“ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು ಪ್ರಾರಂಭಿಸಿದೆವು. ನಾನು ಅವರ ಪಕ್ಷವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇನೆ”, ಇದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಂಡಾಯ ಬಣದ ಅಧ್ಯಕ್ಷರಾಗಿರುವ ಹೌರಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಅರೂಪ್ ರಾಯ್ ಅವರ ಮಾತು.
ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ಅರೂಪ್ ರಾಯ್, “ನಾನು ಯಾವುದೇ ಬಂಡಾಯ ಬಣವನ್ನು ರೂಪಿಸಿಲ್ಲ. ಇತರರು ಅದನ್ನು ಮಾಡಿದರು. ನಾನು ಹೆಚ್ಚು ಸಂಖ್ಯೆಯಿದ್ದ ಪಕ್ಷದ ಪರವಾಗಿ ನಿಂತೆ. ವಿರೋಧ ಪಕ್ಷದ ನಾಯಕರ ರಿತಬ್ರತಾ ಬ್ಯಾನರ್ಜಿ ಕಡೆಯಿಂದ ನನಗೆ ಆಹ್ವಾನ ಬಂದಿದ್ದರಿಂದ ನಾನು ಅವರ ಸಭೆಯಲ್ಲಿ ಭಾಗವಹಿಸಿದೆ ಎಂದು ಹೇಳಿದ್ದಾರೆ.
ಟಿಎಂಸಿಯ ಬಂಡಾಯ ಬಣವು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಅರೂಪ್ ರಾಯ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಸಭೆಯ ನಡಾವಳಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.
ಚುನಾವಣಾ ಸೋಲಿನ ಬಳಿಕ ಮೊದಲ ಸಭೆಯು ಮಮತಾ ಬ್ಯಾನರ್ಜಿ ಅವರ ಮನೆಯಲ್ಲೇ ನಡೆದಿತ್ತು. ಆ ವೇಳೆ ಶೋವನ್ದೇವ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸುವ ಪ್ರಸ್ತಾವನೆಗೆ ನಾನು ಸಹಿ ಮಾಡಿದ್ದೆ ಎಂದು ಅರೂಪ್ ರಾಯ್ ತಿಳಿಸಿದ್ದಾರೆ.
ಪಕ್ಷವು ವಿಧಾನಸಭಾಧ್ಯಕ್ಷರ ಕಚೇರಿಗೆ ಸಲ್ಲಿಸಿದ್ದ ಕೆಲವು ಸಹಿಗಳು ನಕಲಿಯಾಗಿವೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅರೂಪ್ ರಾಯ್, “ಪೊಲೀಸರು ನನಗೆ ತೋರಿಸಿದ ದಾಖಲೆಗಳಲ್ಲಿ ಇದ್ದ ಸಹಿ ನನ್ನದಲ್ಲ” ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರನ್ನು ಟಿಎಂಸಿಯ ಮುಖ್ಯ ಸಲಹೆಗಾರರನ್ನಾಗಿ ಮಾಡಲು ಬಯಸುವುದಾಗಿ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅರೂಪ್ ರಾಯ್, ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಅದನ್ನು ಹೇಳುತ್ತಿಲ್ಲ. ನಾನು ಏನು ಹೇಳಬೇಕೆಂದು ಬಯಸಿದ್ದೆನೋ, ಅದನ್ನು ಈಗಾಗಲೇ ಮಾಡಿದ್ದೇನೆ ಎಂದಿದ್ದಾರೆ.
ವಿಧಾನಸಭೆ ಅಧಿವೇಶನವನ್ನು ಹೇಗೆ ಎದುರಿಸುತ್ತೀರಿ..ನಿಮ್ಮ ತಂತ್ರವೇನು ಎಂಬ ಪ್ರಶ್ನೆಗೆ ಉತ್ತಿರಿಸಿರುವ ಅರೂಪ್ ರಾಯ್, “ನಾವು ರಚನಾತ್ಮಕ ಟೀಕೆಯನ್ನು ಮಾಡುತ್ತೇವೆ. ನಾವು ಬಿಜೆಪಿಯ ತಪ್ಪುಗಳನ್ನು ಎತ್ತಿ ತೋರಿಸುತ್ತೇವೆ ಮತ್ತು ಅವರ ನೀತಿಗಳನ್ನು ವಿರೋಧಿಸುತ್ತೇವೆ” ಎಂದು ಹೇಳಿದ್ದಾರೆ.
ಚುನಾವಣೆ ಸೋಲಿನ ನಂತರ ಹಲ್ಲೆಗೊಳಗಾದ ಟಿಎಂಸಿ ಕಾರ್ಯಕರ್ತರ ಬಗ್ಗೆ ಏನು ಹೇಳುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಯ್, “ನಾವು ನಮ್ಮ ಕಾರ್ಯಕರ್ತರ ಪರವಾಗಿ ನಿಲ್ಲಬೇಕು. ಆ ಸಭೆಯಲ್ಲೂ ನಾನು ಇದನ್ನೇ ಹೇಳಿದ್ದೆ. ಅಪರಾಧಗಳನ್ನು ಮಾಡಿ ಕಾನೂನು ಮೊಕದ್ದಮೆಗಳನ್ನು ಎದುರಿಸುತ್ತಿರುವವರ ವಿಷಯವೇ ಬೇರೆ. ಆದರೆ ಯಾವ ಕಾರ್ಯಕರ್ತರು ಮತ್ತು ನಾಯಕರು ನಿರಪರಾಧಿಗಳಾಗಿದ್ದಾರೋ, ನಾವು ಅವರ ಪರವಾಗಿ ನಿಲ್ಲಬೇಕು. ಅವರ ಪರವಾಗಿ ನಿಲ್ಲುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ” ಎಂದಿದ್ದಾರೆ.
ಬಂಡಾಯ ಬಣದ ಹೆಚ್ಚಿನ ಸಂಸದರು ಮತ್ತು ಶಾಸಕರು ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವವನ್ನು ಪ್ರಶ್ನಿಸಿದ್ದಾರೆ. ನೀವು ಅವರೊಂದಿಗೆ ಸಹಮತ ಹೊಂದಿದ್ದೀರಾ? ಎಂಬ ಉತ್ತರಿಸಿದ ರಾಯ್, “ಸಂಸದರು ಮತ್ತು ಶಾಸಕರ ಅಭಿಪ್ರಾಯಗಳು ವಿಭಿನ್ನವಾಗಿವೆ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಶಾಸಕರ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆಯಾಗಿದೆ. ನನಗೆ ಯಾರ ಮೇಲೂ ಯಾವುದೇ ಆರೋಪಗಳಿಲ್ಲ” ಎಂದು ತಿಳಿಸಿದ್ದಾರೆ.
ಮುಂದೆ ಟಿಎಂಸಿ ಪಕ್ಷದ ಧ್ವಜ, ಚಿಹ್ನೆ ಮತ್ತು ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆಯುತ್ತೀರಾ? ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅರೂಪ್ ರಾಯ್, “ಪಕ್ಷದ ಚಿಹ್ನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ಆಯೋಗಕ್ಕೆ ಅಧಿಕೃತ ಪತ್ರವನ್ನು ನೀಡಿದ್ದೇವೆ. ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಯಾವುದೇ ನಿರ್ಣಯವನ್ನು ಅಂಗೀಕರಿಸಿಲ್ಲ. ಆದರೆ, ಖಾತೆ ಪರಿಶೀಲಿಸಲು ಒಬ್ಬ ಆಡಿಟರ್ (ಲೆಕ್ಕ ಪರಿಶೋಧಕ) ಅನ್ನು ನೇಮಿಸಲಾಗುವುದು ಎಂದು ವಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
Courtesy : indianexpress.com


