Homeದಲಿತ್ ಫೈಲ್ಸ್ಕರ್ನಾಟಕ: ದಲಿತರನ್ನು ಪ್ರಭಾವಿಸಲು ಭಾರತ್‌ ಜೋಡೋ ಯಾತ್ರೆ ಯತ್ನಿಸಿದ್ದು ಹೀಗೆ...

ಕರ್ನಾಟಕ: ದಲಿತರನ್ನು ಪ್ರಭಾವಿಸಲು ಭಾರತ್‌ ಜೋಡೋ ಯಾತ್ರೆ ಯತ್ನಿಸಿದ್ದು ಹೀಗೆ…

- Advertisement -
- Advertisement -

“ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಕುರಿತು ವರದಿ ಸಲ್ಲಿಸಲು ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಸಮಿತಿ ನೇಮಿಸಿದ್ದು ಕಾಂಗ್ರೆಸ್ ಸರ್ಕಾರ, ಯಾವುದೇ ನೆಪ ಹೇಳದೆ ಬಿಜೆಪಿ ಸರ್ಕಾರ ಈ ವರದಿಯನ್ನು ಕೂಡಲೇ ಜಾರಿಗೆ ತರಬೇಕು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಳ್ಳಾರಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಆಗ್ರಹಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತಗಳು ನಿರ್ಣಾಯಕವಾಗಿರುವುದರಿಂದ ಬಿಜೆಪಿ ಈಗ ಮೀಸಲಾತಿ ಹೆಚ್ಚಳದ ಚರ್ಚೆಯನ್ನು ಚುನಾವಣೆ ಹೊಸ್ತಿಲಲ್ಲಿ ಹುಟ್ಟುಹಾಕಿದೆ. ಒಳಮೀಸಲಾತಿಯ ಜಾರಿಯ ಮಾತುಗಳನ್ನು ಆಡುತ್ತಿದ್ದಾರೆ. ಜಸ್ಟೀಸ್ ನಾಗಮೋಹನ ದಾಸ್ ಅವರ ವರದಿ ಬಹಿರಂಗಗೊಂಡು ಮುಕ್ತ ಚರ್ಚೆಯೂ ಆಗಿಲ್ಲ. ಹಾಗೆಯೇ ಒಳಮೀಸಲಾತಿಯನ್ನು ಶಿಪಾರಸ್ಸು ಮಾಡಿರುವ ಜಸ್ಟೀಸ್‌ ಎ.ಜೆ.ಸದಾಶಿವ ಆಯೋಗದ ವರದಿ ಕೂಡ ಸಾರ್ವಜನಿಕವಾಗಿ ಬಿಡುಗಡೆಯಾಗಿಲ್ಲ. ಬಿಜೆಪಿ ನಾಯಕರು ದಲಿತರ ಮತಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಸರತ್ತುಗಳನ್ನು ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಕೂಡ ಹಿಂದೆ ಬೀಳದೆ ದಲಿತ ಸಂಬಂಧಿತ ಸಂಗತಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ. ರಾಹುಲ್‌ ಗಾಂಧಿಯವರು ಕೈಗೊಂಡಿರುವ ‘ಭಾರತ್‌ ಜೋಡೋ ಯಾತ್ರೆ’ಯಲ್ಲಿಯೂ ದಲಿತ ಕೇಂದ್ರಿತ ವಿಚಾರಗಳು ಕೊಂಚ ಮುನ್ನೆಲೆಗೆ ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್‌ 30ರಂದು ಕರ್ನಾಟಕವನ್ನು ಪ್ರವೇಶಿಸಿತು. ಅಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಸಂವಿಧಾನ ಪ್ರಸ್ತಾವನೆಯ ಚಿತ್ರವನ್ನು ರಾಹುಲ್‌ ಗಾಂಧಿಯವರ ಜೊತೆಯಲ್ಲಿ ನಿಂತು ಪ್ರದರ್ಶಿಸಿದರು. ಭಾರತ್‌ ಜೋಡೋಕ್ಕೆ ದೇವನೂರರ ಬೆಂಬಲ ವ್ಯಕ್ತವಾಗುತ್ತಿದ್ದಂತೆ ‘ಕಾಂಗ್ರೆಸ್‌ ಪಕ್ಷವು ದಲಿತರಿಗೆ ಏನು ಮಾಡಿದೆ? ದಲಿತರು ಕಾಂಗ್ರೆಸ್‌ಅನ್ನು ಬೆಂಬಲಿಸಬೇಕೆ?’ ಎಂಬ ಚರ್ಚೆಗಳು ಬಿರುಸು ಪಡೆದವು. (ಕಾಂಗ್ರೆಸ್, ಕಾಂಗ್ರೆಸ್ಸೇತರ ಪಕ್ಷಗಳು ಹಾಗೂ ದಲಿತ ರಾಜಕಾರಣವನ್ನು ಮುಖ್ಯವಾಗಿಟ್ಟುಕೊಂಡು ‘ಭಾರತ್ ಜೋಡೋ ಜೊತೆಗೆ ದಲಿತರನ್ನೂ ಬೆಸೆಯಬಹುದೇ ಕಾಂಗ್ರೆಸ್?’ ಎಂಬ ವರದಿಯನ್ನು ‘ನಾನುಗೌರಿ.ಕಾಂ’ ಹಾಗೂ ‘ನ್ಯಾಯಪಥ’ ವಾರಪತ್ರಿಕೆ ಮಾಡಿರುವುದನ್ನು ಆವಲೋಕಿಸಬಹುದು).

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಹಿರಿಯ ದಲಿತ ಚಿಂತಕರಾದ ಇಂಧೂದರ ಹೊನ್ನಾಪುರ, “ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿ ಸರ್ವಾಧಿಕಾರಿಯಂತೆ ವರ್ತಿಸಿದರು. ಆದರೆ ಅದಕ್ಕೆ ಆಡಳಿತಾತ್ಮಕ ಒಪ್ಪಿಗೆ ಪಡೆದಿದ್ದರು. ಆದರೆ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ನರಮಂಡಲವನ್ನೇ ನಿಯಂತ್ರಿಸುವ ಕೆಲಸ ನಡೆಯುತ್ತಿದೆ. ಇಂದಿನ ಕಾಂಗ್ರೆಸ್ ನಡೆ ಜನಪರವಾಗಿರುವಂತೆ ತೋರುತ್ತಿದೆ. ಅಧಿಕಾರ ಮರಳಿ ಪಡೆಯುವ ಆಸೆ ಕಾಂಗ್ರೆಸ್‌ಗೆ ಇರಬಹುದು. ಅಷ್ಟಕ್ಕೆ ಸರಿ ತಪ್ಪುಗಳ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ದೇಶದ ಉಳಿವಿಗಾಗಿ, ಅಲ್ಪಸ್ವಲ್ಪವಾದರೂ ಪ್ರಜಾಸತ್ತಾತ್ವಕ ಮೌಲ್ಯಗಳನ್ನು ಕಾಪಾಡುವುದಕ್ಕಾಗಿ ಕಾಂಗ್ರೆಸ್ ಅನಿವಾರ್ಯವಾಗಿದೆ” ಎಂದು ತಿಳಿಸಿದ್ದರು.

ದಸಂಸ ಮುಖಂಡರಾದ ಗುರುಪ್ರಸಾದ್ ಕೆರೆಗೋಡು ಮಾತನಾಡಿ, “ನಾವು ಕಾಂಗ್ರೆಸ್ ಪಕ್ಷಕ್ಕಾಗಿ ಈ ಯಾತ್ರೆಗೆ ಬೆಂಬಲ ಸೂಚಿಸುತ್ತಿಲ್ಲ. ನಮ್ಮ ಬೆಂಬಲ ಜಾತಿ, ಧರ್ಮ, ದೇವರು, ಗಡಿ, ಭಾಷೆ ಮೊದಲಾದ ಭಾವನಾತ್ಮಕ ವಿಷಯಗಳಿಂದ ಭಾವೈಕ್ಯ ಭಾರತವನ್ನು ಒಡೆದು ಛಿದ್ರಗೊಳಿಸಿರುವ ಭಾರತವನ್ನು ಜೋಡಿಸುವುದಷ್ಟೆ. ಇಂತಹ ಕಾರ್ಯ ಯಾರೂ ಮಾಡಿದರೂ ನಮ್ಮ ಬೆಂಬಲವಿದೆ” ಎಂದು ಸ್ಪಷ್ಟಪಡಿಸಿದ್ದರು. ದಲಿತ ಚಳವಳಿಯ ಮುಂಚೂಣಿಯಲ್ಲಿದ್ದ ಅನೇಕ ಹಿರಿಯ ನಾಯಕರು ‘ಭಾರತ್‌ ಜೋಡೋ’ವನ್ನು ಬೆಂಬಿಲಿಸಿದ್ದಾರೆ. ಪಾದಯಾತ್ರೆಯಲ್ಲಿ ಹೆಜ್ಜೆಯನ್ನೂ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿಯೂ ಕೂಡ ದಲಿತ ಮತಗಳ ಬುಟ್ಟಿಗೆ ಕೈ ಹಾಕಿದೆ. (ವಿವರಗಳಿಗೆ ‘ರಾಜ್ಯ ರಾಜಕಾರಣದಲ್ಲಿ ದಲಿತರನ್ನು ಒಡೆದು ಆಳುವುದು ಸುಲಭವೇ?’ ಲೇಖನ ಓದಬಹುದು)

ರಾಹುಲ್‌ ಅವರು ಗಾಂಧಿ ಜಯಂತಿಯಂದು ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದರು. ಮಹಾತ್ಮ ಗಾಂಧೀಜಿಯವರು ಈ ಗ್ರಾಮಕ್ಕೆ ಭೇಟಿ ನೀಡಿದ್ದ ಇತಿಹಾಸ ಒಂದು ಕಡೆ ಇದ್ದರೆ, 1993ರಲ್ಲಿ ಹತ್ಯೆಗಳಿಗೂ ಸಾಕ್ಷಿಯಾದ ಕರಾಳ ಇತಿಹಾಸ ಈ ಗ್ರಾಮಕ್ಕಿದೆ. ಬದನವಾಳು ಗ್ರಾಮದಲ್ಲಿನ ಸಿದ್ದೇಶ್ವರ ದೇವಸ್ಥಾನ ನವೀಕರಣಗೊಂಡ ನಂತರ ಉದ್ಘಾಟನೆಗೆ ದಲಿತರನ್ನು ಆಹ್ವಾನಿಸಿರಲಿಲ್ಲ. ಅಂತಿಮವಾಗಿ ಈ ವಿಚಾರ ಗಂಭೀರ ತಿರುವು ಪಡೆದುಕೊಂಡು ದೇವಸ್ಥಾನಕ್ಕೆ ಬೀಗ ಮುದ್ರೆ ಹಾಕಲಾಗಿತ್ತು. 1993ರ ಜನವರಿ 30ರಂದು ಶಾಂತಿ ಸಮಿತಿ ರಚಿಸಲಾಗಿತ್ತು. ಅದರಂತೆ 1993 ಫೆಬ್ರವರಿ 2ರಂದು ದಲಿತರು ಪೊಲೀಸರ ಸಹಕಾರದಿಂದ ದೇವಸ್ಥಾನದ ಬೀಗ ಒಡೆದು ಒಳಪ್ರವೇಶಿಸಿದ್ದರು. ಈ ಘಟನೆಯ ಬಳಿಕ 1993ರ ಮಾರ್ಚ್ 26ರಂದು ದೇವಸ್ಥಾನದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಸಲುವಾಗಿ ದೇವಸ್ಥಾನದಿಂದ ಒಂದು ಕಿ.ಮೀ. ದೂರದಲ್ಲಿ ಪ್ರಾಣಿ ಬಲಿ ಕೊಡಲು ದಲಿತ ಸಮುದಾಯ ನಿರ್ಧರಿಸಿತು. ಇದಕ್ಕೆ ಸಂಬಂಧಿಸಿದಂತೆ ಅನುಮತಿ ನೀಡುವಂತೆ ಪೊಲೀಸರಲ್ಲಿ ಮನವಿ ಸಲ್ಲಿಸಿದ್ದರು.

ಇದರಿಂದ ರೊಚ್ಚಿಗೆದ್ದ ವೀರಶೈವ ಸಮುದಾಯದ ಜನರು 1993 ಮಾರ್ಚ್ 25ರಂದು ಹಣಿಯಂಬಳ್ಳಿ ಹಾಗೂ ಬದನವಾಳುವಿನ 1.5 ಕಿ.ಮೀ ಉದ್ದದ ರಸ್ತೆ ಮಾರ್ಗದಲ್ಲಿ ಪ್ರಭುಸ್ವಾಮಿ ಎಂಬುವವರ ಜಮೀನಿನ ಹತ್ತಿರ ದಲಿತರ ಮೇಲೆ ಹಲ್ಲೆ ನಡೆಸಿದರು. ಅಂದು ಕ್ರಿಕೆಟ್ ಪಂದ್ಯ ಮುಗಿಸಿ ವಾಪಸ್ ಆಗುತ್ತಿದ್ದ ದಲಿತ ವರ್ಗದವರ ಮೇಲೆ ಮೇಲ್ವರ್ಗದ ಜನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಈ ಘಟನೆಯಲ್ಲಿ ಮಧುಕರ್, ನಟರಾಜ್ ಮತ್ತು ನಾರಾಯಣಸ್ವಾಮಿ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣದ ಸಂಬಂಧ ಹೈಕೋರ್ಟ್ ಅಂತಿಮವಾಗಿ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಈ ಕರಾಳ ಇತಿಹಾಸದ ನೋವನ್ನು ಮರೆತು ಸಾಮರಸ್ಯ ಸಾರುವ ಕೆಲಸಕ್ಕೆ ರಾಹುಲ್‌ ಹೆಜ್ಜೆ ಇಟ್ಟಿದ್ದರು. ಮೂರು ದಶಕಗಳ ನಂತರ ಎರಡೂ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಸೌಹಾರ್ದ ಕೂಟ ನಡೆಸಿದರು. ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಹಲವಾರು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ಬಂದ್ ಆಗಿದ್ದ ರಸ್ತೆಗೆ ‘ಭಾರತ್ ಜೋಡೋ ರಸ್ತೆ’ ಎಂದು ಹೆಸರಿಸಲಾಯಿತು.

ದಲಿತ ಬಾಲಕನೊಬ್ಬ ದೇವರ ಗುಜ್ಜುಗೋಲು ಮುಟ್ಟಿದ ಕಾರಣಕ್ಕೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ದಲಿತ ಕುಟುಂಬಕ್ಕೆ ಸವರ್ಣೀಯರು ಬಹಿಷ್ಕಾರ ಹಾಕಿದ್ದರು. 60 ಸಾವಿರ ರೂ. ದಂಡ ಕಟ್ಟಬೇಕು ಎಂದು ತಾಕೀತು ಮಾಡಿದ್ದರು. ರಾಷ್ಟ್ರಮಟ್ಟದಲ್ಲಿಯೂ ಈ ಘಟನೆ ವರದಿಯಾಯಿತು. ಉಳ್ಳೇರಹಳ್ಳಿ ಚಲೋವನ್ನು ದಲಿತರು ಹಮ್ಮಿಕೊಂಡಿದ್ದರು. ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ವಹಿಸಿದರು. ಇದರ ಹಿನ್ನೆಲೆಯಲ್ಲಿ ಬಹಿಷ್ಕಾರಕ್ಕೆ ಒಳಗಾದ ಕುಟುಂಬವನ್ನು ಭಾರತ್‌ ಜೋಡೋಗೆ ಕರೆತಂದ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿಸಿದರು. ದಲಿತ ಕುಟುಂಬವು ರಾಹುಲ್ ಗಾಂಧಿಯವರ ಜೊತೆಗಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಉಳ್ಳೇರಹಳ್ಳಿಯ ದಲಿತ ಬಾಲಕ ಹಾಗೂ ತಾಯಿಯೊಂದಿಗೆ ರಾಹುಲ್ ಗಾಂಧಿ.

 

ಬಾಲಕನ ಪೋಷಕರಿಗೆ ಧೈರ್ಯ ತುಂಬಿದ ರಾಹುಲ್, “ಕಾಂಗ್ರೆಸ್ ಪಕ್ಷ ನಿಮ್ಮ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ; ದೇಶದ ಜಾತ್ಯಾತೀತತೆಯ ಭದ್ರಕೋಟೆಯಾಗಿರುವ ಸಂವಿಧಾನವೇ ನಮ್ಮ ಏಕೈಕ ರಕ್ಷಕ” ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. “ಕಾಂಗ್ರೆಸ್ ಪಕ್ಷವು ತನ್ನ ಪಾದಯಾತ್ರೆಯ ಮೂಲಕ ಈ ದೇಶದ ಜಾತಿವಾದದ ವಿರುದ್ಧ ಹೋರಾಡುತ್ತಿದೆ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಜನರನ್ನು ಒಗ್ಗೂಡಿಸುತ್ತದೆ” ಎಂದು ಕುಟುಂಬಕ್ಕೆ ತಿಳಿಸಿದ್ದಾರೆ.

ತುರುವೇಕೆರೆಗೆ ಭಾರತ್‌ ಜೋಡೋ ಯಾತ್ರೆ ಪ್ರವೇಶಿಸಿದಾಗ ದಲಿತ ಮುಖಂಡ ದಂಡಿನಶಿವರ ಕುಮಾರ್ ಅವರು ಬುದ್ಧನ ಮೂರ್ತಿಯನ್ನು ರಾಹುಲ್‌ ಗಾಂಧಿಯವರಿಗೆ ನೀಡಿದರು.

ಎಲ್ಲ ಜಾತಿ, ಧರ್ಮದ ಜನರನ್ನು ಬೆಸೆಯಬೇಕೆಂದು ರಾಹುಲ್ ಗಾಂಧಿಯವರು ಹೇಳುತ್ತಿದ್ದಾರೆ. ಮತ್ತೊಂದೆಡೆ ಆಡಳಿತರೂಢ ಬಿಜೆಪಿಯವರು ಮೀಸಲಾತಿಯ ಅಸ್ತ್ರವನ್ನು ಬಿಟ್ಟಿದ್ದಾರೆ. ಹೀಗಾಗಿ ‘ಮೀಸಲಾತಿ ಹೆಚ್ಚಳಕ್ಕೆ ನಾಂದಿಯಾಡಿದ್ದು ಕಾಂಗ್ರೆಸ್‌’ ಎಂಬ ಹೇಳಿಕೆಯನ್ನು ರಾಹುಲ್‌ ನೀಡಿದ್ದಾರೆ.

ಇದನ್ನೂಓದಿರಿ: ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ದಲಿತ, ಆದಿವಾಸಿ, ಒಬಿಸಿ ಮುಖ್ಯಸ್ಥರಿಲ್ಲ: ವರದಿ

2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಯ ಜನರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಣನೀಯವಾಗಿ ಹೆಚ್ಚಿದ್ದಾರೆ. ಕೋಲಾರ 30.32 %, ಚಾಮರಾಜನಗರ 25.42 %, ಕಲಬುರಗಿ 25.28 %, ಚಿಕ್ಕಬಳ್ಳಾಪುರ 24.90 %, ಬೀದರ್‌ 23.47 %, ಚಿತ್ರದುರ್ಗ 23.45 %, ಯಾದಗಿರಿ 23.28 %, ಚಿಕ್ಕಮಗಳೂರು 22.29 %, ಬೆಂಗಳೂರು ರೂರಲ್‌ 21.57%, ಬಳ್ಳಾರಿ 21.10%, ರಾಯಚೂರು 20.79 %, ಬಿಜಾಪುರ 20.34 %, ದಾವಣಗೆರೆ 20.18% ಪರಿಶಿಷ್ಟರು ಇದ್ದರೆ, ಪರಿಶಿಷ್ಟ ಪಂಗಡಗಳು ಹಲವು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಯಚೂರು 19.03 %, ಬಳ್ಳಾರಿ 18.41 %, ಚಿತ್ರದುರ್ಗ 18.23 %, ಬೀದರ್‌ 13.85 %, ಯಾದಗಿರಿ 12.51 %, ಚಿಕ್ಕಬಳ್ಳಾಪುರ 12.47 %, ದಾವಣಗೆರೆ 11.98 %, ಕೊಪ್ಪಳ 11.82 %, ಚಾಮರಾಜನಗರ 11.78 %, ಮೈಸೂರು 11.15 %, ಕೊಡಗು 10.47 % ಪರಿಶಿಷ್ಟ ಪಂಗಡಗಳನ್ನು ಹೊಂದಿವೆ.

ಭಾರತ್ ಜೋಡೋ ಯಾತ್ರೆಯು ಎಸ್‌ಸಿ, ಎಸ್‌ಟಿಗಳು ಹೆಚ್ಚಿರುವ ಹಲವು ಜಿಲ್ಲೆಗಳಲ್ಲಿ ಸಾಗಿ ಹೋಗುತ್ತಿದೆ. ಬಳ್ಳಾರಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮೀಸಲಾತಿಯ ಕುರಿತು ರಾಹುಲ್ ಮಾತನಾಡಿರುವುದರ ಹಿಂದೆಯೂ ಈ ಸಮುದಾಯಗಳ ಲೆಕ್ಕಾಚಾರ ಇದೆ. ಆದರೆ ಬಿಜೆಪಿ ಹೆಣೆಯುತ್ತಿರುವ ಜಾತಿ ಸಮೀಕರಣದ ತಂತ್ರಗಾರಿಕೆಯನ್ನು ಕಾಂಗ್ರೆಸ್ ಯಾವ ನೆಲೆಯಲ್ಲಿ ಎದುರಿಸುತ್ತದೆ ಎಂಬುದು ಸ್ಪಷ್ಟವಾಗುತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....