Homeಕರ್ನಾಟಕಆರ್‌ಎಸ್‌ಎಸ್‌ ನೋಂದಣಿ ಮಾಡಿಕೊಂಡಿಲ್ಲ ಏಕೆ? ಒತ್ತಡಕ್ಕೆ ಮಣಿದು ಉತ್ತರ ಕೊಟ್ಟ ಭಾಗವತ್

ಆರ್‌ಎಸ್‌ಎಸ್‌ ನೋಂದಣಿ ಮಾಡಿಕೊಂಡಿಲ್ಲ ಏಕೆ? ಒತ್ತಡಕ್ಕೆ ಮಣಿದು ಉತ್ತರ ಕೊಟ್ಟ ಭಾಗವತ್

- Advertisement -
- Advertisement -

ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರ್‌ಎಸ್‌ಎಸ್‌) ನೋಂದಣಿ ಏಕೆ ಮಾಡಿಕೊಂಡಿಲ್ಲ? ಎಂಬ ಪ್ರಶ್ನೆಯ ಸುತ್ತ ಚರ್ಚೆಗಳು ಇತ್ತೀಚೆಗೆ ಕಾವು ಪಡೆದುಕೊಂಡಿವೆ. ಪರಿಣಾಮ, ಸಾಮಾನ್ಯ ಜನರೂ ಕೂಡ ಆರ್‌ಎಸ್‌ಎಸ್‌ ಭಾರತೀಯ ಕಾನೂನಿನಡಿ ನೋಂದಣಿ ಏಕೆ ಮಾಡಿಕೊಂಡಿಲ್ಲ ಎಂಬ ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ.

ಇದರಿಂದ ಆರ್‌ಎಸ್‌ಎಸ್‌ ದೇಶದ ಜನತೆಗೆ ಉತ್ತರ ಕೊಡಲೇಬೇಕಾದ ಇಕ್ಕಟ್ಟಿಗೆ ಸಿಲುಕಿದಂತಿದೆ. ಏಕೆಂದರೆ, ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್‌ 100ನೇ ವರ್ಷಾಚರಣೆ ಸಂಬಂಧಿತ ಕಾರ್ಯಕ್ರಮದಲ್ಲಿ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ನಗರ ಪಿಇಎಸ್‌ ವಿಶ್ವವಿದ್ಯಾಲಯದ ಸಂಭಾಗಣದಲ್ಲಿ ಭಾನುವಾರ (ನ.10) ಆಯೋಜಿಸಿದ್ದ ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಕಾರ್ಯಕ್ರಮದಲ್ಲಿ ಮೋಹನ್‌ ಭಾಗವತ್ ಆರ್‌ಎಸ್‌ಎಸ್‌ ನೋಂದಣಿ ಮಾಡಿಕೊಳ್ಳದ್ದನ್ನು ಸಮರ್ಥಿಸಿಕೊಂಡಿದ್ದಾರೆ.

“ನಮ್ಮದು ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ‘ವ್ಯಕ್ತಿಗಳ ಸಂಸ್ಥೆ’. ಆದ್ದರಿಂದ ಭಾರತೀಯ ಕಾನೂನಿನಡಿಯಲ್ಲಿ ನೋಂದಣಿ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

“ಸಂಘ 1925ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಎಂಬುವುದು ನಿಮಗೆ ಗೊತ್ತಾ? ಆಗ ಬ್ರಿಟಿಷ್ ಸರ್ಕಾರದ ವಿರುದ್ದ ಹೋರಾಡುತ್ತಿದ್ದ ನಮ್ಮ ಸರಸಂಘ ಚಾಲಕ (ಕೆ.ಬಿ ಹೆಡ್ಗೇವಾರ್ ) ಅವರು ಬ್ರಿಟಿಷ್ ಸರ್ಕಾರದಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತಾ? ಸ್ವಾತಂತ್ರ್ಯದ ನಂತರ, ಭಾರತೀಯ ಕಾನೂನುಗಳು ನೋಂದಣಿಯನ್ನು ಕಡ್ಡಾಯಗೊಳಿಸಿಲ್ಲ. ನೋಂದಣಿಯಾಗದ ವ್ಯಕ್ತಿಗಳ ಸಮೂಹಕ್ಕೂ (body of individuals) ಕಾನೂನು ಸ್ಥಾನಮಾನ ದೊರೆಯುತ್ತದೆ. ನಾವು ‘ವ್ಯಕ್ತಿಗಳ ಸಮೂಹ’ ಎಂದು ವರ್ಗೀಕೃತರಾಗಿದ್ದೇವೆ. ನಾವು ಗುರುತಿಸಲ್ಪಟ್ಟ ಸಂಸ್ಥೆಯಾಗಿದ್ದೇವೆ” ಎಂದಿದ್ದಾರೆ.

ಆರ್‌ಎಸ್‌ಎಸ್‌ನ ಕಾನೂನುಬದ್ಧ ಸ್ಥಾನಮಾನವನ್ನು ಒತ್ತಿ ಹೇಳಲು ಹಿಂದಿನ ಕಾನೂನು ವಿವಾದವನ್ನು ಉಲ್ಲೇಖಿಸಿದ ಭಾಗವತ್, “ಆದಾಯ ತೆರಿಗೆ ಇಲಾಖೆ ತೆರಿಗೆ ವಿಧಿಸಲು ಪ್ರಯತ್ನಿಸಿದಾಗ ನ್ಯಾಯಾಲಯಗಳು ‘ವ್ಯಕ್ತಿಗಳ ಸಂಸ್ಥೆ’ಯಾಗಿ ಸಂಘದ ಸ್ಥಾನವನ್ನು ಎತ್ತಿಹಿಡಿದು, ಅದರ ಗುರುದಕ್ಷಿಣೆ (ವಿದ್ಯಾರ್ಥಿಯಿಂದ ಶಿಕ್ಷಕರಿಗೆ ಸ್ವಯಂಪ್ರೇರಿತ ಕೊಡುಗೆ) ತೆರಿಗೆಯಿಂದ ವಿನಾಯಿತಿ ಪಡೆದಿದೆ ಎಂದು ತೀರ್ಪು ನೀಡಿತ್ತು” ಎಂದು ಹೇಳಿದ್ದಾರೆ.

ಸರ್ಕಾರವು ಸಂಘವನ್ನು ಗುರುತಿಸಿರುವುದಕ್ಕೆ ಪುರಾವೆಯಾಗಿ ಈ ಹಿಂದೆ ಹಲವು ಬಾರಿ ಸಂಘ ನಿಷೇಧಕ್ಕೊಳಗಾಗಿರುವುದನ್ನು ಭಾಗವತ್ ಪ್ರಸ್ತಾಪಿಸಿದ್ದು, “ನಮ್ಮನ್ನು ಮೂರು ಬಾರಿ ನಿಷೇಧಿಸಲಾಗಿತ್ತು. ಹಾಗಾಗಿ, ನಮ್ಮ ಸಂಘಟನೆಯನ್ನು ಸರ್ಕಾರ ಗುರುತಿಸಿದೆ ಎಂದಾಯಿತಲ್ಲವೇ? ಇಲ್ಲದಿದ್ದರೆ, ಅವರು ಯಾರನ್ನು ನಿಷೇಧಿಸುತ್ತಿದ್ದರು? ಪ್ರತಿ ಬಾರಿಯೂ ನ್ಯಾಯಾಲಯಗಳು ನಿಷೇಧವನ್ನು ವಜಾಗೊಳಿಸಿ ಆರ್‌ಎಸ್‌ಎಸ್ ಅನ್ನು ಕಾನೂನುಬದ್ಧ ಸಂಘಟನೆಯನ್ನಾಗಿ ಮಾಡಿವೆ” ಎಂದಿದ್ದಾರೆ.

ಸಂಘದ ಸಾಂವಿಧಾನಿಕ ನ್ಯಾಯಸಮ್ಮತತೆಯನ್ನು ಸಮರ್ಥಿಸಿದ ಭಾಗವತ್, “ನಾವು ಸಂವಿಧಾನಬಾಹಿರರಲ್ಲ. ನಮ್ಮ ಕಾನೂನು ಸ್ಥಾನಮಾನ ಸಂವಿಧಾನದೊಳಗೆ ಇದೆ. ಆದ್ದರಿಂದ ನಾವು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಅನೇಕ ವಿಷಯಗಳನ್ನು ನೋಂದಾಯಿಸಲಾಗಿಲ್ಲ, ಹಿಂದೂ ಧರ್ಮವನ್ನೂ ಕೂಡ ನೋಂದಾಯಿಸಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.

ಭಾಗವತ್ ಅವರು ಆರ್‌ಎಸ್‌ಎಸ್‌ನ ನೋಂದಣಿ, ಭಾರತೀಯ ಸಂವಿಧಾನ ಮತ್ತು ಅದರಡಿಯ ಕಾನೂನುಗಳನ್ನು ಸಂಘ ಅನುಸರಿಸುವ ಬಗೆ, ಭಾರತದ ತ್ರಿವರ್ಣ ಧ್ವಜ ಮತ್ತು ಆರ್‌ಎಸ್‌ಎಸ್‌ನ ಭಗವಾಧ್ವಜ, ಆರ್‌ಎಸ್‌ಎಸ್‌ನ ಹಣದ ಮೂಲ ಇತ್ಯಾದಿಗಳ ಬಗ್ಗೆ ಇಷ್ಟೊಂದು ಬಹಿರಂಗವಾಗಿ ಮಾತನಾಡಿರುವುದು ಇದೇ ಮೊದಲು ಎನ್ನಬಹುದು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕುರಿತು ಕೇಳಿದ ಪ್ರಶ್ನೆಗಳು, ಅದಕ್ಕೆ ವ್ಯಕ್ತವಾದ ಪರ-ವಿರೋಧ ಅಭಿಪ್ರಾಯಗಳು ಭಾಗವತ್ ಹೇಳಿರುವ ವಿಷಯಗಳ ಕುರಿತು ಜನರಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಆರ್‌ಎಸ್‌ಎಸ್‌ ಭಾರತದ ಸಂವಿಧಾನದಡಿಯ ಕಾನೂನ ಅನ್ವಯ ನೋಂದಣಿಯಾಗದ ಸಂಘಟನೆ, ಅದು ಇನ್ನೂ ಏಕೆ ನೋಂದಣಿ ಮಾಡಿಕೊಂಡಿಲ್ಲ? ಸಂಘದ ಹಣದ ಮೂಲ ಯಾವುದು? ಇತ್ಯಾದಿ ಪ್ರಶ್ನೆಗಳನ್ನು ಪ್ರಿಯಾಂಕ್ ಖರ್ಗೆ ಸರಣಿಯಾಗಿ ಕೇಳಿದ್ದರು. ಇದು ಜನರಲ್ಲಿ ಚರ್ಚೆ ಹಚ್ಚಿ ಭಾಗವತ್ ಉತ್ತರ ಕೊಡುವಂತೆ ಮಾಡಿದೆ.

ಭಾಗವತ್ ನೀಡಿರುವ ಉತ್ತರಗಳ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ಭಾರತದಲ್ಲಿ ಪ್ರತಿಯೊಂದು ಧಾರ್ಮಿಕ ಅಥವಾ ದತ್ತಿ ಸಂಸ್ಥೆಗಳೂ ಹಣಕಾಸು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಿರುವಾಗ, ಆರ್‌ಎಸ್‌ಎಸ್‌ಗೆ ಇದೇ ರೀತಿಯ ಜವಾಬ್ದಾರಿ ವ್ಯವಸ್ಥೆಗಳು ಇಲ್ಲದಿರುವುದನ್ನು ಏನು ಸಮರ್ಥಿಸುತ್ತದೆ? ಇದಲ್ಲದೆ, ಆರ್‌ಎಸ್‌ಎಸ್‌ನ ಸ್ವಯಂಸೇವಕರು ಯಾರು? ಅವರ ಸಂಖ್ಯೆ ಎಷ್ಟು? ಅವರನ್ನು ಹೇಗೆ ಗುರುತಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

“ಆರ್‌ಎಸ್‌ಎಸ್‌ಗೆ ನೀಡಲಾಗುವ ದೇಣಿಗೆಗಳ ಪ್ರಮಾಣ ಮತ್ತು ಸ್ವರೂಪ ಏನು? ಈ ಕೊಡುಗೆಗಳನ್ನು ಯಾವ ಕಾರ್ಯವಿಧಾನಗಳು ಅಥವಾ ಮಾರ್ಗಗಳ ಮೂಲಕ ಸ್ವೀಕರಿಸಲಾಗುತ್ತದೆ? ಆರ್‌ಎಸ್‌ಎಸ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತನ್ನದೇ ಆದ ನೋಂದಾಯಿತ ಗುರುತಿನ ಅಡಿಯಲ್ಲಿ ಸಂಸ್ಥೆಗೆ ನೇರವಾಗಿ ದೇಣಿಗೆಗಳನ್ನು ಏಕೆ ನೀಡಲಾಗುವುದಿಲ್ಲ?” ಎಂದು ಕೇಳಿದ್ದಾರೆ.

“ನೋಂದಾಯಿತ ಸಂಸ್ಥೆಯಲ್ಲದ ಆರ್‌ಎಸ್‌ಎಸ್ ತನ್ನ ಆರ್ಥಿಕ ಮತ್ತು ಸಾಂಸ್ಥಿಕ ರಚನೆಯನ್ನು ಹೇಗೆ ಉಳಿಸಿಕೊಳ್ಳುತ್ತದೆ?”

“ಪೂರ್ಣ ಸಮಯದ ಪ್ರಚಾರಕರಿಗೆ ಯಾರು ಸಹಾಯ ನೀಡುತ್ತಾರೆ ಮತ್ತು ಸಂಸ್ಥೆಯ ದಿನನಿತ್ಯದ ಕಾರ್ಯಾಚರಣೆಯ ವೆಚ್ಚಗಳನ್ನು ಪೂರೈಸುತ್ತಾರೆ? ದೊಡ್ಡ ಪ್ರಮಾಣದ ಕಾರ್ಯಕ್ರಮಗಳು, ಅಭಿಯಾನಗಳು ಮತ್ತು ಪ್ರಚಾರ ಚಟುವಟಿಕೆಗಳಿಗೆ ಹೇಗೆ ಹಣಕಾಸು ಒದಗಿಸಲಾಗುತ್ತದೆ? ಸ್ವಯಂಸೇವಕರು ಸ್ಥಳೀಯ ಕಚೇರಿಗಳಿಂದ ಸಮವಸ್ತ್ರ ಅಥವಾ ವಸ್ತುಗಳನ್ನು ಖರೀದಿಸಿದಾಗ, ಈ ಹಣವನ್ನು ಎಲ್ಲಿಗೆ ಲೆಕ್ಕ ಹಾಕಲಾಗುತ್ತದೆ? ಸ್ಥಳೀಯ ಕಚೇರಿಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ವಹಿಸುವ ವೆಚ್ಚವನ್ನು ಯಾರು ಭರಿಸುತ್ತಾರೆ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಹಾಕಿದ್ದಾರೆ.

ಈ ಪ್ರಶ್ನೆಗಳು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮೂಲಭೂತ ಸಮಸ್ಯೆಯನ್ನು ಒತ್ತಿಹೇಳುತ್ತವೆ ಎಂದಿರುವ ಪ್ರಿಯಾಂಕ್ ಖರ್ಗೆ, “ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲವಾದ ಉಪಸ್ಥಿತಿ ಮತ್ತು ಪ್ರಭಾವದ ಹೊರತಾಗಿಯೂ ಆರ್‌ಎಸ್‌ಎಸ್ ಏಕೆ ನೋಂದಾಯಿಸದೆ ಉಳಿದಿದೆ?” ಎಂದು ಕೇಳಿದ್ದಾರೆ.

“ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿ 100 ವರ್ಷಗಳು, ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದು 100 ವರ್ಷಗಳು, ಭಾರತದ ಸಂವಿಧಾನವನ್ನು ವಿರೋಧಿಸಿ 100 ವರ್ಷಗಳು, ರಾಷ್ಟ್ರ-ವಿರೋಧಿಯಾಗಿ 100 ವರ್ಷಗಳು” ಎಂದು ಬರೆದುಕೊಳ್ಳುವ ಮೂಲಕ ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆಗೆ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.

“ಭಾರತ ಸರ್ಕಾರದ ಗೃಹ ಸಚಿವಾಲಯವು ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ಫೆಬ್ರವರಿ 24, 1948 ರಂದು ಬರೆದ ಪತ್ರ ಇಲ್ಲಿದೆ. ಇದರಲ್ಲಿ ಆರ್‌ಎಸ್‌ಎಸ್ ರಾಷ್ಟ್ರಧ್ವಜವನ್ನು ಹೇಗೆ ಅವಮಾನಿಸಿದೆ ಎಂಬುದನ್ನು ದಾಖಲಿಸಲಾಗಿದೆ. ಇತಿಹಾಸವು ನಮ್ಮ ದೇಶಕ್ಕೆ ಆರ್‌ಎಸ್‌ಎಸ್ ಮಾಡಿದ ನಿರ್ಲಜ್ಜ ದ್ರೋಹದ ನಿದರ್ಶನಗಳಿಂದ ತುಂಬಿದೆ. ಮತ್ತು ಇಡೀ ಬಿಜೆಪಿ ಇಕೋ ಸಿಸ್ಟಂ ಎಷ್ಟೇ ಪ್ರಯತ್ನಿಸಿದರೂ, ಆರ್‌ಎಸ್‌ಎಸ್ ಸಂವಿಧಾನ ವಿರೋಧಿ ಎಂಬ ಇತಿಹಾಸವನ್ನು ಅಳಿಸಿಹಾಕಲು ಅವರಿಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಬಿಜೆಪಿ ನಾಯಕರು ಹಾಗೂ ಸ್ವಯಂಸೇವಕರು ನಿಜವಾದ ಆರ್‌ಎಸ್‌ಎಸ್ ಚರಿತ್ರೆಯನ್ನು ತಿಳಿದುಕೊಳ್ಳುವ ಸಮಯ ಬಂದಿದೆ” ಎಂದು ಬರೆದುಕೊಂಡು ದಾಖಲೆ ಹಂಚಿಕೊಂಡಿದ್ದಾರೆ.

ಮುಸ್ಲಿಮ್‌-ದಲಿತ ಕ್ರೈಸ್ತರಿಗೆ ಎಸ್‌ಸಿ ಸ್ಥಾನಮಾನ; ಪರಿಶೀಲನಾ ಸಮಿತಿ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...