“ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಅರ್ಹ ಮತದಾರರಿಗೆ ಅನ್ಯಾಯವಾಗುತ್ತಿದ್ದು, ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು” ಎಂದು ನಾಗರಿಕ ಸಂಘಟನೆಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದವು.
ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಹುಭಾಷ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ‘ಎದ್ದೇಳು ಕರ್ನಾಟಕ’ ಮತ್ತಿತರ ಸಂಘಟನೆಗಳ ಪ್ರತಿನಿಧಿಗಳು ಭೇಟಿ ಮಾಡಿ ಎಸ್ಐಆರ್ ಲೋಪದೋಷದ ಬಗ್ಗೆ ಸಮಾಲೋಚನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
“ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಿತ್ತೊಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 1.09 ಕೋಟಿ ಮತದಾರರು ಎಎಸ್ಡಿಡಿಓ ಪಟ್ಟಿಯಲ್ಲಿದ್ದು, ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ಹೆಚ್ಚಿನ ಪ್ರಮಾಣದ ಹೆಸರುಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ರಾಜ್ಯದ ಸುಮಾರು 3,000 ಬೂತ್ಗಳಲ್ಲಿ ಡಿಲೀಷನ್ ಪ್ರಮಾಣ ಶೇ.60ಕ್ಕಿಂತ ಹೆಚ್ಚಾಗಿದೆ” ಎಂದು ವಿವರಿಸಿದರು.
ಎಸ್ ಐಆರ್ ಪ್ರಕ್ರಿಯೆಯನ್ನು ನ್ಯಾಯ ಸಮ್ಮತವಾಗಿ ನಡೆಸಲು ಮುಖ್ಯಮಂತ್ರಿಗಳ ಮುಂದೆ ಹಲವು ಬೇಡಿಕೆಗಳನ್ನು ಇಟ್ಟ ಪ್ರತಿನಿಧಿಗಳು, “ಎಸ್ಐಆರ್ ಪ್ರಕ್ರಿಯೆಯನ್ನು ಕನಿಷ್ಠ 3 ತಿಂಗಳು ವಿಸ್ತರಿಸಿ, ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ವರ್ಷ ಕಾಲವಕಾಶ ನೀಡುವಂತೆ ಚುನಾವಣಾ ಆಯೋಗವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು” ಎಂದರು.
“ಸ್ಥಳಾಂತರ (Shifted), ಗೈರು (Absent) ಮತ್ತು ಇತರರು (Others) ವರ್ಗದಲ್ಲಿರುವವರನ್ನು ತಕ್ಷಣವೇ ಡಿಲೀಟ್ ಮಾಡದೆ, ಬಿಎಲ್ಒಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸಬೇಕು. ಸ್ಥಳಾಂತರಗೊಂಡ ಮತದಾರರಿಗೆ ಮತ ವರ್ಗಾವಣೆಗೆ ಅಗತ್ಯವಿರುವ ಫಾರಂ ಹಾಗೂ ಹೊಸ ಮತದಾರರಿಗೆ ನೋಂದಣಿಗೆ ಅವಕಾಶ ಒದಗಿಸಬೇಕು” ಎಂದು ಮನವಿ ಮಾಡಿದರು.
“ಅರ್ಹ ಮತದಾರರನ್ನು ಮತಪಟ್ಟಿಯಲ್ಲಿ ಉಳಿಸಿಕೊಳ್ಳಲು ರಾಜ್ಯ ಸರ್ಕಾರವೇ ಮುಂದಾಗಬೇಕು. ಸರ್ಕಾರದ ಸಿಬ್ಬಂದಿ ಮನೆಮನೆಗೆ ತೆರಳಿ ಮಾಹಿತಿ ನೀಡಬೇಕು ಹಾಗೂ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕು” ಎಂದು ಇದೇ ಸಭೆಯಲ್ಲಿ ಸಲಹೆ ನೀಡಿದರು.
ನಿಯೋಗದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯ್ಕ್, ಎದ್ದೇಳು ಕರ್ನಾಟಕದ ತಾರಾ ರಾವ್, ನೂರ್ ಶ್ರೀಧರ್, ಮೊಹಮ್ಮದ್ ಯೂಸುಫ್ ಕನ್ನಿ, ತಫೀಮುಲ್ಲ ಮಾರುಫ್, ಫಾ. ಅರುಣ್ ಲೂಯಿಸ್, ವಿನಯ್ ಶ್ರೀನಿವಾಸ್, ಐಶ್ವರ್ಯ, ಸೈಯದ್ ತೌಸಿಫ್ ಮಸೂದ್, ಮೊಹಮ್ಮದ್
ಇಸ್ಮಾಯಿಲ್ ಕೆ.ಎಲ್.ಅಶೋಕ್, ಸುನಿಲ್ ಸಿರಸಂಗಿ ಇದ್ದರು.


