ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ವಿಭಜಕ ಮತ್ತು ಕೋಮು ಕಾರ್ಯಸೂಚಿಯನ್ನು ಜಾರಿಗೆ ತರುವುದನ್ನು ತಕ್ಷಣವೇ ತಡೆಯಬೇಕು ಹಾಗೂ ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ, ಜಾತ್ಯತೀತ ಶಿಕ್ಷಣ ನೀತಿಗಳನ್ನು ಜಾರಿಗೆ ತರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷದ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳವಾರ (ಸೆಪ್ಟೆಂಬರ್ 29) ನವದೆಹಲಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, “ಶಿಕ್ಷಣ ಕ್ಷೇತ್ರದ ಮೂಲಕ ಸಂಘ ಪರಿವಾರವು ದೇಶದಲ್ಲಿ ತನ್ನ ವಿಭಜಕ ಅಜೆಂಡಾವನ್ನು ತಳ್ಳಲು ನಡೆಸುತ್ತಿರುವ ಯತ್ನಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಹೇಗೆ ಮಾದರಿಯಾಗಬೇಕು ಎಂಬುದರ ಕುರಿತು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಮತ್ತು ಸಂಬಂಧಪಟ್ಟ ಪಾಲುದಾರರ ಮಾರ್ಗದರ್ಶನದಲ್ಲಿ ಶೀಘ್ರದಲ್ಲೇ ರಾಜ್ಯ ಮಟ್ಟದ ಬೃಹತ್ ಶಿಕ್ಷಣ ವಿಚಾರ ಸಂಕಿರಣಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ವಿಚಾರ ಸಂಕಿರಣಗಳ ಸಲಹೆಗಳ ಆಧಾರದ ಮೇಲೆ ಮುಂದಿನ ಒಂದು ತಿಂಗಳ ಒಳಗಾಗಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಸಮಗ್ರ ಕ್ರಿಯಾ ಯೋಜನೆಯನ್ನು (Action Plan) ಸಿದ್ಧಪಡಿಸಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಪರ್ಯಾಯ ಸುಧಾರಣೆಗಳನ್ನು ತಂದು ಮಾದರಿ ರಾಜ್ಯಗಳನ್ನಾಗಿ ರೂಪಿಸಲಿದ್ದಾರೆ. ಅಲ್ಲದೆ, ಆರ್‌ಎಸ್‌ಎಸ್ ಬೆಂಬಲಿತ ಕುಲಪತಿಗಳ (VC) ನೇಮಕ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ವಿಷಕಾರಿ ವಿಚಾರಗಳನ್ನು ತುಂಬುತ್ತಿರುವ ಪರಿಣಾಮಗಳ ಕುರಿತು ರಾಷ್ಟ್ರ ಮಟ್ಟದಲ್ಲಿ ತಜ್ಞರ ಸಮ್ಮೇಳನ ನಡೆಸಿ ರಾಷ್ಟ್ರೀಯ ಮಟ್ಟದ ಜಾಗೃತಿ ನೆಟ್‌ವರ್ಕ್ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ (NEP) ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯೀಕರಣ ಮತ್ತು ಕೋಮುವಾದೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಕಾಂಗ್ರೆಸ್‌ನ ಸ್ಪಷ್ಟ ನಿಲುವಾಗಿದೆ. ಈಗಾಗಲೇ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ‘ಎನ್‌ಇಪಿ’ ಅಧ್ಯಯನ ನಡೆಸಿ ಅದಕ್ಕೆ ಪರ್ಯಾಯವಾಗಿ ರಾಜ್ಯದ ಸ್ವಂತ ಶಿಕ್ಷಣ ನೀತಿಯನ್ನು (SEP) ತರಲು ಸಮಿತಿ ರಚಿಸಿದೆ. ಇನ್ನೊಂದೆಡೆ, ನೂತನವಾಗಿ ಅಧಿಕಾರಕ್ಕೆ ಬಂದಿರುವ ಕೇರಳದ ಯುಡಿಎಫ್ ಸರ್ಕಾರದಲ್ಲಿ ಕೇಂದ್ರದ ‘ಪಿಎಂ ಶ್ರೀ’ (PM SHRI) ಯೋಜನೆಯ ಅನುಷ್ಠಾನದ ಕುರಿತು ತೀವ್ರ ರಾಜಕೀಯ ವಿವಾದಗಳು ಸೃಷ್ಟಿಯಾಗಿದ್ದು, ಕೇಂದ್ರದ ಶಿಕ್ಷಣ ನೀತಿಗಳ ವಿರುದ್ಧ ಕಾಂಗ್ರೆಸ್ ಆಡಳಿತ ರಾಜ್ಯಗಳನ್ನು ಸಂಘಟಿಸಲು ಹೈಕಮಾಂಡ್ ಈಗ ಮುಂದಾಗಿದೆ.


