ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಬೆಳಕಿಗೆ ಬಂದಿರುವ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಬೃಹತ್ ನಕಲಿ ಔಷಧ ದಂಧೆಯ ತನಿಖೆಗೆ ಗಂಭೀರವಾದ ಕಾನೂನು ತೊಡಕು ಎದುರಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದರೂ, ಪ್ರಸ್ತುತ ಇರುವ ಕಾಯ್ದೆಯ ಅಡಿಯಲ್ಲಿ ತನಿಖೆಯನ್ನು ಮುಂದುವರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಏನಿದು ಕಾನೂನು ತೊಡಕು?
ಔಷಧ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ (Drugs and Cosmetics Act) ನೇರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಕಾನೂನಾತ್ಮಕ ಅಧಿಕಾರ ಕೇವಲ ಔಷಧ ನಿಯಂತ್ರಣ ಮಂಡಳಿಗೆ ಮಾತ್ರ ಇದೆ. ರಚನೆಯಾಗಿರುವ ಎಸ್‌ಐಟಿ ಅಧಿಕಾರಿಗಳಿಗೆ ಈ ಕಾಯ್ದೆಯಡಿ ತನಿಖೆ ನಡೆಸಲು ಬಾರದೇ, ಕೇವಲ ದೂರಿನ ಆಧಾರದ ಮೇಲೆ ಮಾತ್ರ ಕ್ರಮ ಕೈಗೊಳ್ಳುವ ಸೀಮಿತ ಅಧಿಕಾರವಿದೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಗಂಭೀರ ಸ್ವರೂಪದ ಐಸಿಯು ಹಂತದ ಆಂಟಿಬಯೋಟಿಕ್‌ಗಳನ್ನು ನಕಲಿ ಮಾಡಲಾಗಿದೆ. ಹೀಗಾಗಿ, ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತರಲು ಎಸ್‌ಐಟಿಗೆ ವಿಶೇಷ ಅಧಿಕಾರ ಅಗತ್ಯವಿದ್ದು, ಈ ಕುರಿತು ಗೃಹ ಇಲಾಖೆಗೆ ಪತ್ರ ಬರೆದು ಮನವಿ ಮಾಡಲು ತೀರ್ಮಾನಿಸಲಾಗಿದೆ.
ಪೋರ್ಟರ್ ಆ್ಯಪ್ ಮೂಲಕ ಸದ್ದಿಲ್ಲದೆ ಸರಬರಾಜು:
ಈ ಬೃಹತ್ ಜಾಲದ ಪ್ರಮುಖ ಆರೋಪಿಯಾಗಿರುವ, ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಎಂಬಾತ ದುಬೈನಲ್ಲಿ ಕುಳಿತು ಇಡೀ ಜಾಲವನ್ನು ನಿಯಂತ್ರಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈತನ ವಿರುದ್ಧ ಈಗಾಗಲೇ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಕಡಿಮೆ ಬೆಲೆಗೆ ನಕಲಿ ಔಷಧಗಳು ಮತ್ತು ಅವಧಿ ಮೀರಿದ ಪೌಡರ್‌ಗಳನ್ನು ತರಿಸಿಕೊಳ್ಳಲಾಗುತ್ತಿತ್ತು. ರಾಮನಗರದ ಈ ನಿರ್ಜನ ಫಾರ್ಮ್‌ಹೌಸ್‌ನಲ್ಲಿ ಇವುಗಳನ್ನು ಮರು ಪ್ಯಾಕಿಂಗ್ (Re-packing) ಮಾಡಿ, ಯಾವುದೇ ಅನುಮಾನ ಬಾರದಂತೆ ಪೋರ್ಟರ್ (Porter) ಆ್ಯಪ್ ಮೂಲಕ ಬೆಂಗಳೂರಿನ ವಿವಿಧ ಭಾಗಗಳ ಮೆಡಿಕಲ್ ಮಳಿಗೆ ಹಾಗೂ ಗ್ರಾಹಕರಿಗೆ ಸರಬರಾಜು ಮಾಡಲಾಗುತ್ತಿತ್ತು.
ಸ್ಥಳೀಯರ ಜಾಣ್ಮೆ ಮತ್ತು ದಾಳಿಯ ರಹಸ್ಯ:
ಫಾರ್ಮ್‌ಹೌಸ್‌ಗೆ ವಾರದಲ್ಲಿ 2 ರಿಂದ 3 ಬಾರಿ ರಹಸ್ಯವಾಗಿ ಅಪರಿಚಿತ ಕಾರುಗಳು ಬಂದು ಹೋಗುತ್ತಿದ್ದವು. ಯಾರಿಗೂ ಒಳಗೆ ಪ್ರವೇಶ ನೀಡದೆ, ಒಳಗೆ ಕ್ರೂರ ತಳಿಯ ನಾಯಿಯನ್ನು ಕಾವಲಿಗೆ ಬಿಟ್ಟಿದ್ದು ಸ್ಥಳೀಯರಲ್ಲಿ ತೀವ್ರ ಅನುಮಾನ ಮೂಡಿಸಿತ್ತು. ಈ ಬಗ್ಗೆ ಸ್ಥಳೀಯ ಕೃಷಿ ಕಾರ್ಮಿಕರು ನೀಡಿದ ಸುಳಿವು ಆಧರಿಸಿ ಪೊಲೀಸರು ದಿಢೀರ್ ದಾಳಿ ನಡೆಸಿದಾಗ ಈ ಕರಾಳ ದಂಧೆ ಜಗಜ್ಜಾಹೀರಾಗಿದೆ. ಸದ್ಯ ಈ ಪ್ರಕರಣದ ಆಳ-ಅಗಲ ಕಲೆಹಾಕಲು ಮತ್ತು ಬೇರೆ ಯಾರದರೂ ಪ್ರಭಾವಿಗಳ ಕೈವಾಡವಿದೆಯೇ ಎಂಬುದನ್ನು ಪತ್ತೆ ಹಚ್ಚಲು ಎಸ್‌ಐಟಿಗೆ ಸಿಕ್ಕಿರುವ ವಿಶೇಷ ಅಧಿಕಾರದ ಮೇಲೆ ನಿರ್ಣಾಯಕವಾಗಲಿದೆ.


