ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಸಂಕ್ಲಾಪೂರ ಗ್ರಾಮದ ಇಟ್ಟಿಗೆ ಗೂಡುಗಳಲ್ಲಿ ಜೀತಕ್ಕಿದ್ದ ಐವರು ಮಕ್ಕಳು ಸೇರಿದಂತೆ 34 ಮಂದಿ ಒಡಿಶಾ ಮೂಲದ ಕಾರ್ಮಿಕರನ್ನು ಮಂಗಳವಾರ (ಫೆ.10,2026) ರಕ್ಷಿಸಲಾಗಿದೆ.
ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ ಕಾರ್ಮಿಕರನ್ನು ಜೀತಕ್ಕಿಡಲಾಗಿದೆ ಎಂಬ ಮಾಹಿತಿ ಪಡೆದ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಪೊಲೀಸರು ಮತ್ತು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಸ್ಪಂದನ ಅಸೋಸಿಯೇಷನ್‌ನ ಸದಸ್ಯರನ್ನು ಒಳಗೊಂಡ ತಂಡವು ಜಂಟಿ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಣೆ ಮಾಡಿದೆ.
ರಕ್ಷಿಸಲ್ಪಟ್ಟ 34 ಜನರು ಒಂಬತ್ತು ಕುಟುಂಬಗಳಿಗೆ ಸೇರಿದವರು. ಒಡಿಶಾದ ಮಧ್ಯವರ್ತಿಯೊಬ್ಬರು ಪ್ರತಿ ಕುಟುಂಬಕ್ಕೆ 20,000 ರಿಂದ 30,000 ರೂ. ಮುಂಗಡ ಹಣದ ಭರವಸೆ ನೀಡುವ ಮೂಲಕ ಅವರನ್ನು ಕೆಲಸಕ್ಕೆ ಕರೆದುಕೊಂಡು ಬಂದಿದ್ದರು. ಮೊದಲು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಕೆಲಸ ಕೊಡಿಸುವುದಾಗಿ ಹೇಳಲಾಗಿತ್ತು. ಅಲ್ಲಿಗೆ ಬಸ್ ಮೂಲಕ ಕರೆದೊಯ್ಯಲಾಗಿತ್ತು. ವಿಜಯವಾಡದಿಂದ ರೈಲಿನ ಮೂಲಕ ಬಾಗಲಕೋಟೆಗೆ ಕರೆ ತರಲಾಗಿತ್ತು. ಈ ವಿಚಾರ ಕಾರ್ಮಿಕರಿಗೆ ಗೊತ್ತೇ ಇರಲಿಲ್ಲ. ಬಾಗಲಕೋಟೆಯಲ್ಲಿ ಕೆಲಸ ಪ್ರಾರಂಭಿಸಿ ಎರಡು ವಾರಗಳ ಬಳಿಕವಷ್ಟೇ ಸ್ಥಳೀಯರ ಮೂಲಕ ತಾವು ಕರ್ನಾಟಕದಲ್ಲಿದ್ದೇವೆ ಎಂಬ ವಿಷಯ ಕಾರ್ಮಿಕರಿಗೆ ಗೊತ್ತಾಗಿದೆ ಎಂದು ಸ್ಪಂದನ ಅಸೋಸಿಯೇಷನ್‌ನ ನಿರ್ದೇಶಕಿ ಸುಶೀಲಾ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಕಾರ್ಮಿಕರು ಒಮ್ಮೆ ಕೆಲಸಕ್ಕೆ ಹೋದರೆ 16 ಗಂಟೆಗೂ ಅಧಿಕ ಸಮಯ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ 5 ಗಂಟೆಗೆ ಕೆಲಸ ಪ್ರಾರಂಭಿಸಿದರೆ, ರಾತ್ರಿ 9-10 ಗಂಟೆಯವರೆಗೆ ಕನಿಷ್ಠ ವಿರಾಮಗಳೊಂದಿಗೆ ದುಡಿಯುತ್ತಿದ್ದರು. ಕೆಲಸಕ್ಕೆ ಕರೆದುಕೊಂಡು ಬಂದ ಮಧ್ಯವರ್ತಿ 20,000 ರಿಂದ 30,000 ರೂ.ಗಳವರೆಗೆ ಹಣ ಭರವಸೆ ನೀಡಿದ್ದ, ಆದರೆ ಕುಟುಂಬಗಳಿಗೆ ಒಟ್ಟು 8,000 ರೂ.ಗಳು ಮಾತ್ರ ಸಿಕ್ಕಿತ್ತು. ಪ್ರತಿ ಕುಟುಂಬವು ವಾರಕ್ಕೆ ಸುಮಾರು 800 ರೂ.ಗಳನ್ನು ಗಳಿಸುತ್ತಿತ್ತು, ಅದರಿಂದ ಅವರು ದಿನಸಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಇಟ್ಟಿಗ ಗೂಡು ಮಾಲೀಕ ಪ್ರತಿ ಕುಟುಂಬದಿಂದ ಒಬ್ಬ ಸದಸ್ಯರಿಗೆ ವಾರಕ್ಕೊಮ್ಮೆ ಮಾರುಕಟ್ಟೆಗೆ ಭೇಟಿ ನೀಡಲು ಮಾತ್ರ ಅವಕಾಶ ನೀಡುತ್ತಿದ್ದರು. ಶೋಷಣೆಗೆ ಒಳಗಾದಾಗ ಕಾರ್ಮಿಕರು ಅವರಿಗೆ ಭರವಸೆ ನೀಡಿದ್ದ ವೇತನವನ್ನು ಎಂದಿಗೂ ಪಡೆದಿರಲಿಲ್ಲ ಎಂಬುವುದಾಗಿ ಸುಶೀಲಾ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕಾರ್ಮಿಕರು ನೀರು ಅಥವಾ ನೈರ್ಮಲ್ಯ ಸೌಲಭ್ಯಗಳಿಲ್ಲದೆ ಸಣ್ಣ ಇಟ್ಟಿಗೆ ಗುಡಿಸಲುಗಳಲ್ಲಿ ಅಥವಾ ತಾತ್ಕಾಲಿಕ ಟಾರ್ಪಲ್ ಶೆಡ್‌ಗಳಲ್ಲಿ ವಾಸಿಸುತ್ತಿದ್ದರು. ಅವರು ಕಟ್ಟಿಗೆ ಬಳಸಿ ಅಡುಗೆ ಮಾಡುತ್ತಿದ್ದರು. ಅವರು ಹೊರಗೆ ಹೋದಾಗಲೆಲ್ಲಾ ಗೂಡು ಮಾಲೀಕರು ಅವರನ್ನು ಗಮನಿಸುತ್ತಿದ್ದರು. ಗೂಡು ಮಾಲೀಕ ಮತ್ತು ಅವರ ಇಬ್ಬರು ಪುತ್ರರು ಕಾರ್ಮಿಕರ ಮೇಲೆ ದೈಹಿಕ ದೌರ್ಜನ್ಯ ಎಸಗುತ್ತಿದ್ದರು. ಮೌಖಿಕವಾಗಿ ನಿಂದಿಸುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದರೆ ಕಾರ್ಮಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. 13 ರಿಂದ 16 ವರ್ಷದೊಳಗಿನ ಮಕ್ಕಳು ಕೂಡ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಎಂದು ವರದಿ ವಿವರಿಸಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಈ ಬಗ್ಗೆ ಮಾಹಿತಿ ಪಡೆದ ಸ್ಪಂದನ ಅಸೋಸಿಯೇಷನ್, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿತ್ತು. ಆದರೆ, ದೂರು ದಾಖಲಿಸುವಾಗ ನಮಗೆ ಅಡೆತಡೆಗಳು ಎದುರಾಯಿತು. ಎಫ್‌ಐಆರ್ ದಾಖಲಿಸಲೂ ಕೂಡ ತುಂಬಾ ಸಮಸ್ಯೆ ಆಯಿತು. ನಮ್ಮ ತಂಡದ ಸದಸ್ಯರು ಮತ್ತು ಕಾರ್ಮಿಕರ ರಕ್ಷಣೆಗಾಗಿ ನಾವು ಎಸ್ಪಿಗೆ ಕರೆ ಮಾಡಿದೆವು. ನಂತರ ಅವರು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ರಾಜಕೀಯ ಸಂಪರ್ಕ ಹೊಂದಿರುವ ಕೆಲವು ವ್ಯಕ್ತಿಗಳು ಪೊಲೀಸ್ ಠಾಣೆಗೆ ಬಂದು ಕಾರ್ಯಾಚರಣೆ ಮುಂದುವರಿಸದಂತೆ ಒತ್ತಡ ಹೇರಿದ ಪ್ರಸಂಗವೂ ನಡೆದಿದೆ ಎಂದು ಸುಶೀಲಾ ಹೇಳಿರುವುದಾಗಿ ವರದಿ ತಿಳಿಸಿದೆ.
ಎಫ್‌ಐಆರ್ ದಾಖಲಿಸಿದ್ದರೂ, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಮಧ್ಯವರ್ತಿ ಅಥವಾ ಮಾಲೀಕರನ್ನು ಬಂಧಿಸಲಾಗಿದೆಯೇ ಎಂದು ಕೇಳಿದಾಗ, ಸುಶೀಲಾ, “ನನ್ನ ಪ್ರಕಾರ ಕನಿಷ್ಠ ಮಾಲೀಕರನ್ನೂ ಬಂಧಿಸಿಲ್ಲ. ಏಕೆಂದರೆ ಈ ಪ್ರಕರಣದಲ್ಲಿ ಶಿಕ್ಷೆ ಎರಡು ವರ್ಷಗಳ ಜೈಲಾಗಿದೆ. ಆದ್ದರಿಂದ ಅವರನ್ನು ಬಂಧಿಸದೇ ಇರಬಹುದು. ಅನೇಕ ಸಂದರ್ಭಗಳಲ್ಲಿ ನಾವು ಇದನ್ನು ನೋಡಿದ್ದೇವೆ” ಎಂದು ಸುಶೀಲಾ ಹೇಳಿದ್ದಾರೆ.
ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಗೂಡು ಮಾಲೀಕ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಅವರು ಕಾರ್ಮಿಕರ ಆಧಾರ್ ಕಾರ್ಡ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಪ್ರಕರಣವನ್ನು ಬಲಪಡಿಸಲು ಸ್ಪಂದನ ಸಂಸ್ಥೆ ಎಫ್‌ಐಆರ್‌ಗೆ ಮಾನವ ಕಳ್ಳಸಾಗಣೆ ಆರೋಪಗಳನ್ನು ಸೇರಿಸಲು ಒತ್ತಾಯಿಸಲು ಯೋಜಿಸುತ್ತಿದೆ ಎಂದು ಸುಶೀಲಾ ತಿಳಿಸಿದ್ದಾರೆ. ಪ್ರಸ್ತುತ, ಪೊಲೀಸರು ಬಾಲ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆ, 1976 ರ ಸೆಕ್ಷನ್ 16, 17 ಮತ್ತು 18 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಜಿಲ್ಲಾಡಳಿತವು ಎಲ್ಲಾ 34 ಕಾರ್ಮಿಕರಿಗೆ ಬಿಡುಗಡೆ ಪ್ರಮಾಣಪತ್ರಗಳನ್ನು ನೀಡಿದೆ ಮತ್ತು ಪ್ರತಿ ವ್ಯಕ್ತಿಗೆ 30,000 ರೂ.ಗಳ ತಕ್ಷಣದ ಪರಿಹಾರದ ವ್ಯವಸ್ಥೆ ಮಾಡಿದೆ. ಅಧಿಕಾರಿಗಳು ಮೊದಲು ಕಾರ್ಮಿಕರನ್ನು ಸರ್ಕಾರಿ ಹಾಸ್ಟೆಲ್‌ನಲ್ಲಿ ಇರಿಸಿದ್ದರು. ನಂತರ ಕಾರ್ಮಿಕ, ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ತಂಡದ ಮೂಲಕ ಒಡಿಶಾದ ಅವರ ಹಳ್ಳಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.
ಇದರೊಂದಿಗೆ, ಡಿಸೆಂಬರ್ 2025 ರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ಇಟ್ಟಿಗೆ ಗೂಡುಗಳು ಮತ್ತು ಒಂದು ಕಬ್ಬಿನ ತೋಟದಿಂದ ಒಟ್ಟು 99 ಜನರನ್ನು ಜೀತಪದ್ಧತಿಯಿಂದ ಅಧಿಕಾರಿಗಳು ಮುಕ್ತಗೊಳಿಸಿದಂತೆ ಆಗಿದೆ.
ಬಾಗಲಕೋಟೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸುವುದಕ್ಕೆ ಇಟ್ಟಿಗೆ ಗೂಡುಗಳು ಮತ್ತು ಕಬ್ಬು ಕಟಾವುಗಳಲ್ಲಿ ಕಾರ್ಮಿಕರ ಬೇಡಿಕೆಯೇ ಕಾರಣ ಎಂದು ಸುಶೀಲಾ ಹೇಳಿದ್ದಾರೆ. ಕಾನೂನು ಸರಿಯಾಗಿ ಅನುಷ್ಠಾನ ಆಗದಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ.
Courtesy : thenewsminute.com


