2018ರ ವಿಧಾನಸಭಾ ಚುನಾವಣೆಯ ವೇಳೆ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿಎಂಎಂ ಕೋರ್ಟ್) ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ ಎಂದು ವರದಿಯಾಗಿದೆ.
ಮತದಾರರಿಗೆ ಆಮಿಷವೊಡ್ಡಿದ ಆರೋಪದ ಮೇಲೆ ಬಾಲಕೃಷ್ಣ ಅವರ ವಿರುದ್ಧ ಅಬಕಾರಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಸತತವಾಗಿ ಗೈರಾಗಿರುವ ಹಿನ್ನಲೆ, ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಮನಗರ ತಾಲೂಕಿನ ಬಸವನಪುರ ಗ್ರಾಮದ ಬಳಿ ಇರುವ ಹೀಲ್ ವ್ಯೂ ರೆಸಾರ್ಟ್‌ನಲ್ಲಿ ಹೆಚ್.ಸಿ ಬಾಲಕೃಷ್ಣ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಿದ್ದರು. ಈ ವೇಳೆ ಅಬಕಾರಿ ಸಬ್ ಇನ್‌ಸ್ಪೆಕ್ಟರ್ ಸಮೇತ ಸ್ಥಳಕ್ಕೆ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿಗಳು ಭೇಟಿ ನೀಡಿದ್ದರು. ಸಭೆ ಆಯೋಜನೆಗೆ ಯಾವುದೇ ಅನುಮತಿ ಪಡೆಯದ ಕಾರಣ ಪ್ರಕರಣ ದಾಖಲಾಗಿತ್ತು.
2018ರಲ್ಲಿ ನ್ಯಾಯಾಲಯ ಪ್ರಕರಣದ ವಿಚಾರಣೆ ಆರಂಭಿಸಿತ್ತು. ಆದರೆ, ವಿಚಾರಣೆಗೆ ಬಾಲಕೃಷ್ಣ ಅವರು ಸತತವಾಗಿ ಗೈರಾಗಿದ್ದರು. ನ್ಯಾಯಾಲಯದ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆ, ಅವರ ವಿರುದ್ಧ ನ್ಯಾಯಾಧೀಶರು ಬಂಧನ ವಾರೆಂಟ್ ಹೊರಡಿಸಿದ್ದಾರೆ.


