ಬೆಂಗಳೂರು: ‘ನಮ್ಮ ಮೆಟ್ರೋ’ ಗುಲಾಬಿ ಮಾರ್ಗದ (Pink Line) ಎಲಿವೇಟೆಡ್ ಕಾರಿಡಾರ್ನ ಮೂರು ಪ್ರಮುಖ ನಿಲ್ದಾಣಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಅಧಿಕೃತ ಅನುಮೋದನೆ ನೀಡಿದೆ. ಈ ಮೂಲಕ ತಮ್ಮ ಊರಿನ ಅಸ್ಮಿತೆ ಮತ್ತು ಕಂದಾಯ ಗ್ರಾಮಗಳ ಹೆಸರನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದ ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆಗೆ ಕೊನೆಗೂ ಜಯ ಸಿಕ್ಕಂತಾಗಿದೆ.
ನವೆಂಬರ್ 10, 2026 ರಂದು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಈ ಮೂರು ನಿಲ್ದಾಣಗಳ ಮರುನಾಮಕರಣದ ಕುರಿತು ಕೇಂದ್ರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಉಪ ಕಾರ್ಯದರ್ಶಿ ಸೂರ್ಯ ನಾರಾಯಣ ಝಾ ಅವರು ನವೆಂಬರ್ 11, 2026 ರಂದು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ರವಾನಿಸಿದ್ದು, ಪ್ರಸ್ತಾವನೆಗೆ ಸಕ್ಷಮ ಪ್ರಾಧಿಕಾರದಿಂದ ಒಪ್ಪಿಗೆ ದೊರೆತಿರುವುದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಬೀಳಲಿದ್ದು, ಪತ್ರದ ಪ್ರತಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ವ್ಯವಸ್ಥಾಪಕ ನಿರ್ದೇಶಕರಿಗೂ ಕಳುಹಿಸಲಾಗಿದೆ.


ನಾನುಗೌರಿ.ಕಾಂ ವರದಿಯನ್ನು ಇಲ್ಲಿ ಸ್ಮರಿಸಬಹುದು: ಬನ್ನೇರುಘಟ್ಟ ರಸ್ತೆಯ ‘ಬಿಳೇಕಹಳ್ಳಿ’ ನಿಲ್ದಾಣಕ್ಕೆ ಊರಿನ ಹೆಸರನ್ನು ಕೈಬಿಟ್ಟು ಕೇವಲ ‘ಐಐಎಂಬಿ’ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು) ಎಂದು ಹೆಸರಿಟ್ಟಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಹೋರಾಟ ಆರಂಭಿಸಿದ್ದರ ಕುರಿತು ‘ನಾನುಗೌರಿ.ಕಾಂ’ ಈ ಹಿಂದೆ ವಿಸ್ತೃತ ವರದಿ ಪ್ರಕಟಿಸಿತ್ತು. “ಬಿಳೇಕಹಳ್ಳಿ ಎನ್ನುವುದು ಕೇವಲ ಒಂದು ಊರಿನ ಹೆಸರಲ್ಲ, ಅದು ನಮ್ಮ ಪೂರ್ವಜರ ನೆನಪು ಮತ್ತು ನೆಲದ ಇತಿಹಾಸ. ಅಭಿವೃದ್ಧಿಯ ಜೊತೆಗೆ ನಮ್ಮ ಊರಿನ ಐತಿಹಾಸಿಕ ಅಸ್ತಿತ್ವವೂ ಉಳಿಯಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದರು. ಅಲ್ಲದೆ, ಈ ಸಂಬಂಧ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳ ನಿಯೋಗವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ನಿಲ್ದಾಣಗಳ ಹೆಸರು ಪರಿಶೀಲನೆಗಾಗಿ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು.
ಮೂರು ನಿಲ್ದಾಣಗಳ ಹೆಸರು ಹೇಗೆ ಬದಲಾಗಿದೆ:
ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯು ಸಾರ್ವಜನಿಕರಿಂದ ಬಂದ ಮನವಿಗಳನ್ನು ಪರಿಶೀಲಿಸಿ ಶಿಫಾರಸುಗಳನ್ನು ಮಾಡಿತ್ತು. ಅದರಂತೆ, ಈ ಹಿಂದೆ ‘ಐಐಎಂಬಿ ಮೆಟ್ರೋ ನಿಲ್ದಾಣ’ ಎಂದು ಹೆಸರಿಸಲಾಗಿದ್ದ ನಿಲ್ದಾಣವು ಬಿಳೇಕಹಳ್ಳಿ ಕಂದಾಯ ಗ್ರಾಮದ ವ್ಯಾಪ್ತಿಗೆ ಬರುವುದರಿಂದ, ಮೂಲ ಹೆಸರಿನ ಮುಂದೆ ‘ಬಿಳೇಕಹಳ್ಳಿ’ ಸೇರಿಸಿ ‘ಬಿಳೇಕಹಳ್ಳಿ–ಐಐಎಂಬಿ’ (Bilekahalli–IIMB) ಎಂದು ಮರುನಾಮಕರಣ ಮಾಡಲಾಗಿದೆ.
ಅದೇ ರೀತಿ, ಈ ಹಿಂದೆ ‘ಜೆ.ಪಿ. ನಗರ 4ನೇ ಹಂತ ಮೆಟ್ರೋ ನಿಲ್ದಾಣ’ ಎಂದು ಗುರುತಿಸಲಾಗಿದ್ದ ನಿಲ್ದಾಣದ ವ್ಯಾಪ್ತಿಯ ಕಂದಾಯ ಗ್ರಾಮದ ಹೆಸರು ಎನ್.ಎಸ್. ಪಾಳ್ಯ ಆಗಿರುವುದರಿಂದ, ಹಳೆಯ ಹೆಸರಿನೊಂದಿಗೆ ಸೇರಿಸಿ ‘ಎನ್.ಎಸ್. ಪಾಳ್ಯ ಜೆ.ಪಿ. ನಗರ 4ನೇ ಹಂತ’ (NS Palya JP Nagar 4th Phase) ಎಂದು ಬದಲಾಯಿಸಲಾಗಿದೆ.
ಈ ಹಿಂದೆ ‘ತಾವರೆಕೆರೆ ಮೆಟ್ರೋ ನಿಲ್ದಾಣ’ ಎಂದು ಹೆಸರಿಡಲಾಗಿದ್ದ ನಿಲ್ದಾಣದಿಂದ ತಾವರೆಕೆರೆ ಕಂದಾಯ ಗ್ರಾಮವು ಸ್ವಲ್ಪ ದೂರದಲ್ಲಿದ್ದು, ಸ್ಥಳೀಯವಾಗಿ ವಾರ್ಡ್ ಹೆಸರಾದ ‘ಎಸ್.ಜಿ. ಪಾಳ್ಯ’ ಹೆಚ್ಚು ಜನಪ್ರಿಯವಾಗಿದೆ. ಹೀಗಾಗಿ ತಾವರೆಕೆರೆ ಬದಲಿಗೆ ‘ಎಸ್.ಜಿ. ಪಾಳ್ಯ (ಸುದ್ದಗುಂಟೆ ಪಾಳ್ಯ)’ (S.G. Palya – Suddagunte Palya) ಎಂದು ಮರುನಾಮಕರಣ ಮಾಡಲು ಒಪ್ಪಿಗೆ ನೀಡಲಾಗಿದೆ.
ಇನ್ನುಳಿದಂತೆ, ಪಿಂಕ್ ಲೈನ್ ಎಲಿವೇಟೆಡ್ ಕಾರಿಡಾರ್ನ ಇತರ ಪ್ರಮುಖ ನಿಲ್ದಾಣಗಳಾದ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣ (ಇದು ಕಂದಾಯ ಗ್ರಾಮದ ಹೆಸರಾಗಿರುವುದರಿಂದ), ಹುಳಿಮಾವು ಮೆಟ್ರೋ ನಿಲ್ದಾಣ ಹಾಗೂ ಜಯದೇವ ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ಯಾವುದೇ ಮನವಿಗಳು ಸಲ್ಲಿಕೆಯಾಗದ ಕಾರಣ ಅವುಗಳ ಹೆಸರುಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸಮಿತಿ ತೀರ್ಮಾನಿಸಿದೆ. ಒಟ್ಟಿನಲ್ಲಿ, ಸ್ಥಳೀಯರ ನಿರಂತರ ಒತ್ತಾಯ ಮತ್ತು ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡಿದ್ದು, ಬೆಂಗಳೂರಿನ ಮೂಲ ಗ್ರಾಮಗಳ ಹೆಸರು ಮೆಟ್ರೋ ನಿಲ್ದಾಣಗಳ ಮೂಲಕ ಶಾಶ್ವತವಾಗಿ ಉಳಿಯುವಂತಾಗಿದೆ.


