ದೇಶದ ಅತಿದೊಡ್ಡ ಆಸ್ತಿಯಾಗಿರುವ ಮಹಿಳೆಯರು ಪ್ರಗತಿ ಸಾಧಿಸುವುದನ್ನು ತಡೆಯಲು ಸಮಾಜದಲ್ಲಿ ಹಿಂಸಾಚಾರವನ್ನು ಬಳಸಲಾಗುತ್ತಿದೆ. ಶೇಕಡಾ 80 ರಷ್ಟು ಜನರು ಕಿರುಕುಳ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮಹಿಳೆಯರು ಯಾರಿಗಾಗೋ ಅಲ್ಲ, ತಮಗಾಗಿ ತಾವು ನಿಲ್ಲಬೇಕು; ತಮ್ಮ ಮೇಲೆ ನಂಬಿಕೆ ಇಡಬೇಕು ಎಂದು ಶನಿವಾರ ಪುಣೆಯಲ್ಲಿ ನಡೆದ ತಮ್ಮ ಪಕ್ಷದ ಯುವ ಸಂಪರ್ಕ ಕಾರ್ಯಕ್ರಮ ‘ಛಾತ್ರೋನ್ ಕಿ ಗೂಂಜ್’ ನಲ್ಲಿ ಹೇಳಿದರು.
ರಾಹುಲ್ ಗಾಂಧಿಯವರೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು, ಲೈಂಗಿಕ ಕಿರುಕುಳ, ವೈಯಕ್ತಿಕ ಸುರಕ್ಷತೆಯ ಕಾಳಜಿ, ಸುರಕ್ಷಿತ ಸಾರ್ವಜನಿಕ ಸಾರಿಗೆಯ ಕೊರತೆ ಮತ್ತು ಆರ್ಥಿಕ ಸಂಕಷ್ಟಗಳು ಮಹಿಳೆಯರ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯದ ಮೇಲಿನ ಪ್ರವೇಶವನ್ನು ಹೇಗೆ ಬಾಧಿಸುತ್ತಿವೆ ಎಂಬುದನ್ನು ವಿವರಿಸಿದರು.
“ಮಹಿಳೆಯರ ಮೇಲಿನ ಮೂರು ರೀತಿಯ ಹಿಂಸಾಚಾರಗಳನ್ನು – ಶಾರೀರಿಕ ಹಿಂಸೆ, ಅವಕಾಶಗಳನ್ನು ನಿರಾಕರಿಸುವ ಮೂಲಕ ಹಿಂಸೆ, ಮತ್ತು ಆರ್ಥಿಕ ಹಿಂಸೆ” ಅನುಭವಿಸುತ್ತಿದ್ದಾರೆ ಎಂದು ರಾಹುಲ್ ಪಟ್ಟಿ ಮಾಡಿದರು.
ಪ್ರತಿ ವರ್ಷ ಸುಮಾರು 4.5 ಲಕ್ಷ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ, ಶೇಕಡಾ 80 ರಷ್ಟು ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ, ಶೇಕಡಾ 29 ರಷ್ಟು ಜನರು ಶಾರೀರಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಶೇಕಡಾ 6 ರಷ್ಟು ಜನರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಕಳಂಕದ ಭಯದಿಂದಾಗಿ ಶೇಕಡಾ 99 ರಷ್ಟು ಲೈಂಗಿಕ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿಲ್ಲ ಎಂದು ಅವರು ಪ್ರತಿಪಾದಿಸಿದರು.
ಸುರಕ್ಷತೆಯ ಹೆಸರಿನಲ್ಲಿ ಸುಮಾರು ಶೇಕಡಾ 50 ರಷ್ಟು ಮಹಿಳೆಯರಿಗೆ ಶಿಕ್ಷಣ ಅಥವಾ ಉದ್ಯೋಗದ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಸುರಕ್ಷಿತ ಪ್ರಯಾಣದ ಹೆಸರಿನಲ್ಲಿ ಮಹಿಳೆಯರು ಪ್ರತಿ ವರ್ಷ ಹೆಚ್ಚುವರಿಯಾಗಿ 17,500 ರೂಪಾಯಿಗಳನ್ನು ವೆಚ್ಚ ಮಾಡಬೇಕಾಗಿದೆ ಎಂದು ಗಾಂಧಿ ಹೇಳಿದರು.
ಮಹಿಳೆಯರು ಹಲವು ರೀತಿಯಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ ಅವರು, ಶೇಕಡಾ 60 ರಷ್ಟು ಮಹಿಳೆಯರು ತಮ್ಮ ಮನೆಗಳಿಂದ ಹೊರಗೆ ಒಬ್ಬರೇ ಹೋಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
“ಹುಡುಗನೊಬ್ಬ ಯಾವಾಗ ಬೇಕಾದರೂ ಹೊರಗೆ ಹೋಗಬಹುದು, ತಡವಾಗಿ ಬರಬಹುದು, ಆದರೆ ಹೆಣ್ಣುಮಕ್ಕಳಾದ ನೀವು ರಾತ್ರಿ 8 ಗಂಟೆಯೊಳಗೆ ಹಿಂತಿರುಗಬೇಕು. ಹುಡುಗರು ಯಾವುದೇ ಪರೀಕ್ಷೆಗಳನ್ನು ಎಷ್ಟು ಬಾರಿಯಾದರೂ ಬರೆಯಬಹುದು, ಆದರೆ ಹೆಣ್ಣುಮಕ್ಕಳಿಗೆ ಒಂದೇ ಒಂದು ಪ್ರಯತ್ನ ಸಿಗುತ್ತದೆ. ಇದು ಅವರ ಮದುವೆಯ ಸಮಯ, ಪರೀಕ್ಷೆಗೆ ಹೋಗುವ ಅಗತ್ಯವಿಲ್ಲ ಎಂದು ಅವರಿಗೆ ಹೇಳಲಾಗುತ್ತದೆ” ಎಂದು ಅವರು ಹೇಳಿದರು.
ಶೇಕಡಾ 45 ರಷ್ಟು ಮಹಿಳೆಯರು ಮದುವೆ ಅಥವಾ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಶಿಕ್ಷಣ ಅಥವಾ ಕೆಲಸವನ್ನು ತೊರೆಯಬೇಕಾಗಿದೆ. ಆದರೆ ಕೇವಲ ಶೇಕಡಾ 8 ರಷ್ಟು ಮಹಿಳೆಯರು ಮಾತ್ರ ಭೂಮಿಯ ಒಡೆತನವನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದರು.

ಕುಟುಂಬಗಳಲ್ಲಿನ ಅಸಮಾನತೆ ಕುರಿತು ಮಾತನಾಡಿದ ರಾಹುಲ್ ಗಾಂಧಿ, 15 ರಿಂದ 29 ವರ್ಷ ವಯಸ್ಸಿನ ಮಹಿಳೆಯರು ಮನೆಯಲ್ಲಿ 5.5 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆದರೆ ಅದೇ ಮನೆಯಲ್ಲಿ ಹುಡುಗರು ಕೇವಲ 30 ನಿಮಿಷ ಕೆಲಸ ಮಾಡುತ್ತಾರೆ ಎಂದರು.
ಶೇಕಡಾ 84 ರಷ್ಟು ಮಹಿಳೆಯರಿಗೆ ಉದ್ಯೋಗ ಕೈಗೊಳ್ಳಲು ತಮ್ಮ ಕುಟುಂಬದ ಅನುಮತಿ ಅಗತ್ಯವಿದೆ. ಮಹಿಳೆಯರು ಪುರುಷರಿಗಿಂತ ಶೇಕಡಾ 25 ರಷ್ಟು ಕಡಿಮೆ ಗಳಿಸುತ್ತಾರೆ. ಅವರಿಗೆ ಸುಲಭವಾಗಿ ಬಡ್ತಿ ಸಿಗುವುದಿಲ್ಲ ಎಂದು ಸೇರಿಸಿದರು.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಯಿಯ ಅರ್ಥಶಾಸ್ತ್ರ ವಿದ್ಯಾರ್ಥಿನಿ ಸುಚಿತ್ರಾ ಪಾಗಿ ಮಾತನಾಡಿ, ತಮ್ಮ 13ನೇ ವಯಸ್ಸಿನಲ್ಲಿ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುವಾಗ ಮತ್ತು ನಂತರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ತಾವು ಎದುರಿಸಿದ ಕಿರುಕುಳದ ಘಟನೆಗಳನ್ನು ನೆನಪಿಸಿಕೊಂಡರು.
ಈ ಅನುಭವಗಳು ತಮ್ಮಲ್ಲಿ ಪುರುಷರ ಬಗ್ಗೆ ಭಯವನ್ನು ಹುಟ್ಟುಹಾಕಿದವು ಎಂದು ಅವರು ಹೇಳಿದರು. ಆದರೆ, ಎಲ್ಲಾ ಪುರುಷರೂ ಒಂದೇ ರೀತಿ ಇರುವುದಿಲ್ಲ. ಮಹಿಳೆಗೆ ಕಿರುಕುಳ ನೀಡಲಾಗುತ್ತಿರುವುದನ್ನು ಕಂಡಾಗ ಜನರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ಮೌನ ಪ್ರೇಕ್ಷಕರಾಗಿ ಉಳಿಯುವ ಬದಲು ಸಂತ್ರಸ್ತರಿಗೆ ಬೆಂಬಲ ನೀಡುವಂತೆ ಪಾಗಿ ಮಹಿಳೆಯರು ಮತ್ತು ಪುರುಷರಲ್ಲಿ ಮನವಿ ಮಾಡಿದರು.
ಪುಣೆಯಲ್ಲಿ ಮನೋವಿಜ್ಞಾನ ವ್ಯಾಸಂಗ ಮಾಡುತ್ತಿರುವ ಮೈತ್ರಿ ಎಂಬ ಮತ್ತೋರ್ವ ವಿದ್ಯಾರ್ಥಿನಿ ಮಾತನಾಡಿ, ಸುರಕ್ಷತೆಯ ಕಾಳಜಿಯು ವಿಶೇಷವಾಗಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಅಡ್ಡಿಯಾಗಬಹುದು ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಪೋಷಕರು ಸುರಕ್ಷತೆಯ ಕಾಳಜಿಯಿಂದಾಗಿ ತಮ್ಮ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಹೊರಗೆ ಕಳುಹಿಸಲು ಹೆಚ್ಚಾಗಿ ಹಿಂಜರಿಯುತ್ತಾರೆ. ಬದಲಿಗೆ ತಮ್ಮ ಗಂಡುಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡುತ್ತಾರೆ ಎಂದು ಅವರು ಹೇಳಿದರು.
ಮಗ ತಮ್ಮನ್ನು ಆರ್ಥಿಕವಾಗಿ ಬೆಂಬಲಿಸುತ್ತಾನೆ. ಆದರೆ ಮಗಳು ಮದುವೆಯಾಗಿ ಕುಟುಂಬವನ್ನು ತೊರೆಯುತ್ತಾಳೆ ಎಂದು ಭಾವಿಸುವ ಸಾಮಾಜಿಕ ರೂಢಿಗಳಿಗೆ ಮೈತ್ರಿ ಈ ಮನಸ್ಥಿತಿಯನ್ನು ಭಾಗಶಃ ಕಾರಣವೆಂದು ಹೇಳಿದರು.
ಸೈಬರ್ ಮತ್ತು ಡಿಜಿಟಲ್ ಸೈನ್ಸ್‌ನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಪ್ರಜ್ಞಾ ಗಾವಂಡೆ ಮಾತನಾಡಿ, ಸೈಬರ್ ಭದ್ರತೆಯಂತಹ ವಿಶೇಷ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲು ಇರುವ ಆರ್ಥಿಕ ತಡೆಗಳ ಕುರಿತು ಬೆಳಕು ಚೆಲ್ಲಿದರು. “ಪ್ರಸಿದ್ಧ ಕಾಲೇಜುಗಳು ಇಂತಹ ಕೋರ್ಸ್‌ಗಳಿಗೆ ಸುಮಾರು 3 ಲಕ್ಷ ರೂಪಾಯಿ ಶುಲ್ಕ ವಿಧಿಸುತ್ತವೆ, ಇದನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು ಭರಿಸುವುದು ಕಷ್ಟ” ಎಂದು ಅವರು ಉಲ್ಲೇಖಿಸಿದರು.
ಖಾಸಗಿಯಾಗಿ ಅರೆಕಾಲಿಕ ಕೆಲಸವನ್ನೂ ಮಾಡುವ ಗಾವಂಡೆ, “ಸರ್ಕಾರಿ ಕಾಲೇಜುಗಳಲ್ಲಿ ಸೈಬರ್ ಭದ್ರತಾ ಕೋರ್ಸ್‌ಗಳ ಲಭ್ಯತೆಯನ್ನು ಹೆಚ್ಚಿಸಬೇಕು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು” ಎಂದು ಕೋರಿದರು.
ಮಹಿಳೆಯರ ಅಶ್ಲೀಲ ಚಿತ್ರಗಳನ್ನು ರಚಿಸಲು ಮತ್ತು ಅವರಿಂದ ಹಣ ಸುಲಿಗೆ ಮಾಡಲು ಕೃತಕ ಬುದ್ಧಿಮತ್ತೆಯ (ಎಐ) ಹೆಚ್ಚುತ್ತಿರುವ ದುರುಪಯೋಗದ ಬಗ್ಗೆಯೂ ಅವರು ಮಾತನಾಡಿದರು, ಬಲವಾದ ಸೈಬರ್ ಭದ್ರತಾ ಜಾಗೃತಿ ಮತ್ತು ಕೌಶಲ್ಯಗಳ ಅಗತ್ಯವನ್ನು ಒತ್ತು ನೀಡಿದರು.
ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆಯೂ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರು. ಜನದಟ್ಟಣೆಯ ಬಸ್‌ಗಳಲ್ಲಿ ಕಿರುಕುಳ ಅಥವಾ ಅನುಚಿತ ಸ್ಪರ್ಶದ ಭಯವಿರುತ್ತದೆ. ಖಾಲಿ ಬಸ್‌ಗಳಲ್ಲಿ ಪುರುಷರೊಂದಿಗೆ ಒಬ್ಬರೇ ಇರಬೇಕಾದ ಭಯವಿರುತ್ತದೆ ಎಂದು ಅವರು ಹೇಳಿದರು.
ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಬೇಕಾದರೆ ಸುರಕ್ಷಿತ ಸಂಚಾರ, ಕೈಗೆಟುಕುವ ಶಿಕ್ಷಣ ಮತ್ತು ಕಿರುಕುಳದಿಂದ ಮುಕ್ತಿ ನೀಡುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.


