ದಲಿತರು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವ ‘ದಲಿತ್ ಆದಿವಾಸಿ ಶಕ್ತಿ ಅಧಿಕಾರ್ ಮಂಚ್’ (ಡಿಎಎಸ್‌ಎಎಂ) ಸಂಸ್ಥೆಯ ಪ್ರಕಾರ, ಈ ವರ್ಷದ ಜನವರಿಯಿಂದ ಅಕ್ಟೋಬರ್ ನಡುವೆ ಭಾರತದಾದ್ಯಂತ ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ಗೆ (ಕೈಯಿಂದ ಮಲಹೊರುವ ಅಥವಾ ಒಳಚರಂಡಿ ಸ್ವಚ್ಛಗೊಳಿಸುವ ಕೆಲಸ) ಸಂಬಂಧಿಸಿದಂತೆ ಒಟ್ಟು 125 ಸಾವುಗಳು ವರದಿಯಾಗಿವೆ.
ಡಿಎಎಸ್‌ಎಮ್ ಸಂಸ್ಥೆಯು ನೈರ್ಮಲ್ಯ ಕೆಲಸ, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಿಕೆ, ಒಳಚರಂಡಿ ಸಂಸ್ಕರಣಾ ಮೂಲಭೂತ ಸೌಕರ್ಯಗಳು, ಸೀಮಿತ ಸ್ಥಳ ಪ್ರವೇಶ, ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳ ಸಂದರ್ಭದಲ್ಲಿ ಸಂಭವಿಸಿದ ಸಾವುಗಳನ್ನು ದಾಖಲಿಸಿದೆ.
ರಕ್ಷಣಾ ಪರಿಕರಗಳ ಅಲಭ್ಯತೆಯಿಂದಾಗಿ ಈ ಸಾವುಗಳು ಒಂದೇ ಬಾರಿಗೆ ನಡೆದ ಘಟನೆಗಳಲ್ಲ, ಬದಲಿಗೆ ಮರುಕಳಿಸುತ್ತಿರುವ ಪ್ರಕರಣಗಳಾಗಿವೆ. ಈ ಸಾವುಗಳು ಕಾರ್ಖಾನೆ, ಕೈಗಾರಿಕಾ ಘಟಕಗಳು, ವಸತಿ ಸಂಕೀರ್ಣಗಳು, ನಿರ್ಮಾಣ ಸ್ಥಳಗಳು, ಒಳಚರಂಡಿ ಶುದ್ಧೀಕರಣ ಘಟಕಗಳು, ಒಳಚರಂಡಿ ಮಾರ್ಗಗಳು ಮತ್ತು ಇತರ ಸಾರ್ವಜನಿಕ ಹಾಗೂ ಖಾಸಗಿ ಮೂಲಭೂತ ಸೌಕರ್ಯಗಳಲ್ಲಿ ಸಂಭವಿಸುತ್ತಿವೆ.
ಜುಲೈ ತಿಂಗಳಲ್ಲಿ ಗರಿಷ್ಠ 28 ಸಾವುಗಳು ಸಂಭವಿಸಿದ್ದು, ನಂತರದ ಸ್ಥಾನಗಳಲ್ಲಿ ಮಾರ್ಚ್ (25) ಮತ್ತು ಜೂನ್ (20) ಇವೆ. ಫೆಬ್ರವರಿಯಲ್ಲಿ 1 ಹಾಗೂ ಸೆಪ್ಟೆಂಬರ್‌ನಲ್ಲಿ 9 ಸಾವುಗಳು ವರದಿಯಾಗಿವೆ. ಇದನ್ನು ಗಮನಿಸಿದರೆ ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಸಾವುಗಳು ಹೆಚ್ಚಾಗಿರುವುದು ಕಂಡುಬರುತ್ತದೆ.
ಈ ಪಟ್ಟಿಯಲ್ಲಿ ಬಿಹಾರ 14 ಸಾವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು (12), ಹರಿಯಾಣ (11) ಮತ್ತು ಉತ್ತರ ಪ್ರದೇಶ (10) ತದನಂತರದ ಸ್ಥಾನಗಳಲ್ಲಿವೆ. ಕೇರಳದಲ್ಲಿ ಕೇವಲ 1 ಸಾವು ವರದಿಯಾಗಿದೆ.
ಗುಂಡಿಯೊಳಗೆ ಒಬ್ಬರು ಬಿದ್ದರೆ ಮತ್ತೊಬ್ಬರು ರಕ್ಷಣೆಗೆ ಧಾವಿಸುತ್ತಾರೆ
ವರದಿಯು ದಾಖಲಿಸಿರುವ ಹಲವಾರು ಘಟನೆಗಳಲ್ಲಿ ಒಂದು ಆತಂಕಕಾರಿ ಪುನರಾವರ್ತಿತ ಮಾದರಿ ಕಂಡುಬಂದಿದೆ; ಅದೇ ರಕ್ಷಣಾ ಸರಪಳಿ ಸಾವುಗಳು. ಒಬ್ಬ ಕಾರ್ಮಿಕ ವಿಷಕಾರಿ ಹಾಗೂ ಸೀಮಿತ ಜಾಗಕ್ಕೆ ಪ್ರವೇಶಿಸಿ ಉಸಿರುಗಟ್ಟಿ ಅಪ್ರಜ್ಞಾಪೂರ್ವಕ ಸ್ಥಿತಿಗೆ ತಲುಪಿದಾಗ, ಸಹೋದ್ಯೋಗಿ ಆತನನ್ನು ರಕ್ಷಿಸಲು ಅದೇ ಜಾಗಕ್ಕೆ ಇಳಿಯುತ್ತಾನೆ. ಈ ಕಾರ್ಮಿಕರಿಗೆ ಯಾವುದೇ ರೀತಿಯ ರಕ್ಷಣಾ ಪರಿಕರಗಳನ್ನು ಮಾಲೀಕರು ನೀಡಿರುವುದಿಲ್ಲ. ಇದರ ಪರಿಣಾಮವಾಗಿ ಹೆಚ್ಚಾಗಿ ಬಹು ಸಾವುಗಳು ಸಂಭವಿಸುತ್ತವೆ.
ಮಾರ್ಚ್‌ನಲ್ಲಿ ಇಂದೋರ್‌ನ ಚೋಯಿರಾಮ್ ತರಕಾರಿ ಮಂಡಿಯಲ್ಲಿ, ಮ್ಯಾನುಯಲ್ ಸ್ಕ್ಯಾವೆಂಜರ್ ಕರಣ್ ಎಂಬವರು ಸ್ವಚ್ಛತೆಗಾಗಿ ಒಳಚರಂಡಿಗೆ ಪ್ರವೇಶಿಸಿದ್ದು, ಅಲ್ಲಿನ ವಿಷಕಾರಿ ಅನಿಲಗಳಿಂದಾಗಿ ತಕ್ಷಣ ಪ್ರಜ್ಞೆ ತಪ್ಪಿ ಬಿದ್ದರು. ಆತನನ್ನು ರಕ್ಷಿಸುವ ಪ್ರಯತ್ನದಲ್ಲಿ ಅಜಯ್ ಎಂಬವರು ಕೂಡ ಅದೇ ಗುಂಡಿಯೊಳಗೆ ಪ್ರವೇಶಿಸಿ ವಿಷಕಾರಿ ವಾತಾವರಣಕ್ಕೆ ಸಿಲುಕಿದರು. ಪರಿಣಾಮವಾಗಿ ಇಬ್ಬರೂ ಕಾರ್ಮಿಕರು ಸಾವನ್ನಪ್ಪಿದರು.
ಅದೇ ತಿಂಗಳಲ್ಲಿ ರಾಯ್‌ಪುರದಲ್ಲೂ ಮೂರು ಸಾವುಗಳು ವರದಿಯಾಗಿವೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಅಪಾಯಕಾರಿ ಶುಚಿಗೊಳಿಸುವಿಕೆ ಕೆಲಸದ ವೇಳೆ 20 ಅಡಿ ಆಳದ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದ ಅನ್ಮೋಲ್ ಮಾಂಝಿ (25), ಗೋವಿಂದ್ ಸೇಂದ್ರೆ (35) ಮತ್ತು ಸತ್ಯಮ್ ಕುಮಾರ್ (22) ಸಾವನ್ನಪ್ಪಿದರು.
ನಾಲ್ಕನೇ ಕಾರ್ಮಿಕನೂ ಕೂಡ ಟ್ಯಾಂಕ್‌ಗೆ ಇಳಿದು ತೀವ್ರವಾಗಿ ಗಾಯಗೊಂಡರಾದರೂ ಪ್ರಾಣಾಪಾಯದಿಂದ ಪಾರಾದರು.
ಇವರಾರ ಬಳಿಯೂ ಯಾವುದೇ ರಕ್ಷಣಾ ಪರಿಕರಗಳು ಅಥವಾ ಸುರಕ್ಷತಾ ಸಾಧನಗಳಿರಲಿಲ್ಲ. ವಿಶೇಷವೆಂದರೆ, ಇದು ಸಂಪೂರ್ಣ ಸ್ವಚ್ಛತೆಯ ವಾತಾವರಣದಲ್ಲಿ ಕಾರ್ಯನಿರ್ವಹಿಸಬೇಕಾದ ಆಸ್ಪತ್ರೆಯ ಆವರಣದಲ್ಲೇ ಸಂಭವಿಸಿದೆ.
ಗುಜರಾತ್‌ನಲ್ಲಿ, ಕೃಷ್ಣ ರಾಯ್ (28) ಎಂಬುವವರು ತೀವ್ರ ಕಡಿಮೆ ಆಮ್ಲಜನಕ ಮತ್ತು ವಿಷಕಾರಿ ಅನಿಲ ಸಂಗ್ರಹದಿಂದ ಪ್ರಜ್ಞೆತಪ್ಪಿದರು. ಕೃಷ್ಣ ಅವರನ್ನು ರಕ್ಷಿಸಲು ದಿಲೀಪ್ ದಾಸ್ (28) ಟ್ಯಾಂಕ್‌ಗೆ ಇಳಿದು ಪ್ರಜ್ಞೆ ಕಳೆದುಕೊಂಡರು.
ನಂತರ ಕಟ್ಟಡ ಮಾಲೀಕರಾದ 40 ವರ್ಷದ ಜೋಸೋಕ್ ರಾಭಾ ಅವರು ಕೃಷ್ಣ ಮತ್ತು ದಿಲೀಪ್ ಅವರನ್ನು ರಕ್ಷಿಸಲು ಮುಂದಾಗಿ ಒಳಗೆ ಇಳಿದರು. ಇವರನ್ನು ಅನುಸರಿಸಿ 25 ವರ್ಷದ ಬಾಜ್‌ಪೇಯಿ ರಾಭಾ ಕೂಡ ಇಳಿದರು. ಅಂತಿಮವಾಗಿ ಕೃಷ್ಣ, ದಿಲೀಪ್ ಮತ್ತು ಜೋಸೋಕ್ ರಾಭಾ ಸಾವನ್ನಪ್ಪಿದರೆ, ರಾಭಾ ಅವರನ್ನು ಐಸಿಯುಗೆ ದಾಖಲಿಸಲಾಯಿತು.
ಚತ್ತೀಸ್‌ಗಢ, ಮಧ್ಯಪ್ರದೇಶ, ಅಸ್ಸಾಂ, ಉತ್ತರ ಪ್ರದೇಶ, ಮಿಜೋರಾಂ ಮತ್ತು ತಮಿಳುನಾಡಿನಲ್ಲಿ ಸಹೋದ್ಯೋಗಿಗಳನ್ನು ರಕ್ಷಿಸಲು ಹೋಗಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯು ಈ ರಕ್ಷಣಾ ಸರಪಳಿ ಸಾವುಗಳನ್ನು ಅತ್ಯಂತ ಗಂಭೀರವಾದ ಮಾದರಿ ಎಂದು ಕರೆಯುತ್ತದೆ.
ತಕ್ಷಣ ಲಭ್ಯವಿರುವ ತರಬೇತಿ ಪಡೆದ ರಕ್ಷಣಾ ತಂಡದ ಅನುಪಸ್ಥಿತಿಯು ಸಹೋದ್ಯೋಗಿಗಳನ್ನು ಅನಿವಾರ್ಯವಾಗಿ ರಕ್ಷಕರನ್ನಾಗಿ ಮಾಡುವಂತೆ ಒತ್ತಾಯಿಸುತ್ತದೆ; ಇದು ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆಗಳು ಉದಾಹರಣೆಯಾಗಿವೆ.
ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅಡಿಯಲ್ಲಿ ದಾಖಲಾಗದ ಸಾವುಗಳು
ಕಳೆದ ವರ್ಷ ಜನವರಿ 29 ರಂದು ಭಾರತದ ಸುಪ್ರೀಂ ಕೋರ್ಟ್ ಪ್ರಮುಖ ನಗರಗಳಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಮತ್ತು ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್‌ಗಳ ಅಪಾಯಕಾರಿ ಕೈಯಿಂದ ಶುಚಿಗೊಳಿಸುವಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತು. ಈ ಕೆಲಸವು ಅಮಾನವೀಯವಾಗಿದ್ದು, ಇದು ಸಂವಿಧಾನದ 17 ಮತ್ತು 21 ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಗಮನಿಸಿದ ಸರ್ವೋಚ್ಛ ನ್ಯಾಯಾಲಯವು ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ನಿರ್ದೇಶನ ನೀಡಿತ್ತು.
ಅದರ ಹೊರತಾಗಿಯೂ, ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸಗಳು ನಡೆದಿರುವುದು ಬಹಳ ಕಡಿಮೆ. ಸಾವುಗಳು ಮುಂದುವರಿದಿವೆ, ಆದರೆ ಅವು ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳನ್ನು ಶುಚಿಗೊಳಿಸುವಾಗ ವಿಷಕಾರಿ ಅನಿಲಗಳನ್ನು ಸೇವಿಸಿ ಅಥವಾ ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ನಿಂದ ಸಂಭವಿಸಿದವು ಎಂದು ದಾಖಲಾಗುವುದಿಲ್ಲ. ಬದಲಿಗೆ ಕಾರ್ಮಿಕರ ಅಧಿಕೃತ ಉದ್ಯೋಗ ಅಥವಾ ಸಂಸ್ಥೆಯ ಪ್ರಕಾರ ಈ ಸಾವುಗಳನ್ನು ದಾಖಲಿಸಲಾಗುತ್ತದೆ.
ಉದಾಹರಣೆಗೆ, ಅಧಿಕೃತವಾಗಿ ನಿರ್ಮಾಣ ಕಾರ್ಮಿಕ ಅಥವಾ ಕಾರ್ಖಾನೆ ಕಾರ್ಮಿಕ ಎಂದು ಹೇಳಲಾದ ವ್ಯಕ್ತಿಯನ್ನು ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸಲು ಕಳುಹಿಸಲಾಗುವುದಿಲ್ಲ. ಆದ್ದರಿಂದ, ಅಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿರುವುದಿಲ್ಲ.
ನಿಜವಾದ ಕೆಲಸ ಮತ್ತು ಅಪಾಯಕಾರಿ ವಾತಾವರಣವೇ ಸಾವಿಗೆ ಕಾರಣವಾಗಿರುವುದರಿಂದ ಈ ಸಾವುಗಳನ್ನು ನೈರ್ಮಲ್ಯ/ಸೀಮಿತ ಸ್ಥಳದ ಸಾವುಗಳು ಎಂದು ಗುರುತಿಸಬೇಕು ಎಂದು ಡಿಎಎಸ್‌ಎಮ್ ವರದಿ ವಾದಿಸುತ್ತದೆ.
ಸತ್ತವರೆಲ್ಲಾ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರು
ವರದಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಸಂತ್ರಸ್ತರು ದಲಿತರು, ಆದಿವಾಸಿಗಳು ಅಥವಾ ಮುಸ್ಲಿಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಗುತ್ತಿಗೆ ಅಥವಾ ಅಲ್ಪಾವಧಿಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದರಿಂದ ಜಾತಿ ಆಧಾರಿತ ಉದ್ಯೋಗ ಅಸಮಾನತೆ ಮತ್ತಷ್ಟು ಹೆಚ್ಚಾಗಿದೆ ಎಂದು ಡಿಎಎಸ್‌ಎಮ್ ತಿಳಿಸಿದೆ. ಹೆಚ್ಚಿನ ಕಾರ್ಮಿಕರು ಕಾರ್ಮಿಕ ಸಮುದಾಯಗಳಿಂದ ಬಂದವರು ಅಥವಾ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರಾಗಿದ್ದಾರೆ. ಗುತ್ತಿಗೆ ಪದ್ಧತಿಯು ಕಾರ್ಮಿಕರನ್ನು ಕಡಿಮೆ ಗೋಚರಿಸುವಂತೆ ಮಾಡುತ್ತದೆ, ಮಾಲೀಕರ ಹೊಣೆಗಾರಿಕೆಯ ಸರಪಳಿಯನ್ನು ದುರ್ಬಲಗೊಳಿಸುತ್ತದೆ.
“ಮಧ್ಯವರ್ತಿಗಳ ಮೂಲಕ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ, ನಗದು ರೂಪದಲ್ಲಿ ಹಣ ನೀಡಲಾಗುತ್ತದೆ, ಯಾವುದೇ ಲಿಖಿತ ಒಪ್ಪಂದವಿರುವುದಿಲ್ಲ ಮತ್ತು ಕನಿಷ್ಠ ಅಥವಾ ಯಾವುದೇ ತರಬೇತಿ ನೀಡುವುದಿಲ್ಲ. ಅವರಿಗೆ ಯಾವುದೇ ವಿಮೆ, ವೃತ್ತಿಪರ ಆರೋಗ್ಯ ರಕ್ಷಣೆ, ಸಾಮಾಜಿಕ ಭದ್ರತೆ ಅಥವಾ ಪರಿಣಾಮಕಾರಿ ಕುಂದುಕೊರತೆ ನಿವಾರಣಾ ವ್ಯವಸ್ಥೆ ಇರುವುದಿಲ್ಲ” ಎಂದು ವರದಿ ಹೇಳುತ್ತದೆ.
ಹೀಗಾಗಿ, ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಮತ್ತು ಅಪಾಯಕಾರಿ ಕೈಯಿಂದ ನೈರ್ಮಲ್ಯ ಕೆಲಸವನ್ನು ಜಾತಿ ಶ್ರೇಣಿ, ಅಸ್ಪೃಶ್ಯತೆ, ರಚನಾತ್ಮಕ ಹಿಂಸಾಚಾರ, ಆರ್ಥಿಕ ಬಲಪ್ರಯೋಗ, ಸಾಂಸ್ಥಿಕ ಅಸಮಾನತೆ, ಗುತ್ತಿಗೆದಾರರ ಶೋಷಣೆ ಮತ್ತು ಘನತೆಯ ನಿರಾಕರಣೆಯ ಸಮಸ್ಯೆಯಾಗಿ ಈ ವರದಿ ನೋಡುತ್ತದೆ.
ಕುಟುಂಬಗಳ ಕಥೆಯನ್ನು ನೋಡುವುದಾದರೆ, ಮನೆಯ ಒಡೆಯನನ್ನು ಕಳೆದುಕೊಂಡ ಸದಸ್ಯರಿಗೆ ಕೇವಲ ಕಣ್ಣೀರು ಮಾತ್ರ ಉಳಿದಿದೆ; ಇಷ್ಟಕ್ಕೇ ಕೊನೆಗೊಳ್ಳುವುದಿಲ್ಲ. ಅಧಿಕೃತ ದಾಖಲೆಗಳನ್ನು ಪಡೆಯುವುದು, ಎಫ್‌ಐಆರ್ (ಎಫ್‌ಐಆಎರ್) ಮತ್ತು ಮರಣೋತ್ತರ ಪರೀಕ್ಷಾ ವರದಿಗಳನ್ನು ನೋಂದಾಯಿಸುವಲ್ಲಿ ವಿಳಂಬವಾಗುವುದು, ಪರಿಹಾರ ಮತ್ತು ಪುನರ್ವಸತಿಗಾಗಿ ಆಡಳಿತಾತ್ಮಕ ಪ್ರಕ್ರಿಯೆಗಳೊಂದಿಗೆ ಸುದೀರ್ಘ ಹೋರಾಟ ನಡೆಸಬೇಕಾಗುತ್ತದೆ.
ಬದುಕುಳಿದವರಿಗೆ ಆಸ್ಪತ್ರೆಗಳಲ್ಲಿ ಅಂತ್ಯವಿಲ್ಲದ ಕಾಯುವಿಕೆ ಇರುತ್ತದೆ. ಅವರು ಉಸಿರಾಟದ ಕಾಯಿಲೆಗಳು, ಶ್ವಾಸಕೋಶದ ಹಾನಿ, ಚರ್ಮದ ಕಾಯಿಲೆಗಳು, ಸುಟ್ಟ ಗಾಯಗಳು, ನರಗಳ ಸಮಸ್ಯೆಗಳು, ದೀರ್ಘಕಾಲದ ಸೋಂಕುಗಳು ಮತ್ತು ಮಾನಸಿಕಾಘಾತವನ್ನು ಅನುಭವಿಸುತ್ತಾರೆ. ಇಷ್ಟೆಲ್ಲಾ ಆದರೂ ನೈರ್ಮಲ್ಯ ಕಾರ್ಮಿಕರಿಗೆ ವೃತ್ತಿಪರ ಆರೋಗ್ಯ ಮೇಲ್ವಿಚಾರಣೆ ಮಾತ್ರ ಇನ್ನೂ ಅಪೂರ್ಣವಾಗಿಯೇ ಉಳಿದಿದೆ.
ಯಂತ್ರಗಳ ಬಳಕೆ, ಕ್ರಮಿನಲ್ ಪ್ರಕರಣಗಳು ಮತ್ತು ಪರಿಹಾರ
ಅಪಾಯಕಾರಿ ಸೀಮಿತ ಸ್ಥಳ ಪ್ರವೇಶಕ್ಕೆ ಸಂಬಂಧಿಸಿದ ಪ್ರತಿಯೊಂದು ಸಾವಿನ ಬಗ್ಗೆ ಸ್ವತಂತ್ರ ಮತ್ತು ಕಾಲಮಿತಿಯ ತನಿಖೆ ನಡೆಸುವುದು ಹಾಗೂ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಕ್ರಮಿನಲ್ ಪ್ರಕರಣಗಳನ್ನು ದಾಖಲಿಸುವುದು ಸೇರಿದಂತೆ 18 ಕ್ರಮಗಳನ್ನು ಡಿಎಎಸ್‌ಎಮ್ ವರದಿ ಪ್ರಸ್ತಾಪಿಸಿದೆ.
ತಾಂತ್ರಿಕವಾಗಿ ಎಲ್ಲಿ ಸಾಧ್ಯವೋ ಅಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವಿಕೆಯನ್ನು ಸರ್ಕಾರವು ಸಂಪೂರ್ಣವಾಗಿ ಯಂತ್ರಗಳ ಮೂಲಕ ಮಾಡಬೇಕು; ರಾಷ್ಟ್ರವ್ಯಾಪಿ ನೈರ್ಮಲ್ಯ-ಸುರಕ್ಷತಾ ಲೆಕ್ಕಪರಿಶೋಧನೆ ನಡೆಸಬೇಕು.
ಸೀಮಿತ ಜಾಗಕ್ಕೆ ಪ್ರವೇಶಿಸುವ ಮೊದಲು ಆಮ್ಲಜನಕ ಮತ್ತು ವಿಷಕಾರಿ ಅನಿಲ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು. ಸರಿಯಾದ ತರಬೇತಿ ಪಡೆದ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿರಬೇಕು.
ಮಾಲೀಕರು, ಗುತ್ತಿಗೆದಾರರು, ಆಸ್ತಿ ಮಾಲೀಕರು ಮತ್ತು ಜವಾಬ್ದಾರಿಯುತ ಅಧಿಕಾರಿಗಳಿಗೆ ಕ್ರಮಿನಲ್ ಹೊಣೆಗಾರಿಕೆ ಇರಬೇಕು. ಮುಖ್ಯವಾಗಿ ನೈರ್ಮಲ್ಯ ಸಾವುಗಳನ್ನು ಸರಿಯಾಗಿ ವರ್ಗೀಕರಿಸಬೇಕು.
ಸಂತ್ರಸ್ತ ಕುಟುಂಬಗಳಿಗೆ ಕನಿಷ್ಠ 30 ಲಕ್ಷ ರೂ.ಗಳ ಕನಿಷ್ಠ ಪರಿಹಾರ, ಸರ್ಕಾರಿ ಉದ್ಯೋಗ ಮತ್ತು ಅರ್ಹ ಅವಲಂಬಿತರಿಗೆ ಸಮಗ್ರ ಪುನರ್ವಸತಿ ಕಲ್ಪಿಸಬೇಕೆಂದು ಅದು ಒತ್ತಾಯಿಸಿದೆ. ಇದರೊಂದಿಗೆ ಸಂತ್ರಸ್ತ ಕುಟುಂಬಗಳಿಗೆ ವಸತಿ, ಪಿಂಚಣಿ, ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯ ಬೆಂಬಲವನ್ನು ನೀಡಬೇಕು.
ಮೇಲ್ವಿಚಾರಣಾ ಸಮಿತಿಗಳು ಇರಬೇಕು, ನಿಯಮ ಉಲ್ಲಂಘಿಸುವವರ ಗುತ್ತಿಗೆಯನ್ನು ಕಪ್ಪುಪಟ್ಟಿಗೆ ಸೇರಿಸುವುದು ಅಥವಾ ರದ್ದುಗೊಳಿಸುವುದು ಮಾಡಬೇಕು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಾವುಗಳು ಹಾಗೂ ಗಾಯಗಳ ಬಗ್ಗೆ ಪಾರದರ್ಶಕ ರಾಷ್ಟ್ರೀಯ ಡೇಟಾಬೇಸ್ ಸಿದ್ಧಪಡಿಸಬೇಕು.


