ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ ಅಥವಾ ಮ್ಯಾಪಿಂಗ್ ಇಲ್ಲದಿರುವಂತಹ ದೋಷಗಳನ್ನು (Logical Discrepancies) ಎತ್ತಿ ತೋರಿಸಿ ಚುನಾವಣಾ ನೋಂದಣಾಧಿಕಾರಿಗಳು (ERO) ಅವರಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುತ್ತಿದ್ದಾರೆ.
ಸಾಮಾನ್ಯವಾಗಿ ಎನ್ಆರ್ಐ (NRI) ಮತದಾರರಿಗಾಗಿಯೇ ಇರುವ ಫಾರ್ಮ್ 6A (Form 6A) ಮೂಲಕ ನೋಂದಣಿ ಮಾಡಿಕೊಂಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಏಕೆಂದರೆ ಫಾರ್ಮ್ 6A ಯಲ್ಲಿ ಈಗಾಗಲೇ ಪಾಸ್ಪೋರ್ಟ್ ಮತ್ತು ವೀಸಾ ವಿವರಗಳನ್ನು ನೀಡಲಾಗಿರುವುದರಿಂದ ಅವರಿಗೆ ನೇರ ಹಾಜರಾತಿಯಿಂದ ವಿನಾಯಿತಿ ಇರುತ್ತದೆ. ಆದರೆ, ವಿದೇಶಗಳಲ್ಲಿ ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಹೋದ ಬಹುತೇಕ ಕನ್ನಡಿಗರು ಆನ್ಲೈನ್ನಲ್ಲಿ ನಮೂದಿಸುವಾಗ ಸಾಮಾನ್ಯ ನಿವಾಸಿ ಮತದಾರರಂತೆ (Resident Electors) ಅರ್ಜಿ ಸಲ್ಲಿಸಿದ್ದಾರೆ. ಪರಿಣಾಮವಾಗಿ, ಇಲಾಖೆಯು ಇವರನ್ನು ಭಾರತದಲ್ಲೇ ವಾಸಿಸುತ್ತಿರುವ ಸ್ಥಳೀಯ ನಾಗರಿಕರೆಂದು ಪರಿಗಣಿಸಿ, ನೋಟಿಸ್ ನೀಡಿ ವಿಚಾರಣೆಗೆ ಕರೆಯುತ್ತಿದೆ.
ಕರಾವಳಿ ಮತ್ತು ಮಲೆನಾಡು ಭಾಗದಿಂದ ಉದ್ಯೋಗಕ್ಕಾಗಿ ಗಲ್ಫ್ ಹಾಗೂ ಇತರ ವಿದೇಶಗಳಿಗೆ ತೆರಳಿರುವ ಲಕ್ಷಾಂತರ ಕನ್ನಡಿಗರು ಈ ಪಟ್ಟಿಯಲ್ಲಿದ್ದಾರೆ. ಏಕಾಏಕಿ ಕೆಲಸ ಬಿಟ್ಟು, ಲಕ್ಷಾಂತರ ರೂಪಾಯಿ ವಿಮಾನ ಪ್ರಯಾಣದ ವೆಚ್ಚ ಭರಿಸಿ ಕೇವಲ ಒಂದು ವಿಚಾರಣೆಗೆ ಭಾರತಕ್ಕೆ ಬರಲು ಸಾಧ್ಯವೇ ಇಲ್ಲದಿರುವುದು ಅವರಿಗೆ ಎದುರಾಗಿರುವ ದೊಡ್ಡ ಪ್ರಾಯೋಗಿಕ ಸಮಸ್ಯೆಯಾಗಿದೆ. ಕನಿಷ್ಠ 50,000ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರಿಗೆ ಈ ರೀತಿಯ ನೋಟಿಸ್ಗಳು ತಲುಪಿರುವ ಸಾಧ್ಯತೆ ಇದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕುಟುಂಬಸ್ಥರಿಗೆ ಅವಕಾಶ ನೀಡಲು ಸಿಎಂ ಡಿ.ಕೆ. ಶಿವಕುಮಾರ್ ಮನವಿ:
ಸಮಸ್ಯೆಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ವಿದೇಶಗಳಲ್ಲಿ ಇರುವವರು, ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಅಸ್ವಸ್ಥರು ಖುದ್ದು ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಅವರ ಕುಟುಂಬದ ಯಾವುದೇ ಹಿರಿಯ ಸದಸ್ಯರು ದಾಖಲೆಗಳನ್ನು ಸಲ್ಲಿಸಲು ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ಆದಾಗ್ಯೂ, ಸದ್ಯದ ನಿಯಮಗಳ ಪ್ರಕಾರ ಅಧಿಕಾರಿಗಳು ಈ ಮನವಿಯನ್ನು ಪುರಸ್ಕರಿಸದಿದ್ದಲ್ಲಿ, ವಿಚಾರಣೆಗೆ ಹಾಜರಾಗದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯುವ (Delete) ಸಾಧ್ಯತೆಯಿದೆ. ಒಮ್ಮೆ ಹೆಸರು ತೆಗೆದರೆ, ಅರ್ಜಿದಾರರು ಮತ್ತೆ ಫಾರ್ಮ್ 6A ಸಲ್ಲಿಸಿ ಎನ್ಆರ್ಐ ಮತದಾರರಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಪಾರದರ್ಶಕತೆಗಾಗಿ ‘ಹಕ್ಕುಗಳು ಮತ್ತು ಆಕ್ಷೇಪಣೆಗಳ’ ಪಟ್ಟಿ ಪ್ರಕಟ:
ಇನ್ನೊಂದೆಡೆ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ‘ಹಕ್ಕುಗಳು ಮತ್ತು ಆಕ್ಷೇಪಣೆಗಳ’ (Claims and Objections) ಪಟ್ಟಿಯನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಇದರಿಂದಾಗಿ ಸತ್ತವರು, ಸ್ಥಳಾಂತರಗೊಂಡವರು ಅಥವಾ ನಕಲಿ ಮತದಾರರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲು ರಾಜಕೀಯ ಪಕ್ಷಗಳಿಗೆ ಮತ್ತು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.


