ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಫಾರಂ ನಂಬರ್ -7 ಸಲ್ಲಿಸುವ ಮೂಲಕ ಅಲ್ಪಸಂಖ್ಯಾತರು, ದಲಿತರು ಮತ್ತು ಬಡವರ ಮತಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಬುಧವಾರ (ಸೆ.30) ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬಿಜೆಪಿ ಹೈಕಮಾಂಡ್ ಮತ್ತು ಸ್ಥಳೀಯ ನಾಯಕರ ನಿರ್ದೇಶನದ ಮೇರೆಗೆ ಫಾರಂ-7 ಸಲ್ಲಿಸಿ ಮತಗಳನ್ನು ಡಿಲೀಟ್ ಮಾಡಿಸುವ ಕುತಂತ್ರ ರಾಜ್ಯದಾದ್ಯಂತ ನಡೆಯುತ್ತಿದೆ ಎಂದು ಸಿಎಂ ಹೇಳಿದ್ದಾರೆ.
“ಇಡೀ ದೇಶ ಎಸ್‌ಐಆರ್ ಪ್ರಕ್ರಿಯೆಯನ್ನು ನೋಡಿ ತಲ್ಲಣಗೊಂಡಿದೆ. ನಾನು ನಿಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ, ಒಬ್ಬ ಪ್ರಜಾಸೇವಕನಾಗಿ ನಿಮ್ಮೆಲ್ಲರ ಮತವನ್ನು ಕಾಪಾಡುವ ಪ್ರಯತ್ನ ಮಾಡುತ್ತಿದ್ದೇನೆ. ಆದರೂ, ಈ ವಿಚಾರದಲ್ಲಿ ವಿಫಲನಾಗಿದ್ದೇನೆ. ಇದನ್ನು ನಾನು ಒಪ್ಪಿಕೊಳ್ಳಲೇಬೇಕಾಗಿದೆ” ಎಂದು ಸಿಎಂ ಹೇಳಿಕೊಂಡಿದ್ದಾರೆ.
“ಎಸ್‌ಐಆರ್‌ನಿಂದ ಸುಮಾರು ಒಂದು ಕೋಟಿಗೂ ಹೆಚ್ಚು ಮತಗಳು ಕಡಿಮೆಯಾಗಿರುವುದು ನೀವೆಲ್ಲ ಗಮನಿಸಿರಬಹುದು. 50 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ಕೊಡಲಾಗ್ತಿದೆ. ಹಕ್ಕು-ಆಕ್ಷೇಪಣೆ ಸಲ್ಲಿಕೆ ಅವಧಿಯಲ್ಲಿ ಕೆಲವು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು, ಬಿಜೆಪಿ ಹೈಕಮಾಂಡ್ ಹಾಗೂ ಸ್ಥಳೀಯ ನಾಯಕರ ನಿರ್ದೇಶನದ ಮೇರೆಗೆ ಅಲ್ಪಸಂಖ್ಯಾತರು, ಬಡವರು, ದಲಿತರ ಮತಗಳನ್ನು ತೆಗೆದು ಹಾಕಲು ಫಾರಂ ನಂಬರ್-7 ಸಲ್ಲಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಮೋಸದಿಂದ ಫಾರಂ-7 ಸಲ್ಲಿಸಿರುವ ಬಗ್ಗೆ ನಮ್ಮ ಅನೇಕ ನಾಯಕರು ದಾಖಲೆಗಳನ್ನು ಕೊಟ್ಟಿದ್ದಾರೆ. ಈ ವಿಚಾರವಾಗಿ ಒಂದು ಸಮಗ್ರವಾದ ತನಿಖೆ ಮತ್ತು ಕಾನೂನು ಚೌಕಟ್ಟಿನಲ್ಲಿ ಕ್ರಿಮಿನಲ್ ತನಿಖೆ ಅಗತ್ಯವಿದೆ” ಎಂದು ಸಿಎಂ ಹೇಳಿದ್ದಾರೆ.
“ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮೆಲ್ಲರ ಮತಗಳನ್ನು ಕಾಪಾಡುವುದು ನನ್ನ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಲ್‌ಎ-1 ಮತ್ತು ಬಿಎಲ್‌ಎ-2ಗಳು ಬಿಎಲ್‌ಒಗಳಿಗೆ ಫಾರಂ-7 ಸಲ್ಲಿಸಿ ವೋಟ್ ಡಿಲೀಟ್ ಮಾಡಿಸುತ್ತಿರುವ ಮಾಹಿತಿಗಳನ್ನು ಕೂಡಲೇ ನನ್ನ ಕಚೇರಿಗೆ ತಲುಪಿಸಿ ಎಂದು ಸಿಎಂ ಸೂಚಿಸಿದ್ದಾರೆ.
“ನಾನು ನಾಳೆ (ಅ.1) ಖುದ್ದಾಗಿ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಚರ್ಚಿಸುತ್ತೇನೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಅನೇಕ ಸಂಗತಿಗಳೊಂದಿಗೆ ಈ ವಿಚಾರವನ್ನು ಬಯಲಿಗೆಳೆಯಲು ನಾನು ಸಿದ್ದನಾಗಿದ್ದೇನೆ” ಎಂದು ತಿಳಿಸಿದ್ದಾರೆ.
“ನಿಮ್ಮೆಲ್ಲರ ಮತಗಳನ್ನು ತೆಗೆದುಹಾಕಲು ಬಿಜೆಪಿ ಕಾರ್ಯಕರ್ತರು, ಅನೇಕ ಚುನಾವಣೆಗಳಲ್ಲಿ ಸೋತವರು ಈ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಹಾಲಿ ಶಾಸಕರ ಕ್ಷೇತ್ರಗಳಲ್ಲೇ ಮತಗಳನ್ನು ಡಿಲೀಟ್ ಮಾಡುವ ಕಾರ್ಯ ಆಗುತ್ತಿದೆ. ಈಶ್ವರ್ ಖಂಡ್ರೆ ಅವರ ಭಾಲ್ಕಿ ವಿಧಾನಸಭಾ ಕ್ಷೇತ್ರ, ನಯನ ಮೋಟಮ್ಮ ಅವರ ಕ್ಷೇತ್ರ, ಮಾಜಿ ಶಾಸಕ ಸೋಮಶೇಖರ್ ಕ್ಷೇತ್ರ, ತನ್ವೀರ್ ಸೇಠ್, ರಾಜು ಸೇಠ್ ಅವರ ಕ್ಷೇತ್ರಗಳಲ್ಲಿ ವೋಡ್ ಡಿಲೀಟ್ ಮಾಡಿಸಲಾಗುತ್ತಿದೆ” ಎಂದು ಸಿಎಂ ವಿವರಿಸಿದ್ದಾರೆ.
“ಇಡೀ ರಾಜ್ಯದಲ್ಲಿ ಇದೊಂದು ದೊಡ್ಡ ಕುತಂತ್ರ ನಡೆಯುತ್ತಿದೆ. ಹಾಗಾಗಿ, ಎಲ್ಲಾ ಕಾಂಗ್ರೆಸ್ ಬಿಎಲ್‌ಎಗಳು ಕೂಡಲೇ ಜಾಗೃತರಾಗಿ ಎಲ್ಲೆಲ್ಲಿ ಫಾರಂ-7 ಸಲ್ಲಿಕೆಯಾಗಿದೆ ಎಂಬುವುದರ ಮಾಹಿತಿ ಕೊಡಿ” ಎಂದು ಮನವಿ ಮಾಡಿದ್ದಾರೆ.


