ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ ಅಂತರದಲ್ಲಿ, ಮಹಾರಾಷ್ಟ್ರದಲ್ಲಿ ಈ ವರ್ಷದ ನವರಾತ್ರಿ ಆಚರಣೆಯ ಸಮಯದಲ್ಲಿ ಗಾರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳು ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಘೋಷಿಸಿದೆ.
ನವರಾತ್ರಿಗೆ ಮುನ್ನ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ವಿಎಚ್‌ಪಿ, ಕಾರ್ಯಕ್ರಮದ ಆಯೋಜಕರು ಭಾಗವಹಿಸುವವರ ಗುರುತನ್ನು ಆಧಾರ್ ಕಾರ್ಡ್‌ಗಳ ಮೂಲಕ ಪರಿಶೀಲಿಸಬೇಕು. ಪ್ರವೇಶದ್ವಾರದಲ್ಲಿ ಹಣೆಗೆ ತಿಲಕ ಹಚ್ಚುವುದನ್ನು ಕಡ್ಡಾಯಗೊಳಿಸಬೇಕು ಎಂದು ನಿರ್ದೇಶಿಸಿದೆ.
ವಿಎಚ್‌ಪಿ ರಾಷ್ಟ್ರೀಯ ವಕ್ತಾರ ಹಾಗೂ ಜಂಟಿ ಪ್ರಧಾನ ಕಾರ್ಯದರ್ಶಿ ಶ್ರೀರಾಜ್ ನಾಯರ್ ಅವರ ಪ್ರಕಾರ, ಒಂಬತ್ತು ದಿನಗಳ ಕಾಲ ನಡೆಯುವ ಈ ಹಿಂದೂ ಹಬ್ಬದ ಸಂದರ್ಭದಲ್ಲಿ ನಡೆಯುವ ಗಾರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಪಾಲ್ಗೊಳ್ಳಲು ಅವಕಾಶ ನೀಡದಿರಲು ಸಂಸ್ಥೆ ನಿರ್ಧರಿಸಿದೆ.
ಆಂಗ್ಲ ಸುಂದ್ದಿ ಸಂಸ್ಥೆಯೊಂದಕ್ಕೆ ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಜ್ ನಾಯರ್, “ನವರಾತ್ರಿ ಎನ್ನುವುದು ಕೇವಲ ಸಾಂಸ್ಕೃತಿಕ ಅಥವಾ ಮನರಂಜನೆಯ ಕಾರ್ಯಕ್ರಮವಲ್ಲ, ಅದು ದುರ್ಗಾ ದೇವಿಯ ಆರಾಧನೆಗೆ ಸಂಬಂಧಿಸಿದ ಧಾರ್ಮಿಕ ಹಬ್ಬವಾಗಿದೆ. ನವರಾತ್ರಿ ಎಂದರೆ ಕೇವಲ ನೃತ್ಯ ಮತ್ತು ಮನರಂಜನೆಯಲ್ಲ. ಇದು ತಾಯಿ ದುರ್ಗೆಯ ಆರಾಧನೆಗೆ ಮೀಸಲಾದ ಹಬ್ಬ. ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ಲದವರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
“ಈ ನಿರ್ಧಾರವನ್ನು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧದ ಪ್ರಚಾರ ಎಂದು ನೋಡಬಾರದು. ಧಾರ್ಮಿಕ ಸಂಪ್ರದಾಯಗಳನ್ನು ಕಾಪಾಡಿಕೊಲ್ಳುವ ಜೊತೆಗೆ ಆಚರಣೆಯ ಸಮಯದಲ್ಲಿ ಭದ್ರತೆಯನ್ನು ಕಾಯ್ದುಕೊಳ್ಳಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ನಾಯರ್ ಹೇಳಿದ್ದಾರೆ.
“ಹಿಂದೂ ಹಬ್ಬಗಳು ದೇಶದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿವೆ. ಅವುಗಳ ಮೂಲ ಸ್ವರೂಪವನ್ನು ರಕ್ಷಿಸಬೇಕಾಗಿದೆ” ಎಂದು ಅವರು ಹೇಳಿದರು.
ಭಾಗವತ್ ಅವರ ಹೇಳಿಕೆಗಳು ಮತ್ತು ವಿಎಚ್‌ಪಿ ನಿರ್ಧಾರದ ನಡುವಿನ ವ್ಯತ್ಯಾಸದ ಕುರಿತು ಕೇಳಿದಾಗ, ನಾಯರ್ ನೇರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದರು. ವಿಎಚ್‌ಪಿ ಕೂಡ ಸಾಮಾಜಿಕ ಸೌಹಾರ್ದತೆ ಮತ್ತು ಶಾಂತಿಯನ್ನು ನಂಬುತ್ತದೆ ಎಂದು ಮಾತ್ರ ಹೇಳಿದರು.
ಸಂಸ್ಥೆಯ ನಿಲುವನ್ನು ವಿವರಿಸಿದ ನಾಯರ್, ನವರಾತ್ರಿಯನ್ನು ಆಚರಿಸಲು ಬಯಸುವ ಮುಸ್ಲಿಂ ಸಮುದಾಯದ ಸದಸ್ಯರು ತಮ್ಮದೇ ಆದ ಪ್ರದೇಶಗಳಲ್ಲಿ ಮತ್ತು ಸಾಮಾಜಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದು ಹೇಳಿದರು.
ಈ ನಿರ್ಬಂಧಗಳು ನವರಾತ್ರಿ ಆಚರಣೆಯ ಧಾರ್ಮಿಕ ಸ್ವರೂಪವನ್ನು ಉಳಿಸುವ ಉದ್ದೇಶವನ್ನು ಹೊಂದಿವೆಯೇ ಹೊರತು ರಾಜಕೀಯ ಆಧಾರದ ಮೇಲೆ ಜನರನ್ನು ಹೊರಗಿಡುವುದಲ್ಲ ಎಂದು ವಿಎಚ್‌ಪಿ ಪ್ರತಿಪಾದಿಸುತ್ತದೆ.
ಆದರೆ, ಧರ್ಮದ ಆಧಾರದ ಮೇಲೆ ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನರನ್ನು ತಡೆಯುವುದು ತಾರತಮ್ಯಕ್ಕೆ ಸಮನಾಗಿದೆ, ಕೋಮು ವಿಭಜನೆಯನ್ನು ಹೆಚ್ಚಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಕೆಲವರು ವಾದಿಸುತ್ತಾರೆ.
ಮಹಾರಾಷ್ಟ್ರದಲ್ಲಿ ನವರಾತ್ರಿ ಸಿದ್ಧತೆಗಳು ಚುರುಕುಗೊಳ್ಳುತ್ತಿದ್ದಂತೆ ಈ ಚರ್ಚೆಯು ತೀವ್ರಗೊಳ್ಳುವ ಸಾಧ್ಯತೆಯಿದೆ.
ಈ ನಿರ್ದೇಶನವನ್ನು ಎಷ್ಟು ವ್ಯಾಪಕವಾಗಿ ಜಾರಿಗೆ ತರಲು ವಿಎಚ್‌ಪಿ ಉದ್ದೇಶಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಾರ್ಗಸೂಚಿಗಳು ವಿಎಚ್‌ಪಿ ನೇರವಾಗಿ ಆಯೋಜಿಸಿದ, ಪ್ರಾಯೋಜಿಸಿದ ಅಥವಾ ಬೆಂಬಲಿಸಿದ ಕಾರ್ಯಕ್ರಮಗಳಿಗೆ ಮಾತ್ರ ಅನ್ವಯಿಸುತ್ತವೆಯೇ ಅಥವಾ ಮಹಾರಾಷ್ಟ್ರದಾದ್ಯಂತ ಇರುವ ಖಾಸಗಿ ಗಾರ್ಬಾ ಮತ್ತು ದಾಂಡಿಯಾ ಆಯೋಜಕರು ಸಹ ಇದೇ ರೀತಿಯ ನಿರ್ಬಂಧಗಳನ್ನು ಅಳವಡಿಸಿಕೊಳ್ಳಬೇಕೆಂದು ಸಂಸ್ಥೆ ನಿರೀಕ್ಷಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


