HomeಅಂಕಣಗಳುKarnataka against SIRBreaking News: ಎಸ್‌ಐಆರ್‌ನಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್: ಕರ್ನಾಟಕದ ಅಂಕಿಅಂಶಗಳು ಎತ್ತಿದ ಗಂಭೀರ ಪ್ರಶ್ನೆಗಳು

Breaking News: ಎಸ್‌ಐಆರ್‌ನಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್: ಕರ್ನಾಟಕದ ಅಂಕಿಅಂಶಗಳು ಎತ್ತಿದ ಗಂಭೀರ ಪ್ರಶ್ನೆಗಳು

- Advertisement -
- Advertisement -

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕರ್ನಾಟಕದಲ್ಲಿ ಮುಂದುವರಿಯುತ್ತಿರುವ ಬೆನ್ನಲ್ಲೇ, ಅದರ ಲಿಂಗಾನುಪಾತದ ಅಂಕಿಅಂಶಗಳು ಗಂಭೀರವಾದ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ. ಲಭ್ಯವಿರುವ 34 ಜಿಲ್ಲೆ/ನಗರ ಆಡಳಿತ ಘಟಕಗಳ ದತ್ತಾಂಶವನ್ನು ಪರಿಶೀಲಿಸಿದಾಗ, ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿನ ಪ್ರಮಾಣದಲ್ಲಿ ಎಸ್‌ಐಆರ್ ನೋಟಿಸ್‌ಗಳು ಜಾರಿಯಾಗಿರುವುದು ಕಂಡುಬಂದಿದೆ.

ಒಟ್ಟು 22,68,364 ಮಹಿಳಾ ಮತದಾರರಿಗೆ ಎಸ್‌ಐಆರ್ ನೋಟಿಸ್ ನೀಡಲಾಗಿದ್ದರೆ, ಪುರುಷ ಮತದಾರರಿಗೆ ನೀಡಿರುವ ನೋಟಿಸ್‌ಗಳ ಸಂಖ್ಯೆ 20,85,573. ಅಂದರೆ ಪುರುಷರಿಗಿಂತ 1,82,791 ಹೆಚ್ಚು ಮಹಿಳೆಯರು ಎಸ್‌ಐಆರ್ ನೋಟಿಸ್ ವ್ಯಾಪ್ತಿಗೆ ಬಂದಿದ್ದಾರೆ. ಒಟ್ಟು ನೋಟಿಸ್‌ಗಳಲ್ಲಿ ಮಹಿಳೆಯರ ಪಾಲು 52.09% ಆಗಿದ್ದರೆ, ಪುರುಷರ ಪಾಲು 47.89%. ಅಂದರೆ ಕರ್ನಾಟಕದಲ್ಲಿ ಎಸ್‌ಐಆರ್ ನೋಟಿಸ್ ಪಡೆದವರಲ್ಲಿ ಪುರುಷರಿಗಿಂತ ಮಹಿಳೆಯರ ಪಾಲು ಸ್ಪಷ್ಟವಾಗಿ ಹೆಚ್ಚಾಗಿದೆ.

ಇದರಲ್ಲೂ ಗಮನಾರ್ಹವಾಗಿರುವುದು ಕೇವಲ ಒಟ್ಟು ಸಂಖ್ಯೆಯಲ್ಲಿನ ವ್ಯತ್ಯಾಸವಲ್ಲ. ಆಯಾ ಲಿಂಗದ ಒಟ್ಟು ಮತದಾರರ ಸಂಖ್ಯೆಗೆ ಹೋಲಿಸಿದಾಗಲೂ ಮಹಿಳೆಯರ ನೋಟಿಸ್ ಪ್ರಮಾಣವೇ ಹೆಚ್ಚಾಗಿದೆ. ಮಹಿಳಾ ಮತದಾರರ ಪೈಕಿ 10.24% ಮಂದಿಗೆ ನೋಟಿಸ್ ಬಂದಿದ್ದರೆ, ಪುರುಷ ಮತದಾರರ ಪೈಕಿ ಈ ಪ್ರಮಾಣ 9.54%. ಅಂದರೆ ಮಹಿಳೆಯರ ನೋಟಿಸ್ ದರ ಪುರುಷರಿಗಿಂತ 0.70 ಶೇಕಡಾ ಅಂಕುಗಳಷ್ಟು ಹೆಚ್ಚಾಗಿದೆ. ಸಾಪೇಕ್ಷವಾಗಿ ನೋಡಿದರೆ, ಮಹಿಳೆಯರ ನೋಟಿಸ್ ದರ ಪುರುಷರ ದರಕ್ಕಿಂತ ಸುಮಾರು 7.34% ಹೆಚ್ಚಾಗಿದೆ.

ಈ ವ್ಯತ್ಯಾಸವು ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಲಭ್ಯವಿರುವ 34 ಜಿಲ್ಲೆ/ಆಡಳಿತ ಘಟಕಗಳ ಪೈಕಿ 29 ಕಡೆ ಮಹಿಳೆಯರ ನೋಟಿಸ್ ದರ ಪುರುಷರಿಗಿಂತ ಹೆಚ್ಚಾಗಿದೆ. ನಾಲ್ಕು ಕಡೆ ಪುರುಷರ ನೋಟಿಸ್ ದರ ಮಹಿಳೆಯರಿಗಿಂತ ಹೆಚ್ಚಾಗಿದೆ. ಒಂದು ಕಡೆ ಎರಡೂ ಲಿಂಗಗಳ ನೋಟಿಸ್ ದರ ಒಂದೇ ಇದೆ.

ಅಂದರೆ ಕರ್ನಾಟಕದ 34 ಘಟಕಗಳ ಪೈಕಿ ಬಹುಪಾಲು ಕಡೆ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಎಸ್‌ಐಆರ್ ನೋಟಿಸ್ ವ್ಯಾಪ್ತಿಗೆ ಬಂದಿದ್ದಾರೆ. ಬೆಂಗಳೂರಿನಲ್ಲೂ ಮಹಿಳೆಯರ ಪ್ರಮಾಣ ಹೆಚ್ಚು ಎಂಬುದನ್ನು ಈ ಅಂಕಿಅಂಶಗಳು ಬಹಿರಂಗ ಪಡಿಸಿವೆ. 

ರಾಜ್ಯದ ರಾಜಧಾನಿ ಬೆಂಗಳೂರಿನ ಅಂಕಿಅಂಶಗಳಲ್ಲಿಯೂ ಇದೇ ಮಾದರಿ ಕಾಣಿಸುತ್ತದೆ. ಮುಖ್ಯವಾಗಿ ಬಿಬಿಎಂಪಿ ಸೆಂಟ್ರಲ್‌ನಲ್ಲಿ ಮಹಿಳೆಯರ ನೋಟಿಸ್ ದರ 45.15% ಇದ್ದರೆ, ಪುರುಷರದು 43.31%. ಮಹಿಳೆಯರ ದರ ಪುರುಷರಿಗಿಂತ 1.84 ಶೇಕಡಾ ಅಂಕುಗಳಷ್ಟು ಹೆಚ್ಚಾಗಿದೆ.

ಬಿಬಿಎಂಪಿ ನಾರ್ತ್‌ನಲ್ಲಿ ಮಹಿಳೆಯರ ನೋಟಿಸ್ ದರ 51.69% ಮತ್ತು ಪುರುಷರದು 51.34%. ಇಲ್ಲಿ ವ್ಯತ್ಯಾಸ 0.35 ಶೇಕಡಾ. 

ಬಿಬಿಎಂಪಿ ಸೌತ್‌ನಲ್ಲಿ ಮಹಿಳೆಯರ ನೋಟಿಸ್ ದರ 41.23% ಇದ್ದರೆ, ಪುರುಷರದು 39.74%. ಇಲ್ಲಿ ಮಹಿಳೆಯರ ಪ್ರಮಾಣ ಶೇಕಡಾ 1.49 ರಷ್ಟು ಹೆಚ್ಚಾಗಿದೆ.

ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಮನಿಸಿದರೆ ಮಹಿಳೆಯರ ನೋಟಿಸ್ ದರ 7.52% ಮತ್ತು ಪುರುಷರದು 6.61%. ಅಂದರೆ ಮಹಿಳೆಯರ ಪ್ರಮಾಣ ಶೇಕಡಾ 0.91ರಷ್ಟು ಹೆಚ್ಚಿದ್ದು, ಸಾಪೇಕ್ಷವಾಗಿ ಸುಮಾರು 13.8% ವ್ಯತ್ಯಾಸವಿದೆ.

ಬೆಂಗಳೂರು ನಗರದಲ್ಲಿ ಮಹಿಳೆಯರ ನೋಟಿಸ್ ದರ 44.56% ಮತ್ತು ಪುರುಷರದು 44.35%. ಇಲ್ಲಿಯೂ ಮಹಿಳೆಯರ ಪ್ರಮಾಣವೇ ಹೆಚ್ಚಾಗಿದೆ.

ರಾಜ್ಯದ ಅತಿ ಹೆಚ್ಚು ನಗರೀಕರಣಗೊಂಡ ಪ್ರದೇಶದಲ್ಲಿಯೂ ಮಹಿಳೆಯರ ನೋಟಿಸ್ ದರ ಪುರುಷರಿಗಿಂತ ಹೆಚ್ಚಾಗಿರುವುದು ಅಂಕಿಅಂಶಗಳಲ್ಲಿ ದಾಖಲಾಗಿದೆ.

ಜಿಲ್ಲಾವಾರು ಮಹಿಳಾ ಮತದಾದರಿಗೆ ನೀಡಿರುವ ನೋಟೀಸ್ ವಿವರ 

ಬೆಳಗಾವಿಯಲ್ಲಿ ಮಹಿಳೆಯರ ನೋಟಿಸ್ ದರ 2.42% ಮತ್ತು ಪುರುಷರದು 2.26%.

ಬಳ್ಳಾರಿಯಲ್ಲಿ ಮಹಿಳೆಯರ ದರ 4.02% ಮತ್ತು ಪುರುಷರದು 3.59%.

ಬೀದರ್‌ನಲ್ಲಿ ಮಹಿಳೆಯರ ದರ 3.02% ಇದ್ದರೆ, ಪುರುಷರದು 2.35%. ಇಲ್ಲಿ ಮಹಿಳೆಯರ ನೋಟಿಸ್ ದರ ಪುರುಷರಿಗಿಂತ ಶೇಕಡಾ 0.67ರಷ್ಟು ಪ್ರಮಾಣ ಹೆಚ್ಚಾಗಿದೆ. ಸಾಪೇಕ್ಷವಾಗಿ ಈ ವ್ಯತ್ಯಾಸ ಸುಮಾರು 28.5%.

ಚಿಕ್ಕಬಳ್ಳಾಪುರದಲ್ಲಿ ಮಹಿಳೆಯರ ನೋಟಿಸ್ ದರ 6.24% ಮತ್ತು ಪುರುಷರದು 5.55%. ಮಹಿಳೆಯರ ಪ್ರಮಾಣ ಸಾಪೇಕ್ಷವಾಗಿ ಸುಮಾರು 12.4% ಹೆಚ್ಚಾಗಿದೆ.

ಚಿತ್ರದುರ್ಗದಲ್ಲಿ ಮಹಿಳೆಯರ ದರ 5.61% ಮತ್ತು ಪುರುಷರದು 4.96%.

ದಕ್ಷಿಣ ಕನ್ನಡದಲ್ಲಿ ಮಹಿಳೆಯರ ದರ 9.53% ಮತ್ತು ಪುರುಷರದು 8.92%.

ಕಲಬುರಗಿಯಲ್ಲಿ ಮಹಿಳೆಯರ ನೋಟಿಸ್ ದರ 6.24% ಮತ್ತು ಪುರುಷರದು 5.24%. ಇಲ್ಲಿ ಮಹಿಳೆಯರ ದರ ಒಂದು ಶೇಕಡಾ ಅಂಕುಗಳಷ್ಟು ಹೆಚ್ಚಾಗಿದೆ. ಸಾಪೇಕ್ಷವಾಗಿ ಸುಮಾರು 19.1% ವ್ಯತ್ಯಾಸವಿದೆ.

ಹಾಸನದಲ್ಲಿ ಮಹಿಳೆಯರ ನೋಟಿಸ್ ದರ 5.54% ಮತ್ತು ಪುರುಷರದು 4.76%. ಮಹಿಳೆಯರ ಪ್ರಮಾಣ ಸಾಪೇಕ್ಷವಾಗಿ ಸುಮಾರು 16.4% ಹೆಚ್ಚಾಗಿದೆ.

ಕೊಡಗಿನಲ್ಲಿ ಮಹಿಳೆಯರ ದರ 14.97% ಮತ್ತು ಪುರುಷರದು 14.09%.

ಕೋಲಾರದಲ್ಲಿ ಮಹಿಳೆಯರ ದರ 13.49% ಮತ್ತು ಪುರುಷರದು 11.90%. ಸಾಪೇಕ್ಷವಾಗಿ ಮಹಿಳೆಯರ ನೋಟಿಸ್ ದರ ಸುಮಾರು 13.4% ಹೆಚ್ಚಾಗಿದೆ.

ರಾಮನಗರದಲ್ಲಿ ಮಹಿಳೆಯರ ನೋಟಿಸ್ ದರ 2.80% ಇದ್ದರೆ, ಪುರುಷರದು 2.08%. ಇಲ್ಲಿ ಮಹಿಳೆಯರ ದರ 0.72 ಶೇಕಡಾ ಅಂಕುಗಳಷ್ಟು ಹೆಚ್ಚಾಗಿದೆ. ಸಾಪೇಕ್ಷವಾಗಿ ಸುಮಾರು 34.6% ವ್ಯತ್ಯಾಸವಿದೆ.

ಶಿವಮೊಗ್ಗದಲ್ಲಿ ಮಹಿಳೆಯರ ದರ 3.87% ಮತ್ತು ಪುರುಷರದು 3.27%. ಸಾಪೇಕ್ಷ ವ್ಯತ್ಯಾಸ ಸುಮಾರು 18.3%.

ತುಮಕೂರಿನಲ್ಲಿ ಮಹಿಳೆಯರ ಪ್ರಮಾಣ 5.84% ಮತ್ತು ಪುರುಷರದು 4.95%.

ಉತ್ತರ ಕನ್ನಡದಲ್ಲಿ ಮಹಿಳೆಯರ ದರ 6.25% ಮತ್ತು ಪುರುಷರದು 5.30%.

ವಿಜಯನಗರದಲ್ಲಿ ಮಹಿಳೆಯರ ದರ 3.32% ಮತ್ತು ಪುರುಷರದು 2.89%.

ಯಾದಗಿರಿಯಲ್ಲಿ ಮಹಿಳೆಯರ ದರ 6.46% ಮತ್ತು ಪುರುಷರದು 6.33%.

ಇದರ ನಡುವೆ ಮಹಿಳೆಯರಿಗಿಂತ ಪುರುಷರ ನೋಟಿಸ್ ದರ ಹೆಚ್ಚಿರುವ ಜಿಲ್ಲೆಗಳೂ ಇವೆ.

ಬಾಗಲಕೋಟೆಯಲ್ಲಿ ಮಹಿಳೆಯರ ನೋಟಿಸ್ ದರ 3.25% ಮತ್ತು ಪುರುಷರದು 3.45%.

ವಿಜಯಪುರದಲ್ಲಿ ಮಹಿಳೆಯರ ದರ 1.35% ಮತ್ತು ಪುರುಷರದು 1.47%.

ಚಾಮರಾಜನಗರದಲ್ಲಿ ಮಹಿಳೆಯರ ದರ 0.92% ಮತ್ತು ಪುರುಷರದು 0.95%.

ಚಿಕ್ಕಮಗಳೂರಿನಲ್ಲಿ ಮಹಿಳೆಯರ ನೋಟಿಸ್ ದರ 10.41% ಮತ್ತು ಪುರುಷರದು 10.77%.

ಮಂಡ್ಯದಲ್ಲಿ ಮಹಿಳೆ ಮತ್ತು ಪುರುಷರ ನೋಟಿಸ್ ದರ ಎರಡೂ 10.62%.

ಆದರೆ ಒಟ್ಟಾರೆ ರಾಜ್ಯದ ಚಿತ್ರದಲ್ಲಿ 34 ಘಟಕಗಳ ಪೈಕಿ 29 ಕಡೆ ಮಹಿಳೆಯರ ನೋಟಿಸ್ ದರ ಹೆಚ್ಚಿರುವುದು ಪ್ರಮುಖ ಅಂಶವಾಗಿ ಉಳಿಯುತ್ತದೆ.

ಯಾವ ಕಾರಣಕ್ಕೆ ಮಹಿಳೆಯರಿಗೆ ನೋಟಿಸ್?

ಎಸ್‌ಐಆರ್ ನೋಟಿಸ್‌ಗಳಿಗೆ ನೀಡಲಾಗಿರುವ ಕಾರಣಗಳ ಲಿಂಗಾನುಪಾತದ ಅಂಕಿಅಂಶಗಳೂ ಮಹಿಳೆಯರ ಮೇಲಿನ ಪರಿಣಾಮದ ಮತ್ತೊಂದು ಚಿತ್ರವನ್ನು ನೀಡುತ್ತವೆ. ಒಂಬತ್ತು ಪ್ರಮುಖ ನೋಟಿಸ್ ವರ್ಗಗಳ ಪೈಕಿ ಏಳು ವಿಭಾಗಗಳಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ.

ಹಿಂದಿನ ಎಸ್‌ಐಆರ್‌ನಲ್ಲಿ ಮ್ಯಾಪಿಂಗ್ ಆಗದಿರುವ ಕಾರಣಕ್ಕೆ ಮಹಿಳೆಯರಿಗೆ 12,58,396 ನೋಟಿಸ್‌ಗಳು ಬಂದಿದ್ದರೆ, ಪುರುಷರಿಗೆ 10,77,892 ನೋಟಿಸ್‌ಗಳು ಬಂದಿವೆ.

ಇವುಗಳಲ್ಲಿ ಸ್ವಂತ ಹೆಸರಿನ ಅಸಮಂಜಸತೆಯ ಕಾರಣಕ್ಕೆ ಮಹಿಳೆಯರಿಗೆ 2,99,567 ನೋಟಿಸ್‌ಗಳು ಮತ್ತು ಪುರುಷರಿಗೆ 2,32,860 ನೋಟಿಸ್‌ಗಳು ಬಂದಿವೆ

ಪೋಷಕರ ವಯಸ್ಸಿನ ವ್ಯತ್ಯಾಸ 15 ವರ್ಷಕ್ಕಿಂತ ಕಡಿಮೆ ಎಂಬ ಕಾರಣಕ್ಕೆ ಮಹಿಳೆಯರಿಗೆ 2,50,511 ನೋಟಿಸ್‌ಗಳು ಬಂದಿದ್ದರೆ, ಪುರುಷರಿಗೆ 2,25,630 ನೋಟಿಸ್‌ಗಳು ಬಂದಿವೆ. 

ಆದರೆ ಪೋಷಕರ ಹೆಸರಿನ ಅಸಮಂಜಸತೆ ವಿಭಾಗದಲ್ಲಿ ಚಿತ್ರ ಭಿನ್ನವಾಗಿದೆ. ಈ ಕಾರಣಕ್ಕೆ ಮಹಿಳೆಯರಿಗೆ 1,19,391 ನೋಟಿಸ್‌ಗಳು ಬಂದಿದ್ದರೆ, ಪುರುಷರಿಗೆ 3,42,476 ನೋಟಿಸ್‌ಗಳು ಬಂದಿವೆ.

ಹೀಗಾಗಿ ಎಸ್‌ಐಆರ್‌ನ ವಿವಿಧ ಪರಿಶೀಲನಾ ಮಾನದಂಡಗಳಲ್ಲಿಯೂ ಮಹಿಳೆ-ಪುರುಷರ ಪ್ರಮಾಣ ಒಂದೇ ರೀತಿಯಲ್ಲಿಲ್ಲ. ಮಹಿಳೆಯರೊಳಗೂ ವಯಸ್ಸು ಮತ್ತು ವೈವಾಹಿಕ ಸ್ಥಿತಿಯ ವ್ಯತ್ಯಾಸ ಹೆಚ್ಚಾಗಿ ಕಂಡುಬಂದಿದೆ. 

ಮಹಿಳಾ ಮತದಾರರೊಳಗಿನ ಅಂಕಿಅಂಶಗಳನ್ನು ನೋಡಿದಾಗಲೂ ಎಸ್‌ಐಆರ್ ನೋಟಿಸ್ ಪ್ರಮಾಣದಲ್ಲಿ ವಯಸ್ಸು ಮತ್ತು ವೈವಾಹಿಕ ಸ್ಥಿತಿಯ ಆಧಾರದ ಮೇಲೆ ವ್ಯತ್ಯಾಸ ಕಂಡುಬರುತ್ತದೆ.

ವಿವಾಹಿತ ಮಹಿಳೆಯರಲ್ಲಿ 9.54% ಮಂದಿಗೆ ನೋಟಿಸ್ ಬಂದಿದ್ದರೆ, ಅವಿವಾಹಿತ ಮಹಿಳೆಯರಲ್ಲಿ ಈ ಪ್ರಮಾಣ 13.06%.

ಅಂದರೆ ಅವಿವಾಹಿತ ಮಹಿಳೆಯರ ನೋಟಿಸ್ ದರ ವಿವಾಹಿತ ಮಹಿಳೆಯರಿಗಿಂತ ಶೇಕಡಾ 3.52ರಷ್ಟು ಹೆಚ್ಚಾಗಿದೆ.

ವಯೋಮಾನದ ಪ್ರಕಾರ 18ರಿಂದ 25 ವರ್ಷದ ಮಹಿಳೆಯರಲ್ಲಿ ನೋಟಿಸ್ ದರ 8.66%.

26ರಿಂದ 35 ವರ್ಷದಲ್ಲಿ 9.46%.

36ರಿಂದ 45 ವರ್ಷದಲ್ಲಿ 12.57%.

46ರಿಂದ 55 ವರ್ಷದಲ್ಲಿ 10.88%.

56ರಿಂದ 65 ವರ್ಷದಲ್ಲಿ 9.12%.

66ರಿಂದ 79 ವರ್ಷದಲ್ಲಿ 9.21%.

80 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ 7.7%.

ಈ ಅಂಕಿಅಂಶಗಳಲ್ಲಿ 36ರಿಂದ 45 ವರ್ಷದ ಮಹಿಳೆಯರ ನೋಟಿಸ್ ದರ ಅತ್ಯಧಿಕವಾಗಿದ್ದು, 12.57% ಇದೆ.

ಕರ್ನಾಟಕದ ಪ್ರಶ್ನೆ ಈಗ ದೇಶದ ಪ್ರಶ್ನೆಯಾಗಿದೆ

ಕರ್ನಾಟಕದ ಈ ಅಂಕಿಅಂಶಗಳು ಪ್ರತ್ಯೇಕವಾಗಿ ಕಾಣಿಸುವುದಿಲ್ಲ. ಎಸ್‌ಐಆರ್ ನಡೆದ ಇತರ ರಾಜ್ಯಗಳ ಮತದಾರರ ಪಟ್ಟಿಯಲ್ಲೂ ಮಹಿಳೆಯರ ಹೆಸರುಗಳ ಕಡಿತ ಮತ್ತು ಲಿಂಗಾನುಪಾತದ ಕುಸಿತದ ಕುರಿತು ಹಲವು ಅಧ್ಯಯನಗಳು ಮತ್ತು ವರದಿಗಳು ಹೊರಬಂದಿವೆ.

ಬಿಹಾರದಲ್ಲಿ ಎಸ್‌ಐಆರ್ ಬಳಿಕ ಮತದಾರರ ಲಿಂಗಾನುಪಾತದಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ. ಜನವರಿ 2025ರ ಪಟ್ಟಿಯಲ್ಲಿ ಪ್ರತಿ 1,000 ಪುರುಷರಿಗೆ 914 ಮಹಿಳಾ ಮತದಾರರಿದ್ದರೆ, ಅಂತಿಮ ಎಸ್‌ಐಆರ್ ಪಟ್ಟಿಯಲ್ಲಿ ಈ ಪ್ರಮಾಣ 892ಕ್ಕೆ ಇಳಿದಿದೆ. ಚುನಾವಣಾ ದತ್ತಾಂಶವನ್ನು ಆಧರಿಸಿದ ವಿಶ್ಲೇಷಣೆಗಳಲ್ಲಿ ಸುಮಾರು 22.74 ಲಕ್ಷ ಮಹಿಳೆಯರು ಮತ್ತು 15.55 ಲಕ್ಷ ಪುರುಷರು ಮತದಾರರ ಪಟ್ಟಿಯಿಂದ ಹೊರಗುಳಿದಿರುವುದು ದಾಖಲಾಗಿದೆ. 

ಬಿಹಾರದ ಕರಡು ಹಂತದ ದತ್ತಾಂಶದಲ್ಲೂ ಮಹಿಳೆಯರ ಹೊರಗಿಡುವಿಕೆ ದೊಡ್ಡ ಪ್ರಮಾಣದಲ್ಲಿತ್ತು. Scroll‌ನ ವಿಶ್ಲೇಷಣೆಯ ಪ್ರಕಾರ, ಎಸ್‌ಐಆರ್ ನಂತರ ಕರಡು ಪಟ್ಟಿಯಿಂದ ಹೊರಗುಳಿದ ಸುಮಾರು 65.6 ಲಕ್ಷ ಮತದಾರರಲ್ಲಿ ಮಹಿಳೆಯರ ಪಾಲು 55% ಆಗಿತ್ತು. 

ಉತ್ತರ ಪ್ರದೇಶದಲ್ಲಿ ಎಸ್‌ಐಆರ್ ಕರಡು ಪಟ್ಟಿಯಿಂದ ಸುಮಾರು 2.89 ಕೋಟಿ ಹೆಸರುಗಳು ಹೊರಬಿದ್ದಿದ್ದವು. ಈ ಪೈಕಿ ಸುಮಾರು 1.55 ಕೋಟಿ ಮಹಿಳೆಯರ ಹೆಸರುಗಳಿದ್ದವು. ಇದರೊಂದಿಗೆ ಮತದಾರರ ಲಿಂಗಾನುಪಾತ ಪ್ರತಿ 1,000 ಪುರುಷರಿಗೆ 877ರಿಂದ 824ಕ್ಕೆ ಕುಸಿದಿರುವುದಾಗಿ ವರದಿಯಾಗಿತ್ತು.

ತಮಿಳುನಾಡಿನಲ್ಲೂ ಕರಡು ಪಟ್ಟಿಯಲ್ಲಿ ಸುಮಾರು 49.9 ಲಕ್ಷ ಮಹಿಳೆಯರು ಮತ್ತು 47.3 ಲಕ್ಷ ಪುರುಷರ ಹೆಸರುಗಳು ಹಿಂದಿನ ಪಟ್ಟಿಗೆ ಹೋಲಿಸಿದಾಗ ಕಡಿಮೆಯಾಗಿದ್ದವು. ಅಂದರೆ ಮಹಿಳೆಯರ ಕಡಿತ ಪುರುಷರಿಗಿಂತ ಸುಮಾರು 2.6 ಲಕ್ಷ ಹೆಚ್ಚಿತ್ತು.

ಪಶ್ಚಿಮ ಬಂಗಾಳದಲ್ಲಿ BehanBox ಮತ್ತು Sabar Institute ನಡೆಸಿದ ಲಿಂಗ ಆಧಾರಿತ ವಿಶ್ಲೇಷಣೆಯಲ್ಲಿ ಡಿಲೀಟ್ ಮಾಡಲಾದ ಅಥವಾ ವಿಚಾರಣೆಯಲ್ಲಿದ್ದ ಮತದಾರರಲ್ಲಿ ಮಹಿಳೆಯರ ಪಾಲು 61.8% ಎಂದು ದಾಖಲಾಗಿದೆ. ಮಹಿಳೆಯರ ಹೊರಗಿಡುವಿಕೆ ಮುಸ್ಲಿಂ, ಎಸ್‌ಸಿ, ಎಸ್‌ಟಿ ಮತ್ತು ಮಾತುವಾ ಸಮುದಾಯಗಳ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಆ ಅಧ್ಯಯನ ಹೇಳಿದೆ.

ಮದುವೆ, ಸ್ಥಳಾಂತರ, ದಾಖಲೆಗಳು: ಮಹಿಳೆಯರಿಗೇ ಹೆಚ್ಚುವರಿ ಹೊರೆ?

ಎಸ್‌ಐಆರ್ ವಿರೋಧಿಸುತ್ತಿರುವ ನಾಗರಿಕ ಸಂಘಟನೆಗಳು ಮತ್ತು ಪ್ರಗತಿಪರ ಗುಂಪುಗಳು ನಿರಂತರವಾಗಿ ಎತ್ತುತ್ತಿರುವ ಪ್ರಮುಖ ಪ್ರಶ್ನೆಗಳಲ್ಲಿ ಮಹಿಳೆಯರ ಮದುವೆ ನಂತರದ ಸ್ಥಳಾಂತರವೂ ಒಂದು.

ಮದುವೆಯ ನಂತರ ಮಹಿಳೆಯರು ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ಸ್ಥಳಾಂತರವಾಗುವುದು ಸಾಮಾನ್ಯ ಸಾಮಾಜಿಕ ಪ್ರಕ್ರಿಯೆ. ಇದರೊಂದಿಗೆ ವಿಳಾಸ, ಕುಟುಂಬದ ಹೆಸರು, ಉಪನಾಮ ಮತ್ತು ಕೆಲ ಸಂದರ್ಭಗಳಲ್ಲಿ ದಾಖಲೆಗಳಲ್ಲಿನ ಹೆಸರಿನ ರೂಪವೂ ಬದಲಾಗಬಹುದು. ಹಳೆಯ ಮತದಾರರ ಪಟ್ಟಿಯೊಂದಿಗೆ ಹೊಸ ವಿವರಗಳನ್ನು ಮ್ಯಾಪಿಂಗ್ ಮಾಡುವ ಸಂದರ್ಭದಲ್ಲಿ ಈ ಬದಲಾವಣೆಗಳು ಮಹಿಳೆಯರಿಗೆ ಹೆಚ್ಚುವರಿ ದಾಖಲೆ ಸಮಸ್ಯೆ ಸೃಷ್ಟಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

“ಶಾಶ್ವತವಾಗಿ ಸ್ಥಳಾಂತರಗೊಂಡವರು” ಎಂಬ ಕಾರಣ ನೀಡಿ ಮಹಿಳೆಯರ ಹೆಸರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಹಾಕಲಾಗುತ್ತಿದೆ ಎಂಬ ಆರೋಪವೂ ಎಸ್‌ಐಆರ್ ವಿರೋಧಿ ಸಂಘಟನೆಗಳಿಂದ ಕೇಳಿಬಂದಿದೆ. ಅದರಲ್ಲೂ 18ರಿಂದ 40 ವರ್ಷದೊಳಗಿನ ಮಹಿಳೆಯರು ಮದುವೆ ಅಥವಾ ಉದ್ಯೋಗದ ಕಾರಣದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಈ ವರ್ಗದ ಮತದಾರರ ದಾಖಲೆಗಳನ್ನು ವಿಶೇಷವಾಗಿ ಪರಿಶೀಲಿಸಬೇಕಾಗಿದೆ ಎಂಬ ಪ್ರಶ್ನೆ ಮುಂದಿಟ್ಟಿದೆ.

ಬಿಹಾರ ಮತ್ತು ಪಶ್ಚಿಮ ಬಂಗಾಳದ ದತ್ತಾಂಶ ವಿಶ್ಲೇಷಣೆಗಳಲ್ಲಿಯೂ “ಪರ್ಮನೆಂಟ್ಲಿ ಶಿಫ್ಟೆಡ್” ಎಂಬ ವರ್ಗದ ಮಹಿಳೆಯರ ಪ್ರಮಾಣದ ಬಗ್ಗೆ ಗಮನ ಸೆಳೆಯಲಾಗಿದೆ. ಮಹಿಳೆಯರ ಸ್ಥಳಾಂತರವನ್ನು ಮತದಾರರ ಪಟ್ಟಿಯ ಆಡಳಿತಾತ್ಮಕ ಶುದ್ಧೀಕರಣದ ಮಾನದಂಡವಾಗಿ ಬಳಸುವಾಗ, ಅವರು ಹೊಸ ವಿಳಾಸದಲ್ಲಿ ಮತದಾರರಾಗಿ ಸೇರ್ಪಡೆಯಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ಹಳೆಯ ಪಟ್ಟಿಯಿಂದ ಹೆಸರು ತೆಗೆದುಹಾಕುವುದರಿಂದ ಮತದಾನದ ಹಕ್ಕಿನ ನಡುವೆ ಅಂತರ ಉಂಟಾಗುವ ಸಾಧ್ಯತೆಯ ಬಗ್ಗೆ ನಾಗರಿಕ ಹಕ್ಕುಗಳ ಸಂಘಟನೆಗಳು ಎಚ್ಚರಿಸಿವೆ.

‘ಹೆಸರು ತೆಗೆಯುವ ಮೊದಲು ನೋಟಿಸ್ ಎಲ್ಲಿದೆ?’

ಎಸ್‌ಐಆರ್ ವಿರೋಧದ ಪ್ರಮುಖ ಆರೋಪಗಳಲ್ಲಿ ಇನ್ನೊಂದು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೊದಲು ಸಮರ್ಪಕ ನೋಟಿಸ್ ಮತ್ತು ವಿಚಾರಣೆ ನಡೆಯುತ್ತಿದೆಯೇ ಎಂಬುದು.

ವಿಶೇಷವಾಗಿ ವೃದ್ಧರು, ಬಡವರು, ವಲಸೆ ಕಾರ್ಮಿಕರು, ಮದುವೆಯ ನಂತರ ಸ್ಥಳಾಂತರಗೊಂಡ ಮಹಿಳೆಯರು ಮತ್ತು ದಾಖಲೆಗಳ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಚುನಾವಣಾ ದಾಖಲೆಗಳನ್ನು ಸಂಗ್ರಹಿಸಿ, ನಿಗದಿತ ಅವಧಿಯಲ್ಲಿ ಸಲ್ಲಿಸುವುದು ಸುಲಭದ ಪ್ರಕ್ರಿಯೆಯಲ್ಲ ಎಂಬ ವಾದವನ್ನು ನಾಗರಿಕ ಸಂಘಟನೆಗಳು ಮುಂದಿಟ್ಟಿವೆ.

ಕರ್ನಾಟಕದಲ್ಲಿಯೇ ಎರಡನೇ ಹಂತದಲ್ಲಿ 43,80,740 ಮಂದಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ. ಈ ಪೈಕಿ 20,35,312 ಪ್ರಕರಣಗಳಲ್ಲಿ ಅಸಂಗತತೆಗಳು ಮತ್ತು 23,45,428 ಪ್ರಕರಣಗಳಲ್ಲಿ 2002ರ ಮ್ಯಾಪಿಂಗ್ ಮಾಹಿತಿಯನ್ನು ನೀಡಲು ಸಾಧ್ಯವಾಗದಿರುವುದು ಕಾರಣವಾಗಿ ದಾಖಲಾಗಿದೆ. ಬೆಂಗಳೂರಿನ ನಾಲ್ಕು ಜಿಲ್ಲೆಗಳಲ್ಲೇ 24,05,990 ಪ್ರಕರಣಗಳಿರುವುದಾಗಿ ವರದಿಯಾಗಿದೆ.

ಈ ಸಂಖ್ಯೆಗಳ ಹಿನ್ನೆಲೆಯಲ್ಲಿ ಎಸ್‌ಐಆರ್ ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲ, ಕೋಟ್ಯಂತರ ದಾಖಲೆಗಳನ್ನು ಪರಿಶೀಲಿಸುವ ಬೃಹತ್ ಆಡಳಿತಾತ್ಮಕ ಪ್ರಕ್ರಿಯೆಯಾಗಿ ರೂಪುಗೊಂಡಿದೆ.

ಈ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೋಟಿಸ್ ಬಂದಿರುವುದೇ ಕರ್ನಾಟಕದ ಹೊಸ ಅಂಕಿಅಂಶಗಳ ಕೇಂದ್ರ ಪ್ರಶ್ನೆಯಾಗಿದೆ. 

ಎಸ್‌ಐಆರ್ ಪ್ರಾರಂಭವಾದ ದಿನಗಳಿಂದಲೇ ವಿರೋಧ ಪಕ್ಷಗಳು ಮತ್ತು ಪ್ರಗತಿಪರ ನಾಗರಿಕ ಸಂಘಟನೆಗಳು, ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯು ಅರ್ಹ ಮತದಾರರ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸುತ್ತಿವೆ.

ಮಹಿಳೆಯರ ವಿಷಯದಲ್ಲಿ ಈ ಆರೋಪ ಇನ್ನಷ್ಟು ತೀವ್ರವಾಗಿದೆ. ಮದುವೆಯ ನಂತರದ ಸ್ಥಳಾಂತರ, ಹಳೆಯ ದಾಖಲೆಗಳ ಲಭ್ಯತೆಯ ಕೊರತೆ, ಹೆಸರಿನ ಬದಲಾವಣೆ, ಕುಟುಂಬದ ದಾಖಲೆಗಳಲ್ಲಿನ ವ್ಯತ್ಯಾಸ ಮತ್ತು ವಲಸೆ, ಇವೆಲ್ಲವೂ ಮಹಿಳೆಯರ ಜೀವನದಲ್ಲಿ ಪುರುಷರಿಗಿಂತ ವಿಭಿನ್ನವಾಗಿ ಕೆಲಸ ಮಾಡುವ ಸಾಮಾಜಿಕ ವಾಸ್ತವಿಕತೆಗಳು. ಇದೇ ಕಾರಣಗಳನ್ನು ಮತದಾರರ ಪಟ್ಟಿಯ ಪರಿಶೀಲನೆಯ ಕಠಿಣ ಮಾನದಂಡಗಳೊಂದಿಗೆ ಜೋಡಿಸಿದಾಗ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂಬುದು ಎಸ್‌ಐಆರ್ ವಿರೋಧಿ ಸಂಘಟನೆಗಳ ವಾದ.

ಕೆಲವು ವಿರೋಧ ಪಕ್ಷಗಳು ಇದನ್ನು ಕೇವಲ ಆಡಳಿತಾತ್ಮಕ ತಪ್ಪು ಎಂದು ಪರಿಗಣಿಸದೆ, ನಿರ್ದಿಷ್ಟ ಸಾಮಾಜಿಕ ಸಮುದಾಯಗಳು ಮತ್ತು ತಮ್ಮ ರಾಜಕೀಯ ಹಕ್ಕುಗಳನ್ನು ಚಲಾಯಿಸುವ ಮತದಾರರ ಮೇಲೆ ಪರಿಣಾಮ ಬೀರುವ ವ್ಯವಸ್ಥಿತ ಪ್ರಕ್ರಿಯೆ ಎಂದು ಆರೋಪಿಸಿವೆ. ಈ ಆರೋಪಗಳಲ್ಲಿ ಮಹಿಳೆಯರು ಪ್ರಮುಖವಾಗಿ ಉಲ್ಲೇಖಿಸಲ್ಪಟ್ಟಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೊದಲು ನೋಟಿಸ್, ವಿಚಾರಣೆ ಮತ್ತು ಮೇಲ್ಮನವಿ ಅವಕಾಶಗಳು ಪರಿಣಾಮಕಾರಿಯಾಗಿರಬೇಕು; ಹೆಸರು ಏಕೆ ತೆಗೆದುಹಾಕಲಾಯಿತು ಎಂಬ ಕಾರಣವನ್ನು ಮತದಾರರಿಗೆ ತಿಳಿಸಬೇಕು; ತಪ್ಪಾಗಿ ಹೊರಗುಳಿದವರಿಗೆ ಮತದಾರರ ಪಟ್ಟಿಗೆ ಮರಳಲು ಸುಲಭವಾದ ವ್ಯವಸ್ಥೆ ಇರಬೇಕು ಎಂಬ ಬೇಡಿಕೆಗಳು ಈ ಹೋರಾಟದ ಕೇಂದ್ರದಲ್ಲಿವೆ.

ಮಹಿಳೆಯರ ಮತದಾನದ ಹಕ್ಕು ಕೇವಲ ಮತದಾರರ ಪಟ್ಟಿಯಲ್ಲಿರುವ ಒಂದು ಸಂಖ್ಯೆಯಲ್ಲ; ಅದು ಸಂವಿಧಾನ ಖಾತರಿಪಡಿಸಿದ ಸಾಮಾಜಿಕ ನ್ಯಾಯ ಮತ್ತು ಸಮಾನ ರಾಜಕೀಯ ಪೌರತ್ವದ ಹಕ್ಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಚಿಂತನೆಯ ಕೇಂದ್ರದಲ್ಲಿದ್ದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಮಹಿಳೆಯರೂ ಸಮಾನ ರಾಜಕೀಯ ಹಕ್ಕು ಹೊಂದಬೇಕು ಎಂಬ ತತ್ವವನ್ನು ಬಲಪಡಿಸಿದವು. ಒಂದು ಮತ, ಒಂದು ಹಕ್ಕು ಎಂಬ ರಾಜಕೀಯ ಸಮಾನತೆಯ ತತ್ವದ ಮೂಲಕ ಮಹಿಳೆಯರೂ ದೇಶದ ನಿರ್ಣಯ ಪ್ರಕ್ರಿಯೆಯ ಸಮಾನ ಭಾಗಿದಾರರಾದರು.

ಮಹಿಳೆಯರ ಆಸ್ತಿ, ವಿವಾಹ ಮತ್ತು ಕುಟುಂಬ ಸಂಬಂಧಗಳಲ್ಲಿನ ಸಮಾನತೆಯ ಪ್ರಶ್ನೆಗಳನ್ನೂ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಭಾಗವಾಗಿ ನೋಡಿದ್ದರು. ಇಂತಹ ಸಂದರ್ಭದಲ್ಲಿ, ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಎಸ್‌ಐಆರ್ ನೋಟಿಸ್‌ಗಳ ವ್ಯಾಪ್ತಿಗೆ ಬರುತ್ತಿರುವ ಕರ್ನಾಟಕದ ಅಂಕಿಅಂಶಗಳು ಗಂಭೀರ ಪ್ರಶ್ನೆ ಎತ್ತುತ್ತವೆ. ಎಸ್‌ಐಆರ್‌ನಿಂದ ಮಹಿಳೆಯರ ಮತದಾನದ ಹಕ್ಕು ಕಸಿಯಲಾಗುತ್ತಿದೆ ಎಂಬ ಆರೋಪಗಳ ನಡುವೆ, ಅರ್ಹ ಮಹಿಳೆಯರ ಹೆಸರುಗಳು ಪಟ್ಟಿಯಿಂದ ಹೊರಗುಳಿಯದಂತೆ ಖಚಿತಪಡಿಸುವುದು ಚುನಾವಣಾ ಆಡಳಿತದಷ್ಟೇ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯವನ್ನು ರಕ್ಷಿಸುವ ಪ್ರಶ್ನೆಯಾಗಿದೆ.

ಕರ್ನಾಟಕದ ಅಂಕಿಅಂಶಗಳು ಕೇಳುತ್ತಿರುವ ಪ್ರಶ್ನೆ

ಎಸ್‌ಐಆರ್‌ನ ಕರ್ನಾಟಕ ಹಂತದಲ್ಲಿ ಈಗ ಲಭ್ಯವಾಗಿರುವ ಅಂಕಿಅಂಶಗಳ ಅತ್ಯಂತ ಗಮನಾರ್ಹ ಸಂಗತಿ ಒಂದೇ—ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೋಟಿಸ್‌ಗಳು ಜಾರಿಯಾಗಿವೆ.

22,68,364 ಮಹಿಳೆಯರು.

20,85,573 ಪುರುಷರು.

1,82,791ರಷ್ಟು ಮಹಿಳೆಯರ ಹೆಚ್ಚುವರಿ ನೋಟಿಸ್.

10.24% ಮಹಿಳಾ ನೋಟಿಸ್ ದರ.

9.54% ಪುರುಷರ ನೋಟಿಸ್ ದರ.

34 ಘಟಕಗಳಲ್ಲಿ 29 ಕಡೆ ಮಹಿಳೆಯರ ನೋಟಿಸ್ ದರ ಹೆಚ್ಚಾಗಿದೆ.

ಈ ಸಂಖ್ಯೆಗಳು ಕರ್ನಾಟಕದ ಎಸ್‌ಐಆರ್‌ನ ಲಿಂಗಾನುಪಾತದ ಪರಿಣಾಮವನ್ನು ಪ್ರಶ್ನಿಸುವಷ್ಟು ದೊಡ್ಡ ವ್ಯತ್ಯಾಸವನ್ನು ತೋರಿಸುತ್ತವೆ.

ಈಗ ಅಗತ್ಯವಾಗಿರುವುದು ಮುಂದಿನ ಹಂತದ ಸಂಪೂರ್ಣ ಲಿಂಗಾನುಪಾತದ ದತ್ತಾಂಶ. ನೋಟಿಸ್ ಪಡೆದ ಮಹಿಳೆಯರಲ್ಲಿ ಎಷ್ಟು ಮಂದಿ ದಾಖಲೆ ಸಲ್ಲಿಸಿದರು, ಎಷ್ಟು ಮಂದಿಯ ಹೆಸರುಗಳು ಉಳಿದವು, ಎಷ್ಟು ಮಂದಿಯ ಹೆಸರುಗಳನ್ನು ತೆಗೆದುಹಾಕಲಾಯಿತು, ಎಷ್ಟು ಮಂದಿ ಮೇಲ್ಮನವಿ ಸಲ್ಲಿಸಿದರು ಮತ್ತು ಎಷ್ಟು ಮಂದಿ ಅಂತಿಮವಾಗಿ ಮತ್ತೆ ಮತದಾರರ ಪಟ್ಟಿಗೆ ಸೇರಿದರು ಎಂಬುದು.

ಏಕೆಂದರೆ ಮಹಿಳೆಯರ ಮೇಲೆ ಎಸ್‌ಐಆರ್‌ನ ನಿಜವಾದ ಪರಿಣಾಮವನ್ನು ಅಳೆಯಬೇಕಾದರೆ ನೋಟಿಸ್‌ಗಳ ಸಂಖ್ಯೆಯಷ್ಟೇ ಅಲ್ಲ, ಅಂತಿಮ ಮತದಾರರ ಪಟ್ಟಿಯಲ್ಲಿನ ಮಹಿಳೆಯರ ಸಂಖ್ಯೆ ಮತ್ತು ಲಿಂಗಾನುಪಾತವನ್ನೂ ಹೋಲಿಸಬೇಕಾಗುತ್ತದೆ.

ಬಿಹಾರದಲ್ಲಿ ಎಸ್‌ಐಆರ್ ನಂತರ ಮಹಿಳಾ ಮತದಾರರ ಲಿಂಗಾನುಪಾತ ಕುಸಿದಿರುವುದು, ಉತ್ತರ ಪ್ರದೇಶದಲ್ಲಿ ಮಹಿಳೆಯರ ಹೆಸರಿನ ದೊಡ್ಡ ಪ್ರಮಾಣದ ಕಡಿತ, ತಮಿಳುನಾಡಿನ ಕರಡು ಪಟ್ಟಿಯಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರ ಹೆಸರುಗಳ ಹೊರಗಿಡುವಿಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಹೆಚ್ಚಿನ ಪಾಲಿನ ಹೊರಗಿಡುವಿಕೆ ಈ ಎಲ್ಲ ಬೆಳವಣಿಗೆಗಳ ನಡುವೆ ಕರ್ನಾಟಕದ 34 ಘಟಕಗಳ ಅಂಕಿಅಂಶಗಳು ಹೊಸ ಪ್ರಶ್ನೆಯನ್ನು ಮುಂದಿಟ್ಟಿವೆ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮಹಿಳೆಯರೇ ಏಕೆ ಹೆಚ್ಚಿನ ಪ್ರಮಾಣದಲ್ಲಿ ನೋಟಿಸ್‌ಗಳ ವ್ಯಾಪ್ತಿಗೆ ಬರುತ್ತಿದ್ದಾರೆ ಎಂಬ ಪ್ರಶ್ನೆಗೆ ಚುನಾವಣಾ ಆಡಳಿತದಿಂದ ಸ್ಪಷ್ಟ ಉತ್ತರ ಸಿಗಬೇಕಿದೆ. ಮಹಿಳೆಯರ ದಾಖಲೆಗಳು, ಹೆಸರು ಬದಲಾವಣೆ, ವಿವಾಹದ ನಂತರದ ಸ್ಥಳಾಂತರ, ಪೋಷಕರ ದಾಖಲೆಗಳಲ್ಲಿನ ವ್ಯತ್ಯಾಸ ಸೇರಿದಂತೆ ಹಲವು ಕಾರಣಗಳು ಈ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಹೆಚ್ಚಾಗಿ ಸಂಕಷ್ಟಕ್ಕೆ ಸಿಲುಕಿಸುತ್ತಿರುವುದನ್ನು ಅಂಕಿಅಂಶಗಳು ತೋರಿಸುತ್ತಿವೆ. ಈ ಪ್ರಶ್ನೆಗಳಿಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹ ಉತ್ತರ ಸಿಗದಿರುವಾಗ, ಅಂತಿಮ ಮತದಾರರ ಪಟ್ಟಿಯಲ್ಲಿ ಅರ್ಹ ಮಹಿಳೆಯರ ಹೆಸರುಗಳು ಎಷ್ಟು ಉಳಿಯುತ್ತವೆ ಎಂಬ ಆತಂಕವೂ ಮುಂದುವರಿಯುತ್ತದೆ.

ಇದು ಕೇವಲ ಮತದಾರರ ಪಟ್ಟಿಯಲ್ಲಿನ ತಾಂತ್ರಿಕ ತಿದ್ದುಪಡಿಯ ಪ್ರಶ್ನೆಯಲ್ಲ. ಮತದಾರರ ಪಟ್ಟಿಯಿಂದ ಒಬ್ಬ ಮಹಿಳೆಯ ಹೆಸರು ಹೊರಗುಳಿಯುವುದು ಆಕೆಯ ರಾಜಕೀಯ ಧ್ವನಿಯನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಹೀಗಾಗಿ ಎಸ್‌ಐಆರ್‌ನಲ್ಲಿ ಮಹಿಳೆಯರ ಮೇಲಿನ ಪರಿಣಾಮವನ್ನು ಕೇವಲ ಅಂಕಿಅಂಶವಾಗಿ ನೋಡದೆ, ಸಮಾನ ರಾಜಕೀಯ ಹಕ್ಕಿನ ಪ್ರಶ್ನೆಯಾಗಿಯೇ ನೋಡಬೇಕಾಗಿದೆ.

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ವಿರೋಧಿಸಿ ಎಸ್ಐಆರ್ ಪ್ರಕ್ರಿಯೆಯನ್ನೇ ಹಿಂಪಡೆಯಬೇಕು, ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಈ ಅಕ್ರಮಗಳ ಕುರಿತು ತನಿಖೆ ನಡೆಯಬೇಕು ಎಂಬ ಒತ್ತಾಯ ತೀವ್ರಗೊಳ್ಳುತ್ತಿರುವ ವೇಳೆಯಲ್ಲೇ ಈ ಅಂಕಿಅಂಶಗಳು ಹೊರಬಿದ್ದಿದ್ದು, ಮತದಾರರ ಪಟ್ಟಿಯ ಶುದ್ಧೀಕರಣದ ಹೆಸರಿನಲ್ಲಿ ಅರ್ಹ ಮತದಾರರ ಹಕ್ಕಿಗೆ ಯಾವುದೇ ಧಕ್ಕೆಯಾಗಬಾರದು ಎಂಬ ಹೋರಾಟಗಾರರ ಪ್ರಶ್ನೆಗೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ. 

ಅಂತಿಮವಾಗಿ ಉಳಿಯುವುದು ಒಂದೇ ಪ್ರಶ್ನೆ. ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ಜನರ ಹಕ್ಕುಗಳನ್ನು ಮತ್ತಷ್ಟು ಖಚಿತಪಡಿಸುತ್ತಿದೆಯೇ, ಅಥವಾ ದಾಖಲೆಗಳ ಕೊರತೆ ಮತ್ತು ಪ್ರಕ್ರಿಯಾತ್ಮಕ ಅಡೆತಡೆಗಳಿಂದ ಅರ್ಹ ನಾಗರಿಕರನ್ನೇ ಹೊರಗಿಡುವ ಅಪಾಯವನ್ನು ಹೆಚ್ಚಿಸುತ್ತಿದೆಯೇ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುವವರೆಗೆ ಎಸ್‌ಐಆರ್ ಮುಂದುವರಿಸುವ ಬದಲು, ಅದರ ಪರಿಣಾಮಗಳು, ಅಂಕಿಅಂಶಗಳು ಮತ್ತು ಹೊರಗುಳಿಯುವಿಕೆಯ ಅಪಾಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂಬ ಒತ್ತಾಯವೇ ಈಗ ಗಟ್ಟಿಯಾಗುತ್ತಿದೆ. ಮಹಿಳೆಯರ ಮತದಾನದ ಹಕ್ಕು ಸೇರಿದಂತೆ ಪ್ರತಿಯೊಬ್ಬ ಅರ್ಹ ನಾಗರಿಕನ ಸಮಾನ ರಾಜಕೀಯ ಹಕ್ಕು ಸುರಕ್ಷಿತವಾಗಿರುವುದೇ ಯಾವುದೇ ಮತದಾರರ ಪಟ್ಟಿ ಪರಿಷ್ಕರಣೆಯ ಅಂತಿಮ ಮಾನದಂಡವಾಗಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್ಐಆರ್‌ನಲ್ಲಿ ಬದುಕಿದ್ದರೂ ‘ಮೃತ’, ಮನೆಯಲ್ಲಿದ್ದರೂ ‘ಸ್ಥಳಾಂತರ’: ಚಿಕ್ಕಬಳ್ಳಾಪುರದ ಸಂತ್ರಸ್ತರನ್ನು ಭೇಟಿಯಾದ ಪ್ರಕಾಶ್ ರಾಜ್ 

ಚಿಕ್ಕಬಳ್ಳಾಪುರ: ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ ಬದುಕಿರುವ ಮತದಾರರನ್ನೇ ಮೃತಪಟ್ಟವರು ಎಂದು ಗುರುತಿಸಿರುವ ಆರೋಪಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕೇಳಿಬಂದಿವೆ. ಎಸ್ಐಆರ್ ಪರಿಶೋಧನೆ-ಪ್ರತಿರೋಧ ಜಾಥಾದ ಭಾಗವಾಗಿ ಗುಡಿಬಂಡೆ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದ್ದ...

“ಚುನಾವಣಾ ಆಯೋಗದ ‘ಕೊಳೆತ ವ್ಯವಸ್ಥೆ’ ಗ್ಯಾನೇಶ್ ಕುಮಾರ್ ಅವರಿಂದಷ್ಟೇ ಶುರುವಾಗಿದ್ದಲ್ಲ!” – ಬಂಗಾಳ ಚುನಾವಣೆಯ ಅಸಲಿ ಸತ್ಯ ಬಿಚ್ಚಿಟ್ಟ ಪ್ರಶಾಂತ್ ಕಿಶೋರ್

ಭಾರತೀಯ ಚುನಾವಣಾ ಆಯೋಗದ ಒಳಗಿನ 'ಸರ್ವಾಧಿಕಾರಿ' ಧೋರಣೆ, ಇಬ್ಬರು ಆಯುಕ್ತರ ಬಂಡಾಯ ಮತ್ತು ನಿಯಮಬಾಹಿರ ನಿರ್ಧಾರಗಳ ಕುರಿತು ಇಡೀ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ, ಖ್ಯಾತ ಚುನಾವಣಾ ತಂತ್ರಜ್ಞ ಹಾಗೂ 'ಜನ್...

ಎಸ್ಐಆರ್ ಅಕ್ರಮ: ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ; ಪೊಲೀಸರಿಂದ ಹಲವೆಡೆ ಅಶ್ರುವಾಯು, ಜಲಫಿರಂಗಿ ಪ್ರಯೋಗ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದು, ಕನಿಷ್ಠ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಚುನಾವಣಾ...

ಶೀಘ್ರವೇ ಪೌರಕಾರ್ಮಿಕರ ಉಪಹಾರ ಭತ್ಯೆ ₹70 ಕ್ಕೆ ಹೆಚ್ಚಿಸುವೆ: ಸಿಎಂ ಡಿ.ಕೆ. ಶಿವಕುಮಾರ್

ಪೌರಕಾರ್ಮಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಪೌರಕಾರ್ಮಿಕರ ಉಪಹಾರ ಭತ್ಯೆಯನ್ನು ₹35 ರಿಂದ ₹70 ಕ್ಕೆ ಏರಿಕೆ ಮಾಡಿ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು...

ಎಸ್ಐಆರ್ ಬಡವರ ಪಾಲಿನ ಕೊಲ್ಲುವ ಕತ್ತಿಯಾಗಿದೆ : ಪ್ರಕಾಶ್ ರಾಜ್

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಬಡವರ ಪಾಲಿನ ಕೊಲ್ಲುವ ಕತ್ತಿಯಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು. ಎಸ್ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಜಾಥಾದ ಭಾಗವಾಗಿ ಶುಕ್ರವಾರ (ಸೆ.25)...

ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ: ದಲಿತ ಸಂಘಟನೆಗಳ ಒಕ್ಕೂಟ ಖಂಡನೆ

ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರದ ವೈಫಲ್ಯವನ್ನು ಖಂಡಿಸಿ ಇಂದ ಬೆಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘಟನೆಗಳ...

ಮುರ್ಷಿದಾಬಾದ್‌: ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಸರುಗಳು ಉಳಿದರೂ ‘ಬಾಂಗ್ಲಾದೇಶಿ’ ಎಂದು ಅನುಮಾನಿಸಿ 60 ವರ್ಷದ ತಂದೆ, ಮೂವರು ಪುತ್ರರ ಗಡಿಪಾರು ಆರೋಪ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಂಗಾಳಿ ಮುಸ್ಲಿಂ ಕುಟುಂಬವೊಂದರ ನಾಲ್ವರು ಸದಸ್ಯರನ್ನು ಪೊಲೀಸರು ಮನೆಯಿಂದ ಕರೆದೊಯ್ದು, ಅವರು ಬಾಂಗ್ಲಾದೇಶಿ ಪ್ರಜೆಗಳು ಎಂದು ಆರೋಪಿಸಿ ಬಿಎಸ್‌ಎಫ್‌ಗೆ ಹಸ್ತಾಂತರಿಸಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು...

ಗ್ಯಾನೇಶ್ ಕುಮಾರ್‌ನನ್ನು ಬಂಧಿಸುವಂತೆ ಬಿ.ಕೆ. ಹರಿಪ್ರಸಾದ್ ಆಗ್ರಹ: ನಾಳೆ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಇನ್ನುಳಿದ ಇಬ್ಬರು ಆಯುಕ್ತರ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ಗೌಪ್ಯವಾಗಿ 'ಎಸ್‌ಐಆರ್'...

‘ಪೆನ್ಶನ್ ಹೋಗಲ್ಲ, SIR ಹೋಗುತ್ತೆ, ಹೆದರಬೇಡಿ’: ತುಮಕೂರಿನಲ್ಲಿ ಸಂತ್ರಸ್ತ ಮಹಿಳೆಗೆ ಪ್ರಕಾಶ್ ರಾಜ್ ಭರವಸೆ

ತುಮಕೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ನೋಟಿಸ್‌ಗಳಿಂದ ಆತಂಕಕ್ಕೊಳಗಾಗಿರುವ ತುಮಕೂರಿನ ಎನ್‌ಆರ್ ಕಾಲೊನಿಯ ನಿವಾಸಿಗಳ ಮನೆಗಳಿಗೆ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಭೇಟಿ ನೀಡಿ, ಅವರ ಸಮಸ್ಯೆಗಳನ್ನು...

SIR ಅಕ್ರಮ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಶಿಸ್ತು ಹಾಗೂ...