ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ.
X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ ಮಾಲೇಗಾಂವ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಕಳೆದ ವರ್ಷ ವಿಶೇಷ ಎನ್‌ಐಎ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಠಾಕೂರ್ ಅವರು, ಈ ಹಿಂದೆ ಎಲ್ಲಿಯಾದರೂ ಜಿರಳೆಗಳು ಕಂಡರೆ ಅವುಗಳನ್ನು ಪೊರಕೆಯಿಂದ ಗುಡಿಸಿ ಹಾಕಲಾಗುತ್ತಿತ್ತು. ಆದರೆ ಈಗ ಪೊರಕೆ ಜಿರಳೆಗಳೊಂದಿಗೆ ಸ್ನೇಹ ಬೆಳೆಸಿದೆ, ಹೀಗಾಗಿ ದೇಶಾದ್ಯಂತ ಕಸ ಮತ್ತು ಗಲೀಜು ಹರಡುತ್ತಿದೆ ಎಂದು ಹೇಳಿದ್ದಾರೆ.
ದೇಶದ ನಾಯಕರು ಇನ್ನು ಮುಂದೆ ಪೊರಕೆಯನ್ನು ನಂಬಬಾರದು ಬದಲಿಗೆ, ಜಿರಳೆಗಳನ್ನು ನಿರ್ಮೂಲನೆ ಮಾಡಲು ಶಾಶ್ವತ ವ್ಯವಸ್ಥೆಯನ್ನು ಮಾಡಬೇಕು. ದೇಶವನ್ನು ಸ್ವಚ್ಛಗೊಳಿಸಿ ಎಂದು ಅವರು ಬರೆದುಕೊಂಡಿದ್ದಾರೆ.
ಠಾಕೂರ್ ಅವರು ಈ ಹಿಂದೆಯೂ ತಮ್ಮ ಹೇಳಿಕೆಗಳಿಂದ ವಿವಾದ ಸೃಷ್ಟಿಸಿದ್ದರು. ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೇತೃತ್ವದಲ್ಲಿ ಭಾರತದಾದ್ಯಂತ, ವಿಶೇಷವಾಗಿ ನವದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅವರ ಈ ಹೊಸ ಹೇಳಿಕೆ ಬಂದಿದೆ. ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಈ ಪ್ರತಿಭಟನೆಗಳು ನಡೆಯುತ್ತಿವೆ.
ಪ್ರತಿಭಟನೆಯ ಪ್ರಮುಖ ರೂವಾರಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಕೇಂದ್ರ ಸರ್ಕಾರದಿಂದ ಭರವಸೆ ಸಿಕ್ಕ ನಂತರ ಗುರುವಾರ ತಡರಾತ್ರಿ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಆದರೆ ಪ್ರಧಾನ್ ರಾಜೀನಾಮೆ ನೀಡುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಿಜೆಪಿ ಹೇಳಿದೆ. ಈ ಪ್ರತಿಭಟನೆಗಳನ್ನು ನಿಭಾಯಿಸುವ ವಿಚಾರದಲ್ಲಿ ಮೋದಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಬಿಜೆಪಿ ಒಳಗಿನ ಅನೇಕ ನಾಯಕರು ಠಾಕೂರ್ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಶ್ನೆ ಪತ್ರಿಕೆ ಸೋರಿಕೆ ಸಮಸ್ಯೆಗಳನ್ನು ಬಗೆಹರಿಸುವುದು, ತ್ವರಿತ ವಿಚಾರಣೆ ನಡೆಸುವ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ತರುವ ಭರವಸೆಯನ್ನು ಸರ್ಕಾರ ನೀಡಿದ ನಂತರ ವಾಂಗ್ಚುಕ್ ತಮ್ಮ ಉಪವಾಸವನ್ನು ಕೊನೆಗೊಳಿಸಿದರು. ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದೂ ಸರ್ಕಾರ ಭರವಸೆ ನೀಡಿದೆ.
2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಠಾಕೂರ್ ಅವರಿಗೆ ಲೋಕಸಭಾ ಟಿಕೆಟ್ ನಿರಾಕರಿಸಿತ್ತು. 2019 ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ, ಠಾಕೂರ್ ಅವರು ಅಶೋಕ ಚಕ್ರ ಪುರಸ್ಕೃತ ಹಾಗೂ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ದಿವಂಗತ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ರಾವಣ ಮತ್ತು ಕಂಸನಿಗೆ ಹೋಲಿಸಿದ್ದರು. 26/11 ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಕರ್ಕರೆ ಅವರು ವೀರಮರಣ ಅಪ್ಪಿದ್ದರು. ಕರ್ಕರೆ ಅವರು 2008 ರ ಮಾಲೇಗಾಂವ್ ಸ್ಪೋಟ ಪ್ರಕರಣದಲ್ಲಿ ತಮ್ಮನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದ್ದರು ಮತ್ತು ತಮ್ಮ “ಶಾಪದಿಂದಾಗಿಯೇ ಅವರು ಮರಣ ಹೊಂದಿದರು” ಎಂದು ಠಾಕೂರ್ ಆರೋಪಿಸಿದ್ದರು.


