ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು ಕಾನೂನು ಸುದ್ದಿ ಸಂಸ್ಥೆ livelaw.in ವರದಿ ಮಾಡಿದೆ.
ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026 ಟ್ರಾನ್ಸ್‌ಜೆಂಡರ್ ವ್ಯಕ್ತಿಯು ತನ್ನ ಲಿಂಗ ಗುರುತನ್ನು ಸ್ವತಃ ನಿರ್ಧರಿಸುವ ಹಕ್ಕನ್ನು ಕಿತ್ತುಕೊಂಡಿದೆ ಎಂದು ಮಾರ್ಚ್ 30ರಂದು ಹೊರಡಿಸಿದ್ದ ಆದೇಶದಲ್ಲಿ ನ್ಯಾಯಮೂರ್ತಿ ಅರುಣ್ ಮೊಂಗಾ ಟೀಕಿಸಿದ್ದರು. ಗಮನಾರ್ಹವಾಗಿ, ಅದೇ ದಿನದಂದು ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದರು.
livelaw.in ವರದಿಯ ಪ್ರಕಾರ, “2019ರ ಟ್ರಾನ್ಸ್‌ಜೆಂಡರ್ ಕಾಯ್ದೆಗೆ ತರಲಾದ ಹೊಸ ತಿದ್ದುಪಡಿಗಳು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿವೆ. ಇನ್ನು ಮುಂದೆ ಒಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿ ತನ್ನ ಲಿಂಗ ಗುರುತನ್ನು ಅಧಿಕೃತವಾಗಿ ಪಡೆಯಬೇಕಾದರೆ ಸರ್ಕಾರಿ ಅಧಿಕಾರಿಗಳ ತಪಾಸಣೆ ಅಥವಾ ಪ್ರಮಾಣಪತ್ರದ ಅಗತ್ಯವಿರುತ್ತದೆ. ಈ ಹಿಂದೆ ಸುಪ್ರೀಂ ಕೋರ್ಟ್ ‘ತನ್ನ ಲಿಂಗವನ್ನು ತಾನೇ ನಿರ್ಧರಿಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು’ ಎಂದು ಹೇಳಿತ್ತು. ಆದರೆ ಈಗಿನ ಹೊಸ ನಿಯಮಗಳಿಂದಾಗಿ ಆ ಹಕ್ಕು ಸರ್ಕಾರದ ಅನುಮತಿಯ ಮೇಲೆ ಅವಲಂಬಿತವಾಗುವ ಅಪಾಯವಿದೆ” ಎಂದು ನ್ಯಾಯಮೂರ್ತಿ ಅರುಣ್ ಮೊಂಗಾ ಅವರು ತನ್ನ ಆದೇಶದಲ್ಲಿ ಹೇಳಿದ್ದರು.
ಮುಂದುವರಿದು, ಸರ್ಕಾರವು ಹೊಸ ಕಾನೂನುಗಳನ್ನು ಮಾಡುವಾಗ ಅವು ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಕಡಿಮೆ ಮಾಡದಂತೆ ಎಚ್ಚರವಹಿಸಬೇಕು. ಟ್ರಾನ್ಸ್‌ಜೆಂಡರ್‌ಗಳಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕಾನೂನುಗಳು ಇರಬೇಕೇ ಹೊರತು, ಅವರ ಗುರುತನ್ನು ಸಾಬೀತುಪಡಿಸಲು ಕಠಿಣ ನಿಯಮಗಳನ್ನು ಹೇರಿ ಅವರನ್ನು ಸಂಕಷ್ಟಕ್ಕೆ ದೂಡಬಾರದು” ಎಂದಿದ್ದರು.
“ಈ ಹಿನ್ನೆಲೆಯಲ್ಲಿ, ರಾಜಸ್ಥಾನ ಸರ್ಕಾರವು ತನ್ನ ನೀತಿಗಳನ್ನು ರೂಪಿಸುವಾಗ, ತಿದ್ದುಪಡಿ ಮಾಡಲಾದ ಕಾನೂನಿನ ಚೌಕಟ್ಟಿನಲ್ಲೇ ಇದ್ದುಕೊಂಡು ಟ್ರಾನ್ಸ್‌ಜೆಂಡರ್‌ಗಳು ತಮ್ಮ ಗುರುತನ್ನು ತಾವೇ ನಿರ್ಧರಿಸುವ ಹಕ್ಕನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಪಾಡಬೇಕು. ಹೊಸ ಕಾನೂನುಗಳು ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕುಗಳ ಮೌಲ್ಯವನ್ನು ಕಡಿಮೆ ಮಾಡದಂತೆ ಸರ್ಕಾರ ಎಚ್ಚರ ವಹಿಸಬೇಕು. ಇತರ ರಾಜ್ಯಗಳ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು, ಟ್ರಾನ್ಸ್‌ಜೆಂಡರ್‌ಗಳಿಗೆ ಸಮಾಜದಲ್ಲಿ ಸಮಾನ ಸ್ಥಾನ ನೀಡುವ ಹಾಗೂ ಅವರ ಮೇಲೆ ಅನಗತ್ಯ ಕಠಿಣ ನಿಯಮಗಳನ್ನು ಹೇರದಂತಹ ವ್ಯವಸ್ಥೆಯನ್ನು ರೂಪಿಸಬೇಕು” ಎಂದು ನಿರ್ದೇಶಿಸಿದ್ದರು.
ರಾಜಸ್ಥಾನ ಸರ್ಕಾರವು ರೂಪಿಸುವ ನೀತಿಗಳು ಟ್ರಾನ್ಸ್‌ಜೆಂಡರ್‌ಗಳಿಗೆ ಮೀಸಲಾತಿ ನೀಡುವ ಮೂಲಕ ಅವರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸಬೇಕು. ಹೊಸ ಕಾನೂನುಗಳನ್ನು ಪಾಲಿಸುವಾಗ ಅವು ಸಂವಿಧಾನದ ಆಶಯಕ್ಕೆ ಪೂರಕವಾಗಿರಲಿ. ಟ್ರಾನ್ಸ್‌ಜೆಂಡರ್‌ಗಳ ಹಕ್ಕುಗಳು ಕೇವಲ ಹೆಸರಿಗಿರಬಾರದು, ಅವು ನಿಜವಾಗಿಯೂ ಅವರಿಗೆ ಸಿಗುವಂತಿರಬೇಕು ಎಂಬ ದೃಷ್ಟಿಕೋನವನ್ನು ಸರ್ಕಾರ ಅಳವಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತ್ತು.
“ಬದಲಾಗಿರುವ ಈ ಕಾನೂನು ಪರಿಸ್ಥಿತಿಯಲ್ಲಿ, ರಾಜ್ಯ ಸರ್ಕಾರವು ಬಹಳ ಎಚ್ಚರಿಕೆಯಿಂದ ಇರಬೇಕು. ಟ್ರಾನ್ಸ್‌ಜೆಂಡರ್‌ಗಳಿಗೆ ಮೀಸಲಾತಿಯಂತಹ ಸೌಲಭ್ಯಗಳನ್ನು ನೀಡುವ ಮೂಲಕ ಅವರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಕಾಪಾಡಲು ಪ್ರಯತ್ನಿಸಬೇಕು. ಯಾವುದೇ ಹೊಸ ನಿಯಮಗಳು ಕೇವಲ ಕಾನೂನುಬದ್ಧವಾಗಿದ್ದರೆ ಸಾಲದು, ಅವು ಸಂವಿಧಾನದ ಆಶಯಕ್ಕೂ ಪೂರಕವಾಗಿರಬೇಕು. ಟ್ರಾನ್ಸ್‌ಜೆಂಡರ್‌ಗಳ ಹಕ್ಕುಗಳು ಕೇವಲ ನಿಯಮಗಳ ಅಡಿಯಲ್ಲಿ ಸಿಲುಕಿ ಹೆಸರಿಗಷ್ಟೇ ಇರಬಾರದು; ಬದಲಿಗೆ, ಸಮಾಜದಲ್ಲಿ ಅವರು ಎದುರಿಸುತ್ತಿರುವ ಕಷ್ಟಗಳು ಮತ್ತು ತಾರತಮ್ಯಗಳನ್ನು ನಿಜವಾಗಿ ಹೋಗಲಾಡಿಸುವಂತಿರಬೇಕು” ಎಂದಿತ್ತು.
livelaw.in ವರದಿಯ ಪ್ರಕಾರ, ಗುರುವಾರ (ಏಪ್ರಿಲ್ 2) ರಾಜಸ್ಥಾನ ಹೈಕೋರ್ಟ್ ತನ್ನ ಹಳೆಯ ಆದೇಶವನ್ನು ಬದಲಿಸಿ ಹೊಸ ಸ್ಪಷ್ಟೀಕರಣ ಆದೇಶವನ್ನು (Clarificatory Order) ಹೊರಡಿಸಿದೆ. ಈ ಹೊಸ ಆವೃತ್ತಿಯಲ್ಲಿ ನ್ಯಾಯಾಲಯವು ಮೊದಲು ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು (ಆದೇಶದ ಆ ಮೂರು ಪ್ಯಾರಾಗಳನ್ನು) ತೆಗೆದುಹಾಕಿದೆ ಮತ್ತು ಅವುಗಳ ಬದಲಿಗೆ ಎರಡು ಹೊಸ ಪ್ಯಾರಾಗಳನ್ನು ಸೇರಿಸಿದೆ.
“ತೀರ್ಪು ನೀಡುವ ಸಮಯದಲ್ಲಿ ಜಾರಿಯಲ್ಲಿದ್ದ ಕಾನೂನು ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ನೀಡಲಾದ ಮುಖ್ಯ ತೀರ್ಪನ್ನು ಸರ್ಕಾರವು ಪಾಲಿಸಬೇಕು. ಅಲ್ಲದೆ, ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರವು ರೂಪಿಸುವ ಯಾವುದೇ ನೀತಿಗಳು ಅಥವಾ ನಿಯಮಗಳು, ಆ ತೀರ್ಪಿನ ದಿನಾಂಕದಂದು ಜಾರಿಯಲ್ಲಿದ್ದ ಅಸ್ತಿತ್ವದಲ್ಲಿರುವ ಕಾನೂನಿನ ಚೌಕಟ್ಟಿನೊಳಗೆ ಇರುವುದನ್ನು ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಸರಳವಾಗಿ ಹೇಳುವುದಾದರೆ, ನ್ಯಾಯಾಲಯವು ಈಗ “ತೀರ್ಪು ನೀಡಿದ ದಿನ ಇದ್ದ ಕಾನೂನಿನ ಮಿತಿಯಲ್ಲಿ ನಿಯಮಗಳನ್ನು ರೂಪಿಸಿ” ಎಂದು ಸರ್ಕಾರಕ್ಕೆ ತಿಳಿಸಿದೆ ಮತ್ತು ತನ್ನ ಹಳೆಯ ಟೀಕೆಗಳನ್ನು ಕೈಬಿಟ್ಟಿದೆ.
ವರದಿಗಳ ಪ್ರಕಾರ, ಮೊದಲ ಟೀಕೆಗಳನ್ನು ಒಳಗೊಂಡ ಪ್ಯಾರಾಗಳು “ಅಚಾತುರ್ಯದಿಂದ” ಅಥವಾ “ತಪ್ಪಿನಿಂದ” ತೀರ್ಪಿನಲ್ಲಿ ಸೇರ್ಪಡೆಯಾಗಿದ್ದವು ಎಂದು ನ್ಯಾಯಾಲಯ ತಿಳಿಸಿದೆ.
ಆ ಟೀಕೆಗಳು ತೀರ್ಪಿಗೆ “ಅಗತ್ಯವಿರಲಿಲ್ಲ” ಮತ್ತು ಅವುಗಳನ್ನು ಉದ್ದೇಶಪೂರ್ವಕವಾಗಿ ನೀಡಲಾಗಿರಲಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಮುಖ್ಯ ತೀರ್ಪು ನೀಡುವ ಸಮಯದಲ್ಲಿ ಜಾರಿಯಲ್ಲಿದ್ದ ಕಾನೂನು ಸ್ಥಿತಿಗತಿಗಳನ್ನು ಮಾತ್ರ ಪರಿಗಣಿಸಬೇಕಿತ್ತು. ಹೊಸ ತಿದ್ದುಪಡಿ ಕಾಯ್ದೆಯ ಬಗ್ಗೆ ಕಾಮೆಂಟ್ ಮಾಡುವುದು ಆ ಪ್ರಕರಣದ ವ್ಯಾಪ್ತಿಗೆ ಬರುತ್ತಿರಲಿಲ್ಲ ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿತ್ತು.
ಹಿಂಪಡೆಯಲಾದ ಅಭಿಪ್ರಾಯಗಳನ್ನು ನ್ಯಾಯಾಲಯವು ಒಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ವ್ಯಕ್ತಪಡಿಸಿತ್ತು. ಆ ವ್ಯಕ್ತಿಯು 2023ರಲ್ಲಿ ರಾಜಸ್ಥಾನ ಸರ್ಕಾರ ಹೊರಡಿಸಿದ್ದ ಒಂದು ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಆದೇಶದಲ್ಲಿ ಸರ್ಕಾರವು ಟ್ರಾನ್ಸ್‌ಜೆಂಡರ್‌ಗಳನ್ನು ‘ಇತರೆ ಹಿಂದುಳಿದ ವರ್ಗ’ (ಒಬಿಸಿ) ಪಟ್ಟಿಗೆ ಸೇರಿಸಿತ್ತು.
ಹೊಸ ಆದೇಶದಲ್ಲಿ ನ್ಯಾಯಾಲಯ ಟ್ರಾನ್ಸ್‌ಜೆಂಡರ್‌ಗಳು ಅನುಭವಿಸುತ್ತಿರುವ ಸಾಮಾಜಿಕ ಕಡೆಗಣನೆ ಅಥವಾ ತಾರತಮ್ಯ ಎಷ್ಟರ ಮಟ್ಟಿಗಿದೆ ಎಂಬುದನ್ನು ಪತ್ತೆಹಚ್ಚಲು ಮತ್ತು ಅವರಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಶಿಫಾರಸು ಮಾಡಲು ಒಂದು ಸಮಿತಿಯನ್ನು ರಚಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದ ವಿಷಯಗಳಲ್ಲಿ ತೃತೀಯಲಿಂಗಿ ವ್ಯಕ್ತಿಗಳಿಗೆ ಶೇಕಡ 3ರಷ್ಟು ಹೆಚ್ಚುವರಿ ಅಂಕಗಳನ್ನು (Weightage) ನೀಡಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.


