Homeದಲಿತ್ ಫೈಲ್ಸ್ಹಳೆಯ ವಿದ್ಯಾರ್ಥಿಗೆ 'ದಲಿತ ಅಸ್ಪೃಶ್ಯ ಮೂರ್ಖ' ಎಂದು ನಿಂದನೆ; ಕ್ಷಮೆಯಾಚನೆಯೊಂದಿಗೆ ಪ್ರಕರಣ ಮುಕ್ತಾಯಕ್ಕೆ ಪ್ರಯತ್ನ

ಹಳೆಯ ವಿದ್ಯಾರ್ಥಿಗೆ ‘ದಲಿತ ಅಸ್ಪೃಶ್ಯ ಮೂರ್ಖ’ ಎಂದು ನಿಂದನೆ; ಕ್ಷಮೆಯಾಚನೆಯೊಂದಿಗೆ ಪ್ರಕರಣ ಮುಕ್ತಾಯಕ್ಕೆ ಪ್ರಯತ್ನ

ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ನಿಂದನೆ; ದಲಿತ ವಿದ್ಯಾರ್ಥಿ ಆರೋಪ

- Advertisement -
- Advertisement -

ಹೈದರಾಬಾದ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಜಯ್ ರಾಮದಾಸ್ ಮಂಡಲಾ ಅವರು ಇಮೇಲ್ ಮೂಲಕ ತಮ್ಮನ್ನು ‘ದಲಿತ ಅಸ್ಪೃಶ್ಯ ಮೂರ್ಖ’ ಎಂದು ನಿಂದಿಸಿದ್ದಾರೆ ಮತ್ತು ಬಿಹಾರ ಹಾಗೂ ಜಾರ್ಖಂಡ್‌ನ ವಿದ್ಯಾರ್ಥಿಗಳನ್ನು ‘ಮೂರನೇ ದರ್ಜೆಯ, ಬಡತನದಿಂದ ಬಳಲುತ್ತಿರುವ ಮೂರ್ಖರು’ ಎಂದು ಕರೆದಿದ್ದಾರೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯೊಬ್ಬರು ಅಧಿಕೃತ ದೂರು ದಾಖಲಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ 2017-19ರ ಅವಧಿಯಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುಬೋಧ್ ಕುಮಾರ್ ಅವರು ಪ್ರಸ್ತುತ ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸುತ್ತಿದ್ದಾರೆ. ಅಕ್ಟೋಬರ್ 31, 2026ರಂದು ಅವರು ವಿಶ್ವವಿದ್ಯಾಲಯದ ಕುಲಪತಿ, ಸಂಶೋಧನಾ ಕೇಂದ್ರ (ಆರ್‌ಸಿ) ಮತ್ತು ವಿದ್ಯಾರ್ಥಿ ಸಂಘಕ್ಕೆ ಪತ್ರ ಬರೆದು, ಪ್ರಾಧ್ಯಾಪಕರ ವಿರುದ್ಧ ಸಾಂಸ್ಥಿಕ ಹಾಗೂ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದೂರಿನ ಪ್ರಕಾರ, ಈ ವರ್ಷದ ಆರಂಭದಲ್ಲಿ ಸುಬೋಧ್‌ ಕುಮಾರ್ ಮತ್ತು ವಿಶ್ವವಿದ್ಯಾಲಯದ ಇತರ ಕೆಲವು ಹಳೆಯ ವಿದ್ಯಾರ್ಥಿಗಳು ಡಾ. ಮಂಡಲಾ ಅವರೊಂದಿಗೆ ಸಂಪಾದಿತ ಪುಸ್ತಕವೊಂದರ ಸಿದ್ಧತೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ, ಭಾರತದ ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದ ಬ್ರಿಟಿಷ್ ವಿಶ್ವವಿದ್ಯಾಲಯಗಳ ನಿಯಮಾವಳಿಗಳ ಬಗ್ಗೆ ಪುಸ್ತಕದ ಒಬ್ಬ ಲೇಖಕರು ಪ್ರಾಧ್ಯಾಪಕರಿಗೆ ಮಾಹಿತಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಏಪ್ರಿಲ್ 16, 2026ರಂದು ಪ್ರಾಧ್ಯಾಪಕರು ಅಂಚಿನ ಸಮುದಾಯಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ಇಮೇಲ್ ಕಳುಹಿಸಿದ್ದಾರೆ ಎಂದು ಸುಬೋಧ್‌ ಆರೋಪಿಸಿದ್ದಾರೆ.

ಇಮೇಲ್‌ನಲ್ಲಿ ಏನಿದೆ?

ಡಾ. ಮಂಡಲಾ ಅವರ ಅಧಿಕೃತ ಇಮೇಲ್ ಖಾತೆಯಿಂದ ಕಳುಹಿಸಲಾದ ಈ ಪತ್ರದ ಕೊನೆಯಲ್ಲಿ, ‘ಡಾ. ವಿಜಯ ರಾಮದಾಸ್ ಎಂ., ಪಿಎಚ್‌ಡಿ (ಇತಿಹಾಸ), ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ, ಯುಕೆ, ಹೈದರಾಬಾದ್ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಶಾಲೆಯ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ’ ಎಂದು ಸಹಿ ಮಾಡಲಾಗಿದೆ. ಪುಸ್ತಕದ ಲೇಖಕರೊಬ್ಬರನ್ನು ಉದ್ದೇಶಿಸಿ ಈ ಇಮೇಲ್ ಬರೆಯಲಾಗಿದೆ.

‘ದಲಿತ ಅಸ್ಪೃಶ್ಯ ಹಿನ್ನೆಲೆಯಿಂದ ಬಂದಿರುವ ಇತ್ತೀಚಿನ ಜರ್ಮನ್ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರೂ ಭಾರತದಲ್ಲಿ ತಮ್ಮ ದಾಖಲೆಗಳ ಸಂಗ್ರಹದ ವಿಚಾರವಾಗಿ ಇದೇ ವಿಷಯವನ್ನು ನನಗೆ ಹೇಳಿದ್ದರು’ ಎಂದು ಪ್ರಾಧ್ಯಾಪಕರು ಇಮೇಲ್‌ನಲ್ಲಿ ಬರೆದಿದ್ದಾರೆ.

ಮುಂದುವರಿದು, ಪತ್ರ ಸ್ವೀಕರಿಸಿದ ವ್ಯಕ್ತಿ ‘ಅತಿ ಅಪಾಯಕಾರಿ ದೇಶದಿಂದ ಬಂದವರು, ನಿರ್ದಿಷ್ಟವಾಗಿ ನಾಗರಿಕತೆ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಜಾರ್ಖಂಡ್‌ನಂತಹ ರಾಜ್ಯದವರು’ ಎಂದು ಉಲ್ಲೇಖಿಸಿದ್ದಾರೆ.

‘ಭಾರತದ ಜನಸಂಖ್ಯೆಯ ಬಹುಪಾಲು ಜನರು ಆರ್ಯೇತರ ಮತ್ತು ಶ್ರೀಮಂತರಲ್ಲದ ಹಿನ್ನೆಲೆಯಿಂದ ಬಂದವರು. ಬಿಹಾರ ಮತ್ತು ಜಾರ್ಖಂಡ್‌ನಂತಹ ಹಿಂದುಳಿದ ರಾಜ್ಯಗಳು ರಾಜಕೀಯ ನಕ್ಷೆಯಲ್ಲಿ ಆಫ್ರಿಕಾದ ಕೆಲವು ದೇಶಗಳನ್ನು ಹೋಲುತ್ತವೆ. ನಾಟಿಂಗ್‌ಹ್ಯಾಮ್‌ನಲ್ಲಿರುವ ಮತ್ತೊಬ್ಬ ದಲಿತ ಅಸ್ಪೃಶ್ಯ ಮೂರ್ಖನಿಗೂ ಇದೇ ರೀತಿಯ ಅನುಭವವಾಗಿದೆ. ಆತ ಯುಕೆಯಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ಬಳಿಕ ಇಂಗ್ಲೆಂಡ್‌ನ ಹೋಟೆಲ್‌ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದಾನೆ’ ಎಂದು ಬರೆದಿದ್ದಾರೆ.

‘ಬಡತನದಿಂದ ಬಳಲುವ ಹಿನ್ನೆಲೆಯಿಂದ ಬಂದಿರುವ ಈ ವಿದ್ಯಾರ್ಥಿಗಳು ಪಾಕಿಸ್ತಾನ ಕೇಂದ್ರಿತ ಚಿಂತನೆ ಬೆಳೆಸಿಕೊಳ್ಳುತ್ತಾರೆ. ವರ್ಗ ಅಥವಾ ಸಾಮಾಜಿಕ ಸ್ಥಾನಮಾನವನ್ನು ಅನುಕರಿಸಲು ಸಾಧ್ಯವಿಲ್ಲ, ಉನ್ನತ ವರ್ಗ ಮತ್ತು ಸಂಸ್ಕೃತಿಯಲ್ಲಿ ಹುಟ್ಟಿರಬೇಕು ಎಂಬುದನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಭಾರತದ ಶ್ರೀಮಂತ ಮತ್ತು ಮೇಲ್ಮಧ್ಯಮ ವರ್ಗದ ವಲಯಗಳಲ್ಲಿ ಮಿನಿ ಪಾಕಿಸ್ತಾನ ಎಂದು ಕರೆಯಲ್ಪಡುವ ಇಂಗ್ಲೆಂಡ್‌ನಲ್ಲಿ ಇಂತಹ ಪರಿಸ್ಥಿತಿ ಇದೆ’ ಎಂದೂ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದರೊಂದಿಗೆ, ‘ಯುರೋಪಿಯನ್ನರು ಎಲ್ಲ ದೃಷ್ಟಿಯಿಂದಲೂ ಭಾರತದ ಇಂಡೋ-ಆರ್ಯರಿಗಿಂತ ಕೀಳು’ ಎಂದು ಪ್ರಾಧ್ಯಾಪಕರು ಪ್ರತಿಪಾದಿಸಿದ್ದಾರೆ. ಬ್ರಿಟನ್ ಅನ್ನು ‘ಜಾಗತಿಕವಾಗಿ ನಗೆಪಾಟಲಿಗೀಡಾಗಿರುವ ದೇಶ’ ಎಂದು ಕರೆದಿರುವ ಅವರು, ‘ಪಾಕಿಸ್ತಾನಿಗಳು, ಬಾಂಗ್ಲಾದೇಶಿಗಳು ಮತ್ತು ಶ್ರೀಲಂಕಾದಂತಹ ಜನಾಂಗೀಯ ಅಲ್ಪಸಂಖ್ಯಾತರು ನಿರ್ಧಾರ ಕೈಗೊಳ್ಳುವ ಸ್ಥಾನಗಳನ್ನು ಹೊಂದಿರುವುದರಿಂದ ಅದು ಇನ್ನು ಮುಂದೆ ಆಂಗ್ಲೋ-ಸ್ಯಾಕ್ಸನ್ ದೇಶವಾಗಿ ಉಳಿದಿಲ್ಲ’ ಎಂದಿದ್ದಾರೆ.

ಲೇಖಕರ ಅಧ್ಯಾಯವನ್ನು ಸ್ವೀಕರಿಸಲು ನಿರಾಕರಿಸಿದ ಅವರು, ‘ಭಾರತೀಯ ಬಿಸಿನೆಸ್ ಸ್ಕೂಲ್‌ನಲ್ಲಿ ಭಾರತದಾದ್ಯಂತ ಇರುವ ಎಲ್ಲಾ ಬೋಧಕ ವರ್ಗದವರಿಗೆ ನಿಮ್ಮಂತಹ ಭಾರತ ವಿರೋಧಿ ವ್ಯಕ್ತಿಯನ್ನು (ಇಂಗ್ಲೆಂಡ್‌ನಲ್ಲಿರುವ ಪಾಕಿಗಳ ವಿಶಿಷ್ಟ ಗುಣ) ಯಾವುದೇ ನಾಯಕತ್ವದ ಹಂತದಲ್ಲೂ ಪರಿಗಣಿಸದಂತೆ ಎಚ್ಚರಿಕೆ ನೀಡುತ್ತೇನೆ’ ಎಂದು ಬರೆದಿದ್ದಾರೆ.

‘ಕುತಂತ್ರಿ ನರಿಯೊಂದು ಎಲ್ಲಿಗೆ ಹೋದರೂ ತನ್ನ ತಾಯ್ನಾಡಿಗೆ ದ್ರೋಹಿಯಾಗಿಯೇ ಉಳಿಯುತ್ತದೆ. ಏಕೆಂದರೆ ಅದು ಕೋಟ್ಯಂತರ ವರ್ಷಗಳಲ್ಲಿಯೂ ಹುಲಿಯಾಗಲಿ ಸಿಂಹವಾಗಲಿ ಸಾಧ್ಯವಿಲ್ಲ. ತನ್ನ ಕೆಳಮಟ್ಟದ ಬೇರುಗಳು ಮತ್ತು ಕಾರ್ಮಿಕ ವರ್ಗದ ಹಿನ್ನೆಲೆಯೊಂದಿಗೇ ಬದುಕುತ್ತದೆ’ ಎಂದೂ ಇಮೇಲ್‌ನಲ್ಲಿ ನಿಂದಿಸಲಾಗಿದೆ.

‘ನಿಮ್ಮೊಂದಿಗೆ ಮುಂದಿನ ಎಲ್ಲ ಸಂವಹನವನ್ನು ಸ್ಥಗಿತಗೊಳಿಸುತ್ತಿದ್ದೇನೆ. ಇನ್ನು ಮುಂದೆ ಬಿಹಾರ ಮತ್ತು ಜಾರ್ಖಂಡ್‌ನ ಮೂರನೇ ದರ್ಜೆಯ, ಬಡತನದಿಂದ ಬಳಲುವ ಮೂರ್ಖರಿಗೆ ಯಾವುದೇ ಶೈಕ್ಷಣಿಕ ಬೆಂಬಲ ನೀಡುವುದಿಲ್ಲ’ ಎಂದು ಬರೆದು ಇಮೇಲ್ ಮುಕ್ತಾಯಗೊಳಿಸಲಾಗಿದೆ.

ಇದಾದ ಬಳಿಕ, ಏಪ್ರಿಲ್ 27, 2026ರಂದು ಡಾ. ಮಂಡಲಾ ಅವರು ಸುಬೋಧ್ ಕುಮಾರ್ ಅವರಿಗೆ ಪ್ರತ್ಯೇಕ ಇಮೇಲ್ ಕಳುಹಿಸಿ, ತಮ್ಮ ಪುಸ್ತಕ ಯೋಜನೆಗೆ ಸಾಕಷ್ಟು ಲೇಖಕರಿರುವುದರಿಂದ ಅವರ ಅಧ್ಯಾಯವನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಅದನ್ನು ಸಹಪರಿಶೀಲಿತ ಶೈಕ್ಷಣಿಕ ನಿಯತಕಾಲಿಕಕ್ಕೆ ಕಳುಹಿಸುವಂತೆ ಸಲಹೆ ನೀಡಿದ್ದಾರೆ. ಮುಂದಿನ ಯಾವುದೇ ಶೈಕ್ಷಣಿಕ ಉಲ್ಲೇಖ ಅಥವಾ ಸಂವಹನದಲ್ಲಿ ತಮ್ಮ ಹೆಸರನ್ನು ಸೇರಿಸಬಾರದು ಎಂದೂ ಸೂಚಿಸಿದ್ದಾರೆ.

ಈ ಇಮೇಲ್‌ನಲ್ಲಿ, ‘ಇದು ಹೈದರಾಬಾದ್ ವಿಶ್ವವಿದ್ಯಾಲಯ ಅಥವಾ ಯಾವುದೇ ವಿದ್ಯಾರ್ಥಿ ಸಮುದಾಯದ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ. ಇದು ವೈಯಕ್ತಿಕ ಸಾಮರ್ಥ್ಯದಲ್ಲಿ ವ್ಯಕ್ತಪಡಿಸಿರುವ ವ್ಯಕ್ತಿಯೊಬ್ಬರ ಅಭಿಪ್ರಾಯ ಮಾತ್ರ’ ಎಂಬ ಸ್ಪಷ್ಟನೆಯನ್ನೂ ಸೇರಿಸಲಾಗಿದೆ.

ಕ್ಷಮೆಯಾಚನೆಯೊಂದಿಗೆ ಪ್ರಕರಣ ಮುಕ್ತಾಯಕ್ಕೆ ಪ್ರಯತ್ನ

ಮೊದಲಿಗೆ ಸುಬೋಧ್ ಕುಮಾರ್ ಅವರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದರು. ಆದರೆ, ಪ್ರಾಧ್ಯಾಪಕರಿಂದ ಔಪಚಾರಿಕ ಕ್ಷಮೆಯಾಚನೆ ಕೊಡಿಸಿ, ಈ ಇಮೇಲ್ ‘ಕ್ಷಣಿಕ ಭಾವೋದ್ವೇಗದ ಪರಿಣಾಮವಾಗಿ ಉಂಟಾದ ಘಟನೆ’ ಎಂದು ಸಮರ್ಥಿಸಿಕೊಳ್ಳಲಾಗಿದೆ ಎಂದು ಸುಬೋಧ್‌ ಕುಮಾರ್ ಹೇಳಿದ್ದಾರೆ.

ಮೇ 10, 2026ರಂದು ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ. ವೈ. ಸ್ವರೂಪಾ ಆರ್. ಶಂಕರ್ ಅವರು ಸುಬೋಧ್‌ ಕುಮಾರ್‌ಗೆ ಪತ್ರ ಬರೆದಿದ್ದರು. ಪ್ರಾಧ್ಯಾಪಕರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದ ಅವರು, ನಿಮ್ಮ ಫೆಲೋಶಿಪ್ ಮತ್ತು ಶಿಫಾರಸು ಪತ್ರಗಳಿಗೆ ಅಡ್ಡಿಪಡಿಸುವುದಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ ಹಾಗೂ ಕ್ಷಮೆಯಾಚನೆ ಪತ್ರವನ್ನೂ ನೀಡಿದ್ದಾರೆ ಎಂದು ಹೇಳಿದ್ದರು.

“ಹೀಗಾಗಿ ಈ ಪ್ರಕರಣ ಇಲ್ಲಿಗೇ ಮುಕ್ತಾಯಗೊಳ್ಳಲಿದೆ. ನಿಮ್ಮ ಸಂಶೋಧನೆ ಮತ್ತು ವೃತ್ತಿಜೀವನಕ್ಕೆ ಪ್ರಾಧ್ಯಾಪಕರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ವಿಭಾಗವು ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ” ಎಂದು ವಿಭಾಗದ ಮುಖ್ಯಸ್ಥೆ ಪತ್ರದಲ್ಲಿ ತಿಳಿಸಿದ್ದರು.

ಆದರೆ, ಇದನ್ನು ಸುಬೋಧ್ ಕುಮಾರ್ ಒಪ್ಪಲಿಲ್ಲ. ಮೇ 13ರಂದು ಉತ್ತರಿಸಿದ ಅವರು, ಕೇವಲ ಕ್ಷಮೆಯಾಚನೆ ಅಥವಾ ಮುಂದಿನ ದಿನಗಳಲ್ಲಿ ತೊಂದರೆ ನೀಡುವುದಿಲ್ಲ ಎಂಬ ಭರವಸೆಯ ಆಧಾರದಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ತಾವು ಸಲ್ಲಿಸಿರುವ ಅಧಿಕೃತ ದೂರಿನಲ್ಲಿ ವರ್ಣಭೇದ, ವರ್ಗಾಧಾರಿತ ತಾರತಮ್ಯ ಮತ್ತು ಜಾತಿ ಆಧಾರಿತ ತಾರತಮ್ಯದ ಗಂಭೀರ ಆರೋಪಗಳಿವೆ. ಇದೇ ರೀತಿಯ ನಡವಳಿಕೆಗೆ ಸಂಬಂಧಿಸಿದಂತೆ ಕಿರಿಯ ಸಹೋದ್ಯೋಗಿಯೊಬ್ಬರೂ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.

“ರೋಹಿತ್ ವೇಮುಲ ಅವರ ದುರಂತ ಸಾವಿಗೆ ಸಾಕ್ಷಿಯಾಗಿದ್ದ ವಿಶ್ವವಿದ್ಯಾಲಯವಿದು. ಶೈಕ್ಷಣಿಕ ವಲಯಗಳಲ್ಲಿನ ಜಾತಿ ತಾರತಮ್ಯದ ವಾಸ್ತವವನ್ನು ಆ ಘಟನೆ ದೇಶದ ಗಮನ ಸೆಳೆದಿತ್ತು. ಇಂತಹ ಪ್ರಕರಣಗಳನ್ನು ಹಗುರವಾಗಿ ಪರಿಗಣಿಸಬಾರದು ಅಥವಾ ಅನೌಪಚಾರಿಕವಾಗಿ ಇತ್ಯರ್ಥಪಡಿಸಬಾರದು. ಯಾವುದೇ ರೀತಿಯ ತಾರತಮ್ಯವನ್ನು ಸಹಿಸುವುದಿಲ್ಲ ಎಂಬುದನ್ನು ವಿಶ್ವವಿದ್ಯಾಲಯ ತನ್ನ ಕ್ರಮಗಳ ಮೂಲಕ ತೋರಿಸಬೇಕು” ಎಂದು ಸುಬೋಧ್‌ ಕುಮಾರ್ ಪತ್ರದಲ್ಲಿ ಒತ್ತಾಯಿಸಿದ್ದರು.

ಒಂದು ವಾರದೊಳಗೆ ಶಿಸ್ತುಕ್ರಮ ಆರಂಭಿಸುವಂತೆ ಅವರು ಆಗ್ರಹಿಸಿದ್ದರು. ಆದರೆ, ಕಠಿಣ ಕ್ರಮ ಕೈಗೊಳ್ಳುವಂತೆ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಿದ ನಂತರದ ದೂರುಗಳಿಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಮ್ಮ ಇತ್ತೀಚಿನ ದೂರಿನಲ್ಲಿ ತಿಳಿಸಿದ್ದಾರೆ.

ಜಾತಿವಾದಿ ಮನಸ್ಥಿತಿ ಬಹಿರಂಗ

ಅಕ್ಟೋಬರ್ 31ರಂದು ಸಲ್ಲಿಸಿರುವ ದೂರಿನಲ್ಲಿ, ಇಮೇಲ್ ಅನ್ನು ಪ್ರತ್ಯೇಕ ಅಥವಾ ಆಕಸ್ಮಿಕ ಘಟನೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಬೋಧ್‌ ಹೇಳಿದ್ದಾರೆ.

“ಅಂಚಿನ ಸಮುದಾಯಗಳ ವಿದ್ಯಾರ್ಥಿಗಳಿಗೆ ನೆರವಾಗುವ ನೆಪದಲ್ಲಿ ಡಾ. ಮಂಡಲಾ ಅವರು ತಮ್ಮ ಶೈಕ್ಷಣಿಕ ಪ್ರಭಾವ ಮತ್ತು ವರ್ಚಸ್ಸನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅವರ ಜಾತಿವಾದಿ ಮನಸ್ಥಿತಿ ಬಹಿರಂಗವಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

“ಈ ವಿಚಾರವನ್ನು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿಯೂ ಅವರು ದುರ್ಬಲ ವಿದ್ಯಾರ್ಥಿಗಳನ್ನು ಶೋಷಿಸುವುದನ್ನು ಮುಂದುವರಿಸಬಹುದು ಎಂಬ ಆತಂಕ ನನಗಿದೆ” ಎಂದಿದ್ದಾರೆ.

ವಿಶ್ವವಿದ್ಯಾಲಯವು ಈವರೆಗೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳದಿದ್ದರೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಕೇಂದ್ರ ಶಿಕ್ಷಣ ಸಚಿವಾಲಯ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್‌ಸಿಎಸ್‌ಸಿ) ಸೇರಿದಂತೆ ಇತರ ಸಾಂವಿಧಾನಿಕ ಮತ್ತು ಶಾಸನಬದ್ಧ ಪ್ರಾಧಿಕಾರಗಳಿಗೆ ದೂರು ಸಲ್ಲಿಸಬೇಕಾಗುತ್ತದೆ ಎಂದು ಸುಬೋಧ್‌ ಕುಮಾರ್ ಎಚ್ಚರಿಸಿದ್ದಾರೆ.

ಜಾತಿ, ವರ್ಗ ಮತ್ತು ಜನಾಂಗೀಯ ತಾರತಮ್ಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಅಧಿಕೃತ ದೂರು ಸಲ್ಲಿಸಿದ್ದರೂ ವಿಶ್ವವಿದ್ಯಾಲಯವು ಕ್ರಮ ಕೈಗೊಳ್ಳದಿರುವ ವಿಚಾರವನ್ನೂ ಸಂಬಂಧಪಟ್ಟ ಪ್ರಾಧಿಕಾರಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ತಮ್ಮ ದೂರಿನೊಂದಿಗೆ ಏಪ್ರಿಲ್ 16ರಂದು ಪ್ರಾಧ್ಯಾಪಕರು ಕಳುಹಿಸಿದ್ದ ಇಮೇಲ್ ಪ್ರತಿಯನ್ನೂ ಸಾಕ್ಷ್ಯವಾಗಿ ಲಗತ್ತಿಸಿದ್ದಾರೆ.

ಹೊಣೆಗಾರಿಕೆಗೆ ವಿದ್ಯಾರ್ಥಿ ಸಂಘಟನೆಗಳ ಆಗ್ರಹ

ಡಾ. ಮಂಡಲಾ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಹೈದರಾಬಾದ್ ವಿಶ್ವವಿದ್ಯಾಲಯದ ಫ್ರಾಟರ್ನಿಟಿ ಮೂವ್‌ಮೆಂಟ್ ಘಟಕವೂ ಹೊಣೆಗಾರಿಕೆ ನಿಗದಿಪಡಿಸುವಂತೆ ಒತ್ತಾಯಿಸಿದೆ.

‘ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ (ಎಚ್‌ಸಿಯು) ಫ್ರಾಟರ್ನಿಟಿ ಮೂವ್‌ಮೆಂಟ್ ಘಟಕವು ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ವಿಜಯ್ ರಾಮದಾಸ್ ಮಂಡಲಾ ಅವರ ಜಾತಿವಾದಿ ಮತ್ತು ತಾರತಮ್ಯಪೂರಿತ ಹೇಳಿಕೆಗಳಿಗೆ ಹೊಣೆಗಾರಿಕೆ ನಿಗದಿಪಡಿಸಬೇಕೆಂದು ಆಗ್ರಹಿಸುತ್ತದೆ’ ಎಂದು ಸಂಘಟನೆ ಹೇಳಿದೆ.

‘ಅಂಚಿನ ಸಮುದಾಯಗಳ, ದಲಿತ-ಬಹುಜನ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ವಿಶ್ವವಿದ್ಯಾಲಯದ ಜವಾಬ್ದಾರಿ. ಇದಕ್ಕಾಗಿ ದೂರು ಪರಿಹಾರ ವ್ಯವಸ್ಥೆಯನ್ನು ನ್ಯಾಯಸಮ್ಮತ, ಪರಿಣಾಮಕಾರಿ ಮತ್ತು ಸೂಕ್ಷ್ಮ ಸಂವೇದನೆಯುಳ್ಳದ್ದಾಗಿ ರೂಪಿಸಬೇಕು. ಜಾತಿ ಆಧಾರಿತ ಅವಮಾನವನ್ನು ಎದುರಿಸಬೇಕಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಸೂಕ್ತ ತನಿಖೆ ನಡೆಸಿ, ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದೆ.

ಇದೇ ವೇಳೆ, ಯುನೈಟೆಡ್ ಕಿಂಗ್‌ಡಮ್‌ನ ವಿದ್ಯಾರ್ಥಿಗಳ ಒಕ್ಕೂಟವಾದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ-ಯುಕೆ (ಎಸ್‌ಎಫ್‌ಐ-ಯುಕೆ) ಕೂಡ ಅಕ್ಟೋಬರ್ 26, 2026ರಂದು ಹೇಳಿಕೆ ಬಿಡುಗಡೆ ಮಾಡಿದೆ.

ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಪಿಎಚ್‌ಡಿ ಪದವೀಧರರಾಗಿರುವ ಡಾ. ಮಂಡಲಾ ಅವರು ತಮ್ಮ ಹಳೆಯ ವಿದ್ಯಾರ್ಥಿಗಳ ವಿರುದ್ಧ ನಡೆಸಿದ್ದಾರೆ ಎನ್ನಲಾದ ‘ಜಾತಿವಾದಿ, ವರ್ಗವಾದಿ ಮತ್ತು ಕೋಮುವಾದಿ ನಿಂದನೆ’ಯನ್ನು ಸಂಘಟನೆ ಖಂಡಿಸಿದೆ.

‘ಭಾರತ ಮತ್ತು ಬ್ರಿಟನ್‌ನ ವಿಶಾಲ ಶೈಕ್ಷಣಿಕ ಸಮುದಾಯವು ಡಾ. ಮಂಡಲಾ ಅವರ ಕೃತ್ಯಗಳಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು’ ಎಂದು ಎಸ್‌ಎಫ್‌ಐ-ಯುಕೆ ಆಗ್ರಹಿಸಿದೆ.

‘ಸಾಮಾಜಿಕ ನ್ಯಾಯ, ಸಮಾನತೆ, ಘನತೆ ಮತ್ತು ಜಾತಿ ನಿರ್ಮೂಲನೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಬದ್ಧತೆ ಅಚಲವಾಗಿದೆ’ ಎಂದು ಸಂಘಟನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಂಕಿತಾ ಭಂಡಾರಿ ಕೊಲೆ ಪ್ರಕರಣ : ರಾಜ್‌ಘಾಟ್‌ನಲ್ಲಿ ಧರಣಿ ಕುಳಿತಿದ್ದ ಪೋಷಕರನ್ನು ತೆರವುಗೊಳಿಸಿದ ಪೊಲೀಸರು

ಉತ್ತರಾಖಂಡದ ರೆಸಾರ್ಟ್‌ನಲ್ಲಿ ಕೊಲೆಯಾದ ಯುವತಿ ಅಂಕಿತಾ ಭಂಡಾರಿ ಪೋಷಕರು ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಸಿದ್ದು, ಬುಧವಾರ (ನ.4) ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಗಾಂಧಿ ಸ್ಮಾರಕದ ಸಾರ್ವಜನಿಕ ದ್ವಾರದ ಬಳಿ ಧರಣಿ ಕುಳಿತಿದ್ದ ಅವರನ್ನು ಪೊಲೀಸರು...

40% ಕಮಿಷನ್ ಜಾಹೀರಾತು : ಸಿದ್ದರಾಮಯ್ಯ, ಡಿಕೆಶಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಿದ ಹೈಕೋರ್ಟ್

ʼಶೇಕಡ 40 ಕಮಿಷನ್ ಸರ್ಕಾರ’ ಎಂದು ಆರೋಪಿಸಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನೀಡಿದ್ದ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ (ನ.4) ರದ್ದುಪಡಿಸಿದೆ. ಕರ್ನಾಟಕ...

‘ಔಪಚಾರಿಕ ಬಂಧನವಲ್ಲ, ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಲೆಕ್ಕ’: ಸುಪ್ರೀಂ ಮಹತ್ವದ ತೀರ್ಪು; ನಾಲ್ವರು ಆರೋಪಿಗಳ ಬಿಡುಗಡೆಗೆ ಆದೇಶ

ನವದೆಹಲಿ: ಪೊಲೀಸರು ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಸಾಂವಿಧಾನಿಕ ಗಡುವು ಆರಂಭವಾಗುತ್ತದೆ. ಔಪಚಾರಿಕವಾಗಿ ಬಂಧನ ದಾಖಲಿಸಿದ ಸಮಯದಿಂದ ಈ ಅವಧಿಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ...

SIR ನಡೆಯುತ್ತಿರುವ ರಾಜ್ಯಗಳಲ್ಲೂ ಆನ್‌ಲೈನ್ ಫಾರಂ-6 ಮತ್ತು ಘೋಷಣಾ ಪತ್ರವನ್ನು ಪ್ರತ್ಯೇಕಿಸಿದ ಚು. ಆಯೋಗ

ಭಾರತೀಯ ಚುನಾವಣಾ ಆಯೋಗ (ಇಸಿಐ) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ನಡೆಯುತ್ತಿರುವ ರಾಜ್ಯಗಳಲ್ಲೂ, ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಫಾರಂ-6 ಮತ್ತು ಅದರ ಜೊತೆಗಿನ 'ಘೋಷಣಾ ಪತ್ರವನ್ನು' (ಡಿಕ್ಲರೇಷನ್)...

ಬಿಜೆಪಿ ಕಾರ್ಯಕರ್ತನ ‘ಪಾಕಿಸ್ತಾನ್ ಜಿಂದಾಬಾದ್’ ಪ್ರಕರಣ ರದ್ದು! ಪ್ರತಿಭಟನೆ ವೇಳೆ ‘ಬಾಯಿತಪ್ಪಿ ಬಂದ ಮಾತು’ ಎಂಬ ವಾದ ಪುರಸ್ಕರಿಸಿದ ಕರ್ನಾಟಕ ಹೈಕೋರ್ಟ್!

ಭಾರತೀಯ ಜನತಾ ಪಾರ್ಟಿ (BJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದ ಕಾರ್ಯಕರ್ತನೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಯಿತಪ್ಪಿ...

“ಒಬ್ಬ ವ್ಯಕ್ತಿ 10 ಜನರ ಕೆಲಸ ಮಾಡಬೇಕು”: ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಖಂಡಿಸಿ ಜೆಎನ್‌ಯುನಲ್ಲಿ 500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರ ಮುಷ್ಕರ

ನವದೆಹಲಿ: ಕಾನೂನುಬಾಹಿರ ವೇತನ ಕಡಿತ, ಶಾಸನಬದ್ಧ ಬೋನಸ್ ಪಾವತಿಸದಿರುವುದು, ಕಾರ್ಮಿಕರನ್ನು ಅನಿಯಂತ್ರಿತವಾಗಿ ಅಮಾನತುಗೊಳಿಸುವುದು ಮತ್ತು ಸಿಬ್ಬಂದಿ ಕೊರತೆಯಿಂದ ಹೆಚ್ಚುತ್ತಿರುವ ಕೆಲಸದ ಹೊರೆ ಸೇರಿದಂತೆ ಹಲವು ಕಾರ್ಮಿಕ ಹಕ್ಕುಗಳ ಉಲ್ಲಂಘನೆಗಳನ್ನು ಖಂಡಿಸಿ ದೆಹಲಿಯ ಜವಾಹರಲಾಲ್...

ಅಮೆರಿಕ ಮಧ್ಯಂತರ ಚುನಾವಣೆ | ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತ ಸಾಧಿಸಿದ ಡೆಮಾಕ್ರಟಿಕ್ ಪಕ್ಷ : ಅಧ್ಯಕ್ಷ ಟ್ರಂಪ್‌ಗೆ ತೀವ್ರ ಮುಖಭಂಗ

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ (US Midterm Elections 2026) ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ 'ಬ್ಲೂ ವೇವ್' (ನೀಲಿ ಅಲೆ) ಸೃಷ್ಟಿಸಿದ್ದು, ಸಂಸತ್ತಿನ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಮತ್ತು ಸೆನೆಟ್ (ಮೇಲ್ಮನೆ)...

ಭಾರತಕ್ಕೆ ಬಿಗ್ ರಿಲೀಫ್ ಕೊಟ್ಟ ಇರಾನ್: ಹೊರ್ಮುಜ್ ಜಲಸಂಧಿ ನಿರ್ಬಂಧದಿಂದ ಭಾರತೀಯ ನೌಕೆಗಳಿಗೆ ವಿನಾಯಿತಿ!

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ನಡುವಿನ ಶೀತಲ ಸಮರ ಹಾಗೂ ಅಮೆರಿಕದ ಮಿಲಿಟರಿ ಹಾಜರಾತಿಯಿಂದಾಗಿ ತೈಲ ಸಾರಿಗೆ ಮಾರ್ಗಗಳಲ್ಲಿ ಭದ್ರತಾ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ, ಇರಾನ್ ಸರ್ಕಾರವು ಜಾಗತಿಕ ವಾಣಿಜ್ಯ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ನಿರ್ಧಾರವೊಂದನ್ನು...

ಗುಜರಾತ್: ‘ತಪ್ಪಿತಸ್ಥನೆಂದು ಸಾಬೀತುಪಡಿಸಲು ಪುರಾವೆಗಳಿಲ್ಲ’: ಗೋಮಾಂಸ ಸಂಗ್ರಹ ಆರೋಪದ ಮುಸ್ಲಿಂ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ಗೋಮಾಂಸ ಸಂಗ್ರಹಿಸಿ ಮಾರಾಟಕ್ಕೆ ಸಿದ್ಧಪಡಿಸಿಕೊಂಡಿದ್ದಾರೆ ಎಂಬ ಆರೋಪದಡಿ ಸುಮಾರು ಹತ್ತು ತಿಂಗಳಿನಿಂದ ಜೈಲಿನಲ್ಲಿದ್ದ ಗುಜರಾತ್‌ನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಯ ವಿರುದ್ಧ ಈ ಹಿಂದೆ ದಾಖಲಾಗಿದ್ದ...

ದೆಹಲಿಯ ‘ವೋಟ್ ಚೋರಿ’ ರ‍್ಯಾಲಿಗೆ ಗೈರು: ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ 60 ಪ್ರಮುಖ ಪದಾಧಿಕಾರಿಗಳು ಅಮಾನತು!

ಅಖಿಲ ಭಾರತ ಯುವ ಕಾಂಗ್ರೆಸ್ ನಾಯಕತ್ವವು ಕಠಿಣ ನಿರ್ಧಾರ ತಳೆದಿದ್ದು, ರಾಷ್ಟ್ರೀಯ ನಾಯಕತ್ವ ನೀಡಿದ್ದ ಕರೆಗೆ ಗೈರುಹಾಜರಾದ ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ ಬರೋಬ್ಬರಿ 60 ಪ್ರಮುಖ ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ...