ಪ್ರಮುಖ ಮಾಧ್ಯಮ ಸಂಸ್ಥೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಭಾರೀ ಉದ್ಯೋಗ ಕಡಿತ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಕೆಲಸ ಕಳೆದುಕೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಅವರ ಮಗ ಇಶಾನ್ ತರೂರ್ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾವುಕವಾಗಿ ಬರೆದುಕೊಂಡಿರುವ ಇಶಾನ್ ತರೂರ್, ಪತ್ರಿಕೆಯ ಅಂತರಾಷ್ಟ್ರೀಯ ವಿಭಾಗದ ಬಹುತೇಕ ಸಿಬ್ಬಂದಿ ಹಾಗೂ ಅನೇಕ ಪ್ರತಿಭಾವಂತ ಸಹೋದ್ಯೋಗಿಗಳ ಜೊತೆಗೆ ತಾವೂ ಕೆಲಸ ಕಳೆದುಕೊಂಡಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸುಮಾರು 12 ವರ್ಷಗಳ ಕಾಲ ತಮ್ಮೊಂದಿಗೆ ಕೆಲಸ ಮಾಡಿದ ಅಪ್ರತಿಮ ಪತ್ರಕರ್ತರು ಮತ್ತು ಸಂಪಾದಕರಿಂದ ದೂರವಾಗುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ವಿಶ್ವ ರಾಜಕಾರಣ ಮತ್ತು ಅಮೆರಿಕದ ಜಾಗತಿಕ ಪಾತ್ರವನ್ನು ಓದುಗರಿಗೆ ವಿವರಿಸುವ ಉದ್ದೇಶದಿಂದ ಅವರು 2017ರಲ್ಲಿ ‘ವರ್ಲ್ಡ್ ವೀವ್’ ಎಂಬ ಅಂಕಣವನ್ನು ಆರಂಭಿಸಿದ್ದರು. ಈ ಅಂಕಣಕ್ಕೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದು, ಇಷ್ಟು ವರ್ಷಗಳ ಕಾಲ ಬೆಂಬಲ ನೀಡಿದ ಓದುಗರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಖಾಲಿ ಸುದ್ದಿ ಮನೆಯ ಫೋಟೋ ಹಂಚಿಕೊಂಡಿರುವ ಇಶಾನ್ ತರೂರ್, “ಕೆಟ್ಟ ದಿನ” ಎಂದು ಹೇಳಿದ್ದಾರೆ.
ವಾಷಿಂಗ್ಟನ್ ಪೋಸ್ಟ್ ತನ್ನ ಒಟ್ಟು ಸಿಬ್ಬಂದಿಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರನ್ನು (ಸುಮಾರು 300ಕ್ಕೂ ಹೆಚ್ಚು ಉದ್ಯೋಗಿಗಳು) ಕೆಲಸದಿಂದ ತೆಗೆದುಹಾಕಿದೆ. ಕ್ರೀಡಾ ವಿಭಾಗವನ್ನು ಸ್ಥಗಿತಗೊಳಿಸಿದೆ, ಹಲವಾರು ವಿದೇಶಿ ಬ್ಯೂರೋಗಳನ್ನು ಮುಚ್ಚಿದೆ ಮತ್ತು ಪುಸ್ತಕಗಳ ವರದಿಯನ್ನು ಕೊನೆಗೊಳಿಸಿದೆ ಎಂದು ವರದಿಯಾಗಿದೆ.
ಪತ್ರಿಕೆಯ ನವ ದೆಹಲಿಯ ಬ್ಯೂರೋ ಮುಖ್ಯಸ್ಥರು ಮತ್ತು ಮಧ್ಯಪ್ರಾಚ್ಯದ ಸಂಪೂರ್ಣ ವರದಿಗಾರರ ತಂಡ ಸೇರಿದಂತೆ ಹಲವರು ಈ ಉದ್ಯೋಗ ಕಡಿತದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕಂಪನಿಯು ಅತ್ಯಂತ ವೇಗವಾಗಿ ಮತ್ತು ದೊಡ್ಡ ಮಟ್ಟದಲ್ಲಿ ಸಿಬ್ಬಂದಿಗಳನ್ನು ವಜಾಗೊಳಿಸಿರುವುದು ಅಲ್ಲಿನ ಉದ್ಯೋಗಿಗಳಲ್ಲಿ ಆಘಾತ ಮೂಡಿಸಿದೆ. ಇಡೀ ಕಂಪನಿಯ ಸಭೆಯ ನಂತರ, ಇಮೇಲ್ ಮೂಲಕ ಈ ನಿರ್ಧಾರದ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಲಾಗಿದೆ. ಈ ಪ್ರಕ್ರಿಯೆಯು ನಡೆದ ರೀತಿ ಮತ್ತು ಅದರ ವೇಗವು ಸಿಬ್ಬಂದಿಗಳನ್ನು ದಿಗ್ಭ್ರಮೆಗೊಳಿಸಿದೆ ಎಂದು ವರದಿಗಳು ಹೇಳಿವೆ.
ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಓದುಗರ ಹವ್ಯಾಸಗಳಿಗೆ ಅನುಗುಣವಾಗಿ ಸಂಸ್ಥೆಯನ್ನು ಮರುರೂಪಿಸಲು ಈ ಉದ್ಯೋಗ ಕಡಿತ ಅನಿವಾರ್ಯ ಎಂದು ದಿ ವಾಷಿಂಗ್ಟನ್ ಪೋಸ್ಟ್ ತಿಳಿಸಿದೆ.
ಈ ಪ್ರಮುಖ ಪುನರ್‌ರಚನೆಯ ಭಾಗವಾಗಿ ಪತ್ರಿಕೆಯ ಕ್ರೀಡಾ ವಿಭಾಗವನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತಿದೆ. ಇದರೊಂದಿಗೆ, ವಿದೇಶಿ ಬ್ಯೂರೋಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಲಾಗುತ್ತಿದೆ ಮತ್ತು ಪುಸ್ತಕ ವಿಮರ್ಶೆ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ವಿಭಾಗವನ್ನು ಮುಚ್ಚಲಾಗುತ್ತಿದೆ. ಒಟ್ಟಾರೆಯಾಗಿ, ಡಿಜಿಟಲ್ ಯುಗದ ಸವಾಲುಗಳನ್ನು ಎದುರಿಸಲು ಸಂಸ್ಥೆಯು ತನ್ನ ಕಾರ್ಯವೈಖರಿಯಲ್ಲಿ ಭಾರಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ ಎಂದಿದೆ.
ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಮ್ಯಾಟ್ ಮುರ್ರೆ ಈ ನಿರ್ಧಾರವನ್ನು ಅತ್ಯಂತ ನೋವಿನಿಂದ ಕೂಡಿದರೂ ಅನಿವಾರ್ಯವಾದದ್ದು ಎಂದು ಹೇಳಿದ್ದಾರೆ. ಪ್ರಸ್ತುತ ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ಸಂಸ್ಥೆಯು ಎಲ್ಲರಿಗೂ ಎಲ್ಲವನ್ನೂ ನೀಡಲು ಸಾಧ್ಯವಿಲ್ಲ, ಆದ್ದರಿಂದ ಈ ಬದಲಾವಣೆ ಅವಶ್ಯಕ ಎಂದು ಅವರು ಸಿಬ್ಬಂದಿಗೆ ತಿಳಿಸಿದ್ದಾರೆ.


