ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ‘ಪರಿಶೋಧನೆ ಮತ್ತು ಪ್ರತಿರೋಧ ಜಾಥಾ’ದ ಭಾಗವಾಗಿ ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್ ನೇತೃತ್ವದಲ್ಲಿ ಮಂಗಳವಾರ (ಸೆ.29) ಕೊಡಗಿನ ಪಾಲೆಮಾಡಿನಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ ನಡೆಯಿತು.
ನಾಗರಿಕ ಮತಕಾವಲು ಸಮಿತಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಹಾಗೂ ವಿವಿಧ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ನಿರಾಶ್ರಿತರಾದ ಹಾಡಿ ಜನರು ಎಸ್‌ಐಆರ್‌ನಿಂದ ತಾವು ಎದುರಿಸಿದ ಸಂಕಟ ತೋಡಿಕೊಂಡರು.
ಬಿ.ಶೆಟ್ಟಿಗೇರಿಯ ಮಂಜುಳಾ ಎಂಬವರು ಮಾತನಾಡಿ, “ನನಗೆ ನೋಟಿಸ್ ಬಂದಿದೆ ಎಂದು ಹೇಳುತ್ತಿದ್ದಾರೆ, ಆದರೆ ಈವರೆಗೆ ಕೊಟ್ಟಿಲ್ಲ. ಐದಾರು ಬಾರಿ ಹೋದರೂ ‘ನಾಳೆ ಬಾ, ನಾಳೆ ಬಾ’ ಎಂದು ಹೇಳುತ್ತಿದ್ದಾರೆ. ನಾನು ಎನ್ಯುಮರೇಷನ್ ಫಾರಂ ಫಿಲ್ ಮಾಡಿ ಕೊಟ್ಟಿದ್ದೆ. ಆದರೆ, ನೋಟಿಸ್ ಬಂದಿದೆ ಎಂದು ಈವರೆಗೆ ನನಗೆ ತಿಳಿದಿರಲಿಲ್ಲ, ಅವರೇ ಇಟ್ಟುಕೊಂಡಿದ್ದಾರೆ. ನಾನು ಹುಟ್ಟಿ ಬೆಳೆದಿದ್ದೇ ಕೊಡಗಿನಲ್ಲಿ. ‘ಅನ್‌ಮ್ಯಾಪ್ಡ್’ ಎಂದು ಕಾರಣ ನೀಡಿ ನೋಟಿಸ್ ನೀಡಿದ್ದಾರೆ. ಐದಾರು ಬಾರಿ ಪಂಚಾಯಿತಿಗೆ ಭೇಟಿ ನೀಡಲು 300 ರೂಪಾಯಿ ಕೊಟ್ಟು ಆಟೋ ಮಾಡಿಕೊಂಡು ಹೋಗಿದ್ದೇವೆ. ನಾವು ಕೂಲಿ ಮಾಡುತ್ತಿದ್ದು, ಅಷ್ಟೊಂದು ಕೂಲಿಯೂ ಸಹ ನಮಗೆ ಸಿಗುತ್ತಿಲ್ಲ” ಎಂದು ಹೇಳಿದರು.

ಗೌರಿ ಎಂಬವರು ಮಾತನಾಡಿ, “ನನ್ನ ಹೆಸರು ಗೌರಿ. ನಮಗೆ ಈ ಮುಂಚೆ ಅಮ್ಮತಿಯಲ್ಲಿ ವೋಟು ಇತ್ತು. ನಾವು ಅಲ್ಲಿ ಹೋಗಿ ಕೇಳಿದಾಗ ‘ಬಿ.ಶೆಟ್ಟಿಗೇರಿಯಲ್ಲಿ ಮಾಡಿಕೊಳ್ಳಿ’ ಎಂದು ಹೇಳಿದರು. ನಾವು ಅಲ್ಲಿ ಇಲ್ಲ ಎಂಬ ಕಾರಣಕ್ಕೆ ನಮ್ಮ ವೋಟ್ ಡಿಲೀಟ್ ಮಾಡಿದ್ದಾರೆ” ಎಂದು ತಿಳಿಸಿದರು.
ಬಿ.ಶೆಟ್ಟಿಗೇರಿಯ ನಿವಾಸಿ ಕಮಲ ಎಂಬವರು 1995ರಲ್ಲಿ ಮತದಾನ ಮಾಡಿದ್ದು, ಆದರೆ 2002ರ ಮತದಾರರ ಪಟ್ಟಿಯಲ್ಲಿ ಅವರು ಹೆಸರು ಸಿಕ್ಕಿಲ್ಲ ಎನ್ನಲಾಗಿದೆ. ಹಾಗಾಗಿ, ಅವರಿಗೆ ಗಣತಿ ನಮೂನೆ (ಎನ್ಯುಮರೇಷನ್ ಫಾರಂ) ಬಂದಿಲ್ಲ ಎಂದು ತಿಳಿದು ಬಂದಿದೆ.
ಪೊನ್ನಂಪೇಟೆಯ ಭಾರತಿ ಮಾತನಾಡಿ, “ನಾವು ಸಾಲು ಮನೆಯಲ್ಲಿ (ಲೈನ್ ಮನೆ) ಇದ್ದೇವೆ. ವರ್ಷಕ್ಕೊಮ್ಮೆ ತೋಟಗಳನ್ನು ಬದಲಿಸುತ್ತೇವೆ. ನಾವು ವಲಸೆ ಹೋಗುತ್ತಿರುವ ಕಾರಣಕ್ಕೆ ನಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದಿದ್ದಾರೆ. ನಾವೀಗ ಶೆಡ್ ಹಾಕಿಕೊಂಡು ಕುಳಿತಿದ್ದೇವೆ. ನಮಗೆ ಕರೆಂಟ್ ಅಥವಾ ಕುಡಿಯುವ ನೀರು ಇಲ್ಲ. ಈವರೆಗೆ ಪಂಚಾಯಿತಿಯಿಂದ ನೀಡುತ್ತಿದ್ದ ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ. ನಮಗೆ ವಸತಿ ಹಾಗೂ ಮತದಾನದ ಅವಕಾಶ ಕಲ್ಪಿಸಿಕೊಡಬೇಕು” ಎಂದು ಮನವಿ ಮಾಡಿದರು.

“ನನ್ನ ಗಂಡನ ಹೆಸರಿಗೆ ಸಂಬಂಧಿಕರ ಹೆಸರು ಮ್ಯಾಚ್ ಆಗಿಲ್ಲ ಎಂದು ನೋಟಿಸ್ ನೀಡಿದ್ದಾರೆ. ರೇಷನ್ ಕಾರ್ಡ್ ರದ್ದಾಗುವ ಆತಂಕದಲ್ಲೇ ಬದುಕುತ್ತಿದ್ದೇವೆ. ಸಾಲು ಮನೆಯಲ್ಲಿ ಇದ್ದುಕೊಂಡೇ ನನ್ನ ತಂದೆ-ತಾಯಿ ಓದಿಸಿದ್ದಾರೆ. ಆದರೆ ಈ ಎಸ್‌ಐಆರ್ ನಮಗೆ ಅರ್ಥವಾಗುತ್ತಿಲ್ಲ. ಏನೇ ದಾಖಲೆ ನೀಡಿದರೂ..ಒಂದಲ್ಲ ಒಂದು ಕಾರಣ ನೀಡಿ ನಮ್ಮನ್ನು ವಾಪಸ್ ಕಳುಹಿಸುತ್ತಿದ್ದಾರೆ. ದಾಖಲೆಗಳನ್ನು ಸರಿಪಡಿಸಬೇಕಾದವರೇ ನಿಮ್ಮ ಮಾಹಿತಿ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ನಾವು ಆಗಾಗ ಲೈನ್ ಮನೆಗಳನ್ನು ಬದಲಿಸುತ್ತೇವೆ. ಇದೀಗ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದೇವೆ. ನಮಗೆ ನಿವೇಶನ ಬೇಕಿದೆ” ಎಂದು ಲಕ್ಷ್ಮಿ ಜೋಯಿಸ್ ಎಂಬವರು ಹೇಳಿದರು.
ಬಿ.ಶೆಟ್ಟಿಗೇರಿ ಗ್ರಾಮದ 14 ಜನರಿಗೆ ಈವರೆಗೆ ಎನ್ಯುಮರೇಷನ್ ಫಾರಂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಈ ಜನರಿಗೆ ಇರಲು ಮನೆ ಇಲ್ಲ. ಎಸ್‌ಐಆರ್ ನಡೆಯುತ್ತಿದೆ ಎಂಬುದೇ ಇವರಿಗೆ ಗೊತ್ತಿಲ್ಲ. ವೋಟರ್ ಐಡಿ ಇದ್ದರೂ ಎನ್ಯುಮರೇಷನ್ ಫಾರ್ಮ್ ಸಿಕ್ಕಿಲ್ಲ.


