆ.

ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ದ್ರಾವಿಡ ಚಳವಳಿಯ ಪೆರಿಯಾರ್ ರಾಮಸ್ವಾಮಿ ನಾಯ್ಕರ್‌‌, ವಚನಕಾರ ಬಸವಣ್ಣ, ಆದಿ ಶಂಕರಾಚಾರ್ಯ, ಮಹಾಕವಿ ವಾಲ್ಮೀಕಿ, ಸಮಾಜ ಸುಧಾರಕ ನಾರಾಯಣಗುರು, ದಲಿತ ಬರಹಗಾರರು, ಸುರಪುರ ನಾಯಕರ ಇತಿಹಾಸ, ಭಕ್ತಿ ಪಂಥ, ಮಹಿಳಾ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ, ಬನ್ನಂಜೆ ಗೋವಿಂದಾಚಾರ್ಯ, ಹೆಡಗೇವಾರ್- ಹೀಗೆ ವಿವಾದದ ಸರಮಾಲೆಗೆ ಹೊಸ ಹೊಸ ವಿಷಯಗಳು ಸೇರಿಕೊಳ್ಳುತ್ತಲೇ ಇವೆ. ಇದು ಇಲ್ಲಿಗೆ ನಿಲ್ಲುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲ. ಹೊಸ ಪಠ್ಯಪುಸ್ತಕಗಳನ್ನು ರದ್ದು ಮಾಡಿ ಹಳೆಯ ಪಠ್ಯಗಳನ್ನೇ ವಿತರಿಸುವ ಮನಸ್ಸನ್ನು ಸರ್ಕಾರ ಮಾಡುತ್ತಿಲ್ಲ. ಹಳೆಯ ಪಠ್ಯಪುಸ್ತಕಗಳು ಜನರ ಕೈಗೆ ಸಿಗಲೇಬಾರದೆಂದು ಸರ್ಕಾರ ಹೊರಟಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿರಿ: ನೂತನ ಪಠ್ಯ ಪುಸ್ತಕ: ಐವರು ಬಿಜೆಪಿ ನಾಯಕರಿಂದ ವಿರೋಧ

ಈ ವಿವಾದಗಳ ನಡುವೆ ಆದೇಶವಿಲ್ಲದೆ ಪಠ್ಯಪರಿಷ್ಕರಣೆಯಾಗಿರುವ ಕುರಿತು ವರದಿಯಾಗಿದೆ. 2022–23ನೇ ಸಾಲಿಗೆ ಪರಿಷ್ಕೃತ ಪಠ್ಯಪುಸ್ತಕಗಳನ್ನುಮುದ್ರಿಸಿ ವಿತರಿಸುವ ಬಗ್ಗೆ ಮಾರ್ಚ್‌ 9 ರಂದು ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ, ‘ಪಠ್ಯಪುಸ್ತಕಗಳನ್ನು ಪರಿಷ್ಕೃತಗೊಳಿಸಿರುವುದಕ್ಕೆ ಘಟನೋತ್ತರ ಅನುಮತಿ ನೀಡಿ, ಮುದ್ರಿಸಲು ಸೂಚಿಸಲಾಗಿದೆ’ ಎಂಬ ವಿಷಯ ಬಯಲಾಗಿದೆ.

ಸರ್ಕಾರದ ಕೆಲಸವನ್ನೋ ಅಥವಾ ಕಾಮಗಾರಿಗೆ ಅನುದಾನ ಕೊಡಿಸಿಯೇ ತೀರುವೆ ಎಂಬ ವಿಶ್ವಾಸ ಇರುವ ಮುಖ್ಯಮಂತ್ರಿ ಅಥವಾ ಸಚಿವರು ಅಧಿಕೃತ ಆದೇಶ ಇಲ್ಲದೇ ಕೆಲಸ ಮಾಡಿಸುತ್ತಾರೆ. ಕೆಲಸ ಮುಗಿದ ಮೇಲೆ ಘಟನೋತ್ತರ ಅನುಮತಿ/ ಆದೇಶ ಹೊರಡಿಸುವ ಪರಿಪಾಟ ಇದೆ. ಮೌಖಿಕ ಸೂಚನೆ ಮೇರೆಗೆ ಪಠ್ಯಪುಸ್ತಕ ಪರಿಷ್ಕರಣೆಗೆ ಅವಕಾಶ ಕೊಟ್ಟು, ಬಳಿಕ ಆದೇಶ ಹೊರಡಿಸಿರುವುದು ತಕರಾರಿಗೆ ಕಾರಣವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...