Homeಕರ್ನಾಟಕದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

- Advertisement -
- Advertisement -

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ ರಾಜಕೀಯ-ಸಾಮಾಜಿಕ ಮತ್ತು ಆರ್ಥಿಕ ವಲಯದ ನಾಡಿ ಮಿಡಿತವಾಗಿದ್ದ ಸ್ಥಳಿಯ ಶಾಸಕ ಶಾಮನೂರು ಶಿವಶಂಕರಪ್ಪರ ನಿಧನದಿಂದ ಈ ಭಾಗದಲ್ಲಿ “ಅಕಾಲಿಕ” ಚುನಾವಣಾ ರಂಗು-ಗುಂಗೇರಿಬಿಟ್ಟಿದೆ. ಧನಾಢ್ಯ-ವರ್ಚಸ್ವೀ ಲಿಂಗಾಯತ ಮುಖಂಡ ಶಾಮನೂರು ಶಿವಶಂಕರಪ್ಪ ಕಳೆದ ಡಿಸೆಂರ್‌ನಲ್ಲಿ ತುಂಬು ಜೀವನ ಮುಗಿಸಿ ತಮ್ಮ 94ನೇ ವಯಸ್ಸಿನಲ್ಲಿ ವಿದಾಯ ಹೇಳುತ್ತಿದ್ದಂತೆಯೇ ದಾವಣಗೆರೆಯ ಮೂರು ದಶಕದ ಏಕತಾನದ ರಾಜಕಾರಣದ ಮಗ್ಗಲೂ ತಂತಾನೆ ಬದಲಾಗಿಬಿಟ್ಟಿತು.

ಹೆಚ್ಚು-ಕಮ್ಮಿ ಮೂವ್ವತ್ತು ವರ್ಷದಿಂದ ತಮ್ಮ ರಾಜಕೀಯ, ಸಾಮಾಜಿಕ ಮತ್ತು ವ್ಯಾವಹಾರಿಕ ಪ್ರಭಾವಳಿಯ ಸುತ್ತ ಕಾಂಗ್ರೆಸ್ ಕೋಟೆ ಕಟ್ಟಿಕೊಂಡು “ದರ್ಬಾರು” ನಡೆಸಿದ ಶಾಮನೂರು ಶಿವಶಂಕರಪ್ಪ ಕಣ್ಮರೆಯಾದ ಕ್ಷಣದಲ್ಲೇ ಉತ್ತರಾಧಿಕಾರಿ ಯಾರೆಂಬ ರೋಚಕ ಚರ್ಚೆಗಳು ಶುರುವಾಗಿಬಿಟ್ಟಿತ್ತು; ಉಪ ಚುನಾವಣೆಯ ಕದನ ಕತೂಹಲ ಕಾಡತೊಡಗಿತ್ತು. ಶಾಮನೂರು ಶಿವಶಂಕರಪ್ಪ ಇಲ್ಲದೆ ಕಳೆದಿರುವ ಈ ದಿನಗಳ ದಾವಣಗೆರೆ ರಾಜಕಾರಣ ಸೂಕ್ಷ್ಮವಾಗಿ ಅವಲೋಕಿಸಿದರೆ ಎದುರಾಗಿರುವ ‘ಬೈ ಇಲೆಕ್ಷನ್’ ಕೇವಲ ಒಂದು ಸ್ಥಾನದ ಸೋಲು-ಗೆಲುವಿನ ಹೋರಾಟವಲ್ಲ; ಕಾಂಗ್ರೆಸ್-ಬಿಜೆಪಿ ನಡುವಿನ ಸಾಂಪ್ರದಾಯಿಕ ಜಿದ್ದಾಜಿದ್ದಿಯಷ್ಟೇ ಅಲ್ಲ. ಅದು, ದಶಕಗಳ ಕಾಲದ ರಾಜಕೀಯ ಪಾರಮ್ಯ ಮತ್ತು ಪ್ರತಿಷ್ಠೆಯ ಅಳಿವು-ಉಳಿವಿನ ನಿರ್ಣಾಯಕ ಯುದ್ಧ; ದಾವಣಗೆರೆ ಜಿಲ್ಲೆಯ ಮುಂದಿನ ಕನಿಷ್ಠ ಒಂದು ದಶಕದ ರಾಜಕಾರಣದ ದಿಕ್ಸೂಚಿ; ಶಾಮನೂರು ಸಂಸ್ಥಾನದಲ್ಲಿನ ಕುಟುಂಬ ಪಾಳೆಗಾರಿಕೆ ಮತ್ತು ಬಹುಸಂಖ್ಯಾತ ಮುಸಲ್ಮಾನ್ ಸಮುದಾಯದ ಹಕ್ಕಿನ ಹಠದ ಕಾಳಗವೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಕ್ಷೇತ್ರದ ಆಕಾರ

ಚಿತ್ರದುರ್ಗ, ದಾವಣಗೆರೆ, ಜಗಳೂರು ಮತ್ತು ಹರಿಹರ, ಶಿವಮೊಗ್ಗ ಜಿಲ್ಲೆಯಲ್ಲೆ ಹೊನ್ನಾಳಿ ಹಾಗೂ ಚನ್ನಗಿರಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕುಗಳನ್ನು ಸೇರಿಸಿ 1997ರಲ್ಲಿ ಅಂದಿನ ಸಿಎಂ ಜೆ.ಎಚ್.ಪಟೇಲ್ ದಾವಣಗೆರೆ ಜಿಲ್ಲೆ ರಚಿಸಿದ್ದರು. ದಾವಣಗೆರೆಗೆ ಸೇರಿದರೆ ತಮಗೆ ಅನಾನುಕೂಲವಾಗುತ್ತದೆಂದು ಹರಪನಹಳ್ಳಿ ಜನರು ಆಕ್ಷೇಪಿಸಿದ್ದರಿಂದ ಆ ತಾಲೂಕನ್ನು ಕೈಬಿಡಬೇಕಾಗಿ ಬಂತು. ಮೊದಲು ದಾಣಗೆರೆಯನ್ನು ದೇವನಗರಿ, ದವನಗಿರಿ ಎಂಬ ಹೆಸರುಗಳಿಂದ ಗುರುತಿಸಲಾಗುತ್ತಿತ್ತೆಂದು ಸ್ಥಳ ಪುರಾಣಗಳು ಹೇಳುತ್ತವೆ. ದಾವಣಗೆರೆ ಮಧ್ಯ ಕರ್ನಾಟಟಕದ ಆಯಕಟ್ಟಿನ ಮಾರುಕಟ್ಟೆ. ಸುತ್ತಲಿನ ಜಿಲ್ಲೆಗಳ ಜನರು ಈ ವ್ಯಾಪಾರ ಕೇಂದ್ರಕ್ಕೆ ಮೆಕ್ಕೆ ಜೋಳ, ಹತ್ತಿ, ಜೋಳ, ಕಡಲೆ, ಸೈರ್ಯಾಕಾಂತಿ, ಭತ್ತ, ಅಕ್ಕಿಯೇ ಮುಂತಾದ ದವಸ-ಧಾನ್ಯ ತಂದು ಮಾರಾಟ ಮಾಡುತ್ತಾರೆ. ಒಂದು ಕಾಲದಲ್ಲಿ ಹತ್ತಿ ಮಿಲ್‌ಗಳು ಹೆಚ್ಚಾಗಿದ್ದರಿಂದ ದಾವಣಗೆರೆಯನ್ನು “ಮ್ಯಾಂಚೆಸ್ಟರ್” ಎಂದು ಕರೆಯಲಾಗುತ್ತಿತ್ತು. ಜವಳಿ ಉದ್ಯಮಕ್ಕೆ ದೇಶ-ವಿದೇಶದಲ್ಲಿ ದಾವಣಗೆರೆ ಪ್ರಸಿದ್ದಿ ಪಡೆದಿತ್ತು! ಶಾಮನೂರು ಶಿವಶಂಕರಪ್ಪರ ಕ್ಯಾಪಿಟೇಷನೆ-ಡೊನೇಷನ್ ಭರಾಟೆ ಶಿಕ್ಷಣ ಸಂಸ್ಥೆಗಳಿಂದ ದಾವಣಗೆರಗೆ ವಿದ್ಯಾ ಕೇಂದ್ರವೆಂಬ “ಅಭಿದಾನ”ವೂ ಬಂದಿದೆ.

ದಾವಣಗೆರೆಯಲ್ಲಿ ಅಹಿಂದ ವರ್ಗ ಬಹುಸಂಖ್ಯಾತವಾಗಿದ್ದರೂ ಬಲಾಢ್ಯ ಲಿಂಗಾಯತರ ಏಸಾಮ್ಯದ ರಾಜಕಾರಣದ ಹಾವಳಿ ಜೋರು. ಲಿಂಗಾಯತರೆ ಶಾಸಕರಾಗಿ ಆಯ್ಕೆಯಾಗುತ್ತಿದ್ದ ದಾವಣಗೆರೆ ಅಸೆಂಬ್ಲಿ ಕ್ಷೇತ್ರದಲ್ಲಿ ಸ್ವಜಾತಿಯ 200-3೦೦ರಷ್ಟು ಮತವಿಲ್ಲದ, ಕೈಯಲ್ಲಿ ಕಾಸಿಲ್ಲದ ಕಾರ್ಮಿಕ ನಾಯಕ ಕೆ.ಪಂಪಾಪತಿ 1983 ಮತ್ತು 1985 ರಲ್ಲಿ ಎರಡು ಸಲ ಶಾಸಕನಾಗಿ ಚುನಾಯಿತರಾದ “ಪವಾಡ”ವೂ ನಡೆದಿದೆ! ಭಾರತೀಯ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದಿಂದ ಗೆಲ್ಲುತ್ತಿದ್ದ ಪಂಪಾಪತಿ ಮೂಲತಃ ತಮಿಳರು. ಇವರ ತಂದೆ ಹೊಸಪೇಟೆ ಆಣೆಕಟ್ಟೆ ಕಟ್ಟುವಾಗ ಕೂಲಿ ಕಾರ್ಮಿಕರಾಗಿ ವಲಸೆ ಬಂದಿದ್ದರು. ಪಂಪಾಪತಿ ದಾವಣಗೆರೆಯ ಕಾಟನ್ ಮಿಲ್ ಒಂದರಲ್ಲಿ ಕಸ ಗುಡಿಸುವ ಚಾಕರಿ ಮಾಡಿಕೊಂಡಿದ್ದರು. ನಂತರ ಕಾಟನ್ ಮಿಲ್ ಕಾರ್ಮಿಕ ನಾಯಕರಾಗಿ ಬೆಳೆದಿದ್ದರು. ದಾವಣಗೆರೆಯಲ್ಲಿ ಕಾರ್ಮಿಕ ಸಂಘಟನೆ ಬಲಿಷ್ಠವಾಗಿದ್ದ ಕಾಲವದು. ಬೆವರಿನ ವರ್ಗದ ನಂಬಿಗಸ್ಥ ನಾಯಕರಾಗಿದ್ದ ಪಂಪಾವತಿ ದಾವಣಗೆರೆ ನಗರ ಸಭೆಯ ಅಧ್ಯಕ್ಷರಾಗುವುದು ಕಷ್ಟವಾಗಲಿಲ್ಲ. ರೈತರು, ಕಾರ್ಮಿಕರು, ಶೋಷಿತರು ಮತ್ತು ಬಡವರ ಪರ ಹೋರಾಟ ಕಟ್ಟಿದ್ದ ಪಂಪಾವತಿ ಪ್ರಬಲ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳನ್ನು ಮಣಿಸಿ ಕಾರ್ಮಿಕ ನಗರಿ ದಾವಣಗೆರೆಯಲ್ಲಿ ಶಾಸಕರಾಗಿದ್ದರು!!

1989 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಂಪಾವತಿಯವರಿಗೆ ಹಣ ಮತ್ತು ಜಾತಿ ರಾಜಕಾರಣದ ಪಟ್ಟುಗಳನ್ನು ಎದುರಿಸಲಾಗಲಿಲ್ಲ. ನಿರಂತರ ಎರಡು ಸಲ ಗೆದ್ದಿದ್ದ ಪಂಪಾವತಿಯವರಿಗೆ ಆಂಟಿ ‘ಇನ್ಕಂಬೆನ್ಸಿ’ಯೂ ಸುತ್ತಿಕೊಂಡಿತ್ತು. ಹೀಗಾಗಿ ದಾವಣಗೆರೆಯಲ್ಲಿ ಲಿಂಗಾಯತ ರಾಜಕಾರಣ ಮತ್ತೆ ವಿಜೃಂಭಿಸಲು ಆರಂಭವಾಯಿತು. 1989 ರಲ್ಲಿ ಕಾಂಗ್ರೆಸ್‌ನ ಮೋತಿ ವೀರಣ್ಣ ದೊಡ್ಡ ಅಂತರದಲ್ಲಿ ಸಿಪಿಐ ಶಾಸಕ ಪಂಪಾವತಿಯವರನ್ನು ಸೋಲಿಸಿದರು. 1998 ರ ನಂತರದ್ದು ಹಣವಂತ ರಾಜಕಾರಣಿ ಶಾಮನೂರು ಶಿವಶಂಕರಪ್ಪರದೇ ಕಾರುಬಾರಿನ ಯುಗ! ಸಕ್ಕರೆ ಕಾರ್ಖಾನೆ, ಹೆಂಡದ ಡಿಸ್ಟಲರಿ, ಮೆಡಿಕಲ್ ಕಾಲೇಜ್‌ ಮುಂತಾದ ನಾನಾ ನಮೂನೆಯ ಉದ್ಯಮಗಳ “ಧಣಿ”ಯಾಗಿದ್ದ ಬೆಂಜ್ ಕಾರು, ಹೆಲಿಕಾಪ್ಟರ್ ಒಡೆಯ ಶಾಮನೂರು ಶಿವಶಂಕರಪ್ಪ 1990ರ ದಶಕದಲ್ಲಿ ರಾಜಕಾರಣದಲ್ಲಿ ಪ್ರವರ್ದಮಾನಕ್ಕೆ ಬಂದ ನಂತರವಂತೂ ಅಹಿಂದ ವರ್ಗಕ್ಕೆ “ಯಜಮಾನರು” ಅನಿವಾರ್ಯ ಆಯ್ಕೆಯಂತಾದರು.

ಕಾಂಗ್ರೆಸ್‌ನ ಆರ್ಥಿಕ ಶಕ್ತಿ(ಖಜಾಂಚಿ)ಯೂ ಆಗಿದ್ದ ಶಾಮನೂರು ಶಿವಶಂಕರಪ್ಪರನ್ನು ಮಕ್ಕಳ ವಿರೋಧ ಪಕ್ಷದವರೊಂದಿಗಿನ ಬೀಗಸ್ಥನದಿಂದಾಗಿ ಪಕ್ಷಾತೀತ ಪ್ರಭಾವಿ ನಾಯಕಾಗ್ರೇಸನನ್ನಾಗಿಸಿತ್ತು! ಶಾಮನೂರು ಶಿವಶಂಕರಪ್ಪರ ಹಿರಿಯ ಪುತ್ರ ಎಸ್.ಎಸ್.ಬಕ್ಕೇಶ್ 1980ರ ದಶಕದಲ್ಲಿ ಜಿಲ್ಲಾ ಪರಷತ್ ಅಸ್ತಿತ್ವಕ್ಕೆ ಬಂದಾಗ ಚಿತ್ರದರ್ಗ ಜಿಲ್ಲಾ ಪರಿಷತ್‌ನ ಅಧ್ಯಕ್ಷರಾಗಿದ್ದರು. ಅಂದಿನ ಜನತಾ ಪಕ್ಷದ ಹವಾದಲ್ಲೂ ಮಗನನ್ನು ಜಿಲ್ಲಾ ಪರಿಷತ್ ಅಧ್ಯಕ್ಷನಾಗಿ ಮಾಡಿದ್ದ ಶಾಮನೂರು, ಜಿಲ್ಲಾ ರಾಜಕಾರಣದಲ್ಲಿ ತನಗಿರುವ ಹಿಡಿತ ಸಾಬೀತುಪಡಿಸಿದ್ದರು. ಆನಂತರ ರಾಜಕೀಯ ಪಡಸಾಲೆಯ ನೇಪಥ್ಯಕ್ಕೆ ಸರಿದ ಬಕ್ಕೇಶ್ ಮಾಜಿ ಸಿಎಂ-ಬಿಜೆಪಿಯ ಬಸವರಾಜ್ ಬೊಮ್ಮಾಯಿ ಬೀಗರು; ರಾಜಕೀಯ ಸ್ಥಾನ-ಮಾನದ ಆಕಾಂಕ್ಷೆಗಳಿದ್ದರೂ ಅವಕಾಶ ಸಿಗದೆ ಕೊರಗುತ್ತಿರುವ ಶಾಮನೂರರ ಎರಡನೇ ಪುತ್ರ ಎಸ್.ಎಸ್.ಗಣೇಶ್ ಕಾಂಗ್ರೆಸ್‌ನ ಪ್ರಭಾವಿ ಸಚಿವ ಎಂ.ಬಿ.ಪಾಟೀಲ್ ಮತ್ತು ಮಾಜಿ ಸಿಎಂ-ಹಾಲಿ ಸಂಸದ ಬಿಜೆಪಿಯ ಜಗದೀಶ್‌ ಶೆಟ್ಟರ್ ಜತೆ ಬೀಗತನ ಸಾಧಿಸಿಕೊಂಡಿದ್ದಾರೆ.

ಹೀಗಾಗಿ, ಶಾಮನೂರು ಕಾಂಗ್ರೆಸ್‌ನ ದೊಡ್ಡ ನಾಯಕರಾಗಿ ಗೋಚರಿಸಿದರೂ ಅವರಿಗೆ ವ್ಯಾವಹಾರಿ ಅನುಕೂಲ, ಕೌಟಂಬಿಕ ನಂಟಿನ “ರಾಜಕೀಯ”ವೇ ಮುಖ್ಯವಾಗಿತ್ತೆಂಬುದು ಬಹಿರಂಗ ರಹಸ್ಯವಾಗಿತ್ತು. ಕಾಂಗ್ರೆಸ್‌ನಿಂದ ಆರು ಬಾರಿ ಶಾಸಕ, ಒಂದು ಬಾರಿ ಸಂಸದರಾಗಿದ್ದ ಶಾಮನೂರು ಯಾವ ಮುಜುಗರವೂ ಇಲ್ಲದೆ ದಾವಣಗೆರೆಯಲ್ಲಿ ತನ್ನ ಸೊಸೆ ಡಾ.ಪ್ರಭಾ ಗೆಲ್ಲಬೇಕು; ಪಕ್ಕದ ಶಿವಮೊಗ್ಗದಲ್ಲಿ ಬಿಜೆಪಿಯ ಯಡಿಯೂರಪ್ಪರ ಮಗ ರಾಘವೇಂದ್ರ ಎಂಪಿಯಾಗಬೇಕೆಂದು ಬಹಿರಂಗವಾಗೇ ಜಾತಿ ರಾಜಕಾರಣ ಮಾಡಬಲ್ಲ “ಧಾಷ್ಟ್ಯ”ದವರಾಗಿದ್ದರು. ಅನೈತಿಕ ರಾಜಕಾರಣದ ಮಾತುಗಾರಿಕ ದಕ್ಕಿಸಿಕೊಳ್ಳುವ “ದಮ್” ಶಾಮನೂರರದಾಗಿತ್ತು! ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ 1978ರಲ್ಲಿ ನೇಮಕವಾಗಿದ್ದ ಶಾಮನೂರು ಶಿವಶಂಕರಪ್ಪರ ಅಧಿಕಾರ ರಾಜಕಾರಣ ಚೈತ್ರ ಯಾತ್ರೆ ದಾವಣಗೆರೆ ಮುನಿಸಿಪಾಲಿಟಿಯಿಂದ ಆರಂಭವಾಗುತ್ತದೆ. ಅವಿಭಜಿತ ಚಿತ್ರದುರ್ಗ- ದಾವಣಗೆರೆ ಅಸೆಂಬ್ಲಿ ಕ್ಷೇತ್ರದಿಂದ 1994ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗುತ್ತಾರೆ. 1998-99ರಲ್ಲಿ ಸಣ್ಣ ಅವಧಿಗೆ ದಾವಣಗೆರೆಯ ಸಂಸದರೂ ಆಗಿರುತ್ತಾರೆ.

ಸುಮಾರು ಐದು ವರ್ಷ ಅಧಿಕಾರವಿಲ್ಲದೆ ಚಡಪಡಿಸಿದ ಶಾಮನೂರು 2004ರಲ್ಲಿ ದಾವಣಗೆರೆ ಜಿಲ್ಲೆಯ ಕೇಂದ್ರವಾಗಿದ್ದ ದಾವಣಗೆರೆ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. 2007 ರಲ್ಲಿ ವಿಧಾನ ಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ನಡೆದಾಗ ದಾವಣಗೆರೆ-ಉತ್ತರ ಮತ್ತು ದಾವಣಗೆರೆ-ದಕ್ಷಿಣವೆಂದು ವಿಭಾಗಿಸಲಾಗುತ್ತದೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ದಾವಣಗೆರೆ ದಕ್ಕಿಣ ಆಯ್ಕೆ ಮಾಡಿಕೊಂಡು ಎರಡನೇ ಮಗ ಮಲ್ಲಿಕಾರ್ಜುನ್‌ಗೆ ದಾವಣಗೆರೆ ಉತ್ತರ ಕ್ಷೇತ್ರ ವಹಿಸುತ್ತಾರೆ. ಶಾಮನೂರು 2013, 2014 ಮತ್ತು 2023ರಲ್ಲಿ ಕಾಂಗ್ರೆಸ್‌ನಿಂದ ನಿರಂತರವಾಗಿ ಗೆಲುವು ಸಾಧಿಸುತ್ತಲೇ ಸಾಗಿದರು! ಶಾಮನೂರರ ವ್ಯಾವಹಾರಿಕ, ರಾಜಕೀಯ ಸಾಮ್ರಾಜ್ಯ ವಿಸ್ತರಣೆಯಾಗುತ್ತಾ ಹೋದಂತೆ ದಾವಣಗೆರೆ ರಾಜಕಾರಣವೂ ಅವರ ಫ್ಯಾಮಿಲಿ ಇಷ್ಟಾನಿಷ್ಟದ ಸುತ್ತಲೇ ಗಿರಕಿ ಹೊಡೆವಂತಾಯಿತು. ಶಾಮನೂರರಿಗೆ ದಾವಣಗೆರೆಯಲ್ಲಿ ಪ್ರತಿಸ್ಪರ್ಧಿಗಳೆ ಇಲ್ಲದ ಪರಿಸ್ಥಿತಿಯಲ್ಲಿ ಬಿಜೆಪಿ ಭೀಮಸಮುದ್ರದ ಅಡಿಕೆ ಮಂಡಿ ಧಣಿ ಗೌಡರ್ ಮಲ್ಲಿಕಾರ್ಜುನಪ್ಪ ಎಂಬ ಆರೆಸೆಸ್ ಆಸಾಮಿಗೆ ರಾಜಕೀಯ ದೀಕ್ಷೆ ಸಂಘೀ ಸರದಾರರು ಕೊಟ್ಟರು!

ಶಾಮನೂರು ಮತ್ತು ಮಲ್ಲಿಕಾರ್ಜುನಪ್ಪ ರಕ್ತ ಸಂಬಂಧಿಗಳಾದರೂ ಒಳಗೊಳಗೆ ಬಿಸ್ನೆಸ್ ಮೇಲಾಟ, ಪ್ರತಿಷ್ಠೆಯ ಸಂಘರ್ಷ ನಡೆದೇ ಇತ್ತು. ಶಾಮನೂರು-ಮಲ್ಲಿಕಾರ್ಜುನಪ್ಪ ಕುಟುಂಬದ ನಡುವಿನ ಶೀತಲ ಸಮರ ಬಿಜೆಪಿ ಬಳಸಿಕೊಂಡಿತು. ಮಲ್ಲಿಕಾರ್ಜುನಪ್ಪ ದಾವಣಗೆರೆಯ ಸಕಲ ವಲಯದಲ್ಲೂ ಶಾಮನೂರರಿಗೆ ಸೆಡ್ಡು ಹೊಡೆಯತೊಡಗಿದರು. ರಾಜಕೀಯ ಜಿದ್ದಾಜಿದ್ದಿ ಶರುವಾಯಿತು. ದಾವಣಗೆರೆ ಲೋಕಸಭಾ ಅಖಾಡಲ್ಲಿ ಶಾಮನೂರು-ಮಲ್ಲಿಕಾರ್ಜುನಪ್ಪ ಮುಖಾಮುಖಿಯಾಗಿ ಸೋಲು-ಗೆಲುವು ಕಂಡರು. 1977ರಲ್ಲಿ ರಚನೆಯಾದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈವರೆಗಿ ಚುನಾವಣೆಯಲ್ಲಿ 7 ಬಾರಿ ಈ ಎರಡೂ ಕುಟುಂಬದ ಅಭ್ಯರ್ಥಿಗಳು ಎದುರಾಳಿಗಳಾಗಿ ಕಾದಾಡಿದ್ದಾರೆ! ಶಾಮನೂರರ ಮಗ-ಸಚಿವ ಮಲ್ಲಿಕಾರ್ಜುನ್‌ ಮೂರು ಸಲ ಸಿದ್ದೇಶ್ವರ್ ವಿರುದ್ಧ ಸೆಣಸಾಡಿ ಸೋತಿದ್ದಾರೆ.

ಮಂತ್ರಿ ಮಲ್ಲಿಕಾರ್ಜುನ್‌ ಮಡದಿ, ಶಾಮನೂರರ ಸೊಸೆ ಡಾ.ಪ್ರಭಾ ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮಲ್ಲಿಕಾರ್ಜುನಪ್ಪ ಸೊಸೆ, ಮಾಜಿ ಸಂಸದ ಸಿದ್ದೇಶ್ವರ್ ಮಡದಿ ಗಾಯತ್ರಿಯನ್ನು ಮಣಿಸಿ ಸಂಸದೆಯಾಗಿದ್ದಾರೆ. ಶಾಮನೂರು ಶಿವಶಂಕರಪ್ಪರ ನಿರ್ಗಮನದ ಈ ದಿನಗಳಲ್ಲೂ ಸದ್ರಿ ಕುಟುಂಬ “ವೈಷಮ್ಯ” ಹಾಗೇ ಮುಂದುವರಿಯುವ ಎಲ್ಲ ಲಕ್ಷಣಗಳು ಕಾಣಿಸತೊಡಗಿದೆ. ಎದುರಾಗಿರುವ ಉಪ ಚುನಾವಣೆಯಲ್ಲೂ ಈ ಎರಡೂ ಕುಟುಂಬಗಳ ನಡುವೆ ಪ್ರತ್ಯಕ್ಷ ಅಥವಾ ಪರೋಕ್ಷ ಜಿದ್ದಾಜಿದ್ದಿಯಾಗೋದು ಗ್ಯಾರಂಟಿ ಎಂದು ಸ್ಥಳಿಯ ರಾಜಕಾರಣದ ಗುಣ-ಲಕ್ಷಣ ಬಲ್ಲವರು ಹೇಳುತ್ತಾರೆ. ಒಟ್ಟಿನಲ್ಲಿ ದಾವಣಗೆರೆ ದಿವಂಗತ ಮಲ್ಲಿಕಾರ್ಜುನಪ್ಪ ಮತ್ತು ದಿವಂಗತ ಶಾಮನೂರು ಶಿವಶಂಕರಪ್ಪ ಮೆನತನದ “ದೊಡ್ಡಸ್ಥಿಕೆ” ಅಖಾಡದಂತಾಗಿ ಹೋಗಿದೆ.

ಚುನಾವಣಾ ಚದುರಂಗ

ದಾವಣಗೆರೆಯಲ್ಲಿ ಮುಸಲ್ಮಾನರು ಹೆಚ್ಚಾಗಿ ಕಂಡುಬರುತ್ತಾರಾದರೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದ ಆಯಕಟ್ಟಿನಲ್ಲಿ ಲಿಂಗಾಯತರಿದ್ದಾರೆ. ಹಲವು ಸಂಸಾರಗಳು ಸಣ್ಣ-ಪುಟ್ಟ ವ್ಯಾಪಾರ-ವಹಿವಾಟಿಂದ ಬದುಕು ಕಟ್ಟಿಕೊಂಡಿವೆ. ನಗರ ಕೇಂದ್ರಿತ ಕ್ಷೇತ್ರವಾದ್ದರಿಂದ ಮೂಲಸೌಕರ್ಯ, ಕೈಗಾರಿಕೆಗಳ ಕೊರತೆಯಂಥ ಸಮಸ್ಯೆ ಬಿಟ್ಟರೆ ದೊಡ್ಡ ಸಂಕಟವೇನಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ನಗರದ ಬೆಳವಣಿಗೆ ಅನುಗುಣವಾಗಿ ರಸ್ತೆ ನಿರ್ಮಾಣ, ಒಳಚರಂಡಿ, ತ್ಯಾಜ್ಯ ನಿರ್ವಹಣೆ ಇಲ್ಲದಾಗಿದೆ. ನಗರ ಗಬ್ಬು ನಾರುತ್ತಿದೆ. ಹಿಂದೆ ಹತ್ತಿ ಗಿರಣಿಗಳು, ಗ್ರಾಮೀಣ ಭಾಗದಲ್ಲಿ ಕೈ ಮಗ್ಗಗಳಿದ್ದವು. “ಮ್ಯಾಚಂಸ್ಟರ್” ಎಂಬುದು ಇತಿಹಾಸದ ಶಬ್ಧವಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲಾಗಿದೆ. ಬೃಹತ್ ಕೈಗಾರಿಕೆ, ದೊಡ್ಡ ಕಂಪನಿಗಳು ದಾವಣಗೆರೆಯ ಬಹು ಮುಖ್ಯ ಅವಶ್ಯಕತೆಯಾಗಿದೆ. ನಗರಸಭೆ ಅಧ್ಯಕ್ಷರಾಗಿ, ಶಾಸಕ, ಸಂಸದ, ಸಚಿವರಾಗಿ ಸುಮಾರು ನಾಲ್ಕು ದಶಕ ದಾವಣಗೆರೆಯನ್ನು ಆಳಿದ್ದ ಯಜಮಾನರ (ಶಾಮನೂರು ಶಿವಶಂಕರಪ್ಪ) ಮೇಲೆ ಜನರಿಗಿದ್ದ ಭರವಸೆ-ನಿರೀಕ್ಷೆಯಷ್ಟು ಪ್ರಗತಿ ಆಗಿಲ್ಲವೆಂಬ ಕೊರಗು ಕ್ಷೇತ್ರದಲ್ಲಿದೆ. ಈ ಅಸಮಧಾನದ ನಡುವೆಯೇ ಶಾಮನೂರು ಜಾತಿ ಸಮೀಕರಣ, ಕಾಸಿನ ನಿರ್ವಹಣೆ ಮತ್ತು ವಿರೋಧಿಗಳನ್ನು ಕಟ್ಟಿಹಾಕುವ ತಂತ್ರಗಾರಿಕೆ ಸಮವಾಗಿ ಬಳಸಿ ಮತ್ತೆ-ಮತ್ತೆ ಗೆದ್ದು ಪಟ್ಟಭದ್ರ ಮಾಡಿಕೊಂಡಿದ್ದರು.

ಶಾಮನೂರು ಶಿವಶಂಕರಪ್ಪ ಸಾದರ ಲಿಂಗಾಯತರು. ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಸಾದರಿಗಿಂತ ನಾಲ್ಕು ಪಟ್ಟು ಹೆಚ್ಚು ಪಂಚಮಸಾಲಿ ಲಿಂಗಾಯತರಿದ್ದಾರೆ. ಆದರೆ ಲಿಂಗಾಯತರ ಎಲ್ಲ ಉಪ-ಪಂಗಡಗಳ ಒಟ್ಟಾರೆ “ಮೇಲರಿಮೆ”ಯ ಅಸ್ತ್ರ ಪಂಚಮಸಾಲಿಗಳ ಮಧ್ಯೆ ಪ್ರಯೋಗಿಸಿ ಓಟು ಪಡೆಯುವ ಕಲೆ ಶಾಮನೂರರಿಗೆ ಕರಗತವಾಗಿತ್ತು. ಕಾಂಗ್ರೆಸ್ ಎಂಬ ಕಾರಣಕ್ಕೆ ಕ್ಷೇತ್ರದ ಪ್ರಥಮ ಬಹುಸಂಖ್ಯಾತ ಮುಸಲ್ಮಾನರು ಶಾಮನೂರರಿಗೆ ಇಡಿಗಂಟಾಗಿದ್ದರು. ಒಂದು ಅನಧಿಕೃತ ಲೆಕ್ಕಾಚಾರದಂತೆ ಕ್ಷೇತ್ರದಲ್ಲಿ 2,31,062 ಮತದಾರರಿದ್ದಾರೆ. ಇದರಲ್ಲಿ ಮುಸಲ್ಮಾನರು 80 ಸಾವಿರ, ಲಿಂಗಾಯತರು 50 ಸಾವಿರ, ಮರಾಠರು 20 ಸಾವಿರ, ವಾಲ್ಮೀಕಿ(ಎಸ್.ಟಿ.) 20 ಸಾವಿರ, ಎಸ್.ಸಿ,ಕುರುಬ ತಲಾ 25 ಸಾವಿರ ಮತ್ತು ಈಡಿಗ, ಉಪ್ಪಾರರೇ ಮುಂತಾದ ಸಣ್ಣ ಸಮುದಾಯದ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ.

2007ರ ಕ್ಷೇತ್ರ ಪುನರ್ ವಿಂಗಡಣೆ ಪರ್ವದ ಮತ್ತು ನಂತರದ ದಾವಣಗೆರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಮೈಲಿಗಲ್ಲುಗಳನ್ನು ನೋಡುತ್ತ ಹೋದರೆ ಇದು “ಸರ್ವರಿಗೂ ಸಮ ಪಾಲು; ಸರ್ವರಿಗೂ ಸಮ ಬಾಳು” ಧ್ಯೇಯೋದ್ದೇಶದ ಪ್ರಜಾ ಸೋಷಿಲಿಸ್ಟ್ (ಪಿಎಸ್ಪಿ) ಮತ್ತು ಭಾರತೀಯ ಕಮ್ಯನಿಸ್ಟ್ (ಸಿಪಿಐ)ನಂಥ ಸಮಾಜವಾದಿ ಬೇರುಗಳು ಇಳಿದಿದ್ದ ನೆಲವೆಂಬುದು ಮನದಟ್ಟಾಗುತ್ತದೆ. ಹಾಗೆಯೇ ವರ್ತಮಾನ ಭಾರತದ ಅತಿ ದೊಡ್ಡ-ಅತೀ ಶ್ರೀಮಂತ ಮತ್ತು ಭೀಭತ್ಸ ಬಲಪಂಥೀಯ ಕೇಸರಿ ಪಕ್ಷ ಎನ್ನಲಾಗುವ ಜನಸಂಘ-ಬಿಜೆಪಿ ದಾವಣಗೆರೆಯಲ್ಲಿ ಒಂದೇ ಒಂದು ಬಾರಿಯೂ ಗೆಲುವು ಸಾಧಿಸಲು ಸಾಧ್ಯವಾಗದಿರುವುದು ಸ್ಪಷ್ಟವಾಗುತ್ತದೆ. ಇಲ್ಲಿ 16 ಸಾಮಾನ್ಯ ಚುನಾವಣೆ ಮತ್ತು ಒಮ್ಮೆ ಉಪ ಚುನಾವಣೆ ನಡೆದಿದೆ. ಇದರಲ್ಲಿ ಕಾಂಗ್ರೆಸ್ 14 ಬಾರಿ ಜಯಶಾಲಿಯಾಗಿದ್ದರೆ, ಸಿಪಿಐ ಎರಡು ಸಲ ಮತ್ತು ಪಿಎಸ್‌ಪಿ ಒಮ್ಮೆ ಗೆಲುವು ಸಾಧಿಸಿವೆ.

1952 ರ ಮೊದಲ ಚನಾವಣೆಯಲ್ಲಿ ಕಾಂಗ್ರೆಸ್‌ನ ಬಳ್ಳಾರಿ ಸಿದ್ದಮ್ಮ ಪಕ್ಷೇತರ ಅಭ್ಯರ್ಥಿ ಹನುಮಂತರಾವ್‌ರನ್ನು 10,294 ಮತದಂತರದಿಂದ ಮಣಿಸಿ ದಾವಣಗೆರೆಯ ಪ್ರಥಮ ಎಮ್ಮೆಲ್ಲೆ ಎನಿಸಿಕೊಂಡಿದ್ದರು. 1957 ರ ಕಾಳಗದಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಕೆ.ಟಿ.ಜಂಬಣ್ಣ ಕಾಂಗ್ರೆಸ್‌ನ ಗಂಜಿ ವೀರಪ್ಪರನ್ನು 6,411 ಮತಗಳಿಂದ ಹಿಮ್ಮೆಟ್ಟಿಸಿ ವಿಧಾನ ಸಭೆ ಪ್ರವೇಷಿಸಿದ್ದರು. 1962 ಮತ್ತ 1967ರ ಹಣಾಹಣಿಯಲ್ಲಿ ಕಾಂಗ್ರೆಸ್‌ನ ಕೊಂಡಜ್ಜಿ ಬಸಪ್ಪ ಮತ್ತು ಪಿಎಸ್‌ಪಿಯ ಸಿ.ಕೇಶವಮೂರ್ತಿ ಮಧ್ಯೆ ನಿಕಟ ಸ್ಪರ್ಧೆ ಏರ್ಪಟ್ಟಿತ್ತು. ಎರಡೂ ಬಾರಿ ಕಾಂಗ್ರೆಸೇ ಗೆದ್ದಿತಾದರೂ ಮತದಂತರ ಮಾತ್ರ ತೀರ ಸಣ್ಣದಿತ್ತು. ಕಾಂಗ್ರೆಸ್‌ನ ಕೊಂಡಜ್ಜಿ ಬಸಪ್ಪ 1962ರಲ್ಲಿ 5762 ಮತ ಮತ್ತು 1967 ರಲ್ಲಿ 3,458 ಮತದಿಂದ ಶಾಸಕನಾಗಿದ್ದರು.

1970ರ ದಶಕಾರಂಭದಲ್ಲಿ ಸೋಷಲಿಸ್ಟ್ ಪಾರ್ಟಿಯ ಒಂದು ಗುಂಪು ಇಂದಿರಾ ಗಾಂಧಿ ಕಾಂಗ್ರೆಸ್ ಸೇರಿತ್ತು. ಆಗ ದಾವಣಗೆರೆಯ ಪಿಎಸ್‌ಪಿ ನಾಯಕ ಕೇಶವಮೂರ್ತಿ ನಿಷ್ಠೆಯೂ ಬದಲಾಯಿತೆಂದು ದಾವಣಗೆರೆ ರಾಜಕೀಯ ಇತಿಹಾಸ ಬಲ್ಲವರು ಹೇಳುತ್ತಾರೆ. 1972 ಚುನಾವಣೆಯಲ್ಲಿ ಕೇಶವಮೂರ್ತಿಯವರ ಮಡದಿ ನಾಗಮ್ಮ ಕೇಶವಮೂರ್ತಿ ದಾವಣಗೆರೆ ಕಾಂಗ್ರೆಸ್ ಕ್ಯಾಂಡಿಡೇಟಾದರು. ಪಿಎಸ್‌ಪಿಯಿಂದ ಕೆ.ಜಿ.ಮಹೇಶ್ವರಪ್ಪ ಮುಖಾಮುಖಿಯಾದರು. ಸಮಾಜ ಸೇವಕಿಯಾಗಿ, ಮಹಿಳಾ ಸಬಲೀಕರಣದ ಧ್ವನಿಯಾಗಿ ಜನ ಸಂಪರ್ಕದಲ್ಲಿದ್ದ ನಾಗಮ್ಮ ದೊಡ್ಡ ಅಂತರ (23,050)ದಲ್ಲಿ ಗೆದ್ದರು. 1974 ರಲ್ಲಿ ನಾಗಮ್ಮ ಕೇಶವಮೂರ್ತಿ ಜನತಾ ಪಕ್ಷದ ಕೆ.ಮಲ್ಲಪ್ಪರನ್ನು ಸೋಲಿಸಿ ಎರಡನೇ ಬಾರಿ ಶಾಸಕಿಯಾದರು. ದಾವಣಗೆರೆ “ಮದರ್ ಥೆರೇಸಾ”, “ಕರ್ನಾಟಕದ ಇಂದಿರಾ ಗಾಂಧಿ” ಎನ್ನಲಾಗುತ್ತಿದ್ದ ನಾಗಮ್ಮ ಕೇಶವಮೂರ್ತಿ, ಗುಂಡೂರಾವ್, ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಸರಕಾರದಲ್ಲಿ ಸಚಿವೆಯಾಗಿದ್ದರು. ಒಮ್ಮೆ ವಿಧಾಸಭೆಯ ಉಪಾಧ್ಯಕ್ಷೆಯೂ ಆಗಿದ್ದರು. ಶಿಕ್ಷಣ ಮಂತ್ರಿಯಾಗಿದ್ದಾಗ 1 ರಿಂದ 4ನೇ ತರಗತಿ ವರೆಗಿನ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ನಡೆಯಬೇಕೆಂಬ ನಿಯಮ ಖಡ್ಡಾಯ ಗೊಳಿಸಿದ್ದರು; ಗ್ರಾಮಾಂತರ ಪ್ರದೇಶದಲ್ಲಿ ಹೈಸ್ಕೂಲ್ ಪ್ರಾರಂಭಿಸುವ ಯೋಜನೆ ಜಾರಿಗೆ ತಂದರು.

1983 ರಲ್ಲಿ ರಾಜ್ಯದಲ್ಲಿ ಬೀಸಿದ್ದ ಕಾಂಗ್ರೆಸ್ ವಿರೋಧಿ ಗಾಳಿಯಲ್ಲಿ ನಾಗಮ್ಮ ಕೇಶವಮೂರ್ತಿ ಅವರಿಗೂ ಗೆಲ್ಲಲಾಗಲಿಲ್ಲ. ಮೊಹಮ್ಮದ್ ಇಕ್ಬಾಲ್ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಓಟ್ ಬ್ಯಾಂಕ್‌ನ ಮುಸ್ಲಿಮ್ ಮತ ಹೆಚ್ಚು ಬಾಚಿದ್ದರಿಂದ ನಾಗಮ್ಮ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಈ ಹಣಾಹಣಿಯಲ್ಲಿ ಸಿಪಿಐನ ಹುರಿಯಾಳು-ಜನಾನುರಾಗಿ ಕಾರ್ಮಿಕ ನಾಯಕ ಕೆ.ಪಂಪಾಪತಿ ನಿಕಟ ಎದುರಾಳಿ ಮೊಹಮ್ಮದ್ ಇಕ್‌ಬಾಲ್‌ರನ್ನು 18,579 ಮತದಂತರದಿಂದ ಸೋಲಿಸಿ ಅಚ್ಚರಿ ಮೂಡಿಸಿದ್ದರು. 1985 ರ ಚುನಾವಣೆಯಲ್ಲಿ ನಾಗಮ್ಮ ಕೇಶವಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಆ ನಂತರ ನಾಗಮ್ಮ ಕೇಶವಮೂರ್ತಿ ಮಾಯಕೊಂಡ ಕ್ಷೇತ್ರದತ್ತ ಗಮನ ಹರಿಸಿದರು. 1989 ರಲ್ಲಿ ಮಾಯಕೊಂಡದಿಂದ ಚುನಾಯಿತರಾದ ನಾಗಮ್ಮ ಕೇಶವಮೂರ್ತಿ ಮಂತ್ರಿಯೂ ಆದರು.

ಶಾಸಕ ಪಂಪಾಪತಿ 1985 ರಲ್ಲಿ ಮತ್ತೆ ರಣ ಕಣಕ್ಕಿಳಿದಿದರು. ಆಗ ಜನತಾ ಪಕ್ಷ-ಸಿಪಿಐ ಮೈತ್ರಿಯಿತ್ತು. ಕಾಂಗ್ರೆಸ್ ನಾಗಮ್ಮ ಕೇಶವಮೂರ್ತಿ ಬದಲಿಗೆ ಲಿಂಗಾಯತರ ಪ್ರಭಾವಿ ಮುಖಂಡ ಯಜಮಾನ್ ಮೋತಿ ವೀರಣ್ಣರನ್ನು ಅಭ್ಯರ್ಥಿ ಮಾಡಿತ್ತು. ಬರಿಗೈ ಪಂಪಾಪತಿ-ದುಡ್ಡು-ಜಾತಿ ಬಲದ ಮೋತಿ ವೀರಣ್ಣ ನಡುವೆ ಕತ್ತುಕತ್ತಿನ ಹೋರಾಟ ನಡೆಯಿತು. ಪಂಪಾಪತಿ 3,773 ಮತದಿಂದ ಮತ್ತೆ ಎಮ್ಮೆಲ್ಲೆಯಾದರು. 1989 ರ ಇಲೆಕ್ಷನ್ ಅಂಕಣದಲ್ಲಿ ಕಾಂಗ್ರೆಸ್‌ನ ಮೋತಿ ವೀರಣ್ಣ ಪಂಪಾಪತಿಗೆ ಮತ್ತೆ ಸೆಡ್ಡು ಹೊಡೆದು ನಿಂತರು. ಜನ ಬದಲಾವಣೆ ಬಯಸಿದ್ದರು; ಮೋತಿ ವೀರಣ್ಣರ ಜಾತಿ-ದುಡ್ಡಿನ ಅಬ್ಬರವೂ ಜೋರಾಗಿಯೇ ಇತ್ತು.ಕೈ-ಬಾಯಿ ಸ್ವಚ್ಛವಾಗಿಟ್ಟುಕೊಂಡಿದ್ದ ಪಂಪಾಪತಿ 22,759 ಮತದಂತರದಿಂದ ಪರಾಭವಗೊಂಡರು.

ದಾವಣಗೆರೆ ಕಾಂಗ್ರೆಸ್ ರಾಜಕೀಯ ರಂಗದ ತೆರೆಮರೆಯಲ್ಲಿ ಕುಳಿತು ಸೂತ್ರ ಆಡಿಸುತ್ತಿದ್ದ ಶಾಮನೂರು ಶಿವಶಂಕರಪ್ಪ 1994ರ ಚುನಾವಣೆಯಲ್ಲಿ ಖುದ್ದು ತಾವೇ ಕೈ ಕಲಿಯಾದರು! ಶಾಸಕ ಮೋತಿ ವೀರಣ್ಣರನ್ನು ಬದಿಗೆ ಸರಿಸಿ ಆಖಾಡಕ್ಕಿಳಿದಿದ್ದ ಶಾಮನೂರು ಶಿವಶಂಕರಪ್ಪರಿಗೆ ವಿರುದ್ಧವಾಗಿ ಬಿಜೆಪಿ ಕೆ.ಬಿ.ಶಂಕರನಾರಾಯಣ ಎಂಬುವರನ್ನು ನಿಲ್ಲಿಸಿತ್ತು. ಯಡಿಯೂರಪ್ಪ ಲಿಂಗಾಯತ ನಾಯಕಾಗ್ರೇಸರಾಗಿ ಅವತರಿಸಿದ ಕಾಲ ಘಟ್ಟವದು. ಹೀಗಾಗಿ ಲಿಂಗಾಯತರ ಮತ ಬ್ಯಾಂಕಲ್ಲಿ ಪಾಲಾಯಿತು. ಮೊದಲ ಪ್ರಯತ್ನದಲ್ಲಿ ಶಾಮನೂರು ಅಪಾರ ಬೆವರಿಳಿಸ ಬೇಕಾಗಿಬಂತು. ದಾವಣಗೆರೆಯಲ್ಲಿ ಆಟಕ್ಕುಂಟು ಲೆಕ್ಕಿಲ್ಲ ಎಂಬತಿದ್ದ ಬಿಜೆಪಿ ಯಡಿಯೂರಪ್ಪ ಜಾತಿ ಆಟ ಮತ್ತು ಹಿಂದುತ್ವದ ಪ್ರಭಾವದಿಂದ 10994ರ ರಣಾಂಗಣದಲ್ಲಿ ಪುಟಿದೆದ್ದಿತ್ತು. ಅಂತೂ ಶಾಮನೂರು ಪ್ರಯಾಸದಿಂದ ಎದುಸಿರುಬಿಡುತ್ತ ಕೇವಲ 1,547 ಮತದಿಂದ ಬಚಾವಾಗಿದ್ದರು ಎಂದು ಅಂದಿನ ರೋಚಕ ಪೈಪೂಟಿ ಕಂಡವರು ಹೇಳುತ್ತಾರೆ. ಬಿಜೆಪಿ ದಾವಣಗೆರೆ ಪಿಚ್‌ನಲ್ಲಿ ಮೊದಲ ಬಾರಿ ರನ್ನರ್ ಅಪ್ ಆಗಿತ್ತು.
ಶಾಸಕ ಶಾಮನೂರು ಶಿವಶಂಕರಪ್ಪ 1998 ರ ಪಾರ‍್ಲಿಮೆಂಟ್ ಚುನಾವಣೆಯಲ್ಲಿ ವ್ಯಾವಹಾರಿಕ, ಧಾರ್ಮಿಕ, ಸಾಮಾಜಿಕ ವಲಯದ ಪರಂಪರಾಗತ ಪ್ರತಿಸ್ಪರ್ಧಿ ಜಿ.ಮಲ್ಲಿಕಾರ್ಜುನಪ್ಪರ ಎದುರು ನಿಂತು ತೊಡೆ ತಟ್ಟಿದರು. 1996 ರಲ್ಲಿ ಸಂದರಾಗಿ ಆಯ್ಕೆಯಾಗಿದ್ದ ಮಲ್ಲಿಕಾರ್ಜುನಪ್ಪ 1998ರಲ್ಲಿ ಶಾಮನೂರು ಶಿವಶಮಕರಪ್ಪರಿಗೆ ಮಣಿಯಬೇಕಾಯಿತು. ಸಂಸದರಾಗಿ ಚುನಾಯಿತರಾದ ಶಾಮನೂರು ಶಾಸಕ ಸ್ಥಾನ ತೆರವುಗೊಳಿಸಿದ್ದರಿಂದ ದಾವಣಗೆರೆ ಅಸೆಂಬ್ಲಿ ಕ್ಷೇತ್ರದಲ್ಲಿ ಉಪಚುನಾವಣೆ ಅನಿವಾರ್ಯವಾಯಿತು. ತನ್ನ ಉದ್ಯಮ ಮತ್ತು ರಾಜಕೀಯ ಕಾರ್ಯದರ್ಶಿಯಂತಿದ್ದ ಕೊನೆಯ ಮಗ ಎಸ್.ಎಸ್.ಮಲ್ಲಿಕಾರ್ಜುನ್‌ ಅವರನ್ನೇ ಉತ್ತರಾಧಿಕಾರಿ ಆಗಬೇಕೆಂಬ ಇರಾದೆ ಶಾಮನೂರರದಾಗಿತ್ತು. ಬೇರೆ ಕ್ಯಾಂಡಿಡೇಟ್ ತಲಾಶ್ ಶಾಸ್ರ‍್ರ ಕಾಂಗ್ರೆಸಲ್ಲಿ ನಡೆಯಿತು. ಎಷ್ಟೇ “ಹುಡುಕಿದರೂ” ಸರಿಯಾದ ಹುರಿಯಾಳು ಸಿಗಲಿಲ್ಲ. ಶಾಮನೂರು ಪುತ್ರನೇ ಕಾಂಗ್ರೆಸ್ ಕ್ಯಾಂಡಿಡೇಟೆಂದು ಘೋಷಿಸಲಾಯಿತು. ಉಪಚುನಾವಣೆ ಸಂದರ್ಭದಲ್ಲಿ ಆಗತಾನೆ ಮದುವೆಯಾಗಿ ಹನಿಮೂನಿಗೆಂದು ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಿದ್ದ ಮಲ್ಲಿಯನ್ನು ತರಾತುರಿಯಲ್ಲಿ ಕೆರಸಲಾಯಿತು.

ದಾವಣಗೆರೆಗೆ ಬಂದ ಮಲ್ಲಿ ಸಿದ್ಧಪಡಿಸಿ ಇಡಲಾಗಿದ್ದ ನಾಮಪತ್ರಕ್ಕೆ ಸಹಿ ಗುಜರಾಯಿಸಿ ಆಖಾಡಕ್ಕೆ ಧುಮುಕಿಬಿಟ್ಟರು; ಅಪ್ಪನ ತಂತ್ರಗಾರಿಕೆಯಿಂದ ಸಲೀಸಾಗಿ ಬಿಜೆಪಿಯ ಎಲ್.ಬಸವರಾಜ್‌ರನ್ನು 21,627 ಮತದಂತರದಿಂದ ಸೋಲಿಸಿ ಶಾಸಕನಾದರು. ಆದರೆ 1999ರಲ್ಲಿ ಎದುರಾದ ಲೋಕಸಭೆಯ ನಡುಗಾಲ ಚುನಾವಣೆಯಲ್ಲಿ ಶಾಮನೂರು ಬಿಜೆಪಿಯ ಮಲ್ಲಿಕಾರ್ಜುನಪ್ಪ ಕೈಲಿ ಸೋಲುಂಡರು! 1999 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಲ್ಲಿ ಮತ್ತು ಸಂಸದ ಮಲ್ಲಿಕಾರ್ಜುನಪ್ಪ ಫ್ಯಾಮಿಲಿಯ ನಿಷ್ಠಾವಂತ ಅನುಯಾಯಿ ಯಶವಂತರಾವ್ ಜಾದವ್ (ಬಿಜೆಪಿ) ನಡುವೆ ರೋಚಕ ಕದನ ನಡೆಯಿತು. ಬಿಜೆಪಿಗೆ ಆಗ ಕಡು ಕೇಸರಿ ರಂಗೇರಿತ್ತು. ಕಾಂಗ್ರೆಸ್‌ನ ಶಾಮನೂರು ಮತ್ತು ಬಿಜೆಪಿಯ ಸಂಸದ ಮಲ್ಲಿಕಾರ್ಜುನಪ್ಪ ಕುಟುಂಬಗಳ ಪ್ರತಿಷ್ಠೆಯ ಮೇಲಾಟವೂ ಇದಾಗಿತ್ತು. ಅಂತಿಮವಾಗಿ ಶಾಮನೂರು ಕೈ ಮೇಲಾಯಿತು; ಅವರ ಕುಲ ಕಂಠೀರವ ಮಲ್ಲಿ 4,293 ಮತದಂತರದಿಂದ ಎರಡನೇ ಸಲ ಅಸೆಂಬ್ಲಿ ಪ್ರವೇಶ ಪಡೆದರು.

1999 ರ ಪಾರ‍್ಲಿಮೆಂಟ್ ಚುನಾವಣೆ ಸೋಲಿನ ಬಳಿಕ ಐದು ವರ್ಷ ಮಾಜಿಯಾಗಿದ್ದ ಶಾಮನೂರು 2004ರಲ್ಲಿ ಮಗ ಮಲ್ಲಿಯನ್ನು ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿಸಿ ತಾನು ದಾವಣಗೆರೆ ಅಸೆಂಬ್ಲಿ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುತ್ತಾರೆ. ಬಿಜೆಪಿಯ ಯಶವಂತರಾವ್ ಜಾದವ್‌ರನ್ನು 22,133 ಮತಗಳಿಂದ ಸೋಲಿಸುತ್ತಾರೆ. 2008ರ ಚುನಾವಣೆ ಹೊತ್ತಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರ ಉತ್ತರ, ದಕ್ಷಿಣವಾಗಿ ವಿಂಗಡಣೆಯಾಗುತ್ತದೆ. ಮಹಾನಗರ ಪಾಲಿಕೆಯ 1ನೇ ವಾರ್ಡಿನಿಂದ 17 ನೇ ವಾರ್ಡ್‌ ತನಕ ಮತ್ತು 22,27ನೇ ವಾರ್ಡ್‌ ಜತೆ ತಾಲೂಕಿನ ಜರಿಕಟ್ಟೆ, ಶಿರಮಗೊಂಡನಹಳ್ಳಿ, ನಾಗೂರು ಸೇರಿದಂತೆ 25 ಹಳ್ಳಿಗಳನ್ನು ಸೇರಿಸಿ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರ ರಚಿಸಲಾಗಿದೆ. ಮೊದಲ ಚುನಾವಣೆ ಕಾಂಗ್ರೆಸ್‌ನ ಶಾಮನೂರು ಮತ್ತು ಬಿಜೆಪಿಯ ಯಶವಂತರಾವ್ ಜಾದವ್ ನಡುವೆ ನಡೆಯುತ್ತದೆ. ಬಹುಸಂಖ್ಯಾತ ಮುಸಲ್ಮಾನರ ಮತ ದಂಡಿಯಾಗಿ ಪಡೆದ ಶಾಮನೂರು 6,358 ಮತದಿಂದ ಶಾಸನ ಸಭೆಗೆ ಆಯ್ಕೆಯಾಗುತ್ತಾರೆ. 2013ರಲ್ಲಿ ತ್ರಿಕೋನ ಕಾಳಗ ಆಗುತ್ತದೆ. ಪಳಗಿದ ಹಳೆ ಹುಲಿ ಶಾಮನೂರು (66,320) ಜೆಡಿಎಸ್‌ನ ಕರೆಕಟ್ಟೆ ಸೈಯ್ಯದ್ ಸೈಫುಲ್ಲಾ(26,163) ಮತ್ತು ಬಿಜೆಪಿಯ ಬಿ.ಲೋಕೇಶ್ (21,282)ರನ್ನು ಎದುರಿಸಬೇಕಾಗುತ್ತದೆ. ಶಾಮನೂರು ಸಮೀಪದ ಪ್ರತಿಸ್ಪರ್ಧಿ ಸೈಫುಲ್ಲಾರನ್ನು ಬರೋಬ್ಬರಿ 40,158 ಮತದಿಂದ ಮಣಿಸುತ್ತಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ಜಾರುತ್ತದೆ.

2018ರಲ್ಲಿ ಮತ್ತದೇ ಸಾಂಪ್ರದಾಯಿಕ ಎದುರಾಳಿಗಳಾದ ಶಾಮನೂರು ಮತ್ತು ಬಿಜೆಪಿಯ ಯಶವಂತರಾವ್ ಜಾದವ್ರವ್‌ ಅವರದ್ದೇ ನೀರಸ ಸೆಣಸಾಟ. 485 ಮತ ಪಡೆದ ಜಾದವ್ರನ್ನು ಶಾಮನೂರ 15,884 ಮತದಂತರದಿಂದ ಹಿಮ್ಮೆಟ್ಟಿಸುತ್ತಾರೆ. 2023ರಲ್ಲಿ ಕೇಸರಿ ಪಾಳೆಯ ಮಾಜಿ ಕೇಂಧ್ರ ಮಂತ್ರಿ ಸಿದ್ದೇಶ್ವರ ಶಿಷ್ಯ ಜಾದವ್ ಬದಲಿಗೆ ಮಾಜಿ ಸಚಿವ ರೇಣುಕಾಚಾರ‍್ಯ ನಿಷ್ಠಾನುಯಾಯಿ ಅಜಯ್‌ಕುಮಾರ್‌ಗೆ ಟಿಕೆಟ್ ಕೊಡುತ್ತದೆ. ಗೆಲ್ಲುವ ಪಟ್ಟುಗಳಲ್ಲಿ ನಿಸ್ಸೀಮರಾಗಿದ್ದ ಶಾಮನೂರರನ್ನು ಎದುರಿಸಲು ರೇಣುಕಾಚಾರ್ಯ ತಂಡಕ್ಕೆ ಸಾಧ್ಯವಾಗುವುದಿಲ್ಲ. ಶಾಮನೂರು ಶಿವಶಂಕರಪ್ಪರಿಗೆ 84,298 ಮತ ಬಂದರೆ, ಬಿಜೆಪಿ ತಂಡ 56,410 ಮತ ಪಡೆಯುವಷ್ಟರಲ್ಲೇ ಹೈರಾಣಾಗಿರುತ್ತದೆ. ಶಾಮನೂರು 27,888 ಮತಗಳ ಭರ್ಜರಿ ವಿಜಯ ಸಾಧಿಸುತ್ತಾರೆ.

ಟಿಕೆಟ್ ತಳಮಳ

ಲಿಂಗಾತರ ರಾಜಕಾರಣ “ಐಕಾನ್” ಅಂತಿದ್ದ ಶಾಮನೂರು ಶಿವಶಂಕರಪ್ಪರ ನಿಧನದಿಂದ ಸೃಷ್ಠಿಯಾಗಿರುವ ಶೂನ್ಯ ತುಂಬಲು ಇದೇ ಏಪ್ರಿಲ್ 9ರಂದು ಉಪಚುನಾವಣೆ ನಡೆಯುತ್ತಿದೆ.ಕಾಂಗ್ರೆಸ್ ಅಳೆದು-ತೂಗಿ ಅಂತಿಮವಾಗಿ ಶಾಮನೂರು ಶಿವಶಂಕರಪ್ಪರ ಮೊಮ್ಮಗ-ಮಂತ್ರಿ ಮಲ್ಲಿ-ಸಂಸದೆ ಡಾ.ಪ್ರಭಾ ದಂಪತಿಗಳ ಕುಲ ಕಂಠೀರವ-27ರ ಹರೆಯದ ಸಮರ್ಥ್‌ನನ್ನು ಆಖಾಕ್ಕಿಳಿಸಿದೆ.ಹಾವು-ಮುಂಗುಸಿಯಂತಿರುವ ಮಾಜಿ ಸಂಸದ ಸಿದ್ದೇಶ್ವರ್ ಮತ್ತು ಮಾಜಿ ಶಾಸಕ ರೇಣುಕಾಚಾರ್ಯ ಬಣಕ್ಕೆ ಸಲ್ಲುವ ಶ್ರೀನಿವಾಸ್ ದಾಸಕರಿಯಪ್ಪರನ್ನು ಬಿಜೆಪಿ ರಾಜಿ ಅಭ್ಯರ್ಥಿಯನ್ನಾಗಿ ಯುದ್ಧಕ್ಕೆ ದೂಡಿದೆ.ದಾವಣಗೆರೆ ಮೇಲೆ ಬಿಗಿ ಹಿಡಿತ ಸಾಧಿಸಿದ್ದ ಶಾಮನೂರ ಶಿವಶಂಕರಪ್ಪ ಬಿಟ್ಟು ಹೋಗಿರುವ ಪೀಠ ಯಾರು ಏರಬಹುದೆಂಬ ಕುತೂಹಲಕರ ಜಿಜ್ಞಾಸೆ ದಾವಣಗೆರೆಯಲ್ಲಷ್ಟೇ ಅಲ್ಲ, ರಾಜ್ಯ ರಾಜಕಾರಣದ ಪಡಸಾಲೆಯಲ್ಲೂ ರೋಚಕವಾಗಿ ನಡೆಯುತ್ತಿದೆ.

ಕಾಂಗ್ರೆಸ್‌ನಲ್ಲಂತೂ ಟಿಕೆಟ್‌ಗಾಗಿ ಒಂಥರಾ ತುಮುಲವೇ ಏರ್ಪಟ್ಟಿತ್ತು;ಈ ಸೀಟು ತಮ್ಮ ಕುಟುಂಬಕ್ಕೆ ಫಿಕ್ಸ್ ಮಾಡಬೇಕೆಂಬ ತೀವ್ರ ತುಡಿತ ಶಾಮನೂರು ಪರಿವಾರದಲ್ಲಿದ್ದು ಎದ್ದು ಕಾಣುತ್ತಿತ್ತು.ಕ್ಷೇತ್ರದ ಬಹುಸಂಖ್ಯಾತ ಮುಸಲ್ಮಾನ್ ಸಮುದಾಯದರು ಈ ಬಾರಿ ತಮಗೆ ಅವಕಾಶ ಬೇಕೆಂದು ಪಟ್ಟು ಹಿಡಿದಿದ್ದರು. ಯಜಮಾನರ(ಶಾಮನೂರು) ಹಿರಿತನಕ್ಕೆ ಮರ್ಯಾದೆ ಕೊಟ್ಟು ಪ್ರತಿ ಚುನಾವಣೆಯಲ್ಲೂ ಅವರಿಗೇ ಟಿಕೆಟ್ ಬಿಟ್ಟು ಕೊಟ್ಟಿದ್ದೇವೆ; 2028ರ ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿ ಕೈ ಟಿಕೆಟ್ ಕೊಡಿಸುವ ಭರವಸೆಯೂ ಕೊಟ್ಟಿದ್ದರು ಎಂಬ ವಾದ ಎಮ್ಮೆಲ್ಸಿ ಜಬ್ಬಾರ್, ಸಾಧಿಕ್ ಪೈಲ್ವಾನ್ ಮತ್ತಿತರ ಮುಸ್ಲಿಮ್ ನಾಯಕರದಾಗಿತ್ತು. ಈ ಬಾರಿ ಬಹುಸಂಖ್ಯಾತ ಮುಸಲ್ಮಾನ್ ಸಮುದಾಯದವರಿಗೆ ಇಲ್ಲವೇ ಹಿಂದುಳಿದ ವರ್ಗದವರಿಗೆ ಅವಕಾಶಕೊಡಿ; ಹಾಗೊಮ್ಮೆ ಲಿಂಗಾಯತರಿಗೇ ಕಣಕ್ಕಿಳಿಸಬೇಕೆಂದಿದ್ದರೆ ದೊಡ್ಡ ಸಂಖ್ಯೆಯಲ್ಲಿರುವ ಪಂಚಮಸಾಲಿಗಳಲ್ಲೊಬ್ಬರಿಗೆ ಅಭ್ಯರ್ಥಿ ಮಾಡಿ ಎಂಬ ಕೂಗೂ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿತ್ತು. ಅತ್ತ ಬಿಜೆಪಿಯಲ್ಲಿ ಕಳೆದ ಅಸೆಂಬ್ಲಿ, ಪಾರ‍್ಲಿಮೆಂಟ್ ಇಲೆಕ್ಷನ್ ನಂತರ ತಲೆಗೊಂದರಂತೆ ಬಣಗಳಾಗಿ ತುರುಸಿನ ಗುದುಮುರಿಗೆ ಸಾಗಿತ್ತು.ಮಾಜಿ ಸಂಸದ ಸಿದ್ದೇಶ್ವರ್ ಮತ್ತು ಮಾಜಿ ಶಾಸಕ ರೇಣುಕಾಚಾರ್ಯ ಪಡೆಗಳು ತಮ್ಮವರಿಗೆ ಕೇಸರಿ ಟಿಕೆಟ್ ಕೊಡಿಸುವ ಕಾರ್ಯಾಚರಣೆ ಶುರುಹಚ್ಚಿಕೊಂಡಿದ್ದರು.

ಆರಂಭದಿಂದಲೇ ಶಾಮನೂರು ಶಿವಶಂಕರಪ್ಪರ ಮಗ-ಮಂತ್ರಿ ಮಲ್ಲಿ ಮತ್ತವರ ಮಡದಿ ಸಂಸದೆ ಡಾ.ಪ್ರಭಾರ ತಮ್ಮ ಕುಡಿ ಮೀಸೆ ಸುಪುತ್ರ ಸಮರ್ಥನನ್ನು ಅಜ್ಜನ ಉತ್ತರಾಧಿಕಾರಿ ಮಾಡುವ “ಆಟ” ನಾಜೂಕಾಗಿ ಆಡುಹತ್ತಿದ್ದರು. ಒಂದು ಹಂತದಲ್ಲಿ ಮಗನಿಗೆ ಕೈ ಕ್ಯಾಂಡಿಡೇಟ್ ಮಾಡದಿದ್ದರೆ ಮಂತ್ರಿಗಿರಿಗೆ ರಾಜಿನಾಮೆ ಬೀಸಾಕಿ ಕಾಂಗ್ರೆಸ್‌ನಿಂದ ದೂರಾಗುವ ಬೆದರಿಕೆಯೂ ಮಲ್ಲಿ ಹಾಕಿದ್ದರಂತೆ.ಇನ್ನೊಂದೆಡೆ ಬಹಳ ವರ್ಷದಿಂದ ತಾನೂ ಎಮ್ಮೆಲ್ಲೆ ಆಗಬೇಕೆಂಬ ಬಯಕೆಯಲ್ಲಿರುವ ಮಂತ್ರಿ ಮಲ್ಲಿ ಅಣ್ಣ ಗಣೇಶ್ ಅಪ್ಪನ ಶೂನ್ಯ ಸಿಂಹಾಸ ಏರುವ ಕನಸು ಬೀಳತೊಡಗಿತ್ತು.ಕಳೆದೆರಡು ಚುನಾವಣೆ ಹೊತ್ತಲ್ಲಿ ಗಣೇಶ್ ಪಕ್ಕದ ಹರಿಹರದಿಂದ ಸ್ಪರ್ಧಿಸುತ್ತಾರೆಂಬ ಮಾತು ಕೇಳಿಬಂದಿತ್ತು.

ಶಾಮನೂರು ಸುಪುತ್ರರಲ್ಲಿ ಸುಮಧುರ ಸಂಬಂಧವೇನೂ ಇಲ್ಲ;ಕುಟುಂಬದ ಒಡಕು ಹಲವು ಬಾರಿ ಬಹಿರಂಗವಾಗಿದ್ದೂ ಇದೆ. ಯಜಮಾನರು ಕಾಲವಾದಾಗ ಅಣ್ಣ-ತಮ್ಮಂದಿರು ಸೊಸೆಯಂದಿರು ಫೋಟೋ ಶೂಟ್‌ಗೆ ಒಟ್ಟಾಗಿದ್ದರಷ್ಟೇ ಎಂದು ಶಾಮನೂರು ಕುಟುಂಬದ ಕತೆ ಬಲ್ಲವರು ಹೇಳುತ್ತಾರೆ.ಬೆಂಗಳೂರಲ್ಲಿ ನಡೆದ ಬಿಜೆಪಿಯ ಒಂದು ಅನೌಪಚಾರಿಕ ಸಭೆಯಲ್ಲೂ ಶಾಮನೂರು ಫ್ಯಾಮಿಲಿ ಬಿಕ್ಕಟ್ಟು ಬಳಸಿಕೊಂಡು ಲಾಭವೆತ್ತುವ ಚರ್ಚೆಯಾಗಿತ್ತು ಎನ್ನಲಾಗಿದೆ. ಹಾಗೇನಾದರೂ ಬಿಜೆಪಿ ಟಿಕೆಟ್ ಆಫರ್ ಬಂದರೆ ಗಣೇಶ್ ಕಡೆಗಣಿಸಲಾರರು ಎಂಬ ಸುದ್ದಿ ಬರಲಾರಂಭಿಸಿತ್ತು. ಆದರೆ ಶಾಮನೂರು ಕುಟುಂಬ ಒಡೆಯುವ ಹುನ್ನಾರ ಯಡಿಯೂರಪ್ಪರಿಗೆ ಇಷ್ಟವಾಗದೆ ಬಿಜಪಿಯ ಒಂದು ವರ್ಗದ ಈ ಪ್ಲಾನು ಪ್ಲಾಪಾಯಿತು. .ಶಿವಶಂಕರಪ್ಪ-ಯಡಿಯೂರಪ್ಪ ತಂತಮ್ಮ ಪಕ್ಷದ ತತ್ವ-ಸಿದ್ಧಾಂತ ಮೀರಿದ “ಹಿತೈಷಿ”ಗಳಾಗಿದ್ದರು.

ಶಾಮನೂರು ಶಿವಶಂಕರಪ್ಪ ಆರು ಬಾರಿ ಎಮ್ಮೆಲ್ಲೆಯಾಗಿದ್ದಾರೆ; ಎಂಪಿಗಿರಿಯೂ ಅನುಭವಿಸಿದ್ದಾರೆ. ಅಪ್ಪ ಮಾಜಿಯಾದಾಗ ಮಲ್ಲಿ ಶಾಸಕನಾಗಿದ್ದಾರೆ. ಈಗ ದಾವಣಗೆರೆ ಉತ್ತರದ ಶಾಸಕನಾಗಿ ಕ್ಯಾಬಿನೆಟ್ ದರ್ಜೆಯ ಸಚಿವನೂ ಆಗಿದ್ದಾರೆ. ಸೊಸೆ ದಾವಣಗೆರೆ ಸಂಸದೆಯಾಗಿದ್ದಾರೆ. ಮತ್ತೆ ಮೊಮ್ಮಗ(ಸಮರ್ಥ್‌) ಅಥವಾ ಮಗ(ಗಣೇಶ್)ಗೆ ಛಾನ್ಸ್ ಕೊಟ್ಟರೆ ಹೇಗೆ? ಏಕ ಕಾಲದಲ್ಲಿ ಒಂದೇ ಕುಟುಂಬದ ಮರ‍್ಮೂರು ಮಂದಿಗೆ ಅಧಿಕಾರ ಕೊಟ್ಟಂತಾಗುವುದಿಲ್ಲವೇ? ಇದು ನಿಷ್ಠಾವಂತ ಅಹಿಂದ ವರ್ಗಕ್ಕೆ ಮಾಡುವ ಅನ್ಯಾಯವಲ್ಲವೇ? ಇದೇನು ವಂಶಪಾರಂಪರ್ಯ ಆಡಳಿತವೇ? ಎಂಬುದು ನಿಷ್ಠಾವಂತ ಕಾಂಗ್ರೆಸಿಗರ ಅಳಲಾಗಿತ್ತು. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುವುದರಿಂದ ಆ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂಬ ಕೂಗು ಕಾಂಗ್ರೆಸಲ್ಲಿ ಹಲವು ವರ್ಷದಿಂದ ಕೇಳಿ ಬರುತ್ತಿದೆ.ಆದರೆ ಶಾಮನೂರರ ಪ್ರಖರತೆಯಲ್ಲಿ ಅದು ಅರಣ್ಯರೋಧನದಂತಾಗಿತ್ತು.ಅಲ್ಪಸಂಖ್ಯಾತರ ಕೈ ಟಿಕೆಟ್ ಬೇಡಿಕೆ ಮತ್ತೆ ಪುನರಾವರ್ತನೆಯಾಗಿತ್ತು.
“ಯಜಮಾನ”ರಿಲ್ಲದ ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಧ್ವನಿ ಕಾಂಗ್ರೆಸ್‌ನಲ್ಲಿ ಸ್ವಲ್ಪ ದೊಡ್ಡದಾಗಿಯೇ ಮೊಳಗಿತ್ತು. ಮುಸ್ಲಿಮ್ ನಾಯಕರು ಮೇಲಿಂದ ಮೇಲೆ ಸಭೆ ನಡೆಸಿ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದರು.ಮಂತ್ರಿ ಝಮೀರ್ ಅಹಮ್ಮದ್ ಮುಸಲ್ಮಾನರ ಬೆನ್ನಿಗೆ ನಿಂತಿದ್ದರು. ಎಮ್ಮೆಲ್ಸಿ ಅಬ್ದುಲ್ ಜಬ್ಬಾರ್ ಮತ್ತು ಸ್ಥಳಿಯ ಪ್ರಬಲ ನಾಯಕ ಸಾಧಿಕ್ ಪೈಲ್ವಾನ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು.ಅಲ್ಪ ಸಂಖ್ಯಾತರಿಗೆ ಕೈ ಅಭ್ಯರ್ಥಿಯಾಗಿಸಿ ಗೆಲ್ಲಿಸಿಕೊಂಡು ಬರುವ ಇಚ್ಛಾ ಶಕ್ತಿ ಸಿಎಮ್ ಸಿದ್ದು ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಇದೆಯೇ? ಶಿಗ್ಗಾವಿಯಲ್ಲಿ ಮುಸ್ಲಿಮ್ ಕ್ಯಾಂಡಿಡೇಟ್ ಕಣಕ್ಕಿಳಿಸಿ ಗೆಲ್ಲಿಕೊಂಡು ಬರುವುದು ಸಾಧ್ಯವಾದರೆ ಇಲ್ಲೇಕೆ ಆಗದು? ಎಂಬುದು ಮುಸಲ್ಮಾನ್ ನಾಯಕರ ಪ್ರಶ್ನೆಯಾಗಿತ್ತು.

ಮತ್ತೊಂದೆಡೆ, ಹಿಂದುಳಿದ ವರ್ಗದವರೂ ಕೈ ಉಮೇದುವಾರಿಕೆ ತಮಗೆ ಕೊಡುವಂತೆ ಒತ್ತಡ ಹಾಕಿದ್ದರು.ನಾಯಕ, ಕುರುಬ, ಮರಾಠ, ಪರಿಶಿಷ್ಟ ಜಾತಿ, ಉಪ್ಪಾರ ಮುಂತಾದ ಹಿಂದುಳಿದ ಜಾತಿ-ಜನಾಂಗದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಅಹಿಂದ ಒಂದಾದರೆ ಕಾಂಗ್ರೆಸ್‌ಗೆ ಗೆಲುವು ಸುಲಭ ಎಂಬ ಚರ್ಚೆಗಳು ಜೋರಾಗಿತ್ತು. ಕಾಂಗ್ರೆಸ್ ಅಹಿಂದ ವರ್ಗದ ಬೇಡಿಕೆ ನಿರ್ಲಕ್ಷಿಸಿ ಶಾಮನೂರು ಮನೆತನಕ್ಕೆ ಮತ್ತೆ ಮಣೆಹಾಕಿದರೆ ಬಿಜೆಪಿಗೆ ಲಾಭವಾಗುತ್ತದೆ. ಶಾಮನೂರ್ ಫಾಮೀಲಿಯ ವಂಶಪಾರಂಪರ್ಯ ಅಧಿಕಾರ ರಾಜಕಾರಣಕ್ಕೆ ಇನ್ನಾದರೂ ತಡೆಬೀಳಲಿ; ಹಿಂದುಳಿದ ವರ್ಗ ಬಂಡೆದ್ದರೆ ಕಾಂಗ್ರೆಸ್‌ಗೆ ದುಬಾರಿಯಾಗಲಿದೆ ಎಂಬ ಮಾತುಗಳು ಕೇಳಿಬಂದಿತ್ತು.ಯಾರಿಗಾದರೂ ಕೊಡಿ; ಆದರೆ ಅಹಿಂದ್ ಸಮುಯಕ್ಕೆ ಕೊಡಿ.ದಾವಣಗೆರೆ ದಕ್ಷಿಣ ಕ್ಷೇತ್ರ ನಿಜಕ್ಕೂ ಅಹಿಂದ ನೆಲ-ನೆಲೆ ಎಂಬುದು ಒಟ್ಟಾರೆಯಾಗಿ ಆಸ್ಫಟಿಸಿದ ಆಗ್ರಹವಾಗಿತ್ತು.ಇದು ಸಿಎಂ ಸಿದ್ದು ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.ಅಹಿಂದ್ ನಿರಾಶವಾಗದಂತೆ ನಿಗಾ ವಹಿಸಬೇಕಾದ ದರ್ದು ಸಿದ್ದುಗಾದರೆ,ಪಕ್ಷಕ್ಕೆ ಹಣಕಾಸಿನ ಬಲ ತುಂಬುವ ಶಾಮನೂರು ಪರಿವಾರ ಕೈಬಿಡಲಾರದ ಸಂಕಟ ಡಿಕೆಶಿಯದಾಗಿತ್ತು.

ದಶಕಗಳಿಂದ ಶಾಮನೂರು ಶಿವಶಂಕರಪ್ಪರ ವ್ಯಕ್ತಿತ್ವದ ಮೇಲೆ ನಡೆಯುತ್ತಿದ್ದ ದಾವಣಗೆರೆ ಚುನಾವಣೆ ಈಗ ಸಿದ್ಧಾಂತ-ಸಾಮಾಜಿಕ ನ್ಯಾಯ ಮತ್ತು ಕುಟುಂಬ ಹಿತಾಸಕ್ತಿಯ ರಾಜಕಾರಣದ ಕುಸ್ತಿ ಅಂಕಣವಾಗಿದೆ!ಅಂತಿಮವಾಗಿ ಈ ಉಪ ಚುನಾವಣೆ ಶಾಮನೂರು ಕುಟುಂಬದ ಯುಗಾಂತ್ಯ ಮಾಡವುದೋ? ಹೊಸ ಮೊಮ್ಮಗನ ವೇಷದಲ್ಲಿ ಮುಂದುವರಿಸುವುದೋ? ಅಥವಾ ಅವಕಾಶ ವಂಚಿತ ಅಹಿಂದ ನಾಯಕತ್ವ ಹುಟ್ಟುಹಾಕುವುದೋ? ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿಸಿದೆ. ಕಾಂಗ್ರೆಸ್‌ನ ಗೊಂದಲ-ಗಲಾಟೆಯಲ್ಲಿ ತಮ್ಮ ರೊಟ್ಟಿ ಜಾರಿ ತುಪ್ಪಕ್ಕೆ ಬೀಳಬಹುದೆಂಬ ಲೆಕ್ಕಾಚಾರ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಮತ್ತಿತರ ಮೇಲ್ಮಟ್ಟದ ಲೀಡರ್‌ಗಳದು. ಆದರೆ ದಾವಣಗೆರೆ ಮಟ್ಟದಲ್ಲಿ ಕಮಲದ ಪಕಳೆಗಳು ಬಾಡಿ ಉದುರುತ್ತಿವೆ. ಹಿಂದುತ್ವದ ಓಟು ಬಿಟ್ಟರೆ ಸಂಘಟನೆ ಇಲ್ಲದಾಗಿದೆ. ಹೈಕಮಾಂಡ್‌ನ ತಾಕೀತಿಗೆ ಹೆದರಿ ಹೊರ ನೋಟಕ್ಕೆ ಒಂದಾದಂತೆ ಕಾಣಿಸುತ್ತಿರುವ ಸಿದ್ದೇಶ್ವರ-ರೇಣುಕಾಚಾರ್ಯ ಕಿತ್ತಾಟದಲ್ಲಿ ಕಾರ್ಯರ್ತರು ಕಂಗೆಟ್ಟಿದ್ದಾರೆ. ಅಸೆಂಬ್ಲಿ ಚುನಾವಣೆಯಲ್ಲಿ ಸಿದ್ದೇಶ್ವರ್ ತನ್ನ ಸೋಲಿಗೆ ಕಿತಾಪತಿ ಮಾಡಿದ್ದಾರೆಂಬ ಭಾವನೆ ರೇಣುಕಾಚಾರ್ಯದು; ಲೋಕಸಭಾ ಇಲೆಕ್ಷನ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತನ್ನ ಮಡದಿಗೆ ಮತ ಬರದಂತೆ ರೇಣುಕಾಚಾರ್ಯ ಮಸಲತ್ತು ಮಾಡಿದ್ದಾರೆಂಬ ನಂಬಿಕೆ ಸಿದ್ದೇಶ್ರದ್ದು.

ರಣ ಕಣ ಹೇಗಿದೆ?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಚುನಾವಣಾ ಸಿದ್ಧಸೂತ್ರ ಈ ಬಾರಿ ಬದಲಾಗಿರುವುದು ನಿಚ್ಚಳವಾಗಿ ಗೋಚರಿಸುತ್ತದೆ. ಇಷ್ಟು ದಿನ ಮುಸಲ್ಮಾನ್ ಸಮುದಾಯ ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರವಾಡುತಿತ್ತು. ಈ ಬಾರಿ ಕ್ಷೇತ್ರದ ದ್ವಿತೀತ ಬಹುಸಂಖ್ಯಾತರಾದ ಲಿಂಗಾಯತರು ಅಭ್ಯರ್ಥಿಗಳ ಹಣೆಬರಹ ನಿರ್ಧರಿಸುವ ಸಾಧ್ಯತೆ ಗೋಚರಿಸುತ್ತಿದೆ. ಮುಸ್ಲಿಮರು ಯಾರಿಗೆ ಬೆಂಬಲಿಸುತ್ತಾರೋ ಅವರೆ ಕ್ಷೇತ್ರದ ಶಾಸಕರಾಗುವುದು ಪಕ್ಕಾ ಆಗಿತ್ತು.ಈ ಸಲ ರಣ ರಂಗದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಅವಕಾಶ ಸಿಗದ ಅಸಮಧಾನ ಮುಸಲ್ಮಾನ್ ಸಮುದಾಯದಲ್ಲಿ ಬುಸುಗುಡುತ್ತಿದೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಕಣದಿಂದ ನಿವೃತ್ತಿ ಘೋಷಿಸಿದ್ದರೂ ಒಳಗೊಳಗೇ ಹೊಗೆಯಾಡುತ್ತಿರುವ ಟಿಕೆಟ್ ವಂಚನೆಯ ಆಕ್ರೋಶ ಕಾಂಗ್ರೆಸ್‌ಗೆ ಮುಳುವಾಗ ಆತಂಕ ಆ ಪಾರ್ಟಿ ಹಿರಿಯಲ್ಲಿದೆ.ಕಾಂಗ್ರೆಸ್‌ಗೆ ಪಾಠ ಕಲಿಸಲು ಎಸ್‌ಡಿಪಿಐ ಅಭ್ಯರ್ಥಿ ಹಾಕಿದೆ; ಮುಸಲ್ಮಾನ್ ಸಮುದಾಯದ 13 ಮಂದಿ ಪಕ್ಷೇತರರಾಗಿ ಕಣಕ್ಕಿಳಿದಿದಾರೆ. ಮುಸಲ್ಮಾನರ ಮತ ಬ್ಯಾಂಕ್ ಛಿದ್ರವಾಗುವ ಲೆಕ್ಕಾಚಾರಗಳಾಗುತ್ತಿದೆ. ಸಾಂಪ್ರದಾಯಿಕ ಮುಸ್ಲಿಮ್ ಮತದ ಬುಟ್ಟಿ ಕೈ ಜಾರುವ ಆತಂಕ ಕಾಂಗ್ರೆಸ್ ಕಾಡುತ್ತಿದೆ. ಹೀಗಾಗಿ ಸಿಎಮ್ ಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆದಿಯಾಗಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಗೆಲುವಿಗೆ ಅನಿವಾರ್ಯವಾಗಿರುವ ಮುಸ್ಲಿಮ್ ಮತಗಳು ಚದುರಿಹೋಗದಂತೆ ತಂತ್ರಗಳ ಹೆಣೆಯುತ್ತಿದ್ದಾರೆ; ಮುನಿಸಿಕೊಂಡಿರುವ ಮುಸಲ್ಮಾನ್ ಮುಖಂಡರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ.

ಈ ಉಪ ಚುನಾವಣೆಯಲ್ಲಿ ಲಿಂಗಾಯತರ ಮತಗಳು ನಿರ್ಣಾಯಕವಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದ ಕಂಗಳು ಅತ್ತಲೇ ನೆಟ್ಟಿದೆ. ಒಂದು ವಿಶ್ಲೇಷಣೆಯಂತೆ ಸ್ಥಳಿಯ ಲಿಂಗಾಯತರು ಬಿಜೆಪಿ ಒಲವಿನವರಾದರೂ ಶಾಮನೂರು ಕುಟುಂಬದ ನಂಟಿನವರು; ಆ ಮಂದಿಗೆ ಪರಿಶಿಷ್ಟ ಪಂಗಡದ ಬಿಜೆಪಿ ಅಭ್ಯರ್ಥಿ ದಾಸಕರಿಯಪ್ಪರಿಗಿಂತ ಸ್ವಸಮುದಾಯದ ಶಾಮನೂರು ಮೊಮ್ಮಗನೇ ಹಾಟ್ ಫೇವರಿಟ್! ಶಾಮನೂರು ಫ್ಯಾಮಿಲಿಯವರ ಗೆಲುವಿಗೆ ಅನುಕೂಲವಾಗಲೆಂದೇ ಯಡಿಯೂರಪ್ಪ,ಬೊಮ್ಮಾಯಿ ವಗೇರೆ ಬಿಜೆಪಿ ಲಿಂಗಾಯತ ಲೀಡರ್‌ಗಳು ದಾಸಕರಿಯಪ್ಪರನ್ನು ಬಲಿಮಾಡಿದ್ದಾರೆ ಎನ್ನುವವರೂ ಇದ್ದಾರೆ.

ಶಾಮನೂರು ಶಿವಶಂಕರಪ್ಪರ ಸಾವಿನ ಅನುಕಂಪಕ್ಕಿಂತ ಆ ಕುಟುಂಬಕ್ಕೆ ಕ್ಷೇತ್ರದ ಮೇಲಿರುವ ಬಿಗಿ ಹಿಡಿತವೇ ಕಾಂಗ್ರೆಸ್‌ಗೆ ಪ್ಲಸ್ ಎನ್ನಲಾಗಿದೆ. ಕಾಂಗ್ರೆಸ್ ಹುರಿಯಾಳಿನ ತಾಯಿ (ಸಂಸದೆ) ಮತ್ತು ತಂದೆ (ಮಂತ್ರಿ) ಕೈಲಿರುವ ಅಧಿಕಾರ-ಜನ ಗೆಲುವಿಗೆ ನೆರವಾಗುತ್ತಿದೆ.ಮುಸಲ್ಮಾನರಿಗೆ ಕಾಂಗ್ರೆಸ್ ಮೇಲೆ ಸಿಟ್ಟಿದೆಯಾದರೂ ಬಿಜೆಪಿಗೆ ಮತವಂತೂ ಹಾಕಲಾರರು. ಮುಸಲ್ಮಾನರ ಮುಯ್ಯಿಯಿಂದ ಎಸ್‌ಡಿಪಿಐಗೆ ಹೆಚ್ಚು ಮತ ಬರಬಹುದು. ಹಾಗಾಗಿ ಈ ಕಾಂಗ್ರೆಸ್-ಬಿಜೆಪಿ ನೇರ ಕಾಳಗದಲ್ಲಿ ಲಿಂಗಾಯತರ ಬಲ ಸಿಗಲಿರುವ ಕಾಂಗ್ರೆಸ್‌ಗೆ ಗೆಲುವಿನ ಅವಕಾಶ ಜಾಸ್ತಿಯೆಂದು; ಮುಸ್ಲಿಮರ ಮತ ಮೊದಲಿನಂತೆ ಸಾರಾಸಗಟಾಗಿ ಸಿಕ್ಕಂತೂ ದಿಗ್ವಿಜಯ ಖಂಡಿತ. ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಸದ್ಯಕ್ಕಂತೂ ಕಾಂಗ್ರೆಸಿಗೇ ಗೆಲುವಿನ ಅವಕಾಶಗಳು ಜಾಸ್ತಿಯಿರುವಂತ ವಾತಾವರಣವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4,...