ದೇಶದಲ್ಲಿ ಜಾರಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಅಡಿಯಲ್ಲಿ ಲಕ್ಷಾಂತರ ನಾಗರಿಕರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದ್ದು, ಇದರಿಂದ “ಪ್ರಜಾಪ್ರಭುತ್ವ ಹಾಗೂ ನಾಗರಿಕರ ಮತದಾನದ ಹಕ್ಕು ತೀವ್ರ ಅಪಾಯದಲ್ಲಿದೆ” ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ‘ಸಂವಿಧಾನ ಮತ್ತು ಸಾಮಾನ್ಯ ಮನುಷ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್, ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಬಹಿರಂಗವಾಗಿ ಪ್ರಶ್ನಿಸಿದರು. ಉದಾಹರಣೆಯಾಗಿ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಅವರು, “ಅಲ್ಲಿ ಸುಮಾರು 90 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇದು ನಾಗರಿಕರನ್ನು ಅಕ್ರಮವಾಗಿ ಮತದಾನದ ಹಕ್ಕಿನಿಂದ ಹೊರದಬ್ಬುವ ಪ್ರಕ್ರಿಯೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪೈಕಿ ಮೇಲ್ಮನವಿ ಸಲ್ಲಿಸಿದ ಪ್ರಕರಣಗಳನ್ನು ಪರಿಶೀಲಿಸಿದಾಗ ಶೇ. 93 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆಯೋಗದ ಲೋಪ ಸಾಬೀತಾಗಿ ಮತದಾರರಿಗೆ ಹಕ್ಕು ಮರಳಿ ಸಿಕ್ಕಿದೆ ಎಂದು ಬೆಟ್ಟು ಮಾಡಿದ ನಾರಿಮನ್, “ಇಷ್ಟೊಂದು ಬೃಹತ್ ಮಟ್ಟದಲ್ಲಿ ನಿರ್ಲಕ್ಷ್ಯ ವಹಿಸುವ ಅಥವಾ ತಪ್ಪಾಗಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗದಿಂದ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯಾಗುತ್ತಿದೆ” ಎಂದು ಅಭಿಪ್ರಾಯಪಟ್ಟರು.
ನ್ಯಾಯಮೂರ್ತಿ ನಾರಿಮನ್ ಅವರ ಈ ಹೇಳಿಕೆಗಳನ್ನು ಉಲ್ಲೇಖಿಸಿ ತನ್ನ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಪ್ರಸ್ತುತ ಚುನಾವಣಾ ಆಯೋಗವು ಸ್ವತಂತ್ರವಾಗಿ ಕೆಲಸ ಮಾಡದೆ ಸರ್ಕಾರದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ. ಸಂವಿಧಾನ ಮತ್ತು ಮತದಾನದ ಹಕ್ಕನ್ನು ರಕ್ಷಿಸಲು ದೇಶದ ವೈದ್ಯರು, ಎಂಜಿನಿಯರ್‌ಗಳು, ವಕೀಲರು ಸೇರಿದಂತೆ ನಾಗರಿಕ ಸಮಾಜದ ಪ್ರಜ್ಞಾವಂತ ಸದಸ್ಯರು ಮುಕ್ತವಾಗಿ ಧ್ವನಿ ಎತ್ತಬೇಕೆಂದು ಕಾಂಗ್ರೆಸ್ ಕರೆ ನೀಡಿದೆ.
ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿಯೊಬ್ಬರು ನೇರ ಕಳವಳ ವ್ಯಕ್ತಪಡಿಸಿರುವುದು ಪ್ರಸ್ತುತ ರಾಜಕೀಯ ಮತ್ತು ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.


