HomeಅಂಕಣಗಳುKarnataka against SIRSIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ.

ಮತದಾರರ ಪಟ್ಟಿಯಲ್ಲಿನ ಹೆಸರು, ವಿಳಾಸ ಅಥವಾ ಹಿಂದಿನ ದಾಖಲೆಗಳಿಗೆ ಸಂಬಂಧಿಸಿದ ವ್ಯತ್ಯಾಸ ಕಂಡುಬಂದರೆ ಸಾಮಾನ್ಯ ಮತದಾರರು ನೋಟಿಸ್‌ಗೆ ಸ್ಪಂದಿಸಿ ಅಗತ್ಯ ದಾಖಲೆಗಳೊಂದಿಗೆ ಚುನಾವಣಾಧಿಕಾರಿಗಳ ಮುಂದೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗುತ್ತಿರುವಾಗಲೇ ಕೆಲವು ಗಣ್ಯರ ಪ್ರಕರಣಗಳಲ್ಲಿ ಅವರು ಕಚೇರಿಗೆ ಹಾಜರಾಗುವ ಅಗತ್ಯವಿಲ್ಲದೆ ಅಧಿಕಾರಿಗಳೇ ಪರಿಶೀಲನೆ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.

ಇದು ಕೇವಲ ‘ವಿಐಪಿಗಳಿಗೆ ವಿಶೇಷ ಸೌಲಭ್ಯ’ ನೀಡಲಾಗಿದೆಯೇ ಎಂಬ ಪ್ರಶ್ನೆಯಲ್ಲ. ಒಂದೇ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ಮತದಾರ ಮತ್ತು ಪ್ರಭಾವಿ ವ್ಯಕ್ತಿಯ ಅನುಭವ ಏಕೆ ವಿಭಿನ್ನವಾಗಬೇಕು? ಎಂಬ ಪ್ರಶ್ನೆಯೂ ಇದರ ಹಿಂದಿದೆ.

ಒಂದೇ SIR, ವಿಭಿನ್ನ ಅನುಭವವೇ?

ನಟ ಶಿವರಾಜ್‌ಕುಮಾರ್ ಅವರ ಹೆಸರು ಕೂಡ SIR ಸಂದರ್ಭದಲ್ಲಿ ಹಿಂದಿನ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್‌ಗೆ ಸಂಬಂಧಿಸಿದ ಪರಿಶೀಲನೆಗೆ ಒಳಪಟ್ಟಿತ್ತು. ಆದರೆ ಇತರ ಸಾಮಾನ್ಯ ಮತದಾರರಂತೆ ಅವರನ್ನು ದಾಖಲೆಗಳೊಂದಿಗೆ ಕಚೇರಿಗೆ ಹಾಜರಾಗುವಂತೆ ಮಾಡದೆ, ಅಧಿಕಾರಿಗಳೇ ಅವರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಹಾಗೂ ಝೆರೋಧಾ ಸಂಸ್ಥಾಪಕರಾದ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳು SIR ಪರಿಶೀಲನೆಯಲ್ಲಿ ಕಾಣಿಸಿಕೊಂಡಿವೆ. ನಿಲೇಕಣಿ ಕುಟುಂಬದ ದಾಖಲೆಗಳು 2002ರ ಹಿಂದಿನ SIR ದಾಖಲೆಗಳೊಂದಿಗೆ ‘ಮ್ಯಾಪ್’ ಆಗದಿರುವುದು ಹಾಗೂ ಕಾಮತ್ ಸಹೋದರರ ಪ್ರಕರಣದಲ್ಲಿ ಪೋಷಕರ ಹೆಸರಿನ ವ್ಯತ್ಯಾಸ ಸೇರಿದಂತೆ ವಿವಿಧ ಅಸಂಗತತೆಗಳು ವರದಿಯಾಗಿವೆ.

ಚುನಾವಣಾ ಅಧಿಕಾರಿಗಳ ಪ್ರಕಾರ ಕೆಲವು ಗಣ್ಯ ವ್ಯಕ್ತಿಗಳ ಪ್ರಕರಣಗಳಲ್ಲಿ ಅವರು ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗದಂತೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವ್ಯವಸ್ಥೆ ಇದೆ. ಆದರೆ ಅದರಿಂದ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಅದೇ ರೀತಿಯ ಅನುಕೂಲ ನಿಜವಾಗಿಯೂ ಅಗತ್ಯವಿರುವ ಸಾಮಾನ್ಯ ಮತದಾರನಿಗೂ ಸಿಗುತ್ತಿದೆಯೇ?

ಸಾಮಾನ್ಯ ಮತದಾರನಿಗೆ SIR ಎಂದರೆ ಏನು?

SIR ಸಂದರ್ಭದಲ್ಲಿ ಹೆಸರು ಅಥವಾ ಇತರ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದರೆ, ಅನೇಕ ಸಾಮಾನ್ಯ ಮತದಾರರು BLO, ERO ಅಥವಾ AERO ಅಧಿಕಾರಿಗಳನ್ನು ಸಂಪರ್ಕಿಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತಿದೆ. ಒಂದು ಸಣ್ಣ ಹೆಸರಿನ ವ್ಯತ್ಯಾಸವೂ ನೋಟಿಸ್‌ಗೆ ಕಾರಣವಾಗಬಹುದು.

ದಕ್ಷಿಣ ಕನ್ನಡದ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಹಳೆಯ ಮತದಾರರ ಪಟ್ಟಿಯೊಂದಿಗೆ ಹೆಸರು ಹೊಂದಿಕೆಯಾಗದ ಕಾರಣ ಸುಮಾರು ಶೇ.10ರಷ್ಟು ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ರಾಜ್ಯಾದ್ಯಂತ 43.81 ಲಕ್ಷಕ್ಕೂ ಹೆಚ್ಚು ನೋಟಿಸ್‌ಗಳು ಹೊರಡಿಸಿರುವ ಮಾಹಿತಿಯೂ ವರದಿಯಾಗಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಮತದಾರನಿಗೆ ಸಮಸ್ಯೆ ಕೇವಲ ದಾಖಲೆ ಸಂಗ್ರಹಿಸುವುದಲ್ಲ. ಕಚೇರಿಗೆ ಹೋಗಬೇಕು. ಸರತಿಯಲ್ಲಿ ನಿಲ್ಲಬೇಕು. ದಾಖಲೆಗಳ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ಮತ್ತೆ ಹೋಗಬೇಕಾಗಬಹುದು. ಕೆಲವರಿಗೆ ಕೆಲಸಕ್ಕೆ ರಜೆ ಹಾಕಬೇಕು. ದಿನಗೂಲಿ ಕಾರ್ಮಿಕನಿಗೆ ಒಂದು ದಿನದ ಕೆಲಸ ತಪ್ಪಿದರೆ ಅದು ಕುಟುಂಬದ ಆದಾಯದ ನಷ್ಟ. ವಯೋವೃದ್ಧರಿಗೆ ಪ್ರಯಾಣವೇ ದೊಡ್ಡ ಸಮಸ್ಯೆ. ಅನಾರೋಗ್ಯ ಪೀಡಿತರು ಅಥವಾ ವಿಕಲಚೇತನರಿಗೆ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗುವುದು ಇನ್ನಷ್ಟು ಕಷ್ಟ.

ಹೀಗಾಗಿ SIR ಒಂದು ಆಡಳಿತಾತ್ಮಕ ಪರಿಶೀಲನಾ ಪ್ರಕ್ರಿಯೆಯಾಗಿದ್ದರೂ, ಅದರ ಹೊರೆ ಎಲ್ಲರ ಮೇಲೂ ಒಂದೇ ರೀತಿಯಲ್ಲಿ ಬೀಳುವುದಿಲ್ಲ.

‘ಒಂದು ಮತ’ ಎಂದರೆ ಒಂದೇ ಮೌಲ್ಯವಲ್ಲವೇ?

ಪ್ರಜಾಪ್ರಭುತ್ವದ ಮೂಲತತ್ವ ಸರಳವಾಗಿದೆ — ಮತದಾರನ ಸಾಮಾಜಿಕ ಸ್ಥಾನ, ಆಸ್ತಿ, ಉದ್ಯೋಗ ಅಥವಾ ಪ್ರಭಾವದ ಆಧಾರದ ಮೇಲೆ ಒಂದು ಮತದ ಮೌಲ್ಯ ಬದಲಾಗುವುದಿಲ್ಲ. ಸಿನಿಮಾ ನಟನ ಮತವೂ ಒಂದು ಮತ. ಉದ್ಯಮಿಯ ಮತವೂ ಒಂದು ಮತ. ದಿನಗೂಲಿ ಕಾರ್ಮಿಕನ ಮತವೂ ಒಂದು ಮತ. ವಯೋವೃದ್ಧ ರೈತನ ಮತವೂ ಒಂದು ಮತ. ಹೀಗಿರುವಾಗ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರನ್ನು ಉಳಿಸಿಕೊಳ್ಳಲು ನಡೆಯುವ ಪ್ರಕ್ರಿಯೆಯೂ ಸಾಧ್ಯವಾದಷ್ಟು ಸಮಾನವಾಗಿ ಪ್ರವೇಶಿಸಬಹುದಾದಂತಿರಬೇಕು ಎಂಬ ನಿರೀಕ್ಷೆ ಸಹಜ. ಗಣ್ಯ ವ್ಯಕ್ತಿಯೊಬ್ಬರಿಗೆ ಕಚೇರಿಗೆ ಬರಲು ವಿನಾಯಿತಿ ನೀಡುವುದಕ್ಕೆ ಆಡಳಿತಾತ್ಮಕ ಕಾರಣವಿರಬಹುದು. ಆದರೆ ಅದೇ ವೇಳೆ ಕಚೇರಿಗೆ ಬರಲು ನಿಜವಾಗಿಯೂ ಸಾಧ್ಯವಾಗದ ಸಾಮಾನ್ಯ ನಾಗರಿಕನಿಗೆ ಆ ವ್ಯವಸ್ಥೆ ತಲುಪದಿದ್ದರೆ, ನಿಯಮ ಒಂದೇ ಇದ್ದರೂ ಅದರ ಪರಿಣಾಮದಲ್ಲಿ ಅಸಮಾನತೆ ಮೂಡುತ್ತದೆ.

ಹೋರಾಟಗಳ ಬಳಿಕ ಸಿಕ್ಕ ಸೌಲಭ್ಯ;

ಈ ಚರ್ಚೆಯ ನಡುವೆಯೇ, ವಯೋವೃದ್ಧರು, ವಿಕಲಚೇತನರು, ಅನಾರೋಗ್ಯ ಪೀಡಿತರು ಹಾಗೂ ವಿದೇಶದಲ್ಲಿರುವ ಮತದಾರರ ಪರವಾಗಿ ಅವರ ವಯಸ್ಕ ಕುಟುಂಬ ಸದಸ್ಯರು ERO ಅಥವಾ AERO ಮುಂದೆ ಹಾಜರಾಗಿ SIR ನೋಟಿಸ್‌ಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಈ ಸೌಲಭ್ಯ ಸಾಮಾನ್ಯ ಮತದಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದವರು, ಸಂಘಟನೆಗಳು ಮತ್ತು ನಾಗರಿಕರ ಒತ್ತಡದ ಪರಿಣಾಮವಾಗಿ ದೊರೆತದ್ದಾಗಿದೆ. SIR ಪ್ರಕ್ರಿಯೆಯಲ್ಲಿ ವಯೋವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಕಚೇರಿಗೆ ಬರಲು ಸಾಧ್ಯವಾಗದವರ ಸಂಕಷ್ಟವನ್ನು ಹಲವು ಹಂತಗಳಲ್ಲಿ ಪ್ರಶ್ನಿಸಲಾಗಿತ್ತು. ಅದರ ಪರಿಣಾಮವಾಗಿ, ಕನಿಷ್ಠ ಈ ವರ್ಗದ ಮತದಾರರಿಗೆ ಪ್ರಕ್ರಿಯೆಯನ್ನು ಸ್ವಲ್ಪ ಸುಲಭಗೊಳಿಸುವ ಅವಕಾಶ ಇದೀಗ ದೊರೆತಿದೆ.

ಹೀಗಾಗಿ ಚುನಾವಣಾ ಆಯೋಗದ ಮುಂದಿರುವ ನಿಜವಾದ ಸವಾಲು SIRನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಷ್ಟೇ ಅಲ್ಲ; ಅದನ್ನು ಶ್ರೀಮಂತ-ಬಡವ, ವಿಐಪಿ-ಸಾಮಾನ್ಯ ಎಂಬ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ಮತದಾರನಿಗೂ ಸಮಾನವಾಗಿ ಸುಲಭವಾಗಿಸುವುದು. ಪ್ರಜಾಪ್ರಭುತ್ವದಲ್ಲಿ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಂದು ಹೆಸರೂ ಸಮಾನ. ಹಾಗೆಯೇ ಆ ಹೆಸರನ್ನು ಉಳಿಸಿಕೊಳ್ಳಲು ನಡೆಯುವ ಪರಿಶೀಲನೆಯಲ್ಲೂ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಗೌರವ, ಸಮಾನ ಮಾಹಿತಿ ಮತ್ತು ಸಾಧ್ಯವಾದಷ್ಟು ಸಮಾನ ಸೌಲಭ್ಯ ಸಿಗಬೇಕಿದೆ.




ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....