ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್ಐಆರ್) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್ನಲ್ಲಿ ಕರಡು ಮತದಾರರ ಪಟ್ಟಿ ಪ್ರಕಟವಾದಾಗ, ಇಡೀ ಮತಗಟ್ಟೆಯಲ್ಲಿ ಕೇವಲ ಒಬ್ಬರು ಮತದಾರರ ಹೆಸರು ಮಾತ್ರ ಉಳಿದುಕೊಂಡಿದೆ. ಅಂದರೆ, ಈ ಒಂದೇ ಮತಗಟ್ಟೆಯಲ್ಲಿ ಶೇಕಡಾ 99.8ರಷ್ಟು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಮತಗಟ್ಟೆಯು ಚಾಂದ್ನಿ ಚೌಕ್ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 38ಕ್ಕೆ ಒಳಪಟ್ಟಿದೆ. ಇಡೀ ಚಾಂದ್ನಿ ಚೌಕ್ ಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟಗೊಂಡಾಗ, ಒಟ್ಟು ಮತದಾರರಲ್ಲಿ ಸುಮಾರು ಶೇಕಡಾ 38ರಷ್ಟು ಜನರ ಹೆಸರುಗಳನ್ನು ಡಿಲೀಟ್ ಮಾಡಿರುವುದು ಗೊತ್ತಾಗಿದೆ. 728 ಮತದಾರರ ಹೆಸರು ಡಿಲೀಟ್ ಮಾಡಲಾದ ಮತಗಟ್ಟೆಯನ್ನು ಹೊಂದಿರುವ ಕೊಳಗೇರಿ ಪ್ರದೇಶವು ಯಮುನಾ ನದಿಯ ಪಶ್ಚಿಮ ದಂಡೆಯ ಮೇಲಿದೆ ಎಂದು newslaundry.com ವರದಿ ಮಾಡಿದೆ.
ಈ ಪ್ರದೇಶದಲ್ಲಿ ನಡೆದ ಎಸ್ಐಆರ್ ಮತ್ತಷ್ಟು ಕುತೂಹಲ ಕೆರಳಿಸಲು ಕಾರಣವೇನೆಂದರೆ, ಇಲ್ಲಿನ ಪ್ರಕ್ರಿಯೆಯು ಸಾಮಾನ್ಯ ಅರ್ಹತಾ ಮಾನದಂಡಗಳಾದ ಪೌರತ್ವ, ವಯಸ್ಸು, ವಾಸಸ್ಥಳ ಅಥವಾ ಚುನಾವಣಾ ಅಪರಾಧಗಳ ಕಾರಣದಿಂದ ಕಾನೂನುಬದ್ಧವಾಗಿ ಅನರ್ಹಗೊಳ್ಳುವ ನಿಯಮಗಳ ಮೇಲೆ ಆಧಾರಿತವಾಗಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕೆಲವು ಸ್ಥಳೀಯರ ಹೇಳಿಕೆಗಳು ಮತ್ತು ಕನಿಷ್ಠ ಒಬ್ಬರು ಚುನಾವಣಾ ಅಧಿಕಾರಿಯ ಪ್ರಕಾರ, ಅವರ ವಾಸಸ್ಥಳದ ಸ್ವರೂಪದ ಕಾರಣದಿಂದಾಗಿ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ; ಅಂದರೆ, ಅವರು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಜಮೀನಿನಲ್ಲಿರುವ ‘ಅನಧಿಕೃತ’ ವಸಾಹತು ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂಬ ಕಾರಣಕ್ಕೆ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (ಎಇಆರ್ಒ) ಸುನಿಲ್ ಕುಮಾರ್ ಅವರು ಮಾತನಾಡಿ, ಬೇಲಾ ಎಸ್ಟೇಟ್ನ ನಿವಾಸಿಗಳ ಬಳಿ ವಿದ್ಯುತ್ ಬಿಲ್ ಆಗಲಿ, ನೀರಿನ ಬಿಲ್ ಆಗಲಿ ಅಥವಾ ಪಕ್ಕಾ ಮನೆಗಳಾಗಲಿ ಇಲ್ಲ ಮತ್ತು ಅವರು ಕೃಷಿ ಭೂಮಿಯಲ್ಲಿ ವಾಸಿಸುತ್ತಿದ್ದಾರೆ ಎಂದಿದ್ದಾರೆ. ಅಂದರೆ, ಅಧಿಕಾರಿಯ ಪ್ರಕಾರ ಇದು ಅನಧಿಕೃತ ಜಮೀನಾಗಿದೆ, ಇದೇ ಕಾರಣಕ್ಕಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.
“ಅವರ ಬಳಿ ವಿದ್ಯುತ್ ಅಥವಾ ನೀರಿನ ಬಿಲ್ ಇಲ್ಲ. ಅವರಿಗೆ ಅಲ್ಲಿ ಸ್ವಂತ ಮನೆಯೂ ಇಲ್ಲ. ಅದು ಕೃಷಿ ಭೂಮಿಯಾಗಿದ್ದು, ಅವರು ಅನಧಿಕೃತ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದಾರೆ. ತಾವು ಅಲ್ಲಿನ ಖಾಯಂ ನಿವಾಸಿಗಳು ಎಂದು ಅವರು ಹೇಳಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದಲೇ ಅವರ ಹೆಸರುಗಳನ್ನು ತೆಗೆದುಹಾಕಲಾಗಿದೆ” ಎಂದು ಎಇಆರ್ಒ ಸಮರ್ಥಿಸಿಕೊಂಡಿದ್ದಾರೆ.
ಹಾಗಿದ್ದಲ್ಲಿ, ಮೊದಲಿಗೆ ಮತದಾರರ ಗಣತಿ ನಮೂನೆಗಳನ್ನು (enumeration forms) ಏಕೆ ವಿತರಿಸಲಾಯಿತು ಮತ್ತು ಸಂಗ್ರಹಿಸಲಾಯಿತು ಎಂದು ಪ್ರಶ್ನಿಸಿದಾಗ, ತಾವು ಈ ವಿಷಯವನ್ನು ಪರಿಶೀಲಿಸುವುದಾಗಿ ಎಇಆರ್ಒ ತಿಳಿಸಿದ್ದಾರೆ ಎಂದು newslaundry.com ವರದಿ ಉಲ್ಲೇಖಿಸಿದೆ.
ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಗರಿಮಾ ಆರ್ಯ ಅವರು ಎಲ್ಲಿ ಲೋಪ ಸಂಭವಿಸಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ವಿವರಣೆ ನೀಡಿಲ್ಲ. ಆ ಪ್ರದೇಶದ ಯಾವುದೇ ಮತದಾರರ ಗಣತಿ ನಮೂನೆಗಳಿಗೆ ತಾವು ಸಹಿ ಮಾಡಿರುವುದನ್ನು ನಿರಾಕರಿಸಿದ ಅವರು, ಅದಕ್ಕೆ ನಿರ್ದಿಷ್ಟವಲ್ಲದ ಸಮಸ್ಯೆಯೊಂದನ್ನು ಕಾರಣವಾಗಿ ಉಲ್ಲೇಖಿಸಿದ್ದಾರೆ. “ಅಲ್ಲಿ ಕೆಲವು ಸಮಸ್ಯೆಗಳಿದ್ದ ಕಾರಣ ನಾನು ಯಾವುದೇ ಗಣತಿ ನಮೂನೆಗಳಿಗೆ ಸಹಿ ಮಾಡಿಲ್ಲ ಮತ್ತು ಈ ವಿಷಯವನ್ನು ನನ್ನ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ಈಗ ಅವರು ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ” ಎಂದು ಬಿಎಲ್ಒ ಹೇಳಿದ್ದಾರೆ. ಆದರೆ, ಸಹಿ ಮಾಡದಿರಲು ಸಮಸ್ಯೆ ಏನೆಂಬುದನ್ನು ಅವರು ಬಹಿರಂಗಪಡಿಸಿಲ್ಲ ಎಂದು ವರದಿ ಹೇಳಿದೆ.
ದಾಖಲೆಗಳ ಪ್ರಕಾರ ಬಿಎಲ್ಒ ಹೇಳಿಕೆಯನ್ನು ಒಪ್ಪಿಕೊಳ್ಳುವುದು ಕಷ್ಟಸಾಧ್ಯವಾಗಿದೆ: ಬೂತ್ ಮಟ್ಟದ ಅಧಿಕಾರಿ ಮತ್ತು ಬೂತ್ ಮಟ್ಟದ ಏಜೆಂಟ್ ನಡುವೆ ನಡೆದ ಸಭೆಯ ನಡಾವಳಿಗಳ ಪ್ರಕಾರ, ಆ ವಸಾಹತು ಪ್ರದೇಶದಿಂದ ಕೇವಲ ಒಂದೇ ಒಂದು ಗಣತಿ ನಮೂನೆಯನ್ನು ಸಂಗ್ರಹಿಸಲಾಗಿದೆ ಎಂದು ನಮೂದಿಸಲಾಗಿದೆ. ಆದರೆ, ಬಿಎಲ್ಒ ಸಹಿ ಇರುವ ಕನಿಷ್ಠ 20 ಗಣತಿ ನಮೂನೆಗಳನ್ನು ನಾವು ಪರಿಶೀಲಿಸಿದ್ದೇವೆ ಎಂದು newslaundry.com ಹೇಳಿದೆ. ಅಷ್ಟೇ ಅಲ್ಲದೆ, ತಾವು ಈಗ ಆ ಪ್ರದೇಶದ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂದು ಆರ್ಯ ಹೇಳಿದ್ದಾರೆ – ಆದರೆ ಈ ವಾದವನ್ನು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (ಎಇಆರ್ಒ) ತಳ್ಳಿಹಾಕಿದ್ದು, ಆಕೆ ಇಂದಿಗೂ ಆ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಯಾಗಿ (ಬಿಎಲ್ಒ) ಮುಂದುವರಿದಿದ್ದಾರೆ ಎಂಬುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಕಮಲ್ ಲಾಲ್ (39) ಎಂಬ ವ್ಯಕ್ತಿಯು ತಾವು ಗಣತಿ ನಮೂನೆಗಳನ್ನು ವಿತರಿಸಲು ಮತ್ತು ಸಂಗ್ರಹಿಸಲು ಬೂತ್ ಮಟ್ಟದ ಅಧಿಕಾರಿಗೆ (ಬಿಎಲ್ಒ) ಸಹಾಯ ಮಾಡಿದ್ದಾಗಿ ತಿಳಿಸಿದ್ದು, ಚುನಾವಣಾ ನೋಂದಣಿ ಅಧಿಕಾರಿ (ಇಆರ್ಇ) ಮನೋಜ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರದೇಶದ ಮತದಾರರನ್ನು ಯಾವುದೇ ಕಾರಣಕ್ಕೂ ನೋಂದಾಯಿಸಲು ಸಾಧ್ಯವಿಲ್ಲ ಎಂದು ನಿವಾಸಿಗಳಿಗೆ ಹೇಳಿದ್ದರು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಮನೋಜ್ ಕುಮಾರ್ ಅವರು, ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟವರು ಮತದಾರರಾಗಿ ನೋಂದಾಯಿಸಿಕೊಳ್ಳಲು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರಾದರೂ, ಆ ಪ್ರದೇಶದ ನಿವಾಸಿಗಳಿಗೆ ನೋಂದಣಿ ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಎಲ್ಲಿಯೂ ಹೇಳಲಿಲ್ಲ. ಈ ವರದಿಯಲ್ಲಿರುವ ಇತರ ಆರೋಪಗಳ ಕುರಿತು ಕುಮಾರ್ ಅವರಿಗೆ ಪ್ರಶ್ನೆಗಳನ್ನು ಕಳುಹಿಸಿದ್ದು, ಅವರಿಂದ ಪ್ರತಿಕ್ರಿಯೆ ಬಂದಲ್ಲಿ ವರದಿಯನ್ನು ನವೀಕರಿಸಲಾಗುವುದು ಎಂದು newslaundry.com ಹೇಳಿದೆ.
ತಾವು ಬೂತ್ ಮಟ್ಟದ ಅಧಿಕಾರಿ (ಬಿಎಲ್ಇ) ಮತ್ತು ಚುನಾವಣಾ ನೋಂದಣಿ ಅಧಿಕಾರಿ (ಇಆರ್ಒ) ಇಬ್ಬರನ್ನೂ ಸಂಪರ್ಕಿಸಿದ್ದಾಗ್ಯೂ, ತಮ್ಮನ್ನು ಮತ್ತು ತಮ್ಮ ಕುಟುಂಬದವರನ್ನು ಇಂದಿಗೂ “ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ” (permanently shifted) ಎಂದು ಗುರುತಿಸಲಾಗಿದೆ ಎಂದು ಕಮಲ್ ಲಾಲ್ ತಿಳಿಸಿದ್ದಾರೆ.
“ನನ್ನೊಬ್ಬನ ಹೆಸರನ್ನು ಮಾತ್ರ ಏಕೆ ಉಳಿಸಿಕೊಳ್ಳಲಾಗಿದೆ ಎಂದು ನನಗೆ ಗೊತ್ತಿಲ್ಲ”
ಇಡೀ ಮತಗಟ್ಟೆಯ ಪ್ರತಿಯೊಬ್ಬರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮಹಂತ್ ಕಾಂಚನ್ ಗಿರಿ ಎಂಬ ಒಬ್ಬರನ್ನು ಹೊರತುಪಡಿಸಿ. ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಗಿರಿ ಅವರು, ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮಾತ್ರ ಏಕೆ ಸೇರಿಸಲಾಗಿದೆ ಎಂಬುದರ ಬಗ್ಗೆ ತಮಗೆ ಯಾವುದೇ ಕಲ್ಪನೆ ಇಲ್ಲ ಎಂದು ತಿಳಿಸಿದ್ದಾರೆ.”ನನ್ನೊಬ್ಬನ ಹೆಸರನ್ನು ಮಾತ್ರ ಏಕೆ ಸೇರಿಸಲಾಗಿದೆ ಎಂದು ನನಗೆ ತಿಳಿಯುತ್ತಿಲ್ಲ. ನಾನು ಕೇವಲ ಗಣತಿ ನಮೂನೆಯನ್ನು ಭರ್ತಿ ಮಾಡಿ, ವಿವರಗಳನ್ನು ನೀಡಿದ ನಂತರ ಅದನ್ನು ಬೂತ್ ಮಟ್ಟದ ಅಧಿಕಾರಿಗೆ (ಬಿಎಲ್ಒ) ಸಲ್ಲಿಸಿದ್ದೆ ಅಷ್ಟೆ” ಎಂದು ಗಿರಿ ಹೇಳಿದ್ದಾರೆ. ಅವರು ಒಂಟಿಯಾಗಿ ವಾಸಿಸುತ್ತಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟವರಲ್ಲಿ ಒಬ್ಬರಾದ ಕಾಂಚನ್ (27) ಮಾತನಾಡಿ, “ಈ ಬಗ್ಗೆ ತಮಗೆ ಯಾರೂ ತಿಳಿಸಿಲ್ಲ ಎಂದು ಹೇಳಿದ್ದಾರೆ. “ಈ ಪ್ರದೇಶವನ್ನು ಖಾಲಿ ಮಾಡುವಂತೆ ಆಗಾಗ್ಗೆ ಕಾನೂನು ನೋಟಿಸ್ಗಳನ್ನು ನೀಡಲಾಗುತ್ತದೆ, ಆದರೆ ನಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಲು ಯಾವುದೇ ಕಾನೂನು ನೋಟಿಸ್ ಬಂದಿರಲಿಲ್ಲ” ಎಂದು ಅವರು ತಿಳಿಸಿದ್ದಾರೆ. ಕಾಂಚನ್ ಅವರ ತಂದೆ ಪದಮ್ ಸಿಂಗ್, ತಾಯಿ ಧೋರಾ ದೇವಿ, ಸಹೋದರ ಮತ್ತು ಅತ್ತಿಗೆ ಎಲ್ಲರನ್ನೂ ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಲಾಗಿದೆ. ಸ್ವತಃ ಕಾಂಚನ್ ಅವರ ಹೆಸರನ್ನು “ಗೈರುಹಾಜರು/ಪತ್ತೆಯಿಲ್ಲದವರು” (absent/untraceable) ಎಂದು ದಾಖಲಿಸಲಾಗಿದೆ. ಆಕೆಯ ತಂದೆ ಹೈವೇಯಲ್ಲಿ ಸೈಕಲ್ ಮೇಲೆ ಕಚೋರಿ ಮಾರಾಟ ಮಾಡುತ್ತಾರೆ ಎಂದು ವರದಿ ವಿವರಿಸಿದೆ.
ಕಾಂಚನ್ ಅವರು ಮಾತನಾಡಿ, ಗಣತಿ ನಮೂನೆಯನ್ನು ಸಂಗ್ರಹಿಸಲು ಬಂದಿದ್ದಾಗ ತಾವು ಬೂತ್ ಮಟ್ಟದ ಅಧಿಕಾರಿಯನ್ನು (ಬಿಎಲ್ಒ) ಗರಿಮಾ ಆರ್ಯ ಅವರನ್ನು ಕೊನೆಯ ಬಾರಿಗೆ ನೋಡಿದ್ದಾಗಿ ತಿಳಿಸಿದ್ದಾರೆ.
ಶಾರದಾ ದೇವಿ (74) ಅವರು 2025ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಆದರೆ ಈಗ ಅವರನ್ನು “ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ” ಎಂದು ಗುರುತಿಸಲಾಗಿದೆ. “ಅವರು ಈ ಕೊಳಗೇರಿ ಪ್ರದೇಶವನ್ನು ತೆರವುಗೊಳಿಸಿ ನಮ್ಮನ್ನು ರಸ್ತೆಗೆ ತಳ್ಳಬಹುದು ಎಂಬ ಭಯ ನನಗಿದೆ” ಎಂದು ಶಾರದಾ ದೇವಿ ಆತಂಕ ವ್ಯಕ್ತಪಡಿಸಿದ್ದಾರೆ.
ತಾವು ನಿಗದಿತ ಸಮಯಕ್ಕೆ ಗಣತಿ ನಮೂನೆಯನ್ನು ಸಲ್ಲಿಸಿದ್ದಾಗ್ಯೂ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಕನ್ಯಾ ಕುಮಾರ್ (27) ತಿಳಿಸಿದ್ದಾರೆ. ಆಕೆ ಮತ್ತು ಆಕೆಯ ಪತಿ ಧನ್ಶು ಇಬ್ಬರನ್ನೂ “ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ” ಎಂದು ಪಟ್ಟಿಯಲ್ಲಿ ದಾಖಲಿಸಲಾಗಿದೆ. “ಒಮ್ಮೆ ವೋಟರ್ ಐಡಿ ರದ್ದಾದರೆ ಸಂಕಷ್ಟಗಳೇ ಎದುರಾಗುತ್ತವೆ. ಹೋದಲ್ಲೆಲ್ಲಾ ಅವರು ವೋಟರ್ ಐಡಿಯನ್ನೇ ಕೇಳುತ್ತಾರೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಮೊಹಮ್ಮದ್ ಅಫ್ತಾಬ್ (36) ಮತ್ತು ಅವರ ಕುಟುಂಬದವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. “ನಮ್ಮ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗದಿದ್ದರೆ, ಪಾಸ್ಪೋರ್ಟ್, ಕೆಲಸದಿಂದ ಹಿಡಿದು ಕಲ್ಯಾಣ ಯೋಜನೆಗಳವರೆಗೆ ನಾವು ಪ್ರತಿಯೊಂದು ಹಕ್ಕನ್ನೂ ಕಳೆದುಕೊಳ್ಳಬೇಕಾಗುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನಿಯಮ ಏನು ಹೇಳುತ್ತದೆ?
ಮತದಾರರ ಪಟ್ಟಿಗಳ ಕೈಪಿಡಿಯು (manual on electoral rolls), ಸಾಮಾನ್ಯ ನಿವಾಸದ ನಿರ್ಧಾರದ ಬಗ್ಗೆ ವಿವರಗಳನ್ನು ನೀಡುವಾಗ ಹೀಗೆ ಉಲ್ಲೇಖಿಸುತ್ತದೆ: “ಯಾವುದೇ ಸಾಮಾನ್ಯ ನಿವಾಸದ ದಾಖಲೆ ಪುರಾವೆಗಳನ್ನು ಹೊಂದಿರದ ನಿರಾಶ್ರಿತರು/ಶೆಡ್ಗಳಲ್ಲಿ ವಾಸಿಸುವ ವ್ಯಕ್ತಿಗಳು/ಪಾದಚಾರಿ ಮಾರ್ಗದಲ್ಲಿ ವಾಸಿಸುವವರು, ತಾವು ವಾಸಿಸುತ್ತಿರುವ ಸ್ಥಳವು ಖಾಸಗಿ ಆಸ್ತಿಯಾಗಿರಲಿ, ಪಾದಚಾರಿ ಮಾರ್ಗವಾಗಿರಲಿ ಅಥವಾ ಸರ್ಕಾರಿ ಭೂಮಿಯ ಮೇಲಿನ ಒತ್ತುವರಿಯಾಗಿರಲಿ, ಅವರು ಸಾಮಾನ್ಯವಾಗಿ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂಬುದು ದೃಢಪಟ್ಟರೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ.”
1950ರ ಜನಪ್ರತಿನಿಧಿ ಕಾಯ್ದೆಯ (Representation of the People Act) ಸೆಕ್ಷನ್ 19ರ ಪ್ರಕಾರ, ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಇರಬೇಕಾದ ಮಾನದಂಡಗಳೆಂದರೆ ವಯಸ್ಸು ಮತ್ತು ಆ ಕ್ಷೇತ್ರದಲ್ಲಿನ ‘ಸಾಮಾನ್ಯ ನಿವಾಸ’. ಸೆಕ್ಷನ್ 20ರಲ್ಲಿ ವ್ಯಾಖ್ಯಾನಿಸಲಾದಂತೆ, ವ್ಯಕ್ತಿಯೊಬ್ಬರು ಪ್ರಸ್ತುತ ಎಲ್ಲಿ ವಾಸಿಸುತ್ತಿದ್ದಾರೆ ಎಂಬುದು ವಾಸ್ತವಿಕ ಪ್ರಶ್ನೆಯಾಗಿದೆ. ಈ ಎರಡೂ ನಿಬಂಧನೆಗಳು ಎಲ್ಲಿಯೂ ಭೂಮಿಯ ಮಾಲೀಕತ್ವ, ವಸಾಹತು ಪ್ರದೇಶದ ಕಾನೂನುಬದ್ಧತೆ ಅಥವಾ ವಿದ್ಯುತ್/ನೀರಿನ ಬಿಲ್ಗಳನ್ನು ಉಲ್ಲೇಖಿಸುವುದಿಲ್ಲ.
ಇದಲ್ಲದೆ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಲು ಬಳಸುವ ಚುನಾವಣಾ ಆಯೋಗದ ‘ಫಾರ್ಮ್ 6ರಲ್ಲೂ ಸಹ, “ಯಾವುದೇ ಸಾಮಾನ್ಯ ನಿವಾಸದ ದಾಖಲೆ ಪುರಾವೆಗಳನ್ನು ಹೊಂದಿರದ, ಶೆಡ್ಗಳಲ್ಲಿ ಅಥವಾ ಪಾದಚಾರಿ ಮಾರ್ಗಗಳಲ್ಲಿ ವಾಸಿಸುವ ನಿರಾಶ್ರಿತ ಭಾರತೀಯ ನಾಗರಿಕರು” ಇತರ ಮಾನದಂಡಗಳ ಪ್ರಕಾರ ಅರ್ಹರಾಗಿದ್ದರೆ, ಅವರ ವಿಷಯದಲ್ಲೂ ಅಗತ್ಯ ಸ್ಥಳ ಪರಿಶೀಲನೆಯನ್ನು ನಡೆಸಿ ಹೆಸರು ಸೇರಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಪಾರದರ್ಶಕತೆ ಕಾರ್ಯಕರ್ತೆ ಅಮೃತಾ ಜೋಹ್ರಿ ಅವರು ಮಾತನಾಡಿ, “ಭಾರತದಲ್ಲಿ ಮತದಾರರಾಗುವ ಅರ್ಹತೆಗೂ, ನನಗೆ ವಿದ್ಯುತ್ ಸಿಗುತ್ತಿದೆಯೇ ಅಥವಾ ನೀರು ಸಿಗುತ್ತಿದೆಯೇ ಇಲ್ಲವೇ ಎಂಬುದಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬರ ವಾಸಸ್ಥಳದ ಕಾನೂನುಬದ್ಧತೆ ಅಥವಾ ಕಾನೂನುಬಾಹಿರತೆಯ ಬಗ್ಗೆ ಭಾರತೀಯ ಚುನಾವಣಾ ಆಯೋಗವು ತಲೆಕೆಡಿಸಿಕೊಳ್ಳಬಾರದು. ಮತದಾನದ ಹಕ್ಕು ಈ ಎಲ್ಲ ಇತರ ವಿಷಯಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ” ಎಂದು ಹೇಳಿದ್ದಾರೆ ಎಂದು newslaundry.com ಉಲ್ಲೇಖಿಸಿದೆ.
‘ಇಂದು ಪ್ರಕಾಶ್ ಸಿಂಗ್ V/S ದೆಹಲಿ ಸರ್ಕಾರ ಪ್ರಕರಣದಲ್ಲಿ, ಬೇಲಾ ಎಸ್ಟೇಟ್ನ ಕರಡು ಮತದಾರರ ಪಟ್ಟಿ ಪ್ರಕಟವಾಗುವ ಕೆಲವು ವಾರಗಳ ಮುಂಚೆಯೇ ದೆಹಲಿ ಹೈಕೋರ್ಟ್ ಈ ಮಹತ್ವದ ಅಂಶವನ್ನು ದೃಢಪಡಿಸಿತ್ತು. ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ಕೈಪಿಡಿಯು, ನಿರಾಶ್ರಿತರು ಮತ್ತು ತೆರವು ಕಾರ್ಯಾಚರಣೆಯಿಂದಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಯಾವುದೇ ವಾಸಸ್ಥಳದ ದಾಖಲೆ ಪುರಾವೆಗಳಿಲ್ಲದಿದ್ದರೂ ಸಹ ಕೇವಲ ಸ್ಥಳ ಪರಿಶೀಲನೆಯ ಮೂಲಕವೇ ಮತದಾರರಾಗಿ ನೋಂದಾಯಿಸಿಕೊಳ್ಳಲು ಈಗಾಗಲೇ ಅವಕಾಶ ಕಲ್ಪಿಸಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತ್ತು. ಅಲ್ಲದೆ, ಈ ಸುರಕ್ಷತಾ ಕ್ರಮವು ಪೂರಕವಾಗಿದೆ ಮತ್ತು ಈಗಾಗಲೇ ಜಾರಿಯಲ್ಲಿದೆ ಎಂಬ ಆಧಾರದ ಮೇಲೆ, ಮತ್ತೊಂದು ಪ್ರತ್ಯೇಕ ಸುಲಭೀಕರಣ ವ್ಯವಸ್ಥೆಯನ್ನು ರೂಪಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
Courtesy : newslaundry.com


