ಕರ್ನಾಟಕ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಮಾಧ್ಯಮ ಹಾಗೂ ಇತರ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಹುದ್ದೆಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನ ಧಾರವಾಡ ಪೀಠದ ಮುಂದೆ ಅರ್ಜಿ ಸಲ್ಲಿಕೆಯಾಗಿದೆ.
ಉರ್ದು ಶಿಕ್ಷಕರು, ಈಕ್ವಲ್ ರೈಟ್ಸ್ ಕರ್ನಾಟಕ ಸಂಸ್ಥೆ ಮತ್ತು ಇತರರು ಸಲ್ಲಿಸಿರುವ ಅರ್ಜಿಯು ಆಗಸ್ಟ್ 24 ರಂದು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿಯ ಪೋಷಕರೊಬ್ಬರು ಕೂಡ ಅರ್ಜಿದಾರರೊಂದಿಗೆ ಕೈಜೋಡಿಸಿದ್ದು, ತಮ್ಮ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಎರಡು ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.
ಕರ್ನಾಟಕದಾದ್ಯಂತ ಒಟ್ಟು 4,236 ಉರ್ದು ಮಾಧ್ಯಮ ಶಾಲೆಗಳಿದ್ದು (3,934 ಸರ್ಕಾರಿ ಶಾಲೆಗಳು ಮತ್ತು 302 ಅನುದಾನಿತ ಶಾಲೆಗಳು), ಉರ್ದು ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಶಿಕ್ಷಕರ ಕೊರತೆ ಇರುವುದು ದಾಖಲಾಗಿದ್ದರೂ ಸಹ, ಆಗಸ್ಟ್ 11, 2026ರ ನೇಮಕಾತಿ ಅಧಿಸೂಚನೆಯಲ್ಲಿ ಒಂದೇ ಒಂದು ಉರ್ದು ಮಾಧ್ಯಮ ಶಿಕ್ಷಕ ಹುದ್ದೆಯನ್ನೂ ಒದಗಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 45,179 ಹುದ್ದೆಗಳು ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿ 13,045 ಹುದ್ದೆಗಳು ಖಾಲಿ ಇವೆ ಹಾಗೂ 43,526 ಮಂದಿಯನ್ನು ಅತಿಥಿ ಶಿಕ್ಷಕರಾಗಿ ನೇಮಿಸಿಕೊಳ್ಳಲಾಗಿದೆ ಎಂದು ಸರ್ಕಾರದ ಸ್ವಂತ ದತ್ತಾಂಶಗಳೇ ತೋರಿಸುತ್ತವೆ. ಹೀಗಿದ್ದರೂ ಸಹ, ರಾಜ್ಯ ಸರ್ಕಾರ ಉರ್ದು ಮಾಧ್ಯಮ ಶಿಕ್ಷಕರನ್ನು ಈ ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಟ್ಟಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಅರ್ಜಿಯ ಪ್ರಕಾರ, ಕರ್ನಾಟಕದಲ್ಲಿನ ಪ್ರಾಥಮಿಕ ಸಂಸ್ಥೆಗಳ ಕಾರ್ಯನಿರ್ವಹಣೆಯ ಕುರಿತು ಭಾರತದ ಮಹಾಲೇಖಪಾಲರು (ಸಿ.ಎ.ಜಿ) ನಡೆಸಿದ 2024ರ ಕಾರ್ಯನಿರ್ವಹಣಾ ತಪಾಸಣಾ ವರದಿಯಲ್ಲಿ, ಎಂಟು ಜಿಲ್ಲೆಗಳ ಉರ್ದು ಮಾಧ್ಯಮ ಶಾಲೆಗಳ ಪ್ರಾಯೋಗಿಕ ಪರಿಶೀಲನೆಯ ವೇಳೆ 38 ಶಾಲೆಗಳಲ್ಲಿ ಉರ್ದು ಪ್ರಾವೀಣ್ಯತೆ ಹೊಂದಿರುವ ಶಿಕ್ಷಕರಿಲ್ಲದಿರುವುದು ದಾಖಲಾಗಿದೆ. ಅವರ ಸ್ಥಾನದಲ್ಲಿ ಕನ್ನಡ ಮಾಧ್ಯಮಕ್ಕೆ ಅರ್ಹತೆ ಹೊಂದಿರುವ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.
ಈ ಹೊರಗಿಡುವಿಕೆಯು ಸಂವಿಧಾನದ ವಿಧಿಗಳಾದ 14, 21A, 29(1) ಮತ್ತು 350A ಅನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ಕ್ರಮವು ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದ್ದಾಗಿದೆ, ಇದು ಮಕ್ಕಳ ಶಿಕ್ಷಣದ ಹಕ್ಕಿನ ಮೇಲೆ ಹಾಗೂ ತಮ್ಮ ವಿಶಿಷ್ಟ ಭಾಷೆಯನ್ನು ಸಂರಕ್ಷಿಸುವ ಭಾಷಾ ಅಲ್ಪಸಂಖ್ಯಾತರ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಒದಗಿಸಲು ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕಾದ ರಾಜ್ಯ ಸರ್ಕಾರದ ಜವಾಬ್ದಾರಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಉರ್ದು ಮಾಧ್ಯಮ ಮತ್ತು ಇತರ ಭಾಷಾ ಅಲ್ಪಸಂಖ್ಯಾತ ಶಿಕ್ಷಣವನ್ನು ಒಂದು ಪ್ರತ್ಯೇಕ ಅಂಗವೆಂದು ಗುರುತಿಸಿ, ರಾಜ್ಯ ಸರ್ಕಾರವು 1987ರಲ್ಲೇ ಉರ್ದು ಮತ್ತು ಇತರ ಭಾಷಾ ಅಲ್ಪಸಂಖ್ಯಾತ ಶಾಲೆಗಳ ನಿರ್ದೇಶನಾಲಯವನ್ನು ಸ್ಥಾಪಿಸಿತ್ತು ಎಂಬುದನ್ನು ಸಹ ಈ ಅರ್ಜಿಯಲ್ಲಿ ಬೆಟ್ಟು ಮಾಡಿ ತೋರಿಸಲಾಗಿದೆ.
2022ರಲ್ಲಿ ನಡೆಸಲಾದ ಹಿಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ಉರ್ದು ಮಾಧ್ಯಮ ಶಿಕ್ಷಕರನ್ನು ಸೇರಿಸಲಾಗಿತ್ತು ಎಂಬುದನ್ನು ಅರ್ಜಿದಾರರು ಮತ್ತಷ್ಟು ಎತ್ತಿ ತೋರಿಸಿದ್ದಾರೆ. ಅವರ ಪ್ರಕಾರ, ಪ್ರಸ್ತುತ ನೇಮಕಾತಿಯಿಂದ ಅವರನ್ನು ಸಂಪೂರ್ಣವಾಗಿ ಹೊರಗಿಡುವುದನ್ನು ಸಮರ್ಥಿಸಲು ಯಾವುದೇ ನೀತಿ ಬದಲಾವಣೆ ಅಥವಾ ಪರಿಸ್ಥಿತಿಗಳ ಬದಲಾವಣೆಯನ್ನು ಬಹಿರಂಗಪಡಿಸಲಾಗಿಲ್ಲ.
ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಣದ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಮಗುವಿನ ಹಕ್ಕು ಸಂವಿಧಾನದ ವಿಧಿ 19(1)(a) ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ ಎಂದು ತಿಳಿಸುವ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ‘ಪದಮ್ ಮೆಹ್ತಾ V/s ರಾಜಸ್ಥಾನ ಸರ್ಕಾರ (2026)’ ತೀರ್ಪನ್ನು ಸಹ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿದಾರರು ‘ನೀರಜ್ ಕುಮಾರ್ ಪಾಂಡೆ ಮತ್ತು ಇನ್ನೊಬ್ಬರು V/s ಉತ್ತರ ಪ್ರದೇಶ ಸರ್ಕಾರ [2017]’ ಪ್ರಕರಣವನ್ನು ಸಹ ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ, ಉರ್ದು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಲು ಉತ್ತರ ಪ್ರದೇಶ ಸರ್ಕಾರವು ನೀಡಿದ್ದ ಮೌಖಿಕ ಆದೇಶಗಳನ್ನು ರದ್ದುಪಡಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿತ್ತು.
ನ್ಯಾಯವಾದಿಗಳಾದ ಝೈನುಲ್ ಅಬಿದೀನ್, ಅಕ್ರಮ್ ಉಪ್ಪಿನ್ ಮತ್ತು ಖಲೀಲ್ ಉರ್ ರೆಹಮಾನ್ ಅವರ ಮೂಲಕ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಗಾಯತ್ರಿ ಸಿಂಗ್ ಅವರು ಹಾಜರಾಗಲಿದ್ದಾರೆ.
ಆಗಸ್ಟ್ ತಿಂಗಳ ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಮತ್ತು ಉರ್ದು ಮಾಧ್ಯಮ ಹಾಗೂ ಇತರ ಭಾಷಾ ಅಲ್ಪಸಂಖ್ಯಾತ ಶಿಕ್ಷಕರನ್ನು ಹೊರಗಿಟ್ಟಿರುವುದು ಏಕಪಕ್ಷೀಯ ಹಾಗೂ ಸಾಂವಿಧಾನಿಕ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅಲ್ಲದೆ, ನೇಮಕಾತಿ ಪ್ರಕ್ರಿಯೆಯಲ್ಲಿ ಉರ್ದು ಮತ್ತು ಇತರ ಭಾಷಾ ಅಲ್ಪಸಂಖ್ಯಾತ ಮಾಧ್ಯಮದ ಶಿಕ್ಷಕರ ಹುದ್ದೆಗಳನ್ನು ಸೇರಿಸಲು ಹಾಗೂ ರಾಜ್ಯದಾದ್ಯಂತ ಮಾಧ್ಯಮವಾರು ಖಾಲಿ ಇರುವ ಹುದ್ದೆಗಳ ಕುರಿತು ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ತಾತ್ಕಾಲಿಕ ಪರಿಹಾರವಾಗಿ, ಅರ್ಜಿದಾರರು ನೇಮಕಾತಿ ಅಧಿಸೂಚನೆಗೆ ತಡೆ ನೀಡಬೇಕು ಅಥವಾ ಪರ್ಯಾಯವಾಗಿ, ಉರ್ದು ಮಾಧ್ಯಮ ಮತ್ತು ಇತರ ಭಾಷಾ ಅಲ್ಪಸಂಖ್ಯಾತ ಖಾಲಿ ಹುದ್ದೆಗಳನ್ನು ಪರಿಗಣಿಸದೆ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸದಂತೆ ಪ್ರತಿವಾದಿಗಳಿಗೆ (ಸರ್ಕಾರಕ್ಕೆ) ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.
ಅರ್ಜಿ ಸಲ್ಲಿಸಿದ ದಿನಾಂಕದಂದು ಅನ್ವಯವಾಗುವ ಗರಿಷ್ಠ ವಯೋಮಿತಿಗೆ ಸಂಬಂಧಿಸಿದಂತೆ, ಉರ್ದು ಅರ್ಹತೆ ಹೊಂದಿರುವ ಶಿಕ್ಷಕಿ ಹಾಗೂ ಅರ್ಜಿದಾರರಾದ ಆಸ್ಮಾ ಅವರ ಅರ್ಹತೆಯನ್ನು ಕಾಯ್ದಿರಿಸಲು ನಿರ್ದಿಷ್ಟವಾದ ಮಧ್ಯಂತರ ಮನವಿಯನ್ನು ಸಹ ಮಾಡಲಾಗಿದೆ.
Courtesy : livelaw.in


