ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ದಲಿತ ಮಹಿಳೆ ಮತ್ತು ಆಕೆಯ ಪತಿ ಮೇಲೆ ದುಷ್ಕರ್ಮಿಗಳು ಲಾಠಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಸ್ಥಳೀಯ ವ್ಯಕ್ತಿಯೊಬ್ಬರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಹಲ್ಲೆಯಿಂದ ಇಬ್ಬರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ದಂಪತಿ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಲಾಗಿದ್ದು, ಈ ಘಟನೆಯು ಮಹಿಳೆ ದಾಖಲಿಸಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಸಂತ್ರತೆಯ ಕುಟುಂಬ ಆರೋಪಿಸಿದೆ.
ಜಮೀನು ವಿವಾದದ ಬಳಿಕ ಮಹಿಳೆಯಿಂದ ಅತ್ಯಾಚಾರ ಆರೋಪ:
ತಮ್ಮ ಗ್ರಾಮದ ವ್ಯಕ್ತಿಯೊಬ್ಬರೊಂದಿಗೆ ಜಮೀನು ವಿವಾದವಿತ್ತು ಎಂದು ಮಹಿಳೆ ತಿಳಿಸಿದ್ದಾರೆ. ಈ ವಿವಾದವನ್ನು ಬಗೆಹರಿಸಿಕೊಳ್ಳಲು ಸಹಾಯ ಕೋರಿ ಅವರು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದರು. ನನಗೆ ಪ್ರಜ್ಞೆ ತಪ್ಪಿಸುವ ಪದಾರ್ಥವನ್ನು ನೀಡಿ, ಆ ವ್ಯಕ್ತಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅವರ ದೂರಿನ ಮೇರೆಗೆ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಾಗಿದ್ದು, ಸದ್ಯ ತನಿಖೆ ನಡೆಯುತ್ತಿದೆ.
ಅತ್ಯಾಚಾರ ಪ್ರಕರಣ ದಾಖಲಾದ ನಂತರ ಆರೋಪಿಗಳ ಕಡೆಯವರು ತಮ್ಮ ವಿರುದ್ಧ ದ್ವೇಷ ಸಾಧಿಸಲು ಆರಂಭಿಸಿದ್ದರು ಎಂದು ಸಂತ್ರತೆಯ ಕುಟುಂಬ ಆರೋಪಿಸಿದೆ.
ಮಂಗಳವಾರ ಬೆಳಿಗ್ಗೆ ಕೆಲ ವ್ಯಕ್ತಿಗಳು ವಿವಾದದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಆಕೆಯ ಪತಿ ಮೇಲೆ ಲಾಠಿಗಳಿಂದ ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ಗಾಯಗಳಾಗಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ.


