ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ವಿಡಂಬನಾತ್ಮಕ ರಾಜಕೀಯ ಗುಂಪು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬ್ಯಾನರ್ ಅಡಿಯಲ್ಲಿ ಪ್ರತಿಭಟನಾಕಾರರು ಕೇಂದ್ರ ದೆಹಲಿಯಲ್ಲಿ ತಮ್ಮ ಧರಣಿ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಸರ್ಕಾರ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ನೀಟ್-ಯುಜಿ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಒತ್ತಾಯಿಸುತ್ತಿದೆ.
ಸಿಜೆಪಿ ವಕ್ತಾರ ಸೌರವ್ ದಾಸ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ತಾನು ಮತ್ತು ಮತ್ತೊಬ್ಬ ವಕ್ತಾರರಾದ ಅಶುತೋಷ್ ರಂಕಾ ಅವರು ನಡ್ಡಾ ಅವರನ್ನು ಅವರ ಮನೆಯಲ್ಲಿ 10 ನಿಮಿಷಗಳ ಕಾಲ ಭೇಟಿಯಾಗಿ ಬೇಡಿಕೆ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
“ನಮ್ಮ ಬೇಡಿಕೆಗಳೊಂದಿಗೆ ನಾವು ಲಿಖಿತ ಪತ್ರವನ್ನು ಸಲ್ಲಿಸುತ್ತೇವೆ. ಅವರು ಈ ಮಧ್ಯೆ ಆಂತರಿಕವಾಗಿ ಮಾತನಾಡುವುದಾಗಿ ನಮಗೆ ಭರವಸೆ ನೀಡಿದ್ದಾರೆ. ನಾವು ಆ ಪ್ರಕ್ರಿಯೆಯಲ್ಲಿದ್ದೇವೆ. ಸಚಿವರು ಸೂಕ್ತ ಮಟ್ಟದಲ್ಲಿ ಇದನ್ನು ಚರ್ಚಿಸುವುದಾಗಿ ನಮಗೆ ಭರವಸೆ ನೀಡಿದರು. ಆದರೂ, ಇಲ್ಲಿಯವರೆಗೆ ಯಾವುದೇ ಖಚಿತ ಭರವಸೆ ನೀಡಿಲ್ಲ. ಬೇಡಿಕೆ ಈಡೇರುವವರೆಗೆ ಶಾಂತಿಯುತ ಪ್ರತಿಭಟನಾಕಾರರು ವಿಶ್ರಾಂತಿ ಪಡೆಯುವುದಿಲ್ಲ” ಎಂದು ಹೇಳಿದ್ದಾರೆ.
“ನೀಟ್ 2026 ಸೇರಿದಂತೆ ಬಹು ಪ್ರಶ್ನೆಪತ್ರಿಕೆ ಸೋರಿಕೆಗೆ ಮತ್ತು ಇತ್ತೀಚೆಗೆ ಸಿಬಿಎಸ್‌ಇ 12ನೇ ಪೋರ್ಟಲ್ ಅವ್ಯವಸ್ಥೆ ಮತ್ತು ಸಿಯುಇಟಿ ಪರೀಕ್ಷೆಯ ವಿಳಂಬ ಸೇರಿದಂತೆ ಇತರ ಪರೀಕ್ಷಾ ವೈಫಲ್ಯಗಳಿಗೆ ಕೇಂದ್ರ ಶಿಕ್ಷಣ ಸಚಿವರೇ ನೇರ ಹೊಣೆ” ಎಂದು ಸಿಜೆಪಿ ತನ್ನ ಮನವಿ ಪತ್ರದಲ್ಲಿ ಆರೋಪಿಸಿದೆ.
“ಪ್ರಧಾನ್ ಅವರು ಯಾವುದೇ ವ್ಯವಸ್ಥಿತ ತಿದ್ದುಪಡಿಗಳನ್ನು ಅಥವಾ ಕ್ರಮವನ್ನು ತೆಗೆದುಕೊಂಡಿಲ್ಲ, ಇದು ಶಿಕ್ಷಣ ಸಚಿವರಾಗಿ ಅವರ ಸಂಪೂರ್ಣ ಅಸಮರ್ಥತೆಯನ್ನು ಸೂಚಿಸುತ್ತದೆ” ಎಂದು ಸಿಜೆಪಿ ಪತ್ರದಲ್ಲಿ ತಿಳಿಸಿದೆ.
ಕೇಂದ್ರ ಶಿಕ್ಷಣ ಸಚಿವರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾವಿರಾರು ಯುವಜನರು ದೆಹಲಿಗೆ ಇಂದು ಆಗಮಿಸಿದ್ದರು. ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸಲು ಸಹ ಪ್ರಯತ್ನಿಸಿದರು. ನಿನ್ನೆಯಿಂದ ನವದೆಹಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಶೆಲ್ ಸಿಡಿಸಿದರು.


