ಪ್ರಶ್ನೆ ಪತ್ರಿಕೆ ಸೋರಿಕೆ ಸಾಧ್ಯತೆಯ ಕಾರಣ ನೀಡಿ ವಿಶ್ವವಿದ್ಯಾನಿಲಯ ಯುಜಿಸಿ-ನೆಟ್ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಪರೀಕ್ಷೆಯನ್ನು ಈಗಾಗಲೇ ಆಗಸ್ಟ್ 21ಕ್ಕೆ ಮರು ನಿಗದಿ ಮಾಡಿರುವುದರಿಂದ, ಈಗ ಹಸ್ತಕ್ಷೇಪ ಮಾಡಿದರೆ ಅನಿಶ್ಚಿತತೆ ಮತ್ತು ಅವ್ಯವಸ್ಥೆ ಹೆಚ್ಚಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
ಜೂನ್ 18ರ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಈಗ ಆಗಸ್ಟ್ 21ರಂದು ಪರೀಕ್ಷೆ ನಿಗದಿಯಾಗಿದ್ದು, ಇದೀಗ ಪರೀಕ್ಷೆ ರದ್ದತಿಗೆ ಮನವಿ ಸಲ್ಲಿಸಲಾಗಿದೆ. ಪರೀಕ್ಷೆ ರದ್ದಾಗಿ 2 ತಿಂಗಳು ಕಳೆದಿವೆ. ಅರ್ಜಿ ಪುರಸ್ಕರಿಸಿದರೆ ಅನಿಶ್ಚಿತತೆ ಹೆಚ್ಚುತ್ತದೆ. 9 ಲಕ್ಷ ಮಂದಿ ಆಗಸ್ಟ್ 21ರಂದು ಪರೀಕ್ಷೆಗೆ ಹಾಜರಾಗುತ್ತಿದ್ದು ತಡವಾಗಿರುವ ಈ ಹಂತದಲ್ಲಿ ಪರೀಕ್ಷೆ ರದ್ದತಿ ಪ್ರಶ್ನಿಸುವಂತಿಲ್ಲ ಎಂಬುವುದಾಗಿ ನ್ಯಾಯಾಲಯ ತಿಳಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೂನ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಯುಜಿಸಿ-ನೆಟ್ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜುಲೈನಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ಈ ಬಾರಿಯ ಯುಜಿಸಿ-ನೆಟ್ ಪರೀಕ್ಷೆಯನ್ನು ಈ ಹಿಂದೆ ಜೂನ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಈ ನಡುವೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೆಲವು ಗುಪ್ತಚರ ಮಾಹಿತಿ ದೊರೆತಿದೆ ಎಂಬ ಕಾರಣ ನೀಡಿ, ಪರೀಕ್ಷೆ ಆರಂಭಕ್ಕೂ ಕೆಲ ಸಮಯದ ಮೊದಲು ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ : ವೈದ್ಯೆ ಮೇಲಿನ ಅತ್ಯಾಚಾರ-ಹತ್ಯೆ ಪ್ರಕರಣ; ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆಕೊಟ್ಟ ‘ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ಸ್’


