ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ವಿಚಾರಣೆಗಾಗಿ ಪ್ರಜ್ವಲ್ ರೇವಣ್ಣ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 42ನೇ ಎಸಿಎಂಎಂ (ACMM) ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ತನಿಖೆಗಾಗಿ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಮಂಗಳವಾರ ಪ್ರಜ್ವಲ್ ಅವರನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ, ಜೈಲಿನೊಳಗೆ ಮೊಬೈಲ್ ತಲುಪಿದ್ದು ಹೇಗೆ ಮತ್ತು ಅದರ ಮೂಲಕ ಯಾರ ಜೊತೆ ಸಂಪರ್ಕದಲ್ಲಿದ್ದರು ಎಂಬುದನ್ನು ಪತ್ತೆಹಚ್ಚಲು ಬಾಡಿ ವಾರಂಟ್ ಆಧಾರದ ಮೇಲೆ ಪ್ರಜ್ವಲ್ ರನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದರು. ಆದರೆ, ಪ್ರಜ್ವಲ್ ಪರ ವಕೀಲರಾದ ಅರುಣ್ ಜಿ. ಅವರು ಈ ಪೊಲೀಸ್ ಕಸ್ಟಡಿ ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅಂತಿಮವಾಗಿ ಪ್ರಾಸಿಕ್ಯೂಷನ್ ಮನವಿಯನ್ನು ಪುರಸ್ಕರಿಸಿತು. ಜೈಲಿನ ಭದ್ರತಾ ಲೋಪ ಮತ್ತು ಅಕ್ರಮ ಸಂಪರ್ಕದ ತನಿಖೆ ಅತ್ಯಗತ್ಯವಾಗಿರುವುದರಿಂದ ಪ್ರಜ್ವಲ್ ರೇವಣ್ಣ ಅವರನ್ನು ಎರಡು ದಿನಗಳ ಕಾಲ ಪರಪ್ಪನ ಅಗ್ರಹಾರ ಠಾಣೆ ಪೊಲೀಸರ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಕಾರಾಗೃಹದ ನಿಯಮಗಳನ್ನು ಮೀರಿ ಜೈಲಿನೊಳಗೆ ಮೊಬೈಲ್ ಬಳಸಿರುವ ಜಾಲದ ಮೂಲವನ್ನು ಹುಡುಕಲು ಪೊಲೀಸರು ಈಗ ವಿಚಾರಣೆ ತೀವ್ರಗೊಳಿಸಿದ್ದಾರೆ.


