Homeಮುಖಪುಟಮೋದಿ ಸರಕಾರದ ಗ್ರೇಟ್ ಇಂಡಿಯನ್ ಡಾಟಾ ಸರ್ಕಸ್!

ಮೋದಿ ಸರಕಾರದ ಗ್ರೇಟ್ ಇಂಡಿಯನ್ ಡಾಟಾ ಸರ್ಕಸ್!

- Advertisement -
- Advertisement -

| ಜಾಹ್ನವಿ ಸೇನ್ | (ಕೃಪೆ: ದಿ ಕ್ವಿಂಟ್)
| ಅನುವಾದ: ನಿಖಿಲ್ ಕೋಲ್ಪೆ |

ನರೇಂದ್ರ ಮೋದಿ ಸರಕಾರ ನಮ್ಮ ಕುರಿತು ಎಲ್ಲವನ್ನೂ ತಿಳಿಯಲು ಬಯಸುತ್ತಿದೆ- ನಾವು ಮತ್ತು ನಮ್ಮ ತಂದೆ-ತಾಯಿ ಹುಟ್ಟಿದ್ದು ಯಾವಾಗ, ಎಲ್ಲಿ, ನಾವು ವಾಸಿಸುತ್ತಿರುವುದು ಎಲ್ಲಿ, ನಾವು ಏನು ಮಾಡುತ್ತಿದ್ದೇವೆ, ನಮ್ಮ ಕುಟುಂಬದ ಸದಸ್ಯರ ವಿವರಗಳು, ನಮ್ಮ ಮೊಬೈಲ್ ನಂಬರ್… ಇತ್ಯಾದಿ ಇತ್ಯಾದಿ. 133 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಇದೊಂದು ಬೆಟ್ಟದಂತಹಾ, (ಬೆಟ್ಟದಷ್ಟು ಖರ್ಚಿನ) ಕಾರ್ಯಾಚರಣೆ. ಆದರೆ, ಈ ವೆಚ್ಚ ಅತ್ಯಂತ ಅಗತ್ಯ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್)ಯನ್ನು 2020ರಲ್ಲಿ ನವೀಕರಿಸಲೇಬೇಕು ಎಂದು ಕೇಂದ್ರವು ನಿರ್ಧರಿಸಿದೆ.

ರಾಷ್ಟ್ರವ್ಯಾಪಿ ಎನ್‍ಆರ್‍ಸಿಯನ್ನು 2024ರ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ “ಭಾರತೀಯ ಜನತೆ”ಗೆ “ಭರವಸೆ” ನೀಡಿದ್ದಾರೆ. ಎನ್‍ಪಿಆರ್ ಮತ್ತು ಅದಕ್ಕೆ ತಳಕು ಹಾಕಲಾಗಿರುವ ಯೋಜಿತ ಎನ್‍ಆರ್‍ಸಿಯು ಭಾರೀ ಪ್ರಮಾಣದಲ್ಲಿ ಮಾಹಿತಿಯನ್ನು ಕಲೆಹಾಕುವ ಭಾರೀ ಕಾರ್ಯಾಚರಣೆಯಾಗಿದೆ. ದೇಶದಲ್ಲಿ ವಾಸಿಸುವ ಎಲ್ಲರ ವೈಯಕ್ತಿಕ ಮಾಹಿತಿಯನ್ನು ಅದು ಸರಕಾರಕ್ಕೆ ಎಟಕುವಂತೆ ಮಾಡಲಿದೆ. ಈ ಮಾಹಿತಿಯನ್ನು ಸರಕಾರ (ಆ ಮೂಲಕ ಆಳುವ ಪಕ್ಷ) ತಾನು ಬಯಸಿದಂತೆ ಬಳಸುವ ಸಾಧ್ಯತೆ ಇರುತ್ತದೆ- ಅದು ಹಲವರು ಭಯಪಡುತ್ತಿರುವಂತೆ, ಜನರಿಗೆ ಪೌರತ್ವ ನಿರಾಕರಿಸಲು ಆಗಿರಬಹುದು ಆಥವಾ ಜನಸಂಖ್ಯಾಧರಿತ ವಿಶ್ಲೇಷಣೆಯ ಮೂಲಕ ವಿವಿಧ ಪ್ರದೇಶಗಳ ಮತದಾರರನ್ನು ಗುರಿಪಡಿಸಲು ಅಥವಾ ಬೆದರಿಸಲು ಆಗಿರಬಹುದು.

ಆದರೆ, ಆಳುವ ಸರಕಾರ ಇಷ್ಟಪಡದ ಧಾರಾಳ ಅಂಕಿಅಂಶಗಳಿವೆ. 2019ರಲ್ಲಿ ಉತ್ತಮವಾದ ಯೋಜನೆಗಳನ್ನು ರೂಪಿಸಲು ನೆರವಾಗಬಲ್ಲ ಮತ್ತು ಆರ್ಥಿಕತೆಯು ಯಾವ ರೀತಿಯ ಸಾಧನೆಯನ್ನು ಮಾಡುತ್ತಿದೆ (ಅಥವಾ ಮಾಡುತ್ತಿಲ್ಲ) ಎಂಬ ಬಗ್ಗೆ ಭಾರತೀಯರಿಗೆ ಸ್ಪಷ್ಟವಾದ ಚಿತ್ರಣ ನೀಡಬಹುದಾದ ಅತ್ಯಂತ ನಿರ್ಣಾಯಕವಾದ ಅಂಕಿಅಂಶಗಳನ್ನು ಮುಚ್ಚಿಹಾಕಿದ ಆರೋಪವನ್ನು ಮೋದಿ ಸರಕಾರ ಮತ್ತೆಮತ್ತೆ ಎದುರಿಸಿದೆ. ಸರಕಾರ ತನಗೆ ಕೆಲವು ಅಂಕಿಅಂಶಗಳು ಇಷ್ಟವಿಲ್ಲದೇಹೋದಾಗ, ನೇರವಾಗಿ ಅಂತಹಾ ಅಂಕಿಅಂಶಗಳು ಅಸ್ತಿತ್ವದಲ್ಲೇ ಇಲ್ಲ ಎಂದು ನಾಟಕವಾಡಲು ನಿರ್ಧರಿಸುತ್ತದೆ.

ಆದುದರಿಂದ, ಮೋದಿ ಮತ್ತು ಶಾ ಎನ್‍ಪಿಆರ್‍ನ ಮೇಲೆ ಗಮನ ಕೇಂದ್ರೀಕರಿಸುತ್ತಿರುವಾಗ, ಆ ಅಂಕಿಅಂಶಗಳನ್ನು ಅಪಾಯಕಾರಿ, ಬಹುಸಂಖ್ಯಾತ ಉದ್ದೇಶಗಳಿಗೆ ಬಳಸಲಾಗಬಹುದು ಎಂಬ ಭಯವನ್ನು ಹಲವರು ವ್ಯಕ್ತಪಡಿಸುತ್ತಿರುವಾಗ, ಅವುಗಳನ್ನು ಮುಖ್ಯವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮಾತ್ರ ಬಳಸಲಾಗುತ್ತದೆ ಎಂದು ಕೇಂದ್ರ ಸಚಿವರುಗಳು ಹೇಳಿಕೊಳ್ಳುತ್ತಿರುವಾಗ, ಸರಕಾರ ಗಮನಹರಿಸಲೇಬೇಕಾಗಿದ್ದ , ಆದರೆ ಕುರುಡಾಗಿರುವ ಇತರ ಕೆಲವು ಅಂಕಿಅಂಶಗಳ ಕುರಿತು ಇಲ್ಲಿ ಕಣ್ಣುಹಾಯಿಸಲಾಗಿದೆ.

ನಿರುದ್ಯೋಗ

ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‍ಎಸ್‍ಎಸ್‍ಓ) ತನ್ನ ಹೊಸ ನಿಯತಕಾಲಿಕ ಕಾರ್ಮಿಕ ಬಲದ ಸಮೀಕ್ಷೆಯನ್ನು 2017ರ ಜುಲೈ ಮತ್ತು 2018ರ ಜೂನ್ ನಡುವೆ ನಡೆಸಿತು. ಈ ಅವಧಿಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ ಏಕೆಂದರೆ, ಅದು ನೋಟು ಆಮಾನ್ಯೀಕರಣದ ಪರಿಣಾಮವು ಭಾರತದ ಕಾರ್ಮಿಕ ವರ್ಗದ ಮೇಲೆ ಏನಾಯಿತು ಎಂಬುದನ್ನು ತೋರಿಸಿಕೊಡುತ್ತಿತ್ತು. ಮೋದಿ ಸರಕಾರ ಈ ಆಂಕಿಅಂಶಗಳನ್ನು ಬಹಿರಂಗಪಡಿಸಲು ಹೆದರಿ ನಿರಾಕರಿಸಿದಾಗ, ರಾಷ್ಟ್ರೀಯ ಅಂಕಿಅಂಶ ಆಯೋಗದ ಇಬ್ಬರು ಸದಸ್ಯರು ರಾಜೀನಾಮೆ ನೀಡಿದರು. ಆದರೂ ಸರಕಾರ ಜಪ್ಪಯ್ಯ ಎನ್ನಲಿಲ್ಲ.

ಜನವರಿ 2019ರಲ್ಲಿ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆ ಈ ಸಮೀಕ್ಷೆಯ ಫಲಿತಾಂಶವನ್ನು ಸರಣಿ ಲೇಖನಗಳ ಮೂಲಕ ಸೋರಿಕೆ ಮಾಡಿತು. ನಿರುದ್ಯೋಗವು ಕಳೆದ 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಎನ್‍ಎಸ್‍ಎಸ್‍ಓ ಕಂಡುಕೊಂಡಿತ್ತು ಮತ್ತು ಯುವಜನರಲ್ಲಿ ನಿರುದ್ಯೋಗದ ಪ್ರಮಾಣವು ಹಿಂದಿನ ವರ್ಷಗಳಿಗಿಂತ ಗಣನೀಯವಾಗಿ ಹೆಚ್ಚಿತ್ತು.

ಕೇಂದ್ರವು ಕೊನೆಗೂ ಮೇ 2019ರಲ್ಲಿ, ಸಾರ್ವತ್ರಿಕ ಚುನಾವಣೆಗಳು ಮುಗಿದು, ನರೇಂದ್ರ ಮೋದಿ ಸರಕಾರ ಪುನರಾಯ್ಕೆಯಾದ ಬಳಿಕವಷ್ಟೇ ಈ ಅಂಕಿಅಂಶಗಳನ್ನು ಬಹಿರಂಗಗೊಳಿಸಿತು. ಆಗಲೂ ಸರಕಾರವು ಸಮೀಕ್ಷೆಯ ವಿಧಾನ ಬದಲಾಗಿರುವುದರಿಂದ ಅಂಕಿಅಂಶಗಳ ಹೋಲಿಕೆ ಮಾಡಲಾಗದು ಎಂಬ ಸಬೂಬು ನೀಡಿ, ವಿಷಯವನ್ನು ತಣ್ಣಗಾಗಿಸಿತು. ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಮೇಲೂ ಸರಕಾರದಲ್ಲಿ ಯಾರೂ ಈ ವಿಷಯದ ಬಗ್ಗೆ ಗಮನಹರಿಸಿಲ್ಲ ಆಥವಾ ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ತಾವೇನು ಮಾಡುತ್ತಿದ್ದೇವೆ ಎಂಬ ಬಗ್ಗೆ ತುಟಿ ಬಿಚ್ಚಿಲ್ಲ.

ಗ್ರಾಹಕ ಖರ್ಚುಗಳು

ತೀರಾ ಇತ್ತೀಚಿನ ವಿವಾದವು ಅಂಕಿಅಂಶಗಳ ಕುರಿತು ಮೋದಿ ಸರಕಾರದ ಪ್ರವೃತ್ತಿಯನ್ನು ಎತ್ತಿತೋರಿಸಿದ್ದು, ಗ್ರಾಹಕ ವೆಚ್ಚಗಳ ಕುರಿತು ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯ 2017-18ರ ಸಮೀಕ್ಷೆಯ ಮುಜುಗರ ಉಂಟುಮಾಡುವ ಅಂಕಿಅಂಶಗಳತ್ತ ಸರಕಾರ ಕುರುಡುಗಣ್ಣು ಬೀರಿದೆ. ಈ ಬಾರಿ ಕೂಡಾ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆಯೇ ವಿಷಯವನ್ನು ಬಹಿರಂಗಗೊಳಿಸಿದ್ದು, ಗ್ರಾಹಕರು ಮಾಡುವ ಖರ್ಚು ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದಿರುವುದನ್ನು ಅಂಕಿಅಂಶಗಳು ತೋರಿಸಿಕೊಡುತ್ತವೆ. ಇದಕ್ಕೆ ಕಾರಣ ಗ್ರಾಮೀಣ ಬೇಡಿಕೆ ಕುಸಿತವೆಂದು ಆಂಕಿಅಂಶಗಳು ಹೇಳುತ್ತವೆ.

ಇದನ್ನು ನಿಭಾಯಿಸಲು ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ಬದಲು ಸರಕಾರವು ಈ ಬಾರಿ, ದತ್ತಾಂಶಗಳ ಗುಣಮಟ್ಟ ಸರಿಯಿಲ್ಲವೆಂಬ ಸಬೂಬು ನೀಡಿ ಸಮೀಕ್ಷೆಯ ಫಲಿತಾಂಶವನ್ನು ತಿರಸ್ಕರಿಸಿದೆ. ಭಾರತದಲ್ಲಿ ಸರಕಾರವೊಂದು ರಾಷ್ಟ್ರೀಯ ಅಂಕಿಅಂಶ ಕಚೇರಿಯ ಸಮೀಕ್ಷೆಯನ್ನು ತಿರಸ್ಕರಿಸಿರುವುದು ಇದೇ ಮೊದಲ ಬಾರಿ.

ಜಿಡಿಪಿ ಬೆಳವಣಿಗೆ

ನಿಮಗೆ ಇಷ್ಟವಿಲ್ಲದ ಅಂಕಿಅಂಶಗಳನ್ನು ನಿಭಾಯಿಸುವ ಇನ್ನೊಂದು ವಿಧಾನವೆಂದರೆ ಅದನ್ನು ಸಂಪೂರ್ಣವಾಗಿ ಬದಲಿಸುವುದು ಎಂದು ಮೋದಿ ಸರಕಾರ ತೋರಿಸಿಕೊಟ್ಟಿದೆ. ಈ ರೀತಿ ಮಾಡುವುದರಿಂದ ನೀವು ಅಂಕಿಅಂಶಗಳನ್ನು ತಡೆಹಿಡಿದಿದ್ದೀರಿ ಎಂದು ಯಾರೂ ಆರೋಪಿಸುವಂತಿಲ್ಲ ಮತ್ತು ನಿಮ್ಮ ಸರಕಾರವು ಪರಿಸ್ಥಿತಿಯನ್ನು ಹದಗೆಡಿಸಿದೆ ಎಂಬ ಟೀಕೆಯನ್ನೂ ನಿಭಾಯಿಸುವ ಅಗತ್ಯವಿರುವುದಿಲ್ಲ!

2018ರ ಕೊನೆಯ ಭಾಗದಲ್ಲಿ ಸರಕಾರವು ಹೊಸ ‘ಹಿಂದಿನ ಸರಣಿ’ಯ ಜಿಡಿಪಿಯ ‘ಆಧಿಕೃತ’ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿತು. ಆದರ ಪ್ರಕಾರ, ಮನಮೋಹನ್ ಸಿಂಗ್ ಸರಕಾರದಲ್ಲಿ ಜಿಡಿಪಿ ಬೆಳವಣಿಗೆಯು ಹಿಂದೆಯೇ ದಾಖಲಿಸಲಾಗಿರುವುದಕ್ಕಿಂತ ಕಡಿಮೆಯಿತ್ತು! ಹಲವಾರು ತಜ್ಞರು ಈ ಅಂಕಿಅಂಶಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿದ್ದಾರೆ ಮಾತ್ರವಲ್ಲ; ಇದನ್ನು ಮೈಕ್ರೋ ಇಕನಾಮಿಕ್ಸ್‍ನ ಮೂಲಭೂತ ನಿಯಮಗಳನ್ನು ತಲೆಕೆಳಗೆ ಮಾಡಿ ನಿಲ್ಲಿಸುವುದು ಎಂದೂ ಟೀಕಿಸಿದ್ದಾರೆ.

ದೇಶದ ಜಿಡಿಪಿ ಬೆಳವಣಿಗೆ ಐದು ಶೇಕಡಾಕ್ಕಿಂತಲೂ ಕೆಳಮಟ್ಟಕ್ಕೆ ಇಳಿದಿರುವುದಕ್ಕೆ ಕಾರಣಗಳನ್ನು ಹುಡುಕುವ ಬದಲು, ಕೇಂದ್ರ ಸರಕಾರವು ಈ ಅಂಕಿಅಂಶಗಳು ಅಷ್ಟೊಂದು ಕೆಟ್ಟದಾಗಿ ಕಾಣದಂತೆ ಮಾಡಲು ಪ್ರಯತ್ನಿಸಿದಂತೆ ಕಾಣುತ್ತದೆ.

ಲಿಂಚಿಂಗ್

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‍ಸಿಅರ್‍ಬಿ) ತನ್ನ 2016ರ “ಭಾರತದಲ್ಲಿ ಅಪರಾಧ” ಎಂಬ ವರದಿಯನ್ನು ಬರೋಬ್ಬರಿ ಮೂರು ವರ್ಷ ತಡವಾಗಿ ಪ್ರಕಟಿಸಿತು. ಆದರೂ, ತಾನು ಸಂಗ್ರಹಿಸಿದ ಎಲ್ಲಾ ಮಾಹಿತಿಗಳನ್ನು ಪ್ರಕಟಿಸದಿರಲು ನಿರ್ಧರಿಸಿತು. ಗುಂಪಿನಿಂದ ಹಲ್ಲೆ/ಹತ್ಯೆ, ಪ್ರಭಾವಿ ಜನರಿಂದ ನಡೆದ ಕೊಲೆಗಳು, ಖಾಪ್ ಪಂಚಾಯತ್‍ಗಳು ಆದೇಶಿಸಿದ ಹತ್ಯೆಗಳು ಇತ್ಯಾದಿ ಕೆಲವು ನಿರ್ದಿಷ್ಟ ಉಪ ಶೀರ್ಷಿಕೆಗಳ ಅಡಿಯಲ್ಲಿ ಯಾವುದೇ ಅಂಕಿಅಂಶಗಳನ್ನು ಪ್ರಕಟಿಸಲಿಲ್ಲ.

ರೈತರ ಆತ್ಮಹತ್ಯೆಗಳು

ಮೇಲೆ ಉಲ್ಲೇಖಿಸಲಾಗಿರುವ ಎನ್‍ಸಿಅರ್‍ಬಿ ವರದಿಯಲ್ಲಿಯೇ ರೈತರ ಆತ್ಮಹತ್ಯೆ ಕುರಿತ ವಿಭಾಗವೊಂದಿದೆ. ವರದಿಯ ಉಳಿದ ಭಾಗಗಳಂತೆ, ಈ ವಿಭಾಗದ ಅಂಕಿಅಂಶಗಳು ಮೂರು ವರ್ಷಗಳ ಕಾಲ ತಡವಾಗಿರುವುದರ ಹೊರತಾಗಿಯೂ ಅಪೂರ್ಣವಾಗಿವೆ. 2016ರ ವರ್ಷಕ್ಕೆ ರೈತರ ಸಾವಿಗೆ ಕಾರಣಗಳ ವಿಭಾಗವನ್ನೇ ಎನ್‍ಸಿಅರ್‍ಬಿ ಕೈಬಿಟ್ಟಿದೆ. ಈ ಮಾಹಿತಿಯು ರೈತರ ಆತ್ಮಹತ್ಯೆಗಳು ಏಕೆ ಮುಂದುವರಿದಿವೆ ಮತ್ತು ರೈತರ ಸಂಕಷ್ಟಗಳ ನಿವಾರಣೆಗೆ ಏನು ಮಾಡಬಹುದು ಎಂಬ ಕುರಿತು ಒಳನೋಟವನ್ನು ಒದಗಿಸಬಹುದಾಗಿತ್ತು. ಈ ವರದಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಹೇಳಲಾಗಿದ್ದು, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಆತ್ಮಹತ್ಯೆ ಸೊನ್ನೆ ಎಂದು ಹೇಳಲಾಗಿದೆ. ಆದರೆ, ನೈಜ ವರದಿಗಳು ಇದಕ್ಕೆ ವ್ಯತಿರಿಕ್ತವಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...