ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಈ ವಿಚಾರವಾಗಿ ಸಚಿವರನ್ನು ಪೀಡಿಸಬೇಡಿ ಎಂದು ಮನವಿ ಮಾಡಿದ್ದು, ಮಕ್ಕಳ ಇಂತಹ ನಡವಳಿಕೆಗಳಿಗೆ ಪೋಷಕರನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ವಾದಿಸಿದ್ದಾರೆ.
ಗುರುವಾರ, ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮತ್ತು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಅಸ್ಸಾಂನಲ್ಲಿಯೂ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಸಂಪುಟ ಸಚಿವ ಕೇಶವ್ ಮಹಂತ ಅವರ ಮಗಳು ದಿಬಿಸಾ ಮಹಂತ ಭಾಗವಿಸಿದ್ದು ಎಲ್ಲರ ಗಮನ ಸೆಳೆದಿತ್ತು.
ಕೇಶವ್ ಮಹಂತ ಅವರು ಬಿಜೆಪಿಯ ಪ್ರಾದೇಶಿಕ ಮಿತ್ರಪಕ್ಷವಾದ ‘ಅಸೋಮ್ ಗಣ ಪರಿಷತ್’ (AGP) ನಾಯಕ ಹಾಗೂ ಪ್ರಸ್ತುತ ಕಂದಾಯ ಮತ್ತು ವಿಪತ್ತು ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಾಮಾನ್ಯ ಆಡಳಿತ ಇಲಾಖೆಯ ಸಚಿವರಾಗಿದ್ದಾರೆ.
ಕಳೆದ ವರ್ಷ ಯುನೈಟೆಡ್ ಕಿಂಗ್‌ಡಮ್‌ನಿಂದ (UK) ಎರಡು ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿರುವ ದಿಬಿಸಾ, ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ “ನ್ಯಾಯ”ಕ್ಕಾಗಿ ಆಗ್ರಹಿಸುತ್ತಿರುವುದು ವೈರಲ್ ವೀಡಿಯೊಗಳಲ್ಲಿ ಕಂಡುಬಂದಿದೆ.
ಮತ್ತೊಂದು ವೀಡಿಯೊದಲ್ಲಿ ಅವರು, “ಇಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನೋಡಿ ನನಗೆ ತುಂಬಾ ಬೇಸರವಾಗುತ್ತಿದೆ. ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಯಸಿದ್ದರು, ಆದರೆ ಅದು ಹಿಂಸಾರೂಪಕ್ಕೆ ತಿರುಗಿತು. ಲಾಠಿ ಚಾರ್ಜ್, ಟಿಯರ್ ಗ್ಯಾಸ್ ದಾಳಿ ಎಲ್ಲವೂ ನಡೆಯಿತು. ಆದಾಗ್ಯೂ, ಆ ದಿನ ಧೈರ್ಯದಿಂದ ಬಂದು ಧ್ವನಿ ಎತ್ತಿದ ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ನನಗೆ ಹೆಮ್ಮೆಯಿದೆ. ಅವರ ಧೈರ್ಯವೇ ನಾನು ಇಂದು ಇಲ್ಲಿಗೆ ಬರಲು ಪ್ರೇರಣೆಯಾಯಿತು” ಎಂದು ದಿಬಿಸಾ ಮಹಂತ ಹೇಳಿದ್ದರು.
ಪ್ರಸ್ತುತ ಪ್ರವಾಹ ಪರಿಹಾರ ಕಾರ್ಯಗಳಲ್ಲಿ ನಿರತರಾಗಿರುವ ಸಚಿವ ಕೇಶವ್ ಮಹಂತ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಶನಿವಾರ ರಾತ್ರಿ ನಡೆಸಿದ ಸುದ್ದಿಗೋಷ್ಠಿಯ ನಂತರ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
‘ಸಚಿವರ ಮಗಳೊಂದಿಗೆ ನಾನು ಮಾತನಾಡುತ್ತೇನೆ ಸಿಎಂ’
ನನ್ನ ಮಕ್ಕಳು ಏನು ಹೇಳುತ್ತಾರೆಂಬುದಕ್ಕೆ ನಾನು ಹೇಗೆ ಉತ್ತರ ನೀಡಲು ಸಾಧ್ಯ? ನನ್ನ ಸ್ವಂತ ಸಹೋದರನೇ ನಾನು ಹೇಳುವ ವಿಷಯಗಳನ್ನು ಒಪ್ಪುವುದಿಲ್ಲ. ನನ್ನ ಮಕ್ಕಳೂ ಸಹ ನಾನು ಹೇಳುವ ಹಲವು ವಿಷಯಗಳನ್ನು ಒಪ್ಪುವುದಿಲ್ಲ. ಇಲ್ಲಿ ಬಿಜೆಪಿ ವಿರುದ್ಧ ವರದಿ ಮಾಡುವ ವರದಿಗಾರರ ಪೋಷಕರೆಲ್ಲರೂ ಬಿಜೆಪಿಯವರೇ ಆಗಿದ್ದಾರೆ. ಅವಳು ಮೋದಿಜಿಯವರ ವಿರುದ್ಧ ಮಾತನಾಡಿದ್ದಾಳೆ, ಅದಕ್ಕೆ ನನಗೆ ಬೇಸರವಿದೆ. ನಾನು ಎಂದಾದರೂ ಅವಳನ್ನು ಭೇಟಿಯಾದಾಗ ಖಂಡಿತಾ ಮಾತನಾಡುತ್ತೇನೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನಾಳೆ ನನ್ನ ಮಗನೂ ಏನಾದರೂ ತಪ್ಪಾಗಿ ಮಾತನಾಡಿದರೆ ಆಶ್ಚರ್ಯಪಡಬೇಡಿ. ನನ್ನ ಮಗ ಭವಿಷ್ಯದಲ್ಲಿ ವಕೀಲನಾಗುತ್ತಾನೆ ಮತ್ತು ನನಗೆ ಇಷ್ಟವಿಲ್ಲದ ಜನರ ಪರವಾಗಿ ವಾದಿಸಬಹುದು. ಮಕ್ಕಳು ದೊಡ್ಡವರಾಗಿ ವಯಸ್ಕರಾದ ಮೇಲೆ, ಅವರ ನಡವಳಿಕೆಗಳನ್ನು ಪೋಷಕರಿಗೆ ಮುಡಿಪಾಗಿಡಬಾರದು. ಆಕೆ ಹೇಳಿದ್ದು ತಪ್ಪು, ಆದರೆ ಅದಕ್ಕಾಗಿ ನಾವು ಆ ಹುಡುಗಿಯೊಂದಿಗೆ ಮಾತನಾಡುತ್ತೇವೆ. ಅದಕ್ಕಾಗಿ ತಂದೆಯನ್ನು ಏಕೆ ಪೀಡಿಸಬೇಕು?” ಎಂದು ಶರ್ಮಾ ಪ್ರಶ್ನಿಸಿದರು.
ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಕನಿಷ್ಠ ಆರು ಜನರನ್ನು ಬಂಧಿಸಿದ್ದು, ಅವರ ವಿರುದ್ಧ “ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವುದು, ವಿವಿಧ ಗುಂಪುಗಳ ನಡುವೆ ಶತ್ರುತ್ವವನ್ನು ಉತ್ತೇಜಿಸುವುದು ಮತ್ತು ಅಪರಾಧಿ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ನಡೆಸಿದ ಸರಣಿ ಪ್ರತಿಭಟನೆಗಳ ಬೆನ್ನಲ್ಲೇ, ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ತಮ್ಮ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


