ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ಮುಂಬರುವ ಆರು ತಿಂಗಳೊಳಗೆ ಪೂರ್ಣಗೊಳಿಸಿ, ಅಪರಾಧಿಗಳನ್ನು ಜೈಲಿಗೆ ಕಳುಹಿಸುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದರು. ಕೇರಳದ ಕೊಚ್ಚಿಯ ಮರೈನ್ ಡ್ರೈವ್ನಲ್ಲಿ ಮುಸ್ಲಿಂ ಯೂತ್ ಲೀಗ್ (ಎಂವೈಎಲ್) ಕೇರಳ ರಾಜ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಭರವಸೆ ನೀಡಿದ್ದರು.
ಗೃಹ ಸಚಿವರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ, “ಮಿಸ್ಟರ್ ಪ್ರಿಯಾಂಕ್ ಖರ್ಗೆ ಅವರೇ..ಕೇರಳದಲ್ಲಿ ನಡೆದ ಮುಸ್ಲಿಂ ಯೂತ್ ಲೀಗ್ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣಗಳನ್ನು ಮಾಡುವುದಕ್ಕಿಂತ ಗೌರಿ ಲಂಕೇಶ್ ಮತ್ತು ಪ್ರೊ. ಕಲ್ಬುರ್ಗಿ ಅವರ ನ್ಯಾಯದ ಹೋರಾಟಕ್ಕೆ ಇನ್ನೂ ಹೆಚ್ಚಿನ ಘನತೆ ಸಿಗಬೇಕಿದೆ. ನೀವು ಕರ್ನಾಟಕದ ಗೃಹ ಸಚಿವರು. ಕಾನೂನಿನ ಚೌಕಟ್ಟಿಗೆ ಅನುಗುಣವಾಗಿ ನ್ಯಾಯ ಸಿಗುವಂತೆ ನೋಡುವುದು ನಿಮ್ಮ ಜವಾಬ್ದಾರಿಯೇ ಹೊರತು, ರಾಜಕೀಯ ವೇದಿಕೆಗಳಿಂದ ಪೂರ್ವಾಗ್ರಹ ಪೀಡಿತ ತೀರ್ಪುಗಳನ್ನು ನೀಡುವುದಲ್ಲ” ಎಂದಿದ್ದಾರೆ.
“ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಪಟ್ಟಿಯನ್ನು 2018ರಲ್ಲಿ ಸಲ್ಲಿಸಲಾಗಿದೆ ಮತ್ತು 2022ರಲ್ಲಿ ವಿಚಾರಣೆ ಪ್ರಾರಂಭಗೊಂಡಿದೆ. ಪ್ರಸ್ತುತ ಪ್ರಕರಣವು ಏಳನೇ ನ್ಯಾಯಾಧೀಶರ ಮುಂದೆ ಬಂದಿದ್ದು, ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ. ಇನ್ನು ಪ್ರೊ. ಕಲ್ಬುರ್ಗಿ ಅವರ ಪ್ರಕರಣದಲ್ಲಿ, ಸೆ. 2026ರ ಹೊತ್ತಿಗೆ 139 ಸಾಕ್ಷಿಗಳಲ್ಲಿ ಕೇವಲ 33 ಸಾಕ್ಷಿಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ. ಇಷ್ಟು ದೊಡ್ಡ ಮಟ್ಟದ ವಿಳಂಬಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಮತ್ತು ಇದಕ್ಕೆ ಉತ್ತರಗಳ ಅಗತ್ಯವಿದೆ. ಈ ಹತ್ಯೆಗಳು ನಡೆದಾಗಿನಿಂದ ಹೆಚ್ಚಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವೇ ಕರ್ನಾಟಕವನ್ನು ಆಳಿದೆ, ಹಾಗೂ ವಿಶೇಷ ತನಿಖಾ ತಂಡಗಳನ್ನು (ಎಸ್ಐಟಿ) ರಾಜ್ಯ ಸರ್ಕಾರವೇ ರಚಿಸಿದೆ” ಎಂದು ಹೇಳಿದ್ದಾರೆ.
ಮುಂದುವರಿದು, “ಆದ್ದರಿಂದ ಪರಿಣಾಮಕಾರಿ ಕಾನೂನು ಪ್ರಾಸಿಕ್ಯೂಷನ್ ಅನ್ನು ಖಚಿತಪಡಿಸಿಕೊಳ್ಳುವಲ್ಲಿ ಗೃಹ ಇಲಾಖೆಯು ತನ್ನ ಪಾತ್ರಕ್ಕೆ ಉತ್ತರಿಸಲೇಬೇಕು! ಇಂತಹ ಪರಿಸ್ಥಿತಿಯಲ್ಲಿ, ಕರ್ನಾಟಕದ ಗೃಹ ಸಚಿವರಾಗಿ ನೀವು ನೀಡಿರುವ “ಕೇಸ್ ನಡೆಯುತ್ತಿದೆ, ಇನ್ನಾರು ತಿಂಗಳಲ್ಲಿ ನಾನು ಇದನ್ನು ಮುಗಿಸುತ್ತೇನೆ ಮತ್ತು ಈ ಎಲ್ಲ ಜನರನ್ನು ಜೈಲಿಗೆ ಹಾಕುತ್ತೇನೆ” ಎಂಬ ಹೇಳಿಕೆಯು, ನ್ಯಾಯಾಂಗವು ಯಾವ ರೀತಿಯ ತೀರ್ಪು ನೀಡಬೇಕು ಎಂಬುದನ್ನು ನೀವೇ ಪರೋಕ್ಷವಾಗಿ ಸೂಚಿಸುತ್ತಿರುವಂತೆ ತೋರುತ್ತದೆ” ಎಂದಿದ್ದಾರೆ.
“ಇದು ನಿಮ್ಮ ಉಸ್ತುವಾರಿಯಲ್ಲಿ ನಡೆಯುತ್ತಿರುವ ವಿಚಾರಣೆಗಳ ನಿಷ್ಪಕ್ಷಪಾತ ಮತ್ತು ಸ್ವತಂತ್ರತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತದೆ. ನೀವು “ಸಂಘ” ಎಂಬ ಹೆಸರನ್ನು ಪ್ರಸ್ತಾಪಿಸುವಾಗ, ಈ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿ. ಮೂರು ದಿನಗಳ ಒಳಗೆ ನಿಮ್ಮ ಆರೋಪಗಳಿಗೆ ಪೂರಕವಾದ ಪುರಾವೆಗಳನ್ನು ಒದಗಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ! ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಇಂತಹದೇ ರೀತಿಯ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನಿಮ್ಮ ಪರಮೋಚ್ಚ ನಾಯಕ ರಾಹುಲ್ ಗಾಂಧಿ ಅವರು ಇಂದಿಗೂ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ” ಎಂದು ತೇಜಸ್ವಿ ಸೂರ್ಯ ಸವಾಲು ಹಾಕಿದ್ದಾರೆ.
ತೇಜಸ್ವಿ ಸೂರ್ಯ ಸವಾಲಿಗೆ ಪ್ರತಿಸವಾಲು ಹಾಕಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಆರ್ಎಸ್ಎಸ್ ಅನ್ನು ನೀವು ಹತಾಶೆಯಿಂದ ಸಮರ್ಥಿಸಿಕೊಳ್ಳುತ್ತಿರುವುದು ಅದರ ದೊಡ್ಡ ಕಪಟತನವನ್ನು ಬಹಿರಂಗಪಡಿಸಿದೆ. ಎಲ್ಲದಕ್ಕೂ ತಾನೇ ಕಾರಣ ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತದೆ ಆದರೆ ಯಾವುದಕ್ಕೂ ಜವಾಬ್ದಾರಿ ಹೊರಲು ಸಿದ್ಧವಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
“ಗೌರಿ ಲಂಕೇಶ್, ಕಲ್ಬುರ್ಗಿ, ದಾಬೋಲ್ಕರ್ ಮತ್ತು ಪನ್ಸಾರೆ ಅವರ ಕೊಲೆಗಳ ಕುರಿತು ಎಸ್ಐಟಿ ಮತ್ತು ಸಿಬಿಐ ನಡೆಸಿದ ತನಿಖೆಗಳು ಆರೋಪಿಗಳನ್ನು ಆರ್ಎಸ್ಎಸ್ನೊಂದಿಗೆ ಸಂಪರ್ಕ ಹೊಂದಿದ ಗುಪ್ತ ಜಾಲಗಳತ್ತ ಪತ್ತೆಹಚ್ಚಿವೆ. ಆದರೆ ನಿಮ್ಮ ಮಾತೃ ಸಂಸ್ಥೆಯಾದ ಆರ್ಎಸ್ಎಸ್ನ ರಚನೆಯು ಸನ್ನಿವೇಶಗಳಿಗೆ ಅನುಗುಣವಾಗಿ ಜನರನ್ನು ತನ್ನವರೆಂದು ಒಪ್ಪಿಕೊಳ್ಳಲು ಅಥವಾ ತಿರಸ್ಕರಿಸಲು ಅದಕ್ಕೆ ತೀರಾ ಅನುಕೂಲಕರವಾಗಿ ಮಾಡಿಕೊಟ್ಟಿದೆ. ಆರ್ಎಸ್ಎಸ್ ತನ್ನ ಹೆಸರನ್ನು ನೋಂದಾಯಿಸಿಕೊಳ್ಳಲು ನಿರಾಕರಿಸುತ್ತದೆ, ಯಾವುದೇ ಔಪಚಾರಿಕ ಸದಸ್ಯತ್ವ ದಾಖಲಾತಿ ಅಥವಾ ಸಾರ್ವಜನಿಕ ಸದಸ್ಯತ್ವ ನೋಂದಣಿಯನ್ನು ನಿರ್ವಹಿಸುವುದಿಲ್ಲ. ನೀವು ಭಗವಾ ಧ್ವಜದ ಮುಂದೆ ಗುರುದಕ್ಷಿಣೆ ಸಂಗ್ರಹಿಸುತ್ತೀರಿ, ಆದರೂ ಯಾವುದೇ ಕ್ರೋಢೀಕೃತ ಖಾತೆಗಳನ್ನು ಪ್ರಕಟಿಸುವುದಿಲ್ಲ. ಆರ್ಎಸ್ಎಸ್ಗೆ ಯಾವುದೇ ಔಪಚಾರಿಕ ಸದಸ್ಯತ್ವ ನೋಂದಣಿ ಇಲ್ಲದಿರುವಾಗ, ಯಾವುದೇ ನೋಂದಾಯಿತ ಕಾನೂನು ಗುರುತು ಇಲ್ಲದಿರುವಾಗ ಮತ್ತು ಅದನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದಕ್ಕೆ ಯಾವುದೇ ಪರಿಶೀಲಿಸಬಹುದಾದ ದಾಖಲೆ ಇಲ್ಲದಿರುವಾಗ ಆರ್ಎಸ್ಎಸ್ಗೆ ಲಿಂಕ್ ಆಗಿರುವ ಪ್ರಕರಣಗಳನ್ನು ಹೇಗೆ ತನಿಖೆ ಮಾಡಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
“ನಿಮಗೆ ಸತ್ಯದ ಬಗ್ಗೆ ಕಾಳಜಿ ಇದ್ದರೆ, ನಿಮ್ಮ ಆರ್ಎಸ್ಎಸ್ ಒಡೆಯರಿಗೆ ನೋಂದಾಯಿಸಿಕೊಳ್ಳಲು, ಅವರ ಪದಾಧಿಕಾರಿಗಳನ್ನು ಗುರುತಿಸಲು ಮತ್ತು ಅವರ ಖಾತೆಗಳನ್ನು ಬಹಿರಂಗಪಡಿಸಲು ತಿಳಿಸಿ. ನಿಮಗೆ ಅನುಕೂಲಕರವಾದಾಗ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಹಾಯ ಮಾಡುವ ಅನಾಮಧೇಯತೆಯ ಅನುಕೂಲಕರ ಪರದೆಯ ಹಿಂದೆ ಅಡಗಿಕೊಳ್ಳುವುದನ್ನು ನಿಲ್ಲಿಸಿ. ನಿಮ್ಮ ಆರ್ಎಸ್ಎಸ್ ಅನ್ನು ನೋಂದಾಯಿಸಿ, ಅದರ ನೋಂದಣಿ ಶುಲ್ಕವನ್ನು ನಾನೇ ಭರಿಸುತ್ತೇನೆ. ಈ ಸವಾಲನ್ನು ಸ್ವೀಕರಿಸುವ ಧೈರ್ಯ ನಿಮಗಿದೆಯೇ ಎಂದು ನೋಡೋಣ” ಎಂದು ಪ್ರಿಯಾಂಕ್ ಖರ್ಗೆ ಪ್ರತಿಸವಾಲು ಹಾಕಿದ್ದಾರೆ.


