Homeಮುಖಪುಟಈ ಡಬಲ್‌ ಇಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ: ದೇವನೂರ ಮಹಾದೇವ

ಈ ಡಬಲ್‌ ಇಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ: ದೇವನೂರ ಮಹಾದೇವ

ಈ ಡಬಲ್‌ ಇಂಜಿನ್‌ ಸರ್ಕಾರ ಮಾಡಿದ್ದೇನು? ಬೆಲೆ ಏರಿಕೆ ಅಭಿವೃದ್ಧಿ, ನಿರುದ್ಯೋಗದ ಏರಿಕೆ ಅಭಿವೃದ್ಧಿ, ಬಡತನದ ಏರಿಕೆ ಅಭಿವೃದ್ಧಿ, ಬಡವ ಬಲ್ಲಿದರ ನಡುವೆ ಅಂತರ ಏರಿಕೆ ಅಭಿವೃದ್ಧಿಯಾಗಿದೆ.

- Advertisement -
- Advertisement -

ಒಂದು ಇಂಜಿನ್‌ನಲ್ಲಿ ದ್ವೇಷ ತುಂಬಿಕೊಂಡಿದೆ. ಇನ್ನೊಂದು ಇಂಜಿನ್‌ ನುಂಗುವುದನ್ನು ಮಾಡುತ್ತಿದೆ. ಇಂಜಿನ್‌ ಜೋರಾಗಿ ಸದ್ದು ಮಾಡುತ್ತಿವೆ. ಅದು ಚಲಿಸುತ್ತಲೇ ಇಲ್ಲ. ಹಾಗಾಗಿ ಈ ಡಬಲ್‌ ಇಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಎದ್ದೇಳು ಕರ್ನಾಟಕ ನಾಗರೀಕ ಅಭಿಯಾನ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂದು ಮತದಾರರು ಹೆಚ್ಚು ಜಾಗೃತರಾಗಿದ್ದಾರೆ ಎಂದು ಅನ್ನಿಸುತ್ತಿದೆ. ಹಿಂದಿನ ಯಾವ ಚುನಾವಣೆಯಲ್ಲೂ ನಾನು ಇಷ್ಟೊಂದು ಜಾಗೃತ ಪ್ರಜ್ಞೆಯನ್ನು ಕಂಡಿಲ್ಲ. ಮತಯಾಚಿಸಿ ಬಂದ ಅಭ್ಯರ್ಥಿಗಳಿಗೆ ಮತದಾರರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಸ್ಪರ್ಧಿಗಳಿಗೆ ಬೆವರಿಳಿಸುತ್ತಿದ್ದಾರೆ” ಎಂದರು.

ʼಡಬಲ್‌ ಇಂಜಿನ್‌ ಸರ್ಕಾರʼ ಎಂಬ ಮಾತನ್ನು ಬಿಜೆಪಿಯ ಚಿಕ್ಕವರಿಂದ ದೊಡ್ಡನಾಯಕರವರೆಗೂ ಹೇಳಿ ಹೇಳಿ ಈಗ ಕರ್ನಾಟಕದ ಜನತೆಯ ಕಿವಿ ತೂತಾಗಿಬಿಟ್ಟಿರಹುದು. ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಡಬಲ್‌ ಇಂಜಿನ್‌ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿಯೇ? ಇಂತಹ ಮಾತುಗಳನ್ನು ಪ್ರಜಾಪ್ರಭುತ್ವ, ಜನತಂತ್ರ ವ್ಯವಸ್ಥೆಯಲ್ಲಿ ಹೇಳುವುದು ಸರಿಯೆ? ಈ ಡಬಲ್‌ ಇಂಜಿನ್‌ ಸರ್ಕಾರ ಇದ್ದಲ್ಲಿ ಹೆಚ್ಚು ಅಭಿವೃದ್ಧಿ ಎನ್ನುವುದು ಒಕ್ಕೂಟ ವ್ಯವಸ್ಥೆಯ ಬುಡ ಅಲ್ಲಾಡಿಸಿದಂತಾಗುವುದಿಲ್ಲವೇ? ಹೀಗೆಲ್ಲಾ ನಾನು ತಲೆ ಕೆಡಿಸಿಕೊಂಡಿದ್ದೆ. ಆದರೆ ಮೊನ್ನೆ ತಾನೇ, ಚುನಾವಣಾ ಸಮೀಕ್ಷೆ ನಡೆಸುತ್ತಿದ್ದ ಟಿವಿ ಚಾನೆಲ್‌ಗೆ ನಮ್ಮ ಹಳ್ಳಿಗಾಡಿನ ವ್ಯಕ್ತಿಯೊಬ್ಬ ಕೇಳುತ್ತಾನೆ – ʼಡಬಲ್‌ ಇಂಜಿನ್‌ ಸರ್ಕಾರ ಅಂತಾರೆ! ಕಾಂಗ್ರೆಸ್‌ ಸರ್ಕಾರ ಇದ್ದಾಗ 10 ಕೆ.ಜಿ ಅಕ್ಕಿ ಕೊಡ್ತಾ ಇತ್ತು. ಬಿಜೆಪಿಯ ಈ ಡಬಲ್‌ ಇಂಜಿನ್‌ ಸರ್ಕಾರ 20 ಕೆ.ಜಿ ಕೊಡಬೇಕಿತ್ತು ತಾನೇ?ʼ. ಈ ಅನುಭವದ ಮಾತು, ಇಂದಿನ ಭ್ರಮಾತ್ಮಕ ಅಭಿವೃದ್ಧಿಗೆ ಮುಖಾಮುಖಿಯಾಗಿದೆ” ಎಂದರು.

ಇದೇ ರೀತಿ ಇನ್ನೊಂದು. ಇದೂ ಕೂಡ ಹಳ್ಳಿಗಾಡಿನ ಮಹಿಳೆಯ ಮಾತು – ʼಈ ಗ್ಯಾಸ್‌ ಬರೋಕು ಮೊದಲು ನಾವು ಅಷ್ಟೋ ಇಷ್ಟು ಸೌದೆ ತಂದು ಅಡಿಗೆ ಮಾಡ್ಕೊತ್ತಿದ್ದೊ, ಆಗ ಹೊಗೆಗೆ ಕಣ್ಣಲ್ಲಿ ನೀರು ಬರುತ್ತಿತ್ತು. ಈಗ ಗ್ಯಾಸ್‌ ಬೆಲೆ ಏರಿಕೆಯಾಗಿ ಕಣ್ಣಲ್ಲಿ ರಕ್ತ ಬರ್ತಾ ಇದೆʼ – ಇಂತಹ ಕರುಳ ನುಡಿಗಳು ಕರ್ನಾಟಕದ ಉದ್ದಗಲಕ್ಕೂ ಆಕ್ರಂದನ ಮಾಡುತ್ತಿವೆ ಎಂದರು.

ಈ ಡಬಲ್‌ ಇಂಜಿನ್‌ ಸರ್ಕಾರ ಮಾಡಿದ್ದೇನು? ಬೆಲೆ ಏರಿಕೆ ಅಭಿವೃದ್ಧಿ, ನಿರುದ್ಯೋಗದ ಏರಿಕೆ ಅಭಿವೃದ್ಧಿ, ಬಡತನದ ಏರಿಕೆ ಅಭಿವೃದ್ಧಿ, ಬಡವ ಬಲ್ಲಿದರ ನಡುವೆ ಅಂತರ ಏರಿಕೆ ಅಭಿವೃದ್ಧಿ – ಹೀಗೆ ಸಾಗುತ್ತಿದೆ, ಈ ಸಂಘಪರಿವಾರದ ಬಿಜೆಪಿ ಸರ್ಕಾರದ ದುರಂತ ಕಥೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಯಿ ಬಿಟ್ಟರೆ ಕಾಂಗ್ರೆಸ್‌ ಏನು ಮಾಡ್ತು ಅಂತ ಲೇವಡಿ ಮಾಡುವ ಈ ಬಿಜೆಪಿ ಸರ್ಕಾರ, ಈ ಹಿಂದೆ ಕಾಂಗ್ರೆಸ್‌ ಮಾಡಿದ್ದ ಸಾರ್ವಜನಿಕ ಆಸ್ತಿಪಾಸ್ತಿ ಸಂಪತ್ತನ್ನು ತನ್ನಾಪ್ತ ಖಾಸಗಿಯವರಿಗೆ ಮಾರಿಕೊಂಡು ಬದುಕುತ್ತಿರುವ ಈ ಬಿಜೆಪಿ ಸರ್ಕಾರ ಯಾವುದೇ ಸಂಕೋಚ ನಾಚಿಕೆ ಇಲ್ಲದೆ ʼದಡ್ಡನಿಗೆ ಧೈರ್ಯ ಹೆಚ್ಚುʼ ಎಂಬಂತೆ ಮುನ್ನುಗ್ಗಿ ಧಾಳಿ ಮಾಡುವುದನ್ನು ಮಾತ್ರ ಕಲಿತಿದೆ. ಈ ಡಬಲ್‌ ಇಂಜಿನ್‌ನಲ್ಲಿ ಕಾಣುವುದೇನು? ಒಂದು ಇಂಜಿನ್‌ನಲ್ಲಿ ದ್ವೇಷ ತುಂಬಿಕೊಂಡಿದೆ. ಇನ್ನೊಂದು ಇಂಜಿನ್‌ ನುಂಗುವುದನ್ನು ಮಾಡುತ್ತಿದೆ. ಇಂಜಿನ್‌ ಜೋರಾಗಿ ಸದ್ದು ಮಾಡುತ್ತಿದೆ. ಅದು ಚಲಿಸುತ್ತಲೇ ಇಲ್ಲ. ಅದು ಮಾಡುವ ಸದ್ದಿಗೆ ಕೆಲವರು ಜೈ ಜೈ ಅನ್ನುತ್ತಿದ್ದಾರೆ. ಈಗ ನಾವು ಏನು ಮಾಡಬೇಕು? ಮೊದಲು ಅದನ್ನು ಗುಜರಿಗೆ ಹಾಕಬೇಕಾಗಿದೆ. ಅದಕ್ಕೆ ನಾವು, ನಮ್ಮ ಜನರ ದನಿಗೆ ಸೊಲ್ಲು ಹಾಕಬೇಕಾಗಿದೆ ಎಂದರು.

ಇತ್ತೀಚೆಗೆ, ವರುಣಾ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರಿಗೆ ಒಂದಿಷ್ಟು ತರುಣರು ಮುತ್ತಿಗೆ ಹಾಕಿ – ʼನೀವು, ನಿಮ್ಮ ನಾಯಕರು ನಮ್ಮ ಸಂವಿಧಾನವನ್ನೇ ಬದಲಾಯಿಸ್ತೀವಿ ಅಂತೀರಿ. ಯಾಕೆ ನಾವು ನಿಮಗೆ ಓಟು ಕೊಡಬೇಕು? ಅಂತ ಹಿಗ್ಗಾಮುಗ್ಗಾ ಕೇಳಿದಾಗ, ಆ ಠೇಂಕಾರದ, ಉಡಾಫೆಯ ಸಂಸದರ ಬಾಯಿ ಬಂದ್‌ ಆಗಿತ್ತು. ನಾನು ನಿನ್ನೆ ತಾನೇ ವರುಣಾ ಕ್ಷೇತ್ರಕ್ಕೆ ಒಂದು ರೌಂಡ್‌ ಹೋಗಿದ್ದೆ. ಅಲ್ಲೆ ಸಿಕ್ಕಿದ ಕೆಲವು ಹುಡುಗರಿಗೆ ʼಏನ್ರಪ್ಪಾ, ಸಂಸದನಿಗೇನೆ ಕುತ್ತಿಗೆ ಪಟ್ಟಿ ಹಿಡಿದುಕೊಂಡವರಂತೆ ಕೇಳಿದ್ದು ಸರಿನಾ?ʼ – ಸ್ವಲ್ಪ ಚಿತಾವಣೆ ಮಾಡಿದೆ. ಒಬ್ಬ ಹುಡುಗ ಹೇಳಿದ – “ನಮ್ಮ ಸಂವಿಧಾನ ಬದಲಾವಣೆ ಮಾಡಿ ಅವರ ʼಮನುಧರ್ಮಶಾಸ್ತ್ರʼ ಮತ್ತೆ ತರಬೇಕು ಅಂತ ಇದ್ದಾರೆ. ಹಾಗಾದರೆ ಈ ಹಿಂದೆ ಶೂದ್ರರು ಅಂದರೆ ಸೇವಕರಾಗಿದ್ದ ಒಕ್ಕಲಿಗರು ಲಿಂಗಾಯಿತರು ಮತ್ತೆ ಅವರಿಗೆ ಸೇವಕರಾಗಬೇಕಾ? ತಳಸಮುದಾಯಗಳು ಮತ್ತೆ ಕಾಲಾಳುಗಳಾಗಬೇಕಾ? ಈಗೀಗ ಊರೊಳಕ್ಕೆ ಬರುತ್ತಿರುವ ಅಸ್ಪೃಶ್ಯರು ಮತ್ತೆ ಊರಾಚೆಗೆ ಇರಬೇಕಾ? ಹಳ್ಳೀ ಮಕ್ಕಳ ಸ್ಕಾಲರ್‌ಶಿಪ್‌ ಕಿತ್ತುಕೊಳ್ಳುವ ಬಿಜೆಪಿ ಸರ್ಕಾರದ ಉದ್ದೇಶವಾದರೂ ಏನು?” ಹೀಗೆ ಮುಂದುವರೆದಿತ್ತು ಆ ಹುಡುಗನ ಒಡಲಾಳದ ಮಾತುಗಳು. ನನಗೆ ಅಬ್ಬಾಡೆ ಅನ್ನಿಸಿತು. ನಾನು ಮಾತಾಡಲಿಲ್ಲ. ಆ ಹುಡುಗನಿಗೆ ಒಂದು ಹಗ್‌ ಮಾಡಿದೆ ಎಂದು ತಿಳಿಸಿದರು.

ಬಹುಶಃ ಎದ್ದೇಳು ಕರ್ನಾಟಕ ಮಾಡಬಹುದಾದದ್ದು ಇಷ್ಟೇ ಅನ್ನಿಸುತ್ತದೆ. ಜನಸಮುದಾಯದ ಒಡಲಾಳದ ನುಡಿಗಳಿಗೆ ಅಪ್ಪುಗೆ ಹಾಗೂ ಮೆಚ್ಚುಗೆಯ ಒಂದು ಮುಗುಳ್ನಗೆ. ನೆನಪಿಟ್ಟುಕೊಳ್ಳಬೇಕು – ಎದ್ದೇಳು ಕರ್ನಾಟಕ ಯಾರದೂ ಅಲ್ಲ; ಎಲ್ಲರದು. ಎಲ್ಲೇ, ಯಾರೇ ತಾವೇ ಮಾಡಿಕೊಳ್ಳಬಹುದು. ಪರಸ್ಪರ ಮಾಹಿತಿ ಇರಲಿ, ಅಷ್ಟೇ. ಸಮುದಾಯದ ಎಚ್ಚರ ಮತ್ತು ವಿವೇಕವನ್ನು ವ್ಯಾಪಕಗೊಳಿಸಲು ಎದ್ದೇಳು ಕರ್ನಾಟಕ ವೇಗವರ್ಧಕದಂತೆ ಕೆಲಸ ಮಾಡುತ್ತದೆ. ಈಗ, ಮಂಗಳೂರಿನ ಕಡೆಯ ಒಂದು ಸುದ್ದಿ ಓದಿದೆ. ಅಲ್ಲಿನ ಮತದಾರರು, ಬಿಜೆಪಿ ಅಭ್ಯರ್ಥಿಗಳಿಗೆ ನಮ್ಮ ಅಕೌಂಟಿಗೆ 15 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ, ಅಕೌಂಟ್‌ಗೆ ಹಣ ಹಾಕಿ ಎಂದು ಕೇಳುತ್ತಿದ್ದಾರೆ ಅನ್ನುವುದೇ ಆ ಸುದ್ದಿ! ಜನ ಮರೆತು ಬಿಡುತ್ತಾರೆ ಅಂತಾರೆ. ಆದರೆ ಜನ ಮರೆತಿಲ್ಲ, ಪ್ರಶ್ನಿಸುತ್ತಿದ್ದಾರೆ. ಇದನ್ನು ಎಲ್ಲೆಡೆ ಹಬ್ಬಿಸಲು ಎದ್ದೇಳು ಕರ್ನಾಟಕ ಕ್ರಿಯಾಶೀಲವಾಗಬೇಕಾಗಿದೆ. ಹೀಗೇ ಅನೇಕ ಮತದಾರರು, ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆ ಎಷ್ಟು, ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲು ಎಷ್ಟು ಎಂದು ಕುಪಿತರಾಗಿ ಪ್ರಶ್ನಿಸುತ್ತಿದ್ದಾರೆ – ಇಂತಹ ಇನ್ನೆಷ್ಟೊ ಸಮುದಾಯದ ವಿವೇಕ ವಿವೇಚನೆಗಳಿಗೆ ಪ್ರಜ್ಞಾವಂತ ವ್ಯಕ್ತಿ, ಸಂಘಟನೆಗಳು ಜೊತೆಗೂಡಬೇಕಾಗಿದೆ. ಜೊತೆಗೂಡಿ, 15 ಲಕ್ಷ ಹಾಕುತ್ತೇವೆ ಎಂದು ಪ್ರಧಾನಿಯಾದ ಮೋದಿಯವರಿಗೆ ಕರ್ನಾಟಕಕ್ಕೆ ಬಂದಾಗಲೆಲ್ಲಾ ʼಅಕೌಂಟ್‌ಗೆ 15 ಲಕ್ಷ ಹಾಕಿʼ ಎಂದು ಕೇಳಬೇಕಾಗಿದೆ. ನೆನಪಿಡಿ, ಯಾವ ಕಾರಣಕ್ಕೂ ಗೃಹಸಚಿವ ಅಮಿತ್‌ ಶಾ ಅವರಿಗೆ ಈ ಪ್ರಶ್ನೆ ಕೇಳಬಾರದು. ಕೇಳಿದರೆ ಅವರು ಮುಗುಳ್ನಗೆಯಲ್ಲೆ ಕೊಲ್ಲುತ್ತಾರೆ. ಹಾಗಾಗಿ ಈ ಡಬಲ್‌ ಇಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ ಎಂದು ಪುನರುಚ್ಚರಿಸಿದರು.

ಆಮೇಲೆ ಏನು? ಈ ಸಂದಿಗ್ಧದ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಎದ್ದೇಳು ಕರ್ನಾಟಕ ತನ್ನ ಕರೆಯಲ್ಲಿ ಸ್ಪಷ್ಟವಾಗಿ ಹೇಳಿದೆ: “ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ ಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು. ಆಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು. ಇದೇ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಪ್ರಕ್ರಿಯೆ” ಎಂದು ದೇವನೂರು ಹೇಳಿದರು.

ಇನ್ನೊಂದು ಸಂದಿಗ್ಧ. ಹಾಗಾದರೆ ಯಾವ ಪಕ್ಷಕ್ಕೆ ಮತ ನೀಡಬೇಕು? ಭಾರತ್‌ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್‌ ಮರುಹುಟ್ಟು ಪಡೆದಂತೆ ಕಾಣಿಸುತ್ತಿದೆ. ಬಹುತೇಕ ಕಾಂಗ್ರೆಸ್‌ ಪಕ್ಷಕ್ಕೇನೇ ಮತ ನೀಡಬೇಕಾಗಿದೆ. ಪ್ರಗತಿಪರ ಪಕ್ಷಗಳು ಎಲ್ಲಿ ಸ್ಪರ್ಧೆ ನೀಡುತ್ತಿವೆ ಎಂದು ಭರವಸೆ ಇರುತ್ತದೋ ಅಲ್ಲಿ ನಾಕಾರು ಕಡೆ ಬೆಂಬಲಿಸಬೇಕಾಗಿದೆ. ಮತ್ತೊಂದು ಸಂದಿಗ್ಧ. ಕಾಂಗ್ರೆಸ್‌ ಮೂರನೆ ಸ್ಥಾನದಲ್ಲಿ ಇರುವ ಕಡೆ? ಜೆಡಿಎಸ್‌ ಎಲ್ಲೆಲ್ಲಿ ಬಿಜೆಪಿಯ ನೇರಸ್ಪರ್ಧಿಯಾಗಿರುವುದು ಖಚಿತವೋ ಅಲ್ಲಿ ಜೆಡಿಎಸ್‌ಗೆ ಮತ ನೀಡಬೇಕು. ಒಟ್ಟಿನಲ್ಲಿ ಸಂಘಪರಿವಾರದ ಬಿಜೆಪಿ ಸೋಲಬೇಕು. ಈ ದುಷ್ಟಶಕ್ತಿಯ ಹಲ್ಲು ಉಗುರು ಕಿತ್ತು ಅದರ ಜೀವವನ್ನೂ ಉಳಿಸಬೇಕು. ಇದು ನಮ್ಮೆಲ್ಲರ ಹೆಗಲ ಮೇಲಿರುವ ಹೊಣೆಗಾರಿಕೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿಂತಕರಾದ ಯೋಗೇಂದ್ರ ಯಾದವ್, ರಹಮತ್ ತರೀಕೆರೆ, ತಾರಾ ರಾವ್, ತ್ರಿಲೋಚನ್ ಶಾಸ್ತ್ರಿ, ಯೂಸುಫ್ ಕಣ್ಣಿ, ವೀರಸಂಗಯ್ಯ ಮತ್ತು ಪ್ರೊ. ಜಾಫೆಟ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಪುಲ್ವಾಮ ದಾಳಿ: ರಾಜ್ಯಪಾಲ ಹುದ್ದೆ ತೊರೆದ ಬಳಿಕ ಮಾತನಾಡುತ್ತಿದ್ದೇನೆ ಎನ್ನುವುದು ತಪ್ಪು: ಶಾಗೆ ಸತ್ಯಪಾಲ್ ತಿರುಗೇಟು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....