ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು ಹೊರ ಬರುವುದು ಮುಂದುವರಿಯುತ್ತಲೇ ಇದ್ದು, ಬಿಜೆಪಿ ಪಕ್ಷದ ವರ್ಚಸ್ಸು ಹದಗೆಡುತ್ತಿದೆ ಎಂದು ಹೇಳಿದ್ದಾರೆ.
ಸೋಮವಾರ (ಮಾ.31) ವಿದೇಶಿ ವಿನಿಮಯ ವಹಿವಾಟಿನ ಅಂತ್ಯದ ವೇಳೆಗೆ ಡಾಲರ್ ಎದುರು ರೂಪಾಯಿ ಮೌಲ್ಯವು ಸ್ವಲ್ಪಮಟ್ಟಿಗೆ ಬಲವರ್ಧನೆಗೊಂಡು 94.70 ರೂ.ಗೆ ತಲುಪುವುದಕ್ಕೂ ಮುನ್ನ, ಬೆಳಗ್ಗೆ 95 ರೂ. ಗಡಿಯನ್ನು ದಾಟಿತ್ತು, ಈ ವೇಳೆ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
“ಕೆಳಗೆ ಬೀಳುವುದರಲ್ಲಿ ರೂಪಾಯಿ ಮತ್ತು ಬಿಜೆಪಿಯ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಬಿಜೆಪಿ ನಾಯಕರ ದುಷ್ಕೃತ್ಯಗಳು, ಹಗರಣಗಳು ಹಾಗೂ ಭ್ರಷ್ಟಾಚಾರ ದೊಡ್ಡ ಪ್ರಮಾಣದಲ್ಲಿ ಬಯಲಾಗುತ್ತಿದ್ದು, ಬಿಜೆಪಿಯ ವರ್ಚಸ್ಸು ಮತ್ತಷ್ಟು ಕುಸಿಯುತ್ತಿದೆ” ಎಂದು ಅಖಿಲೇಶ್ ಟೀಕಾಪ್ರಹಾರ ನಡೆಸಿದ್ದಾರೆ.
“ಬಿಜೆಪಿ ಸದಸ್ಯರು ಹಾಗೂ ಅವರ ಸಹಚರರ ಕುರಿತ ವಿಚಾರಗಳು ಬಯಲಾಗುತ್ತಲೇ ಇವೆ. ಹೀಗಿದ್ದೂ, ಯಾವುದೇ ರಾಜೀನಾಮೆ ನೀಡಲಾಗುತ್ತಿಲ್ಲ” ಎಂದಿದ್ದಾರೆ.


