BJP ನಾಯಕತ್ವದ ನಿರ್ಧಾರಗಳು ‘ದೆಹಲಿ ಕೇಂದ್ರಿತ’ ಹಾಗೂ ದೇಶದ ಅಭಿವೃದ್ಧಿ ಮಾದರಿಯು ‘ಗುಜರಾತ್ ಕೇಂದ್ರಿತ’ವಾಗುತ್ತಿದೆ ಎಂದು ತಮಿಳುನಾಡು ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗೂ ‘ವಿ ದಿ ಲೀಡರ್ಸ್’ ಸಂಘಟನೆಯ ಸಂಸ್ಥಾಪಕ ಕೆ. ಅಣ್ಣಾಮಲೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ನಡೆದ ‘ಇಂಡಿಯಾ ಟುಡೇ ತಮಿಳುನಾಡು ರೌಂಡ್ ಟೇಬಲ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಕಾರ್ಯಕ್ರಮಗಳು, ಬೃಹತ್ ಹೂಡಿಕೆಗಳು ಮತ್ತು ತಂತ್ರಜ್ಞಾನ ಯೋಜನೆಗಳು ಕೇವಲ ಒಂದೇ ರಾಜ್ಯಕ್ಕೆ ಸೀಮಿತವಾಗಬಾರದು ಎಂದು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧವೇ ಗಂಭೀರ ಟೀಕೆ ಮಾಡಿದ್ದಾರೆ.
ಬಿಜೆಪಿಯ ನಿರ್ಣಯಗಳು ದಿನದಿಂದ ದಿನಕ್ಕೆ ದೆಹಲಿ ಕೇಂದ್ರಿತವಾಗುತ್ತಿರುವುದು ಅತ್ಯಂತ ದುರದೃಷ್ಟಕರ. ಈ ವ್ಯವಸ್ಥೆಯಲ್ಲಿ ತಕ್ಷಣವೇ ಬದಲಾವಣೆಯಾಗಬೇಕಿದೆ. ರಾಜ್ಯಮಟ್ಟದ ನಾಯಕರಿಗೆ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಕೆಲಸ ಮಾಡಲು ಕೇಂದ್ರ ನಾಯಕತ್ವ ಹೆಚ್ಚಿನ ಅಧಿಕಾರ ಮತ್ತು ಸ್ವಾಯತ್ತತೆಯನ್ನು ನೀಡಬೇಕು” ಎಂದು ಒತ್ತಾಯಿಸಿದರು.
ಅಭಿವೃದ್ಧಿ ಯೋಜನೆಗಳ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ಎಲ್ಲಾ ಕೃತಕ ಬುದ್ಧಿಮತ್ತೆ (AI) ಕಂಪನಿಗಳು, ಸೆಮಿಕಂಡಕ್ಟರ್ (ವೇಫರ್) ಉತ್ಪಾದನಾ ಘಟಕಗಳು ಗುಜರಾತ್‌ಗೇ ಹೋಗುತ್ತಿವೆ. 2030ರ ಕಾಮನ್‌ವೆಲ್ತ್ ಗೇಮ್ಸ್, ಪೊಲೀಸ್ ಗೇಮ್ಸ್ ಮತ್ತು 2036ರ ಒಲಿಂಪಿಕ್ಸ್‌ಗೆ ಅಹಮದಾಬಾದ್ ಆಯ್ಕೆಯಾಗಿದೆ. ಭಾರತದ ಅಭಿವೃದ್ಧಿ ಮಾದರಿ ಎಂದರೆ ಕೇವಲ ಗುಜರಾತ್ ಒಂದೇ ಅಲ್ಲ. ಪ್ರಮುಖ ಅವಕಾಶಗಳೆಲ್ಲವೂ ಒಂದೇ ರಾಜ್ಯದಲ್ಲಿ ಕೇಂದ್ರೀಕೃತವಾಗಬಾರದು. ದೇಶದ ಜನ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.
ತಮಿಳುನಾಡು ಸಿಎಂ ವಿಜಯ್‌ಗೆ ಬೆಂಬಲ: ಅಣ್ಣಾಮಲೈ
ಇದೇ ವೇಳೆ ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಮತ್ತು ನೂತನ ಮುಖ್ಯಮಂತ್ರಿ ವಿಜಯ್ ಅವರ ಆಡಳಿತದ ಬಗ್ಗೆ ಮಾತನಾಡಿದ ಅಣ್ಣಾಮಲೈ, ಹೊಸ ಸರ್ಕಾರಕ್ಕೆ ತಮ್ಮ ಆಡಳಿತಾತ್ಮಕ ದೃಷ್ಟಿಕೋನವನ್ನು ಸಾಬೀತುಪಡಿಸಲು ಸೂಕ್ತ ಸಮಯ ನೀಡಬೇಕು ಎಂದಿದ್ದಾರೆ.
ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಒಂದು ಹೊಸ ಆಡಳಿತಾತ್ಮಕ ಸ್ಪರ್ಶ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರಾಮಾಣಿಕ ಬದ್ಧತೆ ಕಾಣಿಸುತ್ತಿದೆ. ತಮಿಳುನಾಡಿನ ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಅವರಿಗೆ ತಮ್ಮ ಯೋಜನೆಗಳನ್ನು ಜಾರಿಗೊಳಿಸಲು ಕನಿಷ್ಠ ಒಂದು ವರ್ಷದ ಕಾಲಾವಕಾಶ ನೀಡಬೇಕು ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ಒಬ್ಬ ನಿಜವಾದ ತಮಿಳನಾಗಿ ನಾನು ಸಿಎಂ ವಿಜಯ್ ಅವರಿಗೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಅವರಿಗೆ ಸಹಕರಿಸುವುದು ಕರ್ತವ್ಯ ಎಂದು ಅವರು ತಿಳಿಸಿದರು.


