ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯು ಆಗಸ್ಟ್ 14 ರಂದು ಪೂರ್ಬ ಬರ್ಧಮಾನ್ ಜಿಲ್ಲೆಯ ಸಹಾನಗರ ಪಟ್ಟಣದ ಸೇಂಟ್ ಕ್ಲಾರೆಟ್ ಚರ್ಚ್ನಲ್ಲಿ ನಡೆದಿದೆ.
ಎಲ್ಲರೂ ಬೆಚ್ಚಿಬೀಳುವಂತೆ, ಹೂಳಲು ಕೆಳಗಿಳಿಸಲಾಗಿದ್ದ ಶವಪೆಟ್ಟಿಗೆಯನ್ನು ಗುಂಪು ಬಲವಂತವಾಗಿ ಮೇಲಕ್ಕೆ ಎಳೆದಿದೆ. ಪಾದ್ರಿ ಫಾದರ್ ಸ್ಯಾಮ್ಯುಯೆಲ್ ಹೆಂಬ್ರೊಮ್ ಇದನ್ನು ವಿರೋಧಿಸಿದಾಗ, ದಫನಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವಂತೆ ಗುಂಪು ಒತ್ತಾಯಿಸಿತು ಎಂದು ವರದಿಯಾಗಿದೆ. “ದಾಖಲೆಗಳನ್ನು ಚರ್ಚ್ನಿಂದ ತರಲು ನಮಗೆ ಸ್ವಲ್ಪ ಸಮಯ ಕೊಡಿ ಎಂದು ನಾವು ಕೇಳಿದೆವು. ಆದರೆ ಅವರು ದಫನ್ ಮಾಡಲು ಬಿಡಲಿಲ್ಲ” ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ನಂತರ ಶವವನ್ನು ಬರ್ಧಮಾನ್ ಪಟ್ಟಣದ ಇನ್ನೊಂದು ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.
ಮೃತ ವ್ಯಕ್ತಿ ಆ ಪ್ರದೇಶಕ್ಕೆ ಸೇರಿದವರಲ್ಲದ ಕಾರಣ ಈ “ಗೊಂದಲ” ಉಂಟಾಗಿದೆ ಎಂದು ಹೇಳುವ ಮೂಲಕ ಪೂರ್ಬ ಬರ್ಧಮಾನ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪುಷ್ಪಾ ಅವರು ಈ ಹಲ್ಲೆ ಆರೋಪವನ್ನು ತಳ್ಳಿಹಾಕಿದ್ದಾರೆ.
ಆಗಸ್ಟ್ನಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಸತತ ದಾಳಿ
ಈ ವರ್ಷದ ಮೇ ತಿಂಗಳಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಧಿಕಾರಕ್ಕೆ ಬಂದಾಗಿನಿಂದ ಧಾರ್ಮಿಕ ದ್ವೇಷದ ಅಪರಾಧಗಳಲ್ಲಿ ಹೆಚ್ಚಳವಾಗಿದೆ.
ಆಗಸ್ಟ್ 23 ಮತ್ತು 30 ರ ನಡುವೆ ಕ್ರಿಶ್ಚಿಯನ್ನರ ವಿರುದ್ಧ ಸತತ ಪ್ರಕರಣಗಳು ವರದಿಯಾಗಿವೆ. ಪ್ರಾರ್ಥನಾ ಸಭೆಗಳಿಗೆ ಅಡೆತಡೆ ಉಂಟುಮಾಡುವುದು. ಪಾದ್ರಿಗಳು ಮತ್ತು ಪ್ರಾರ್ಥನೆ ಸಲ್ಲಿಸುವವರ ಮೇಲೆ ದಾಳಿ ಮಾಡುವುದು ಹಾಗೂ ಬಲವಂತದ ಮತಾಂತರದ ಆರೋಪಗಳು ಈ ಘಟನೆಗಳಲ್ಲಿ ಸೇರಿವೆ.
ಆಗಸ್ಟ್ 23 ರಂದು, ಹೌರಾ ಜಿಲ್ಲೆಯ ಉಲುಬೇರಿಯಾ ಪಟ್ಟಣದ ಮನೆಯೊಂದರಲ್ಲಿ ಭಾನುವಾರದ ಪ್ರಾರ್ಥನೆ ನಡೆಯುತ್ತಿದ್ದಾಗ, ಘೋಷಣೆಗಳನ್ನು ಕೂಗುತ್ತಾ ಬಂದ ಗುಂಪೊಂದು “ಬಲವಂತದ ಮತಾಂತರ” ಆರೋಪ ಮಾಡಿ ಒಳ ನುಗ್ಗಿದೆ. ಅವರು 60 ಜನರಿದ್ದ ಗುಂಪಿನ ಮೇಲೆ ದಾಳಿ ಮಾಡಿ, ಪೀಠೋಪಕರಣಗಳನ್ನು ಹಾನಿಗೊಳಿಸಿದ್ದಾರೆ. “ಅಂದಿನಿಂದ ನಾವು ಯಾವುದೇ ಪ್ರಾರ್ಥನಾ ಸಭೆಯನ್ನು ನಡೆಸಿಲ್” ಎಂದು ಪಾದ್ರಿ ಮಿಥುನ್ ಹಜ್ರಾ ಹೇಳಿದ್ದಾರೆ.
ಎರಡು ದಿನಗಳ ನಂತರ, ಹೌರಾ ಜಿಲ್ಲೆಯ ಘುಸುರಿ ಪಟ್ಟಣದಲ್ಲಿರುವ ‘ಚರ್ಚ್ ಆಫ್ ದಿ ಗ್ರೇಸ್’ನಲ್ಲಿ ನಡೆದ ಮತ್ತೊಂದು ಪ್ರಾರ್ಥನಾ ಸಭೆಯ ಮೇಲೆ ಹಿಂದುತ್ವ ಗುಂಪು ದಾಳಿ ನಡೆಸಿದೆ. “ನಾವು ದೂರು ನೀಡಲು ಹೋದಾಗ, ನಮ್ಮನ್ನು ಗಂಟೆಗಟ್ಟಲೆ ಕಾಯಿಸಲಾಯಿತು. ನಂತರ ಚರ್ಚ್ ಮತ್ತು ಧನಸಹಾಯದ ಬಗ್ಗೆ ನಮ್ಮನ್ನೇ ವಿಚಾರಣೆಗೊಳಪಡಿಸಲಾಯಿತು” ಎಂದು ಫಾದರ್ ಸೂರಜ್ ಸರೋಜ ನೋವು ತೋಡಿಕೊಂಡಿದ್ದಾರೆ.
ಮರುದಿನ, ಅಂದರೆ ಆಗಸ್ಟ್ 26 ರಂದು, ದಂಪತಿಗಳು ಬಡವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿ ಸೂತ್ರಧಾರ್ ಎಂಬ ತೀವ್ರ ಬಲಪಂಥೀಯ ನಾಯಕ ಪಾದ್ರಿ ಮತ್ತು ಅವರ ಪತ್ನಿಯ ಮೇಲೆ ದಾಳಿ ನಡೆಸಿದ್ದಾನೆ. ಆರಂಭದಲ್ಲಿ ಹೆದರಿದ ಪಾದ್ರಿ ದೂರು ನೀಡಲು ಭಯಪಟ್ಟಿದ್ದರು. “ನಾನು ಇಮೇಲ್ ಮೂಲಕ ದೂರು ದಾಖಲಿಸಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ 30 ರಂದು, ಇದೇ ರೀತಿಯ ಆರೋಪಗಳ ಮೇಲೆ ಹೌರಾದ ಜಗತ್ಬಲ್ಲವಪುರ ಮತ್ತು ಉತ್ತರ 24 ಪರಗಣದ ಹಿಂಗಲ್ಗಂಜ್ನಲ್ಲಿ ಹಿಂದುತ್ವ ಬೆಂಬಲಿಗರು ಮನೆಗಳಿಗೆ ನುಗ್ಗಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಪ್ರದೀಪ್ತ ಮುಖರ್ಜಿ ಅವರು, ಬಿಜೆಪಿಯು ಭಯದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯು ಮುಸ್ಲಿಮರನ್ನು ವಿದೇಶಿಯರು ಎಂದು ಬಿಂಬಿಸುತ್ತಿದೆ, ಕ್ರಿಶ್ಚಿಯನ್ ಸಮುದಾಯದ ಸದಸ್ಯರನ್ನು ಹೆಚ್ಚಾಗಿ ಗುರಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ಮುಸ್ಲಿಮರನ್ನು ವಿದೇಶಿಯರು ಎಂದು ಕರೆಯುವುದು ಮತ್ತು ಕ್ರಿಶ್ಚಿಯನ್ ಸಮುದಾಯದ ಸದಸ್ಯರ ಮನೆಗಳ ಮೇಲೆ ದಾಳಿ ಮಾಡುವುದು ಈಗ ಅವರ ಕೆಲಸದ ಭಾಗವಾಗಿದೆ” ಎಂದು ಮುಖರ್ಜಿ ಹೇಳಿದ್ದಾರೆ.


