ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಮುಖಾಮುಖಿ ಚರ್ಚೆ ನಡೆಸಲು ಮತ್ತೊಮ್ಮೆ ಸವಾಲು ಹಾಕಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮೊಂದಿಗೆ ನಡೆಯುವ ನೇರ ಚರ್ಚೆಯ ಬಳಿಕ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ವಿರುದ್ಧ ಆರೋಪಗಳನ್ನು ಮಾಡಲಿ, ತಾವು ಕೂಡ ಪ್ರಧಾನಿಯವರ ವಿರುದ್ಧ ಪ್ರಶ್ನೆಗಳನ್ನು ಮತ್ತು ಆರೋಪಗಳನ್ನು ಮುಂದಿಡುವುದಾಗಿ ಹೇಳಿರುವ ಅವರು, ಸಂಸತ್ತಿನ ಔಪಚಾರಿಕ ಭಾಷಣಗಳ ಬದಲಿಗೆ ಇಬ್ಬರ ನಡುವೆ ನೇರ ಮಾತುಕತೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಶುಕ್ರವಾರ ಇನ್ಸ್ಟಾಗ್ರಾಮ್ನಲ್ಲಿ ನಡೆದ ‘ಆಸ್ಕ್ ಮಿ’ (ನನ್ನನ್ನು ಕೇಳಿ) ಸಂವಾದದಲ್ಲಿ ಸಾರ್ವಜನಿಕ ಚರ್ಚೆಗೆ ರಾಹುಲ್ ಗಾಂಧಿ ಪದೇ ಪದೇ ಒತ್ತಾಯಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ಸಂಸತ್ತಿನಲ್ಲೇ ಚರ್ಚೆ ನಡೆಸಲು ಅವಕಾಶವಿರುವಾಗ ಪ್ರತ್ಯೇಕವಾಗಿ ಸಾರ್ವಜನಿಕ ಚರ್ಚೆಗೆ ಏಕೆ ಆಗ್ರಹಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಸತ್ತಿನಲ್ಲಿ ತಮಗೆ ಮಾತನಾಡಲು ಸೂಕ್ತ ಅವಕಾಶ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು. ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದಾಗ ತಮ್ಮ ಮಾತುಗಳಿಗೆ ಅವಕಾಶ ನಿರಾಕರಿಸಲಾಗಿದೆ. ಮೈಕ್ರೊಫೋನ್ ಕೂಡ ಸ್ವಿಚ್ ಆಫ್ ಮಾಡಲಾಗಿದೆ ಎಂದು ದೂರಿದರು.
ಕೃಷಿ ಕಾಯ್ದೆಗಳು, ಮತಗಳ್ಳತನದ ಆರೋಪ, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್), ಚೀನಾ ವಿಚಾರ, ಜನರಲ್ ನರವಾಣೆ ಅವರ ಪುಸ್ತಕ ಹಾಗೂ ಜೆಫ್ರಿ ಎಪ್ಸ್ಟೀನ್ ಪ್ರಕರಣ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಂಸತ್ತಿನಲ್ಲಿ ಮಾತನಾಡಲು ತಮಗೆ ಅವಕಾಶ ನೀಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ದೀರ್ಘ ಭಾಷಣಗಳು ಮತ್ತು ಏಕಪಕ್ಷೀಯ ಮಾತುಗಳ ಬದಲಿಗೆ, ಇಬ್ಬರೂ ಪರಸ್ಪರ ಪ್ರಶ್ನೆಗಳನ್ನು ಕೇಳುವ ಮತ್ತು ಆರೋಪಗಳಿಗೆ ಮುಖಾಮುಖಿಯಾಗಿ ಉತ್ತರಿಸುವ ರೀತಿಯ ಚರ್ಚೆ ನಡೆಯಬೇಕು ಎಂಬುದು ತಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
“ನರೇಂದ್ರ ಮೋದಿ ನನ್ನ ವಿರುದ್ಧ ಆರೋಪಗಳನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಅದೇ ರೀತಿ ನಾನೂ ಅವರ ವಿರುದ್ಧ ಆರೋಪಗಳನ್ನು ಮಾಡುತ್ತೇನೆ. ಅವರು ಬರಲಿ, ಒಂದು ಮೇಜು ಇರಲಿ. ಒಂದು ಬದಿಯಲ್ಲಿ ನರೇಂದ್ರ ಮೋದಿ ಜಿ ಕುಳಿತುಕೊಳ್ಳಲಿ, ಇನ್ನೊಂದು ಬದಿಯಲ್ಲಿ ನಾನಿರುತ್ತೇನೆ” ಎಂದು ಅವರು ಸವಾಲು ಹಾಕಿದರು. ಈ ಚರ್ಚೆಗೆ ಗೌತಮ್ ಅದಾನಿ ಅಥವಾ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ತೀರ್ಪುಗಾರರನ್ನಾಗಿ ನೇಮಿಸಿದರೂ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು. ಆದರೆ, ತಮ್ಮೊಂದಿಗೆ ನೇರ ಚರ್ಚೆ ನಡೆಸಿದ ಬಳಿಕ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ ಎಂಬುದನ್ನು ತಾವು ಖಚಿತಪಡಿಸುವುದಾಗಿ ರಾಹುಲ್ ಗಾಂಧಿ ಹೇಳಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಇದಕ್ಕೂ ಮೊದಲು ಹಲವು ಸಂದರ್ಭಗಳಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಯ ಸವಾಲು ಹಾಕಿದ್ದರು. ತಮ್ಮೊಂದಿಗೆ ಚರ್ಚೆಗೆ ಬಂದರೆ ಕೇವಲ ಐದು ನಿಮಿಷಗಳಲ್ಲಿ ಮೋದಿ ದೇಶದ್ರೋಹಿ ಎಂಬುದನ್ನು ಸಾಬೀತುಪಡಿಸುವುದಾಗಿ ಹೇಳಿದ್ದ ಅವರು, ಪ್ರಧಾನಿ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನೂ ಮಾಡಿದ್ದರು.
ಆದರೆ, ರಾಹುಲ್ ಗಾಂಧಿಯವರ ಈ ಸವಾಲನ್ನು ಬಿಜೆಪಿ ನಾಯಕರು ನಿರಂತರವಾಗಿ ಲೇವಡಿ ಮಾಡುತ್ತಿದ್ದು, ಸಂಸತ್ತಿನಲ್ಲೇ ನಡೆಯುವ ಚರ್ಚೆಗಳಿಂದ ವಿರೋಧ ಪಕ್ಷದ ನಾಯಕರು ದೂರ ಸರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ರಾಹುಲ್ ಗಾಂಧಿಯವರ ನಿಲುವನ್ನು ಪ್ರಶ್ನಿಸಿದ್ದರು. ಚರ್ಚೆಗೆ ಸ್ಥಳವನ್ನು ಆಯ್ಕೆ ಮಾಡುವಂತೆ ಪ್ರಧಾನಿಯನ್ನು ಕೇಳುವ ಅಗತ್ಯವಿಲ್ಲ. ಸಂಸತ್ತಿನಲ್ಲಿ ಈಗಾಗಲೇ ಚರ್ಚೆಗೆ ಸೂಕ್ತ ವೇದಿಕೆಯಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಸ್ವಲ್ಪ ಗಂಭೀರತೆ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂದು ಅವರು ಟೀಕಿಸಿದ್ದರು.
ಒಂದೆಡೆ ಸಂಸತ್ತಿನಲ್ಲೇ ಚರ್ಚೆಗೆ ಸಿದ್ಧವಿದ್ದೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ, ಮತ್ತೊಂದೆಡೆ ಸಂಸತ್ತಿನಲ್ಲಿ ತಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂಬುದು ರಾಹುಲ್ ಗಾಂಧಿಯವರ ಆರೋಪವಾಗಿದೆ. ಈ ನಡುವೆ ಪ್ರಧಾನಿಯೊಂದಿಗೆ ನೇರ ಚರ್ಚೆಗೆ ಅವರು ಮತ್ತೊಮ್ಮೆ ಸವಾಲು ಹಾಕಿರುವುದು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಂಘರ್ಷಕ್ಕೆ ಮತ್ತಷ್ಟು ತೀಕ್ಷ್ಣತೆ ನೀಡಿದೆ.


