ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ ಅತ್ಯಂತ ಅಪರೂಪದ ಹಾಗೂ ಕಾನೂನು ತಜ್ಞರ ಹುಬ್ಬೇರಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕರಡು ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ತೆಗೆದುಹಾಕಲು ಸಲ್ಲಿಸಲಾದ ಅರ್ಜಿಗಳಲ್ಲಿ ಸ್ವತಃ ಚುನಾವಣಾಧಿಕಾರಿಗಳೇ ‘ಆಕ್ಷೇಪಕರು’ ಎಂದು ನಮೂದಿಸಿಕೊಂಡಿದ್ದು, ಹೆಸರು ತೆಗೆದುಹಾಕಲು ನೀಡಬೇಕಾದ ಮುಖ್ಯ ‘ಕಾರಣ’ದ ಅಂಕಣವನ್ನೇ ಸಂಪೂರ್ಣವಾಗಿ ಖಾಲಿ ಬಿಟ್ಟಿರುವುದು ಬಹಿರಂಗವಾಗಿದೆ ಎಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.
‘ದಿ ಹಿಂದೂ’ ದಿನಪತ್ರಿಕೆಯು ಪರಿಶೀಲಿಸಿದ ಸಾರ್ವಜನಿಕ ‘ಫಾರ್ಮ್-10’ (ಆಕ್ಷೇಪಣೆಗಳ ಸಾರ್ವಜನಿಕ ವಿವರ) ವರದಿಗಳ ಪ್ರಕಾರ, ಸೆಪ್ಟೆಂಬರ್ 21 ರಿಂದ 27 ರವರೆಗಿನ ಒಂದು ವಾರದ ಅವಧಿಯಲ್ಲಿ ದೆಹಲಿಯಲ್ಲಿ ಒಟ್ಟು 1,997 ಮತದಾರರ ಹೆಸರುಗಳನ್ನು ತೆಗೆದುಹಾಕುವ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಸ್ವತಃ ಚುನಾವಣಾ ನೋಂದಣಿ ಅಧಿಕಾರಿಗಳು (ERO) ಹಾಗೂ ಸಹಾಯಕ ನೋಂದಣಿ ಅಧಿಕಾರಿಗಳು (AERO) ‘ಆಕ್ಷೇಪಕರು’ ಎಂದು ನಮೂದಾಗಿರುವ 25 ಪ್ರಕರಣಗಳಲ್ಲಿ ‘ಆಕ್ಷೇಪಣೆಗೆ ಕಾರಣ’ ತಿಳಿಸುವ ಜಾಗವನ್ನು ಖಾಲಿ ಬಿಡಲಾಗಿದೆ.
ಕ್ಷೇತ್ರವಾರು ವಿವರಗಳನ್ನು ನೋಡುವುದಾದರೆ, ದೆಹಲಿಯ ಸದರ್ ಬಜಾರ್ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ 12 ಪ್ರಕರಣಗಳು ಕಂಡುಬಂದಿದ್ದರೆ, ಮಾಲವೀಯ ನಗರದಲ್ಲಿ 7, ಛತ್ತರ್‌ಪುರದಲ್ಲಿ 4 ಹಾಗೂ ಕಿರಾರಿ ಮತ್ತು ವಿಕಾಸಪುರ ಕ್ಷೇತ್ರಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ. ಕಳೆದ ಆಗಸ್ಟ್ 31 ರಂದು ಪ್ರಕಟಗೊಂಡಿದ್ದ ಕರಡು ಮತದಾರರ ಪಟ್ಟಿಯಲ್ಲಿ ಈ 25 ಮತದಾರರ ವಿವರಗಳಲ್ಲಿ ‘ತಾರ್ಕಿಕ ವ್ಯತ್ಯಾಸ’ (Logical Discrepancy) ಅಥವಾ ‘ವಿಳಾಸ ತಾಳೆಯಾಗದಿರುವುದು’ (No Mapping) ಕಂಡುಬಂದಿದ್ದರಿಂದ ಅವರಿಗೆ ಈಗಾಗಲೇ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿತ್ತು.
ಸಾಮಾನ್ಯ ನಿಯಮಾವಳಿಗಳ ಪ್ರಕಾರ ‘ಫಾರ್ಮ್-7’ ಅನ್ನು ಕ್ಷೇತ್ರದ ಯಾವುದೇ ಸಾಮಾನ್ಯ ಮತದಾರನು ಮತ್ತೊಬ್ಬರ ಅರ್ಹತೆಯನ್ನು ಪ್ರಶ್ನಿಸಲು ಅಥವಾ ಮೃತಪಟ್ಟ ಹಾಗೂ ವಿಳಾಸ ಬದಲಾಯಿಸಿದವರ ಹೆಸರುಗಳನ್ನು ತೆಗೆದುಹಾಕಲು ಬಳಸಬೇಕಾಗುತ್ತದೆ. ಆದರೆ, ಇಲ್ಲಿ ಸ್ವತಃ ಮತದಾರರ ನೋಂದಣಿ ಅಧಿಕಾರಿಗಳೇ ಆಕ್ಷೇಪಕರ ಸ್ಥಾನದಲ್ಲಿ ನಿಂತು, ಯಾವುದೇ ಸ್ಪಷ್ಟ ಕಾರಣವನ್ನು ನಮೂದಿಸದೆ ಅರ್ಜಿ ಪ್ರಕ್ರಿಯೆ ನಡೆಸಿರುವುದು ಮತದಾರರಲ್ಲಿ ಆತಂಕ ಮೂಡಿಸಿದೆ. ‘ಕಾರಣ’ದ ಜಾಗ ಖಾಲಿ ಇದ್ದಾಗ, ಮತದಾರನು ವಿಚಾರಣೆಯ ಸಮಯದಲ್ಲಿ ತನ್ನ ಪರವಾಗಿ ಯಾವ ದಾಖಲೆಯನ್ನು ನೀಡಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಾನೆ. ಇದು ಪ್ರಾಕೃತಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರು, ಅಧಿಕಾರಿಗಳು ತಾವೇ ಆಕ್ಷೇಪಕರಾಗಿ ಫಾರ್ಮ್-7 ಸಲ್ಲಿಸುವ ಅಭ್ಯಾಸವು ಈ ಹಿಂದೆಂದೂ ಕೇಳರಿಯದ್ದು ಎಂದಿದ್ದಾರೆ. ತನಿಖೆ ನಡೆಸಲು ಅಧಿಕಾರಿಗಳಿಗೆ ಸ್ವಯಂಪ್ರೇರಿತ (suo motu) ಅಧಿಕಾರವಿದ್ದರೂ, ನಿಯಮಾವಳಿಗಳ ಪ್ರಕಾರ ಮತದಾರರಿಗೆ ನೀಡುವ ನೋಟಿಸ್‌ನಲ್ಲಿ ಸೂಕ್ತ ಕಾರಣವನ್ನು ನಮೂದಿಸುವುದು ಮತ್ತು ಅವರಿಗೆ ವಿವರಣೆ ನೀಡಲು ಸೂಕ್ತ ಅವಕಾಶ ಕಲ್ಪಿಸುವುದು ಕಡ್ಡಾಯವಾಗಿದೆ. ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯ ‘ಹಕ್ಕುಗಳು ಮತ್ತು ಆಕ್ಷೇಪಣೆಗಳ’ ಹಂತದಲ್ಲಿ ಒಟ್ಟು 4,401 ಆಕ್ಷೇಪಣೆಗಳು ಹಾಗೂ ಸುಮಾರು 1.76 ಲಕ್ಷ ಹೊಸ ಸೇರ್ಪಡೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ವಿಚಾರವಾಗಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಸ್ಪಷ್ಟನೆಯನ್ನು ನಿರೀಕ್ಷಿಸಲಾಗಿದೆ.


