ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ನೀತಿಗಳ ವಿರುದ್ಧವೂ ಜನರು ಹೋರಾಟ ನಡೆಸಲು ಸ್ವತಂತ್ರರು ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ (ನ. 12) ಹೇಳಿದ್ದಾರೆ.
ಕೇರಳ ರಾಜಧಾನಿ ತಿರುವನಂತಪುರಂನಲ್ಲಿರುವ ರಾಜ್ಯ ಸಚಿವಾಲಯದ ಎದುರು ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದ ಕೆಳ ಪ್ರಾಥಮಿಕ ಶಾಲಾ ಶಿಕ್ಷಕರ ಶ್ರೇಣಿಪಟ್ಟಿ ಅಭ್ಯರ್ಥಿಗಳ ವಿರುದ್ಧ ಬುಧವಾರ ರಾತ್ರಿ ಪೊಲೀಸರು ಕೈಗೊಂಡ ಕ್ರಮದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ವಯನಾಡಿನಲ್ಲಿ ಪ್ರತಿಕ್ರಿಯಿಸಿದರು.
ಬುಧವಾರ ರಾತ್ರಿ ಸಚಿವಾಲಯದ ಎದುರು ಪ್ರತಿಭಟನಾಕಾರರು ಹಾಕಿದ್ದ ಉಪವಾಸ ಸತ್ಯಾಗ್ರಹದ ಶಿಬಿರವನ್ನು ಪೊಲೀಸರು ತೆರವುಗೊಳಿಸಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಲರ್ಮತಿ ಅವರನ್ನು ಬಂಧಿಸಿದ್ದರು. ಬಳಿಕ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
“ಭಾರತ ಸೇರಿದಂತೆ ಜಗತ್ತಿನಾದ್ಯಂತ ನನ್ನ ನಿಲುವು ಒಂದೇ. ಜನರಿಗೆ ಪ್ರತಿಭಟನೆ ನಡೆಸುವ ಹಕ್ಕಿದೆ. ವಿಶೇಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಈ ಹಕ್ಕನ್ನು ನೀಡಿದೆ. ಜನರು ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ಅವಕಾಶ ನೀಡಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದರೆ, ಅದು ತೀವ್ರ ಆಕ್ರಮಣಕಾರಿಯಾಗಿ ಪರಿಣಮಿಸಿದರೆ ಅಥವಾ ಜನರಿಗೆ ತೊಂದರೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾದರೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಏಕೆಂದರೆ ಪ್ರತಿಭಟನಾಕಾರರೂ ಕಾನೂನಿನ ನಿಯಮಗಳನ್ನು ಗೌರವಿಸಬೇಕು ಎಂದು ಅವರು ಹೇಳಿದರು.
“ಆದರೆ, ನಮ್ಮ ಸರ್ಕಾರದ ವಿರುದ್ಧವಾಗಿರಲಿ ಅಥವಾ ನಮ್ಮ ನೀತಿಗಳ ವಿರುದ್ಧವಾಗಿರಲಿ, ಪ್ರತಿಭಟನೆ ಶಾಂತಿಯುತವಾಗಿರುವವರೆಗೆ ಅದನ್ನು ಮುಂದುವರಿಸಲು ಅವಕಾಶ ನೀಡಬೇಕು” ಎಂದು ಅವರು ತಿಳಿಸಿದರು.
ತಮ್ಮ ಈ ನಿಲುವು ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರವಲ್ಲದೆ ದೇಶದ ಯಾವುದೇ ಸರ್ಕಾರಕ್ಕೂ ಅನ್ವಯಿಸುತ್ತದೆ ಎಂದು ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದರು.
ಕೇರಳ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಸಿ) ಪ್ರಕಟಿಸಿರುವ ಎಲ್‌ಪಿಎಸ್‌ಟಿ ಶ್ರೇಣಿಪಟ್ಟಿಯ ಅವಧಿ ಮುಗಿಯುವ ಮೊದಲು ಅದರ ಆಧಾರದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.


